ಶನಿವಾರ, ಜುಲೈ 4, 2026

ಭೋಜರಾಜನ ಸಮಸ್ಯೆ

ಭೋಜರಾಜ ಮತ್ತು ಕಾಳಿದಾಸರ ಕಥಾಪ್ರಸಂಗಗಳು ಜನಪ್ರಿಯವಾಗಿವೆ. ಇಂಥ ಕಥಾಪ್ರಸಂಗಗಳನ್ಧು ಬಲ್ಲಾಳಸೇನನೆಂಬ ಕವಿ ತನ್ನ ಭೋಜಪ್ರಬಂಧವೆಂಬ ಸ್ವಾರಸ್ಯಕರ ಸಂಸ್ಕೃತ ಗ್ರಂಥದಲ್ಲಿ ಸಂಕಲಿಸಿದ್ದಾನೆ.‌ ಅಲ್ಲಿ ನಾವು ನೋಡುವಂತೆ, ಹೊರಗಿನಿಂದ ಬಂದ ಇತರ ಪಂಡಿತರು, ವಿದ್ವಾಂಸರಷ್ಟೇ ಅಲ್ಲದೇ ಸ್ವಯಂ ಭೋಜರಾಜನೇ ಅನೇಕ ಬಾರಿ ತನ್ನ ಆಸ್ಥಾನದ ಕವಿಗಳಿಗೆ ಒಗಟುಗಳನ್ನು, ಸಮಸ್ಯೆಗಳನ್ನು ಕೊಟ್ಟು ಪೂರೈಸಲು ಹೇಳುತ್ತಿದ್ದ. ಹೀಗೆಯೇ ಒಮ್ಮೆ ತನ್ನದೇ ಅನುಭವದಿಂದ ಒಂದು ಸಮಸ್ಯೆಯನ್ನು ಸಭೆಯಲ್ಲಿ ಹೇಳಿ ಕಾಳಿದಾಸನಿಗೆ ಅದನ್ನು ಪೂರೈಸಲು ಹೇಳಿದ. ಸಮಸ್ಯೆ ಹೀಗಿತ್ತು-
ಟಟಂಟಟಂಟಂಟಟಟಂಟಟಂಟಂ 
ಇದು ಒಂದು ಸಂಸ್ಕೃತ ಶ್ಲೋಕದ ಒಂದು ಪಾದವಾಗಿ ಇರುವಂತೆ ಇತರ ಮೂರು ಪಾದಗಳನ್ನು ರಚಿಸಿ ಸಮಸ್ಯೆಯನ್ನು ಪೂರೈಸಬೇಕಿತ್ತು. 
ಸಭಿಕರಿಗೆ ಹಾಗೂ ಇತರ ಕವಿಗಳಿಗೆ ದಿಗ್ಭ್ರಮೆಯಾಯಿತು! ಇದೆಂಥ ಸಮಸ್ಯೆ? ಇದನ್ನು ಹೇಗೆ ಪೂರೈಸಲು ಸಾಧ್ಯ? ಕಾಳಿದಾಸನಾದರೋ ಹೇಗೆ ಪೂರೈಸುತ್ತಾನೆ? ಇಂದಿಗೆ ಮುಗಿಯಿತು ಕಾಳಿದಾಸನ ಕಥೆ ಎನಿಸಿತು ಎಲ್ಲರಿಗೂ! 
    ಭೋಜರಾಜನು ತನ್ನ ಸ್ವಂತ ಅನುಭವದಿಂದಲೇ ಈ ಸಮಸ್ಯೆಯನ್ನು ಕೊಟ್ಟಿದ್ದ. ಅಂದು ಬೆಳಿಗ್ಗೆ ಅವನು ಒಂದು ಸರೋವರದಲ್ಲಿ ಸ್ನಾನ ಮಾಡುತ್ತಿದ್ದ. ಆಗ ಮೆಟ್ಟಿಲುಗಳ ಮೇಲೆ ನಿಂತು ನೋಡುತ್ತಿದ್ದ ಒಬ್ಬ ಮದಿರಾಕ್ಷಿ ಯುವತಿ, ಅವನ ರೂಪದಿಂದ ಮದನಪರವಶಳಾದಳು. ಅವಳು ನೀರು ತರಲು ಒಂದು ಚಿನ್ನದ ಬಿಂದಿಗೆ ತಂದಿದ್ದಳು. ರಾಜನನ್ನು ನೋಡುತ್ತಾ ಮೈಮರೆತ ಅವಳು ತಿಳಿಯದೆ ತನ್ನ ಕೈಯಿಂದ ಆ ಚಿನ್ನದ ಬಿಂದಿಗೆಯನ್ನು ಜಾರಿಬೀಳಿಸಿಕೊಂಡಳು! ಆಗ ಅದು ಮೆಟ್ಟಿಲುಗಳಿಂದ ಇಳಿಯುತ್ತಾ ಮಾಡಿದ ಶಬ್ದವೇ ಈ ಟಟಂ ಟಟಂ........
     ಆ ಶಬ್ದವನ್ನೇ ಸಮಸ್ಯೆಯಾಗಿ ಕೊಟ್ಟಿದ್ದ ಭೋಜರಾಜ! ಆದರೆ ಇದನ್ನು ಕಾಳಿದಾಸನು ಹೇಗೆ ಪೂರೈಸಿಯಾನು? ಮಹಾಕವಿಯಲ್ಲವೇ? ಕೂಡಲೇ ಪೂರೈಸಿದ -
     ರಾಜಾಭಿಷೇಕೇ ಮದವಿಹ್ವಲಾಯಾ 
     ಹಸ್ತಾಚ್ಚ್ಯುತೋ ಹೇಮಘಟೋ ಯುವತ್ಯಾ:  /
     ಸೋಪಾನಮಾರ್ಗೇಷು ಕರೋತಿ ಶಬ್ದಂ 
     ಟಟಂಟಟಂಟಂಟಟಟಂಟಟಂಟಮ್ //
     ' ರಾಜನು ಅಭಿಷೇಕ ( ಸ್ನಾನ) ಮಾಡಿಕೊಳ್ಳುತ್ತಿರಲು, ಯೌವನದ ಮದದಿಂದ ವಿಹ್ವಲಳಾದ ಯುವತಿ ನಿಂತು ನೋಡುತ್ತಿರಲು, ಅವಳ ಕೈಯಿಂದ ಜಾರಿ ಬಿದ್ದ ಬಂಗಾರದ ಬಿಂದಿಗೆ ಸೋಪಾನಮಾರ್ಗದಲ್ಲಿ ಇಳಿಯುತ್ತಾ ಮಾಡಿತು ಶಬ್ದ -ಟಟಂಟಟಂಟಂಟಟಟಂಟಟಂಟಂ' 
      ಕಾಳಿದಾಸನು ಘಟನೆಯನ್ನು ನೋಡದೆಯೂ ತನ್ನ ಮನಸ್ಸಿನಲ್ಲಿದ್ದುದನ್ನು ಊಹಿಸಿ ಸಮಸ್ಯೆಯನ್ನು ಪೂರೈಸಿದುದನ್ನು ನೋಡಿ ಭೋಜರಾಜನು ಸುಪ್ರೀತನಾಗಿ ಅವನಿಗೆ ಒಂದೊಂದು ಅಕ್ಷರಕ್ಕೂ ಒಂದೊಂದು ಲಕ್ಷ ಹಣ ಕೊಟ್ಟು ಸನ್ಮಾನಿಸಿದನು.
      ಭೋಜಪ್ರಬಂಧದಲ್ಲಿ ಇಂಥ ಹಲವಾರು ಸ್ವಾರಸ್ಯಕರ ಪ್ರಸಂಗಗಳಿವೆ.

ಗುರುವಾರ, ಜುಲೈ 2, 2026

ಸುಂದರೀಶತಕ -೫೯

ಸಂಸ್ಕೃತ ಮೂಲ 

ವಿರಹಾರ್ತಿದಲನಮೌಷಧಮೇಕಂ ಚೇಷ್ಟಾಸು ತಾಸು ತಾದಾತ್ಮ್ಯಮ್ /
ಸುಂದರಿ ಯಸ್ಮಿಞ್ಜಾತೇ ಬ್ರಹ್ಮಾನಂದೋsಪಿ ನಾಕಾಂಕ್ಷ್ಯ: //

ಕನ್ನಡ ಅನುವಾದ 

    ' ಎಲೈ ಸುಂದರಿ! ವಿರಹದ ಬಾಧೆಯನ್ನು ನಾಶಮಾಡಲು ಇರುವ ಏಕೈಕ ಔಷಧವೆಂದರೆ ಪ್ರಿಯತಮನ ಪ್ರಣಯಕಲಾಪಗಳಲ್ಲಿ ತಾದಾತ್ಮ್ಯ ಹೊಂದುವುದು! ಅವನು ಪ್ರಕಟವಾದರೆ ಬ್ರಹ್ಮಾನಂದವೂ ಬೇಕಾಗುವುದಿಲ್ಲ!'
    ಇದು ಸಖಿಯು ರಾಧೆಗೆ ಹೇಳುತ್ತಿರುವಂತಿದೆ. ಶ್ಲೋಕದ ಚಿತ್ರಣ ಹಾಗಿದೆ. ರಾಧೆಯ ಪ್ರಿಯತಮ ಶ್ರೀಕೃಷ್ಣನು ಅವಳನ್ನು ಬಿಟ್ಟು ಹೋಗಿದ್ದಾನೆ ಹಾಗೂ ಅವಳಿಗೆ ವಿರಹಬಾಧೆ ಕಾಡುತ್ತಿದೆ. ಆಗ ಅವಳ ಸಖಿ ಅವಳಿಗೆ ಈ ಮಾತನ್ನು ಹೇಳುತ್ತಿರುವಂತಿದೆ. ಅವಳು ಹೇಳುವಂತೆ ವಿರಹಬಾಧೆಯನ್ನು ಹೋಗಲಾಡಿಸಲು ಇರುವುದು ಒಂದೇ ಔಷಧಿ. ಅದೇನೆಂದರೆ ಪ್ರಿಯತಮನ ಪ್ರಣಯಚೇಷ್ಟೆಗಳನ್ನು, ಪ್ರಣಯಲೀಲೆಗಳನ್ನು ಸ್ಮರಿಸಿಕೊಳ್ಳುತ್ತಾ ಅವುಗಳಲ್ಲೇ ತಾದಾತ್ಮ್ಯ ಹೊಂದುವುದು. ಆಗ ಅವನೇ ಪ್ರಕಟವಾದಂತಾಗುತ್ತದೆ! ಅವನು ಪ್ರಕಟವಾದರೆ ಬ್ರಹ್ಮಾನಂದವೂ ಬೇಕಾಗುವುದಿಲ್ಲ.‌ ಹೌದಲ್ಲವೇ? ಶ್ರೀಕೃಷ್ಣನು ಸಾಕಾರ ಪರಬ್ರಹ್ಮನೇ ಆಗಿದ್ದಾನೆ. ಅವನ ಸಾಕಾರ ಶೃಂಗಾರ ಪ್ರೇಮದ ಆನಂದದ ಮುಂದೆ ನಿರಾಕಾರ ಬ್ರಹ್ಮಾನಂದ ರುಚಿಸುವುದೇ ಇಲ್ಲ! 

ಸುಂದರೀಶತಕ -೫೮

ಸಂಸ್ಕೃತ ಮೂಲ 

ಅಗ್ನಿಶ್ಚಂದನಲೇಪೋ ವಿಷಮಮೃತಂ ಮರಣಮೇವ ಜೀವಾತು: /
ಸುಂದರಿ ವಿರಹಿಜನಾನಾಂ ಕಾಚನ ಲೋಕೋತ್ತರಾ ರೀತಿ: //

ಕನ್ನಡ ಅನುವಾದ 

   ಚಂದನದ ಲೇಪನವು ಅಗ್ನಿಯಂತೆ ಸುಡುತ್ತದೆ! ಅಮೃತವು ವಿಷದಂತೆ ಭಾಸವಾಗುತ್ತದೆ! ಜೀವಿಕೆಯು ಮರಣವೇ ಆಗಿದೆ! ಎಲೈ ಸುಂದರಿ! ವಿರಹಿಗಳ ರೀತಿ ಸ್ವಲ್ಪ ಲೋಕೋತ್ತರವಾಗಿರುತ್ತದೆ!' 
    ವಿರಹಿಗಳ ಚಿತ್ರಣವನ್ನು ಕವಿಯು ಮುಂದುವರೆಸುತ್ತಿದ್ದಾನೆ.‌ ಅವರ ರೀತಿಗಳು ಲೋಕೋತ್ತರವಾಗಿರುತ್ತವೆ ಎನ್ನುತ್ತಾನೆ. ಇಲ್ಲಿ ಲೋಕೋತ್ತರ ಎಂದರೆ ವಿಲಕ್ಷಣ ಎಂದು ಅರ್ಥ. ಲೋಕದ ರೀತಿಗೆ ವಿರುದ್ಧ. ಸಾಮಾನ್ಯವಾಗಿ ಚಂದನದ ಲೇಪನವು ತಂಪಾಗಿದ್ದರೆ ವಿರಹಿಗಳಿಗೆ ಅದು ಅಗ್ನಿಯಂತೆ ಸುಡುತ್ತದೆ! ಅಮೃತವು ಜೀವವರ್ಧನೆ ಮಾಡುವ ಬದಲು ವಿಷದಂತೆ ಭಾಸವಾಗುತ್ತದೆ. ಜೀವಿಕೆಯು ಮರಣವೇ ಎನಿಸುತ್ತದೆ! ಇದನ್ನು ವಿರಹಿಣಿಯ ಸಖಿಯೇ ಅವಳಿಗೆ ಹೇಳುತ್ತಿರುವಂತಿದೆ. ಅಥವಾ ಕವಿಯೇ ಸುಂದರಿಗೆ ಹೇಳುತ್ತಿದ್ದಾನೆ.