ಶುಕ್ರವಾರ, ಜುಲೈ 31, 2026

ಸುಂದರೀಶತಕ -೭೦

ಸಂಸ್ಕೃತ ಮೂಲ 

ಮಂತ್ರೋ ಮನಸಾ ದ್ವೇಷಶ್ಚಂದ್ರಮಸಾ ಹಂತ ಪರಿಚಯಸ್ತಮಸಾ /
ಸುಂದರಿ ತವಾಭಿಸಾರೇ ಪರಿಪಾಟೀ ಕಾಚಿದನ್ಯೈವ //

ಕನ್ನಡ ಅನುವಾದ 

   'ಎಲೈ ಸುಂದರಿ! ನಿನ್ನ ಮಂತ್ರಾಲೋಚನೆ ನಿನ್ನ ಮನಸ್ಸಿನೊಂದಿಗೆ! ನಿನ್ನ ದ್ವೇಷ ಚಂದ್ರಮನೊಂದಿಗೆ! ಆಹಾ! ನಿನ್ನ ಪರಿಚಯ ಕತ್ತಲಿನೊಂದಿಗೆ! ನಿನ್ನ ಅಭಿಸಾರದ ರೀತಿ ಬೇರೆಯೇ ಆಗಿದೆ!'
     ಇದೊಂದು ಸ್ವಾರಸ್ಯಕರ ಶೃಂಗಾರ ಪದ್ಯ. ಅಭಿಸಾರ ಎಂದರೆ ನಾಯಕಿಯು ತನ್ನ ಪ್ರಿಯತಮನನ್ನು ಭೇಟಿಯಾಗಲು ಸಂಕೇತ ಸ್ಥಳಕ್ಕೆ ಒಬ್ಬಳೇ ಅಥವಾ ಸಖಿಯೊಂದಿಗೆ ಧೈರ್ಯವಾಗಿ ಹೋಗುವುದು.‌ ಅಂಥ ನಾಯಕಿಗೆ ಅಭಿಸಾರಿಕೆ ಎನ್ನುತ್ತಾರೆ. ಸಾಮಾನ್ಯವಾಗಿ ಅಭಿಸಾರಿಕೆಯರು ರಾತ್ರಿಯ ವೇಳೆ ಯಾರಿಗೂ ಕಾಣದಂತೆ ಗುಪ್ತವಾಗಿ ಹೋಗುತ್ತಾರೆ. ಇಲ್ಲಿ ಅಂಥ ಒಬ್ಬ ಅಭಿಸಾರಿಕೆಗೆ ಸಖಿ ಅಥವಾ ಕವಿ ತಮಾಷೆಯಾಗಿ ಹೇಳುತ್ತಿದ್ದಾರೆ.‌ ಇವಳಿಗೆ ಮನಸ್ಸಿನೊಂದಿಗೆ ಮಂತ್ರಾಲೋಚನೆ. ಇನ್ನಾರೊಂದಿಗೂ ಇವಳು ತನ್ನ ರಹಸ್ಯವನ್ನು ಚರ್ಚಿಸದೆ ತನ್ನ ಮನಸ್ಸಿನೊಂದಿಗೆ ಮಾತ್ರ ಚರ್ಚಿಸುತ್ತಾಳೆ. ಚಂದ್ರಮನೊಂದಿಗೆ ಇವಳಿಗೆ ದ್ವೇಷ! ಅಂದರೆ ಚಂದ್ರನನ್ನು ಕಂಡರೆ ಇವಳಿಗೆ ಇಷ್ಟವಿಲ್ಲ. ಏಕೆಂದರೆ ಚಂದ್ರನ ಬೆಳಕಿದ್ದರೆ ಇವಳ ರಹಸ್ಯ ಪ್ರಯಾಣ ಯಾರಿಗಾದರೂ ಕಂಡು ಗೊತ್ತಾಗಿಬಿಡುತ್ತದೆ! ಹಾಗಾಗಿ ಇವಳ ಪರಿಚಯ ಕತ್ತಲಿನೊಂದಿಗೆ! ಇತರರ ವರ್ತನೆಗೆ ವಿರುದ್ಧವಾಗಿದೆಯಲ್ಲ ಇವಳ ಅಭಿಸಾರದ ರೀತಿ ಎಂದು ಸಖಿ ಅಥವಾ ಕವಿ ಇವಳಿಗೆ ಹೇಳುತ್ತಿದ್ದಾರೆ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ