ಬುಧವಾರ, ನವೆಂಬರ್ 4, 2026

ಕಾಳಿದಾಸನ ಶೃಂಗಾರತಿಲಕ -೪

ಸಂಸ್ಕೃತ ಮೂಲ 

ಏಕೋ ಹಿ ಖಂಜನವರೋ ನಲಿನೀದಲಸ್ಥೋ
    ದೃಷ್ಟ: ಕರೋತಿ ಚತುರಂಗಬಲಾಧಿಪತ್ಯಮ್ ।
ಕಿಂ ಮೇ ಕರಿಷ್ಯತಿ ಭವದ್ವದನಾರವಿಂದೇ 
    ಜಾನಾಮಿ ನೋ ನಯನಖಂಜನಯುಗ್ಮಮೇತತ್ ।।

ಕನ್ನಡ ಅನುವಾದ 

       ನಾಯಕನು ನಾಯಕಿಯ ಅಂಜನಭೂಷಿತ ಕಂಗಳನ್ನು ನೋಡಿ ಅವಳಿಗೆ ಹೇಳುತ್ತಾನೆ," ಕಮಲದ ಎಲೆಯ ಮೇಲೆ ಕುಳಿತಿರುವ ಒಂದು ಶ್ರೇಷ್ಠ ಖಂಜನ ಪಕ್ಷಿಯನ್ನು ನೋಡಿದ ಮಾತ್ರಕ್ಕೆ ಅದು ಒಬ್ಬನಿಗೆ ಚತುರಂಗಬಲದ ಅಧಿಪತ್ಯವನ್ನೇ ತಂದುಕೊಡುತ್ತದೆ! ಇನ್ನು ನಿನ್ನ ವದನಾರವಿಂದದಲ್ಲಿ ಎರಡು ಖಂಜನ ಪಕ್ಷಿಗಳ ಜೋಡಿಯನ್ನು ನೋಡಿದ ನನಗೆ ಅದು ಇನ್ನೇನು ಮಾಡುವುದೋ ತಿಳಿಯದು! "
    ಶಕುನ ಶಾಸ್ತ್ರದ ಪ್ರಕಾರ, ಖಂಜನ ಪಕ್ಷಿಯನ್ನು ಪೂರ್ವಾಹ್ನದಲ್ಲಿ ನೋಡಿದರೆ ರಾಜರಾಗುವರೆಂದು ನಂಬಿಕೆಯಿದೆ. ಹೀಗೊಂದು ಶ್ಲೋಕವಿದೆ-
      ತುರಂಗಮಾತಂಗಮ‌ಹೋರಗೇಷು ಸರೋಜಗೋಚ್ಛತ್ರವೃಷೇಷು ಯೇನ ।
      ಪೂರ್ವೇ ಚ ದೃಷ್ಟೋऽಹನಿ ಖಂಜರೀಟೋ 
 ನಿ:ಸಂಶಯಂ ತಸ್ಯ ಭವೇನ್ನೃಪತ್ವಮ್ ।।
      ' ಯಾರು ಪೂರ್ವಾಹ್ನದಲ್ಲಿ ಕುದುರೆ, ಆನೆ, ದೊಡ್ಡ ಸರ್ಪ, ತಾವರೆ ಹೂವು ( ಅಥವಾ ಎಲೆ), ಹಸು, ಶ್ವೇತಛತ್ರ( ರಾಜ ಗೌರವದ ಛತ್ರಿ), ಎತ್ತು, ಇವುಗಳ ಮೇಲೆ ಕುಳಿತಿರುವ ಖಂಜರೀಟ ( ಖಂಜನ) ಪಕ್ಷಿಯನ್ನು ನೋಡುವನೋ, ಅವನಿಗೆ ನಿ:ಸಂದೇಹವಾಗಿ ನೃಪತ್ವ (ರಾಜತ್ವ ) ಪ್ರಾಪ್ತವಾಗುತ್ತದೆ!'
    ಖಂಜರೀಟ ಅಥವಾ ಖಂಜನ ಪಕ್ಷಿ ಸದಾ ಬಾಲವನ್ನು ಬಡಿಯುತ್ತಿರುವ ಒಂದು ಪುಟ್ಟ ಪಕ್ಷಿ.‌ ಇದು ಕಪ್ಪು, ಹಳದಿ, ಮೊದಲಾದ ಬಣ್ಣಗಳಲ್ಲಿ ಕಂಡುಬರುತ್ತದೆ. ಕನ್ನಡದಲ್ಲಿ ಇದನ್ನು ಬಾಲಬಡುಕ ಎಂದೂ ಆಂಗ್ಲ ಭಾಷೆಯಲ್ಲಿ ವ್ಯಾಗ್ ಟೈಲ್ ( Wagtail) ಎಂದೂ ಕರೆಯುತ್ತಾರೆ. ಕಣ್ಣಿನ ಮೇಲೆ ಬಿಳಿಯ ಹುಬ್ಬಿರುವ ಕಪ್ಪು ಬಾಲಬಡುಕ ( White browed black Wagtail) ಹೆಚ್ಚಾಗಿ ಕಾಣಸಿಗುತ್ತದೆ. ಮೇಲಿನ ಶ್ಲೋಕದಂತೆ, ಪೂರ್ವಾಹ್ನದಲ್ಲಿ ಕುದುರೆ, ಆನೆ, ದೊಡ್ಡ ಸರ್ಪ, ತಾವರೆ ಹೂವು ಅಥವಾ ಎಲೆ, ಹಸು, ಶ್ವೇತಛತ್ರ, ಎತ್ತು, ಇವುಗಳ ಮೇಲೆ ಖಂಜನ ಪಕ್ಷಿ ಕುಳಿತಿರುವುದನ್ನು ಯಾರಾದರೂ ನೋಡಿದರೆ ಅವನು ರಾಜನಾಗುತ್ತಾನೆ ಎಂದು ಒಂದು ನಂಬಿಕೆ. ಈ ನಂಬಿಕೆಯನ್ನು ಬಳಸಿ, ನಾಯಕನು ನಾಯಕಿಯ ಕಾಡಿಗೆ ಸವರಿದ ಸುಂದರ ಕಂಗಳನ್ನು ವರ್ಣಿಸುವಂತೆ ಈ ಮಾತನ್ನು ಹೇಳುತ್ತಾನೆ. ತಾವರೆ ಎಲೆಯ ಮೇಲೆ ಕುಳಿತಿರುವ ಒಂದು ಖಂಜನ ಪಕ್ಷಿಯನ್ನು ನೋಡಿದ ಮಾತ್ರಕ್ಕೆ ಒಬ್ಬನಿಗೆ ಚತುರಂಗಬಲದ ಅಧಿಪತ್ಯವೇ ದೊರೆಯುತ್ತದೆ, ಅಂದರೆ ಅವನು ರಾಜನಾಗುತ್ತಾನೆ ಎಂದರೆ, ನಿನ್ನ ಮುಖವೆಂಬ ಕಮಲದಲ್ಲಿ ಕುಳಿತಿರುವ ಕಣ್ಣುಗಳೆಂಬ ಎರಡು ಖಂಜನ ಪಕ್ಷಿಗಳನ್ನು ನೋಡಿದರೆ ನನಗೆ ಇನ್ನೇನಾಗಬಹುದೋ ಎಂದು ಅವನು ಉದ್ಗರಿಸುತ್ಣಾನೆ! ರಾಜತ್ವಕ್ಕಿಂತಲೂ ಹೆಚ್ಚಿನದಾದ ಅವಳ ಶೃಂಗಾರ ಸುಖ ದೊರೆತು ಬ್ರಹ್ಮಾಂಡದಂಥ ಆನಂದವೇ ದೊರೆಯಬಹುದು ಎಂದು ಅವನ ಅಭಿಪ್ರಾಯ! ಇಲ್ಲಿ ಹೆಣ್ಣಿನ ಮುಖವೇ ಕಮಲ ಪುಷ್ಪ ಮತ್ತು ಅವಳ ಕಂಗಳೇ ಖಂಜನ ಪಕ್ಷಿಗಳು ಎಂದಿರುವುದರಿಂದ ರೂಪಕಾಲಂಕಾರವಿದೆ. ಖಂಜನ ಪಕ್ಷಿಯನ್ನು ನೋಡಿದ ಮಾತ್ರಕ್ಕೆ ರಾಜನಾಗುವನು ಹಾಗೂ ಎರಡು ಖಂಜನ ಪಕ್ಷಿಗಳನ್ನು ನೋಡಿದರೆ ಇನ್ನೇನು ದೊಡ್ಡ ಫಲ ದೊರೆಯುತ್ತದೆಯೋ ಎನ್ನುತ್ತಾ, ಅಸಂಭವನೀಯವಾದುದನ್ನು ಸಂಭವನೀಯವೆನ್ನುವಂತೆ ಹೇಳಿರುವುದರಿಂದ ಅತಿಶಯೋಕ್ತಿ ಅಲಂಕಾರವಿದೆ.