ಶನಿವಾರ, ಅಕ್ಟೋಬರ್ 31, 2026

ಸಿಕಾಡಗಳ ಗಾನಪಯಣ

    ಸಾಮಾನ್ಯವಾಗಿ ಕಾಡುಪ್ರದೇಶಗಳಲ್ಲಿ ಓಡಾಡುವಾಗ ಜಂಯ್ ಜುಂಯ್ ಎಂದು ಒಂದೇ ಸಮನೆ ಶಬ್ದಗಳು ಬರುವುದನ್ನು ಗಮನಿಸಬಹುದು.‌ ಅಂತೆಯೇ ನಾನು ಕೊಡಗಿನ ದುಬಾರೆ ಕಾಡುಪ್ರದೇಶದಲ್ಲಿ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಅವರ ವಸತಿಯಲ್ಲಿ ಇಳಿದುಕೊಂಡು ಸಂಚರಿಸುತ್ತಿದ್ದಾಗ ಇಂಥ ಶಬ್ದಗಳನ್ನು ನಿರಂತರವಾಗಿ ಕೇಳುತ್ತಿದ್ದೆ. ಇವು ಏನು ಶಬ್ದಗಳೆಂದು ಕೇಳಿದಾಗ ಅಲ್ಲಿನ ಪರಿಸರವಾದಿಗಳು ಇವು ಸಿಕಾಡ ಅಥವಾ ಜೀರುಂಡೆಗಳ ಶಬ್ದಗಳೆಂದು ಹೇಳಿ ಒಂದು ಸಿಕಾಡವನ್ನು ಗುರುತಿಸಲು ಸಹಾಯ ಮಾಡಿದರು. ಇವುಗಳ ಶಬ್ದಗಳನ್ನು ಎಷ್ಟು ಕೇಳುವೆವೋ ಇವುಗಳನ್ನು ಕಾಣುವುದು ಅಷ್ಟೇ ಕಷ್ಟ! ಅಂತೂ ಒಂದು ಸಿಕಾಡವನ್ನು ಕಂಡು ಅದರ ಚಿತ್ರ ತೆಗೆದ ನಂತರ, ಸಿಕಾಡ, ತನ್ನ ಮರಿಯ ಹಂತದಿಂದ ವಯಸ್ಕ ಹಂತಕ್ಕೆ ಹೋಗುವಾಗ ತ್ಯಜಿಸಿ ಬಿಡುವ ತನ್ನ ಹೊರಚರ್ಮವನ್ನೂ ತೋರಿಸಿ ಚಿತ್ರ ತೆಗೆಸಿದರು.‌ ಅನಂತರ ಸಿಕಾಡಗಳ ಬಗ್ಗೆ ಸ್ವಾರಸ್ಯಕರ ಮಾಹಿತಿಗಳನ್ನು ಹೇಳಿದರು. 
    ಈ ಸಿಕಾಡಗಳು ಕೀಟವರ್ಗಕ್ಕೆ ಸೇರಿದ ಜೀವಿಗಳಾಗಿದ್ದು ಇವುಗಳಲ್ಲಿ ಹಲವು ಬಗೆಗಳಿವೆ. ಸಾಮಾನ್ಯವಾಗಿ ಇವು ಪಾರದರ್ಶಕ ರೆಕ್ಕೆಗಳನ್ನೂ ದೊಡ್ಡ ಸಂಯುಕ್ತ ಕಣ್ಣುಗಳನ್ನೂ ಹೊಂದಿದ್ದು ಎದೆ, ಹೊಟ್ಟೆಗಳ ಬಣ್ಣ ಅವು ನೆಲೆಸುವ ಮರಗಳ ತೊಗಟೆಗೆ ಸರಿಹೊಂದುವಂತಿರುತ್ತದೆ. ಈ ಚಿತ್ರದಲ್ಲಿ ಕಾಣುವ ಸಿಕಾಡದಂತೆ ಬಹುತೇಕ ಸಿಕಾಡಗಳು ಕಡು ಕಪ್ಪು ಬಣ್ಣ ಇಲ್ಲವೇ ಕಡು ಕಂದು, ಅಥವಾ ಬೂದು ಬಣ್ಣ ಹೊಂದಿರುತ್ತವೆಯಾದರೂ ಕೆಲವು ಸಿಕಾಡಗಳು ಹಸಿರು, ಹಳದಿ ಬಣ್ಣಗಳನ್ನೂ ಹೊಂದಿರುತ್ತವೆ. ಸಿಕಾಡಗಳು ಹಾಡುವುದರಿಂದ ಪಕ್ಷಿಗಳು, ಬಾವಲಿಗಳು, ಜೇಡಗಳು, ಮೊದಲಾದವುಗಳು ಇವನ್ನು ಗುರುತಿಸಿ ಹಿಡಿದು ತಿನ್ನಬಹುದು. ಹಾಗಾಗಿ ಅವುಗಳಿಗೆ ತಿಳಿಯಬಾರದೆಂದು ಇವು ಛದ್ಮವೇಷ ಅಥವಾ ಕ್ಯಾಮೋಫ್ಲೇಜ್ ಗಾಗಿ ಪರಿಸರಕ್ಕೆ ಹೊಂದುವ ಬಣ್ಣಗಳೊಂದಿಗೆ ವಿಕಾಸ ಹೊಂದಿವೆ. 
    ಸಿಕಾಡಗಳು ಕೀಟಗಳ ಹೆಮಿಪ್ಟೆರ ಎಂಬ ವರ್ಗಕ್ಕೂ ಸಿಕಾಡಿಡೇ ಎಂಬ ಕುಟುಂಬಕ್ಕೂ ಸೇರುತ್ತವೆ. ವಿಶ್ವಾದ್ಯಂತ ಇವುಗಳಲ್ಲಿ ಸುಮಾರು 3400 ಪ್ರಭೇದಗಳಿವೆ ಹಾಗೂ ನಮ್ಮ ಭಾರತ ದೇಶದಲ್ಲಿ ಇನ್ನೂರೈವತ್ತರಿಂದ ಇನ್ನೂರೆಂಬತ್ತು ಪ್ರಭೇದಗಳಿವೆ! ಈ ಚಿತ್ರದಲ್ಲಿ ಕಾಣುವುದು ಪುರಾನ ಎಂಬ ಪ್ರಭೇದದ ಸಿಕಾಡಾ. 
   ಸಿಕಾಡಗಳು ಏಕೆ ಹಾಗೂ ಹೇಗೆ ಹಾಡುತ್ತವೆ? ಇವು ಹೆಣ್ಣನ್ನು ಆಕರ್ಷಿಸಲೆಂದು ಹಾಡುತ್ತವೆ. ಆದರೆ ಇವು ಹಾಡುವುದು ಬಾಯಿ ಅಥವಾ ಗಂಟಲಿನಿಂದಲ್ಲ! ತಮ್ಮ ಹೊಟ್ಟೆಯಿಂದ! ಗಂಡು ಸಿಕಾಡಾಗಳು ತಮ್ಮ ಹೊಟ್ಟೆಯ ಮೇಲೆ ಟಿಂಬಲ್ ಗಳೆಂಬ ಹೊರಕವಚದ ಪದರಗಳನ್ನು ಹೊಂದಿರುತ್ತವೆ. ದೇಹದ ಒಳಗಿರುವ ಬಲವಾದ ಮಾಂಸಖಂಡಗಳು ಈ ಪದರಗಳೊಂದಿಗೆ ಸಂಪರ್ಕ ಹೊಂದಿದ್ದು, ಸಿಕಾಡಾ ಈ ಮಾಂಸಖಂಡಗಳನ್ನು ಸಂಕುಚಿತಗೊಳಿಸಿದಾಗ, ಪದರಗಳು ವೇಗವಾಗಿ ಒಳಗೆಳೆಯಲ್ಪಡುತ್ತವೆ ಹಾಗೂ ವಿಶ್ರಾಂತಗೊಳಿಸಿದಾಗ ಹೊರಕ್ಕೆ ಬಂದು ತಮ್ಮ ಸಹಜ ಸ್ಥಿತಿಗೆ ಮರಳುತ್ತವೆ. ಇದನ್ನು ಬಕ್ಲಿಂಗ್ ಎನ್ನುತ್ತಾರೆ. ಈ ಒಳ,ಹೊರಗಿನ ಚಲನೆಗಳು ಕ್ಲಿಕ್ ಶಬ್ದಗಳನ್ನುಂಟುಮಾಡಿ, ಇವು ಒಂದು ಕ್ಷಣಕ್ಕೆ ಮುನ್ನೂರು ನಾನ್ನೂರು ಬಾರಿ ಆಗುತ್ತಾ ಈ ಕ್ಲಿಕ್ ಶಬ್ದಗಳು ಸೇರಿಕೊಂಡು ನಿರಂತರವಾಗಿ ಜುಂಯ್ ಜಂಯ್ ಶಬ್ದಗಳನ್ನು ಹೊರಡಿಸುತ್ತವೆ. ಈ ಶಬ್ದಗಳನ್ನು ಅವುಗಳ ಟೊಳ್ಳಾದ ಹೊಟ್ಟೆಯ ಕುಹರ, ಅನುರಣನ ಕುಹರದಂತೆ ಕೆಲಸ ಮಾಡುತ್ತಾ ಹೆಚ್ಚಿಸುತ್ತದೆ. ವಿವಿಧ ಸಿಕಾಡಗಳು ವಿವಿಧ ಶಬ್ದಗಳನ್ನು ಮಾಡುತ್ತವೆ.‌ ಇಲ್ಲಿ ಕಾಣುವ ಪುರಾನ ಪ್ರಭೇದ, ತೀಕ್ಷ್ಣವಾದ, ಏರು ಶ್ರುತಿಯ, ಒಂದು ಯಾಂತ್ರಿಕ ರಿಂಗಣದಂಥ ಶಬ್ದಗಳನ್ನು ಹೊರಡಿಸುತ್ತದೆ. ಕೆಲವು ಸಿಕಾಡಗಳು ಲಯಬದ್ಧ ವಿದ್ಯುತ್ ಬಜರ್ ನಂಥ ಇಲ್ಲವೇ ಗಿಲಕಿಯಂಥ ಶಬ್ದಗಳನ್ನು ಹೊರಡಿಸುತ್ತವೆ. 
    ಹೆಣ್ಣು ಸಿಕಾಡಗಳು ಗಂಡಿನ ಹಾಡುಗಳನ್ನು ತಮ್ಮ ಕಿವಿಗಳ ಮೂಲಕ ಕೇಳಿದರೂ ಈ ಕಿವಿಗಳು ನಮ್ಮ ಹಾಗೆ ತಲೆಯಲ್ಲಿರದೇ ಹೊಟ್ಟೆಯ ತಳದಲ್ಲೇ ಇರುತ್ತವೆ! ಇವು ವಿಶೇಷ ಕಿವಿತಮಟೆಗಳಾಗಿದ್ದು, ಟಿಂಪ್ಯಾನಂಗಳೆಂಬ ಕನ್ನಡಿಗಳಂಥ ತೆಳ್ಳಗಿನ ಎರಡು ದೊಡ್ಡ ಪಾರದರ್ಶಕ ಪದರಗಳಾಗಿರುತ್ತವೆ. ಗಂಡು ಹಾಡಿದಾಗ, ಅದರ ಶಬ್ದ ತರಂಗಗಳು ಈ ಟಿಂಪ್ಯಾನಂಗಳನ್ನು ಬಡಿದು ಅವು ವೇಗವಾಗಿ ಕಂಪಿಸುತ್ತವೆ. ಈ ಪದರಗಳಲ್ಲಿ ಸಾವಿರಾರು ನರಕೋಶಗಳಿದ್ದು ಅವು ಈ ಕಂಪನಗಳನ್ನು ನರಸಂಕೇತಗಳನ್ನಾಗಿ ಪರಿವರ್ತಿಸಿ ಮಿದುಳಿಗೆ ಕಳಿಸುತ್ತವೆ. ಸ್ವಾರಸ್ಯವೆಂದರೆ, ಹೆಣ್ಣಿನ ಈ ಕಿವಿಯು, ತನ್ನ ಪ್ರಭೇದದ ನಿರ್ದಿಷ್ಟ ತರಂಗಾಂತರಗಳಿಗೆ ಮಾತ್ರ ಕಂಪಿಸುವಂತೆ ಸಿದ್ಧವಾಗಿರುತ್ತದೆ! ಹೆಣ್ಣು ಸಿಕಾಡ, ಗಂಡಿನ ಹಾಡನ್ನು ಇಷ್ಟಪಟ್ಟರೆ, ಆ ಹಾಡಿಗೆ ಪ್ರತಿಯಾಗಿ ಹಾಡುವ ಬದಲಿಗೆ ತನ್ನ ರೆಕ್ಕೆಗಳನ್ನು ವೇಗವಾಗಿ ಪಟಪಟನೆ ಬಡಿಯುತ್ತಾ ಸೌಮ್ಯ ಮರ್ಮರ ಶಬ್ದಗಳನ್ನು ಹೊರಡಿಸುತ್ತದೆ. ಅದು ಇಂಥ ಗಂಡಿಗೇ ಮೀಸಲು ಎಂದು ಹೇಳಲು, ಗಂಡು ಒಂದು ನಿರ್ದಿಷ್ಟ ಸ್ವರದ ನಂತರ ನಿಲ್ಲಿಸಿದ ಕೆಲವು ಮಿಲಿಸೆಕೆಂಡುಗಳಲ್ಲಿ ಹೆಣ್ಣು ಆರಂಭಿಸುತ್ತದೆ. ಇದು ಪ್ರತಿ ಪ್ರಭೇದಕ್ಕೂ ನಿರ್ದಿಷ್ಟವಾಗಿರುತ್ತದೆ! ಇದರಿಂದ ಒಂದು ಪ್ರಭೇದದ ಸಿಕಾಡ ಇನ್ನೊಂದು ಪ್ರಭೇದದ ಸಿಕಾಡದೊಂದಿಗೆ ಕೂಡುವುದನ್ನು ತಪ್ಪಿಸುತ್ತದೆ. 
    ಗಂಡು, ಹೆಣ್ಣಿನ ಹಾಡನ್ನು ಕೇಳಿದ ಕೂಡಲೇ, ತನ್ನ ಕೂಗುವ ಹಾಡನ್ನು ನಿಲ್ಲಿಸಿ, ಮೃದುವಾದ ಪ್ರಣಯಗೀತೆಯನ್ನು ಹಾಡತೊಡಗುತ್ತದೆ! ಹಾಗೆ ಹಾಡುತ್ತಾ, ನಿಲ್ಲಿಸುತ್ತಾ, ಹೆಣ್ಣಿನ ದನಿಗಳನ್ನು ಕೇಳುತ್ತಾ ಅವಳಿರುವ ದಿಕ್ಕನ್ನು ತಿಳಿದು ಅವಳಿರುವ ಕೊಂಬೆಗೆ ನಡೆಯುತ್ತದೆ ಅಥವಾ ಹಾರುತ್ತದೆ. ಹಾಗೆ ಹೋಗುತ್ತಾ ಅದು ಪ್ರತಿ ಹೆಜ್ಜೆಗೂ ಹಾಡುತ್ತಿರಲು, ಹೆಣ್ಣು ತನ್ನ ದನಿಗಳಿಂದ ಅದಕ್ಕೆ ಮಾರ್ಗದರ್ಶನ ಮಾಡುತ್ತದೆ! ಹೀಗೆ ಒಂದು ಯುಗಳಗೀತೆ ಜರುಗುತ್ತದೆ! ಹೆಣ್ಣು ಸಿಕ್ಕಿದ ಕೂಡಲೇ ಗಂಡು ಅವಳ ಕಾಲನ್ನು ಮೆಲ್ಲನೆ ಸ್ಪರ್ಶಿಸಿ ಅನಂತರ ಅವಳ ಮೇಲೇರಿ ಮಿಲನ ಹೊಂದುತ್ತದೆ. 
    ಗಂಡು ಸಿಕಾಡಗಳು ಮಾಡುವ ಜೋರಾದ ಶಬ್ದಗಳು ನೂರು ಡೆಸಿಬೆಲ್ ಗಳಿಗಿಂತ ಹೆಚ್ಚಾಗಬಹುದು! ಅಂದರೆ ಒಂದು ಹುಲ್ಲುಗತ್ತರಿ ಅಥವಾ ಸರಪಳಿ ಗರಗಸದಷ್ಟು ಜೋರಾಗಬಹುದು! ಆಗ ಇವು ತಮ್ಮ ಶಬ್ದಗಳಿಂದ ತಾವೇ ಕಿವುಡಾಗುವ ಸಾಧ್ಯತೆಯಿರುತ್ತದೆ! ಇದನ್ನು ತಪ್ಪಿಸಲು ಇವು ಒಂದು ಉಪಾಯವನ್ನು ಕಂಡುಕೊಂಡಿವೆ. ಅದೇನೆಂದರೆ, ಇವು ಹಾಡುಲೆಂದು ತಮ್ಮ ಹೊಟ್ಟೆಯ ಮಾಂಸಖಂಡಗಳನ್ನು ಸಂಕುಚಿತಗೊಳಿಸುವ ಮೊದಲು ಇನ್ನೊಂದು ಬಗೆಯ ಮಾಂಸಖಂಡಗಳನ್ನು ಪ್ರಚೋದಿಸಿ ಅವು ಮಡಚಿಕೊಂಡು ತಮ್ಮ ಟಿಂಪ್ಯಾನಂಗಳನ್ನು ಮುಚ್ಚುವಂತೆ ಮಾಡುತ್ತವೆ. ಹೀಗೆ ತಾವು ಕೂಗುವಾಗ ಕೆಲವು ಮಿಲಿಸೆಕೆಂಡುಗಳ ಕಾಲ ಕಿವುಡಾಗಿ ಅನಂತರ ಹೆಣ್ಣಿನ ಶಬ್ದಗಳನ್ನು ಕೇಳಲು ಟಿಂಪ್ಯಾನಂಗಳನ್ನು ಬಿಡುಗಡೆ ಮಾಡುತ್ತವೆ. 
    ಸಿಕಾಡಗಳಲ್ಲಿ ತೀಕ್ಷ್ಣವಾದ ಕೂಗುವ ಮತ್ತು ಮೃದುವಾದ ಪ್ರಣಯಗೀತೆಯಂಥ ಹಾಡುಗಳನ್ನು ಬಿಟ್ಟರೆ ಇನ್ನೊಂದು ಬಗೆಯ ಹಾಡೂ ಇದೆ. ಅದು, ಮಾನವರು ಅಥವಾ ಯಾವುದಾದರೂ ಆಕ್ರಮಣಕಾರಿ ಪ್ರಾಣಿ ಅದನ್ನು ಹಿಡಿದಾಗ ಮಾಡುವ ಕಿರುಚುವ ಕರಕರದಂಥ ಶಬ್ದಗಳು! ಈ ಶಬ್ದಗಳನ್ನು ಇವು ಆ ಆಕ್ರಮಣಕಾರಿ ಪ್ರಾಣಿಯನ್ನು ಹೆದರಿಸಲು ಹಾಗೂ ಸನಿಹದ ಸಿಕಾಡಗಳನ್ನು ಮೌನವಾಗಲು ಹಾಗೂ ಅಡಗಿಕೊಂಡಿರುವಂತೆ ಎಚ್ಚರಿಸಲು ಮಾಡುತ್ತವೆ. 
    ಆಶ್ಚರ್ಯವೆಂದರೆ ಇಷ್ಟೆಲ್ಲಾ ಹಾಡುವ ಸಿಕಾಡಗಳು ತಮ್ಮ ಬಹುತೇಕ ಜೀವನವನ್ನು ಭೂಮಿಯಡಿಯಲ್ಲಿ ನಿಂಫ್ ಎಂಬ ಮರಿಯ ಹಂತದಲ್ಲಿ ಕಳೆಯುತ್ತವೆ! ಇವು ಮಣ್ಣಿನಲ್ಲಿ ಬಿಲ ಕೊರೆದು ಅದರಲ್ಲಿ ಕತ್ತಲಿನಲ್ಲಿರುತ್ತಾ ಸೂಜಿಯಂಥ ತಮ್ಮ ಬಾಯ ರಚನೆಗಳಿಂದ ಮರಗಳ ಬೇರುಗಳಿಂದ ರಸವನ್ನು ಹೀರಿ ಬದುಕುತ್ತವೆ. ನಮ್ಮ ಭಾರತದಲ್ಲಿರುವ ಸಿಕಾಡಗಳು ಆನುಯಲ್ ಅಥವಾ ವಾರ್ಷಿಕ ಸಿಕಾಡಗಳಾಗಿದ್ದು ಒಂದರಿಂದ ಐದು ವರ್ಷಗಳ ಕಾಲ ಭೂಮಿಯಡಿಯಿದ್ದು ಬೆಳೆಯುತ್ತಾ ಹೊರಚರ್ಮ ಕಳಚಿಕೊಳ್ಳುವ ಮೌಲ್ಟಿಂಗ್ ಕ್ರಿಯೆಗೊಳಗಾಗುತ್ತವೆ. ವಯಸ್ಕ ಹಂತ ತಲುಪಿದಾಗ ನೆಲವನ್ನು ಕೊರೆದುಕೊಂಡು ಹೊರಬಂದು ಹತ್ತಿರದ ಮರದ ಕಾಂಡದ ಮೇಲೆ ತನ್ನ ಹೊರಚರ್ಮವನ್ನು ಕೊನೆಯ ಬಾರಿ ಕಳಚುತ್ತದೆ. ವಯಸ್ಕರಾದಾಗ ಇವು ರೆಕ್ಕೆಗಳೊಂದಿಗಿದ್ದು ಹೆಣ್ಣಿನೊಂದಿಗೆ ಕೂಡಲು ಕೇವಲ ಎರಡರಿಂದ ಐದು ವಾರಗಳ ಕಾಲ ಬದುಕುತ್ತವೆ! ಉತ್ತರ ಅಮೇರಿಕಾದ ಸಿಕಾಡಗಳು ಪೀರಿಯಾಡಿಕಲ್ ಸಿಕಾಡಗಳೆಂದು ಕರೆಯಲ್ಪಡುತ್ತವೆ. ಇವು ಸುಮಾರು ಹದಿಮೂರರಿಂದ ಹದಿನೇಳು ವರ್ಷಗಳ ಕಾಲ ನೆಲದಡಿಯಿದ್ದು ಅನಂತರ ಒಮ್ಮೆಲೇ ಕೋಟಿಗಟ್ಟಲೆ ಸಿಕಾಡಗಳು ಹೊರಬರುತ್ತವೆ! 
     ಹೆಣ್ಣು ಸಿಕಾಡ ತನ್ನ ಚಿಕ್ಕ ಜೀವಮಾನದಲ್ಲಿ ಒಟ್ಟು ಇನ್ನೂರರಿಂದ ನಾನ್ನೂರು ಮೊಟ್ಟೆಗಳನ್ನಿಡುತ್ತದೆ. ಇದು ಚಾಕುವಿನಂತೆ ಚೂಪಾದ ಓವಿಪಾಸಿಟರ್ ಎಂಬ ಉದ್ದನೆಯ ರಚನೆಯನ್ನು ಹಿಂಭಾಗದಲ್ಲಿ ಹೊಂದಿದ್ದು ಅದರಿಂದ ಮರಗಳ ತೆಳುವಾದ ಹೊಸ ರೆಂಬೆ, ಕೊಂಬೆಗಳಲ್ಲಿ ಸಣ್ಣ ಸೀಳುಗಳನ್ನು ಕೊರೆದು ತನ್ನ ಓವಿಪಾಸಿಟರ್ ನಿಂದ ಇಪ್ಪತ್ತರಿಂದ ಮೂವತ್ತು ಅಕ್ಕಿ ಕಾಳು ಗಾತ್ರದ ಮೊಟ್ಟೆಗಳನ್ನು ಪ್ರತಿ ಸೀಳಿನಲ್ಲೂ ಚಿಮ್ಮಿಸಿ ತುಂಬುತ್ತದೆ. ಆರರಿಂದ ಹತ್ತು ವಾರಗಳ ಬಳಿಕ, ಮೊಟ್ಟೆಗಳು ಒಡೆದು, ಪುಟ್ಟ ಬಿಳಿ ಇರುವೆಗಳಂಥ ಮರಿಗಳು ಅಥವಾ ನಿಂಫ್ ಗಳು ಹೊರಬಂದು ಕೆಳಗೆ ಬೀಳುತ್ತವೆ. ಕೂಡಲೇ ತಮ್ಮ ಪಂಜುಗಳಂಥ ಮುಂಗಾಲುಗಳಿಂದ ನೆಲವನ್ನು ಕೊರೆದು ಸುರಂಗ ತೋಡುತ್ತಾ ಹೋಗುತ್ತವೆ.‌ ರಸವತ್ತಾದ ಮರದ ಬೇರು ಸಿಕ್ಕಿದಾಗ, ತಮ್ಮ ಸೂಜಿಯಂಥ ಬಾಯ ರಚನೆಗಳಿಂದ ರಸ ಹೀರಲು ಬೇರಿಗೆ ಕಚ್ಚಿಕೊಂಡು ಮಣ್ಣಿನಲ್ಲಿ ಒಂದು ಪುಟ್ಟ ಗೂಡು ಮಾಡಿಕೊಂಡು ತಮ್ಮ ನೆಲದಡಿಯ ವಾಸವನ್ನು ಆರಂಭಿಸುತ್ತವೆ. 
    ಈ ಸಿಕಾಡ ಮರಿಗಳಿಗೆ ಯಾವಾಗ ಭೂಮಿಯಿಂದ ಹೊರಗೆ ಬರಬೇಕೆಂದು ಹೇಗೆ ತಿಳಿಯುತ್ತದೆ? ಅದೂ ಒಂದು ಸ್ವಾರಸ್ಯ! ಸಿಕಾಡ ಮರಿಗಳು ಅಥವಾ ನಿಂಫ್ ಗಳು ಸದಾ ಕತ್ತಲಲ್ಲಿ ಇರುವುದರಿಂದ ಬಿಸಿಲು ಮತ್ತು ಬೆಳಕನ್ನು ಕಾಣುವುದಿಲ್ಲ. ಇವು ಮರಗಳ ಬೇರಿನ ರಸವನ್ನು ಸೇವಿಸುತ್ತವೆ. ಈ ಮರಗಳ ಬೇರಿನ ರಸದ ರಾಸಾಯನಿಕತೆ ವಸಂತ ಋತು ಬಂದಾಗ ಬದಲಾಗಿ ಸಿಕಾಡ ಮರಿಗಳಿಗೆ ಅದರ ರುಚಿಯಲ್ಲಿನ ವ್ಯತ್ಯಾಸ ತಿಳಿಯುತ್ತದೆ. ಇದರೊಂದಿಗೆ ಮಣ್ಣಿನ ಉಷ್ಣಾಂಶ ಸುಮಾರು ಹದ ಹದಿನೆಂಟು ಡಿಗ್ರಿ ಸೆಲ್ಸಿಯಸ್ ಗಳಷ್ಟು ಆದಾಗ ಬೇಸಿಗೆ ಆರಂಭವಾಗುತ್ತಿದೆಯೆಂದು ತಿಳಿದು ಇವು ನೆಲವನ್ನು ಮೇಲಕ್ಕೆ ಅಗೆದು ಹೊರಬರುತ್ತವೆ. ಇವು ಪಕ್ಷಿಗಳ ಕಾಟ ತಪ್ಪಿಸಿಕೊಳ್ಳಲು ಸೂರ್ಯಾಸ್ತದ ನಂತರ ರಾತ್ರಿಯ ಹೊತ್ತಿನಲ್ಲಿ ಹೊರಬರುತ್ತವೆ. ಇವು ಹೊರಬಂದಾಗ, ರೆಕ್ಕೆಗಳಿಲ್ಲದ ಪುಟ್ಟ ಕಂದು ಬಣ್ಣದ ಬೀಟಲ್ ಗಳಂತೆ ಕಾಣುತ್ತವೆ. ಇವುಗಳಿಗೆ ಅಗೆಯುವ ಪಂಜುಗಳೂ ಇರುತ್ತವೆ. ಇವು ಸನಿಹದ ಮರವನ್ನೇರಿ ತಮ್ಮ ಪಂಜುಗಳನ್ನು ಮರದ ತೊಗಟೆಯಲ್ಲಿ ಚುಚ್ಚಿ ಸಿಕ್ಕಿಸಿ, ಕೊನೆಯ ಬಾರಿ ಹೊರಚರ್ಮವನ್ನು ಕಳಚಲು ಸಿದ್ಧವಾಗುತ್ತವೆ. ಹೊರಚರ್ಮ ಅಥವಾ ಕವಚದ ಬೆನ್ನಿನ ಭಾಗದಲ್ಲಿ ಒಂದು ಸೀಳು ಉಂಟಾಗಿ, ರೆಕ್ಕೆಗಳುಳ್ಳ ಮೃದುವಾದ, ಪೇಲವವಾದ ವಯಸ್ಕ ಸಿಕಾಡ ಈ ಸೀಳಿನ ಮೂಲಕ ಹಿಮ್ಮುಖವಾಗಿ ಚಲಿಸುತ್ತಾ ಹೊರಬರುತ್ತದೆ. ಈಗ ಇದನ್ನು ಟೆನೆರಲ್ ಸಿಕಾಡ ಎನ್ನುತ್ತಾರೆ. ಇದಕ್ಕೆ ಕೂಡಲೇ ಹಾರಲಾಗುವುದಿಲ್ಲ. ಇದು ಕೂಡಲೇ ತನ್ನ ದೇಹದ ರಸವಾದ ಹೀಮೋಲಿಂಫ್ ಅನ್ನು ರೆಕ್ಕೆಗಳಿಗೆ ಚಿಮ್ಮಿಸಿ ಮುದುಡಿರುವ ಅವು ಬಿಚ್ಚಿಕೊಳ್ಳುವಂತೆ ಮಾಡುತ್ತದೆ. ರೆಕ್ಕೆಗಳು ಪೂರ್ತಿ ಒಣಗಿ ಗಟ್ಟಿಯಾಗಲು ಕೆಲವು ಗಂಟೆಗಳೇ ಬೇಕಾಗುತ್ತವೆ. ಅನಂತರ ಸಿಕಾಡ ಹಾರಿಹೋಗುತ್ತದೆ. ಹೀಗೆ ಹಾರಿಹೋಗುವಾಗ, ಅದು ಆ ಹೊರಕವಚವನ್ನು ಅಲ್ಲೇ ಬಿಡುತ್ತದೆ. ಅದು ಟೊಳ್ಳಾದ, ಆಂಬರ್ ಕಂದು ಬಣ್ಣದ, ಅರೆ ಪಾರದರ್ಶಕ ಕವಚವಾಗಿದ್ದು, ಅದನ್ನು ಎಕ್ಸುವಿಯ ಎನ್ನುತ್ತಾರೆ. ಇದರ ಪಂಜುಗಳು ಮರದಲ್ಲಿ ಗಟ್ಟಿಯಾಗಿ ಊರಿರುವುದರಿಂದ ಇದು ಅನೇಕ ವಾರಗಳು ಅಥವಾ ತಿಂಗಳುಗಳ ಕಾಲ ಹಾಗೇ ಇರುತ್ತದೆ. ಇಂಥ ಅನೇಕ ಹೊರಕವಚಗಳು ನಮಗೆ ಕಾಡುಪ್ರದೇಶದ ಮರಗಳ ಮೇಲೆ ಕಾಣಸಿಗುತ್ತವೆ. 
    ಆರಂಭದಲ್ಲಿ ಬಹಳ ಮೃದುವಾಗಿರುವ ವಯಸ್ಕ ಸಿಕಾಡ ತನ್ನ ಹೊರಚರ್ಮ ಕಡುಬಣ್ಣಕ್ಕೆ ತಿರುಗಿ ಗಟ್ಟಿಯಾಗಲು ಎರಡು ಮೂರು ದಿನಗಳು ಬೇಕಾಗುತ್ತವೆ. ಈ ಸಂದರ್ಭದಲ್ಲಿ ಅದು ದುರ್ಬಲವಾಗಿದ್ದು ಆಕ್ರಮಣಕಾರಿ ಪ್ರಾಣಿಗಳಿಗೆ ಸಿಕ್ಕಿಬೀಳುವ ಸಾಧ್ಯತೆಯಿರುವುದರಿಂದ ಅಡಗಿಕೊಂಡಿರುತ್ತದೆ. 
     ಹೀಗೆ ಸಿಕಾಡಗಳ ಜೀವನ ಬಹಳ ಸ್ವಾರಸ್ಯಕರವಾದ ವಿಷಯಗಳಿಂದ ಕೂಡಿದೆ. 
              
                                     
                                    
                                    
  
     

ಶುಕ್ರವಾರ, ಅಕ್ಟೋಬರ್ 30, 2026

ಸೊಳ್ಳೆಯ ಮರ್ಮ


ಸೊಳ್ಳೆಗಳ ಬಗ್ಗೆ ಒಂದಿಷ್ಟು ಓದಿದ ನನಗೆ ಅವುಗಳ ಬಗ್ಗೆ ಬಹಳ ಕುತೂಹಲ ಮೂಡಿತು. ಆಗ ಕೋಣೆಯಲ್ಲಿ ಒಂದು ಸೊಳ್ಳೆ ಕುಳಿತಿದ್ದುದನ್ನು ನೋಡಿ ಉಪಾಯವಾಗಿ ಅದರ ಚಿತ್ರ ತೆಗೆದೆ. ನಾನು ಓದಿದ್ದನ್ನು ನೆನೆದು ನೋಡಿದಾಗ ಅದು ಗಂಡು ಸೊಳ್ಳೆ ಎಂದು ತಿಳಿಯಿತು! ಹೇಗೆ ಎನ್ನುವಿರಾ? ಗಂಡು ಸೊಳ್ಳೆಗೆ ಪೊದೆಯಂಥ ಮೀಸೆಗಳು ( ಆಂಟೆನಾಗಳು) ಇದ್ದರೆ, ಹೆಣ್ಣು ಸೊಳ್ಳೆಗೆ ತೆಳ್ಳನೆಯ ಕಡ್ಡಿಯಂಥ ಮೀಸೆಗಳಿರುತ್ತವೆ. ಹಾಗಾಗಿ, ಈ ಚಿತ್ರದಲ್ಲಿ ಇರುವುದು ಗಂಡು ಸೊಳ್ಳೆ. ಅಂದಹಾಗೆ, ನಮ್ಮನ್ನು ಕಚ್ಚಿ ರಕ್ತ ಕುಡಿಯುವುದು ಹೆಣ್ಣು ಸೊಳ್ಳೆ! ಗಂಡು ಸೊಳ್ಳೆ, ಸಸ್ಯಗಳ ರಸ ಹೀರಿ ಜೀವಿಸುತ್ತದೆ. ಸೊಳ್ಳೆಯ ಜುಂಯ್ಯನೆಯ ಶಬ್ದ ಬರುವುದು ಅದರ ರೆಕ್ಕೆಗಳ ಬಡಿತದಿಂದ.‌ ಗಂಡು ಸೊಳ್ಳೆಯನ್ನು ಮಿಲನಕ್ಕೆ ಕರೆಯಲು ಹೆಣ್ಣು ಸೊಳ್ಳೆ ಈ ಶಬ್ದ ಮಾಡುತ್ತದೆ. ಗಂಡು ಸೊಳ್ಳೆ, ಈ ಶಬ್ದವನ್ನು ತನ್ನ ಮೀಸೆಗಳ ಮೂಲಕ ಕೇಳಿ ಹೆಣ್ಣಿನ ಬಳಿಗೆ ಮಿಲನಕ್ಕೆ ಬರುತ್ತದೆ.‌ ಸೊಳ್ಳೆಯ ಜುಂಯ್ಯನೆಯ ಶಬ್ದ ನಮ್ಮ ಕಿವಿಯ ಬಳಿಯೇ ಏಕೆ ಬರುತ್ತದೆ? ಹೆಣ್ಣು ಸೊಳ್ಳೆಯು ನಾವು ಉಸಿರಿನಲ್ಲಿ ಬಿಡುವ ಇಂಗಾಲದ ಡೈಆಕ್ಸೈಡ್ ನಿಂದ ಆಗುವ ಉಷ್ಣತೆಗೆ ಆಕರ್ಷಣೆಗೊಂಡು ನಮ್ಮ ತಲೆ, ಮುಖಗಳ ಬಳಿ ಬಂದು ತನ್ನ ಮಿಲನಕ್ಕೆ ಅನುಕೂಲವಾಗಲು ನಮ್ಮನ್ನು ಕಚ್ಚಿ ರಕ್ತ ಹೀರುತ್ತದೆ. ಅದೇ ಸಮಯಕ್ಕೆ ಅದು ರೆಕ್ಕೆಗಳನ್ನು ಬಡಿದು ಶಬ್ದ ಮಾಡಿ ಗಂಡನ್ನು ಮಿಲನಕ್ಕೆ ಕರೆಯುತ್ತದೆ.
                                         
                          

ಗುರುವಾರ, ಅಕ್ಟೋಬರ್ 29, 2026

ಸುಂದರೀಶತಕ -೧೦೬

ಸಂಸ್ಕೃತ ಮೂಲ 

ಕೇತಕಿ ತವ ಯದಿ ನ ಕೃತಂ ಪರಿಶೀಲನಮಾದರಾನ್ಮಹೇಶೇನ ।
ನ ಕಾಪಿ ಹಾನಿ: ಸೌರಭ್ಯಾಕೃಷ್ಟಮಧುಪಾಯಾ: ।।

ಕನ್ನಡ ಅನುವಾದ 

   ಸಖಿಯು ನಾಯಕಿಗೆ ಕೇತಕಿ ಪುಷ್ಪವೆಂಬಂತೆ ಹೇಳುತ್ತಾಳೆ," ಹೇ ಕೇತಕಿ ಪುಷ್ಪವೇ! ಶಿವನು ನಿನ್ನನ್ನು ಆದರದಿಂದ ಧರಿಸದಿದ್ದರೆ, ನಿನ್ನ ಸೌರಭದಿಂದ ದುಂಬಿಗಳನ್ನು ಆಕರ್ಷಿಸುವ ನಿನಗೆ ಏನೂ ಹಾನಿಯಿಲ್ಲ!" 
   ಇಲ್ಲಿ ಕವಿಯು ಪುನಃ ಪೌರಾಣಿಕ ಉದಾಹರಣೆಯ ಮೂಲಕ ಒಂದು ಶೃಂಗಾರ ಅನ್ಯೋಕ್ತಿಯನ್ನು ರಚಿಸಿದ್ದಾನೆ.‌ ಶಿವಪುರಾಣದ ಪ್ರಕಾರ, ಬ್ರಹ್ಮ ಮತ್ತು ವಿಷ್ಣುವಿನ ನಡುವೆ ಯಾರು ಹೆಚ್ಚೆಂದು ವಾಗ್ವಾದವಾದಾಗ ಒಂದು ಉದ್ದವಾದ ಜ್ಯೋತಿರ್ಲಿಂಗ ಉದ್ಭವಿಸಿತು. ಅದರ ಆದಿಯನ್ನು ಕಂಡುಹಿಡಿಯಲು ಬ್ರಹ್ಮನು ಹಂಸದ ರೂಪದಿಂದಲೂ ಅಂತ್ಯವನ್ನು ಪತ್ತೆಮಾಡಲು ವಿಷ್ಣುವು ವರಾಹದ ರೂಪದಿಂದಲೂ ಹೋದರು.‌ ಮೇಲಿನಿಂದ ಕೇತಕಿ ಪುಷ್ಪವು ಬೀಳುತ್ತಿರಲು, ಬ್ರಹ್ಮನು ತಾನು ಲಿಂಗದ ಆದಿಯನ್ನು ನೋಡಿರುವುದಕ್ಕೆ ಸಾಕ್ಷಿ ಹೇಳಲು ಅದಕ್ಕೆ ಹೇಳಿ ಒಪ್ಪಿಸಿದನು. ವಿಷ್ಣುವು ಲಿಂಗದ ಅಂತ್ಯವನ್ನು ಕಾಣದೆ ಹಿಂದಿರುಗಿ ಬ್ರಹ್ಮನ ಬಳಿ ತನ್ನ ಸೋಲೊಪ್ಪಿಕೊಂಡನು. ಬ್ರಹ್ಮನಾದರೋ ತಾನು ಆದಿಯನ್ನು ನೋಡಿರುವುದಾಗಿ ಸುಳ್ಳು ಹೇಳಲು, ಕೇತಕಿ ಪುಷ್ಪವು ಹೌದೆಂದು ಸುಳ್ಳು ಸಾಕ್ಷಿ ಹೇಳಿತು. ಆಗ ಆ ಜ್ಯೋತಿರ್ಲಿಂಗದಿಂದ ಶಿವನು ಪ್ರತ್ಯಕ್ಷನಾಗಿ ಸುಳ್ಳು ಹೇಳಿದ ಬ್ರಹ್ಮನಿಗೆ ಇನ್ನು ಮುಂದೆ ಪೂಜೆಯೇ ಇರದಿರಲೆಂದು ಶಪಿಸಿ ಸತ್ಯ ಹೇಳಿದ ವಿಷ್ಣುವಿಗೆ ತನ್ನ ಸಮಾನತೆಯನ್ನು ಕೊಟ್ಟನು. ಸುಳ್ಳು ಸಾಕ್ಷಿ ಹೇಳಿದ ಕೇತಕಿ ಪುಷ್ಪವನ್ನು ಇನ್ನು ಮುಂದೆ ತಾನು ಪೂಜೆಯಲ್ಲಿ ಸ್ವೀಕರಿಸುವುದಿಲ್ಲ ಎಂದು ಹೇಳಿದನು. 
    ಈ ಕಥೆಯನ್ನಿಟ್ಟುಕೊಂಡು ಕವಿಯು ಕೇತಕಿ ಪುಷ್ಪಕ್ಕೆ ಹೇಳುವಂತೆ ಸಖಿಯು ಒಬ್ಬ ಸುಂದರ ಯುವತಿಗೆ ಸಾಂತ್ವನ ಹೇಳುವ ರೀತಿಯಲ್ಲಿ ಪದ್ಯ ರಚಿಸಿದ್ದಾನೆ.‌ ಅವಳು ಕೇತಕಿ ಪುಷ್ಪಕ್ಕೆ ಶಿವನು ಅದನ್ನು ಆದರದಿಂದ ಧರಿಸದಿದ್ದರೆ ಏನೂ ಹಾನಿಯಿಲ್ಲ ಎಂದು ಹೇಳುತ್ತಾಳೆ. ಏಕೆಂದರೆ, ಅನೇಕ ದುಂಬಿಗಳನ್ನು ಆಕರ್ಷಿಸುವ ಸೌರಭ ಕೇತಕಿ ಪುಷ್ಪಕ್ಕೆ ಇದೆ, ಹಾಗಾಗಿ ಶಿವನಲ್ಲದಿದ್ದರೇನು, ಯಾವುದಾದರೂ ದುಂಬಿ ಅದರ ಬಳಿ ಬಂದೇ ಬರುತ್ತದೆ ಎಂದು ಸಾಂತ್ವನ ಹೇಳುತ್ತಾಳೆ.‌ ಇದನ್ನು ನಾಯಕಿಗೆ ಅನ್ವಯಿಸಿದಾಗ, ಯಾರೋ ಒಬ್ಬ ನಾಯಕ ಅವಳನ್ನು ನಿರಾಕರಿಸಿದರೆ ಏನೂ ಚಿಂತೆಯಿಲ್ಲ. ಏಕೆಂದರೆ ಇನ್ನೂ ಅನೇಕ ನಾಯಕರನ್ನು ಆಕರ್ಷಿಸುವ ಸೌಂದರ್ಯ ಅವಳಿಗಿರುವುದರಿಂದ ಇನ್ನೊಬ್ಬ ಪ್ರೇಮಿ ಅವಳಿಗೆ ಸಿಕ್ಕೇ ಸಿಗುತ್ತಾನೆ ಎಂದು ಸಖಿಯು ಸಾಂತ್ವನ ಹೇಳುತ್ತಿದ್ದಾಳೆ ಎಂಬ ಅರ್ಥ ಬರುತ್ತದೆ. ಒಬ್ಬಳು ತನ್ನ ಪ್ರೇಮವನ್ನು ಒಬ್ಬ ಪುರುಷನಿಗೆ ಅಭಿವ್ಯಕ್ತಿಪಡಿಸಿದಾಗ ಆ ಪುರುಷನು ನಿರಾಕರಿಸಿದರೆ ಇವಳಿಗೆ ಆಘಾತವಾಗುತ್ತದೆ! ಆದರೆ ಹಾಗೆ ಆಘಾತ ಮಾಡಿಕೊಳ್ಳಬೇಕಿಲ್ಲ; ಶಿವನು ಕೇತಕಿ ಪುಷ್ಪವನ್ನು ನಿರಾಕರಿಸಿದರೂ ಆ ಕೇತಕಿಗೆ ಇತರ ದುಂಬಿಗಳನ್ನು ಆಕರ್ಷಿಸುವ ಸೌರಭ ಇರುವಂತೆ ಇವಳಿಗೂ ಇತರ ಪುರುಷರನ್ನು ಆಕರ್ಷಿಸುವ ಸೌಂದರ್ಯ ಇದೆ; ಹಾಗಾಗಿ ಇನ್ನೊಬ್ಬ ಯೋಗ್ಯ ಪ್ರೇಮಿ ಸಿಗುತ್ತಾನೆ ಎಂದು ತಾತ್ಪರ್ಯ.

ಸೋಮವಾರ, ಅಕ್ಟೋಬರ್ 26, 2026

ಗ್ರಂಥಾರಂಭ ಕಥೆಗಳು -ವಾಲ್ಮೀಕಿ ರಾಮಾಯಣ

ರಾಮಾಯಣವನ್ನು ಆದಿಕಾವ್ಯವೆಂದೂ ಅದನ್ನು ರಚಿಸಿದ ವಾಲ್ಮೀಕಿ ಮುನಿಗಳನ್ನು ಆದಿಕವಿಗಳೆಂದೂ ಕರೆಯುತ್ತಾರೆ. ವಾಲ್ಮೀಕಿಗಳು ರಾಮಾಯಣವನ್ನು ಹೇಗೆ ರಚಿಸಿದರೆಂಬುದೇ ಒಂದು ಸ್ವಾರಸ್ಯಕರ ಕಥೆ.
    ಒಮ್ಮೆ ವಾಲ್ಮೀಕಿ ಮಹರ್ಷಿಗಳ ಆಶ್ರಮಕ್ಕೆ ನಾರದ ಮುನಿಗಳು ಆಗಮಿಸಿದರು. ಆಗ ವಾಲ್ಮೀಕಿಗಳು ನಾರದರನ್ನು ಒಂದು ಪ್ರಶ್ನೆ ಕೇಳಿದರು," ಪೂಜ್ಯರೇ! ಗುಣವಂತನೂ ವೀರ್ಯವಂತನೂ ಧರ್ಮಜ್ಞನೂ ಕೃತಜ್ಞನೂ ಸತ್ಯವಾಕ್ಯನೂ ದೃಢವ್ರತನೂ ಆದವನು ಈಗ ಲೋಕದಲ್ಲಿ ಯಾರಿರುವನು? ಉತ್ತಮ ಚಾರಿತ್ರ್ಯದಿಂದ ಕೂಡಿರುವವನೂ ಸಕಲ ಜೀವಿಗಳಿಗೂ ಹಿತವನ್ನು ಬಯಸುವವನೂ ವಿದ್ವಾಂಸನೂ ಸಮರ್ಥನೂ ನೋಡಲು ಎಲ್ಲರಿಗೂ ಪ್ರಿಯನಾಗಿರುವವನೂ ಧೈರ್ಯವಂತನೂ ಕೋಪವನ್ನು ಜಯಿಸಿರುವವನೂ ಕಾಂತಿವಂತನೂ ಅಸೂಯಾರಹಿತನೂ ಆದವನು ಯಾರಿರುವನು? ಯುದ್ಧದಲ್ಲಿ ಕೋಪಗೊಂಡ ಯಾರನ್ನು ಕಂಡರೆ ದೇವತೆಗಳೂ ಭಯಭೀತರಾಗುವರು? ಇಂಥ ಮನುಷ್ಯ ಈಗ ಯಾರಾದರೂ ಇರುವನೇ? ಇದ್ದರೆ ತಿಳಿಯಲು ನಾನು ಬಹಳ ಕುತೂಹಲಗೊಂಡಿರುವೆ ಮಹರ್ಷಿಗಳೇ! ಅಂಥವನು ಯಾರು? ಹೇಳಿ!" 
   ನಾರದರು ತ್ರಿಲೋಕಜ್ಞಾನಿಗಳು! ಅವರಿಗೆ ತಿಳಿಯದುದೇನಿರುತ್ತದೆ? ವಾಲ್ಮೀಕಿಗಳ ಪ್ರಶ್ನೆಗೆ ಸಂತೋಷಗೊಂಡು ಅವರು ಉತ್ತರಿಸಿದರು," ಮುನಿಗಳೇ! ನೀವು ಹೇಳಿದ ಈ ಗುಣಗಳೆಲ್ಲವೂ ದುರ್ಲಭವಾಗಿವೆ! ಆದರೂ ಅವೆಲ್ಲವೂ ಸೇರಿರುವ ಒಬ್ಬ ಮನುಷ್ಯನಿದ್ದಾನೆ! ಅವನೇ ಇಕ್ಷ್ವಾಕು ವಂಶದ ರಾಜನಾದ ರಾಮ! ಅವನು ನಿಶ್ಚಲ ಆತ್ಮವುಳ್ಳವನೂ ಮಹಾವೀರನೂ ಕಾಂತಿವಂತನೂ ಧೈರ್ಯವಂತನೂ ಉತ್ತಮ ವಾಗ್ಮಿಯೂ ಶ್ರೀಮಂತನೂ ಆಗಿರುವನು!  ಮಹಾಧನುಸ್ಸನ್ನು ಧರಿಸಿ ಶತ್ರುಗಳನ್ನು ನಾಶಮಾಡುವ ಪ್ರತಾಪಶಾಲಿಯಾದ ಅವನು ವಿಶಾಲವಾದ ಹೆಗಲುಳ್ಳವನಾಗಿದ್ದಾನೆ!  ಶ್ಯಾಮಲವರ್ಣದ ಅವನು ವಿಶಾಲ ಕಂಗಳನ್ನೂ ಸಮಾನ ಅಂಗಗಳನ್ನೂ ಉಳ್ಳವನಾಗಿ ಶುಭಲಕ್ಷಣಗಳನ್ನುಳ್ಳ ಸುಂದರನಾಗಿದ್ದಾನೆ! ಅವನು ಧರ್ಮಜ್ಞನೂ ಸತ್ಯಸಂಧನೂ ಆಗಿದ್ದು ಪ್ರಜಾಹಿತರತನಾಗಿದ್ದಾನೆ! ಅವನು ಯಶಸ್ವಿಯೂ ಜ್ಞಾನಸಂಪನ್ನನೂ ಆಗಿದ್ದು ಗುರುಹಿರಿಯರಿಗೆ ವಿಧೇಯನಾಗಿದ್ದಾನೆ! ಪ್ರಜಾಪತಿ ಬ್ರಹ್ಮನಿಗೆ ಸಮಾನನಾದ ಅವನು ಸಕಲ ಜೇವಿಗಳ ರಕ್ಷಕನೂ ಧರ್ಮರಕ್ಷಕನೂ ಆಗಿರುವನು! ವೇದವೇದಾಂಗಗಳನ್ನು ತಿಳಿದಿರುವ ಅವನು ಮಹಾಬುದ್ಧಿಶಾಲಿಯೂ ಎಲ್ಲರಿಗೂ ಪ್ರಿಯನೂ ಆಗಿದ್ದಾನೆ! ಎಲ್ಲಾ ನದಿಗಳೂ ಬಂದು ಸಮುದ್ರವನ್ನು ಸೇರುವಂತೆ ಸಜ್ಜನರು ಸದಾ ಅವನ ಬಳಿಗೆ ಬರುತ್ತಿರುತ್ತಾರೆ! ಆರ್ಯನೂ ಸುಸಂಸ್ಕೃತನೂ ಎಲ್ಲರನ್ನೂ ಸಮಾನವಾಗಿ ಕಾಣುವವನೂ ಆಗಿರುವ ಅವನು ಸಕಲಗುಣೋಪೇತನಾಗಿದ್ದು ಮಾತೆ ಕೌಸಲ್ಯೆಯ ಆನಂದವನ್ನು ವರ್ಧಿಸುವವನು! ಅವನು ಗಾಂಭೀರ್ಯದಲ್ಲಿ ಸಮುದ್ರದಂತಯೂ ಕ್ರೋಧದಲ್ಲಿ ಕಾಲಾಗ್ನಿಗೆ ಸಮಾನನೂ ಆಗಿರುವನು! ಚಂದ್ರನಂತೆ ಪ್ರಿಯದರ್ಶನನೂ ಕ್ಷಮೆಯಲ್ಲಿ ಪೃಥ್ವಿಗೆ ಸಮಾನನೂ ಆಗಿರುವನು! ತ್ಯಾಗದಲ್ಲಿ ಕುಬೇರನಿಗೆ ಸಮಾನನಾಗಿರುವ ಅವನು ಸತ್ಯದಲ್ಲಿ ಇನ್ನೊಬ್ಬ ಧರ್ಮಮೂರ್ತಿಯಂತಿರುವನು!" 
    ಹೀಗೆ ನಾರದರು ಶ್ರೀ ರಾಮನ ಗುಣಗಾನ ಮಾಡಿ, ರಾಮನ ತಂದೆ ದಶರಥನು ಅವನಿಗೆ ಪಟ್ಟಾಭಿಷೇಕ ಮಾಡಲುದ್ಯುಕ್ತನಾದುದು, ಕೈಕೇಯಿಯ ದೆಸೆಯಿಂದ ರಾಮ, ಲಕ್ಷ್ಮಣ, ಸೀತೆಯರು ಕಾಡಿಗೆ ‌ಹೋದುದು, ಅಲ್ಲಿ ರಾವಣನು ಸೀತೆಯನ್ನು ಅಪಹರಿಸಿದುದು, ರಾಮ, ಲಕ್ಷ್ಮಣರು, ಹನುಮಂತನೇ ಮೊದಲಾದ ಕಪಿವೀರರ ಸಹಾಯದಿಂದ ಸಮುದ್ರಕ್ಕೆ ಸೇತುವೆ ಕಟ್ಟಿ ಲಂಕೆಗೆ ಹೋದುದು, ಘೋರ ಯುದ್ಧದಲ್ಲಿ ರಾಮನು ರಾವಣನನ್ನು ಸಂಹರಿಸಿ ಸೀತಾಲಕ್ಷ್ಮಣರೊಂದಿಗೆ ಅಯೋಧ್ಯೆಗೆ ಹಿಂತಿರುಗಿ ಪಟ್ಟಾಭಿಷಿಕ್ತನಾದುದರವರೆಗಿನ ರಾಮನ ಕಥೆಯನ್ನು ಸಂಕ್ಷಿಪ್ತವಾಗಿ ಹೇಳಿದರು. ಅನಂತರ ಅವರು ಪುನಃ ಹೇಳಿದರು," ಶ್ರೀ ರಾಮನ ಆಳ್ವಿಕೆಯಲ್ಲಿ ಲೋಕವೆಲ್ಲಾ ಆನಂದದಿಂದ ಕೂಡಿದೆ! ಜನರು ತುಷ್ಟರೂ ಪುಷ್ಟರೂ ಧಾರ್ಮಿಕರೂ ಆಗಿದ್ದು ರೋಗರಹಿತರೂ ಆರೋಗ್ಯವಂತರೂ ಆಗಿರುವರು! ಎಲ್ಲಿಯೂ ದುರ್ಭಿಕ್ಷೆಯ ಭಯವಾಗಲಿ, ಅಗ್ನಿಭಯವಾಗಲಿ, ವಾತಭಯವಾಗಲಿ, ಜಲಭಯವಾಗಲಿ ಯಾವುದೂ ಇಲ್ಲ! ಎಲ್ಲಿಯೂ ಮಕ್ಕಳು ಸಾಯುವುದಿಲ್ಲ,  ಸ್ತ್ರೀಯರು ವಿಧವೆಯರಾಗುವುದಿಲ್ಲ ಹಾಗೂ ಅಲ್ಲಲ್ಲಿ ಪುರುಷರು ರಕ್ಷಕರಾಗಿರುತ್ತಾರೆ! ಯಾರಿಗೂ ಹಸಿವಿನ ಬಾಧೆಯಾಗಲಿ ಕಳ್ಳಕಾಕರ ಬಾಧೆಯಾಗಲಿ ಇಲ್ಲದೆ ಧನಧಾನ್ಯಸಮೃದ್ಧಿಯಿಂದ ಜನರು ಕೃತಯುಗದಲ್ಲಿ ಇದ್ದಂತೆ ಆನಂದದಿಂದ ಇರುವರು! ಶ್ರೀ ರಾಮನು ನೂರು ಅಶ್ವಮೇಧ ಯಾಗಗಳನ್ನು ಮಾಡಿ, ಹಾಗೆಯೇ ಬಹುಸುವರ್ಣಕ ಯಾಗಗಳನ್ನು ಮಾಡಿ, ಕೋಟಿ ಸಂಖ್ಯೆಯಲ್ಲಿ ಗೋದಾನ ಮಾಡಿ, ಅನೇಕ ರಾಜವಂಶಗಳನ್ನು ಸ್ಥಾಪಿಸಿ ಹನ್ನೊಂದು ಸಾವಿರ ವರ್ಷಗಳ ಕಾಲ ರಾಜ್ಯವಾಳಿ ಬ್ರಹ್ಮಲೋಕಕ್ಕೆ ಹೋಗುತ್ತಾನೆ! 
    " ಮುನಿಗಳೇ! ಈ ರಾಮಾಯಣವು ಪುಣ್ಯಪ್ರದವೂ ಪಾಪಹರವೂ ವೇದಗಳಿಗೆ ಸಮಾನವೂ ಆಗಿದೆ! ಇದನ್ನು ಪಠಿಸುವರು ದೀರ್ಘಾಯುಷ್ಯ ಹೊಂದಿ ಪುತ್ರಪೌತ್ರರೊಂದಿಗೆ ಸ್ವರ್ಗಕ್ಕೆ ಹೋಗುತ್ತಾರೆ! ಇದನ್ನು ಪಠಿಸುವ ಬ್ರಾಹ್ಮಣನು ಒಳ್ಳೆಯ ವಾಗ್ಮಿಯಾಗುತ್ತಾನೆ, ಕ್ಷತ್ರಿಯನು ಭೂಪತಿಯಾಗುತ್ತಾನೆ, ವೈಶ್ಯನು ಒಳ್ಳೆಯ ವ್ಯಾಪಾರಫಲವನ್ನು ಪಡೆಯುತ್ತಾನೆ, ಹಾಗೂ ಶೂದ್ರನು ಮಹತ್ವವನ್ನು ಪಡೆಯುತ್ತಾನೆ!" 
    ಹೀಗೆ ನಾರದರು ಬ್ರಹ್ಮನಿಂದ ಉಪದಿಷ್ಟವಾದ ಶತಕೋಟಿಪ್ರವಿಸ್ತಾರವಾದ ರಾಮಾಯಣವನ್ನು ಸಂಕ್ಷಿಪ್ತವಾಗಿ ಹೇಳಲು,  ವಾಲ್ಮೀಕಿಗಳು ಸಂತೋಷಗೊಂಡು ಅವರನ್ನು ವಿಧಿವತ್ತಾಗಿ ಪೂಜಿಸಿದರು. ಅನಂತರ ನಾರದರು ಅವರ ಅನುಮತಿ ಪಡೆದು ಆಕಾಶಮಾರ್ಗವಾಗಿ ದೇವಲೋಕಕ್ಕೆ ಹೋದರು. 
    ಅನಂತರ ವಾಲ್ಮೀಕಿ ಮಹರ್ಷಿಗಳು ಮಾಧ್ಯಾಹ್ನಿಕ ಕ್ರಿಯೆಯಾಗಿ ಸ್ನಾನಮಾಡಬಯಸಿ, ತಮ್ಮ ಶಿಷ್ಯ ಭರದ್ವಾಜನೊಂದಿಗೆ ಸನಿಹದ ತಮಸಾನದಿಗೆ ಹೊರಟರು.‌ ತಮಸಾನದಿಯ ತಿಳಿನೀರನ್ನು ಕಂಡು ಅವರು ಶಿಷ್ಯ ಭರದ್ವಾಜನಿಗೆ," ಭರದ್ವಾಜ! ಈ ತಮಸಾ ನದಿಯ ನೀರು  ಕೆಸರಿಲ್ಲದೇ ಸತ್ಪುರುಷರ ಮನಸ್ಸಿನಂತೆ ಎಷ್ಟು ತಿಳಿಯಾಗಿದೆ ನೋಡು! ಈಗ ಕಮಂಡಲುವನ್ನು ಇಲ್ಲೇ ಇರಿಸಿ ಈ ನೀರಿನಲ್ಲಿಯೇ ಸ್ನಾನ ಮಾಡುವೆ! ಸ್ನಾನದ ವಸ್ತ್ರವನ್ನು ಕೊಡು!" ಎಂದರು.‌
    ಅದರಂತೆ ಭರದ್ವಾಜನು ಅವರಿಗೆ ಸ್ನಾನದ ವಸ್ತ್ರ ಕೊಡಲು, ಅದನ್ನು ತೆಗೆದುಕೊಂಡು ವನದ ಸೌಂದರ್ಯವನ್ನು ಆಸ್ವಾದಿಸುತ್ತಾ ಮುಂದೆ ಹೋಗುತ್ತಿದ್ದಂತೆ, ಒಂದು ಮರದ ಕೊಂಬೆಯ ಮೇಲೆ, ಕ್ರೌಂಚ ಪಕ್ಷಿಗಳ ಜೋಡಿಯೊಂದು ಆನಂದದಿಂದ ನಲಿದಾಡುತ್ತಾ ಶಬ್ದ ಮಾಡುತ್ತಿದ್ದುದನ್ನು ನೋಡಿದರು. ಅವು ಕ್ಷಣಮಾತ್ರದ ವಿರಹವನ್ನೂ ಸಹಿಸುತ್ತಿರಲಿಲ್ಲ. ಆಗ ಒಬ್ಬ ಬೇಡನು ವಾಲ್ಮೀಕಿಗಳು ನೋಡುತ್ತಿದ್ದರೂ ಲೆಕ್ಕಿಸದೆ ಆ ಕ್ರೌಂಚ ಜೋಡಿಯಲ್ಲಿ ಗಂಡು ಪಕ್ಷಿಗೆ ಗುರಿಯಿಟ್ಟು ಬಾಣ ಹೊಡೆದನು! ಅದು ಗಾಯಗೊಂಡು ಕೆಳಗೆ ಬಿದ್ದು ರಕ್ತಸಿಕ್ತವಾಗಿ ವಿಲವಿಲನೆ ಒದ್ದಾಡುತ್ತಿರಲು, ಅದನ್ನು ಕಂಡು ಹೆಣ್ಣು ಪಕ್ಷಿ ತನ್ನ ಸಂಗಾತಿಯಿಂದ ಬೇರೆಯಾದುದಕ್ಕೆ ಕರುಣಾಪೂರಿತವಾಗಿ ಕೂಗಿತು! ಇದನ್ನು ನೋಡಿ ಧರ್ಮಾತ್ಮರಾದ ವಾಲ್ಮೀಕಿಗಳ ಹೃದಯದಲ್ಲಿ ಕರುಣೆಯುಕ್ಕಿ, ಆ ನಿಷಾದನ ಕಾರ್ಯ ಅಧರ್ಮವೆಂದು ನಿಶ್ಚಯಿಸಿ ಅವನನ್ನು ಶಪಿಸಿದರು -
   ಮಾ ನಿಷಾದ ಪ್ರತಿಷ್ಠಾಂ ತ್ವಮಗಮ: ಶಾಶ್ವತೀ: ಸಮಾ: ।
   ಯತ್ಕ್ರೌಂಚಮಿಥುನಾದೇಕಮವಧೀ: ಕಾಮಮೋಹಿತಮ್ ।।
      " ಎಲೈ ನಿಷಾದನೇ! ಕ್ರೌಂಚ ಪಕ್ಷಿಗಳ ಜೋಡಿಯಲ್ಲಿ  ಕಾಮಮೋಹಿತವಾಗಿದ್ದ ಒಂದನ್ನು ಕೊಂದೆಯಾದ್ದರಿಂದ ನೀನು ಬಹಳ ಕಾಲ ಪ್ರತಿಷ್ಠೆಯನ್ನು ಹೊಂದದಿರು!" 
ಹೀಗೆ ಶಪಿಸಿದ ಬಳಿಕ ಅವರು ಆಶ್ಚರ್ಯದಿಂದ ಚಿಂತಿಸತೊಡಗಿದರು," ಪಕ್ಷಿಯ ಕಾರಣದಿಂದ ಶೋಕಗೊಂಡು ನಾನೇನು ಹೇಳಿದೆ?!" 
    ಹೀಗೆ ಚಿಂತಿಸುತ್ತಾ ಅವರು ಭರದ್ವಾಜನಿಗೆ," ಶೋಕಾರ್ತನಾದ ನಾನು ಹೇಳಿದ ಈ ವಾಕ್ಯವು ಪಾದಬದ್ಧವಾಗಿ, ಸಮಾನ ಅಕ್ಷರಗಳಿಂದ ಕೂಡಿದ್ದು, ತಂತಿಯ ವಾದ್ಯಗಳಿಂದ ಹಾಡಬಲ್ಲ ಶ್ಲೋಕವಾಗಲಿ!" ಎಂದರು. ಆಗ ಶಿಷ್ಯ ಭರದ್ವಾಜನು ಅದನ್ನು ಪುನರುಚ್ಚರಿಸಲು, ವಾಲ್ಮೀಕಿಗಳು ಸಂತೋಷಗೊಂಡರು. 
    ಹೀಗೆ ವಾಲ್ಮೀಕಿ ಮಹರ್ಷಿಗಳ ಶೋಕದಿಂದ ಮೊದಲ ಶ್ಲೋಕ ಹೊರಬಂದಿತು! 
ಅನಂತರ ಅವರು ತಮಸಾ ನದಿಯಲ್ಲಿ ಸ್ನಾನ ಮಾಡಿ ಆಶ್ರಮಕ್ಕೆ ಬಂದು, ಶಿಷ್ಯನೊಂದಿಗೆ ಇತರ ವಿಷಯಗಳನ್ನು ಮಾತನಾಡುತ್ತಾ ಹೋದರೂ ಆ ಶ್ಲೋಕದ ಬಗ್ಗೆಯೇ ಚಿಂತಿಸುತ್ತಿದ್ದರು. 
    ಆಗ ಅವರನ್ನು ನೋಡಲು ಸೃಷ್ಟಿಕರ್ತನಾದ ಸಾಕ್ಷಾತ್ ಬ್ರಹ್ಮನೇ ಬಂದನು! ಬ್ರಹ್ಮನನ್ನು ನೋಡಿ ವಿಸ್ಮಿತರಾದ ವಾಲ್ಮೀಕಿಗಳು ಮಾತೇ ಹೊರಡದೇ ಎದ್ದು ಕೈಮುಗಿದುಕೊಂಡು ನಿಂತರು! ಅನಂತರ ಅವರು ವಿಧಿವತ್ತಾಗಿ ಬ್ರಹ್ಮನಿಗೆ ಅರ್ಘ್ಯಪಾದ್ಯಗಳನ್ನು ಅರ್ಪಿಸಿ, ನಮಸ್ಕರಿಸಿ ಆಸನ ನೀಡಿ ಕುಶಲಪ್ರಶ್ನೆ ಮಾಡಿದರು. ಬ್ರಹ್ಮನು ಕುಳಿತು ಅವರಿಗೂ ಕುಳಿತುಕೊಳ್ಳಲು ಹೇಳಲು, ವಾಲ್ಮೀಕಿಗಳು ಕುಳಿತರೂ ಅವರ ಮನಸ್ಸು ಆ ಪಕ್ಷಿಯ ಘಟನೆಯ ಕಡೆಗೇ ತಿರುಗಿ ಆ ಶ್ಲೋಕವನ್ನೇ ನೆನೆಯುತ್ತಾ ಪುನಃ ಶೋಕಕ್ಕೊಳಗಾದರು. ಆಗ ಬ್ರಹ್ಮನು ಅವರಿಗೆ ಹೇಳಿದನು," ಎಲೈ ಬ್ರಾಹ್ಮಣೋತ್ತಮನೇ! ನೀನು ಹೇಳಿದ್ದು ಶ್ಲೋಕವೇ ಹೌದು! ಆದರ ಬಗ್ಗೆ ಹೆಚ್ಚು ವಿಚಾರ ಮಾಡಬೇಕಿಲ್ಲ! ನನ್ನ ಇಚ್ಛೆಯಿಂದಲೇ ಈ ವಾಣಿಯು ನಿನ್ನ ಮುಖದಿಂದ ಹೊರಟಿತು! ಎಲೈ ಮುನಿಸತ್ತಮ! ಇದೇ ಶ್ಲೋಕರೂಪದಿಂದಲೇ ಧರ್ಮಾತ್ಮನೂ ಧೀಮಂತನೂ ಆದ ಶ್ರೀರಾಮನ ಚರಿತ್ರೆಯನ್ನು ಸಂಪೂರ್ಣವಾಗಿ ರಚಿಸು! ನಾರದರಿಂದ ಹೇಗೆ ಕೇಳಿದೆಯೋ ಹಾಗೆಯೇ ನೀನು ರಾಮನ ಚರಿತ್ರೆಯನ್ನು ರಚಿಸು! ಶ್ರೀರಾಮನ, ಅವನ ತಮ್ಮ ಲಕ್ಷ್ಮಣನ, ಸೀತೆಯ, ರಾವಣ ಮೊದಲಾದ ಎಲ್ಲಾ ರಾಕ್ಷಸರ, ತಿಳಿದಿರುವ ಹಾಗೂ ತಿಳಿಯದಿರದ ವಿಚಾರಗಳನ್ನೆಲ್ಲಾ ರಚಿಸು! ನಿನಗೆ ತಿಳಿದಿರದ ವಿಚಾರಗಳೂ ತಿಳಿಯುತ್ತವೆ! ನಿನ್ನ ಕಾವ್ಯದಲ್ಲಿ ಎಲ್ಲಿಯೂ ಅಸತ್ಯವಿರುವುದಿಲ್ಲ! ಪುಣ್ಯಮಯವಾದ ರಾಮಕಥೆಯನ್ನು ಮನೋಹರ ಶ್ಲೋಕಗಳಲ್ಲಿ ರಚಿಸು! ಎಲ್ಲಿಯವರೆಗೆ ಈ ಭೂಮಂಡಲದಲ್ಲಿ ಪರ್ವತಗಳೂ ನದಿಗಳೂ ಇರುವವೋ ಅಲ್ಲಿಯವರೆಗೆ ನೀನು ರಚಿಸುವ ರಾಮಾಯಣ ಕಥೆಯು ಪ್ರಚಾರದಲ್ಲಿರುತ್ತದೆ! ಎಲ್ಲಿಯವರೆಗೆ ನೀನು ರಚಿಸುವ ರಾಮಾಯಣ ಕಥೆಯು ಪ್ರಚಾರದಲ್ಲಿರುವುದೋ ಅಲ್ಲಿಯವರೆಗೆ ನೀನು ಮೇಲಿನ ಮತ್ತು ಕೆಳಗಿನ ನನ್ನ ಎಲ್ಲಾ ಲೋಕಗಳಲ್ಲೂ ವಾಸಿಸಲು ಅರ್ಹನಾಗಿರುವೆ!" 
      ಹೀಗೆ ಹೇಳಿ ಬ್ರಹ್ಮನು ಅಲ್ಲಿಯೇ ಅಂತರ್ಧಾನನಾದನು. ಆಗ ವಾಲ್ಮೀಕಿಗಳೂ ಅವರ ಶಿಷ್ಯರೂ ವಿಸ್ಮಯಗೊಂಡರು!
    ಅನಂತರ ವಾಲ್ಮೀಕಿಗಳ‌ ಶಿಷ್ಯರೆಲ್ಲರೂ ಮಾ ನಿಷಾದ ಶ್ಲೋಕವನ್ನು ವಿಸ್ಮಯ, ಸಂತೋಷಗಳಿಂದ ಹೇಳಿಕೊಳ್ಳುತ್ತಾ," ನಮ್ಮ ಗುರುಗಳು ನಾಲ್ಕು ಪಾದಗಳಿಂದಲೂ ಸಮವಾದ ಅಕ್ಷರಗಳಿಂದಲೂ ಕೂಡಿದ ಯಾವ ಶೋಕವಾಕ್ಯವನ್ನು ಹೇಳಿದರೋ ಅದು ಮತ್ತೆ ಮತ್ತೆ ಹೇಳುತ್ತಿದ್ದಂತೆ ಶ್ಲೋಕವಾಯಿತು!" ಎಂದರು. 
   ಬ್ರಹ್ಮನ ಮಾತಿನಂತೆ ವಾಲ್ಮೀಕಿ ಮಹರ್ಷಿಗಳಿಗೆ ರಾಮಾಯಣ ಕಾವ್ಯವನ್ನು ಸಂಪೂರ್ಣವಾಗಿ ಈ ರೀತಿಯ ಶ್ಲೋಕಗಳಿಂದ ರಚಿಸಬೇಕೆಂದು ಮನಸ್ಸಾಗಿ, ಅವರು ಇಪ್ಪತ್ತು ನಾಲ್ಕು ಸಾವಿರ ಮನೋಹರ ಶ್ಲೋಕಗಳಲ್ಲಿ, ಐನೂರು ಸರ್ಗಗಳಲ್ಲೂ ಏಳು ಕಾಂಡಗಳಲ್ಲೂ ( ಬಾಲಕಾಂಡ, ಅಯೋಧ್ಯಾಕಾಂಡ, ಅರಣ್ಯಕಾಂಡ, ಕಿಷ್ಕಿಂಧಾಕಾಂಡ, ಸುಂದರಕಾಂಡ, ಯುದ್ಧಕಾಂಡ, ಮತ್ತು ಉತ್ತರಕಾಂಡ) ವಿಭಾಗಿಸಿ ರಚಿಸಿದರು.               ಅನಂತರ, ಈ ಕಾವ್ಯವನ್ನು ಯಾರಿಗೆ ಉಪದೇಶಿಸುವುದೆಂದು ಚಿಂತಿಸಿದರು. 
     ಈ ಸಂದರ್ಭದಲ್ಲಿ, ಲೋಕಾಪವಾದದ ಭಯದಿಂದ ಶ್ರೀರಾಮನಿಂದಲೇ ಪರಿತ್ಯಕ್ತಳಾದ ಸೀತಾಮಾತೆಯನ್ನು ವಾಲ್ಮೀಕಿಗಳು ತಮ್ಮ ಆಶ್ರಮದಲ್ಲಿ ಸಲಹುತ್ತಿದ್ದರು ಹಾಗೂ, ಅವಳಿಗೆ ಲವ, ಕುಶರೆಂಬ ಇಬ್ಬರು ಅವಳಿ ಮಕ್ಕಳಾಗಿದ್ದರು. ವಾಲ್ಮೀಕಿಗಳು ಅವರನ್ನು ಬೆಳೆಸಿ ಅವರಿಗೆ ವಿದ್ಯಾಭ್ಯಾಸ ಮಾಡಿಸುತ್ತಿದ್ದರು. ಅವರೇ ತಮ್ಮ ರಾಮಾಯಣ ಕಾವ್ಯದ ಉಪದೇಶ ಪಡೆಯಲು ಸೂಕ್ತ ಎಂದು ಭಾವಿಸಿ ವಾಲ್ಮೀಕಿಗಳು ತಮ್ಮ ರಾಮಾಯಣ ಕಾವ್ಯವನ್ನು ಅವರಿಗೆ ಹಾಡಲು ಕಲಿಸಿದರು. 
    ಅನಂತರ, ಲವ, ಕುಶರು ರಾಮಾಯಣ ಕಾವ್ಯವನ್ನು ವೀಣೆ ನುಡಿಸುತ್ತಾ ಶೃಂಗಾರ, ವೀರ, ಕರುಣ, ಮೊದಲಾದ ರಸಗಳಿಗೆ ತಕ್ಕಂಥ ಮನೋಹರವಾದ ರಾಗಗಳಲ್ಲಿ ಬ್ರಾಹ್ಮಣರ ಮತ್ತು ಮಹರ್ಷಿಗಳ ಸಭೆಗಳಲ್ಲಿ ಹಾಡಿದರು. ಆ ಋಷಿ, ಮುನಿಗಳು ಅವರನ್ನು ಬಹಳ ಪ್ರಶಂಸಿಸಿ ತಮ್ಮಲ್ಲಿದ್ದ ಕಲಶ, ನಾರುಮಡಿ, ಕೃಷ್ಣಾಜಿನ, ಯಜ್ಞೋಪವೀತ, ಕಮಂಡಲು, ಮೌಂಜಿ, ದರ್ಭಾಸನ, ಕೌಪೀನ, ಜಪಮಾಲೆ, ಕಾಷಾಯವಸ್ತ್ರ, ಜಟಾಬಂಧನರಜ್ಜು, ಕಾಷ್ಠಬಂಧನರಜ್ಜು, ಯಜ್ಞಭಾಂಡ, ಸೌದೆ, ಔದುಂಬರೀ, ಮೊದಲಾದ ವಸ್ತುಗಳನ್ನು ಬಹುಮಾನವಾಗಿ ಕೊಟ್ಟರು. ಕೆಲವರು ಅವರಿಗೆ ದೀರ್ಘಾಯುಷ್ಯವೇ ಮೊದಲಾದ ಆಶೀರ್ವಾದ, ವರಗಳನ್ನು ಕೊಟ್ಟರು. ಹೀಗೆ ಲವ,ಕುಶರು ರಾಮಾಯಣವನ್ನು ಸಭೆಗಳಲ್ಲೂ ಬೀದಿಬೀದಿಗಳಲ್ಲೂ ಹಾಡಿ ಪ್ರಚಾರ ಮಾಡಿದರು. ಮುಂದೆ, ಈ ರಾಮಾಯಣವೇ ಕವಿಗಳಿಗೆ ಆಧಾರವಾಯಿತು. ಒಂದು ದಿನ, ಲವ, ಕುಶರು ರಾಮಾಯಣವನ್ನು ರಾಜಬೀದಿಗಳಲ್ಲಿ ಹಾಡುತ್ತಿದ್ದಾಗ ಸ್ವಯಂ ಶ್ರೀರಾಮನೇ ಅವರನ್ನು ಕಂಡು, ಅವರನ್ನು ಅರಮನೆಗೆ ಕರೆಸಿ ಯಥಾಯೋಗ್ಯವಾಗಿ ಉಪಚರಿಸಿದನು. ಈ ಸಮಯದಲ್ಲಿ ರಾಮನು ಅಶ್ವಮೇಧ ಯಾಗ ಮಾಡುತ್ತಿದ್ದನು. ಲವ, ಕುಶರಿಗೆ ಅವನು ಧನವನ್ನು ಅರ್ಪಿಸಲು, ವನವಾಸಿಗಳಾದ ತಮಗೆ ಧನವು ಬೇಡವೆಂದರು. ರಾಮನು ಅವರನ್ನು ಆ ಮಹಾಕಾವ್ಯದ ಬಗ್ಗೆ ವಿಚಾರಿಸಲು, ಅವರು ಅದೆಲ್ಲವನ್ನೂ ಹೇಳಿ ತಮ್ಮ ಗುರುಗಳಾದ ಭೃಗುವಂಶದ ವಾಲ್ಮೀಕಿಗಳು ಅದನ್ನು ರಚಿಸಿರುವರೆಂದೂ ಅವರು ಆ ಯಾಗಶಾಲೆಗೆ ಬಂದಿರುವರೆಂದೂ ಹೇಳಿದರು. ಆಗ ರಾಮನು, ಭರತಾದಿ ಸಹೋದರರಿಗೆ," ಸೋದರರೇ! ಇವರು ಈಗ ಹಾಡಲಿರುವ ಅದ್ಭುತ ಆಖ್ಯಾನವನ್ನು ಆಲಿಸಿ!" ಎಂದು ಹೇಳಿ, ಲವ, ಕುಶರಿಗೆ ಹಾಡಲು ಹೇಳಿದನು. ಅದರಂತೆ ಅವರು ರಾಮಾಯಣ ಕಾವ್ಯವನ್ನು ಶ್ರೀರಾಮನ ಮುಂದೆಯೇ ಹಾಡಿದರು. ಶ್ರೀರಾಮನು ಅವರ ಗಾಯನದಲ್ಲಿ ತಲ್ಲೀನನಾಗಿ ಹೋದನು. ಅಂತೆಯೇ ಅವನ ಸಹೋದರರೂ ಸಭಿಕರೂ ಆನಂದಪರವಶರಾದರು. ಅನಂತರ, ಯಜ್ಞಕರ್ಮದ ಮಧ್ಯೆ ಬಿಡುವಾದಾಗಲೆಲ್ಲಾ ರಾಮಾಯಣ ಗಾನವನ್ಞು ಕೇಳಿದನು. ಲವ, ಕುಶರ ಗಾಯನವನ್ನು ಕೇಳುತ್ತಾ ರಾಮನಿಗೆ ಅವರು ತನ್ನ ಮಕ್ಕಳೇ ಎಂಬುದು ಆರಿವಾಗಿ ವಾಲ್ಮೀಕಿಗಳ ಬಿಡಾರಕ್ಕೆ ದೂತರನ್ನು ಕಳಿಸಿ, ಸೀತೆಯು ಎಲ್ಲರ ಮುಂದೆ ತನ್ನ ಶುದ್ಧ ಚಾರಿತ್ರ್ಯವನ್ನು ಪ್ರಮಾಣೀಕರಿಸಲು ಒಪ್ಪುವಳೇ ಎಂದು ಕೇಳಲು ಹೇಳಿದನು. ಅವರು ಹಾಗೆಯೇ ಮಾಡಲು, ವಾಲ್ಮೀಕಿಗಳು ಹೌದೆಂದು ಹೇಳಿ ಸೀತೆಯೊಡನೆ ಯಾಗಶಾಲೆಗೆ ಬಂದು, ಸೀತೆಯು ಪವಿತ್ರಳೆಂದು ಹೇಳಿದರು. ಆಗ ರಾಮನು ಲೋಕಾಪವಾದಕ್ಕಾಗಿ ತನಗೆ ಗೊತ್ತಿದ್ದರೂ ಸೀತೆಯನ್ನು ಪರಿತ್ಯಜಿಸಿದುದಕ್ಕೆ ಕ್ಷಮೆಯಾಚಿಸಿ, ಸೀತೆಯು ಒಮ್ಮೆ ಹಾಗೆ ಶಪಥ ಮಾಡಲಿ ಎಂದನು. ಬ್ರಹ್ಮಾದಿ ದೇವತೆಗಳೇ ನೆರೆದರು! ಸೀತೆಯು ತನ್ನ ಮನಸ್ಸಿನಲ್ಲಿ ರಾಮನನ್ನು ಬಿಟ್ಟು ಬೇರಾರೂ ಇಲ್ಲವಾದರೆ ತಾನು ಭೂಮಿಯಲ್ಲಿ ಸೇರುವಂತಾಗಲಿ ಎಂದು ಹೇಳಲು, ಭೂಮಿಯು ತೆರೆದುಕೊಂಡು, ಭೂದೇವಿಯು ಒಂದು ಸಿಂಹಾಸನದ ಮೇಲೆ ಬಂದು ಸೀತೆಯನ್ನು ತನ್ನೊಂದಿಗೆ ರಸಾತಲಕ್ಕೆ ಕರೆದೊಯ್ದಳು! ಆಗ ಶ್ರೀರಾಮನು ದುಃಖ ಕೋಪಗಳಿಂದ ವಿಲಪಿಸುತ್ತಾ ಭೂಮಿಯನ್ನು ಸೀತೆಯನ್ನು ಹಿಂದಿರುಗಿಸಲು ಬೇಡುತ್ತಾ ಇಲ್ಲವಾದರೆ ಭೂಮಿಯನ್ನೇ ನಾಶ ಮಾಡುವೆನೆಂದು ಗರ್ಜಿಸಲು, ಬ್ರಹ್ಮನು ಅವನನ್ನು ಸಮಾಧಾನಪಡಿಸಿ ಅವನು ವಿಷ್ಣುವಿನ ಅವತಾರವೆಂದೂ ಅವತಾರ ಸಮಾಪ್ತಿಯಾದ ಬಳಿಕ ಸೀತೆಯನ್ನು ಕೂಡಿಕೊಳ್ಳುವನೆಂದೂ ಸಮಾಧಾನಪಡಿಸಿದನು. 
    ಅನಂತರ, ಶ್ರೀರಾಮನು ಲವ, ಕುಶರಿಂದ ರಾಮಾಯಣದ ಉಳಿದ ಭಾಗದ ಗಾಯನವನ್ನು ಕೇಳಿದನು. 
    ಹೀಗೆ ವಾಲ್ಮೀಕಿಗಳು ರಾಮಾಯಣ ಕಾವ್ಯವನ್ನು ರಚಿಸಿ, ಶ್ರೀರಾಮನ ಮಕ್ಕಳಾದ ಲವ,ಕುಶರಿಂದಲೇ ಅದನ್ನು ಪ್ರಚಾರ ಮಾಡಿಸಿದರು.
    ವಾಲ್ಮೀಕಿ ಮಹರ್ಷಿಗಳು ಮೊದಲು ಹೇಳಿದ ಮಾ ನಿಷಾದ ಶ್ಲೋಕವನ್ನು ಕೆಲವು ವಿದ್ವಾಂಸರು ಚಮತ್ಕಾರದಿಂದ ಬೇರೆ ರೀತಿಯಲ್ಲಿ ಅರ್ಥೈಸುತ್ತಾರೆ. ಮಾ ಎಂದರೆ ಲಕ್ಷ್ಮಿ. ನಿಷಾದ ಎಂದರೆ ಆಶ್ರಯ ನೀಡಿರುವವನು ಎಂದೂ ಆಗುತ್ತದೆ. ಹೀಗೆ ಮಾ ನಿಷಾದ ಎರಡನ್ನೂ ಸೇರಿಸಿ ಮಾನಿಷಾದ ಎಂದು ಒಂದೇ ಪದ ಮಾಡಿದರೆ ಆಗ ಅರ್ಥ ಹೀಗಾಗುತ್ತದೆ -
   ' ಲಕ್ಷ್ಮಿಗೆ ಆಶ್ರಯನಾದ ಹೇ ವಿಷ್ಣುವೇ!  ಕ್ರೌಂಚ ಪಕ್ಷಿಗಳ ಜೋಡಿಯಲ್ಲಿ ( ರಾವಣ, ಮಂಡೋದರಿಯರಲ್ಲಿ), ಕಾಮಮೋಹಿತವಾಗಿದ್ದ ಒಂದನ್ನು ( ಕಾಮಮೋಹಿತನಾಗಿದ್ದ ರಾವಣನನ್ನು) ಕೊಂದೆಯಾದ್ದರಿಂದ ಬಹಳ ಕಾಲ ಪ್ರತಿಷ್ಠೆಯನ್ನು ಹೊಂದು!' 
     ಹೀಗೆ ವಿದ್ವಾಂಸರು ಈ ಶ್ಲೋಕವನ್ನು ಸ್ವಾರಸ್ಯಕರವಾಗಿ ವಿಷ್ಣುಪರವಾಗಿ ಅರ್ಥ ಮಾಡಿ ರಾಮಾಯಣದ ಕಥೆಯೇ ಬರುವಂತೆ ಮಾಡಿದ್ದಾರೆ. 


    
    

ಭಾನುವಾರ, ಅಕ್ಟೋಬರ್ 25, 2026

ಕಾಳಿದಾಸನ ಶೃಂಗಾರತಿಲಕ -೩

ಸಂಸ್ಕೃತ ಮೂಲ 

ಇಂದೀವರೇಣ ನಯನಂ ಮುಖಮಂಬುಜೇನ 
     ಕುಂದೇನ ದಂತಮಧರಂ ನವಪಲ್ಲವೇನ ।
ಅಂಗಾನಿ ಚಂಪಕದಲೈ: ಸ ವಿಧಾಯ ವೇಧಾ: 
     ಕಾಂತೇ ಕಥಂ ಘಟಿತವಾನುಪಲೇನ ಚೇತ: ।।

ಕನ್ನಡ ಅನುವಾದ 

  ನಾಯಕನು ನಾಯಕಿಗೆ ಹೇಳುತ್ತಾನೆ," ಹೇ ಕಾಂತೆ! ಆ ವಿಧಾತನು ನಿನ್ನ ನಯನಗಳನ್ನು ನೈದಿಲೆಗಳಿಂದಲೂ ಮುಖವನ್ನು ಕಮಲ ಪುಷ್ಪದಿಂದಲೂ ಹಲ್ಲುಗಳನ್ನು ಮಲ್ಲಿಗೆಯಿಂದಲೂ ಅಧರವನ್ನು ಹೊಸ ಎಳೆಚಿಗುರಿನಿಂದಲೂ ಇತರ ಅಂಗಗಳನ್ನು ಸಂಪಿಗೆ ದಳಗಳಿಂದಲೂ ಮಾಡಿ ಹೃದಯವನ್ನು (ಮನಸ್ಸನ್ನು ) ಮಾತ್ರ ಏಕೆ ಕಲ್ಲಿನಿಂದ ಮಾಡಿದನೋ?!" 
     ಇಲ್ಲಿ ನಾಯಕನು ನಾಯಕಿಯನ್ನು ಪ್ರೇಮ ಭಿಕ್ಷೆ ಬೇಡಿದ್ದಾನೆ. ಆದರೆ ಅವಳು ಯಾವ ಮನಸ್ಥಿತಿಯಲ್ಲಿದ್ದಳೋ ಏನೋ, ನಿರಾಕರಿಸಿದ್ದಾಳೆ. ಆಗ ನಾಯಕನು ಅವಳು ಏಕೆ ಹೀಗೆ ಕಟುವಾದಳೆಂದು ಹೇಳಲು ಹೀಗೆ ಕಾವ್ಯಾತ್ಮಕವಾಗಿ ಹೇಳುತ್ತಾನೆ. ಹೆಣ್ಣು ಎಂದರೆ ಸಹಜವಾಗಿಯೇ ಬಹಳ ಕೋಮಲ. ಅವಳ ಅಂಗಾಂಗಗಳು ಪುಷ್ಪಗಳಂತೆ ಮೃದು. ಅಂತೆಯೇ ಇಲ್ಲಿ ನಾಯಕನು ಅವಳ ವಿವಿಧ ಅಂಗಗಳನ್ನು ಬ್ರಹ್ಮನು ವಿವಿಧ ಪುಷ್ಪಗಳಿಂದಲೇ ಮಾಡಿದನೆಂದು ಹೇಳುತ್ತಾನೆ. ಅವಳ ಕಣ್ಣುಗಳನ್ನು ನೈದಿಲೆಗಳಿಂದಲೂ ಮುಖವನ್ನು ಕಮಲ ಪುಷ್ಪದಿಂದಲೂ ಹಲ್ಲುಗಳನ್ನು ಮಲ್ಲಿಗೆಯಿಂದಲೂ ಅಧರವನ್ನು ಎಳೆ ಚಿಗುರಿನಿಂದಲೂ ಇನ್ನಿತರ ಅಂಗಗಳನ್ನು ಸಂಪಿಗೆ ದಳಗಳಿಂದಲೂ ಮಾಡಿದ್ದಾನೆಂದು ಹೇಳಿ ಬಣ್ಣಿಸುತ್ತಾನೆ. ಅಂತೆಯೇ ಅವಳ ಹೃದಯವೂ ಕೋಮಲವಾಗಿರಬೇಕಲ್ಲವೇ? ಆದರೆ ಎಲ್ಲಾ ಅಂಗಗಳನ್ನೂ ಪುಷ್ಪಾದಿಗಳಿಂದ ಮಾಡಿ ಹೃದಯವನ್ನು ಮಾತ್ರ ಏಕೆ ಕಲ್ಲಿನಿಂದ ಮಾಡಿದನೋ, ಹಾಗಾಗಿ ಅವಳ ಮೈ ಹೂವಿನಂತೆ ಕೋಮಲವಾಗಿದ್ದರೂ ಅವಳ ಹೃದಯವು ( ಮನಸ್ಸು) ಕಲ್ಲಿನಂತೆ ಗಟ್ಟಿಯಾಗಿದೆಯಲ್ಲ ಎಂದು ತಮಾಷೆ ಮಾಡುತ್ತಾನೆ! 
    ಅಂತೂ ಹುಡುಗರು ಪ್ರೇಮಭಿಕ್ಷೆ ಬೇಡುವುದೂ ಹುಡುಗಿಯರು ನಿರಾಕರಿಸುವುದು ಅಂದಿನಿಂದಲೂ ಇದೆ! ಆಗ ಹುಡುಗರು ಕಾವ್ಯಮಯವಾಗಿ ಹುಡುಗಿಯರನ್ನು ಒಲಿಸಿಕೊಳ್ಳಲು ಇಲ್ಲಿ ನಮ್ಮ ನಾಯಕನು ಮಾದರಿಯಾಗಿದ್ದಾನೆ. 
    ಹುಡುಗನ ಕವಿತೆ ಕೇಳಿ ಆ ಹುಡುಗಿಯು ಕರಗಿರಬಹುದು! 

ಶುಕ್ರವಾರ, ಅಕ್ಟೋಬರ್ 23, 2026

ಸುಂದರೀಶತಕ -೧೦೫

ಸಂಸ್ಕೃತ ಮೂಲ 

ಈಶಸ್ಯಾಪ್ಯುಪಕುರುತೇ ಕ್ವಚಿತ್ಕಲಾವಾನ್ನಿಸರ್ಗಕುಟಿಲೋऽಪಿ ।
ಭ್ರೂರ್ಭವತಿ ಚಂದ್ರಲೇಖಾ ಸುಂದರಿ ಶಂಭೋಸ್ತೃತೀಯದೃಶ: ।।   

ಕನ್ನಡ ಅನುವಾದ 

    ನಾಯಕನು ನಾಯಕಿಗೆ ಹೇಳುತ್ತಾನೆ," ಹೇ ಸುಂದರಿ! ಸ್ವಭಾವತಃ ಕುಟಿಲನಾದರೂ ಕಲಾವಂತನಾದವನು ಈಶ್ವರನಿಗೂ, ಅಂದರೆ ದೊಡ್ಡ ಪ್ರಭುವಿಗೂ, ಉಪಯೋಗಕ್ಕೆ ಬರುತ್ತಾನೆ! ಚಂದ್ರನ ರೇಖೆ ಶಿವನ ಮೂರನೆಯ ಕಣ್ಣಿಗೆ ಹುಬ್ಬಾಗುತ್ತದೆ!" 
    ಇಲ್ಲಿ ನಾಯಕಿಗೆ ಕೋಪ ಬಂದು ತನ್ನ ಹುಬ್ಬುಗಳನ್ನು ಗಂಟಿಕ್ಕಿಕೊಂಡಿದ್ದಾಳೆ! ಆಗ ನಾಯಕನು ಅವಳ ಹುಬ್ಬುಗಳನ್ನು ವಿಷಯವಾಗಿಟ್ಟುಕೊಂಡು ಕೀಟಲೆ ಮಾಡುತ್ತಾನೆ! ಸ್ವಭಾವತಃ ಕುಟಿಲನಾದರೂ ಕಲಾವಂತನಾದವನು ಈಶ್ವರನಿಗೂ ಉಪಯೋಗಕ್ಕೆ ಬರುತ್ತಾನೆ ಎಂದು ಹೇಳುತ್ತಾನೆ. ಕುಟಿಲನೆಂದರೆ ವಕ್ರವೆಂದೂ ಅರ್ಥ ಬರುತ್ತದೆ ಹಾಗೂ ವಕ್ರ ಸ್ವಭಾವದವನೆಂದೂ ಅರ್ಥ ಬರುತ್ತದೆ. ಇಲ್ಲಿ ಒಂದು ಅರ್ಥ ಚಂದ್ರನ ಪರವಾದರೆ, ಇನ್ನೊಂದು ಅರ್ಥ, ನಾಯಕಿಯ ಕೋಪದ ವಕ್ರ ಸ್ವಭಾವದ ಹಾಗೂ ನೋಡಲೂ ವಕ್ರವಿರುವ ಹುಬ್ಬಿನ ಪರವಾಗುತ್ತದೆ. ಹಾಗೆಯೇ ಕಲಾವಂತನೆಂದರೆ ಎರಡು ಅರ್ಥಗಳಿವೆ. ಒಂದು, ಕಲಾವಿದ ಎಂದು. ಇನ್ನೊಂದು, ಹದಿನಾರು ಕಲೆಗಳನ್ನುಳ್ಳ ಚಂದ್ರ ಎಂದು. ಚಂದ್ರನು ವಕ್ರವಾಗಿರುವುದರಿಂದ, ಸ್ವಭಾವತಃ ಕುಟಿಲನು! ಆದರೂ ಕಲಾವಂತನು! ಇಂಥವನು, ಅಂದರೆ ಅರ್ಧಚಂದ್ರನು ಈಶ್ವರನ ತಲೆಯಲ್ಲಿದ್ದು, ಅವನ ಹಣೆಯ ಮೇಲಿನ ಮೂರನೆಯ ಕಣ್ಣಿಗೆ ಹುಬ್ಬಿನಂತೆ ಶೋಭೆ ನೀಡುತ್ತಾನೆ! ಇದನ್ನು ನಾಯಕನು ನಾಯಕಿಗೆ ಹೇಳುತ್ತಾ ಅವಳು ಕೋಪಿಸಿಕೊಂಡು ತನ್ನ ಹುಬ್ಬುಗಳನ್ನು ಗಂಟಿಕ್ಕಿಕೊಂಡಿದ್ದರೂ ಅಂಥ ಹುಬ್ಬುಗಳಿಂದಲೂ ಉಪಯೋಗವಿದೆ ಎಂದು ಕೀಟಲೆ ಮಾಡುತ್ತಿದ್ದಾನೆ! 
   ಇಲ್ಲಿ ಮೊದಲನೆಯ ಸಾಲಿನಲ್ಲಿ ಕವಿಯು ಸಾಮಾನ್ಯ ವಿಷಯವನ್ನು ಹೇಳಿ, ಎರಡನೆಯ ಸಾಲಿನಲ್ಲಿ ಅದನ್ನು ಪೌರಾಣಿಕ ಉದಾಹರಣೆಯಿಂದ ಸಮರ್ಥಿಸುತ್ತಾನೆ. ಹಾಗಾಗಿ ಇಲ್ಲಿ ಅರ್ಥಾಂತರನ್ಯಾಸ ಅಲಂಕಾರವಿದೆ. ಇದರೊಂದಿಗೆ, ಕುಟಿಲ ಹಾಗೂ ಕಲಾವಂತ ಪದಗಳಿಗೆ ಎರಡೆರಡು ಅರ್ಥಗಳು ಬರುವುದರಿಂದ ಶ್ಲೇಷಾಲಂಕಾರವೂ ಇದೆ.
   

ಮಂಗಳವಾರ, ಅಕ್ಟೋಬರ್ 20, 2026

ಸುಂದರೀಶತಕ -೧೦೪

ಸಂಸ್ಕೃತ ಮೂಲ 

ಆಶ್ಲಿಶ್ಯ ಜಿಘ್ರ ಪಿಬ ಮಧು ಮಧುಕರ ತೋಷೋದಯಾಯ ಮಾಲತ್ಯಾ: ।
ನಿರ್ದಯ ಸುಗಂಧಿವಲ್ಲೀರೇತಾಶ್ಚರಣೈ: ಕಿಮಾಕ್ಷಿಪಸಿ ।।

ಕನ್ನಡ ಅನುವಾದ 

     " ಎಲೈ ದುಂಬಿಯೇ! ಈ ಮಾಲತೀ ಲತೆಗೆ ಸಂತೋಷವುಂಟುಮಾಡಲು ಅವಳನ್ನು ಆಲಂಗಿಸು! ಆಘ್ರಾಣಿಸು! ಮಧುವನ್ನು ಹೀರು! ಆದರೆ ಎಲೈ ನಿರ್ದಯನೇ! ಈ ಸುಗಂಧಲತೆಗಳನ್ನೇಕೆ ನಿನ್ನ ಕಾಲುಗಳಡಿಯಲ್ಲಿ ತುಳಿಯುತ್ತಿರುವೆ?" 
   ಕವಿಯು ಇಲ್ಲಿ ಮತ್ತೊಂದು ಸುಂದರ ಅನ್ಯೋಕ್ತಿಯಿಂದ ಒಂದು ಶೃಂಗಾರ ಸನ್ನಿವೇಶವನ್ನು ವ್ಯಕ್ತಪಡಿಸುತ್ತಿದ್ದಾನೆ. ಕವಿಯೇ ದುಂಬಿಗೆ ಮಾಲತೀ ಲತೆಯನ್ನು ಸಂತೋಷಪಡಿಸಲು ಅವಳನ್ನು ಆಲಂಗಿಸಿ, ಆಘ್ರಾಣಿಸಿ, ಅವಳ ಮಧುವನ್ನು ಹೀರು ಎನ್ನುತ್ತಿದ್ದಾನೆ. ಆದರೆ ಹೀಗೆ ಮಾಡುವ ಬದಲು, ನಿರ್ದಯವಾಗಿ ಇತರ ಸುಗಂಧಲತೆಗಳನ್ನು ತುಳಿದು ಹಾಳುಮಾಡಬೇಡ ಎಂದೂ ಹೇಳುತ್ತಿದ್ದಾನೆ. ಇದನ್ನೇ ನಾಯಕನ ವಿಷಯದಲ್ಲಿ ಅನ್ವಯಿಸಿದರೆ, ನಾಯಕನು ಒಬ್ಬ ಹೆಣ್ಣನ್ನು ಮನಸಾರೆ ಪ್ರೇಮಿಸಬೇಕು, ಆದರೆ ಇತರ ಅನೇಕ ಹೆಣ್ಣುಗಳೊಂದಿಗೆ ಕಪಟಪ್ರೇಮದ ನಾಟಕವಾಡಿ ಅನಂತರ ಅವರನ್ನು ಬಿಟ್ಟು ಹೋಗಿ ಮೋಸ ಮಾಡಬಾರದೆಂದೂ ಅರ್ಥ ಬರುತ್ತದೆ. ಒಬ್ಬ ಹೆಣ್ಣನ್ನು  ನಿಜವಾಗಿ ಪ್ರೀತಿಸಿ ಅವಳೊಂದಿಗೆ ಚೆನ್ನಾಗಿ ಕಾಮಪೂರೈಕೆ ಮಾಡಿಕೊಂಡರೆ ತಪ್ಪಿಲ್ಲ. ಆದರೆ ಅನೇಕ ಹೆಣ್ಣುಗಳೊಂದಿಗೆ ತಿರುಗಾಡಿ ಯಾರನ್ನೂ ನಿಜವಾಗಿ ಪ್ರೀತಿಸದೆ ಮೋಸಮಾಡಬಾರದೆಂದು ಕವಿಯ ಅಭಿಪ್ರಾಯ.

ಸೋಮವಾರ, ಅಕ್ಟೋಬರ್ 19, 2026

ಸುಂದರೀಶತಕ -೧೦೩

ಸಂಸ್ಕೃತ ಮೂಲ 

ಸ್ಥಾಸ್ಯತಿ ಕುವಲಯಕಲಿಕಾ ಕರ್ಣೇ ತವ ತಾವದೇವ ಕಮಲಾಕ್ಷಿ ।
ವಿಕಸತಿ ನ ಯಾವದೇಷಾ ಚಂದ್ರಕರಸ್ಪರ್ಶದುರ್ಲಲಿತಾ ।।

ಕನ್ನಡ ಅನುವಾದ 

    ನಾಯಕನು ನಾಯಕಿಗೆ ಹೇಳುತ್ತಾನೆ," ಎಲೈ ಕಮಲಾಕ್ಷಿ! ನಿನ್ನ ಕಿವಿಯ ಮೇಲಿರುವ ಈ ನೈದಿಲೆಯ ಮೊಗ್ಗು, ಚಂದ್ರಕಿರಣಗಳ ಸ್ಪರ್ಶದಿಂದ ಚಂಚಲಗೊಂಡು ಎಲ್ಲಿಯವರೆಗೆ ಅರಳುವುದಿಲ್ಲವೋ ಅಲ್ಲಿಯವರೆಗಷ್ಟೇ ಅಲ್ಲಿರುತ್ತದೆ!" 
      ನೈದಿಲೆಯು ಚಂದ್ರೋದಯವಾದಾಗ ಅರಳುತ್ತದೆ. ಹಿಂದೆ, ತರುಣಿಯರು ಈ ನೈದಿಲೆ ಮೊಗ್ಗುಗಳನ್ನು ಕಿವಿಯ ಮೇಲೆ ಆಭೂಷಣವಾಗಿ ಧರಿಸುತ್ತಿದ್ದರು. ಇಲ್ಲಿ ನಾಯಕಿಯು ಹಾಗೆಯೇ ನೈದಿಲೆ ಮೊಗ್ಗೊಂದನ್ನು ತನ್ನ ಕಿವಿಯ ಮೇಲೆ ಆಭೂಷಣವಾಗಿ ಧರಿಸಿರಲು, ನಾಯಕನು ಅವಳಿಗೆ, ಚಂದ್ರಕಿರಣಗಳ ಸ್ಪರ್ಶವಾದ ಕೂಡಲೇ ಅದು ಚಂಚಲವಾಗಿ ಅರಳಿ ಭಾರವಾಗಿ ಕೆಳಗೆ ಬೀಳುತ್ತದೆಯೆಂದೂ ಅಲ್ಲಿಯವರೆಗೆ ಮಾತ್ರ ಅವಳ ಕಿವಿಯ ಮೇಲಿರುತ್ತದೆ ಎಂದೂ ಹೇಳುತ್ತಿದ್ದಾನೆ. ಆಂತರ್ಯದಲ್ಲಿ ಅವನು ಇನ್ನೇನು ರಾತ್ರಿಯಾಗುತ್ತಿದ್ದಂತೆ ಆ ನೈದಿಲೆಯು ಅರಳಿ ಬೀಳುತ್ತದೆಯೆಂದೂ ತಾವಿಬ್ಬರೂ ರಹಸ್ಯ ಸಂಕೇತ ಸ್ಥಳದಲ್ಲಿ ಸೇರಿ ಪ್ರಣಯಕೇಳಿಯಾಡಬೇಕೆಂದೂ ಸೂಚಿಸುತ್ತಿದ್ದಾನೆ! ಅಂತೆಯೇ, ಅವಳ ಮುಖವೇ ಚಂದ್ರನಂತಿರುವುದರಿಂದ, ಅವಳು ತನ್ನ ಮುಖಚಂದ್ರವನ್ನು ಕಿವಿಯ ಕಡೆ ತಿರುಗಿಸಿದರೆ, ನೈದಿಲೆ ಮೊಗ್ಗು ಅವಳ ಮುಖಚಂದ್ರದಿಂದಲೇ ಅರಳಿಬಿಡುತ್ತದೆ ಎಂದೂ ಹೇಳುತ್ತಿರುವಂತಿದೆ! ಹೀಗೆ ಇಲ್ಲಿನ ನಾಯಕನ ಮಾತಿನಲ್ಲಿ ವಿವಿಧ ಧ್ವನಿಗಳನ್ನು ನೋಡಬಹುದು. 

ಶುಕ್ರವಾರ, ಅಕ್ಟೋಬರ್ 16, 2026

ಕಾಳಿದಾಸನ ಶೃಂಗಾರತಿಲಕ -೨

ಸಂಸ್ಕೃತ ಮೂಲ 

ಆಯಾತಾ ಮಧುಯಾಮಿನೀ ಯದಿ ಪುನರ್ನಾಯಾತಿ ಏವ ಪ್ರಭು:
 ಪ್ರಾಣಾ: ಯಾಂತು ವಿಭಾವಸೌ ಯದಿ ಪುನರ್ಜನ್ಮಗ್ರಹಂ ಪ್ರಾರ್ಥಯೇ ।
ವ್ಯಾಧ: ಕೋಕಿಲಬಂಧನೇ ವಿಧುಪುರಿಧ್ವಂಸೇ ರಾಹುಗ್ರಹ: 
ಕಂದರ್ಪೇ ಹರನಯನದೀಧಿತಿರಿಯಂ ಪ್ರಾಣೇಶ್ವರೇ ಮನ್ಮಥ: ।।

ಕನ್ನಡ ಅನುವಾದ 

    "ಮಧುಮಾಸದ ರಾತ್ರಿಯು ಬಂದಿದೆ! ನನ್ನ ಪ್ರಭು ಈಗಲೂ ಬರದಿದ್ದರೆ ನನ್ನ ಪ್ರಾಣಗಳು ಅಗ್ನಿಯಲ್ಲಿ ದಗ್ಧವಾಗಿಹೋಗಲಿ! ಒಂದು ವೇಳೆ ಪುನರ್ಜನ್ಮ ಪ್ರಾಪ್ತವಾದರೆ ನಾನೊಬ್ಬ ವ್ಯಾಧನಾಗುವಂತೆ ಪ್ರಾರ್ಥಿಸುತ್ತೇನೆ! ಆಗ ನಾನು ಕೋಗಿಲೆಯನ್ನು ಬಂಧನದಲ್ಲಿರಿಸಬಹುದು! ಅಥವಾ ರಾಹುಗ್ರಹವಾಗುವಂತೆ ಪ್ರಾರ್ಥಿಸುತ್ತೇನೆ! ಆಗ ಚಂದ್ರಮಂಡಲವನ್ನು ನಾಶಮಾಡಬಹುದು! ಇಲ್ಲವೇ ಹರನ ಮೂರನೆಯ ಕಣ್ಣಿನ ಅಗ್ನಿಯಾಗುವಂತೆ ಪ್ರಾರ್ಥಿಸುತ್ತೇನೆ! ಆಗ ಕಂದರ್ಪನನ್ನು ಭಸ್ಮ ಮಾಡಬಹುದು! ಅಥವಾ ನಾನು ಮನ್ಮಥನಾಗುವಂತೆ ಪ್ರಾರ್ಥಿಸುತ್ತೇನೆ! ಆಗ ನನ್ನ ಪ್ರಾಣೇಶ್ವರನನ್ನು ಉದ್ವಿಗ್ನಗೊಳಿಸಬಹುದು!" 
     ಇಲ್ಲಿ ನಾಯಕನು ಕಾರಣಾಂತರಗಳಿಂದ ಎಲ್ಲೋ ಪ್ರವಾಸಕ್ಕೆ ಹೋಗಿ ಬಹಳ ಕಾಲವಾದರೂ ಬಂದಿಲ್ಲ. ಈಗ ಮಧುಮಾಸ ಅಥವಾ ವಸಂತಕಾಲ ಬಂದಿದೆ. ಆ ಮಧುಮಾಸದ ಸುಂದರವಾದ ರಾತ್ರಿಯೂ ಬಂದಿದೆ. ತನ್ನ ಪ್ರಿಯತಮನ ವಿರಹದಲ್ಲಿರುವ ನಾಯಕಿ, ಈಗಲೂ ಪ್ರಿಯತಮನು ಬರದಿದ್ದರೆ ತನ್ನ ಪ್ರಾಣಗಳು ಅಗ್ನಿಯಲ್ಲಿ ದಗ್ಧವಾಗಿಹೋಗಲಿ ಎನ್ನುತ್ತಿದ್ದಾಳೆ! ಒಂದು ವೇಳೆ, ಪುನರ್ಜನ್ಮ ಪ್ರಾಪ್ತವಾದರೆ, ಅವಳು ಒಬ್ಬ ವ್ಯಾಧನಾಗುವಂತೆ ಪ್ರಾರ್ಥಿಸುತ್ತಿದ್ದಾಳೆ. ಏಕೆಂದರೆ, ಹಾಡುವುದರಿಂದ ವಿರಹವೇದನೆ ಹೆಚ್ಚಿಸುವ ಕೋಗಿಲೆಯನ್ನು ಹಿಡಿದು ಬಂಧಿಸಬಹುದೆಂದು! ಅಥವಾ ರಾಹುಗ್ರಹವಾಗಬೇಕೆಂದು ಬಯಸುತ್ತಾಳೆ! ಇದರಿಂದ ವಿರಹವೇದನೆ ಹೆಚ್ಚಿಸುವ ಸುಂದರವಾದ ಚಂದ್ರನನ್ನು ಗ್ರಹಣದಿಂದ ನುಂಗಿ ನಾಶಮಾಡಲೆಂದು! ಇಲ್ಲವೇ ಶಿವನ ಮೂರನೆಯ ಕಣ್ಣಿನ ಅಗ್ನಿಯಾಗಲೆಂದು ಆಶಿಸುತ್ತಾಳೆ. ಆಗ ಹೂಬಾಣಗಳನ್ನು ಬಿಟ್ಟು ಕಾಮವೇದನೆಯನ್ನು ಹೆಚ್ಚಿಸುವ ಮನ್ಮಥನನ್ನು ಸುಟ್ಟುಹಾಕಲೆಂದು! ಕೊನೆಗೆ ಮನ್ಮಥನೇ ಆಗಬೇಕೆಂದು ಬಯಸುತ್ತಾಳೆ. ಆಗ, ತನ್ನ ಪ್ರಾಣೇಶ್ವರನು ಹೇಗೆ ತನ್ನಿಂದ ದೂರಾಗಿ ಮನ್ಮಥನ ಮೂಲಕ ತನಗೆ ಕಾಮಬಾಧೆ ಹೆಚ್ಚಿಸುತ್ತಿರುವನೋ ಹಾಗೆಯೇ ತಾನೇ ಮನ್ಮಥನಾಗಿ ಆ ಕಾಮಬಾಧೆಯ ಪರಿಚಯ ಅವನಿಗೆ ಮಾಡಿಸಲೆಂದು! ಹೀಗೆ ತನಗೆ ವಿರಹವೇದನೆ ಹಚ್ಚಿಸುತ್ತಿರುವ ಈ ನಾಲ್ವರ ಮೇಲೂ ಪುನರ್ಜನ್ಮದಲ್ಲಿ ಸೇಡು ತೀರಿಸಿಕೊಳ್ಳಲು ಅವಳು ಆಶಿಸುತ್ತಿದ್ದಾಳೆ!
      ಸಂಸ್ಕೃತ ಕವಿಗಳ ಸ್ವಾರಸ್ಯವೆಂದರೆ, ಪ್ರಕೃತಿಯ ಮತ್ತು ಪೌರಾಣಿಕ ವಿದ್ಯಮಾನಗಳನ್ನು ಪದ್ಯಗಳಲ್ಲಿ ಬಳಸಿಕೊಂಡು ಪದ್ಯದ ಮೆರುಗು ಹೆಚ್ಚಿಸುವುದು. 
    ಇಲ್ಲಿ ಅಸಂಭವವಾದ ವಿಚಾರಗಳನ್ನು ಸಂಭವನೀಯವೆಂಬಂತೆ ಹೇಳಿರುವುದರಿಂದ ಅತಿಶಯೋಕ್ತಿ ಅಲಂಕಾರವಿದೆ.

ಸುಂದರೀಶತಕ -೧೦೨

ಸಂಸ್ಕೃತ ಮೂಲ 

ಕಿಂ ಕೃತಮನೇನ ಮರುತಾ ಮಾಧವಿಕಾಕುಸುಮಸೌರಭಂ ವಹತಾ ।
ಆಶ್ಲಿಷ್ಟಭ್ರಮರೀಕೋऽಪ್ಯೌತ್ಕಂಠ್ಯಂ ಮಧುಕರೋ ನೀತ: ।।

ಕನ್ನಡ ಅನುವಾದ 

   " ಆಹಾ! ಮಾಧವಿಕಾಲತೆಯ ಕುಸುಮಗಳ ಸೌರಭವನ್ನು ಹೊತ್ತು ತಂದ ಈ ಮಂದಮಾರುತವು ಏನು ಮಾಡಿತು?! ಭ್ರಮರಿಯನ್ನು ಆಲಿಂಗಿಸಿದ್ದ ಭ್ರಮರವನ್ನೂ ಉತ್ಕಂಠವಾಗಿಸಿತು!" 
   ಮತ್ತೊಂದು ಸುಂದರ ಅನ್ಯೋಕ್ತಿಯಿಂದ ಶೃಂಗಾರರಸವನ್ನು ಹರಿಸಿದ್ದಾನೆ ಕವಿ! ಇಲ್ಲಿ ಭ್ರಮರವು ಭ್ರಮರಿಯನ್ನು ಈಗಾಗಲೇ ಆಲಿಂಗಿಸಿದೆ! ಆದರೆ ಮಾಧವಿಕಾಲತೆಯ ಹೂಗಳ ಸೌರಭವನ್ನು ಹೊತ್ತು ತಂದ ಮಂದಮಾರುತವು ಆ ಭ್ರಮರವನ್ನೂ ಉತ್ಕಂಠವಾಗಿಸಿದೆ! ಅಂದರೆ ನಾಯಕನು ನಾಯಕಿಯನ್ನು ಈಗಾಗಲೇ ಆಲಿಂಗಿಸಿದ್ದಾನೆ. ಆದರೆ ಮಾಧವಿಕಾ ಲತೆಯ ಪುಷ್ಪಗಳ ಸುಗಂಧವನ್ನು ಹೊತ್ತು ತಂದ ಮಂದಮಾರುತದಿಂದ ಅವನ ಕಾಮ ಇನ್ನಷ್ಟು ಹೆಚ್ಚಿ ಅವನು ಉತ್ಕಂಠಿತನಾಗಿದ್ದಾನೆ! 
    ಭರತನು ತನ್ನ ನಾಟ್ಯಶಾಸ್ತ್ರದಲ್ಲಿ,' 'ವಿಭಾವಾನುಭಾವವ್ಯಭಿಚಾರಸಂಯೋಗಾತ್ ರಸನಿಷ್ಪತ್ತಿ:' ಎಂದು ಹೇಳಿದ್ದಾನೆ. ಅಂದರೆ, ವಿಭಾವ, ಅನುಭಾವ, ಮತ್ತು ವ್ಯಭಿಚಾರಿ ಭಾವ ಅಥವಾ ಸಂಚಾರಿಭಾವಗಳ ಸಂಯೋಗದಿಂದ ರಸವುಂಟಾಗುತ್ತದೆ ಎಂದು ಅರ್ಥ. ವಿಭಾವ ಎಂದರೆ ರಸಕ್ಕೆ ಮೂಲ ಕಾರಣ. ಇದರಲ್ಲಿ ಆಲಂಬನ ವಿಭಾವ ಮತ್ತು ಉದ್ದೀಪನ ವಿಭಾವ ಎಂದು ಎರಡು ಬಗೆಗಳಿವೆ. ಆಲಂಬನ ವಿಭಾವ, ಮುಖ್ಯ ಕಾರಣ ಅಥವಾ ಆಧಾರ. ಇಲ್ಲಿನ ಶೃಂಗಾರ ರಸದಲ್ಲಿ ನಾಯಕ, ನಾಯಕಿಯರೇ ಆಲಂಬನ ವಿಭಾವದ ಅಂಗಗಳು. ಉದ್ದೀಪನ ವಿಭಾವವೆಂದರೆ ಪ್ರೇಮವನ್ನು ಪ್ರಚೋದಿಸುವ ಅಂಶಗಳು. ಅಂದರೆ ಇಲ್ಲಿ, ಮಾಧವಿಕಾ ಲತೆಯ ಪುಷ್ಪಗಳ ಸುಗಂಧವನ್ನು ಹೊತ್ತು ತರುವ ಮಂದಮಾರುತ. ಅನುಭಾವವೆಂದರೆ ಬಾಹ್ಯ ಅಭಿವ್ಯಕ್ತಿ. ಇಲ್ಲಿ ನಾಯಕ, ನಾಯಕಿಯರ ಆಲಿಂಗನ. ವ್ಯಭಿಚಾರಿ ಅಥವಾ ಸಂಚಾರಿಭಾವವೆಂದರೆ, ಬಂದು ಹೋಗುವ ಭಾವಗಳು. ವ್ಯಭಿಚಾರಿ ಭಾವ ಎಂದರೆ ಬದಲಾವಣೆ ಎಂದಷ್ಟೇ ಅರ್ಥ. ಇಲ್ಲಿ ವ್ಯಭಿಚಾರಿ ಭಾವ, ನಾಯಕನ ಉತ್ಕಂಠತೆ. ಹೀಗೆ ಈ ಪದ್ಯದಲ್ಲಿ ಶೃಂಗಾರ ರಸದ ಸೊಗಸಾದ ನಿರೂಪಣೆಯಿದೆ. 

ಸುಂದರೀಶತಕ -೧೦೧

ಸಂಸ್ಕೃತ ಮೂಲ 

ಮಧುಕರ ತವೈವ ಧನ್ಯಂ ಜನುರಭಿತೋ ವನ್ಯಮನ್ಯದುತ್ಸೃಜತ: ।
ಯಸ್ಯ ಪ್ರೇಮಾಬಂಧೋ ಮಾಲತ್ಯಾಂ ಯತ್ರ ತಸ್ಯಾಶ್ಚ ।।

ಕನ್ನಡ ಅನುವಾದ 

   " ಎಲೈ ದುಂಬಿಯೇ! ನಿನ್ನ ಜನ್ಮವೇ ಧನ್ಯ! ಸುತ್ತಮುತ್ತಲಿನ ಇತರ ಪುಷ್ಪಗಳನ್ನೆಲ್ಲಾ ಬಿಟ್ಟು ಮಾಲತೀ ಪುಷ್ಪದಲ್ಲೇ ಪ್ರೇಮಾನುಬಂಧದಲ್ಲಿರುವೆ! ಅಂತೆಯೇ ಮಾಲತೀ ಪುಷ್ಪದ ಪ್ರೇಮವೂ ನಿನ್ನಲ್ಲೇ ಇದೆ!" 
   ಕವಿಯು ವಿವಿಧ ಅನ್ಯೋಕ್ತಿಗಳಿಂದ ಪ್ರೇಮಿಗಳನ್ನು ವರ್ಣಿಸುತ್ತಿದ್ದಾನೆ. ಇಲ್ಲಿ ದುಂಬಿಯು ಎಲ್ಲಾ ಪುಷ್ಪಗಳನ್ನೂ ಬಿಟ್ಟು ಮಾಲತೀ ಪುಷ್ಪದಲ್ಲೇ ಅನುರಕ್ತವಾಗಿದೆ ಹಾಗೂ ಮಾಲತೀ ಪುಷ್ಪವೂ ಅದರಲ್ಲೇ ಅನುರಕ್ತವಾಗಿದೆ ಎಂದು ಹೇಳುತ್ತಿದ್ದಾನೆ.‌ ಕವಿಯು ಏನು ಸೂಚಿಸುತ್ತಿದ್ದಾನೆ ಎಂದು ಸುಲಭವಾಗಿ ತಿಳಿಯುತ್ತದೆ. ಯೋಗ್ಯ ಪ್ರೇಮಿಯೊಬ್ಬನು ಎಲ್ಲಾ ಸುಂದರ ಹೆಣ್ಣುಗಳನ್ನೂ ಬಿಟ್ಟು ಒಬ್ಬ ಹೆಣ್ಣಿನಲ್ಲೇ ಅನುರಕ್ತನಾಗಿದ್ದಾನೆ ಹಾಗೂ ಆ ಹೆಣ್ಣೂ ಅವನಲ್ಲೇ ಅನುರಕ್ತಳಾಗಿದ್ದಾಳೆ ಎಂದು ಇದರ ಸೂಚನೆ. ದುಂಬಿಯು ನಾಯಕನನ್ನೂ ಮಾಲತಿ ಪುಷ್ಪವು ನಾಯಕಿಯನ್ನೂ ಸೂಚಿಸುತ್ತದೆ. ಇಂಥ ದುಂಬಿ ಅಥವಾ ನಾಯಕನ ಜನ್ಮವೇ ಧನ್ಯವೆಂದು ಕವಿಯು ಹೇಳುತ್ತಿದ್ದಾನೆ. 

ಶನಿವಾರ, ಅಕ್ಟೋಬರ್ 10, 2026

ಕಾಳಿದಾಸನ ಶೃಂಗಾರತಿಲಕ -೧

ಸಂಸ್ಕೃತ ಮೂಲ 

ಬಾಹೂ ದ್ವೌ ಚ ಮೃಣಾಲಮಾಸ್ಯಕಮಲಂ ಲಾವಣ್ಯಲೀಲಾಜಲಂ
    ಶ್ರೋಣೀ ತೀರ್ಥಶಿಲಾ ಚ ನೇತ್ರಸಫರೀ ಧಮ್ಮಿಲ್ಲಶೈವಾಲಕಮ್ ।
ಕಾಂತಾಯಾ: ಸ್ತನಚಕ್ರವಾಕಯುಗಲಂ ಕಂದರ್ಪಬಾಣಾನಲೈ 
   ರ್ಧಗ್ಧಾನಾಮವಗಾಹನಾಯ ವಿಧಿನಾ ರಮ್ಯಂ ಸರೋ ನಿರ್ಮಿತಮ್ ।।

ಕನ್ನಡ ಅನುವಾದ 

     ' ಈ ಕಾಂತೆಯ ಬಾಹುಗಳೆರಡೂ ಕಮಲದಂಟುಗಳು! ಇವಳ ಮುಖವು ಕಮಲಪುಷ್ಪ! ಇವಳ ಲಾವಣ್ಯವು ಲೀಲಾಜಲ! ಇವಳ ನಿತಂಬಗಳು ಸರೋವರದ ಮೆಟ್ಟಿಲುಗಳು! ಇವಳ ಕಂಗಳು ಸಫರೀ ಮೀನುಗಳು! ಇವಳ ಕೇಶರಾಶಿ, ಶೈವಾಲ! ಇವಳ ಸ್ತನಯುಗ್ಮವು ಚಕ್ರವಾಕ ಪಕ್ಷಿಜೋಡಿ! ಆಹಾ! ಕಂದರ್ಪನ ಬಾಣಗಳ ಬೆಂಕಿಯಿಂದ ದಗ್ಧರಾದ ನವಯುವಕರು ಮೀಯಲು ವಿಧಿಯು ನಿರ್ಮಿಸಿರುವ ರಮ್ಯ ಸರೋವರ ಇವಳು!' 
       ಶೃಂಗಾರತಿಲಕವೆಂಬ ಸಂಸ್ಕೃತದ ಶೃಂಗಾರ ಪದ್ಯಗಳ ಒಂದು ಪುಟ್ಟ ಗುಚ್ಛ, ಕಾಳಿದಾಸನ ರಚನೆಯೆಂದು ಹೇಳುತ್ತಾರೆ. ಆದರೆ ಈ ವಿಷಯದಲ್ಲಿ ಒಮ್ಮತವಿಲ್ಲ. ಕೆಲವು ವಿದ್ವಾಂಸರು, ಇದು ಕಾಳಿದಾಸನ ಹೆಸರಿನಲ್ಲಿ ಬೇರಾರೋ ರಚಿಸಿರುವ ಕಾವ್ಯ ಎಂದು ಅಭಿಪ್ರಾಯಪಡುತ್ತಾರೆ. ಅದು ಹೇಗೇ ಇದ್ದರೂ ಪದ್ಯಗಳು ಸೊಗಸಾಗಿರುವುದರಿಂದ ಆಸ್ವಾದಿಸುವುದಕ್ಕೇನೂ ತೊಂದರೆಯಿಲ್ಲ. 
    ಇಲ್ಲಿ ಕವಿಯು ಹೆಣ್ಣನ್ನು ಒಂದು ಸುಂದರ, ರಮ್ಯ ಸರೋವರಕ್ಕೆ ಹೋಲಿಸಿದ್ದಾನೆ. ಅವಳ ಬಾಹುಗಳೆರಡೂ ಕಮಲದ ದಂಟುಗಳಂತೆ ತೆಳ್ಳಗೆ ಕೋಮಲವಾಗಿವೆ! ಅವಳ ಮುಖ ಕಮಲದಂತೆ ಇದೆ! ಅವಳ ಲಾವಣ್ಯ ಅಥವಾ ಸೌಂದರ್ಯ ಲೀಲೆಯಿಂದ ಹರಿಯುವ ಜಲದಂತಿದೆ! ಅವಳ ನಿತಂಬಗಳು ಆ ಸರೋವರದ ಮೆಟ್ಟಿಲುಗಳಂತೆ ದುಂಡಾಗಿ ನುಣ್ಣನೆ ಹೊಳೆಯುತ್ತಿವೆ! ಅವಳ ಕಂಗಳು ಸಫರೀ ಮೀನುಗಳಂತೆ ಚಂಚಲವಾಗಿ ಚಲಿಸುತ್ತಾ ಕಂಗೊಳಿಸುತ್ತಿವೆ! ಅವಳ ಕೇಶರಾಶಿ, ಕೆರೆಯಲ್ಲಿ ಬೆಳೆದಿರುವ ಹಸಿರು ಶೈವಾಲದಂತೆ ಸೊಂಪಾಗಿದೆ! ಅವಳ ಸ್ತನಯುಗ್ಮವು ಸದಾ ಜೊತೆಜೊತೆಯಾಗಿಯೇ ಈಜುವ ದುಂಡಾದ ಚಕ್ರವಾಕ ಪಕ್ಷಿಜೋಡಿಯಂತಿದೆ! ಹೀಗೆ ಅವಳ ಎಲ್ಲಾ ಅಂಗಾಂಗಗಳೂ ಸರೋವರದ ವಿವಿಧ ಅಂಶಗಳನ್ನು ಹೋಲುತ್ತವೆ! ಅವಳ ಅಗಾಂಗಗಳು ಸರೋವರದ ಅಂಶಗಳೇ ಆಗಿವೆ ಮತ್ತು ಅವಳೇ ಆ ರಮ್ಯ ಸರೋವರ ಎನ್ನುವ ಮೂಲಕ ಇಲ್ಲಿ ರೂಪಕಾಲಂಕಾರ ಇದೆ. ಇಂಥ ರಮ್ಯ ಸರೋವರವನ್ನು ವಿಧಿ ಅಥವಾ ಬ್ರಹ್ಮ ಏಕೆ ನಿರ್ಮಿಸಿದ? ಕಂದರ್ಪ ಅಥವಾ ಮನ್ಮಥನ ಬಾಣಗಳ ಬೆಂಕಿಯಿಂದ ದಗ್ಧರಾದ ನವಯುವಕರು ಈ ರಮ್ಯ ಸರೋವರದಲ್ಲಿ ಮಿಂದು, ಅಂದರೆ ಅವಳೊಡನೆ ರಮಿಸಿ, ಆ ಕಾಮಾಗ್ನಿಯನ್ನು ಆರಿಸಿಕೊಂಡು ತಂಪಾಗಲೆಂದು! ಇಲ್ಲಿ ಕಾಮಬಾಣಗಳ ಪ್ರಭಾವವನ್ನು ಅಗ್ನಿಗೆ ಹೋಲಿಸಿರುವುದೂ ಅದನ್ನು ಆರಿಸಿಕೊಳ್ಳಲು ಹೆಣ್ಣೆಂಬ ಸರೋವರದಲ್ಲಿ ಮೀಯುವ ಕಲ್ಪನೆಯೂ ಬಹಳ ಸೊಗಸಾಗಿದೆ! ಹೀಗೆ ಹೆಣ್ಣು, ವಿಧಿ ಅಥವಾ ಬ್ರಹ್ಮನು ಪುರುಷನಿಗಾಗಿ ನೀಡಿರುವ ಒಂದು ಅತ್ಯಂತ ಮನೋಹರವಾದ, ಅಪೂರ್ವ ಕಾಣಿಕೆ! 
    

ಗುರುವಾರ, ಅಕ್ಟೋಬರ್ 8, 2026

ಸುಂದರೀಶತಕ -೧೦೦

ಸಂಸ್ಕೃತ ಮೂಲ 

ತ್ವಮಧಿಕಗುಣಾಸಿ ಮಾಲತಿ ಮಲ್ಲೀಲವಲೀಲವಂಗಲತಿಕಾಭ್ಯ: ।
ಸಕಲಲತಿಕಾನುಸಾರೀ ಯಯಾ ನಿಬದ್ಧ: ಷಡಂಘ್ರಿರಪಿ ।।

ಕನ್ನಡ ಅನುವಾದ 

    " ಹೇ ಮಾಲತಿ! ನೀನು ಮಲ್ಲಿಕಾ, ಲವಲೀ, ಲವಂಗಾದಿ ಲತೆಗಳಿಗಿಂತ ಅಧಿಕ ಗುಣಗಳನ್ನು ಹೊಂದಿರುವೆ! ಏಕೆಂದರೆ, ಎಲ್ಲಾ ಲತೆಗಳ ಬಳಿಗೂ ಹೋಗುವ ಈ ಆರು ಕಾಲುಗಳ ದುಂಬಿಯನ್ನೂ ನೀನು ನಿನ್ನಲ್ಲಿ ಬಂಧಿಸಿರುವೆ!" 
   ಕವಿಯು ಇಲ್ಲಿ ಮತ್ತೆ ಸೊಗಸಾದ ಶೃಂಗಾರ ಅನ್ಯೋಕ್ತಿಯನ್ನು ರಚಿಸಿದ್ದಾನೆ! ಇಲ್ಲಿ ಆರು ಕಾಲುಗಳ ದುಂಬಿ, ಒಬ್ಬ ಚಂಚಲಮನಸ್ಕ ನಾಯಕನನ್ನು ಸೂಚಿಸುತ್ತದೆ ಹಾಗೂ ವಿವಿಧ ಲತೆಗಳು, ಸುಂದರ ಹೆಣ್ಣುಗಳನ್ನು ಸೂಚಿಸುತ್ತವೆ. ಇತರ ಎಲ್ಲಾ ಲತೆಗಳಿಗಿಂತ ಅಧಿಕ ಗುಣಗಳನ್ನು ಹೊಂದಿರುವ ಮಾಲತೀ ಲತೆ, ಇತರ ಎಲ್ಲಾ ಸ್ತ್ರೀಯರಿಗಿಂತ ಅಧಿಕ ಗುಣಗಳನ್ನು ಹೊಂದಿರುವ ನಾಯಕಿಯನ್ನು ಸೂಚಿಸುತ್ತದೆ. ಎಲ್ಲಾ ಲತೆಗಳ ಬಳಿಗೂ ಹೋಗುವ ದುಂಬಿಯಂತೆ ಹಲವಾರು ಹೆಣ್ಣುಗಳ ಬಳಿಗೆ ಹೋಗಿ ರಮಿಸುವ ನಾಯಕ, ಚಂಚಲಮನಸ್ಕನಾದ ರಸಿಕ. ಆದರೆ ಅಂಥವನನ್ನೂ ಮಾಲತೀ ಲತೆಯು ತನ್ನ ಅಧಿಕ ಗುಣಗಳಿಂದ ದುಂಬಿಯನ್ನು ಇನ್ನೆಲ್ಲೂ ಹೋಗದಂತೆ ತನ್ನಲ್ಲಿ ಬಂಧಿಸಿರುವಂತೆ, ನಾಯಕಿಯು ಇತರ ಸ್ತ್ರೀಯರ ಬಳಿಗೆ ಹೋಗದಂತೆ ತನ್ನಲ್ಲಿ ಬಂಧಿಸಿದ್ದಾಳೆ! ಉತ್ತಮ ಗುಣಗಳಿದ್ದರೆ ಒಬ್ಬ ಹೆಣ್ಣು, ಚಂಚಲನಾದ ಪುರುಷನನ್ನೂ ಇತರ ಸ್ತ್ರೀಯರ ಬಳಿ ಹೋಗದಂತೆ ತನ್ನ ಪ್ರೀತಿಯಲ್ಲಿ ಬಂಧಿಸಬಹುದೆಂದು ತಾತ್ಪರ್ಯ. 

ಸೋಮವಾರ, ಅಕ್ಟೋಬರ್ 5, 2026

ಸುಂದರೀಶತಕ -೯೯

ಅಪಕೃತಯೇ ತವ ಪದ್ಮಿನಿ ಸಹವಾಸೋ ಭವತಿ ಹಂತ ಕುಮುದಿನ್ಯಾ: ।
ತ್ವಯಿ ನಿಶಿ ನಿಶಿ ಸ್ವಪತ್ಯಾಮನಯಾ ಯನ್ನೀಯತೇ ಮಧುಪ: ।।

ಕನ್ನಡ ಅನುವಾದ 

     ' ಅಯ್ಯೋ ಪದ್ಮಿನಿ! ಆ ಕುಮುದಿನಿಯ ಸಹವಾಸ ನಿನಗೆ ಅಪಕಾರ ಮಾಡಲಿಕ್ಕಾಗಿಯೇ ಉಂಟಾಗಿದೆ ! ಪ್ರತಿ ರಾತ್ರಿಯೂ ನೀನು ಮಲಗಿದಾಗ ಅವಳು ಆ ಜೇನ್ದುಂಬಿಯನ್ನು ತನ್ನೆಡೆಗೆ ಸೆಳೆಯುತ್ತಾಳೆ!' 
     ಇಲ್ಲಿ ಕವಿಯು ಹಿಂದಿನ ಶ್ಲೋಕದಲ್ಲಿ ಕೊಟ್ಟ ಉದಾಹರಣೆಗಳನ್ನು ಬೇರೆಯ ರೀತಿಯಲ್ಲಿ ತಿರುಗಿಸಿದ್ದಾನೆ! ಇಲ್ಲಿ ಕವಿಯು ಪದ್ಮಿನಿ ಅಥವಾ ಕಮಲ ಪುಷ್ಪಕ್ಕೆ ಕುಮುದಿನಿ ಅಥವಾ ನೈದಿಲೆಯ ಸಹವಾಸ ಮಾಡಿದ್ದು, ಅಂದರೆ ಹತ್ತಿರ ಇರುವುದು ತೊಂದರೆಯಾಯಿತೆಂದು ಹೇಳುತ್ತಿದ್ದಾನೆ. ಏಕೆಂದರೆ, ಸೂರ್ಯಾಸ್ತವಾದಾಗ ಪದ್ಮಿನಿ ಅಥವಾ ಕಮಲ, ಮುದುಡಿಕೊಳ್ಳುತ್ತದೆ ಅಥವಾ ಮಲಗುತ್ತದೆ. ಚಂದ್ರೋದಯವಾದಾಗ ಕುಮುದಿನಿ ಅಥವಾ ನೈದಿಲೆ ತೆರೆದುಕೊಳ್ಳುತ್ತದೆ, ಅಥವಾ ಎಚ್ಚರಗೊಳ್ಳುತ್ತದೆ. ಹೀಗೆ ಮಾಡಿ ಅದು ಮುದುಡಿದ ಕಮಲದಿಂದ ಅದಕ್ಕೆ ಸೇರಿದ ಜೇನ್ದುಂಬಿಯನ್ನು ತನ್ನೆಡೆಗೆ ಸೆಳೆಯುತ್ತದೆ! ಇದನ್ನೇ ಶೃಂಗಾರದ ವಿಷಯಕ್ಕೆ ಅನ್ವಯಿಸಿದಾಗ, ಒಬ್ಬ ಹೆಣ್ಣು ಅಥವಾ ಪ್ರೇಮಿಗೆ ( ಕಮಲ) ಸೇರಿದ ಪ್ರಿಯನನ್ನು ಅವಳು ಮಲಗಿದಾಗ, ಇನ್ನೊಬ್ಬ ಹೆಣ್ಣು ( ನೈದಿಲೆ) ಆಕರ್ಷಿಸಿ ಮೊದಲ ಹೆಣ್ಣಿಗೆ ಅಪಕಾರ ಮಾಡುತ್ತಾಳೆ ಅಥವಾ ತೊಂದರೆ ತರುತ್ತಾಳೆ ಎಂದು ಅರ್ಥವಾಗುತ್ತದೆ! ಹಾಗಾಗಿ ಅಂಥ ಇನ್ನೊಬ್ಬ ಹೆಣ್ಣಿನ ಸಹವಾಸ, ಅಥವಾ ಹತ್ತಿರ ಇರುವುದು ಈ ಮೊದಲ ಹೆಣ್ಣಿಗೆ ಅಪಕಾರ ಅಥವಾ ತೊಂದರೆಯುಂಟಾಗುತ್ತದೆ. ಆದ್ದರಿಂದ ಇಂಥ ಇನ್ನೊಬ್ಬ ಹೆಣ್ಣಿನ ಬಗ್ಗೆ ಎಚ್ಚರದಿಂದ ಇರಬೇಕೆಂದು ಕವಿಯು ಅನ್ಯೋಕ್ತಿಯ ರೂಪದಲ್ಲಿ ಮಾರ್ಮಿಕವಾಗಿ ಹೇಳುತ್ತಾನೆ! 

ಸುಂದರೀಶತಕ -೯೮

ಅಂಕಗತಸ್ಯ ಕುಮುದಿನಿ ಮತ್ತೋ ಮಧುಪ: ಪ್ರಸುಪ್ತ ಇತಿ ಮನ್ಯೇ ।
ಸಂಭಾವಯತಿ ಸರೋಜಂ ಯನ್ನ ವಿನಿದ್ರಂ ಸಮಾಗತ್ಯ ।।

ಕನ್ನಡ ಅನುವಾದ 

   ನಾಯಕಿಯು ಕುಮುದಿನಿ ಅಥವಾ ನೈದಿಲೆ ಪುಷ್ಪಕ್ಕೆ ಹೇಳುತ್ತಾಳೆ, " ಎಲೈ ಕುಮುದಿನಿ! ನಿನ್ನ ತೊಡೆಯ ಮೇಲೆ ಮದಿಸಿದ ಜೇನ್ದುಂಬಿಯು ಚೆನ್ನಾಗಿ ನಿದ್ರಿಸಿದೆ ಎಂದು ಭಾವಿಸುತ್ತೇನೆ! ಏಕೆಂದರೆ ಬೆಳಗಾದಾಗ ಕಮಲಪುಷ್ಪವು ನಿದ್ರೆ ಬಿಟ್ಟು ಎದ್ದಾಗ ಅದು ಕಮಲದ ಬಳಿ ಹೋಗಿ ಅದನ್ನು ಆದರಿಸುವುದಿಲ್ಲ!" 
    ಇದೊಂದು ಸೊಗಸಾದ ಶೃಂಗಾರ ಅನ್ಯೋಕ್ತಿ.‌ ಅನ್ಯೋಕ್ತಿ ಎಂದರೆ, ಒಂದು ವಿಷಯದ ಬಗ್ಗೆ ಹೇಳಲು ಬೇರೊಂದು ವಿಷಯವನ್ನು ಹೇಳುವುದು. ಇಲ್ಲಿ ಬಳಸುವ ಅಲಂಕಾರ, ಅಪ್ರಸ್ತುತ ಪ್ರಶಂಸೆ. ಅಂದರೆ ಪ್ರಸ್ತುತವಲ್ಲದ ವಿಷಯವನ್ನು ಪ್ರಶಂಸಿಸುತ್ತಾ ಪ್ರಸ್ತುತವನ್ನು ಸೂಚಿಸುವುದು. ಈ ಶ್ಲೋಕದಲ್ಲಿ ನಾಯಕಿಯು ಕುಮುದಿನಿ ಅಥವಾ ನೈದಿಲೆ ಮತ್ತು ಜೇನ್ದುಂಬಿಯ ಮೂಲಕ ತನ್ನ ಮತ್ತು ತನ್ನ ಪ್ರಿಯತಮನ ವಿಷಯವನ್ನು ಹೇಳುತ್ತಿದ್ದಾಳೆ. ಕುಮುದಿನಿ ಅಥವಾ ನೈದಿಲೆ ಅಥವಾ ನೀಲ ಕಮಲ, ರಾತ್ರಿ ಚಂದ್ರೋದಯವಾದಾಗ ಅರಳುತ್ತದೆ. ಅದರಲ್ಲಿನ ರಸವನ್ನು ಚೆನ್ನಾಗಿ ಕುಡಿದು ಮದಿಸಿದ ಜೇನ್ದುಂಬಿಯು ಅದರಲ್ಲೇ ಸೇರಿಹೋಗಿ ಮಲಗಿದೆ ಎಂದು ನಾಯಕಿ ಭಾವಿಸುತ್ತಾಳೆ. ಅದಕ್ಕೆ ಅವಳು ಆಶ್ವಾಸನೆಯಿಂದ ಕೊಡುವ ಕಾರಣವೆಂದರೆ, ಬೆಳಿಗ್ಗೆ ಸೂರ್ಯೋದಯವಾದಾಗ ಕಮಲ ಪುಷ್ಪವು ಅರಳಲು, ಆ ಜೇನ್ದುಂಬಿ ಅದರ ಬಳಿ ಹೋಗಿ ಆದರಿಸುವುದಿಲ್ಲ ಎಂಬುದು. ಅಂದರೆ ಆ ಜೇನ್ದುಂಬಿಗೆ ಕುಮುದಿನಿಯಿಂದ ಸಾಕಷ್ಟು ತೃಪ್ತಿಯಾಗಿ ಕಮಲದ ಬಳಿ ಹೋಗುವುದಿಲ್ಲ. ಇಲ್ಲಿ ನಾಯಕಿಯು ಕುಮುದಿನಿ ಮತ್ತು ಜೇನ್ದುಂಬಿಯ ಮೂಲಕ ತನ್ನ ಮತ್ತು ತನ್ನ ಪ್ರಿಯತಮನ ವಿಷಯವನ್ನು ಹೇಳುತ್ತಿದ್ದಾಳೆ. ತನ್ನೊಂದಿಗೆ ಚೆನ್ನಾಗಿ ರತಿಕ್ರೀಡೆಯಾಡಿ ತೃಪ್ತನಾಗಿ ತನ್ನ ತೊಡೆಯ ಮೇಲೆ ಮಲಗಿ ನಿದ್ರಿಸುತ್ತಿರುವ ತನ್ನ ಪ್ರಿಯತಮನು ಬೇರೊಬ್ಬ ಸ್ತ್ರೀಯ ಬಳಿ ಹೋಗಿ ಅವಳನ್ನು ಕಾಮಿಸುವುದಿಲ್ಲ ಎಂದು ಕುಮುದಿನಿಗೆ ಹೇಳುವ ನೆಪದಲ್ಲಿ ತನಗೆ ತಾನೇ ಆಶ್ವಸಿಸಿಕೊಳ್ಳುತ್ತಿದ್ದಾಳೆ. ಒಬ್ಬಳ ಬಳಿ ಚೆನ್ನಾಗಿ ತೃಪ್ತಿ ದೊರೆತ ನಂತರ ಇನ್ನೊಬ್ಬಳೇಕೆ? 

ಸುಂದರೀಶತಕ -೯೭

ಪುನರುಕ್ತಭೂಷಣಾನಾಂ ಹೃದಯಾಭಿನ್ನೇ ನಿವೇದ್ಯಮಾನಾನಾಮ್ ।
ಸುಂದರಿ ತವ ಚರಿತಾನಾಂ ಕಥಮಪಿ ಕಥಯಾ ನ ತೃಪ್ಯಾಮಿ ।।

ಕನ್ನಡ ಅನುವಾದ 

     ' ಹೇ ಸುಂದರಿ! ಪುನರುಕ್ತಭೂಷಣಗಳಾದ ನಿನ್ನ ಗುಣವಿಶೇಷಗಳನ್ನು ನನ್ನ ಹೃದಯಕ್ಕೆ ಅಭಿನ್ನನಾದ ನನ್ನ ಮಿತ್ರನಿಗೆ ಎಷ್ಟು ಹೇಳಿದರೂ ನನಗೆ ತೃಪ್ತಿಯೇ ಆಗುವುದಿಲ್ಲ!' 
    ನಮಗೆ ಇಷ್ಟವಾದ ಯಾವುದೇ ವಿಷಯವಾದರೂ ಅದನ್ನು ಮತ್ತೆ ಮತ್ತೆ ಹೇಳಿದರೆ ಬೇಸರವಾಗುವ ಬದಲು ಭೂಷಣವೆನಿಸುತ್ತದೆ! ನಮಗೆ ಇಷ್ಟವಾದ ಹಾಡು, ಕಥೆ, ಅಥವಾ ಒಬ್ಬ ವ್ಯಕ್ತಿಯ ಗುಣವಿಶೇಷಗಳನ್ನು ಎಷ್ಟು ಬಾರಿ ಹೇಳಿದರೂ ಹೇಳುತ್ತಿರಬೇಕೆನಿಸುತ್ತದೆ! ಅದರಲ್ಲಿ ತೃಪ್ತಿಯೇ ಆಗುವುದಿಲ್ಲ! ಇನ್ನು ನಮಗೆ ಇಷ್ಟವಾದ ಹೆಣ್ಣು ಸಿಕ್ಕಿದರೆ? ಗಂಡಿಗೆ ಹೆಣ್ಣು, ಹೆಣ್ಣಿಗೆ ಗಂಡು ಪರಸ್ಪರ ಆಕರ್ಷಣೆಯಿಂದ ಇಷ್ಟವಾಗೇ ಆಗುತ್ತಾರೆ ನಿಜ! ಆದರೆ ಒಬ್ಬ ಪುರುಷನಿಗೆ ಅವನ ಎಲ್ಲಾ ಅಭಿರುಚಿಗಳಿಗೂ ಸರಿಹೊಂದುವ, ಸುಂದರಿಯೂ ಆದಂಥ ಸ್ತ್ರೀ ಸಿಕ್ಕಿದರೆ ಅವನ ಭಾಗ್ಯ ಎಂಥದ್ದು? ಅವಳನ್ನು ಎಷ್ಟು ವರ್ಣಿಸಿದರೂ ಅವನಿಗೆ ಸಾಕಾಗುವುದಿಲ್ಲ! ಅವಳ ಬಗ್ಗೆ ಹೇಳಿದ್ದನ್ನೇ ಹೇಳಿ ಪುನರುಕ್ತಿ ಮಾಡಿದರೂ ಅದು ಭೂಷಣವೆನಿಸುತ್ತದೆ! ನಿಜಜೀವನದಲ್ಲಿ ಅಂಥ ಪುರುಷ ಅಥವಾ ಸ್ತ್ರೀ ಸಿಗುವುದು ಕಷ್ಟವೇ ಆದರೂ ಸಿಕ್ಕಿರುವವರನ್ನು ಮೆಚ್ಚುವ ಪ್ರಯತ್ನ ಮಾಡಬಹುದು. ಅದಕ್ಕಾಗಿಯೇ ವಾತ್ಸ್ಯಾಯನನು ಕಾಮಸೂತ್ರದಲ್ಲಿ ಅರವತ್ತು ನಾಲ್ಕು ಕಲೆಗಳು, ಹಲವು ಹಬ್ಬಗಳು, ಉತ್ಸವಗಳು, ಸುಸಂಸ್ಕೃತ ಜೀವನಶೈಲಿ, ರತಿಕ್ರೀಡೆಯ ವಿವಿಧ ಬಗೆಗಳು, ಇವೆಲ್ಲವನ್ನೂ ವಿವರಿಸಿ, ಸ್ತ್ರೀ ಪುರುಷರು ಪರಸ್ಪರ ಹೊಂದಿಕೊಂಡು, ಮೆಚ್ಚಿಕೊಂಡು, ಸದಾ ಪ್ರೀತಿಯಿಂದಿರಲು ಮಾರ್ಗೋಪಾಯಗಳನ್ನು ಹೇಳಿದ್ದಾನೆ. ಅಂತೆಯೇ, ಬೇರೆ ಬೇರೆ ವ್ಯಕ್ತಿಗಳಲ್ಲಿ ಏನೇನು ಅಭಿರುಚಿಗಳಿರಬಹುದೆಂಬ ಅರಿವು ಉಂಟಾಗಿ ಅವುಗಳನ್ನು ಮೆಚ್ಚಿ, ಗೌರವಿಸಲು ಸಾಧ್ಯವಾಗುತ್ತದೆ.‌ ಆಗ ಪ್ರೀತಿಯೂ ಬೆಳೆಯುತ್ತದೆ. ಗಂಡ, ಹೆಂಡಿರಲ್ಲಿ ಸ್ಥಿರವಾದ ಪ್ರೀತಿ ಬೆಳೆದರೆ ಅದಕ್ಕಿಂತ ದೊಡ್ಡ ಭಾಗ್ಯ ಇಲ್ಲ! ಆಗ ಇಲ್ಲಿನ ನಾಯಕನಂತೆ, ಪುರುಷನಿಗೆ ಅವನ ಪ್ರಿಯ ಪತ್ನಿಯ ಗುಣವಿಶೇಷಗಳನ್ನು ಎಷ್ಟು ಹೊಗಳಿದರೂ ಸಾಲದಾಗುತ್ತದೆ! 

ಭಾನುವಾರ, ಅಕ್ಟೋಬರ್ 4, 2026

ಹಸಿರು ಸ್ಟಿಂಕ್ ಬಗ್


ಕೆಲವೊಮ್ಮೆ ನಮ್ಮ ಮನೆಯ ಸುತ್ತ ಮುತ್ತ ಹಾಗೂ ಸನಿಹದ ಉಪವನಗಳಲ್ಲೇ ಪ್ರಕೃತಿಯ ವಿಸ್ಮಯಗಳು ಕಂಡುಬರುತ್ತವೆ. ಈ ಚಿತ್ರದಲ್ಲಿ ಕಾಣುತ್ತಿರುವ ಪುಟ್ಟ ಕೀಟ, ಹಸಿರು ಸ್ಟಿಂಕ್ ಬಗ್ ( ಗ್ರೀನ್ ಸ್ಟಿಂಕ್ ಬಗ್). ಇದನ್ನು ಹಸಿರು ಸೈನಿಕ ಬಗ್, ( ಗ್ರೀನ್ ಸೋಲ್ಜರ್ ಬಗ್) ಎಂದೂ ಕರೆಯುತ್ತಾರೆ. ಬಗ್ ಎಂದರೆ ಒಂದು ಬಗೆಯ ಕೀಟ. ಇದು ನೋಡಲು ಸಿಕ್ಕಿದ್ದು ನಮ್ಮ ಮನೆಯ ಹೊರಗೇನೇ! ಕೇವಲ ೧೩ ರಿಂದ ೧೮ ಮಿ.ಮೀ. ಉದ್ದವಿರುವ, ಬಹಳ ಪುಟ್ಟದಾಗಿರುವ, ಗುರಾಣಿ ರೂಪದ, ಅಂಡಾಕಾರದ ಈ ಸುಂದರ ಕೀಟ, ಹಚ್ಚ ಹಸಿರು ಬಣ್ಣ ಹೊಂದಿದ್ದು, ಅಂಚುಗಳಲ್ಲಿ ಹಳದಿ, ಕಿತ್ತಳೆ, ಅಥವಾ ಕೆಂಪು ಬಣ್ಣವನ್ನು ಹೊಂದಿರುತ್ತದೆ. ಇದರ ರೆಕ್ಕೆಗಳು ಮಡಚಿದ್ದಾಗ, ಒಂದು ಬಗೆಯ x ವಿನ್ಯಾಸ ತಾಳುತ್ತವೆ.‌ ಎಲ್ಲಾ ಬಗ್ ಕೀಟಗಳಂತೆ ಇದು ಬಾಯಲ್ಲಿ ನಳಿಕೆಯಂಥ ರೋಸ್ಟ್ರಂ ಎಂಬ ರಚನೆಯನ್ನು ಹೊಂದಿದ್ದು, ಅದರಿಂದ ಇದು ಸಸ್ಯ ಭಾಗಗಳನ್ನು ಚುಚ್ಚಿ ಅವುಗಳ ರಸವನ್ನು ಹೀರುತ್ತದೆ. ವಯಸ್ಕ ಕೀಟ, ಹಚ್ಚ ಹಸಿರು ಬಣ್ಣ ಹೊಂದಿದ್ದರೂ ಮರಿಯು ರಕ್ಕೆರಹಿತವಾಗಿದ್ದು, ಬೆಳವಣಿಗೆಯ ವಿವಿಧ ಹಂತಗಳಲ್ಲಿ ಕಿತ್ತಳೆ ಕೆಂಪು, ಕಪ್ಪು ಮತ್ತು ಹಸಿರು ಬಣ್ಣಗಳಿಗೆ ತಿರುಗುತ್ತಾ ಬಿಳಿ ಮತ್ತು ಕಪ್ಪು ಗೆರೆಗಳನ್ನು ಹೊಂದಿರುತ್ತದೆ. ವಯಸ್ಕ ಹಾಗೂ ಮರಿ, ಎರಡೂ, ಎದೆಯ ಕೆಳಭಾಗದಲ್ಲಿ ದೊಡ್ಡ ಹೊಲಸು ದುರ್ನಾತದ ಗ್ರಂಥಿಗಳನ್ನು ಪಡೆದಿರುತ್ತವೆ. ಇವುಗಳಿಗೆ ತೊಂದರೆಯಾದಾಗ, ಈ ಗ್ರಂಥಿಗಳು ದುರ್ನಾತ ಬೀರುವ ದ್ರವವನ್ನು ಹೆಚ್ಚಾಗಿ ಸ್ರವಿಸುತ್ತವೆ! ಹಾಗಾಗಿಯೇ ಇವುಗಳಿಗೆ ಸ್ಟಿಂಕ್ ಬಗ್, ಅಂದರೆ ದುರ್ನಾತ ಕೀಟ ಎಂದು ಹೆಸರು ಬಂದಿದೆ. ಹಿಂದೊಂದು ಕಾಲದಲ್ಲಿ ಈ ರಸವನ್ನು ಸಂಗ್ರಹಿಸಿ ಪುಡಿ ಮಾಡಿ ಕೆಲವು ಆಮ್ಲಗಳಿಗೆ ಅವು ಕಳೆದುಕೊಂಡ ವಾಸನೆಯನ್ನು ಪುನಃ ತರಲು ಬಳಸುತ್ತಿದ್ದರು.‌ 
   ಇದು ಮೂಲತಃ ಉತ್ತರ ಅಮೆರಿಕಾದ ಕೀಟವಾಗಿದ್ದರೂ ನಾವು ಭಾರತದಲ್ಲಿ ನೋಡುವ ಕೀಟವು ಇದಕ್ಕೆ ಬಹಳ ಹತ್ತಿರದ ಸಂಬಂಧವಿರುವ ದಕ್ಷಿಣದ ಹಸಿರು ಸ್ಟಿಂಕ್ ಬಗ್ ಆಗಿದೆ.‌ ಇದು ಇಥಿಯೋಪಿಯಾ ಹಾಗೂ ಪೂರ್ವ ಆಫ್ರಿಕಾದ ಮೂಲದ್ದಾಗಿದ್ದು ಈಗ ವಿಶ್ವದ ಎಲ್ಲೆಡೆ ಹರಡಿದೆ.‌ ಅಮೆರಿಕಾದ ಮತ್ತು ಭಾರತದ ಕೀಟಗಳಿಗಿರುವ ಒಂದು ಮುಖ್ಯ ವ್ಯತ್ಯಾಸವೆಂದರೆ, ಅಮೇರಿಕಾದ ಕೀಟಗಳ ಮೀಸೆಗಳು ಪೂರ್ತಿ ಕಪ್ಪಾಗಿದ್ದು ಮೂರು ಭಾಗಗಳಾಗಿ ವಿಂಗಡಿಸಲಾಗಿರುತ್ತವೆ ಮತ್ತು ಭಾರತದ ಕೀಟಗಳ ಮೀಸೆಗಳು ಹಸಿರು, ಕೆಂಪು ಕಂದು, ಹಾಗೂ ತಿಳಿ ಕಪ್ಪು ಬಣ್ಣಗಳನ್ನು ಹೊಂದಿರುತ್ತವೆ. ಇವು ನಮ್ಮ ತೋಟಗಳು, ಉಪವನಗಳು, ಮತ್ತು ಕೃಷಿ ಭೂಮಿಗಳಲ್ಲಿ ಬಹಳ ಸಾಮಾನ್ಯವಾಗಿ ಕಂಡುಬರುವುದಾಗಿದ್ದು, ಅನೇಕ ಕೃಷಿ ಭೂಮಿಗಳಲ್ಲಿ ಬೆಳೆಗಳನ್ನು ನಾಶಮಾಡಿ ಪೀಡೆಯುಂಟುಮಾಡುತ್ತವೆ.