ಮಂಗಳವಾರ, ಜುಲೈ 21, 2026

ಸುಂದರೀಶತಕ -೬೬

ಅಯಿ ಪಥಿಕ ರಕ್ಷ ಜೀವಂ ಪರಿಹರ ದೂರೇಣ ಕೇತಕೀಕುಸುಮಮ್ /
ಇಹ ವಸತಿ ಪುಷ್ಪಧನ್ವಾ ಸ್ಮರಹರನಯನಾನ್ನಿರಾತಂಕ: //

ಕನ್ನಡ ಅನುವಾದ 

    ಒಬ್ಬ ಪ್ರಯಾಣಿಕ ಇನ್ನೊಬ್ಬ ಪ್ರಯಾಣಿಕನಿಗೆ ಹೇಳುತ್ತಾನೆ, ' ಎಲೈ ಪ್ರಯಾಣಿಕ! ನಿನ್ನ ಜೀವವನ್ನು ರಕ್ಷಿಸಿಕೋ! ಈ ಕೇತಕೀ ಪುಷ್ಪವನ್ನು ದೂರದಿಂದಲೇ ಪರಿತ್ಯಜಿಸು! ಏಕೆಂದರೆ ಇದರಲ್ಲಿ ಶಿವನಿಂದ ಭಸ್ಮನಾದ ಕಾಮದೇವನು ಅವನ ನಯನದ ಭಯದಿಂದ ದೂರವಾಗಿ ನಿರಾತಂಕದಿಂದ ನೆಲೆಸಿದ್ದಾನೆ!' 
    ಇಲ್ಲಿ ಕವಿಯು ಬಹಳ ಸೊಗಸಾದ ಕಲ್ಪನೆಯನ್ನು ಮಾಡಿದ್ದಾನೆ. ಕೇತಕಿ ಪುಷ್ಪ ಅಥವಾ ಕೇದಗೆ ಅಥವಾ ತಾಳೆ ಹೂವು ಬಹಳ ಸುಗಂಧಿತವಾದ, ಸಮ್ಮೋಹನಗೊಳಿಸುವಂಥ ಒಂದು ಹೂವು. ಒಬ್ಬ ಪ್ರಯಾಣಿಕ ಇನ್ನೊಬ್ಬ ಪ್ರಯಾಣಿಕನಿಗೆ, ಇದರಲ್ಲಿ ಕಾಮದೇವನಿದ್ದಾನೆ, ಹಾಗಾಗಿ ಈ ಹೂವನ್ನು ದೂರದಿಂದಲೇ ಪರಿತ್ಯಜಿಸಿ ಜೀವವನ್ನು ರಕ್ಷಿಸಿಕೋ ಎಂದು ಸ್ವಾರಸ್ಯಕರವಾಗಿ ಹೇಳುತ್ತಿದ್ದಾನೆ. ಆ ಹೂವಿನಲ್ಲಿರುವ ಕಾಮದೇವನ ಸಂಪರ್ಕಕ್ಕೆ ಬಂದರೆ ಅವನು ತನ್ನ ಪುಷ್ಪ ಬಾಣಗಳನ್ನು ಬಿಟ್ಟು ನಿನ್ನನ್ನು ಪ್ರೇಮದಲ್ಲಿ ಬೀಳಿಸುತ್ತಾನೆ ಜೋಪಾನ ಎಂಬ ಧಾಟಿಯಲ್ಲಿ ಹೇಳುತ್ತಿದ್ದಾನೆ. ಕಾಮದೇವನು ಈ ಹೂವಿನಲ್ಲಿ ಏಕಿದ್ದಾನೆ ಎಂದರೆ, ತನ್ನನ್ನು ಮೂರನೆಯ ಕಣ್ಣಿನಿಂದ ಭಸ್ಮ ಮಾಡಿದ ಶಿವನಿಂದ, ಅವನ ಭಯದಿಂದ ದೂರವಾಗಿ ಇಲ್ಲಿ ನಿರಾತಂಕವಾಗಿ ಇದ್ದಾನೆ ಎಂದು ಹೇಳುತ್ತಿದ್ದಾನೆ! ಇದೇಕೆ ಎಂದು ಅರ್ಥ ಮಾಡಿಕೊಳ್ಳಲು ಎರಡು ಪೌರಾಣಿಕ ಪ್ರಸಂಗಗಳನ್ನು ತಿಳಿದಿರಬೇಕು. 
     ಒಂದು, ದೇವತೆಗಳು ತಾರಕಾಸುರನನ್ನು ಸಂಹರಿಸಲು ಶಿವನಿಂದ ಪುತ್ರಜನನವಾಗಲೆಂದೂ ಅದಕ್ಕೆ ಅವನಿಗೆ ಪಾರ್ವತಿಯ ಮೇಲೆ ಮನಸ್ಸಾಗಲೆಂದೂ ಅವನ ತಪಸ್ಸನ್ನು ಕೆಡಿಸಲು ಮನ್ಮಥನನ್ನು ಕಳಿಸಿದ ಕಥೆ. ಮನ್ಮಥನು ಶಿವನ ಮೇಲೆ ಬಾಣ ಬಿಡಲು ಹೊರಟಾಗ, ಮನಸ್ಸು ಕಲಕಿದಂತಾಗಿ ಶಿವನು ಕೋಪದಿಂದ ತನ್ನ ಮೂರನೆಯ ಕಣ್ಣಿನಿಂದ ಅವನನ್ನು ಭಸ್ಮ ಮಾಡಿದ. ಹೀಗಾಗಿ ಕಾಮದೇವನಿಗೆ ಶಿವನೆಂದರೆ ಭಯ. ಆದರೆ ಅವನು ಶಿವನಿಂದ ತಪ್ಪಿಸಿಕೊಳ್ಳುವುದು ಹೇಗೆ?  ಶಿವನು ಬರಲಾಗದ, ಅಥವಾ ಬರಲು ಇಷ್ಟಪಡದ ಸ್ಥಳಕ್ಕೆ ಹೋಗುವುದರ ಮೂಲಕ. ಅದು ಕೇತಕಿ ಪುಷ್ಪ. ಶಿವನಿಗೆ ಇಷ್ಟವಿಲ್ಲದ ಪುಷ್ಪ. ಅದೇಕೆ? ಅದಕ್ಕೆ ಇನ್ನೊಂದು ಪೌರಾಣಿಕ ಪ್ರಸಂಗವನ್ನು ನೋಡಬೇಕು. 
      ಅದರಂತೆ, ಒಮ್ಮೆ, ಬ್ರಹ್ಮನಿಗೂ ವಿಷ್ಣುವಿಗೂ ಯಾರು ಹೆಚ್ಚೆಂದು ವಾದವುಂಟಾಗಲು, ಅವರ ಮಧ್ಯೆ ಒಂದು ದೊಡ್ಡ ಜ್ಯೋತಿರ್ಲಿಂಗ ಉದ್ಭವವಾಯಿತು! ಅದರ ಆದಿಯನ್ನು ಪತ್ತೆಮಾಡಲು ಬ್ರಹ್ಮನು ಹಂಸದ ರೂಪದಲ್ಲಿ ಮೇಲೆ ಹಾರಿಹೋಗಲು, ಅದರ ಅಂತ್ಯವನ್ನು ಪತ್ತೆಮಾಡಲು ವಿಷ್ಣುವು ವರಾಹ ರೂಪದಲ್ಲಿ ಭೂಮಿಯನ್ನು ಅಗೆಯುತ್ತಾ ಹೋದನು. ಇಬ್ಬರಿಗೂ ಆದಿ, ಅಂತ್ಯಗಳು ಪತ್ತೆಯಾಗಲಿಲ್ಲ! ಆಗ ಮೇಲಿನಿಂದ ಒಂದು ಕೇತಕಿ ಪುಷ್ಪ ಬೀಳುತ್ತಿರಲು, ಅದನ್ನು ನೋಡಿದ ಬ್ರಹ್ಮನು ತಾನು ಜ್ಯೋತಿರ್ಲಿಂಗದ ಆದಿಯನ್ನು ನೋಡಿರುವುದಾಗಿ ಅದಕ್ಕೆ ಸಾಕ್ಷಿ ಹೇಳುವಂತೆ ಕೇಳಿದನು. ಅದಕ್ಕೆ ಕೇತಕಿ ಪುಷ್ಪ ಒಪ್ಪಿತು. ವಿಷ್ಣುವು ಅಂತ್ಯವನ್ನು ಕಾಣಲಾರದೆ ಮೇಲೆ ಬಂದು ಬ್ರಹ್ಮನ ಬಳಿ ಸತ್ಯವನ್ನು ಒಪ್ಪಿಕೊಂಡನು. ಆಗ ಬ್ರಹ್ಮನು ತಾನು ಆದಿಯನ್ನು ನೋಡಿರುವುದಾಗಿ ಹೇಳಿ ಅದಕ್ಕೆ ಕೇತಕಿ ಪುಷ್ಪವೇ ಸಾಕ್ಷಿ ಎಂದನು. ಕೇತಕಿ ಪುಷ್ಪವೂ ಸುಳ್ಳು ಸಾಕ್ಷಿ ಹೇಳಿತು. ಆಗ ವಿಷ್ಣುವು ಬ್ರಹ್ಮನೇ ಹೆಚ್ಚೆಂದು ಒಪ್ಪಿಕೊಂಡನು. ಆಗ ಶಿವನು ಜ್ಯೋತಿರ್ಲಿಂಗದ ಸ್ಥಾನದಲ್ಲಿ ಪ್ರತ್ಯಕ್ಷನಾಗಿ ಬ್ರಹ್ಮನ ವಿಷಯದಲ್ಲಿ ಅವನು ಸುಳ್ಳು ಹೇಳಿದ್ದಕ್ಕೆ ಕ್ರುದ್ಧನಾಗಿ ಅವನಿಗೆ ಪೂಜೆಯಿರದಂತೆ ಶಪಿಸಿದನು! ವಿಷ್ಣುವು ಸತ್ಯ ಹೇಳಿದ್ದಕ್ಕೆ ಅವನಿಗೆ ತನ್ನ ಸಮಾನತೆ ಕೊಟ್ಟನು. ಸುಳ್ಳು ಸಾಕ್ಷಿ ಹೇಳಿದ್ದಕ್ಕೆ ಕೇತಕಿ ಪುಷ್ಪಕ್ಕೆ ತನ್ನ ಪೂಜೆಗೆ ಅನರ್ಹವಾಗುವಂತೆ ಶಪಿಸಿದನು! ಹೀಗೆ ಶಿವನಿಗೆ ಕೇತಕಿ ಪುಷ್ಪ ಇಷ್ಟವಾಗುವುದಿಲ್ಲ.‌ ಹಾಗಾಗಿ ಅವನು ಕೇತಕಿ ಪುಷ್ಪದ ಬಳಿ ಬರುವುದಿಲ್ಲವೆಂದು ಕಾಮದೇವನು ಅದರಲ್ಲಿ ನಿಶ್ಚಿಂತೆಯಿಂದ ನೆಲೆಸಿದ್ದಾನೆ ಎಂದು ಕವಿಯು ಇಲ್ಲಿ ಸುಂದರವಾದ ಉತ್ಪ್ರೇಕ್ಷಿತ ಕಲ್ಪನೆ ಮಾಡಿದ್ದಾನೆ. ಹೀಗೆ ಅದರಲ್ಲಿ ಕಾಮದೇವನು ಇರುವುದರಿಂದ ಅದರ ಬಳಿ ಹೋಗಬೇಡ ಎಂದು ಒಬ್ಬ ಪ್ರಯಾಣಿಕ ಇನ್ನೊಬ್ಬ ಪ್ರಯಾಣಿಕನಿಗೆ ಹೇಳುತ್ತಿರುವಂತೆ ಸೊಗಸಾದ ಕಲ್ಪನೆ ಮಾಡಿದ್ದಾನೆ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ