ಸುಂದರಿ ವಸಂತಪಥಿಕಾನ್ ರಜನಿಭುಜಂಗೀ ಯಥಾ ಯಥಾ ದಶತಿ /
ತದ್ವಿಷಸಂಕ್ರಾಂತಿವಶಾತ್ತಥಾ ತಥಾ ಕ್ಷೀಯತೇ ದೈರ್ವ್ಯಾತ್ //
ಕನ್ನಡ ಅನುವಾದ
' ಎಲೈ ಸುಂದರಿ! ವಸಂತಕಾಲದ ಪ್ರಯಾಣಿಕರನ್ನು ರಾತ್ರಿಯೆಂಬ ಸರ್ಪಿಣಿ ಹೇಗೆ ಹೇಗೆ ಕಚ್ಚುವುದೋ, ಅದರ ವಿಷವು ಅವರ ಮೈಯಲ್ಲಿ ಹರಡಿ ಅವರು ಅದರ ವಶವಾದಂತೆಲ್ಲಾ ದೈವವಶಾತ್ ಅವರು ಕ್ಷೀಣಿಸುತ್ತಾರೆ!'
ಇದೊಂದು ಸೊಗಸಾದ ಮತ್ತು ಉತ್ಪ್ರೇಕ್ಷಿತವಾದ ವಿರಹ ಪದ್ಯ. ವಸಂತಕಾಲವೆಂದರೆ ಯಾರಿಗಾದರೂ ಶೃಂಗಾರದ ಬಯಕೆ ಹೆಚ್ಚಾಗುತ್ತದೆ. ಅಂಥ ಸುಂದರ ಕಾಲದಲ್ಲಿ ಯಾರಿಗಾದರೂ ತಮ್ಮ ಪ್ರಿಯರು ಜೊತೆಗಿರಬೇಕೆನಿಸುತ್ತದೆ. ಅಂಥ ಸುಂದರ ಋತುವಿನ ರಾತ್ರಿ, ಶೃಂಗಾರದ ಬಯಕೆಗಳನ್ನು ಚೆನ್ನಾಗಿ ಉದ್ದೀಪನಗೊಳಿಸುತ್ತದೆ. ಆದರೆ ಅಂಥ ಸಂದರ್ಭದಲ್ಲಿ ಪ್ರಿಯತಮೆಯಿಂದ ದೂರಾಗಿ ಪ್ರಯಾಣ ಮಾಡುತ್ತಿದ್ದರೆ ಹೇಗಾಗುತ್ತದೆ? ಆ ಸುಂದರ ರಾತ್ರಿಯೇ ಹಿಂಸೆ ಕೊಡುವ ಕಾಳರಾತ್ರಿಯಂತಾಗುತ್ತದೆ! ಇಲ್ಲಿ ಕವಿಯು ಅಂಥ ರಾತ್ರಿಯನ್ನು ಒಂದು ಸರ್ಪಿಣಿಗೆ ಹೋಲಿಸುತ್ತಾನೆ. ಅದು ಉಂಟುಮಾಡುವ ವಿರಹಬಾಧೆಯನ್ನು ಆ ಸರ್ಪಿಣಿಯ ಕಚ್ಚುವಿಕೆಗೆ ಹೋಲಿಸುತ್ತಾನೆ! ಅದು ಕಚ್ಚಿದಂತೆಲ್ಲಾ ಹಾಗೂ ಅದರ ವಿಷ ಈ ವಸಂತಕಾಲದ ಪ್ರಯಾಣಿಕರ ದೇಹದೆಲ್ಲೆಡೆ ಹರಡಿದಂತೆಲ್ಲಾ ಅವರು ಕ್ಷೀಣಿಸುತ್ತಾರೆ ಎಂದು ವಸಂತ ಕಾಲದ ಪ್ರಯಾಣಿಕರ ರಾತ್ರಿಯ ವಿರಹಬಾಧೆಯನ್ನು ಕವಿಯು ಉತ್ಪ್ರೇಕ್ಷೆಯಿಂದ ವರ್ಣಿಸುತ್ತಾನೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ