ಸಂಸದಿ ಸಖೀಜನಾನಾಂ ಗೋಷ್ಠೀಂ ಕರ್ತುಂ ಪುರ: ಪ್ರವೃತ್ತಾಯಾ: /
ಗೋತ್ರಸ್ಖಲನವಿಲಕ್ಷಂ ಸುಂದರಿ ಮುಖಮೀಕ್ಷಣೀಯಂ ತೇ //
ಕನ್ನಡ ಅನುವಾದ
' ಎಲೈ ಸುಂದರಿ! ಸಖಿಯರ ಸಮಕ್ಷಮದಲ್ಲಿ ನೀನು ಮಾತುಕತೆಯಾಡಲು ಆರಂಭಿಸಿದಾಗ, ನಿನ್ನ ಪತಿಯು ಗೋತ್ರಸ್ಖಲನವಾಗಿ ನಿನ್ನ ಹೆಸರನ್ನು ಕರೆಯುವ ಬದಲಿಗೆ ಬೇರೊಬ್ಬ ಪ್ರೇಯಸಿಯ ಹೆಸರನ್ನು ಕರೆದಾಗ, ನಿನ್ನ ಮುಖದಲ್ಲಾದ ವ್ಯಾಕುಲತೆ, ಕೋಪ, ಆಶ್ಚರ್ಯ, ಮತ್ತು ಲಜ್ಜೆಗಳ ವಿಲಕ್ಷಣ ಭಾವ ನೋಡಲು ಸುಂದರವಾಗಿತ್ತು!'
ಹೆಣ್ಣಿನ ವಿವಿಧ ಭಾವಗಳನ್ನು ಕವಿಯು ಚಿತ್ರಿಸುತ್ತಿದ್ದಾನೆ. ಹೆಣ್ಣು, ಕೋಪ, ಲಜ್ಜೆ, ಸಂಕೋಚ, ಆಶ್ಚರ್ಯ , ವ್ಯಾಕುಲತೆ, ಮೊದಲಾದ ಮುಖಭಾವಗಳಲ್ಲಿ ಬಹಳ ಸುಂದರವಾಗಿ, ಮುದ್ದಾಗಿ ಕಾಣುತ್ತಾಳೆ! ಇಲ್ಲಿ ಕವಿಯು ಅಂಥ ಒಂದು ಸಂದರ್ಭವನ್ನು ಚಿತ್ರಿಸಿದ್ದಾನೆ. ಸುಂದರ ಹೆಣ್ಣೊಬ್ಬಳು ತನ್ನ ಸಖಿಯರೊಂದಿಗೆ ಒಂದು ಮಾತುಕತೆಯ ಗೋಷ್ಠಿಯನ್ನು ಆರಂಭಿಸುತ್ತಿದ್ದಾಳೆ. ಅವಳ ಪತಿ ಅಥವಾ ಪ್ರಿಯತಮನೂ ಅಲ್ಲಿದ್ದಾನೆ. ಆದರೆ ಅವನು ಬಾಯಿತಪ್ಪಿ ಅವಳ ಹೆಸರನ್ನು ಕರೆಯುವ ಬದಲಿಗೆ ಬೇರೊಬ್ಬ ಪ್ರೇಯಸಿಯ ಹೆಸರನ್ನು ಕರೆದಿದ್ದಾನೆ! ಇದಕ್ಕೆ ಗೋತ್ರಸ್ಖಲನವೆಂದು ಹೆಸರು. ಗೋತ್ರಸ್ಖಲನದ ವಿಷಯವು ಸಂಸ್ಕೃತದ ಶೃಂಗಾರ ಸಾಹಿತ್ಯದಲ್ಲಿ ಪ್ರಮುಖ ಸ್ಥಾನ ವಹಿಸುತ್ತದೆ. ಗೋತ್ರಸ್ಖಲನವೆಂದರೆ ನಾಯಕನು ತನ್ನ ಪ್ರಿಯತಮೆಯ ಹೆಸರನ್ನು ಕರೆಯುವ ಬದಲಿಗೆ ಬೇರೊಬ್ಬ ಪ್ರೇಯಸಿಯ ಹೆಸರನ್ನು ಕರೆಯುವುದು. ಆಗ ನಾಯಕಿಗೆ ಆಗುವ ಸಂಕೋಚ, ಲಜ್ಜೆ, ವ್ಯಾಕುಲತೆ, ಆಶ್ಚರ್ಯ, ಕೋಪ, ಮೊದಲಾದ ಮಿಶ್ರ ವಿಲಕ್ಷಣ ಭಾವಗಳು ಒಂದು ಮೆರುಗು ನೀಡುತ್ತವೆ. ಅದೂ ಸಖಿಯರ ಮುಂದೆ ಅವಳ ಪತಿ ಬೇರೊಬ್ಬಳ ಹೆಸರನ್ನು ಕರೆದರೆ ಅವಳಿಗೆ ಹೇಗಾಗಬೇಡ? ಅವಳ ಆ ಮಿಶ್ರ ವಿಲಕ್ಷಣ ಮುಖಭಾವ ಸುಂದರವಾಗಿದೆ ಎಂದು ಹೇಳುತ್ತಾನೆ ಕವಿ.