ಪರ್ಯಂಕಪಾರ್ಶ್ವಲಗ್ನಾಂ ಗಲದಶ್ರುಪ್ಲಾವಿತೈಕಭುಜಮೂಲಮ್ /
ಅಂಚಲಸಂವೃತವದನಾಂ ತಾಮಂತಶ್ಚಿಂತಯಾಮಿ ಚಿರಮ್ //
ಕನ್ನಡ ಅನುವಾದ
' ನನ್ನ ಪ್ರಿಯತಮೆಯು ಮಂಚದ ತುದಿಯ ಮೇಲೆ ಮಲಗಿ ಸೆರಗಿನಿಂದ ಮುಖ ಮುಚ್ಚಿಕೊಂಡು ಅಳುತ್ತಿರಲು, ಅವಳ ಕಣ್ಣೀರು ಹರಿದು ಅವಳ ಒಂದು ಭುಜಮೂಲವನ್ನು ನೆನೆಸಿದುದನ್ನು ನಾನು ಸದಾ ನನ್ನ ಹೃದಯದಲ್ಲಿ ನೆನೆಯುತ್ತೇನೆ!'
ಇಲ್ಲಿ ಕವಿಯು ಮತ್ತೊಂದು ವಿರಹದ ಚಿತ್ರಣ ನೀಡಿದ್ದಾನೆ. ಅದನ್ನು ನಾಯಕನೇ ಹೇಳುತ್ತಿದ್ದಾನೆ. ಅವನು ಹಿಂದೆ ಪ್ರಯಾಣದಿಂದ ಹಿಂದಿರುಗಿದಾಗ ನೋಡಿದ ದೃಶ್ಯವನ್ನು ಈಗಲೂ ಸದಾ ನೆನೆಯುವೆ ಎಂದು ಹೇಳುತ್ತಿರುವಂತಿದೆ. ಅವನು ಅವಳನ್ನು ನೋಡಿದ ಸ್ಥಿತಿ ಹೀಗಿದೆ. ಅವಳು ಮಂಚದ ತುದಿಯಲ್ಲಿ ಮುದುಡಿಕೊಂಡು ಮಲಗಿದ್ದಾಳೆ ಹಾಗೂ ತನ್ನ ಮುಖವನ್ನು ಸೆರಗಿನಿಂದ ಮುಚ್ಚಿಕೊಂಡು ತನ್ನ ಮುಖವನ್ನು ಒಂದು ಭುಜಕ್ಕೆ ಒರಗಿಸಿಕೊಂಡು ಮಲಗಿದ್ದಾಳೆ. ಅವಳು ವಿರಹಬಾಧೆಯಿಂದ ಅತ್ತೂ ಅತ್ತೂ ಅವಳ ಕಣ್ಣೀರ ಧಾರೆ ಸೆರಗಿನ ಮೂಲಕವೇ ಹರಿದು ಅವಳ ಭುಜಮೂಲವನ್ನು ನೆನೆಸಿದೆ. ಹೀಗಿರುವ ಅವಳ ಸ್ಥಿತಿಯನ್ನು ನೋಡಿದ ನಾಯಕನಿಗೆ ಅದನ್ನು ಮರೆಯಲಾಗುತ್ತಿಲ್ಲ! ಅದನ್ನು ಸದಾ ನೆನೆಯುತ್ತೇನೆ ಎಂದು ಹೇಳುತ್ತಿದ್ದಾನೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ