ಗುರುವಾರ, ಸೆಪ್ಟೆಂಬರ್ 3, 2026

ಸುಂದರೀಶತಕ -೮೮

ಸಂಸ್ಕೃತ ಮೂಲ 

ದೋರಾಂದೋಲನಸುಭಗಂ ನಿತಂಬಭರಮಂಥರಾಂಘ್ರಿವಿನ್ಯಾಸಮ್ ।
ತವ ಗಜಗಾಮಿನಿ ಗಮನಂ ಕುರುತೇ ಯತಿಚಿತ್ತಸಂಯಮನಮ್ ।।

ಕನ್ನಡ ಅನುವಾದ 

    'ಎಲೈ ಗಜಗಾಮಿನಿ! ಸೊಗಸಾಗಿ ಆಡುವ ನಿನ್ನ ತೋಳುಗಳು, ಭಾರವಾದ ನಿನ್ನ ನಿತಂಬಗಳಿಂದ ನಿಧಾನವಾದ ನಿನ್ನ ಹೆಜ್ಜೆಗಳ ವಿನ್ಯಾಸ, ಇವುಗಳಿಂದ ಕೂಡಿದ ನಿನ್ನ ನಡಿಗೆ, ಯತಿಗಳ ಚಿತ್ತದಲ್ಲೂ ಸಂಯಮವನ್ನುಂಟುಮಾಡುತ್ತದೆ ( ವ್ಯಂಗ್ಯಾರ್ಥದಲ್ಲಿ ಸಂಯಮವನ್ನು ಶಿಥಿಲಗೊಳಿಸುತ್ತದೆ)!' 
    ಇಲ್ಲಿ ಕವಿಯು ಹೆಣ್ಣಿನ ನಿಧಾನವಾದ ನಡಿಗೆಯನ್ನು ವರ್ಣಿಸುತ್ತಾ ಅದನ್ನು ಆನೆಯ ನಡಿಗೆಗೆ ಹೋಲಿಸುತ್ತಾ ಅವಳನ್ನು ಗಜಗಾಮಿನಿ ಎಂದು ಕರೆದಿದ್ದಾನೆ! ಸುಂದರವಾಗಿ ಆಡುವ ತೋಳುಗಳು, ಭಾರವಾದ ನಿತಂಬಗಳಿಂದ ನಿಧಾನವಾದ ಅವಳ ಹೆಜ್ಜೆಗಳ ವಿನ್ಯಾಸ, ಅವಳ ನಡಿಗೆಯನ್ನು ಸುಂದರಗೊಳಿಸುವೆ! ಅದು ಯತಿಗಳ ಚಿತ್ತದ ಸಂಯಮವನ್ನೂ ಶಿಥಿಲಗೊಳಿಸುತ್ತದೆ! ಇಲ್ಲಿ 'ಕುರುತೇ ಯತಿಚಿತ್ತಸಂಯಮನಂ' ಎಂದಿದೆ.‌ ಅಂದರೆ ಯತಿಚಿತ್ತದಲ್ಲಿ ಸಂಯಮವುಂಟುಮಾಡುತ್ತದೆ ಎಂದು ಅರ್ಥ ಬರುತ್ತದೆ. ಆದರೆ ಅದು ವ್ಯಂಗ್ಯಾರ್ಥದಲ್ಲಿ ಹೇಳಲಾಗಿದೆ. ಅಥವಾ ಹೆಣ್ಣಿನ ವಿಷಯದಲ್ಲಿ ಮನಸ್ಸನ್ನು ಮುಳುಗಿಸಿ ಅವಳಲ್ಲಿ ಚಲಿಸದಂತೆ ಸಂಯಮವುಂಟುಮಾಡುತ್ತದೆ ಎಂದು ತೆಗೆದುಕೊಳ್ಳಬಹುದು.‌ ಅಂದರೆ ಅವರ ಆಧ್ಯಾತ್ಮಿಕ ಭಾವ ಹಾಗೂ ತಪಸ್ಸು ಶಿಥಿಲಗೊಳ್ಳುತ್ತದೆ. ಹೆಣ್ಣಿನ ಸೌಂದರ್ಯ, ಸುಂದರವಾಗಿರುವುದರಲ್ಲೆಲ್ಲಾ ಅತ್ಯಂತ ಸುಂದರವಾದುದೆಂಬುದರಲ್ಲಿ ಯಾವ ಸಂದೇಹವೂ ಇಲ್ಲ! ಅದು ಯತಿಗಳ ಮನಸ್ಸನ್ನೂ ಸೆಳೆಯುತ್ತದೆ! ಪುರಾಣಗಳಲ್ಲಿ ನಾವು ನೋಡುವಂತೆ ವಿಶ್ವಾಮಿತ್ರರು ಬ್ರಹ್ಮರ್ಷಿಯಾಗಲು ತಪಸ್ಸು ಮಾಡುತ್ತಿರಲು, ಅದು ತನ್ನ ಪದವಿಗಾಗಿ ಎಂದು ತಿಳಿದ ಇಂದ್ರನು ಅವರ ತಪಸ್ಸನ್ನು ಕೆಡಿಸಲು ಮೇನಕೆಯೆಂಬ ಅಪ್ಸರೆಯನ್ನು ಕಳಿಸಲು, ಅವಳ ಸೌಂದರ್ಯಕ್ಕೆ ಮನಸೋತ ವಿಶ್ವಾಮಿತ್ರರು ಅವಳೊಂದಿಗೆ ಹತ್ತು ವರ್ಷಗಳ ಕಾಲ ಪ್ರೇಮದಲ್ಲಿ ಕಳೆದು ಶಕುಂತಲೆಯ ಜನ್ಮಕ್ಕೆ ಕಾರಣರಾದರು. ಅಂತೆಯೇ ತಪಸ್ಸು ಮಾಡುತ್ತಿದ್ದ ಕಂಡು ಮಹರ್ಷಿಗಳು, ಇಂದ್ರನು ಕಳಿಸಿದ ಪ್ರಮ್ಲೋಚೆಯೆಂಬ ಅಪ್ಸರೆಯೊಂದಿಗೆ ಅನೇಕ ವರ್ಷಗಳನ್ನು ಒಂದೇ ದಿನವೆಂಬಂತೆ ಕಳೆದು ಮಾರಿಷೆ ಎಂಬ ಕನ್ಯೆಯ ಜನ್ಮಕ್ಕೆ ಕಾರಣರಾದರು! ಹಾಗೆಯೇ ಪರಾಶರರು ಬೆಸ್ತರ ಕನ್ಯೆ ಸತ್ಯವತಿಯೊಂದಿಗೆ ಸೇರಿ ವೇದವ್ಯಾಸರ ಜನ್ಮಕ್ಕೆ ಕಾರಣರಾದರು! ವೇದವ್ಯಾಸರೂ ಘೃತಾಚಿಯೆಂಬ ಅಪ್ಸರೆಗೆ ಮನಸೋತು ಶುಕ ಮಹರ್ಷಿಗಳ ಜನ್ಮಕ್ಕೆ ಕಾರಣರಾದರು! ಹೀಗೆ ಹೆಣ್ಣಿನ ಮೋಹ, ಋಷಿಮುನಿಗಳನ್ನೂ ಬಿಟ್ಟಿಲ್ಲ! ಅದನ್ನು ಹೇಳುತ್ತಾ ಕವಿಯು ಇಲ್ಲಿ ಹೆಣ್ಣಿನ ಸುಂದರ ನಡಿಗೆಯನ್ನು ಬಣ್ಣಿಸಿದ್ದಾನೆ.

ಸುಂದರೀಶತಕ -೮೭

ಸಂಸ್ಕೃತ ಮೂಲ 

ಪ್ರಾತ: ಪೃಚ್ಛತಿ ನಿಭೃತಂ ಸಖೀಜನೇ ರಜನಿಕೇಲಿವೃತ್ತಾಂತಮ್ ।
ಮಂದಸ್ಮಿತಾದಜಾಯತ ರಹಸ್ಯಭೇದ: ಸರೋಜಾಕ್ಷ್ಯಾ: ।।

ಕನ್ನಡ ಅನುವಾದ 

    'ಬೆಳಗಾಗಲು, ಸಖಿಯರು ಆ ಸರೋಜಾಕ್ಷಿಯನ್ನು ರಾತ್ರಿಯ ರತಿಕ್ರೀಡೆಯ ವೃತ್ತಾಂತವನ್ನು ಏಕಾಂತದಲ್ಲಿ ಕೇಳಲು, ಅವಳು ಮೆಲ್ಲನೆ ನಕ್ಕಳು! ಅವಳ ಆ ಮಂದಹಾಸದಿಂದ ಅವಳ ರಹಸ್ಯ ಪ್ರಕಟವಾಯಿತು!'
     ಕೆಲವೊಮ್ಮೆ ದೀರ್ಘ ವರ್ಣನೆಗಳಿಗಿಂತ ಒಂದು ಸಣ್ಣ ಕ್ರಿಯೆಯಿಂದ ಅಥವಾ ಚಿಹ್ನೆಯಿಂದ ಎಷ್ಟೋ ವಿಷಯಗಳನ್ನು ಹೇಳಿದಂತಾಗುತ್ತದೆ. ಇಲ್ಲಿ ಒಬ್ಬ ನವವಧು ಬೆಳಿಗ್ಗೆ ಆಗಷ್ಟೇ ನಿದ್ರೆಯಿಂದ ಎದ್ದಿದ್ದಾಳೆ. ಆಗ ಅವಳ ಸಖಿಯರು ಓಡಿಬಂದು ಏಕಾಂತದಲ್ಲಿ ರಾತ್ರಿ ಅವಳ ಪತಿಯೊಂದಿಗೆ ರತಿಕ್ರೀಡೆ ಹೇಗಿತ್ತೆಂದು ಕುತೂಹಲದಿಂದಲೂ ತುಂಟತನದಿಂದಲೂ ಕೇಳಿದ್ದಾರೆ. ಅವಳು ಹೇಗೆ ತಾನೇ ಹೇಳಿಯಾಳು? ಹಾಗಾಗಿ ನಾಚಿಕೊಂಡು ಮೆಲ್ಲನೆ ನಕ್ಕಿದ್ದಾಳೆ! ಅವಳ ಆ ಮೆಲುನಗೆಯೇ ಅವಳ ರಹಸ್ಯಸ್ಫೋಟ ಮಾಡಿದೆ! ಅಷ್ಟರಿಂದಲೇ ರಾತ್ರಿಯ ರತಿಕ್ರೀಡೆ ಹೇಗಿತ್ತೆಂದು ಅವರಿಗೆ ತಿಳಿದಿದೆ! ಕವಿಯು ಈ ಸೂಕ್ಷ್ಮ ವಿಚಾರವನ್ನು ಅದೆಷ್ಟು ಸೊಗಸಾಗಿ, ಶೃಂಗಾರಮಯವಾಗಿ ತೋರಿಸಿದ್ದಾನೆ! 

ಸುಂದರೀಶತಕ -೮೬

ಸಂಸ್ಕೃತ ಮೂಲ 

ಸಂಸ್ಪೃಷ್ಟಪದ್ಮಿನೀಕೋ ಯಥಾ ಯಥಾರ್ಕ: ಕರಾನ್ಪ್ರಸಾರಯತಿ ।
ಸುಂದರಿ ಮಾನವತೀಯಂ ಸಂಕುಚತಿ ತಥಾ ತಥಾ ಛಾಯಾ ।।

ಕನ್ನಡ ಅನುವಾದ 

    ಕವಿಯು ಇಲ್ಲಿ ಒಂದು ಸುಂದರ ಶೃಂಗಾರ ಪ್ರಸಂಗವನ್ನು ಶ್ಲೇಷದ ಮೂಲಕ ಎರಡು ರೀತಿಗಳಲ್ಲಿ ನಾಯಕನಿಂದ ಹೇಳಿಸುತ್ತಿದ್ದಾನೆ -
   ಕಮಲದ ಪಕ್ಷದಲ್ಲಿ," ಎಲೈ ಸುಂದರಿ! ಸೂರ್ಯನು ಹೇಗೆ ಹೇಗೆ ತನ್ನ ಕರಕಿರಣಗಳನ್ನು ಚಾಚಿ ಕಮಲವನ್ನು ಸ್ಪರ್ಶಿಸುವನೋ, ಹಾಗೆ ಹಾಗೆ ಆ ಕಮಲದ ನೆರಳು ಸಂಕುಚಿತಗೊಳ್ಳುತ್ತದೆ ( ಚಿಕ್ಕದಾಗುತ್ತದೆ)!" 
   ನಾಯಕಿಯ ಪಕ್ಷದಲ್ಲಿ," ಎಲೈ ಸುಂದರಿ! ಈ ಪ್ರಿಯತಮನು ಹೇಗೆ ಹೇಗೆ ತನ್ನ ಕರಗಳಿಂದ ತನ್ನ ಪ್ರಿಯೆಯನ್ನು ಸ್ಪರ್ಶಿಸುವನೋ, ಕೋಪಗೊಂಡಿದ್ದ ಅವಳ ಕೋಪ ಹಾಗೆ ಹಾಗೆ ಕರಗುತ್ತದೆ!" 
    ಇಲ್ಲಿ ನಾಯಕಿಯು ಯಾವುದೋ ಕಾರಣಕ್ಕೆ ಕೋಪಗೊಂಡಿದ್ದಾಳೆ. ನಾಯಕನು ಅವಳನ್ನು ಸಮಾಧಾನ ಮಾಡುವಂತೆ ಮೆಲ್ಲನೆ ಸ್ಪರ್ಶಿಸಿದಂತೆಲ್ಲಾ ಅವಳ ಕೋಪ ಕರಗುತ್ತದೆ. ಅದನ್ನು ಅವನು ಸೂರ್ಯ ಮತ್ತು ಕಮಲದ ದೃಷ್ಟಾಂತದಿಂದ ಅವಳಿಗೆ ಹೇಳುತ್ತಾನೆ. ಅದು ಮೇಲ್ನೋಟಕ್ಕೆ ಸೂರ್ಯ ಮತ್ತು ಕಮಲಗಳ ಪದ್ಯದಂತೆ ಕಂಡರೂ ಶ್ಲೇಷ ಅಥವಾ ಇನ್ನೊಂದು ಅರ್ಥದಲ್ಲಿ ತನ್ನ ಮತ್ತು ನಾಯಕಿಯ ಶೃಂಗಾರ ಪ್ರಸಂಗವನ್ನು ಹೇಳುತ್ತದೆ. ಸೂರ್ಯನು ಕಮಲವನ್ನು ಹೇಗೆ ಹೇಗೆ ತನ್ನ ಕರಕಿರಣಗಳನ್ನು ಚಾಚಿ ಕಮಲವನ್ನು ಸ್ಪರ್ಶಿಸುವನೋ ಹಾಗೆ ಹಾಗೆ ಅದರ ನೆರಳು ಸಂಕೋಚಗೊಳ್ಳುತ್ತದೆ. ಅಂದರೆ ಸೂರ್ಯನು ಆಕಾಶದ ಮಧ್ಯಕ್ಕೆ ಬರುತ್ತಾ ಅವನ ಕಿರಣಗಳು ಕಮಲವನ್ನು ಹೇಗೆ ಸ್ವರ್ಷಿಸುವವೋ ಹಾಗೆಯೇ ಕಮಲದ ನೆರಳು ಚಿಕ್ಕದಾಗುತ್ತದೆ. ನಾಯಕಿಯ ಪಕ್ಷದಲ್ಲಿ, ನಾಯಕನೇ ಸೂರ್ಯ. ಮಾನಿನಿ ಅಥವಾ ಕುಪಿತಳಾಗಿದ್ದ ತನ್ನ ಪ್ರಿಯತಮೆಯೇ ಕಮಲ. ಅವನು ತನ್ನ ಕರಗಳಿಂದ ( ಕಿರಣಗಳು) ಅವಳನ್ನು ಸ್ಪರ್ಶಿಸಿದಂತೆ ಅವಳ ಛಾಯೆ, ಅಂದರೆ ಕೋಪ, ಸಂಕೋಚಗೊಳ್ಳುತ್ತದೆ, ಅಂದರೆ ಕರಗುತ್ತದೆ. ಅವಳು ನಿಧಾನವಾಗಿ ಕೋಪದಿಂದ ಪ್ರೀತಿಯ ಭಾವಕ್ಕೆ ತಿರುಗುತ್ತಾಳೆ. ಇದನ್ನು ಹೇ ಸುಂದರಿ ಎನ್ನುತ್ತಾ ಅವನೇ ಅವಳಿಗೆ ಸೂರ್ಯ,ಕಮಲಗಳ ಘಟನೆಯಂತೆ ಹೇಳುತ್ತಾನೆ. ಹೀಗೆ ಶ್ಲೇಷ ಅಥವಾ ಎರಡು ಅರ್ಥಗಳು ಬರುವ ಪದ್ಯವಾದುದರಿಂದ ಇಲ್ಲಿ ಶ್ಲೇಷಾಲಂಕಾರವಿದೆ.