ಬುಧವಾರ, ಜುಲೈ 29, 2026

ಪೌರಾಣಿಕ ಸ್ವಾರಸ್ಯಗಳು- ಶಾಂತನುವಿನ ಕಥೆಯ ಎರಡು ಪಾಠಗಳು

ಮಹಾಭಾರತದ ಕಥೆಯನ್ನು ಬರೆಯುವವರು ಸಾಮಾನ್ಯವಾಗಿ ಆರಂಭಿಸುವುದು ಶಾಂತನುವಿನ ( ಅಥವಾ ಶಂತನು) ಕಥೆಯಿಂದ. ಶಾಂತನುವೆಂಬ ರಾಜನು ಹಸ್ತಿನಾಪುರವನ್ನು ಆಳುತ್ತಿದ್ದನು ಎಂದು ಆರಂಭವಾಗುತ್ತದೆ ಬಹುತೇಕ ಲೇಖಕರ ಮಹಾಭಾರತ. ಆದರೆ ಅದಕ್ಕೂ ಮೊದಲು ಸಾಕಷ್ಟು ಕಥೆಯಿದೆ. ಎಷ್ಟೋ ಜನರಿಗೆ ಶಾಂತನುವಿನ ತಂದೆ ಯಾರು, ಅವನ ಹಿಂದಿನ ಕಥೆಯೇನು ಎಂದು ತಿಳಿದಿರುವುದಿಲ್ಲ. ಇವು ಬಹಳ ಸ್ವಾರಸ್ಯಕರವಾಗಿವೆ. ಅಷ್ಟೇ ಅಲ್ಲದೆ, ಮಹಾಭಾರತದ ಖಿಲಗ್ರಂಥವಾದ ಹರಿವಂಶದಲ್ಲಿ ಶಾಂತನುವಿನ ಕಥೆ ಬೇರೆಯೇ ರೀತಿಯಲ್ಲಿದೆ. ಹೀಗೆ ಒಂದೇ ಕಥೆ, ಅಥವಾ ಒಬ್ಬನೇ ವ್ಯಕ್ತಿಯ ಕಥೆ ಬೇರೆ ಬೇರೆ ರೀತಿಗಳಲ್ಲಿರುವುದು ಒಂದು ಪೌರಾಣಿಕ ವೈಶಿಷ್ಟ್ಯ. ಈಗ ಈ ಎರಡೂ ಕಥೆಗಳನ್ನು ನೋಡೋಣ.
    ಶಾಂತನು ತನ್ನ ಹಿಂದಿನ ಜನ್ಮದಲ್ಲಿ ಮಹಾಭಿಷ ಎಂಬ ರಾಜನಾಗಿದ್ದ. ಆಗ ಅವನು ಗಳಿಸಿದ ಪುಣ್ಯಗಳಿಂದ ಬ್ರಹ್ಮಲೋಕವನ್ನೇ ಪಡೆದುಕೊಂಡ. ಒಂದು ದಿನ, ಬ್ರಹ್ಮಲೋಕದಲ್ಲಿ ದೇವಾನುದೇವತೆಗಳ ಸಮ್ಮುಖದಲ್ಲಿ ಬ್ರಹ್ಮನ ಪೂಜೆ ನಡೆಯುತ್ತಿದ್ದಾಗ, ಗಂಗೆ ಸಭೆಯನ್ನು ಪ್ರವೇಶಿಸಿದಳು. ಆಗ ಗಾಳಿ ಬೀಸಿ ಅವಳ ಸೀರೆ ಹಾರಿಹೋಯಿತು! ಎಲ್ಲರೂ ತಲೆ ತಗ್ಗಿಸಿದರೆ, ಮಹಾಭಿಷನು ಮಾತ್ರ ಅವಳ ಸೌಂದರ್ಯವನ್ನು ಕಣ್ಣೆವೆಯಿಕ್ಕದೆ ನೋಡುತ್ತಿದ್ದ. ಇದರಿಂದ ಕುಪಿತಗೊಂಡ ಬ್ರಹ್ಮನು ಅವನನ್ನು ಶಪಿಸಿದ, " ಎಲೈ ಮಹಾಭಿಷನೇ! ಸಕಲಕಾಮನೆಗಳನ್ನು ಜಯಿಸಿದವರಿಗೆ ಮಾತ್ರ ಈ ಲೋಕ ದೊರೆಯುವುದು! ಆದರೆ ನೀನಿನ್ನೂ ಸ್ತ್ರೀ ಕಾಮವನ್ನು ಜಯಿಸಿಲ್ಲ! ಗಂಗೆಯನ್ನು ನೋಡಿದೊಡನೆಯೇ ನೀನು ಆಕರ್ಷಿತನಾದೆ! ಹಾಗಾಗಿ ಇನ್ನಷ್ಟು ವರ್ಷ ಭೂಲೋಕದಲ್ಲಿದ್ದು ಸಕಲ ಕಾಮನೆಗಳನ್ನು ಪೂರೈಸಿಕೊಂಡು ಇಲ್ಲಿಗೆ ಬಾ! ನೀನು ಗಂಗೆಗೆ ಮಾಡಿದ ಈ ಅಪರಾಧದಿಂದ ಅವಳೇ ನಿನ್ನ ಪತ್ನಿಯಾಗಿ ನಿನಗೆ ಅಪ್ರಿಯವಾದ ಕಾರ್ಯಗಳನ್ನು ಮಾಡುವಳು! ಆದರೆ ನೀನು ಅವನ್ನೆಲ್ಲಾ ಸಹಿಸಸಿಕೊಳ್ಳುವೆ! ಕೊನೆಗೆ ಆ ಅಪ್ರಿಯ ಕಾರ್ಯಗಳಿಗೆ ಕುಪಿತನಾಗಿ ವಿರೋಧ ವ್ಯಕ್ತಪಡಿಸಿದ ದಿನ ನಿನಗೆ ಈ ಶಾಪದಿಂದ ವಿಮುಕ್ತಿಯಾಗುತ್ತದೆ!" 
    ಹೀಗೆ ಶಾಪ ಪಡೆದ ಮಹಾಭಿಷನು ಭೂಲೋಕದಲ್ಲಿ ಯಾರಿಗೆ ಹುಟ್ಟಬೇಕೆಂದು ಬಹಳ ಯೋಚಿಸಿ, ಭರತವಂಶೀಯನಾದ ಪ್ರತೀಪ ಎಂಬ ರಾಜ ತನಗೆ ತಂದೆಯಾಗಲು ಯೋಗ್ಯನೆಂದು ಭಾವಿಸಿ ಅವನಿಗೆ ಹುಟ್ಟಲು ನಿಶ್ಚಯಿಸಿದನು. 
   ಇತ್ತ, ಗಂಗೆಯೂ ಮಹಾಭಿಷನನ್ನೇ ಚಿಂತಿಸುತ್ತಾ ಭೂಲೋಕದ ಕಡೆ ಹೊರಟಳು. ಆಗ ಅಷ್ಟವಸುಗಳೆಂಬ ಎಂಟು ದೇವತೆಗಳು ಕಳೆಗುಂದಿದ ಮುಖವುಳ್ಳವರಾಗಿ ಕೆಳಗೆ ಬೀಳುತ್ತಿರುವುದನ್ನು ನೋಡಿದಳು. ಏಕೆ ಹಾಗೆ ಬೀಳುತ್ತಿರುವರೆಂದು ಕೇಳಿದಾಗ ಅವರು ತಮ್ಮ ಕಥೆಯನ್ನು ಹೇಳಿಕೊಂಡರು. ಅದರಂತೆ ಅವರು ವಸಿಷ್ಠ ಮಹರ್ಷಿಗಳ ಗೋವು ನಂದಿನಿಯೆಂಬ ಕಾಮಧೇನುವನ್ನು ಕದ್ದು ಅವರಿಂದ ಶಾಪಗ್ರಸ್ತರಾಗಿದ್ದರು. ಅವರಲ್ಲಿ ದ್ಯು ಎಂಬ ವಸುವಿನ ಹೆಂಡತಿಗೆ ಭೂಲೋಕದಲ್ಲಿರುವ ತನ್ನ ಗೆಳತಿ ಚಿರಯುವತಿಯಾಗಿರಬೇಕೆಂಬ ಆಸೆಯಿಂದ ಅವಳಿಗೆ ಕಾಮಧೇನುವಿನ ಹಾಲು ಕುಡಿಸಬೇಕೆನಿಸಿತು.‌ ಅದಕ್ಕಾಗಿ ಅವಳು ತನ್ನ ಗಂಡನನ್ನು ಆ ಕಾಮಧೇನುವನ್ನು ಕದಿಯಲು ಪ್ರಚೋದಿಸಿದಳು. ಅವನು ಇತರ ವಸುಗಳೊಂದಿಗೆ ವಸಿಷ್ಠರ ಕಾಮಧೇನುವನ್ನು ಕದ್ದನು! ಇದರಿಂದ ವಸಿಷ್ಠರು ಕ್ರುದ್ಧರಾಗಿ ಅವರಿಗೆ ಭೂಲೋಕದಲ್ಲಿ ಜನಿಸುವಂತೆ ಶಪಿಸಿದರು. ಆಗ ಅವರೆಲ್ಲರೂ ಪಶ್ಚಾತ್ತಾಪ ಪಟ್ಟು ಕ್ಷಮೆಯಾಚಿಸಲು ವಸಿಷ್ಠರು ತಮ್ಮ ಶಾಪದಂತೆ ಅವರು ಭೂಲೋಕದಲ್ಲಿ ಹುಟ್ಟಿದರೂ ಒಂದು ವರ್ಷದೊಳಗೆ ಶಾಪವನ್ನು ನೀಗಿ ಪುನಃ ಸ್ವರ್ಗಕ್ಕೆ ಬರುವರೆಂದೂ ಆದರೆ ಯಾರ ಕಾರಣದಿಂದ ಅವರು ಕಾಮಧೇನುವನ್ನು ಕದ್ದರೋ ಆ ದ್ಯು ಎಂಬುವನು ಮಾತ್ರ ಬಹುಕಾಲ ಭೂಲೋಕದಲ್ಲಿದ್ದು ಜ್ಞಾನಿಯೂ ಪಿತೃವಾಕ್ಯಪರಿಪಾಲಕನೂ ಆದರೂ ಸ್ತ್ರೀ ಸುಖವನ್ನು ತ್ಯಜಿಸಿ ಅಪುತ್ರವಂತನಾಗಿ ಹಿಂದಿರುಗುತ್ತಾನೆಂದರು. ಈ ವಿಷಯವನ್ನು ಹೇಳಿ ಅಷ್ಟವಸುಗಳು ಗಂಗೆಯನ್ನೇ ತಮ್ಮ ತಾಯಿಯಾಗುವಂತೆಯೂ ಹುಟ್ಟಿದ ಕೂಡಲೇ ತಮ್ಮನ್ನು ನೀರಲ್ಲಿ ಹಾಕಿ ಮುಳುಗಿಸಿ ಶಾಪವಿಮುಕ್ತಿ ಮಾಡಬೇಕೆಂದೂ ಬೇಡಿಕೊಂಡರು.‌ ಆಗ ಗಂಗೆಯು ಅವರನ್ನು ತಂದೆಯಾಗಿ ಯಾರನ್ನು ಆರಿಸಿಕೊಳ್ಳುವರೆಂದು ಕೇಳಿದಾಗ, ಭರತವಂಶದ ಪ್ರತೀಪನೆಂಬ ರಾಜನಿಗೆ ಹುಟ್ಟುವ ಶಾಂತನುವನ್ನು ತಂದೆಯಾಗಿ ಆರಿಸಿಕೊಳ್ಳುವೆವೆಂದರು. ಆಗ ಗಂಗೆಯು, ಆ ಶಾಂತನು, ಈಗ ಬ್ರಹ್ಮನಿಂದ ಶಾಪಗ್ರಸ್ತನಾಗಿ ಹುಟ್ಟುವ ಮಹಾಭಿಷನೇ ಎಂದು ಅರಿತು, ತನ್ನ ಮತ್ತು ಅವನ ಮಿಲನ ವ್ಯರ್ಥವಾಗಬಾರದೆಂದು ಹೇಳಲು, ಅವರು ತಮ್ಮಲ್ಲಿ ಒಬ್ಬನು ಅವರ ಮಗನಾಗಿ ಭೂಮಿಯಲ್ಲಿ ಉಳಿಯುವನೆಂದು ಹೇಳಿದರು. ಗಂಗೆ ಎಲ್ಲಕ್ಕೂ ಒಪ್ಪಿದಳು. 
    ಈ ಸಂದರ್ಭದಲ್ಲಿ ಭರತವಂಶದ ವೃದ್ಧ ರಾಜನಾದ ಪ್ರತೀಪನೆಂಬುವನು ತಪಸ್ಸು ಮಾಡುತ್ತಿದ್ದನು. ಗಂಗೆಯು ಸುಂದರವಾದ ಮಾನುಷ ಸ್ತ್ರೀಯ ರೂಪ ಧರಿಸಿ ಹೋಗಿ ಅವನ ಬಲತೊಡೆಯ ಮೇಲೆ ಕುಳಿತು," ನಾನು ನಿನ್ನನ್ನು ಕಾಮಿಸಿ ಬಂದಿದ್ದೇನೆ! ನನ್ನನ್ನು ಪರಿಗ್ರಹಿಸು! ತಾನಾಗಿ ಕಾಮಿಸಿ ಬಂದ ಸ್ತ್ರೀಯನ್ನು ಬಿಡುವುದು ಪಾಪ!" ಎಂದಳು! ಆಗ ಪ್ರತೀಪನು," ನೀನು ಹೇಳುವುದು ನಿಜವಾದರೂ ನೀನು ಮಾಡಿದ ಕಾರ್ಯ ಅದನ್ನು ಸಮರ್ಥಿಸುತ್ತಿಲ್ಲ! ನೀನು ನನ್ನ ಬಲತೊಡೆಯ ಮೇಲೆ ಕುಳಿತಿರುವೆ! ಶಾಸ್ತ್ರದ ಪ್ರಕಾರ, ಬಲತೊಡೆಯಿರುವುದು ಹೆಣ್ಣು ಮಕ್ಕಳು ಅಥವಾ ಸೊಸೆಯರು ಕುಳಿತುಕೊಳ್ಳಲಾದರೆ, ಎಡತೊಡೆಯಿರುವುದು ಪ್ರೇಯಸಿ ಅಥವಾ ಪತ್ನಿ ಕುಳಿತುಕೊಳ್ಳಲು! ನೀನು ನನ್ನ ಬಲತೊಡೆಯ ಮೇಲೆ ಕುಳಿತಿರುವುದರಿಂದ ನಾನು ನಿನ್ನನ್ನು ಪತ್ನಿಯಾಗಿ ಪರಿಗ್ರಹಿಸಲಾರೆ! ಆದರೆ ನನ್ನ ಸೊಸೆಯಾಗಿ ಪರಿಗ್ರಹಿಸುತ್ತೇನೆ! ನೀನು ನನ್ನ ಮಗನ ಪತ್ನಿಯಾಗು!" ಎಂದನು. ಗಂಗೆಯು ಅದಕ್ಕೆ ಒಪ್ಪಿ, ಅವನ ಮಗನನ್ನು ತಾನು ವರಿಸಿದರೂ ಅವನು ತಾನು ಮಾಡುವ ಪ್ರಿಯ ಅಥವಾ ಅಪ್ರಿಯ ಕಾರ್ಯಗಳನ್ನು ಒಪ್ಪಬೇಕೆಂದು ನಿಬಂಧನೆ ಹಾಕಿದಳು. ಅದಕ್ಕೆ ಪ್ರತೀಪನು ಒಪ್ಪಿದನು. 
    ಆದರೆ ಈ ಸಂದರ್ಭದಲ್ಲಿ ಪ್ರತೀಪನಿಗೆ ಮಕ್ಕಳೇ ಇರಲಿಲ್ಲ! ಹಾಗಾಗಿ ಅವನು ಕೊಟ್ಟ ಮಾತನ್ನು ನಡೆಸಲು ಮಕ್ಕಳಾಗಲೆಂದು ತನ್ನ ಪತ್ನಿಯೊಂದಿಗೆ ತಪಸ್ಸು ಮಾಡಿದ. ಆಗ ಅವನಿಗೆ ಮಹಾಭಿಷನು ಮಗನಾಗಿ ಜನಿಸಿದ. ವಂಶವೇ ಶಾಂತವಾಗುವುದರಲ್ಲಿದ್ದಾಗ ಹುಟ್ಟಿದ್ದರಿಂದ ಅವನಿಗೆ ಶಾಂತನು ಎಂದು ಹೆಸರಿಡಲಾಯಿತು. 
      ಶಾಂತಸ್ಯ ಜಜ್ಞೇ ಸಂತಾನಸ್ತಸ್ಮಾದಾಸೀತ್ಸ ಶಾಂತನು:
  ಪ್ರಾಯಶಃ ಪ್ರತೀಪನಿಗೆ ಪುತ್ರಸಂತಾನವಾಗಲೆಂದೇ ಗಂಗೆಯು ಬಂದು ಅವನ ಬಲತೊಡೆಯ ಮೇಲೆ ಕುಳಿತುಕೊಳ್ಳುವ ನಾಟಕವಾಡಿದಳೇನೋ! 
   ಶಾಂತನುವು ದೊಡ್ಡವನಾದಾಗ ಪ್ರತೀಪನು ಹಿಂದೆ ಒಬ್ಬ ಸ್ತ್ರೀಯು ತನ್ನ ಬಳಿ ಬಂದಿದ್ದ ವಿಷಯ ಹೇಳಿ ಅವನ ಬಳಿಯೂ ಬರುತ್ತಾಳೆಂದು ಹೇಳಿದ. ಅವಳು ಹಾಗೆ ಬಂದರೆ ಅವಳು ನಿಬಂಧನೆ ಹಾಕಿದರೂ ಹೆಚ್ಚು ವಿಚಾರಿಸದೆ ಅವಳನ್ನು ಮದುವೆಯಾಗುವಂತೆ ಹೇಳಿದ. 
   ಅಂತೆಯೇ ಮುಂದೆ ಶಾಂತನುವೇ ಗಂಗೆಯನ್ನು ನೋಡಿ ಮೋಹಿಸಿದ. ಅವಳನ್ನು ದೇವತೆಯೋ ಯಕ್ಷಿಯೋ ಅಪ್ಸರೆಯೋ ಯಾರೇ ಆಗಿದ್ದರೂ ತನ್ನನ್ನು ಮದುವೆಯಾಗುವಂತೆ ಕೇಳಿಕೊಂಡ. ಅದಕ್ಕೆ ಗಂಗೆಯು ತಾನು ಪ್ರಿಯವಾಗಲಿ ಅಪ್ರಿಯವಾಗಲಿ ಏನೇ ಕಾರ್ಯ ಮಾಡಿದರೂ ಅವನು ಪ್ರಶ್ನೆ ಮಾಡಬಾರದೆಂದೂ ಹಾಗೆ ಮಾಡಿದಂದೇ ತಮ್ಮ ಸಂಬಂಧ ಮುಗಿಯುವುದೆಂದೂ ನಿಬಂಧನೆ ಹಾಕಿದಳು. ಶಾಂತನುವು ಅದಕ್ಕೆ ಒಪ್ಪಿ ಅವಳನ್ನು ವರಿಸಿದ. ಅವಳೊಂದಿಗೆ ಸುಖವಾಗಿ ರಮಿಸಿದ. ಶಾಂತನುವಿನಿಂದ ಅವಳಿಗೆ ಅಷ್ಟ ವಸುಗಳು ಒಬ್ಬೊಬ್ಬರಾಗಿ ಹುಟ್ಟಿದರು. ಹುಟ್ಟಿದ ಕೂಡಲೇ ಅವಳು ಆ ಮಕ್ಕಳನ್ನು," ನಿನಗೆ ಪ್ರಿಯವಾದುದನ್ನು ಮಾಡುತ್ತಿರುವೆ!" ಎನ್ನುತ್ತಾ ಗಂಗಾ ನದಿಯಲ್ಲಿ ಹಾಕಿಬಿಟ್ಟಳು! ಅದನ್ನು ನೋಡಿ ಶಾಂತನುವಿನ ಮನಸ್ಸಿಗೆ ಬಹಳ ನೋವಾದರೂ ಪ್ರಶ್ನಿಸಿದರೆ ಎಲ್ಲಿ ಅವಳು ತನ್ನನ್ನು ಬಿಟ್ಟು ಹೋಗುವಳೋ ಎಂದು ಕೇಳಲಿಲ್ಲ. ಹೀಗೆ ಏಳು ಮಕ್ಕಳನ್ನು ನೀರುಪಾಲು ಮಾಡಿದ ಬಳಿಕ, ಎಂಟನೆಯ ಮಗುವನ್ನೂ ನೀರಿನಲ್ಲಿ ಹಾಕಲು ಅವಳು ಹೊರಟಾಗ, ಶಾಂತನುವು ತಡೆಯಲಾರದೆ, "ಇಂಥ ಪಾಪವನ್ನು ಏಕೆ ಮಾಡುತ್ತಿರುವೆ? ಈ ಒಂದು ಮಗುವನ್ನಾದರೂ ಕೊಲ್ಲಬೇಡ! ಯಾರು ನೀನು?" ಎಂದು ಕೇಳಿದ. ಅದಕ್ಕೆ ಅವಳು ನಗುತ್ತಾ," ಈ ಮಗುವನ್ನು ನಾನು ಕೊಲ್ಲುವುದಿಲ್ಲ! ಆದರೆ ನಮ್ಮ ಸಂಬಂಧ ಇಲ್ಲಿಗೆ ಮುಗಿಯುತ್ತದೆ! ನಾನು ಋಷಿಮುನಿಗಳೆಲ್ಲಾ ಪಾಪಹಾರಿಣಿ ಎಂದು ಪೂಜಿಸುನ ಗಂಗೆ! ಅಷ್ಟವಸುಗಳ ಶಾಪವಿಮುಕ್ತಿಗಾಗಿ ಹೀಗೆ ಮಾಡಬೇಕಾಯಿತು!" ಎಂದು ಎಲ್ಲಾ ವಿಷಯವನ್ನು ಹೇಳಿ ಆ ಮಗುವನ್ನು ತನ್ನೊಂದಿಗೆ ಸ್ವರ್ಗಕ್ಕೆ ಕರೆದೊಯ್ದು ಬೃಹಸ್ಪತಿಗಳು , ಶುಕ್ರಾಚಾರ್ಯರು, ವಸಿಷ್ಠರು, ಪರಶುರಾಮರಿಂದ ಎಲ್ಲಾ ಶಿಕ್ಷಣಗಳನ್ನು ಕೊಡಿಸಿ ಅವನು ತರುಣನಾದಾಗ ಹಿಂದಕ್ಕೆ ಕರೆತಂದು ಶಾಂತನುವಿಗೊಪ್ಪಿಸಿದಳು. ಅವನೇ ದೇವವ್ರತ. 
     ಮುಂದೆ ಶಾಂತನು ಬೇಟೆಯಲ್ಲಿ ಕಾಲ ಕಳೆಯುತ್ತಿದ್ದಾಗ, ಒಮ್ಮೆ ಯಮುನಾನದಿಯ ಬಳಿ ಒಂದು ಸೊಗಸಾದ ಸುಗಂಧ ತೇಲಿಬಂದಂತೆ ಅದನ್ನು ಅನುಸರಿಸುತ್ತಾ ಹೋದನು. ಆಗ ನಾವೆಯನ್ನು ನಡೆಸುತ್ತಿದ್ದ ಸತ್ಯವತಿ ಎಂಬ ಸುಂದರ ಹುಡುಗಿಯನ್ನು ಕಂಡು ಅವಳಲ್ಲಿ ಮೋಹಗೊಂಡ. ಆ ಸುಗಂಧ ಅವಳ ಮೈಯಿಂದಲೇ ಹೊರಡುತ್ತಿತ್ತು! ಅವಳು ಬೆಸ್ತರ ರಾಜನ ಸಾಕುಮಗಳಾಗಿದ್ದಳು. ಹಿಂದೊಮ್ಮೆ, ಪರಾಶರ ಮುನಿಗಳ ಸಂಗಮವಾಗಿ ಅವರಿಂದ ಮಹರ್ಷಿ ವೇದವ್ಯಾಸರನ್ನು ಹೆತ್ತಿದ್ದ ಅವಳು, ಪರಾಶರರ ವರದಿಂದ ಕನ್ಯೆಯಾಗಿಯೇ ಇದ್ದಳು ಹಾಗೂ ಮೀನಿನ ವಾಸನೆಯಿದ್ದ ಅವಳ ಮೈಯಿಂದ ಸುಗಂಧ ಬರುವಂತೆ ಹಾಗೂ ಅದು ಒಂದು ಯೋಜನ ದೂರ ಹರಡುವಂತೆ ವರ ಪಡೆದಿದ್ದಳು! ಹಾಗಾಗಿಯೇ ಅವಳಿಗೆ ಹಿಂದೆ ಮತ್ಸ್ಯಗಂಧಿ ಎಂಬ ಹೆಸರಿದ್ದು ಈಗ ಯೋಜನಗಂಧಿ ಎಂಬ ಹೆಸರು ಬಂದಿತ್ತು. ಶಾಂತನು ದಾಶರಾಜನ ಬಳಿ ಹೋಗಿ ಅವನ ಮಗಳನ್ನು ತನಗೆ ಮದುವೆ ಮಾಡಿಕೊಡಲು ಕೇಳಲು ಅವನು ಸಂತೋಷದಿಂದ ಒಪ್ಪಿದರೂ ಅವಳಿಂದ ಹುಟ್ಟುವ ಮಗನೇ ಮುಂದೆ ರಾಜನಾಗಬೇಕೆಂದು ನಿಬಂಧನೆ ಹಾಕಿದನು. ಆದರೆ ಶಾಂತನು ತನ್ನ ಮಗ ದೇವವ್ರತನನ್ನು ಮುಂದಿನ ರಾಜನನ್ನಾಗಿ ಮಾಡಬೇಕೆಂದಿದ್ದನು. ಈಗ ದಾಶರಾಜನ ನಿಬಂಧನೆಗೊಪ್ಪಿದರೆ ತನ್ನ ಮಗನಿಗೆ ಅನ್ಯಾಯ ಮಾಡಿದಂತಾಗುವುದಿಲ್ಲವೇ? ಹಾಗಾಗಿ ಅವನು ಮನೆಗೆ ಹೋಗಿ ಚಿಂತಾಗ್ರಸ್ತನಾಗಿ ಕುಳಿತನು. ಇದನ್ನು ಗಮನಿಸಿದ ದೇವವ್ರತನು ಅವನನ್ನು ವಿಚಾರಿಸಲು, ಒಬ್ಬನೇ ಪುತ್ರನಾದ ಅವನು ಸದಾ ಯುದ್ಧಗಳಲ್ಲಿ ತೊಡಗಿರುವುದೇ ಅವನಿಗೆ ಚಿಂತೆ ಎಂದು ಹಾರಿಕೆಯ ಉತ್ತರ ಕೊಟ್ಟನು. ಆಗ ದೇವವ್ರತನು ಶಾಂತನುವಿನ ಸಾರಥಿಯನ್ನು ವಿಚಾರಿಸಿ ವಿಷಯ ತಿಳಿದುಕೊಂಡು ತಾನೇ ದಾಶರಾಜನ ಬಳಿಗೆ ಮಾತುಕತೆಗೆ ಹೋದನು. ದಾಶರಾಜನ ನಿಬಂಧನೆಗೆ ಒಪ್ಪಿ ತಾನು ರಾಜನಾಗುವುದಿಲ್ಲವೆಂದು ಪ್ರತಿಜ್ಞೆ ಮಾಡಿದನು. ಆದರೆ ಅವನ ಮಕ್ಕಳು ರಾಜ್ಯ ಕೇಳಬಹುದು ಎಂದು ಪುನಃ ದಾಶರಾಜನು ಹೇಳಲು, ದೇವವ್ರತನು ತಾನು ಜೀವನದಲ್ಲಿ ಮದುವೆಯೇ ಆಗುವುದಿಲ್ಲ ಎಂಬ ಭೀಕರ ಅಥವಾ ಭೀಷ್ಮಪ್ರತಿಜ್ಞೆ ಮಾಡಿದನು. ಆಗ ದೇವತೆಗಳು ಅವನ ಮೇಲೆ ಪುಷ್ಪವೃಷ್ಟಿಗೈದು "ಇವನು ಭೀಷ್ಮ!" ಎಂದು ಘೋಷಿಸಿದರು! ಅಂದಿನಿಂದ ಅವನ ಹೆಸರು ಭೀಷ್ಮನೆಂದಾಯಿತು! ದಾಶರಾಜನು ಈಗ ತನ್ನ ಮಗಳನ್ನು ಶಾಂತನುವಿಗೆ ಕೊಡಲು ಒಪ್ಪಿ ಭೀಷ್ಮನೊಂದಿಗೆ ಕಳಿಸಿದನು. ಹೀಗೆ ತಾನು ತನ್ನ ವೈವಾಹಿಕ ಸುಖವನ್ನು ತ್ಯಜಿಸಿ ತಂದೆ ಶಾಂತನುವಿಗೆ ಸತ್ಯವತಿಯೊಂದಿಗೆ ಮದುವೆ ಮಾಡಿಸಿದನು. ಇದರಿಂದ ಸುಪ್ರೀತನಾದ ಶಾಂತನು, ಅವನಿಗೆ ಇಚ್ಛಾಮರಣಿಯಾಗುವಂತೆ ವರ ನೀಡಿದನು 
     ಮಹಾಭಾರತದ ಆದಿಪರ್ವದ ಸಂಭವಪರ್ವವೆಂಬ ಉಪಪರ್ವದಲ್ಲಿ ಈ ಕಥೆ ಬರುತ್ತದೆ.‌ ಆದರೆ ಇದಕ್ಕೂ ಮೊದಲು ಶಾಂತನುವಿನ ಹೆಸರಿನ ವ್ಯುತ್ಪತ್ತಿಗೆ ಬೇರೆಯೇ ಕಾರಣವನ್ನು ಕೊಡಲಾಗಿದೆ. ಅದು ಹೀಗಿದೆ -
  ಯಂ ಯಂ ಕರಾಭ್ಯಾಂ ಸ್ಪೃಶತಿ ಜೀರ್ಣಂ ಸುಖಮಶ್ನುತೇ /
  ಪುನರ್ಯುವಾ ಚ ಭವತಿ ತಸ್ಮಾತ್ತಂ ಶಾಂತನುಂ ವಿದು: //
     ' ಶಂತನುವು ಯಾರು ಯಾರು ವಯಸ್ಸಾದವರನ್ನು ತನ್ನ ಕೈಗಳಿಂದ ಸ್ಪರ್ಶಿಸಿದರೂ ಅವರು ಕೂಡಲೇ ಸುಖವನ್ನು ಹೊಂದಿ ನವಯುವಕರಾಗುತ್ತಿದ್ದರು! ಆದ್ದರಿಂದಲೇ ಅವನು ಶಾಂತನು ಎಂದು ಪ್ರಸಿದ್ಧನಾದನು.' 
     ಇದೇ ಅಭಿಪ್ರಾಯವೇ ಭಾಗವತದಲ್ಲೂ ಇದೆ -
ಯಂ ಯಂ ಕರಾಭ್ಯಾಂ ಸ್ಪೃಶತಿ ಜೀರ್ಣಂ ಯೌವನಮೇತಿ ಸ: /
ಶಾಂತಿಮಾಪ್ನೋತಿ ಚೈವಾಗ್ರ್ಯಾಂ ಕರ್ಮಣಾ ತೇನ ಶಂತನು: //
    ' ಶಂತನುವು ಯಾರು ಯಾರು ವೃದ್ಧರನ್ನು ಸ್ಪರ್ಶಿಸುತ್ತಿದ್ದನೋ ಅವರು ಯೌವನವನ್ನು ಪಡೆಯುತ್ತಿದ್ದರು ಹಾಗೂ ಪರಮಶಾಂತಿಯನ್ನು ಪಡೆಯುತ್ತಿದ್ದರು! ಆದ್ದರಿಂದಲೇ ಅವನಿಗೆ ಶಂತನು ಎಂದು ಹೆಸರಾಯಿತು.' 
  ಅಲ್ಲದೇ ಮಹಾಭಾರತದ ಆರಂಭದಲ್ಲಿ ಪ್ರತೀಪ ರಾಜನು ಶಿಬಿದೇಶದ ರಾಜಕುಮಾರಿಯ ಸುನಂದಾಳನ್ನು ಮದುವೆಯಾಗಿ ದೇವಾಪಿ, ಶಾಂತನು, ಬಾಹ್ಲೀಕ ಎಂಬ ಮೂರು ಮಕ್ಕಳನ್ನು ಪಡೆದಿದ್ದನು ಎಂದಿದೆ. ಹಿರಿಯನಾದ ದೇವಾಪಿಯು ಬಾಲ್ಯದಲ್ಲೇ ಐಹಿಕ ಜೀವನದಲ್ಲಿ ವಿರಕ್ತಿ ಹೊಂದಿ ತಪಸ್ಸು ಮಾಡಲು ಕಾಡಿಗೆ ಹೊರಟುಹೋದನು. ಹಾಗಾಗಿ ಸಾಮ್ರಾಜ್ಯವು ಶಾಂತನು ಮತ್ತು ಬಾಹ್ಲೀಕರಿಗೆ ಉಳಿಯಿತು. 
    ಮಹಾಭಾರತದ ಉದ್ಯೋಗಪರ್ವದಲ್ಲಿ, ಧೃತರಾಷ್ಟ್ರನು ತನ್ನ ಮಗ ದುರ್ಯೋಧನನಿಗೆ ತನ್ನ ವಂಶದ ಕಥೆಯನ್ನು ಹೇಳುತ್ತಾ ಶಾಂತನು ಮತ್ತು ಅವನ ಅಣ್ಣಂದಿರ ಬಗ್ಗೆ ಹೇಳುತ್ತಾನೆ. ಅದರಂತೆ, ಪ್ರತೀಪ ಮಹಾರಾಜನಿಗೆ ದೇವಾಪಿ, ಬಾಹ್ಲೀಕ, ಮತ್ತು ಶಾಂತನು ಎಂಬ ಮೂರು ಪುತ್ರರು. ಶಾಂತನು ಕೊನೆಯವನು. ದೇವಾಪಿಯು ಶಕ್ತಿವಂತನೂ ಧಾರ್ಮಿಕನೂ ಆಗಿದ್ದರೂ ಅವನಿಗೆ ಚರ್ಮರೋಗವಿದ್ದುದರಿಂದ ಬ್ರಾಹ್ಮಣರು, ಮಂತ್ರಿಗಳು, ಪ್ರಜೆಗಳು, ಯಾರೂ ಅವನು ರಾಜನಾಗುವುದನ್ನು ಒಪ್ಪಲಿಲ್ಲ. ಹಾಗಾಗಿ ಅವನು ವಿರಕ್ತನಾಗಿ ತಪಸ್ಸು ಮಾಡಲು ಕಾಡಿಗೆ ಹೋದನು. ಅನಂತರ ಎರಡನೆಯವನಾದ ಬಾಹ್ಲೀಕನು ಹಸ್ತಿನಾಪುರವನ್ನು ಬಿಟ್ಟು ತನ್ನ ಸೋದರಮಾವನ ವಂಶವನ್ನು ಸೇರಿ ಬೇರೊಂದು ನಗರಕ್ಕೆ ರಾಜನಾದನು. ಅನಂತರ, ಪ್ರತೀಪನು ಸ್ವರ್ಗಸ್ಥನಾದ ಬಳಿಕ, ಬಾಹ್ಲೀಕನು ಶಾಂತನುವಿಗೆ ರಾಜ್ಯಭಾರವನ್ನು ವಹಿಸಿಕೊಳ್ಳಲು ಹೇಳಿದನು. ಮುಂದೆ, ಬಾಹ್ಲೀಕನು ಕೌರವರ ಕಡೆ ನಿಂತು ಕುರುಕ್ಷೇತ್ರ ಯುದ್ಧದಲ್ಲಿ ಭಾಗವಹಿಸಿ ಭೀಮನಿಂದ ಹತನಾದನು. ಭೀಷ್ಮನ ಪ್ರಕಾರ ಅತಿರಥನಾಗಿದ್ದ ಅವನು ಕುರುಕ್ಷೇತ್ರದಲ್ಲಿ ಭಾಗವಹಿಸಿದ ಅತ್ಯಂತ ಹಿರಿಯ ವೀರನಾಗಿದ್ದನು. 
     ಭಾಗವತದಲ್ಲಿ ಶಂತನುವಿನ ಇನ್ನೊಂದು ಸ್ವಾರಸ್ಯಕರ ಕಥೆ ಬರುತ್ತದೆ. ಅದರಂತೆ, ಒಮ್ಮೆ, ಶಂತನುವಿನ ರಾಜ್ಯದಲ್ಲಿ ದೇವೇಂದ್ರನು ಹನ್ನೆರಡು ವರ್ಷಗಳ ಕಾಲ ಮಳೆಗರೆಯಲೇ ಇಲ್ಲ! ಆಗ ಶಂತನುವು ಬ್ರಾಹ್ಮಣರನ್ನು ಕರೆಸಿ ಇದಕ್ಕೆ ಕಾರಣವೇನೆಂದು ಕೇಳಲು, ಅವರು ಶಾಸ್ತ್ರವನ್ನು ಪರಿಶೀಲಿಸಿ, " ಮಹಾರಾಜ! ನೀನು ನಿನ್ನ ಅಣ್ಣ ದೇವಾಪಿಯು ವಿವಾಹವಾಗುವ ಮೊದಲೇ ವಿವಾಹವಾಗಿ ಅಗ್ನಿಹೋತ್ರ ಮಾಡುತ್ತಿರುವೆ ಹಾಗೂ ರಾಜ್ಯವನ್ನೂ ಪಡೆದಿರುವೆ! ಇದರಿಂದ ನಿನಗೆ ಪರಿವೇತ್ತೃತ್ವದ ದೋಷ ಬಂದಿದೆ! ಆದ್ದರಿಂದಲೇ ಮಳೆ, ಬೆಳೆ ಆಗಿಲ್ಲ! ನೀನು ರಾಜ್ಯದ ಅಭ್ಯುದಯ ಬಯಸುವುದಾದರೆ ಬೇಗನೆ ನಿನ್ನ ಅಣ್ಣನ ಬಳಿ ಹೋಗಿ ರಾಜ್ಯವನ್ನು ಅವನಿಗೊಪ್ಪಿಸು!" ಎಂದರು. ಆಗ ಶಂತನುವು ಕಾಡಿಗೆ ಹೋಗಿ ರಾಜ್ಯವನ್ನು ಸ್ವೀಕರಿಸುವಂತೆ ತನ್ನ ಅಣ್ಣನನ್ನು ಪ್ರಾರ್ಥಿಸಿದನು. ಆದರೆ ಅಷ್ಟರಲ್ಲಿ ಶಂತನುವಿನ ಮಂತ್ರಿಯಾದ ಅಶ್ಮರಾತನು ದೇವಾಪಿಯ ಬಳಿಗೆ ಕೆಲವು ಬ್ರಾಹ್ಮಣರನ್ನು ಕಳಿಸಿ ನಾಸ್ತಿಕ್ಯವಾದದ ಪಾಷಂಡಮತವನ್ನು ಬೋಧಿಸಿದ್ದನು. ಇದರಿಂದ ದೇವಾಪಿಯ ಮನಸ್ಸು ಕೆಟ್ಟು ಅವನು ವೇದಮಾರ್ಗದಿಂದ ದೂರಾಗಿದ್ದನು! ಹಾಗಾಗಿ ಅವನು ಶಂತನುವಿನ ಮಾತನ್ನು ಕೇಳದೆ ಅವನಿಗೂ ನಾಸ್ತಿಕ್ಯವನ್ನು ಬೋಧಿಸತೊಡಗಿದನು. ಅಣ್ಣನಿಗಿಂತ ಮೊದಲು ತಮ್ಮನು ಮದುವೆಯಾಗಬಾರದೆಂಬ ಹಾಗೂ ಅಗ್ನಿಹೋತ್ರ ಮಾಡಬಾರದೆಂಬ ವೇದದ ದಾರಿಯನ್ನು ಅವನು ಒಪ್ಪಲಿಲ್ಲ. ಹಾಗಾಗಿ ಅವನು ವೇದಭ್ರಷ್ಟನಾಗಿ ರಾಜ್ಯವನ್ನು ಪಡೆಯಲು ಅನರ್ಹನಾದನು. ಇದರಿಂದ ಶಂತನುವಿಗೆ ಪರಿವೇತ್ತೃತ್ವದ ದೋಷ ಪರಿಹಾರವಾಗಿ ಇಂದ್ರನು ಮಳೆಗರೆದನು! ಹೀಗೆ ಶಂತನುವೇ ರಾಜನಾಗಿ ಮುಂದುವರೆದನು. ಇತ್ತ ದೇವಾಪಿಯೂ ಯೋಗಿಯಾಗಿ ಕಲಾಪಗ್ರಾಮದಲ್ಲಿ ಯೋಗಸಾಧನೆ ಮಾಡತೊಡಗಿದನು. ಆ ದೇವಾಪಿಯು ಈಗಲೂ ಕಲಾಪಗ್ರಾಮದಲ್ಲಿದ್ದು, ಕಲಿಯುಗದಲ್ಲಿ ಚಂದ್ರವಂಶದ ನಾಶವಾದಾಗ, ಸತ್ಯಯುಗದಲ್ಲಿ ಪುನಃ ಆರಂಭಿಸುವನಂತೆ! 
    ಮಹಾಭಾರತದ ಖಿಲಗ್ರಂಥವಾದ ಹರಿವಂಶದಲ್ಲಿ ಶಾಂತನುವಿನ ಕಥೆ ಬೇರೆಯೇ ರೀತಿಯಲ್ಲಿದೆ. ಅದರಂತೆ ಒಮ್ಮೆ, ಮೇರುಪರ್ವತದಲ್ಲಿ ಮಹಾವಿಷ್ಣುವೂ ಬ್ರಹ್ಮಾದಿದೇವತೆಗಳೂ ಸಭೆ ಸೇರಲು, ಭೂದೇವಿಯು ದುಷ್ಟರಾಜರಿಂದ ಆಗಿರುವ ತನ್ನ ಭಾರವನ್ನು ಇಳಿಸಲು ಮಹಾವಿಷ್ಣುವನ್ನು ಪ್ರಾರ್ಥಿಸಿದಳು. ಆಗ ದೇವತೆಗಳು ತಾವು ತಮ್ಮ ಅಂಶಗಳಿಂದ ಹೇಗೆ ಅವತರಿಸಬೇಕೆಂದು ಬ್ರಹ್ಮನನ್ನು ಕೇಳಿದರು. ಅದಕ್ಕೆ ಬ್ರಹ್ಮನು ಭೂಭಾರವನ್ನಿಳಿಸಲು ಭರತವಂಶವನ್ನು ಆರಿಸಿಕೊಂಡಿರುವುದಾಗಿ ಹೇಳಿ ತನ್ನ ಹಿಂದಿನ ಒಂದು ಕಥೆ ಹೇಳಿದನು. ಅದರಂತೆ, ಒಮ್ಮೆ ಬ್ರಹ್ಮನು ಪೂರ್ವಸಮುದ್ರದ ಪಶ್ಚಿಮ ತೀರದಲ್ಲಿ, ತನ್ನ ಪುತ್ರನಾದ ಕಶ್ಯಪ ಋಷಿಯೊಂದಿಗೆ ಕುಳಿತುಕೊಂಡು ಲೌಕಿಕ ಮತ್ತು ವೈದಿಕ ಮಾರ್ಗಗಳನ್ನು ಅನುಸರಿಸುತ್ತಿದ್ದವರ ಪ್ರಾಚೀನ ಕಥೆಗಳನ್ನೂ ಉತ್ತಮ ಗುಣಗಳ ಪೌರಾಣಿಕ ಇತಿಹಾಸಗಳನ್ನೂ ಚರ್ಚಿಸುತ್ತಿದ್ದನು.‌ಆಗ ಸಮುದ್ರರಾಜನು ಗಂಗೆಯೊಡನೆ ಅವನ ಬಳಿಗೆ ಮೂರ್ತಿಮತ್ತಾಗಿ ಅವಸರದಿಂದ ಬಂದನು! ಅವನೊಂದಿಗೆ ಮೇಘಗಳ ಸಮೂಹಗಳೂ ವಾಯುದೇವತೆಗಳೂ ಆಗಮಿಸಿದರು. ಜಲರೂಪದ ವಸ್ತ್ರ ಧರಿಸಿ, ಪೂರ್ಣಚಂದ್ರನೊಂದಿಗೆ ಕೂಡಿದ್ದು, ಅಲೆಗಳನ್ನು ಭಯಂಕರವಾಗಿ ಏರುಪೇರು ಮಾಡುತ್ತಾ ಮೇಘದಂತೆ ಗಂಭೀರ ಶಬ್ದ ಮಾಡುತ್ತಾ ಸಮುದ್ರರಾಜನು ಬರುತ್ತಾ ಬ್ರಹ್ಮನನ್ನೇ ತಿರಸ್ಕಾರ ಭಾವದಿಂದ ಆವರಿಸಿ ಉಪ್ಪುಪ್ಪಾಗಿದ್ದ ಜಲಬಿಂದುಗಳಿಂದ ತೋಯಿಸಿದ! ಬ್ರಹ್ಮನು ಕುಳಿತಿದ್ದ ಸ್ಥಳವನ್ನೇ ಕೊಚ್ಚಿಕೊಂಡು ಹೋಗುವಂತೆ ಭೋರ್ಗರೆಯುವ ಅಲೆಗಳೊಂದಿಗೆ ಅವನು ಬರುತ್ತಿರಲು, ಬ್ರಹ್ಮನು ಕುಪಿತಗೊಂಡು, " ಶಾಂತೋsಸಿ ( ನೀನು ಶಾಂತನಾಗುವೆ)!" ಎಂದನು.‌ ಬ್ರಹ್ಮನು ಹಾಗೆ ಹೇಳಿದಾಕ್ಷಣ, ಸಮುದ್ರರಾಜನು ಸೂಕ್ಷ್ಮ ರೂಪ ತಾಳಿದನು.‌ ಅವನ ಅಲೆಗಳ ಭೋರ್ಗರೆತ ಉಡುಗಿಹೋಗಿ ಅವನು ರಾಜ್ಯಲಕ್ಷ್ಮಿಯಿಂದ ಕೂಡಿ ಬ್ರಹ್ಮನ ಬಳಿ ನಿಂತನು. 
    ಆಗ ಭೂಭಾರವನ್ನಿಳಿಸಲು ಹಾಗೂ ದೇವತೆಗಳ ಹಿತಕ್ಕಾಗಿ ಬ್ರಹ್ಮನು ಸಮುದ್ರ ರಾಜನನ್ನು ಶಪಿಸಿದನು," ನೀನು ರಾಜನ ರೂಪವನ್ನು ಧರಿಸಿ ಬಂದಿರುವುದರಿಂದ ಭರತವಂಶದ ರಾಜನಾಗಿ ಹುಟ್ಟಿ ಜನರನ್ನು ಪಾಲಿಸುವೆ! ನಾನು ' ಶಾಂತೋsಸಿ ( ಶಾಂತನಾಗುವೆ)' ಎಂದು ಹೇಳಿದ ಕೂಡಲೇ ನೀನು ಸೂಕ್ಷ್ಮ ರೂಪ ಧರಿಸಿದುದರಿಂದ ಭೂಲೋಕದಲ್ಲಿ ನೀನು ಸುಂದರ ಶರೀರದ ರಾಜನಾಗಿ ಶಾಂತನು ಎಂದು ಪ್ರಸಿದ್ಧನಾಗುವೆ! ಸರ್ವಾಂಗಸುಂದರಿಯೂ ನದಿಗಳಲ್ಲಿ ಶ್ರೇಷ್ಠಳೂ ಆದ ಈ ಗಂಗೆಯೇ ಸಶರೀರಳಾಗಿ ನಿನ್ನನ್ನು ಸೇವಿಸುತ್ತಾಳೆ! " 
   ಇದನ್ನು ಕೇಳಿ ಸಮುದ್ರರಾಜನು, " ದೇವದೇವನೇ! ನನಗೇಕೆ ಹೀಗೆ ಶಾಪ ಕೊಟ್ಟೆ? ನಿನ್ನ ಆಜ್ಞೆಯನ್ನು ಸದಾ ಪಾಲಿಸುವ ನಿನ್ನ ಪುತ್ರನೇ ನಾನಲ್ಲವೇ? ನೀನೇ ಈ ಶರೀರವನ್ನು ಸೃಷ್ಟಿಸಿರುವೆ ಹಾಗೂ ಹುಣ್ಣಿಮೆಯ ದಿನ ಚಂಡಮಾರುತವು ನನ್ನನ್ನು ಪ್ರಚೋದಿಸುವುದರಿಂದ ನಾನು ವರ್ಧಿಸಿ ಎಲ್ಲೆ ಮೀರಿ ಹರಿಯುವೆ! ಆಗ ಕಾರಣದಿಂದ ನಿನ್ನನ್ನು ನಾನು ಸ್ಪರ್ಶಿಸಲು ನೀನು ಒದ್ದೆಯಾದೆ! ಇದರಲ್ಲಿ ನನ್ನದೇನು ತಪ್ಪಿದೆ? ದಯವಿಟ್ಟು ಶಾಪವನ್ನು ಹಿಂತೆಗೆದುಕೋ!" ಎಂದನು. ಅದಕ್ಕೆ ಬ್ರಹ್ಮನು," ಹೆದರಬೇಡ! ಶಾಂತನಾಗು! ನೀನು ನಿನ್ನ ಶರೀರವನ್ನು ಎರಡಾಗಿ ವಿಂಗಡಿಸಿಕೊಂಡು ಒಂದರಲ್ಲಿ ಇಲ್ಲೇ ಇರುತ್ತಾ ಇನ್ನೊಂದರ ಮೂಲಕ ಭರತವಂಶದಲ್ಲಿ ಜನಿಸು! ನಿನಗೆ ಪರಮಪ್ರಿಯಳಾದ ಗಂಗೆಯೊಂದಿಗೆ ರಮಿಸು! ಶಾಪಗ್ರಸ್ತರಾದ ಅಷ್ಟವಸುಗಳಿಗೂ ಈ ಗಂಗೆಯ ಮೂಲಕ ನಿನ್ನಿಂದ ಜನನವಾಗಿ ಅವರಿಗೆ ಶಾಪ ವಿಮುಕ್ತಿಯಾಗಲೆಂದೂ ಹೀಗೆ ಮಾಡಿದ್ದೇನೆ! ಅನಂತರ ಭರತವಂಶದಲ್ಲಿ ನಿನ್ನ ಅಂಶವನ್ನು ಭದ್ರಪಡಿಸಿ ಸಮುದ್ರರಾಜನ ರೂಪಕ್ಕೆ ಹಿಂದಿರುಗು!" ಎಂದನು. ಅದಕ್ಕೆ ಸಮುದ್ರರಾಜನು ಒಪ್ಪಿ ಶಾಂತನುವಾಗಿ ಜನಿಸಿದನು.
    ಈ ಪೂರ್ವ ಕಥೆಯನ್ನು ಬ್ರಹ್ಮನು ದೇವತೆಗಳಿಗೆ ಹೇಳಿ," ದೇವತೆಗಳೇ! ಈಗಾಗಲೇ ಶಾಂತನುವು ಹುಟ್ಟಿ ಅಷ್ಟವಸುಗಳಿಗೂ ಜನ್ಮಕೊಟ್ಟು ಅವರಿಗೂ ಶಾಪ ವಿಮೋಚನೆ ಆಗಿದೆ. ಅವರಲ್ಲಿ ಒಬ್ಬನು ಮಾತ್ರ ಭೀಷ್ಮನೆಂಬ ಹೆಸರಿನಲ್ಲಿ ಉಳಿದಿದ್ದಾನೆ. ಶಾಂತನುವಿನ ಇನ್ನೊಬ್ಬ ಪುತ್ರನಿಗೆ ಹುಟ್ಟುವ ಮಕ್ಕಳಿಂದ ಎರಡು ಪಕ್ಷಗಳಾಗಿ ಅವರಿಗೆ ಯುದ್ಧವಾಗುತ್ತದೆ. ಆಗ ಯುದ್ಧದಲ್ಲಿ ಭಾಗವಹಿಸುವ ಅಪಾರ ಸಂಖ್ಯೆಯ ಯೋಧರ ವಧೆಯಾಗಿ ಭೂಭಾರಹರಣವಾಗುತ್ತದೆ! ಹಾಗಾಗಿ ನೀವು ನಿಮ್ಮ ಅಂಶಗಳಿಂದ ಭರತವಂಶದಲ್ಲಿ ಜನಿಸಿ!" ಎಂದು ಹೇಳಿದ. ಅನಂತರ ಅವನು ನಾರದರೊಂದಿಗೆ ಮಹಾವಿಷ್ಣುವನ್ನು ಕೃಷ್ಣಾವತಾರ ಕೈಗೊಳ್ಳಲು ಪ್ರೇರೇಪಿಸಿದ.
    ಹೀಗೆ ಹರಿವಂಶದಲ್ಲಿ ಶಾಂತನುವಿನ ಕಥೆ ಬೇರೆಯೇ ರೀತಿಯಲ್ಲಿದೆ.
   ಹೀಗೆ ಪೌರಾಣಿಕ ಕಥೆಗಳಲ್ಲಿ ಒಂದೇ ಕಥೆಯು ಬೇರೆ ಬೇರೆ ಗ್ರಂಥಗಳಲ್ಲಿ ವಿಭಿನ್ನ ರೂಪಗಳನ್ನು ತಳೆದಿರುವುದು ಒಂದು ಸ್ವಾರಸ್ಯ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ