ಆಯಾತಾ ಮಧುಯಾಮಿನೀ ಯದಿ ಪುನರ್ನಾಯಾತಿ ಏವ ಪ್ರಭು:
ಪ್ರಾಣಾ: ಯಾಂತು ವಿಭಾವಸೌ ಯದಿ ಪುನರ್ಜನ್ಮಗ್ರಹಂ ಪ್ರಾರ್ಥಯೇ ।
ವ್ಯಾಧ: ಕೋಕಿಲಬಂಧನೇ ವಿಧುಪುರಿಧ್ವಂಸೇ ರಾಹುಗ್ರಹ:
ಕಂದರ್ಪೇ ಹರನಯನದೀಧಿತಿರಿಯಂ ಪ್ರಾಣೇಶ್ವರೇ ಮನ್ಮಥ: ।।
ಕನ್ನಡ ಅನುವಾದ
"ಮಧುಮಾಸದ ರಾತ್ರಿಯು ಬಂದಿದೆ! ನನ್ನ ಪ್ರಭು ಈಗಲೂ ಬರದಿದ್ದರೆ ನನ್ನ ಪ್ರಾಣಗಳು ಅಗ್ನಿಯಲ್ಲಿ ದಗ್ಧವಾಗಿಹೋಗಲಿ! ಒಂದು ವೇಳೆ ಪುನರ್ಜನ್ಮ ಪ್ರಾಪ್ತವಾದರೆ ನಾನೊಬ್ಬ ವ್ಯಾಧನಾಗುವಂತೆ ಪ್ರಾರ್ಥಿಸುತ್ತೇನೆ! ಆಗ ನಾನು ಕೋಗಿಲೆಯನ್ನು ಬಂಧನದಲ್ಲಿರಿಸಬಹುದು! ಅಥವಾ ರಾಹುಗ್ರಹವಾಗುವಂತೆ ಪ್ರಾರ್ಥಿಸುತ್ತೇನೆ! ಆಗ ಚಂದ್ರಮಂಡಲವನ್ನು ನಾಶಮಾಡಬಹುದು! ಇಲ್ಲವೇ ಹರನ ಮೂರನೆಯ ಕಣ್ಣಿನ ಅಗ್ನಿಯಾಗುವಂತೆ ಪ್ರಾರ್ಥಿಸುತ್ತೇನೆ! ಆಗ ಕಂದರ್ಪನನ್ನು ಭಸ್ಮ ಮಾಡಬಹುದು! ಅಥವಾ ನಾನು ಮನ್ಮಥನಾಗುವಂತೆ ಪ್ರಾರ್ಥಿಸುತ್ತೇನೆ! ಆಗ ನನ್ನ ಪ್ರಾಣೇಶ್ವರನನ್ನು ಉದ್ವಿಗ್ನಗೊಳಿಸಬಹುದು!"
ಇಲ್ಲಿ ನಾಯಕನು ಕಾರಣಾಂತರಗಳಿಂದ ಎಲ್ಲೋ ಪ್ರವಾಸಕ್ಕೆ ಹೋಗಿ ಬಹಳ ಕಾಲವಾದರೂ ಬಂದಿಲ್ಲ. ಈಗ ಮಧುಮಾಸ ಅಥವಾ ವಸಂತಕಾಲ ಬಂದಿದೆ. ಆ ಮಧುಮಾಸದ ಸುಂದರವಾದ ರಾತ್ರಿಯೂ ಬಂದಿದೆ. ತನ್ನ ಪ್ರಿಯತಮನ ವಿರಹದಲ್ಲಿರುವ ನಾಯಕಿ, ಈಗಲೂ ಪ್ರಿಯತಮನು ಬರದಿದ್ದರೆ ತನ್ನ ಪ್ರಾಣಗಳು ಅಗ್ನಿಯಲ್ಲಿ ದಗ್ಧವಾಗಿಹೋಗಲಿ ಎನ್ನುತ್ತಿದ್ದಾಳೆ! ಒಂದು ವೇಳೆ, ಪುನರ್ಜನ್ಮ ಪ್ರಾಪ್ತವಾದರೆ, ಅವಳು ಒಬ್ಬ ವ್ಯಾಧನಾಗುವಂತೆ ಪ್ರಾರ್ಥಿಸುತ್ತಿದ್ದಾಳೆ. ಏಕೆಂದರೆ, ಹಾಡುವುದರಿಂದ ವಿರಹವೇದನೆ ಹೆಚ್ಚಿಸುವ ಕೋಗಿಲೆಯನ್ನು ಹಿಡಿದು ಬಂಧಿಸಬಹುದೆಂದು! ಅಥವಾ ರಾಹುಗ್ರಹವಾಗಬೇಕೆಂದು ಬಯಸುತ್ತಾಳೆ! ಇದರಿಂದ ವಿರಹವೇದನೆ ಹೆಚ್ಚಿಸುವ ಸುಂದರವಾದ ಚಂದ್ರನನ್ನು ಗ್ರಹಣದಿಂದ ನುಂಗಿ ನಾಶಮಾಡಲೆಂದು! ಇಲ್ಲವೇ ಶಿವನ ಮೂರನೆಯ ಕಣ್ಣಿನ ಅಗ್ನಿಯಾಗಲೆಂದು ಆಶಿಸುತ್ತಾಳೆ. ಆಗ ಹೂಬಾಣಗಳನ್ನು ಬಿಟ್ಟು ಕಾಮವೇದನೆಯನ್ನು ಹೆಚ್ಚಿಸುವ ಮನ್ಮಥನನ್ನು ಸುಟ್ಟುಹಾಕಲೆಂದು! ಕೊನೆಗೆ ಮನ್ಮಥನೇ ಆಗಬೇಕೆಂದು ಬಯಸುತ್ತಾಳೆ. ಆಗ, ತನ್ನ ಪ್ರಾಣೇಶ್ವರನು ಹೇಗೆ ತನ್ನಿಂದ ದೂರಾಗಿ ಮನ್ಮಥನ ಮೂಲಕ ತನಗೆ ಕಾಮಬಾಧೆ ಹೆಚ್ಚಿಸುತ್ತಿರುವನೋ ಹಾಗೆಯೇ ತಾನೇ ಮನ್ಮಥನಾಗಿ ಆ ಕಾಮಬಾಧೆಯ ಪರಿಚಯ ಅವನಿಗೆ ಮಾಡಿಸಲೆಂದು! ಹೀಗೆ ತನಗೆ ವಿರಹವೇದನೆ ಹಚ್ಚಿಸುತ್ತಿರುವ ಈ ನಾಲ್ವರ ಮೇಲೂ ಪುನರ್ಜನ್ಮದಲ್ಲಿ ಸೇಡು ತೀರಿಸಿಕೊಳ್ಳಲು ಅವಳು ಆಶಿಸುತ್ತಿದ್ದಾಳೆ!
ಸಂಸ್ಕೃತ ಕವಿಗಳ ಸ್ವಾರಸ್ಯವೆಂದರೆ, ಪ್ರಕೃತಿಯ ಮತ್ತು ಪೌರಾಣಿಕ ವಿದ್ಯಮಾನಗಳನ್ನು ಪದ್ಯಗಳಲ್ಲಿ ಬಳಸಿಕೊಂಡು ಪದ್ಯದ ಮೆರುಗು ಹೆಚ್ಚಿಸುವುದು.
ಇಲ್ಲಿ ಅಸಂಭವವಾದ ವಿಚಾರಗಳನ್ನು ಸಂಭವನೀಯವೆಂಬಂತೆ ಹೇಳಿರುವುದರಿಂದ ಅತಿಶಯೋಕ್ತಿ ಅಲಂಕಾರವಿದೆ.