ಅಶ್ರುಪ್ಲುತಮತಿಕಾತರಮನಿಮಿಷಮಸ್ಪಂದತಾರಕಂ ತಸ್ಯಾ: /
ಲೋಚನಯುಗಲಂ ಸ್ಮರತ: ಸ್ಮರತೋ ಮಮ ಕೇವಲಂ ಭೀತಿ: //
ಕನ್ನಡ ಅನುವಾದ
' ಅಶ್ರುಗಳಿಂದ ತುಂಬಿ, ಬಹಳ ಭಯಗೊಂಡ, ರೆಪ್ಪೆ ಮಿಟುಕಿಸದ, ಪಾಪೆಗಳು ಸ್ಪಂದಿಸದೆ ಸ್ಥಿರವಾಗಿರುವ ಆ ನನ್ನ ಪ್ರಿಯತಮೆಯ ಕಂಗಳನ್ನು ಸ್ಮರಿಸುತ್ತಾ ನನಗೆ ಕೇವಲ ಭಯವಾಗುತ್ತಿದೆ!'
ಇಲ್ಲಿ ಕವಿಯು ಇನ್ನೊಂದು ವಿರಹ ಶೃಂಗಾರದ ಪದ್ಯ ರಚಿಸಿದ್ದಾನೆ. ನಾಯಕನು ತಾನು ತನ್ನ ಪ್ರಿಯತಮೆಯನ್ನು ಬಿಟ್ಟು ಪ್ರಯಾಣ ಹೊರಟಾಗ ಅವಳಿದ್ದ ಸ್ಥಿತಿಯನ್ನು ಮತ್ತೆ ಮತ್ತೆ ನೆನಪಿಸಿಕೊಂಡು ಭಯಪಡುತ್ತಿದ್ದಾನೆ. ಅವಳ ಆತಂಕ ಮತ್ತು ವಿರಹದ ಸ್ಥಿತಿಯನ್ನು ಅವಳ ಕಂಗಳಲ್ಲೇ ಚಿತ್ರಿಸಿದ್ದಾನೆ. ಅವಳ ಕಂಗಳು ಅಶ್ರುಗಳಿಂದ ತುಂಬಿವೆ. ಅವು ಬಹಳ ಭಯದಿಂದ ಕೂಡಿವೆ. ಕಣ್ರೆಪ್ಪೆಗಳು ಮಿಟುಕಿಸದೆ ಅವಳು ಒಂದೇ ಸಮನೆ ನಾಯಕನನ್ನು ದಿಟ್ಟಿಸುತ್ತಿದ್ದಾಳೆ. ಅವಳ ಕಣ್ಣುಗಳ ಪಾಪೆಗಳು ಸ್ಪಂದಿಸದೆ ಸ್ಥಿರವಾಗಿವೆ! ಹೀಗೆ ಕಣ್ಣಲ್ಲೇ ಅವಳ ಭಾವನೆಗಳನ್ನು ಕವಿಯು ಅದ್ಭುತವಾಗಿ ಸೆರೆಹಿಡಿದಿದ್ದಾನೆ! ಇಂಥ ಸ್ಥಿತಿಯಲ್ಲಿ ನಾಯಕನು ಅವಳನ್ನು ಬಿಟ್ಟು ಬಂದಿದ್ದಾನೆ. ಅದನ್ನು ಮತ್ತೆ ಮತ್ತೆ ನೆನೆದು ಅವಳ ಬಗ್ಗೆ ಅವನಿಗೆ ಭಯವಾಗುತ್ತಿದೆ! ವಿರಹದಲ್ಲಿ ಅವಳಿಗೆ ಏನಾಗುವುದೋ ಎಂದು ಅವನಿಗೆ ಭಯವಾಗುತ್ತಿದೆ. ಇದನ್ನು ಅವನೇ ಹೇಳುತ್ತಿದ್ದಾನೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ