ಬುಧವಾರ, ಜುಲೈ 15, 2026

ವಯನಾಡಿನ ವೃದ್ಧೆ

ನಾನು ಕೇರಳದ ವಯನಾಡು ಪ್ರವಾಸಕ್ಕೆ ಹೋಗಿದ್ದಾಗ ವೈತ್ರಿ ಪ್ರದೇಶದಲ್ಲಿ ಈ ವೃದ್ಧ ಮಹಿಳೆಯನ್ನು ನೋಡಿದೆ. ಅವಳ ಉದ್ದವಾದ ಕಿವಿಯ ಹಾಲೆಗಳನ್ನು ನೋಡಿ ವಿಸ್ಮಯಗೊಂಡು ಅವಳ ಅನುಮತಿಯಿಂದ ಅವಳ ಫೋಟೋಗಳನ್ನು ತೆಗೆದೆ. ಈ ಮಹಿಳೆ ಪನಿಯ ಎಂಬ ಬುಡಕಟ್ಟು ಜನಾಂಗಕ್ಕೆ ಸೇರಿದವಳಾಗಿದ್ದು, ಅದು ವಯನಾಡಿನಲ್ಲೇ ಅತ್ಯಂತ ದೊಡ್ಡ ಜನಾಂಗವಾಗಿದೆ. ಈ ಜನಾಂಗದವರು ಬೆಟ್ಟ ಗುಡ್ಡಗಳ ಹಾಗೂ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಾರೆ ಹಾಗೂ ವಯನಾಡಲ್ಲದೇ ಸನಿಹದ ಕಣ್ಣೂರು, ಕೋಜಿಕೋಡೆ, ಮಲಪ್ಪುರಂಗಳಲ್ಲೂ ಕಂಡುಬರುತ್ತಾರೆ ಹಾಗೂ ತಮಿಳುನಾಡು ಮತ್ತು ಕರ್ನಾಟಕದ ಭಾಗಗಳಲ್ಲೂ ಕಂಡು ಬರುತ್ತಾರೆ. ಇವರು ಚಿಕ್ಕ ವಯಸ್ಸಿನಲ್ಲೇ ಕಿವಿಯ ಹಾಲೆಯನ್ನು ಚುಚ್ಚಿ, ದೊಡ್ಡ ದೊಡ್ಡ ಭಾರದ ಆಭರಣಗಳನ್ನು ತೊಡಿಸಿ ದೀರ್ಘ ಕಾಲಾವಧಿಯಲ್ಲಿ ಆ ಕಿವಿಯ ಹಾಲೆ ಹೀಗೆ ಉದ್ದವಾಗುವಂತೆ ಮಾಡುತ್ತಾರೆ. ಇವರ ಕಥೆಗಳ ಪ್ರಕಾರ, ಇವರ ಮೂಲ, ವಯನಾಡಿನ ಬಾಣಾಸುರ ಶಿಖರದ ಬಳಿಯ ಇಪ್ಪಿಮಲ ಪರ್ವತ. ಐತಿಹಾಸಿಕವಾಗಿ ಇವರು ನಿಪುಣ ಕೃಷಿ ಕಾರ್ಮಿಕರಾಗಿದ್ದು , ಭತ್ತವನ್ನು ಬೆಳೆಯುವುದರಲ್ಲಿ ನಿಷ್ಣಾತರಾಗಿದ್ದರು. ಇವರು ಪನಿಯಭಾಷಾ ಎಂಬ ಮಲಯಾಳಂ, ತಮಿಳು ಮತ್ತು ತುಳು ಮಿಶ್ರಿತ ವಿಶಿಷ್ಟವಾದ ಭಾಷೆಯನ್ನು ಮಾತನಾಡುತ್ತಾರೆ. 
                                       
                                        
            

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ