ಭೋಜರಾಜ ಮತ್ತು ಕಾಳಿದಾಸರ ಕಥಾಪ್ರಸಂಗಗಳು ಜನಪ್ರಿಯವಾಗಿವೆ. ಇಂಥ ಕಥಾಪ್ರಸಂಗಗಳನ್ಧು ಬಲ್ಲಾಳಸೇನನೆಂಬ ಕವಿ ತನ್ನ ಭೋಜಪ್ರಬಂಧವೆಂಬ ಸ್ವಾರಸ್ಯಕರ ಸಂಸ್ಕೃತ ಗ್ರಂಥದಲ್ಲಿ ಸಂಕಲಿಸಿದ್ದಾನೆ. ಅಲ್ಲಿ ನಾವು ನೋಡುವಂತೆ, ಹೊರಗಿನಿಂದ ಬಂದ ಇತರ ಪಂಡಿತರು, ವಿದ್ವಾಂಸರಷ್ಟೇ ಅಲ್ಲದೇ ಸ್ವಯಂ ಭೋಜರಾಜನೇ ಅನೇಕ ಬಾರಿ ತನ್ನ ಆಸ್ಥಾನದ ಕವಿಗಳಿಗೆ ಒಗಟುಗಳನ್ನು, ಸಮಸ್ಯೆಗಳನ್ನು ಕೊಟ್ಟು ಪೂರೈಸಲು ಹೇಳುತ್ತಿದ್ದ. ಹೀಗೆಯೇ ಒಮ್ಮೆ ತನ್ನದೇ ಅನುಭವದಿಂದ ಒಂದು ಸಮಸ್ಯೆಯನ್ನು ಸಭೆಯಲ್ಲಿ ಹೇಳಿ ಕಾಳಿದಾಸನಿಗೆ ಅದನ್ನು ಪೂರೈಸಲು ಹೇಳಿದ. ಸಮಸ್ಯೆ ಹೀಗಿತ್ತು-
ಟಟಂಟಟಂಟಂಟಟಟಂಟಟಂಟಂ
ಇದು ಒಂದು ಸಂಸ್ಕೃತ ಶ್ಲೋಕದ ಒಂದು ಪಾದವಾಗಿ ಇರುವಂತೆ ಇತರ ಮೂರು ಪಾದಗಳನ್ನು ರಚಿಸಿ ಸಮಸ್ಯೆಯನ್ನು ಪೂರೈಸಬೇಕಿತ್ತು.
ಸಭಿಕರಿಗೆ ಹಾಗೂ ಇತರ ಕವಿಗಳಿಗೆ ದಿಗ್ಭ್ರಮೆಯಾಯಿತು! ಇದೆಂಥ ಸಮಸ್ಯೆ? ಇದನ್ನು ಹೇಗೆ ಪೂರೈಸಲು ಸಾಧ್ಯ? ಕಾಳಿದಾಸನಾದರೋ ಹೇಗೆ ಪೂರೈಸುತ್ತಾನೆ? ಇಂದಿಗೆ ಮುಗಿಯಿತು ಕಾಳಿದಾಸನ ಕಥೆ ಎನಿಸಿತು ಎಲ್ಲರಿಗೂ!
ಭೋಜರಾಜನು ತನ್ನ ಸ್ವಂತ ಅನುಭವದಿಂದಲೇ ಈ ಸಮಸ್ಯೆಯನ್ನು ಕೊಟ್ಟಿದ್ದ. ಅಂದು ಬೆಳಿಗ್ಗೆ ಅವನು ಒಂದು ಸರೋವರದಲ್ಲಿ ಸ್ನಾನ ಮಾಡುತ್ತಿದ್ದ. ಆಗ ಮೆಟ್ಟಿಲುಗಳ ಮೇಲೆ ನಿಂತು ನೋಡುತ್ತಿದ್ದ ಒಬ್ಬ ಮದಿರಾಕ್ಷಿ ಯುವತಿ, ಅವನ ರೂಪದಿಂದ ಮದನಪರವಶಳಾದಳು. ಅವಳು ನೀರು ತರಲು ಒಂದು ಚಿನ್ನದ ಬಿಂದಿಗೆ ತಂದಿದ್ದಳು. ರಾಜನನ್ನು ನೋಡುತ್ತಾ ಮೈಮರೆತ ಅವಳು ತಿಳಿಯದೆ ತನ್ನ ಕೈಯಿಂದ ಆ ಚಿನ್ನದ ಬಿಂದಿಗೆಯನ್ನು ಜಾರಿಬೀಳಿಸಿಕೊಂಡಳು! ಆಗ ಅದು ಮೆಟ್ಟಿಲುಗಳಿಂದ ಇಳಿಯುತ್ತಾ ಮಾಡಿದ ಶಬ್ದವೇ ಈ ಟಟಂ ಟಟಂ........
ಆ ಶಬ್ದವನ್ನೇ ಸಮಸ್ಯೆಯಾಗಿ ಕೊಟ್ಟಿದ್ದ ಭೋಜರಾಜ! ಆದರೆ ಇದನ್ನು ಕಾಳಿದಾಸನು ಹೇಗೆ ಪೂರೈಸಿಯಾನು? ಮಹಾಕವಿಯಲ್ಲವೇ? ಕೂಡಲೇ ಪೂರೈಸಿದ -
ರಾಜಾಭಿಷೇಕೇ ಮದವಿಹ್ವಲಾಯಾ
ಹಸ್ತಾಚ್ಚ್ಯುತೋ ಹೇಮಘಟೋ ಯುವತ್ಯಾ: /
ಸೋಪಾನಮಾರ್ಗೇಷು ಕರೋತಿ ಶಬ್ದಂ
ಟಟಂಟಟಂಟಂಟಟಟಂಟಟಂಟಮ್ //
' ರಾಜನು ಅಭಿಷೇಕ ( ಸ್ನಾನ) ಮಾಡಿಕೊಳ್ಳುತ್ತಿರಲು, ಯೌವನದ ಮದದಿಂದ ವಿಹ್ವಲಳಾದ ಯುವತಿ ನಿಂತು ನೋಡುತ್ತಿರಲು, ಅವಳ ಕೈಯಿಂದ ಜಾರಿ ಬಿದ್ದ ಬಂಗಾರದ ಬಿಂದಿಗೆ ಸೋಪಾನಮಾರ್ಗದಲ್ಲಿ ಇಳಿಯುತ್ತಾ ಮಾಡಿತು ಶಬ್ದ -ಟಟಂಟಟಂಟಂಟಟಟಂಟಟಂಟಂ'
ಕಾಳಿದಾಸನು ಘಟನೆಯನ್ನು ನೋಡದೆಯೂ ತನ್ನ ಮನಸ್ಸಿನಲ್ಲಿದ್ದುದನ್ನು ಊಹಿಸಿ ಸಮಸ್ಯೆಯನ್ನು ಪೂರೈಸಿದುದನ್ನು ನೋಡಿ ಭೋಜರಾಜನು ಸುಪ್ರೀತನಾಗಿ ಅವನಿಗೆ ಒಂದೊಂದು ಅಕ್ಷರಕ್ಕೂ ಒಂದೊಂದು ಲಕ್ಷ ಹಣ ಕೊಟ್ಟು ಸನ್ಮಾನಿಸಿದನು.
ಭೋಜಪ್ರಬಂಧದಲ್ಲಿ ಇಂಥ ಹಲವಾರು ಸ್ವಾರಸ್ಯಕರ ಪ್ರಸಂಗಗಳಿವೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ