ಸುಂದರಿ ರಹಸ್ಯಮಾಲಿಷು ಕಲ್ಯಾಣೀ ಸ್ಫೂರ್ತಿರೇವ ತವ ವೇದ /
ಗೋತ್ರಸ್ಖಲನಭಯೇನ ತ್ಯಕ್ತಾ ಯದ್ಗೌರವೀ ಸಂಸದ್ //
ಕನ್ನಡ ಅನುವಾದ
' ಎಲೈ ಸುಂದರಿ! ಈ ರಹಸ್ಯ ಕೂಟಗಳಲ್ಲಿ ನಿನ್ನ ಶೋಭಾಯಮಾನವಾದ ಸ್ಫೂರ್ತಿಯೇ ನಿನ್ನ ವಿಷಯವನ್ನು ಹೇಳುತ್ತದೆ! ನೀನು ಎಲ್ಲಿ ನಿನ್ನ ಪ್ರಿಯತಮನ ಹೆಸರನ್ನು ಬಾಯಿ ತಪ್ಪಿ ಹೇಳಿಬಿಡುವೆಯೋ ಎಂಬ ಭಯದಿಂದ ನೀನು ಹಿರಿಯರ ಸಮಕ್ಷಮವನ್ನು ತೊರೆದಿರುವೆ!'
ಇದೊಂದು ಸ್ವಾರಸ್ಯಕರ ಶೃಂಗಾರ ಪದ್ಯ. ಇಲ್ಲಿ ನಾಯಿಕೆಯು ರಹಸ್ಯವಾಗಿ ಒಬ್ಬ ನಾಯಕನನ್ನು ಪ್ರೀತಿಸುತ್ತಿದ್ದಾಳೆ. ಅದು ಅವಳು ಹೇಳದಿದ್ದರೂ ಅವಳು ಸಖಿಯರೊಂದಿಗೆ ಗುಟ್ಟಾಗಿ ಸೇರುವ ರಹಸ್ಯ ಕೂಟಗಳಲ್ಲಿ ಮೊದಲಿಗಿಂತ ಹೆಚ್ಚಾಗಿರುವ ಅವಳ ಲವಲವಿಕೆ, ಸ್ಫೂರ್ತಿಗಳಿಂದಲೇ ಗೊತ್ತಾಗುತ್ತದೆ! ಪ್ರೀತಿಯಲ್ಲಿ ಬಿದ್ದಿರುವ ಅವಳು ಅದೊಂದು ರೀತಿಯ ಶೋಭೆಯ ಸ್ಫೂರ್ತಿ ತೋರುತ್ತಿದ್ದಾಳೆ! ಆದರೆ ಅದು ಅವಳ ಹಿರಿಯರಾರಿಗೂ ಗೊತ್ತಿಲ್ಲ. ಹಿರಿಯರ ಜೊತೆ ಕುಳಿತರೆ ಎಲ್ಲಿ ಅವಳು ತನ್ನ ಪ್ರಿಯತಮನ ಹೆಸರನ್ನು ಹೇಳಿಬಿಡುವಳೋ ಎಂಬ ಭಯದಿಂದ ಅವಳು ಹಿರಿಯರೊಂದಿಗೆ ಕೂರುತ್ತಲೇ ಇಲ್ಲ! ಅವರ ಸಮಕ್ಷಮವನ್ನು ತೊರೆದು ಸದಾ ಸಖಿಯರೊಂದಿಗೆ ರಹಸ್ಯ ಕೂಟಗಳಲ್ಲಿ ಸೇರುತ್ತಿದ್ದಾಳೆ! ಇದನ್ನು ಇಂದಿನ ಹರೆಯದವರಲ್ಲೂ ಕಾಣಬಹುದು! ಹರೆಯಕ್ಕೆ ಬಂದ ತರುಣಿಯರು ತಮ್ಮ ಹಿರಿಯರೊಂದಿಗೆ ಕುಳಿತುಕೊಳ್ಳಲು ಇಷ್ಟಪಡದೆ ತಮ್ಮ ಗೆಳತಿಯರೊಂದಿಗೆ ಗುಟ್ಟಾಗಿ ಸಂಭಾಷಣೆ ಮಾಡುವುದರಲ್ಲಿ ತೊಡಗುತ್ತಾರೆ. ಇದನ್ನು ಕವಿಯು ಅಂದಿನ ದಿನಗಳಲ್ಲೇ ಗಮನಿಸಿ ಈ ಪದ್ಯದಲ್ಲಿ ಸೂಕ್ಷ್ಮವಾಗಿ ಸೊಗಸಾಗಿ ಚಿತ್ರಿಸಿದ್ದಾನೆ! ಜೀವನದ ಘಟನಾವಳಿಗಳು ಸಾಹಿತ್ಯದಲ್ಲಿ ರಸರೂಪಿಯಾಗಿ ವ್ಯಕ್ತವಾದಾಗ ಅವು ಸೊಗಸಾಗಿರುತ್ತವೆ! ಅದನ್ನು ಕವಿಯು ತನ್ನ ಕಾವ್ಯದ ಮೂಲಕ ಮಾಡುತ್ತಾನೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ