ಭಾನುವಾರ, ಮಾರ್ಚ್ 29, 2026

ಸುಂದರೀಶತಕ -೧೧

ಸಂಸ್ಕೃತ ಮೂಲ 

ಯಾ ತವ ಗಾತ್ರೇ ಯೌವನತಪನರಥಾರೋಹನೇಮಿನವರೇಖಾ /
ಸುಂದರಿ ಸೈವ ಜನಾನಾಂ ಜನಯತಿ ರೋಮಾವಲಿಭ್ರಾಂತಿಮ್ //

ಕನ್ನಡ ಅನುವಾದ 

   ' ಎಲೈ ಸುಂದರಿ! ನಿನ್ನ ಶರೀರದಲ್ಲಿ ಯೌವನವೆಂಬ ಸೂರ್ಯನ ರಥ ಮೇಲೆ ಮೇಲೆ ಚಲಿಸುತ್ತಾ ಅದರ ಚಕ್ರದ ಅಂಚು ಮಾಡಿರುವ ಹೊಸ ರೇಖೆಯನ್ನೇ ಜನರು ರೋಮಾವಲಿ ಎಂದು ಭ್ರಮಿಸುತ್ತಾರೆ!'
     ರೋಮಾವಲಿಯೆಂದರೆ ಹೆಣ್ಣಿನ ನಾಭಿಯ ಮೇಲಿನಿಂದ ಎದೆಯವರೆಗೂ ಸಾಗುವ ತೆಳುಗೂದಲಿನ ಸಾಲು. ಇದು ಮುಖ್ಯವಾಗಿ ನಾಭಿಯ ಮೇಲಿದ್ದರೂ ಕೆಳಗೂ ಸಾಗಿ ಮುಖ್ಯವಾಗಿ ಹೊಟ್ಟೆಯ ಮೇಲಿನ ತೆಳುಗೂದಲಿನ ಸಣ್ಣ ಗೆರೆಯಾಗಿರುತ್ತದೆ. ಇದನ್ನು ರೋಮರಾಜಿ ಎಂದೂ ಕರೆಯಲಾಗಿ ಭಾರತೀಯ ದೃಷ್ಟಿಯಲ್ಲಿ ಹೆಣ್ಣಿನ ಸೌಂದರ್ಯದ ಒಂದು ಮುಖ್ಯ ಲಕ್ಷಣವಾಗಿದೆ. ಸಂಸ್ಕೃತ ಕವಿಗಳು ಹೆಣ್ಣಿನ ಸೌಂದರ್ಯದ ವರ್ಣನೆ ಮಾಡುವಾಗ ರೋಮಾವಲಿಯನ್ನು ವಿಶೇಷವಾಗಿ ವರ್ಣನೆ ಮಾಡಿಯೇ ಮಾಡುತ್ತಾರೆ. ವಿಶ್ವೇಶ್ವರನೆಂಬ ಕವಿ ರೋಮಾವಲಿಯನ್ನು ಕುರಿತು ರೋಮಾವಲೀಶತಕವೆಂಬ ಶತಕವನ್ನೇ ರಚಿಸಿದ್ದಾನೆ! 
    ಇಲ್ಲಿ ಕವಿಯು ಹೆಣ್ಣಿನ ಸೌಂದರ್ಯವನ್ನು ಸೂರ್ಯನ ರಥವೆಂದು ವರ್ಣಿಸುತ್ತಾನೆ. ಆ ರಥ ಅವಳ ಮೈಮೇಲೆ ಚಲಿಸುತ್ತಾ ಹೋದಾಗ, ಅದರ ನೇಮಿ ಅಥವಾ ಚಕ್ರದ ಅಂಚು ಮಾಡುವ ಹೊಸ ರೇಖೆಯನ್ನೇ ಜನರು ರೋಮಾವಲಿಯೆಂದು ಭ್ರಮಿಸುತ್ತಾರೆ ಎನ್ನುತ್ತಾನೆ! ಸಹಜವಾಗಿ ಸುಂದರವಾಗಿ ಉಂಟಾಗಿರುವ ಹೆಣ್ಣಿನ ಅಂಗಾಂಗಗಳಿಗೆ ಕವಿಯು ಉತ್ಪ್ರೇಕ್ಷಿತ ಕಾರಣಗಳನ್ನು ಕೊಡುತ್ತಾ ಅವು ಎಷ್ಟು ಸುಂದರವಾಗಿವೆ ಎಂದು ತೋರಿಸುತ್ತಾನೆ! 

ಶುಕ್ರವಾರ, ಮಾರ್ಚ್ 27, 2026

ರಾಮಾಯಣ ಸಂಬಂಧಿತ ಸ್ವಾರಸ್ಯಕರ ಒಗಟುಗಳು


೧. ಕಂದ ಬಂದ ಕೊಂದ ತಂದ 
         ಸರಳವಾದ ಒಂದೇ ವಾಕ್ಯದಲ್ಲಿ ಈ ಒಗಟು ರಾಮಾಯಣದ ಕಥೆಯನ್ನೇ ಹೇಳುತ್ತದೆ. ಕಂದ, ಎಂದರೆ ಬಾಲ ರಾಮನು ಹುಟ್ಟಿ ಬಂದ, ರಾವಣನನ್ನು ಕೊಂದ, ಸೀತೆಯನ್ನು ಹಿಂದಕ್ಕೆ ಕರೆತಂದ. 

೨. ಕಣ್ಣಾ ಮುಚ್ಚೆ ಕಾಡೆ ಗೂಡೆ ಉದ್ದಿನ ಮೂಟೆ ಉರುಳೇಹೋಯ್ತು ನಮ್ಮ ಹಕ್ಕಿ ಬಿಟ್ಟೆವು ನಿಮ್ಮ ಹಕ್ಕಿ ಬಿಟ್ಟೆವು!
    ಮಕ್ಕಳ ಕಣ್ಣಾಮುಚ್ಚಾಲೆ ಆಟದ ಈ ಸರಳ ಪದ್ಯದಲ್ಲಿ ರಾಮಾಯಣದ ಕಥೆ ಅಡಗಿದೆ. ಕಣ್ಣಾ ಮುಚ್ಚೆ ಅಂದರೆ ದಶರಥನು ಕಣ್ಣು ಮುಚ್ಚಲು, ಅಂದರೆ ಮರಣ ಹೊಂದಲು, ಕಾಡೇ ಗೂಡೆ, ಅಂದರೆ ರಾಮ, ಲಕ್ಷ್ಮಣ, ಸೀತೆಯರಿಗೆ ಕಾಡೇ ಗೂಡಾಯಿತು, ಅಂದರೆ ಮನೆಯಾಯಿತು. ಉದ್ದಿನ ಮೂಟೆ ಉರುಳೇಹೋಯ್ತು, ಅಂದರೆ ಉದ್ದಿನ ಮೂಟೆಯಂತೆ ಕೊಬ್ಬಿ ಉಬ್ಬಿದ್ದ ರಾವಣ ಸತ್ತು ಬಿದ್ದ. ನಮ್ಮ ಹಕ್ಕಿ ಬಿಟ್ಟೆವು ನಿಮ್ಮ ಹಕ್ಕಿ ಬಿಟ್ಟೆವು, ಅಂದರೆ ನಮ್ಮ ಹಕ್ಕಿ ಎಂದು ಭಾವಿಸಿದ್ದ ನಿಮ್ಮ ಹಕ್ಕಿ ಸೀತೆಯನ್ನು ಬಿಟ್ಟೆವು, ಅಂದರೆ ಸೀತೆಯನ್ನು ಗೌರವದಿಂದ ಕಳಿಸಿಕೊಡುತ್ತೇವೆ ಎಂದು ವಿಭೀಷಣ ಹೇಳುವುದು. 
೩ ಹತ್ತುತಾ ಕೆಂಪು, ಆರುತಾ ಕಪ್ಪು, ಅದರ ಮಿತ್ರನ ಮಗನ ಒಡೆಯನ ವೈರಿಯ ಹೆಂಡತಿಯ ಹುಟ್ಹೆಸರೇನು?
      ಇದೊಂದು ಸಂಕೀರ್ಣ ಒಗಟು. ಹತ್ತುತಾ ಕೆಂಪು ಆರುತಾ ಕಪ್ಪು ಅಂದರೆ ಬೆಂಕಿ. ಅದರ ಮಿತ್ರ ಅಂದರೆ ಗಾಳಿ ಅಥವಾ ವಾಯು. ಮಿತ್ರನ ಮಗ ಅಂದರೆ ವಾಯುಪುತ್ರ ಹನುಮಂತ. ಅವನ ಒಡೆಯ ಅಂದರೆ ರಾಮ. ಅವನ ವೈರಿ ಅಂದರೆ ರಾವಣ. ಅವನ ಹೆಂಡತಿಯ ಹುಟ್ಹೆಸರು ಮಂಡೋದರಿ.
೪. ಹತೋ ಹನುಮತಾ ರಾಮ: ಸೀತಾ ಹರ್ಷಮುಪಾಗತಾ /
     ರುದಂತಿ ರಾಕ್ಷಸಾ: ಸರ್ವೇ ಹಾ ಹಾ ರಾಮೋ ಹತೋ      ಹತ: //
      ಇದೊಂದು ಸಂಸ್ಕೃತದ ಕೂಟ ಸಮಸ್ಯೆ. ಮೇಲ್ನೋಟಕ್ಕೆ ಒಂದು ಆರ್ಥ ಕಂಡರೆ ಪದಗಳನ್ನು ಬೇರೆ ರೀತಿಯಲ್ಲಿ ಸೇರಿಸಿದಾಗ ಅಥವಾ ಬಿಡಿಸಿದಾಗ ಬೇರೆ ಅರ್ಥ ಬರುತ್ತದೆ. ಮೇಲ್ನೋಟಕ್ಕೆ ಕಾಣುವ ಅರ್ಥ ಹೀಗಿದೆ -
      ಹನುಮಂತನಿಂದ ರಾಮನು ಹತನಾಗಲು, ಅಂದರೆ ಕೊಲ್ಲಲ್ಪಡಲು ( ಹತೋ ಹನುಮತಾ ರಾಮ:), ಸೀತೆಗೆ ಹರ್ಷವುಂಟಾಯಿತು! ಆಗ ರಾಕ್ಷಸರೆಲ್ಲರೂ,' ಹಾ! ಹಾ! ರಾಮನು ಹತನಾದ!' ಎಂದು ಅಳತೊಡಗಿದರು!
    ವಿಚಿತ್ರ ಅರ್ಥವಲ್ಲವೇ? ಇದು ಹೇಗೆ ಸಾಧ್ಯ? ಹನುಮತಾ ರಾಮ: ಎನ್ನುವುದನ್ನು ಹನುಮತಾರಾಮ: ಎಂದು ಸೇರಿಸಿ ಹನುಮತಾ ಆರಾಮ: ಎಂದು ಬಿಡಿಸಿಕೊಂಡರೆ ಹತೋ ಹನುಮತಾ ಆರಾಮ: ಎಂದಾಗುತ್ತದೆ. ಆರಾಮ ಅಂದರೆ ಉದ್ಯಾನವನ. ಆಗ ಹನುಮಂತನಿಂದ ಆರಾಮ ಅಥವಾ ಉದ್ಯಾನವನ ನಾಶವಾಗಲು ಎಂದಾಗುತ್ತದೆ. ಪುನಃ  ಹಾರಾಮ ಎಂದು ಸೇರಿಸಿ, ಹಾ ಆರಾಮ ಎಂದು ಬಿಡಿಸಿದರೆ ರಾಕ್ಷಸರು ಹಾ! ಹಾ! ಆರಾಮ ಅಥವಾ ಉದ್ಯಾನವನ ನಾಶವಾಯಿತು ಎಂದು ಅಳುತ್ತಾರೆ ಎಂಬ ಅರ್ಥ ಬರುತ್ತದೆ. ಈಗ ಶ್ಲೋಕದ ಅರ್ಥ ಹೀಗಾಗುತ್ತದೆ -
       ಹನುಮಂತನಿಂದ ಆರಾಮ ಅಥವಾ ಉದ್ಯಾನವನ ನಾಶವಾಗಲು, ಸೀತೆಗೆ ಹರ್ಷವುಂಟಾಯಿತು! ಆಗ ರಾಕ್ಷಸರೆಲ್ಲರೂ ' ಹಾ! ಹಾ! ಆರಾಮ ಅಥವಾ ಉದ್ಯಾನವನ ನಾಶವಾಯಿತು!' ಎಂದು ಅಳತೊಡಗಿದರು.
   

ಗುರುವಾರ, ಮಾರ್ಚ್ 26, 2026

ಶಿಲ್ಪ ಕಥೆ


ಶಿಲ್ಪ ಕಥೆ - ಶ್ರೀರಾಮನಿಂದ ಸಪ್ತತಾಳವೃಕ್ಷಗಳ ಛೇದನ 

     ಇದು ಅಮೃತಾಪುರದ ಅಮೃತೇಶ್ವರ ದೇವಾಲಯದ ಒಂದು ಶಿಲ್ಪ. ಚಿಕ್ಕಮಗಳೂರಿನ ಬಳಿಯ ತರಿಕೆರೆಯಲ್ಲಿರುವ ಈ ಅದ್ಭುತ ದೇವಾಲಯದಲ್ಲಿ ರಾಮಾಯಣ, ಮಹಾಭಾರತ, ಮತ್ತು ಭಾಗವತ ಮೂರೂ ಕಥೆಗಳ ಸುಂದರ ಶಿಲ್ಪಗಳಿವೆ. ಇದು ರಾಮಾಯಣದ ಒಂದು ಕಥಾಪ್ರಸಂಗದ ಒಂದು ಶಿಲ್ಪ. 
     ಶ್ರೀರಾಮನು ವಾನರರಾಜ ಸುಗ್ರೀವನ ಸಖ್ಯ ಬೆಳೆಸಿದ ಬಳಿಕ, ಅವನು ಸೀತೆಯನ್ನು ಹುಡುಕಲು ಸಹಾಯ ಮಾಡುವುದಾಗಿಯೂ ಅದಕ್ಕೆ ಪ್ರತಿಯಾಗಿ ರಾಮನು ತನ್ನನ್ನು ರಾಜ್ಯದಿಂದ ಓಡಿಸಿ ಹೆಂಡತಿ ರುಮೆಯನ್ನು ಅಪಹರಿಸಿರುವ ತನ್ನ ಅಣ್ಣ ವಾಲಿಯನ್ನು ಸಂಹರಿಸಬೇಕೆಂದೂ ಕೇಳುತ್ತಾನೆ. ಅದಕ್ಕೆ ರಾಮನು ಒಪ್ಪಲು, ಸುಗ್ರೀವನು ಅವನ ಬಾಹುಬಲವನ್ನು ಪರೀಕ್ಷಿಸಲು ಸಪ್ತತಾಳವೃಕ್ಷಗಳನ್ನು ಒಂದೇ ಬಾಣದಿಂದ ಛೇದಿಸಬೇಕೆಂದೂ ವಾಲಿಯು ಹಾಗೆ ಮಾಡುತ್ತಿದ್ದನೆಂದೂ ಹೇಳುತ್ತಾನೆ. ರಾಮನು ಅಂತೆಯೇ ಒಂದೇ ಬಾಣದಿಂದ ಸಪ್ತತಾಳವೃಕ್ಷಗಳನ್ನು ಭೇದಿಸಲು, ಅದು ಅವನ್ನು ಛೇದಿಸಿ ಪುನಃ ಅವನ ಬತ್ತಳಿಕೆಗೆ ಬಂದು ಬೀಳುತ್ತದೆ. ವಾಲ್ಮೀಕಿ ರಾಮಾಯಣದಲ್ಲಿರುವ ಕಥೆ ಇಷ್ಟೇ ಆದರೆ, ಇಲ್ಲಿ ಕಾಣುತ್ತಿರುವ ಶಿಲ್ಪದಲ್ಲಿ ಆ ಸಪ್ತತಾಳವೃಕ್ಷಗಳ ಕೆಳಗೆ ಒಂದು ಸರ್ಪವಿರುವುದನ್ನು ಕಾಣುತ್ತೇವೆ. ಇದೇ ರೀತಿಯ ಶಿಲ್ಪಗಳು ಇತರ ಹೊಯ್ಸಳ ದೇವಾಲಯಗಳಲ್ಲೂ ಕಂಡುಬರುತ್ತವೆ.
      ಈ ಹಾವೇಕೆ ಬಂತು? ವಾಲ್ಮೀಕಿ ರಾಮಾಯಣದಲ್ಲಿ ಹಾವಿನ ಪ್ರಸ್ತಾಪವಿಲ್ಲ. ಆದರೆ ಸಂಸ್ಕೃತದ್ದೇ ಇನ್ನೊಂದು ರಾಮಾಯಣವಾದ ಆನಂದರಾಮಾಯಣದಲ್ಲಿದೆ. ಇದನ್ನೂ ವಾಲ್ಮೀಕಿಗಳೇ ರಚಿಸಿದರೆಂದು ಪ್ರತೀತಿ. ಇದರ ಕಥೆಯ ಪ್ರಕಾರ, ರಾಮನು ಆ ಸಪ್ತತಾಳವೃಕ್ಷಗಳು ಚಕ್ರಾಕಾರವಾಗಿರುವುದನ್ನು ಗಮನಿಸುತ್ತಾನೆ. ಹಾಗಿರುವಾಗ ಒಂದೇ ಬಾಣದಿಂದ ಹೇಗೆ ಅವನ್ನು ಛೇದಿಸಲು ಸಾಧ್ಯ? ಅಲ್ಲದೇ ಅವು ಒಂದು ಸರ್ಪದ ಮೈಮೇಲೆ ಬೆಳೆದಿರುತ್ತವೆ. ಎಲ್ಲಾ ಸರ್ಪಗಳಲ್ಲೂ ಆದಿಶೇಷನ ಅಂಶವಿರುತ್ತದೆಯಲ್ಲವೇ? ಲಕ್ಷ್ಮಣ ಆದಿಶೇಷನ ಅವತಾರವೇ ಆಗಿರುತ್ತಾನೆ. ಹಾಗಾಗಿ ರಾಮನು ತನ್ನ ಅಂಗುಷ್ಠದಿಂದ ಲಕ್ಷ್ಮಣನ ಅಂಗುಷ್ಠವನ್ನು ಒತ್ತುತ್ತಾನೆ. ಆಗ ಆತ ಸರ್ಪಕ್ಕೆ ಒತ್ತಿದಂತಾಗಿ ಸುರುಳಿ ಸುತ್ತಿ ಮಲಗಿರುವ ಅದು ನೆಟ್ಟಗಾಗುತ್ತದೆ! ಆಗ ಅದರ ಮೇಲಿರುವ ಸಪ್ತತಾಳವೃಕ್ಷಗಳೂ ನೆಟ್ಟಗಾಗುತ್ತವೆ! ಆಗ ರಾಮನು ಒಂದೇ ಬಾಣದಿಂದ ಅವನ್ನು ಛೇದಿಸುತ್ತಾನೆ! 
     ಇಷ್ಟಕ್ಕೂ ಆ ಸಪ್ತತಾಳವೃಕ್ಷಗಳು ಏಕೆ ಆ ಸರ್ಪದ ಮೈಮೇಲೆ ಬೆಳೆದಿರುತ್ತವೆ? ಅದಕ್ಕೊಂದು ಕಥೆ ಇದೆ. ಒಮ್ಮೆ ವಾಲಿಯು ಕೆಲವು ತಾಳೆ ಹಣ್ಣುಗಳನ್ನು ಕಿತ್ತುಕೊಂಡು ತಿನ್ನಲೆಂದು ಒಂದು ಗುಹೆಗೆ ಹೋಗಿರುತ್ತಾನೆ. ಆಗ ನೋಡಿದರೆ ಏಳು ತಾಳೆ ಹಣ್ಣುಗಳು ಕಾಣೆಯಾಗಿರುತ್ತವೆ! ಯಾರು ಕದ್ದಿದ್ದು ಎಂದು ನೋಡಲು, ಒಂದು ಸರ್ಪವು ಕದ್ದಿರುತ್ತದೆ. ಆಗ ವಾಲಿಯು ಕೋಪಗೊಂಡು ಆ ಸರ್ಪಕ್ಕೆ," ನಿನ್ನ ಮೈಮೇಲೆ ಏಳು ತಾಳೆ ವೃಕ್ಷಗಳು ಬೆಳೆಯಲಿ!" ಎಂದು ಶಪಿಸಿರುತ್ತಾನೆ. ಅದಕ್ಕೆ ಆ ಸರ್ಪವೂ," ಯಾರು ಆ ಏಳು ತಾಳೆ ವೃಕ್ಷಗಳನ್ನು ಒಂದೇ ಬಾಣದಿಂದ ಛೇದಿಸುವನೋ ಅವನೇ ನಿನ್ನನ್ನು ಕೊಲ್ಲುತ್ತಾನೆ!" ಎಂದು ಮರುಶಾಪ ನೀಡಿರುತ್ತದೆ!
    ಹೀಗೆ ವಾಲಿಯ ಶಾಪದಿಂದ ಆ ಸರ್ಪದ ಮೈಮೇಲೆ ಏಳು ತಾಳೆ ವೃಕ್ಷಗಳು ಬೆಳೆದಿರುತ್ತವೆ. ರಾಮನು ಅವನ್ನು ಛೇದಿಸಿದ ಬಳಿಕ, ಸರ್ಪಕ್ಕೆ ಶಾಪ ವಿಮುಕ್ತಿಯಾಗುತ್ತದೆ. ಆಗ ಸುಗ್ರೀವನು ವಾಲಿಗೆ ಅವನ ತಂದೆ ಇಂದ್ರನು ಒಂದು ಅಲೌಕಿಕ ಹಾರವನ್ನು ಕೊಟ್ಟಿರುವನೆಂದೂ ಅದನ್ನು ಅವನು ಧರಿಸಿದ್ದಾಗ ಯಾರು ಅದನ್ನು ನೋಡುವರೋ ಅವರ ಅರ್ಧ ಶಕ್ತಿ ವಾಲಿಗೇ ಹೋಗುವುದೆಂದೂ ಹೇಳುತ್ತಾನೆ. ಆಗ ರಾಮನ ಆಜ್ಞೆಯಂತೆ ಆ ಸರ್ಪವು ವಾಲಿಯ ಆ ಹಾರವನ್ನು ಉಪಾಯವಾಗಿ ತೆಗೆದುಕೊಂಡು ಇಂದ್ರನಿಗೆ ಕೊಡುತ್ತದೆ.
     ಇದಿಷ್ಟೂ ಆನಂದ ರಾಮಾಯಣದ ಕಥೆ. ಆದರೆ ಈ ಶಿಲ್ಪದಲ್ಲಿ ರಾಮನು ಏಳು ಮರಗಳನ್ನು ಛೇದಿಸುವುದರೊಂದಿಗೆ ಸರ್ಪವನ್ನೂ ಬಾಣದಿಂದ ಹೊಡೆದಿದ್ದಾನೆ. ಅದು ಸರ್ಪದ ಶಾಪ ವಿಮುಕ್ತಿಗಾಗಿ ಇರಬಹುದು. 
     ಇದಕ್ಕೆ ಕಾರಣ ಇನ್ನೊಂದು ಕಥೆಯಾಗಿದ್ದು, ಅದು ತಮಿಳಿನ ಕಂಬರಾಮಾಯಣ ಹಾಗೂ ಒಡಿಯಾದ ಬಲರಾಮದಾಸನ ಜಗಮೋಹನ ರಾಮಾಯಣ ಮತ್ತು ಉಪೇಂದ್ರ ಭಂಜನ ವೈದೇಹಿಸ ವಿಲಾಸದಲ್ಲಿದೆ. ಈ ಕಥೆಯ ಪ್ರಕಾರ, ಮಣಿಭದ್ರ ಎಂಬ ಯಕ್ಷನಿಗೆ ಕವಿಕಾ ಎಂಬ ಪತ್ನಿಯಿಂದ ಅನೇಕ ಮಕ್ಕಳಿರುತ್ತಾರೆ. ಅವರಲ್ಲಿ ಏಳು ಪುತ್ರರು ಮಯಾಸುರನಿಂದ ಮಾಯಾವಿದ್ಯೆ ಕಲಿತು, ಒಂದು ದೊಡ್ಡ ಸರ್ಪವನ್ನು ಸೃಷ್ಟಿಸಿ ಅದರ ಮೇಲೆ ಕುಳಿತು ಲೋಕಪರ್ಯಟನೆ ಮಾಡುತ್ತಿರುತ್ತಾರೆ. ಒಮ್ಮೆ ಅಗಸ್ತ್ಯ ಮುನಿಗಳು ಬರುತ್ತಿದ್ದಾಗ ಅವರನ್ನು ಅಪಹಾಸ್ಯ ಮಾಡಲು ಅವರು ಆ ಸರ್ಪವನ್ನು ಭೂಮಿಯ ಅಡಿಯಲ್ಲಿ ಹೋಗಿಸಿ ಅದರ ಮೇಲೆ ಸಪ್ತ ತಾಳೆ ವೃಕ್ಷಗಳ ರೂಪ ತಾಳಿ ಚಕ್ರಾಕಾರವಾಗಿ ನಿಂತು ಅವರ ದಾರಿಗೆ ಅಡ್ಡವಾಗುತ್ತಾರೆ. ಆಗ ಅವರು," ಇನ್ನು ಮುಂದೆ ಹೀಗೆಯೇ ನಿಂತಿರಿ!" ಎಂದು ಶಪಿಸುತ್ತಾರೆ! ಆಗ ಅವರು ಪಶ್ಚಾತ್ತಾಪ ಪಟ್ಟು ಕ್ಷಮೆಯಾಚಿಸಲು, ಅಗಸ್ತ್ಯರು, ಅನೇಕ ವರ್ಷಗಳ ಬಳಿಕ ವಿಷ್ಣುವಿನ ಅವತಾರವಾದ ಶ್ರೀ ರಾಮನಿಂದ ಅವರಿಗೆ ಮುಕ್ತಿ ಸಿಗುತ್ತದೆ ಎಂದು ಉಶ್ಶಾಪ ನೀಡುತ್ತಾರೆ. ರಾಮನು ಆ ಏಳು ತಾಳೆ ವೃಕ್ಷಗಳನ್ನು ಛೇದಿಸಬೇಕಾದಾಗ ಒಂದು ಕಲ್ಲನ್ನು ತನ್ನ ಪಾದದಿಂದ ಒತ್ತುತ್ತಾನೆ. ಆಗ ಕಲ್ಲಿನ ಕೆಳಗೆ ಆ ಸರ್ಪದ ತಲೆ ( ಕೆಲವು ಕಥೆಗಳಲ್ಲಿ ಬಾಲ) ಇರಲು, ಅದು ಒತ್ತಲ್ಪಟ್ಟು ಅದಕ್ಕೆ ಪ್ರಚೋದನೆಯಾಗಿ ಸುರುಳಿಯಾಗಿ ಮಲಗಿರುವ ಅದು ನೆಟ್ಟಗಾಗುತ್ತದೆ. ಆಗ ಚಕ್ರಾಕಾರವಾಗಿರೂವ ಮರಗಳು ನೆಟ್ಟಗಾಗಲು, ರಾಮನು ಒಂದೇ ಬಾಣದಿಂದ ಮರಗಳನ್ನೂ ಹಾವನ್ನೂ ಭೇದಿಸುತ್ತಾನೆ ಹಾಗೂ ಆ ಬಾಣ ಅವನ ಬತ್ತಳಿಕೆಗೆ ಹಿಕದಿರುಗುತ್ತದೆ. ಆಗ ಆ ಸಪ್ತ ಕುಮಾರರಿಗೆ ಶಾಪವಿಮುಕ್ತಿಯಾಗುತ್ತದೆ.
    ಒಡಿಯಾ ರಾಮಾಯಣಗಳ ಪ್ರಕಾರ, ಈ ಏಳು ತಾಳವೃಕ್ಷಗಳಲ್ಲಿ ವಾಲಿಯ ಭಾಗಶಃ ಬಲವಿರುತ್ತದೆ. ಹಾಗಾಗಿ ಅವನ್ನು ರಾಮನು ನಾಶ ಮಾಡಬೇಕಾಗಿರುತ್ತದೆ. ಕಂಬ ರಾಮಾಯಣ ಹಾಗೂ ಆನಂದ ರಾಮಾಯಣದಲ್ಲಿ ಹಾಗೇನಿಲ್ಲ. 
    ಹನುಮಂತನು ರಚಿಸಿದನೆನ್ನಲಾದ ಸಂಸ್ಕೃತದ ಹನುಮನ್ನಾಟಕ ಅಥವಾ ಮಹಾನಾಟಕ ಎಂಬ ನಾಟಕದಲ್ಲೂ ಈ ಹಾವಿನ ಮೇಲೆ ಸಪ್ತತಾಳವೃಕ್ಷಗಳಿರುವ ವಿಷಯ ಇದೆ. ಅಲ್ಲಿ ವಾಲಿಯು ರಾಮನು ತನ್ನನ್ನು ಕೊಲ್ಲುವನೆಂದು ಮಾಡಿರುವ ಪ್ರತಿಜ್ಞೆಯನ್ನು ಕೇಳಿ ವಕ್ರವಾಗಿರುವ ಏಳು ತಾಳವೃಕ್ಷಗಳನ್ನು ತಾನೇ ಯುದ್ಧಕ್ಕೆ ಕಳಿಸುತ್ತಾನೆ. ಆಗ ಲಕ್ಷ್ಮಣನು ಅವುಗಳ ಕೆಳಗಿರುವ ಹಾವನ್ನು ತನ್ನ ಪಾದದಿಂದ ಒತ್ತಿ ನೆಟ್ಟಗೆ ಮಾಡಿ, ಮರಗಳು ನೆಟ್ಟಗೆ ನಿಲ್ಲುವಂತೆ ಮಾಡುತ್ತಾ ರಾಮನಿಗೆ ಬಾಣ ಹೊಡೆಯಲು ಸಹಾಯ ಮಾಡುತ್ತಾನೆ.
    ಹೀಗೆ ಈ ಸಪ್ತತಾಳವೃಕ್ಷಗಳೊಂದಿಗೆ ಸರ್ಪದ ಸಂಬಂಧ ಇರುವ ಕಥೆಗಳು ವಾಲ್ಮೀಕಿ ರಾಮಾಯಣದಲ್ಲಿ ಇರದಿದ್ದರೂ ಹಲವು ರಾಮಾಯಣಗಳಲ್ಲಿವೆ. ಅವು ಬಾಯ್ಮಾತಿನಿಂದ ಹರಡಿ ಶಿಲ್ಪಿಗೆ ಈ ರೀತಿಯ ಶಿಲ್ಪ ರಚಿಸಲು ಪ್ರೇರಣೆ ಮಾಡಿರಬಹುದು.

#ಶಿಲ್ಪ_ಕಥೆ #ಶಿಲ್ಪ_ಸ್ವಾರಸ್ಯ

ಮಂಗಳವಾರ, ಮಾರ್ಚ್ 24, 2026

ಸುಂದರೀಶತಕ -೧೦

ಸಂಸ್ಕೃತ ಮೂಲ 

ಅಸ್ಮಿನ್ಪ್ರಕೃತಿಮನೋಜ್ಞೇ ಲಗ್ನಾ ಪ್ರಾಯೇಣ ಮಾನ್ಮಥೀ ದೃಷ್ಟಿ: /
ಸುಂದರಿ ಯತೋ ಭವತ್ಯಾ: ಪ್ರತಿಕ್ಷಣಂ ಕ್ಷೀಯತೇ ಮಧ್ಯ: //

ಕನ್ನಡ ಅನುವಾದ 

     ' ಎಲೈ ಸುಂದರಿ! ಪ್ರಕೃತಿಸಹಜವಾಗಿ ಸುಂದರವಾಗಿರುವ ನಿನ್ನ ನಡುವಿನಲ್ಲಿ ಪ್ರಾಯಶಃ ಮನ್ಮಥನ ದೃಷ್ಟಿ ನೆಟ್ಟಿದೆ! ಅದ್ದರಿಂದಲೇ ಅದು ಪ್ರತಿಕ್ಷಣವೂ ಕ್ಷೀಣಿಸುತ್ತಿದೆ!' 

    ಹೆಣ್ಣಿನ ಮಧ್ಯಭಾಗ ಅಥವಾ ನಡುವು ಸಣ್ಣಗಿದ್ದಷ್ಟೂ ಅವಳು ಸುಂದರವಾಗಿ ಕಾಣುತ್ತಾಳೆ! ಹಾಗಾಗಿಯೇ ಸಂಸ್ಕೃತ ಕಾವ್ಯಗಳಲ್ಲಿ ಸುಂದರವಾದ ಹೆಣ್ಣನ್ನು ಸಂಬೋಧಿಸುವಾಗ ಸುಮಧ್ಯಮಾ (ಸುಮಧ್ಯಮೆ) ಎಂಬ ಪದ ಬಳಸುತ್ತಾರೆ. ಇಲ್ಲಿ ಕವಿಯು, ಪ್ರಾಯಶಃ ಮನ್ಮಥನ ದೃಷ್ಟಿ, ಈಗಾಗಲೇ ಪ್ರಕೃತಿಸಹಜವಾಗಿ ಸುಂದರವಾಗಿರುವ ಸುಂದರಿಯ ಸೊಂಟದಲ್ಲಿ ನೆಟ್ಟಿರುವುದರಿಂದ ಅದು ಪ್ರತಿ ಕ್ಷಣವೂ ಸಣ್ಣಗಾಗುತ್ತಿದೆ ಎನ್ನುತ್ತಾ ಅವಳ ಸೊಂಟದ ಸೌಂದರ್ಯವನ್ನು ಉತ್ಪ್ರೇಕ್ಷಿತವಾಗಿ ವರ್ಣಿಸುತ್ತಾನೆ. ಯಾರಾದರೂ ಸಣ್ಣಗಾಗುತ್ತಿದ್ದರೆ ಇನ್ನಾರದಾದರೂ ದೃಷ್ಟಿ ಬಿದ್ದಿದೆ ಎಂದು ಹೇಳುತ್ತೇವೆ. ಹಾಗೆಯೇ ಇಲ್ಲಿ ಸುಂದರಿಯ ನಡುವು ಪ್ರತಿ ಕ್ಷಣವೂ ಸಣ್ಣಗಾಗುತ್ತಿದೆ ಎಂದರೆ ಆ ಮನ್ಮಥನ ದೃಷ್ಟಿಯೇ ಬಿದ್ದಿರಬೇಕು ಎಂದು ಉತ್ಪ್ರೇಕ್ಷಿಸುತ್ತಾನೆ! 

ಸೋಮವಾರ, ಮಾರ್ಚ್ 23, 2026

ಸುಂದರೀಶತಕ -೯


ಸಂಸ್ಕೃತ ಮೂಲ 

ಅಂಬರಚುಂಬಿತಮೇನಂ ನಿತಂಬಮಧಿರುಹ್ಯ ಮುಗ್ಧನಯನಾಯಾ: /
ದೂರಾತ್ಪಶ್ಯತಿ ಯೂನಾಂ ಮನಾಂಸಿ ಪಾಟಚ್ಚರೋ ಮದನ: //

ಕನ್ನಡ ಅನುವಾದ 

     'ಮುಗ್ಧನಯನೆಯಾದ ಈ ಸುಂದರಿಯ ಅಂಬರಚುಂಬಿತ ( ಗಗನಚುಂಬಿತ ಅಥವಾ ವಸ್ತ್ರಾಚ್ಛಾದಿತ) ನಿತಂಬವನ್ನೇರಿ, ದೂರದಿಂದ ಯುವಕರ ಮನಸ್ಸುಗಳನ್ನು ಮನ್ಮಥನೆಂಬ ಕಳ್ಳನು ನೋಡುತ್ತಿದ್ದಾನೆ!'
     ಅಂಬರಚುಂಬಿತ ಎನ್ನುವಲ್ಲಿ ಸುಂದರಿಯ ನಿತಂಬವು ಬಹಳ ಉನ್ನತವಾಗಿದೆಯೆಂದು ಕವಿಯು ಧ್ವನಿಸುತ್ತಾನೆ. ನಿತಂಬವು ಉನ್ನತವಾಗಿರುವುದು ಹೆಣ್ಣಿನ ಸೌಂದರ್ಯದ ಒಂದು ಲಕ್ಷಣ. ಅಂಥ ಸುಂದರವಾದ ನಿತಂಬವನ್ನೇರಿ ಕಳ್ಳನಾದ ಮನ್ಮಥನು ಆ ಎತ್ತರದ ಸ್ಥಳದಿಂದ ಯುವಕರ ಮನಸ್ಸುಗಳನ್ನು ಸೆಳೆಯಲು ದೂರದಿಂದ ನೋಡುತ್ತಿದ್ದಾನೆ ಎಂದು ಹೇಳುತ್ತಾ ಕವಿಯು ಸುಂದರಿಯ ನಿತಂಬವು ಅಷ್ಟು ಸುಂದರವಾಗಿದೆಯೆಂದು ಉತ್ಪ್ರೇಕ್ಷಿಸಿ ವರ್ಣಿಸುತ್ತಾನೆ.

ಭಾನುವಾರ, ಮಾರ್ಚ್ 22, 2026

ಸಂಸ್ಕೃತ ಪ್ರಹೇಳಿಕೆಗಳು -೨


ಉಚ್ಚಿಷ್ಟಂ ಶಿವನಿರ್ಮಾಲ್ಯಂ ವಮನಂ ಶವಕರ್ಪಟಮ್ /
ಕಾಕವಿಷ್ಠಾಸಮುತ್ಪನ್ನ:  ಪಂಚೈತೇsತಿಪವಿತ್ರಕಾ: //
     ' ಉಚ್ಚಿಷ್ಟ ( ಎಂಜಲು),:ಶಿವನಿರ್ಮಾಲ್ಯ ( ಶಿವನ ತಲೆಯಿಂದ ಬಿದ್ದುದು), ವಾಂತಿ, ಶವದ ಮೇಲಿನ ಬಟ್ಟೆ, ಮತ್ತು ಕಾಗೆಯ ಮಲದಿಂದ ಹುಟ್ಟಿದುದು - ಈ ಐದೂ ಅತಿ ಪವಿತ್ರವಾದ ವಸ್ತುಗಳು!'
   ಮೇಲ್ನೋಟಕ್ಕೆ ಇಲ್ಲಿ ಹೇಳಿರುವುದೆಲ್ಲವೂ ಅಪವಿತ್ರವಾದ ವಸ್ತುಗಳೆಂದು ಕಾಣುತ್ತವೆ. ಆದರೆ ಇದೊಂದು ಒಗಟು.‌ಹಾಗಾಗಿ ಬೇರೇನೋ ಇರಬೇಕೆಂದು ಯೋಚಿಸಬೇಕು. ಮೊದಲನೆಯದಾಗಿ ಉಚ್ಚಿಷ್ಟ ಅಥವಾ ಎಂಜಲೆಂದರೆ ಕರುವು ಹಸುವಿನ ಕೆಚ್ಚಲಿನಿಂದ ಕುಡಿದ ಬಳಿಕ ಕರೆದುಕೊಳ್ಳುವ ಹಾಲು.‌ಅದು ಎಂಜಲಾದರೂ ಪವಿತ್ರವಲ್ಲವೇ? ಶಿವನಿರ್ಮಾಲ್ಯ ಅಥವಾ ಶಿವನ ತಲೆಯಿಂದ ಬಿದ್ದುದು ಗಂಗೆ. ಅದು ಪವಿತ್ರವಲ್ಲವೇ? ವಾಂತಿ ಎಂದರೆ ಜೇನುತುಪ್ಪ.‌ ಹಲವು ಹೂವುಗಳಿಂದ ಮಕರಂದವನ್ನು ಹೀರಿ ಗೂಡಿಗೆ ಬಂದು, ಹೊಟ್ಟೆಯಲ್ಲಿ ಜೇನಾಗಿ ಪರಿವರ್ತಿತವಾಗುವ ರಸವನ್ನು ಜೇನ್ನೊಣಗಳು ಬಾಯಿಂದ ಹೊರಹಾಕಿ ಸಂಗ್ರಹಿಸುವ ಜೇನುತುಪ್ಪ ವಾಂತಿಯಲ್ಲದೇ ಇನ್ನೇನು? ಆದರೆ ಎಲ್ಲಾ ದೇವಕಾರ್ಯ, ಅಭಿಷೇಕಗಳಿಗೆ ಅದನ್ನು ಪವಿತ್ರವೆಂದು ಬಳಸುವುದಿಲ್ಲವೇ? ಶವದ ಮೇಲಿನ ಬಟ್ಟೆ ಎಂದರೆ ರೇಶ್ಮೆ ವಸ್ತ್ರ. ರೇಶ್ಮೆ ಹುಳು ಪತಂಗವಾಗಲೆಂದು ತನ್ನ ಸುತ್ತಲೂ ಗೂಡು ಕಟ್ಟಿಕೊಳ್ಳಲು, ಆ ಗೂಡನ್ನು ಬಿಸಿನೀರಿನಲ್ಲಿ ಹಾಕಿ ಎಳೆಯುವ ರೇಶ್ಮೆ ದಾರ ಶವದ ಮೇಲಿನ ಬಟ್ಟೆಯಲ್ಲದೇ ಇನ್ನೇನು? ಆದರೆ ಆ ರೇಶ್ಮೆ ವಸ್ತ್ರವನ್ನು ಸಕಲ ದೇವಪೂಜೆಗಳಲ್ಲಿ ಪವಿತ್ರವೆಂಬಂತೆ ಬಳಸುತ್ತಾರೆ. ಇನ್ನು ಕಾಗೆಯ ಮಲದಿಂದ ಹುಟ್ಟಿದುದು ಎಂದರೆ ಅರಳೀಮರ. ಕಾಗೆಯು ಅರಳೀಮರದ ಹಣ್ಣುಗಳನ್ನು ತಿಂದು ಅದರ ಬೀಜಗಳನ್ನು ಮಲದಲ್ಲಿ ವಿಸರ್ಜಿಸಲು, ಆ ಬೀಜಗಳಿಂದ ಹುಟ್ಟುವ ಅರಳೀಮರ, ಕಾಗೆಯ ಮಲದಿಂದ ಹುಟ್ಟಿದಂತೆಯೇ ಆಯಿತಲ್ಲವೇ? ಆದರೆ ಆ ಅರಳೀಮರದಲ್ಲಿ ತ್ರಿಮೂರ್ತಿಗಳು ನೆಲೆಸಿದ್ದಾರೆ ಎಂದು ಎಲ್ಲರೂ ಅದರ ಪ್ರದಕ್ಷಿಣೆ ಮಾಡುತ್ತಾರೆ. ಹೀಗೆ ಅದು ಬಹಳ ಪವಿತ್ರ.
      ಹೀಗೆ ಮೇಲ್ನೋಟಕ್ಕೆ ಪವಿತ್ರ ಎನಿಸುವ ಎಷ್ಟೋ ವಸ್ತುಗಳು ಅಪವಿತ್ರದ ಮೂಲದ್ದೆನಿಸಬಹುದು. ಹಾಗಾಗಿ ನಾವು ವಸ್ತುಗಳ ಉಪಯುಕ್ತತೆ ನೋಡುವಾಗ ಅವುಗಳ ಮೂಲದ ಬಗ್ಗೆ ಬೇಸರಿಸಿಕೊಳ್ಳಬಾರದು.
     

ಶನಿವಾರ, ಮಾರ್ಚ್ 21, 2026

ಸಂಸ್ಕೃತ ಪ್ರಹೇಳಿಕೆಗಳು

ಸಂಸ್ಕೃತದಲ್ಲಿ ಪ್ರಹೇಲಿಕಾ ಎಂದರೆ ಒಗಟು. ಈ ಸಂಸ್ಕೃತ ಪದದಿಂದಲೇ ಹಿಂದಿಯ ಪಹೇಲಿ ಎಂಬ ಪದ ಬಂದಿರಬಹುದು. ಮೇಲ್ನೋಟಕ್ಕೆ ಬೇರೇನೋ ಹೇಳುವ, ಒಳಗೆ ಬೇರೆಯೇ ಗೂಢಾರ್ಥವಿರುವ ವಾಕ್ಯಗಳು ಅಥವಾ ಪ್ರಶ್ನೆಗಳೇ ಒಗಟುಗಳು. ಪ್ರಾಚೀನ ಕಾಲದಿಂದಲೂ ಜನರಲ್ಲಿ ಒಗಟು ಕೇಳುವ, ಅದನ್ನು ಬಿಡಿಸುವ ವಿನೋದದ ಆಟ ಜನರಲ್ಲಿ ನಡೆದು ಬಂದಿದೆ. ವಾತ್ಸ್ಯಾಯನನು ತನ್ನ ಕಾಮಸೂತ್ರದಲ್ಲಿ ಕೊಡುವ ಅರವತ್ತು ನಾಲ್ಕು ಕಲೆಗಳ ಪಟ್ಟಿಯಲ್ಲಿ ಪ್ರಹೇಲಿಕಾ ಕೂಡ ಸೇರಿದೆ. ಕನ್ನಡದಲ್ಲೂ ಅನೇಕ ಒಗಟುಗಳಿವೆ. ಈಗ ಸಂಸ್ಕೃತದ ಒಂದು ಜನಪ್ರಿಯ ಪ್ರಹೇಳಿಕೆಯನ್ನು ನೋಡೋಣ.

   ತರುಣ್ಯಾಲಿಂಗಿತ: ಕಂಠೇ ನಿತಂಬಸ್ಥಲಮಾಶ್ರಿತ: /
   ಗುರೂಣಾಂ ಸನ್ನಿಧಾನೇsಪಿ ಕ: ಕೂಜತಿ ಮುಹುರ್ಮುಹು: //

       ' ತರುಣಿಯಿಂದ ಕಂಠವು ಆಲಂಗಿಸಲ್ಪಟ್ಟು, ಅವಳ ನಿತಂಬ ಸ್ಥಳವನ್ನು ಆಶ್ರಯಿಸಿ, ಹಿರಿಯರ ಮುಂದೆಯೂ ಯಾರು ಮತ್ತೆ ಮತ್ತೆ ಕೂಗುತ್ತಾರೆ?'

      ಈ ಒಗಟನ್ನು ಕೇಳಿದರೆ ಮೇಲ್ನೋಟಕ್ಕೆ ರತಿಕ್ರೀಡೆಯ ವರ್ಣನೆಯಂತಿದೆ. ರತಿಕ್ರೀಡೆಯಾಡುವವನು ಹಿರಿಯರ ಮುಂದೆಯೂ ಮತ್ತೆ ಮತ್ತೆ ಕೂಗುವುದು ಎಂದರೆ ಅದು ಅಸಂಬದ್ಧವಲ್ಲವೇ? ಹಾಗಾಗಿ ಬೇರೆ ಏನೋ ಉತ್ತರವಿರಬೇಕೆಂದು ಅನಿಸುತ್ತದೆ.
    ಉತ್ತರ ಏನು ಗೊತ್ತೇ? ಅದು ಕೊಡ ಅಥವಾ ಬಿಂದಿಗೆ! ತರುಣಿಯೊಬ್ಬಳು ನೀರು ತುಂಬಿದ ಕೊಡ ಹೊತ್ತು ಬರುವ ಸನ್ನಿವೇಶವನ್ನು ಚಿತ್ರಿಸಿಕೊಳ್ಳಿ! ಅವಳು ಆ ಬಿಂದಿಗೆಯ ಕಂಠವನ್ನು ಆಲಂಗಿಸಿರುತ್ತಾಳೆ ಹಾಗೂ ಅದು ಅವಳ ಸೊಂಟವನ್ನು ಆಶ್ರಯಿಸಿರುತ್ತದೆ. ಮತ್ತೆ ಮತ್ತೆ ನೀರು ತುಳುಕುವುದೇ ಅದು ಕೂಗುವ ಶಬ್ದ! ತರುಣಿಯು ಹಿರಿಯರ ಮುಂದೆ ಹೋದಾಗಲೂ ಅದು ಹಾಗೆ ಕೂಗುವುದಲ್ಲವೇ?
     ಅಲ್ಲಿಗೆ ಕೊಡ ಅಥವಾ ಬಿಂದಿಗೆ ಎಂಬ ಉತ್ತರ ಸರಿಯಾಯಿತು!


ಶುಕ್ರವಾರ, ಮಾರ್ಚ್ 20, 2026

ಸುಂದರೀಶತಕ -೮

ಸಂಸ್ಕೃತ ಮೂಲ 

ವಲಿಭಿರ್ಬಂಧಮಕಸ್ಮಾದುಪೇತ್ಯ ಮಧ್ಯಸ್ತನೂಭವತ್ಯಸ್ಯಾ: /
ಆನಂದೀತಿ ನಿತಂಬ: ಸಮುನ್ನತಿಂ ನಿರ್ಭರಂ ಧತ್ತೇ //

ಕನ್ನಡ ಅನುವಾದ 

     ' ಈ ಸುಂದರಿಯ ನಡುವು ಅಕಸ್ಮಾತ್ತಾಗಿ ತ್ರಿವಳಿಗಳ ಬಂಧನವನ್ನು ಪಡೆದು ಸಣ್ಣಗಾಗಿದೆ! ಅದರಿಂದ ಅವಳ ನಿತಂಬವು ಆನಂದಗೊಂಡು ಉನ್ನತಿ ಹೊಂದಿ ತುಂಬಿಕೊಂಡಿದೆ!'

    ಸುಂದರ ಹೆಣ್ಣಿನ ಹೊಟ್ಟೆಯ ಮೇಲೆ ತ್ರಿವಳಿಗಳೆಂಬ ಮೂರು ಗೆರೆಗಳಿರುವುದು ಸೌಂದರ್ಯದ ಒಂದು ಲಕ್ಷಣ. ಆ ತ್ರಿವಳಿಗಳಿಂದ ಅವಳ ನಡುವು ಅಕಸ್ಮಾತ್ತಾಗಿ ಬಂಧನಕ್ಕೊಳಗಾಗಿ ಸಣ್ಣಗಾಯಿತೆಂದೂ ಅದರಿಂದ ಅವಳ ನಿತಂಬವು ಸಂತೋಷಗೊಂಡು ಉಬ್ಬಿಕೊಂಡಿತೆಂದೂ ಸಹಜವಾಗಿರುವ ಅಂಗಾಂಗಗಳಿಗೆ ಉತ್ಪ್ರೇಕ್ಷಿತ ಕಾರಣಗಳನ್ನು ಕೊಡುತ್ತಾ ಕವಿಯು ಸುಂದರಿಯ ತ್ರಿವಳಿಗಳು, ನಡು, ನಿತಂಬಗಳನ್ನು ಸೊಗಸಾಗಿ ವರ್ಣಿಸುತ್ತಾನೆ.

ಬುಧವಾರ, ಮಾರ್ಚ್ 18, 2026

ಯುಗಾದಿ ಹಬ್ಬದ ವೈಶಿಷ್ಟ್ಯಗಳು

ಚೈತ್ರ ಮಾಸ, ಭಾರತೀಯ ಪಂಚಾಂಗದ ಪ್ರಕಾರ, ಹೊಸ ವರ್ಷದ ಆರಂಭ. ವಸಂತಮಾಸ ಆರಂಭವಾಗಿ ಮರಗಿಡಗಳೆಲ್ಲವೂ ಹೂಬಿಟ್ಟು ಎಲ್ಲೆಲ್ಲೂ ಹಸಿರು, ಮತ್ತು ವರ್ಣವೈವಿಧ್ಯದ ಸೌಂದರ್ಯ ನಮಗೆ ಆನಂದೋಲ್ಲಾಸಗಳನ್ನು ತರುತ್ತವೆ. ತೀರಾ ಸುಡುವ ಬಿಸಿಲೂ ಇಲ್ಲದೇ ತೀರಾ ಚಳಿಯೂ ಇಲ್ಲದೇ, ಸಮಶೀತೋಷ್ಣವಾದ, ಹಿತವಾದ, ರಮಣೀಯ ವಾತಾವರಣ ನಮ್ಮನ್ನು ಮುದಗೊಳಿಸುತ್ತದೆ. ಈ ಚೈತ್ರ ಮಾಸದಲ್ಲಿ ಅನೇಕ ಹಬ್ಬಗಳನ್ನೂ ವಿಶೇಷ ದಿನಗಳನ್ನೂ ಆಚರಿಸಿ ಸಂತೋಷಪಡುತ್ತೇವೆ.  ಆ ಹಬ್ಬಗಳಲ್ಲಿ ಮುಖ್ಯವಾದ, ಭಾರತೀಯರಾದ ನಮಗೆ ಹೊಸವರ್ಷದ ಆರಂಭದ ದಿನವೇ ಆಗಿರುವ ಯುಗಾದಿ ಹಬ್ಬದ ವೈಶಿಷ್ಟ್ಯಗಳನ್ನು ಈಗ ನೋಡೋಣ.
     ಚೈತ್ರ ಮಾಸದ ಶುಕ್ಲ ಪಕ್ಷದ ಪ್ರಥಮ ದಿವಸ, ಬಹುತೇಕ ಹಿಂದೂಗಳಿಗೆ ವರ್ಷಾರಂಭದ ದಿನ. ಚಾಂದ್ರಮಾನ ಪಂಚಾಂಗವನ್ನನುಸರಿಸುವವರಿಗೆ ಅಂದು ಚಾಂದ್ರಮಾನ ಯುಗಾದಿ. ಅಂದು ಸೂರ್ಯೋದಯದ ಸಮಯದಲ್ಲಿ ಬ್ರಹ್ಮನು ವಿಶ್ವವನ್ನು ಸೃಷ್ಟಿಸಿದನೆಂದು ಹೇಮಾದ್ರಿಯ ಚತುರ್ವರ್ಗಚಿಂತಾಮಣಿಯಲ್ಲಿ ಒಂದು ಕಥೆಯಿದೆ. ಹೀಗೆ ಯುಗದ ಆದಿಯಾದುದರಿಂದ ಈ ಹಬ್ಬದ ದಿನವನ್ನು ಯುಗಾದಿ ಎನ್ನುತ್ತಾರೆ. ವರ್ಷಕ್ಕೆ ಸಂವತ್ಸರ ಎನ್ನುತ್ತಾರೆ. ಒಟ್ಟು ಅರವತ್ತು ಸಂವತ್ಸರಗಳು ಇದ್ದು ಅವು ಮುಗಿದ ಬಳಿಕ, ಪುನಃ ಮೊದಲಿನಿಂದ ಆರಂಭವಾಗುತ್ತವೆ. ಪ್ರಭವ, ವಿಭವ ಎಂದು ಆರಂಭವಾಗುವ ಈ ಅರವತ್ತು ಸಂವತ್ಸರಗಳು ನಾರದರ ಮಕ್ಕಳ ಹೆಸರುಗಳೆಂದು ಹೇಳುತ್ತಾರೆ. 
   ಭವಿಷ್ಯ ಪುರಾಣ ಮತ್ತು ದೇವೀಭಾಗವತ ಪುರಾಣಗಳ ಪ್ರಕಾರ, ನಾರದರು ಒಮ್ಮೆ ಮಹಾವಿಷ್ಣುವನ್ನು ಮಾಯೆಯ ಸ್ವರೂಪದ ಬಗ್ಗೆ ವಿಚಾರಿಸಲು, ಅವನು ಅವರನ್ನು ಒಂದು ಸರೋವರದ ಬಳಿ ಕರೆದುಕೊಂಡು ಹೋಗಿ ಅದರಲ್ಲಿ ಸ್ನಾನ ಮಾಡಲು ಹೇಳುತ್ತಾನೆ.‌ ಅಂತೆಯೇ ಅವರು ಸ್ನಾನ ಮಾಡಿ ಮೇಲೇಳಲು ಸುಂದರ ಸ್ತ್ರೀಯಾಗಿಬಿಡುತ್ತಾರೆ! ತನ್ನ ಪೂರ್ವವನ್ನೆಲ್ಲಾ ಮರೆತ ಆ ನಾರದಿಯನ್ನು ತಾಲಧ್ವಜನೆಂಬ ರಾಜನು ನೋಡಿ ಮೆಚ್ಚಿ ಮದುವೆಯಾಗಲು ಅವರಿಗೆ ಅರವತ್ತು ಪುತ್ರರು ಹುಟ್ಟುತ್ತಾರೆ!! ಅವರೆಲ್ಲರೂ ಒಂದು ಯುದ್ಧದಲ್ಲಿ ಸಾಯಲು, ನಾರದಿಯು ಅತ್ತು ಗೋಳಾಡುತ್ತಾಳೆ! ಆಗ ವಿಷ್ಣುವು ಬ್ರಾಹ್ಮಣ ವೇಷದಲ್ಲಿ ಬಂದು ಅವಳನ್ನು ಸಮಾಧಾನಪಡಿಸಿ ಪುನಃ ಆ ಸರೋವರದಲ್ಲಿ ಸ್ನಾನ ಮಾಡಿಸಲು, ನಾರದಿಯು ನಾರದರಾಗಿ ಪರಿವರ್ತಿತಳಾಗುತ್ತಾಳೆ! ಇದೇ ಮಾಯೆಯ ಸ್ವರೂಪ ಎಂದು ಹೇಳುತ್ತಾ ಮಹಾವಿಷ್ಣುವು ಅರವತ್ತು ಸಂವತ್ಸರಗಳಿಗೆ ನಾರದರ ಆ ಮಕ್ಕಳ ಹೆಸರುಗಳನ್ನಿಡುತ್ತಾನೆ. ಈ ಸಂವತ್ಸರಗಳು, ಪ್ರಭವ, ವಿಭವ, ಶುಕ್ಲ, ಪ್ರಮೋದೂತ ( ಪ್ರಮೋದ), ಪ್ರಜೋತ್ಪತ್ತಿ( ಪ್ರಜಾಪತಿ), ಆಂಗಿರಸ , ಶ್ರೀಮುಖ , ಭಾವ, ಯುವಾ, ಧಾತಾ, ಈಶ್ವರ, ಬಹುಧಾನ್ಯ, ಪ್ರಮಾಥಿ, ವಿಕ್ರಮ, ವೃಷ , ಚಿತ್ರಭಾನು, ಸುಭಾನು , ತಾರಣ, ಪಾರ್ಥಿವ, ವ್ಯಯ, ಸರ್ವಜಿತ್, ಸರ್ವಧಾರಿ, ವಿರೋಧಿ, ವಿಕೃತಿ, ಖರ, ನಂದನ,ವಿಜಯ , ಜಯ, ಮನ್ಮಥ, ದುರ್ಮುಖ, ಹೇಮಲಂಬಿ, ವಿಲಂಬಿ, ವಿಕಾರಿ, ಶಾರ್ವರಿ, ಪ್ಲವ, ಶುಭಕೃತ್, ಶೋಭನ (ಶೋಭಕೃತ್), ಕ್ರೋಧಿ, ವಿಶ್ವಾವಸು, ಪರಾಭವ, ಪ್ಲವಂಗ, ಕೀಲಕ, ಸೌಮ್ಯ, ಸಾಧಾರಣ, ವಿರೋಧಕೃತ್, ಪರೀಧಾವಿ, ಪ್ರಮಾದಿ, ಆನಂದ, ರಾಕ್ಷಸ, ನಲ( ಅನಲ), ಪಿಂಗಲ, ಕಾಲಯುಕ್ತ, ಸಿದ್ಧಾರ್ಥಿ, ರೌದ್ರ, ದುರ್ಮತಿ, ದುಂದುಭಿ, ರುಧಿರೋದ್ಗಾರಿ, ರಕ್ತಾಕ್ಷಿ, ಕ್ರೋಧನ, ಮತ್ತು ಕ್ಷಯ( ಅಕ್ಷಯ). ಪುನರಾವರ್ತಿತವಾಗುವ ಈ ಸಂವತ್ಸರಗಳಲ್ಲಿ ಈ ಬಾರಿ ಬಂದಿರುವುದು ಪರಾಭವ ಸಂವತ್ಸರ.
     ಮಹಾವಿಷ್ಣುವು ಮತ್ಸ್ಯಾವತಾರ ತಾಳಿದ್ದು ಈ ದಿನವೇ ಎಂದು ಹೇಳುತ್ತಾರೆ. ಶ್ರೀ ರಾಮನು ವನವಾಸದಿಂದ ಹಿಂದಿರುಗಿದ್ದೂ ಅಯೋಧ್ಯೆಯ ಜನರು ರಾವಣವಧೆಯ ಕೊಂಡಾಟದ ಉತ್ಸವ ಆರಂಭಿಸಿದ್ದೂ ಈ ದಿನದಂದೇ ಎಂದೂ ಹೇಳುತ್ತಾರೆ. 
     ಸಾಮಾನ್ಯವಾಗಿ ಮಾರ್ಚ್ -ಏಪ್ರಿಲ್ ತಿಂಗಳುಗಳಲ್ಲಿ ಈ ಹಬ್ಬವು ಬರುವುದಾಗಿದ್ದು ಆಗ ವಸಂತ ಋತುವಿನ ಆರಂಭವಾಗುತ್ತದೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣನು,' ಋತೂನಾಂ ಕುಸುಮಾಕರ:' ( ಋತುಗಳಲ್ಲಿ ನಾನು ವಸಂತನಾಗಿದ್ದೇನೆ) ಎಂದು ಹೇಳುವಂತೆ, ವಸಂತವು ಋತುಗಳ ರಾಜನೆಂದು ಪ್ರಸಿದ್ಧವಾಗಿದೆ! ಈ ಕಾಲದಲ್ಲಿ ನಿಧಾನವಾಗಿ ಸೂರ್ಯನ ಶಾಖ ಹೆಚ್ಚಿ, ಎಲ್ಲೆಲ್ಲೂ ಉತ್ಸಾಹ, ಲವಲವಿಕೆಗಳನ್ನು ತರುತ್ತದೆ! ಯುಗಾದಿಯ ದಿನ, ವಿಜಯದಶಮಿ, ಬಲಿಪಾಡ್ಯಮಿ, ಮತ್ತು ಅಕ್ಷಯ ತೃತೀಯಾಗಳು ಸೇರಿದಂತೆ , ಹಿಂದೂಗಳಿಗೆ ಪವಿತ್ರ ಮೂರೂವರೆ ದಿನಗಳಲ್ಲಿ ಒಂದಾಗಿದೆ. ಈ ದಿನ, ಶಾಲಿವಾಹನ ರಾಜನು ಪಟ್ಟಾಭಿಷಿಕ್ತನಾಗಿ ಶಾಲಿವಾಹನ ಶಕೆಯೂ ಆರಂಭವಾಯಿತೆಂದು ಹೇಳುತ್ತಾರೆ. ಈ ದಿನದಂದು ಆರಂಭವಾಗಿ, ದುರ್ಗಾದೇವಿಯ ಪೂಜೆ ಮಾಡುತ್ತಾ ಒಂಬತ್ತು ದಿನಗಳ ಕಾಲ ವಸಂತ ನವರಾತ್ರಿ ಎಂದು ಆಚರಿಸಲಾಗುತ್ತದೆ. ಶರತ್ಕಾಲದಲ್ಲಿ ಬರುವ ಬರುವ ಇನ್ನೊಂದು ನವರಾತ್ರಿಯಾದ ಶರನ್ನವರಾತ್ರಿ ಅಥವಾ ದಸರಾ ಸೇರಿ, ಎರಡು ನವರಾತ್ರಿಗಳಿವೆ.  ಈಗ ಶರನ್ನವರಾತ್ರಿ ಪ್ರಸಿದ್ಧವಾಗಿರುವಷ್ಟು ವಸಂತನವರಾತ್ರಿ ಪ್ರಸಿದ್ಧವಾಗಿಲ್ಲದಿದ್ದರೂ ಇನ್ನೂ ಆಚರಣೆಯಲ್ಲಿದೆ. ಹಿಂದೆ ಇದು ಬಹಳ ಜನಪ್ರಿಯವಾಗಿದ್ದಿರಬಹುದು. ಚೈತ್ರ ಶುಕ್ಲದ ಪ್ರಥಮ ದಿವಸ, ಪ್ರಾಚೀನ ಭಾರತದಲ್ಲಿ ಇಂದ್ರಧ್ವಜೋತ್ಸವ ಎಂಬ ದೊಡ್ಡ ಹಬ್ಬವಾಗಿ ಆಚರಿಸಲಾಗುತ್ತಿತ್ತೆಂದು ಧರ್ಮನಿಬಂಧಗಳಿಂದ ತಿಳಿದುಬರುತ್ತದೆ. ಇದು ಶರತ್ಕಾಲದಲ್ಲೂ ಆಚರಣೆಯಲ್ಲಿತ್ತೆಂದು ಭೋಜರಾಜನ ಸಮರಾಂಗಣಸೂತ್ರಧಾರ, ಮತ್ತು ಇತರ ಅನೇಕ ಗ್ರಂಥಗಳಿಂದ ತಿಳಿದುಬರುತ್ತದೆ. ಉಪರಿಚರ ವಸುವೆಂಬ ರಾಜನು ಇಂದ್ರನನ್ನು ಮೆಚ್ಚಿಸಿ ಅವನಿಂದ ಒಂದು ವಿಮಾನವನ್ನೂ ಅವನನ್ನು ಸಂಕೇತಿಸುವ ಒಂದು ಕೋಲನ್ನೂ ಪಡೆದು, ಆ ಕೋಲನ್ನು ಪೂಜಿಸುವ ಮೂಲಕ ಈ ಹಬ್ಬವನ್ನು ಆರಂಭಿಸಿದ ಎಂದು ಮಹಾಭಾರತ ಹೇಳುತ್ತದೆ. ಪ್ರಾಚೀನ ಭಾರತೀಯರು ಬಿದಿರಿನ ಕೋಲನ್ನು ನೆಟ್ಟು ಬಾವುಟ ಹಾರಿಸಿ ಇಂದ್ರನನ್ನು ಪೂಜಿಸಿ ಹೋಮ ಮಾಡಿ ರಾತ್ರಿಯೆಲ್ಲಾ ಸಂಗೀತ,ನರ್ತನಗಳಿಂದ ಉತ್ಸವ ಆಚರಿಸುತ್ತಿದ್ದರೆಂದು ತಿಳಿದುಬರುತ್ತದೆ. ಇದೇ ಈಗ ಮಹಾರಾಷ್ಟ್ರದಲ್ಲಿ ಗುಢಿಪಡ್ವದ ರೀತಿಯಲ್ಲಿ ಆಚರಿಸಲಾಗುತ್ತಿದೆ.
    ಈ ಸಮಯದಲ್ಲಿ ವಸಂತೋತ್ಸವವೆಂದು ವಸಂತದ ಆಗಮನವನ್ನು ಸಂಭ್ರಮಿಸಿ ಆಚರಿಸುವ ಹಲವಾರು ಕ್ರೀಡೋತ್ಸವಗಳಿದ್ದವೆಂದು ಭೋಜರಾಜನ ಶೃಂಗಾರಪ್ರಕಾಶ, ಸರಸ್ವತೀಕಂಠಾಭರಣ, ವಾತ್ಸ್ಯಾಯನನ ಕಾಮಸೂತ್ರ, ಮೊದಲಾದ ಗ್ರಂಥಗಳಿಂದ ತಿಳಿದುಬರುತ್ತದೆ. ಅಂಥ ಕೆಲವೆಂದರೆ, ಅಶೋಕಾಷ್ಟಮಿ ( ಅಶೋಕ ವೃಕ್ಷವನ್ನು ಪ್ರಾರ್ಥಿಸಿ ಅದರ ಎಂಟು ಮೊಗ್ಗುಗಳನ್ನು ಸೇವಿಸುವುದು), ಅಷ್ಟಮೀಚಂದ್ರಿಕಾ( ಪ್ರೇಮದಲ್ಲಿರುವ ಸ್ತ್ರೀಯರು ಚಂದ್ರನನ್ನು ಪೂಜಿಸುವುದು), ಸುವಸಂತಕ ( ವಸಂತದ ಆಗಮನವನ್ನು ಸಂಗೀತ, ಚರ್ಚರೀ ತಾಳಗೀತನೃತ್ಯಗಳಿಂದ ಸ್ವಾಗತಿಸುವ ವಸಂತೋತ್ಸವ), ಸಹಕಾರಭಂಜಿಕೋತ್ಸವ ( ತಾಳಕ್ಕೆ ತಕ್ಕಂತೆ ಕುಣಿಯುತ್ತಾ ಮಾವಿನ ಮರಗಳಿಂದ ಹೊಸ ಹಣ್ಣು, ಕಾಯಿಗಳನ್ನು ಕೀಳುವ ಉತ್ಸವ), ಮದನತ್ರಯೋದಶಿ ( ಮನ್ಮಥನ ಪೂಜೆ,ಮದನೋತ್ಸವ), ಏಕಶಾಲ್ಮಲೀ ( ಸ್ತ್ರೀ ಪುರುಷರು ಒಟ್ಟಾಗಿ ಶಾಲ್ಮಲೀ ವೃಕ್ಷದ ಬಳಿ ನೆರೆದು ಹೂ ಮುಡಿದು ಆಡುವುದು), ಅಶೋಕೋತ್ತಂಸಿಕಾ ( ಅಶೋಕ ವೃಕ್ಷ ಹೂ ಬಿಡಲೆಂದು ಸುಂದರ ಸ್ತ್ರೀಯರು ವಸ್ತ್ರಾಲಂಕಾರಭೂಷಿತರಾಗಿ ಕಾಲಿಗೆ ಅಲಕ್ತಕ ರಸ ಸವರಿಕೊಂಡು ಅದಕ್ಕೆ ಒದೆಯುವುದು - ಇದಕ್ಕೆ ದೋಹದ ಕ್ರಿಯೆ ಎನ್ನುತ್ತಾರೆ; ಮರಗಳಿಗೆ ಇಂಥ ಬಯಕೆ ಇರುತ್ತದೆ ಎಂಬ ನಂಬಿಕೆ), ಚೂತಭಂಜಿಕಾ ( ಮಾವಿನ ಹೊಸ ಹೂಗಳನ್ನು ವಸಂತದ ಆರಂಭದಲ್ಲಿ ಯುವತಿಯರು ಆರಿಸಿ, ಮನ್ಮಥನಿಗೆ ಬಾಣಗಳಂತೆ ಅರ್ಪಿಸುವುದು), ಆಂದೋಲನ ಕ್ರೀಡಾ ( ಉಯ್ಯಾಲೆಯಾಟ), ಪುಷ್ಪವಾಚಯಿಕಾ ಅಥವಾ ವಕುಲಪುಷ್ಪವಾಚಯಿಕಾ ( ಸುಂದರ ಸ್ತ್ರೀಯು ಮಧುಪಾನ ಮಾಡಿ ಅದರ ಅರ್ಧವನ್ನು ಬಕುಳ ವೃಕ್ಷಕ್ಕೆ ಉಗುಳಿ ಅದರ ದೋಹದ ಕ್ರಿಯೆ ನಡೆಸುವುದು ಹಾಗೂ ಅದರ ಹೂಗಳನ್ನು ಸಂಗ್ರಹಿಸುವುದು), ಯವ ಚತುರ್ಥಿ ( ಯವೆಯ ಕಡ್ಡಿ, ಹೂಗಳನ್ನು ಉಪವನಗಳಲ್ಲಿ ಹಾಸಿ ಅವುಗಳ ಮೇಲೆ ಸ್ತ್ರೀಯರು ಉರುಳುವುದು), ಉದಕಕ್ಷ್ವೇಡಿಕಾ ( ಪರಸ್ಪರರ ಮೇಲೆ ಸ್ತ್ರೀ ಪುರುಷರು ಬಣ್ಣದ ನೀರನ್ನು ಎರಚುವುದು - ಇದೇ ಹೋಳಿಯಲ್ಲೂ ಸೇರಿಕೊಂಡಿದೆ), ಚೂತಲತಿಕಾ ಅಥವಾ ಆಮ್ರಲತಿಕಾ ( ಸ್ತ್ರೀಯರು ಮಾವಿನ ಕಡ್ಡಿಗಳನ್ನು ಹಿಡಿದು ತಮ್ಮ ಪ್ರೇಮಿಗಳನ್ನು ಗುರುತಿಸಿ ಖುಷಿ ಪಡುವುದು), ಪಾಂಚಾಲಾನುಯಾನ ( ಬೊಂಬೆಗಳ ಮೆರವಣಿಗೆ, ಉತ್ಸವ), ಈ ಮೊದಲಾದ ಆಚರಣೆಗಳು.
      ಇದನ್ನು ನೋಡಿದರೆ ಪ್ರಾಚೀನ ಭಾರತೀಯರು ಎಂದೂ ಕೇವಲ ಗೊಡ್ಡು ಧಾರ್ಮಿಕರಾಗಿರದೇ ಜೀವನದ ಎಲ್ಲಾ ಮುಖಗಳಿಗೂ ಗೌರವಾದರಗಳನ್ನು ತೋರುತ್ತಿದ್ದರೆಂದು ತಿಳಿಯುತ್ತದೆ. ಉತ್ಸವಪ್ರಿಯತೆ, ಜೀವನೋಲ್ಲಾಸಗಳಿಗೆ ಅವರು ಬಹಳ ಮಹತ್ವ ಕೊಡುತ್ತಿದ್ದರು. ಹಾಗಾಗಿಯೇ ಕಾಳಿದಾಸನು, ' ಉತ್ಸವಪ್ರಿಯಾ ಖಲು ಮನುಷ್ಯಾ:' ಎಂದು ಹೇಳಿದ್ದಾನೆ. 
     ಈಗಲೂ ವಸಂತಾರಂಭವಾದ, ವರ್ಷಾರಂಭವಾದ ಯುಗಾದಿ, ಅತ್ಯಂತ ಸಂಭ್ರಮದ ಹಬ್ಬವಾಗಿದೆ. ಸೃಷ್ಟಿಕರ್ತ ಬ್ರಹ್ಮನ ಹಾಗೂ ವರ್ಷಾಧಿಪತಿ ದೇವತೆಯ ಪೂಜೆ, ಪಂಚಾಂಗ ಶ್ರವಣ ಹಾಗೂ ಕಾಲದ ವಿಭಾಗಗಳ ಮತ್ತು ನಕ್ಷತ್ರಗಳ ಪೂಜೆ, ಮತ್ತು ಕೊನೆಯಲ್ಲಿ ವಿಷ್ಣುವಿನ ಪೂಜೆ, ಇವು ಹಬ್ಬದ ಪೂಜಾಭಾಗದ ಆಚರಣೆಗಳು. ವರ್ಷಾಧಿಪತಿ ದೇವತೆಯೆಂದರೆ, ಯುಗಾದಿಯು ಯಾವ ವಾರ ಬರುವುದೋ, ಆ ವಾರದ ಅಧಿಪತಿ ಆ ವರ್ಷದ ರಾಜ ಅಥವಾ ಅಧಿಪತಿಯಾಗಿರುತ್ತಾನೆ. ಉದಾಹರಣೆಗೆ, ಯುಗಾದಿ ಸೋಮವಾರ ಬಂದರೆ, ಚಂದ್ರ, ಹಾಗೂ ಗುರುವಾರ ಬಂದರೆ ಗುರು, ಹೀಗೆ.
      ಅಭ್ಯಂಜನ ಸ್ನಾನ, ಹೊಸ ವಸ್ತ್ರಧಾರಣೆ, ತಳಿರು ತೋರಣಗಳಿಂದ, ಮುಖ್ಯವಾಗಿ ಮಾವಿನ ಎಲೆಗಳನ್ನು ಬಾಗಿಲಿಗೆ ಕಟ್ಟಿ ಮನೆಯನ್ನು ಅಲಂಕರಿಸುವುದು, ಮೇಲೆ ಹೇಳಿದ ಪೂಜೆ, ಮತ್ತು ಹಿಂದಿನ ವರ್ಷ ತಿಳಿದೋ ತಿಳಿಯದೆಯೋ ಮಾಡಿದ ತಪ್ಪುಗಳಿಗೆ ಕ್ಷಮೆಯಾಚಿಸಿ ಪ್ರಾರ್ಥಿಸುವುದು, ಮತ್ತು ಬೇವಿನ ಸೊಪ್ಪು ಮತ್ತು ಬೆಲ್ಲದ ಮಿಶ್ರಣವನ್ನು ನೈವೇದ್ಯ ಮಾಡಿ ಸೇವಿಸುವುದು, ಪುಷ್ಕಳ ಭೋಜನ, ಆಳುಗಳಿಗೂ ಆಶ್ರಿತರಿಗೂ ಉಡುಗೊರೆಗಳನ್ನು ಕೊಡುವುದು, ಇವು ಹಬ್ಬದ ಮುಖ್ಯ ಆಚರಣೆಗಳು. ಇವುಗಳಲ್ಲಿ ಬೇವು -ಬೆಲ್ಲ ಮಿಶ್ರಣ ಸೇವಿಸುವುದು ಅತ್ಯಂತ ಪ್ರಮುಖವಾಗಿದೆ. ಬೇವಿನಲ್ಲಿ ಆರೋಗ್ಯಕರ ಅಂಶಗಳಿದ್ದು, ಈ ಮಿಶ್ರಣವನ್ನು ಸೇವಿಸುವಾಗ ಈ ಒಂದು ಶ್ಲೋಕವನ್ನೂ ಪಡಿಸಲಾಗುತ್ತದೆ -
    ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯ ಚ /
    ಸರ್ವಾರಿಷ್ಟವಿನಾಶಾಯ ನಿಂಬಕಂ ದಲಭಕ್ಷಣಮ್ //
    ' ನೂರು ವರ್ಷಗಳ ಆಯುಷ್ಯಕ್ಕಾಗಿ, ವಜ್ರದಂತೆ ಗಟ್ಟಿಯಾದ ದೇಹಕ್ಕಾಗಿ, ಸರ್ವಸಂಪತ್ತುಗಳನ್ನೂ ಪಡೆಯುವುದಕ್ಕಾಗಿ, ಸಕಲ ಅನಿಷ್ಟಗಳ ವಿನಾಶಕ್ಕಾಗಿ, ನಿಂಬಕದಳದ ( ಬೇವಿನೆಲೆಯ) ಭಕ್ಷಣ ಮಾಡಬೇಕು.' 
     ಬೇವಿನ ಎಲೆ ಕಹಿಯಾಗಿರುವುದರಿಂದ ಇದರೊಂದಿಗೆ ಬೆಲ್ಲವನ್ನು ಸೇರಿಸಿ ತಿನ್ನಲಾಗುತ್ತದೆ. ಜೀವನದಲ್ಲಿ ಕಷ್ಟ,ಸುಖಗಳೆರಡೂ ಇದ್ದು ಅವುಗಳನ್ನು ಸಮವಾಗಿ ಸ್ವೀಕರಿಸಬೇಕೆಂಬ ತತ್ತ್ವದ ಸಂಕೇತವೇ ಈ ಬೇವು,ಬೆಲ್ಲ ಮಿಶ್ರಣದ ಸೇವನೆ ಎಂದು ಹೇಳಲಾಗಿದೆ. ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ಹೇಳುವ,' ಸುಖದುಃಖೇ ಸಮೇ ಕೃತ್ವಾ ಲಾಭಾಲಾಭೌ ಜಯಾಜಯೌ ( ಸುಖದುಃಖಗಳನ್ನು, ಲಾಭ ನಷ್ಟಗಳನ್ನು, ಜಯ- ಅಪಜಯಗಳನ್ನು ಸಮದೃಷ್ಟಿಯಿಂದ ನೋಡಬೇಕು)' ಎಂಬ ಮಾತನ್ನು ಇಲ್ಲಿ ಸ್ಮರಿಸಬಹುದು.
      ಯುಗಾದಿಯ ಭೋಜನದ ಸೊಗಸೇ ಸೊಗಸು! ಈ ಹಬ್ಬದಲ್ಲಿ ಮುಖ್ಯವಾದ ಸಿಹಿತಿಂಡಿಯೆಂದರೆ ಹೋಳಿಗೆ ( ಬೇಳೆ ಇಲ್ಲವೇ ಕಾಯಿ ಹೋಳಿಗೆ) ಮತ್ತು ಪಾಯಸಗಳು! ಆಂಧ್ರಪ್ರದೇಶದಲ್ಲಿ ಹೋಳಿಗೆಯನ್ನೇ ಪೂರಣ್ ಪೋಳಿ ಎಂದು ಮಾಡುತ್ತಾರೆ. ಮಾವು ಮತ್ತು ಹಲಸಿನ ಹಣ್ಣಿನ ಕಾಲವಿದಾದ್ದರಿಂದ, ಮಾವಿನಕಾಯಿ ಚಟ್ನಿ ಮತ್ತು ಚಿತ್ರಾನ್ನ, ಮಾವಿನ ಹಣ್ಣಿನ ರಸಾಯನ, ಮತ್ತು ಸೀಕರಣೆ, ಹಾಗೂ ಮಲೆನಾಡಿನ ಕಡೆ, ಹಲಸಿನ ಹಣ್ಣಿನ ಕಡುಬು ಹಾಗೂ ಪಾಯಸ ಕೂಡಾ ಸಾಮಾನ್ಯ. ಯುಗಾದಿಯ ಮರುದಿನ, ಹೊಸತೊಡಕು ಅಥವಾ ವರ್ಷತೊಡಕು ಎಂದು ಆಚರಿಸುತ್ತಾ, ಮಾಂಸಾಹಾರಿಗಳು ಮಾಂಸದ ಸೇವನೆ ಮಾಡುತ್ತಾರೆ. ಇದು ಹೊಸತೊಡಗು ಅಥವಾ ವರ್ಷತೊಡಗು ಎಂಬುದರ ಅಪಭ್ರಂಶ. ಹೊಸವರ್ಷದಲ್ಲಿ ತೊಡಗು ಎಂದು ಇದರ ಅರ್ಥವಷ್ಟೇ! 
     ಚಾಂದ್ರಮಾನ ಯುಗಾದಿಯನ್ನು ವರ್ಷಾರಂಭದ ದಿನವನ್ನಾಗಿ ಕರ್ನಾಟಕ, ಆಂಧ್ರಪ್ರದೇಶ, ಮತ್ತು ಮಹಾರಾಷ್ಟ್ರಗಳಲ್ಲಿ ಆಚರಿಸಲಾಗುತ್ತದೆ. ಆಗಲೇ ಹೇಳಿದಂತೆ, ಮಹಾರಾಷ್ಟ್ರದಲ್ಲಿ ಯುಗಾದಿಯನ್ನು ಗುಢಿಪಡ್ವ ಎಂದು ಆಚರಿಸುತ್ತಾರೆ. ಅಂದು ಬೆಳಿಗ್ಗೆ, ಒಂದು ಉದ್ದನೆಯ ಬಿದಿರಿನ ಬೊಂಬನ್ನು ರೇಷ್ಮೆ ವಸ್ತ್ರದಿಂದ ಅಲಂಕರಿಸಿ, ಅದರ ಮೇಲೆ ಬೆಳ್ಳಿ ಅಥವಾ ತಾಮ್ರದ ಪಾತ್ರೆಯೊಂದನ್ನಿಟ್ಟು ಮಿಠಾಯಿಗಳ ಮತ್ತು ಬೇವಿನೆಲೆಗಳ ಮಾಲೆಯನ್ನು ಅದರ ಕಂಠಕ್ಕೇರಿಸಿ ಪೂಜಿಸಿ, ಮನೆಯ ಮಾಳಿಗೆಯ ಮೇಲೆ ನೆಡುತ್ತಾರೆ. ಇದೇ ಗುಢಿ. ಸೂರ್ಯಾಸ್ತದ ನಂತರ, ಅದನ್ನು ಕೆಳಗಿಳಿಸಿ, ಮನೆಯವರೆಲ್ಲರೂ ಬೇವಿನ ಎಲೆಗಳನ್ನೂ ಮಿಠಾಯಿಗಳನ್ನೂ ಸೇವಿಸುತ್ತಾರೆ. ಪಡ್ವ ಅಥವಾ ಪ್ರತಿಪದ್ ( ಮೊದಲ) ದಿನ, ಗುಢಿಯನ್ನು ನೆಡುವುದರಿಂದ ಇದನ್ನು ಗುಢಿಪಡ್ವ ಎನ್ನುತ್ತಾರೆ. ಅಂದು ಶ್ರೀರಾಮನು ವಾಲಿಯನ್ನು ಕೊಂದ ದಿನವೆಂದೂ ಅದರ ಸ್ಮರಣಾರ್ಥವಾಗಿ ಧ್ವಜಾರೋಹಣ ಮಾಡುವ ಆಚರಣೆಯಿದೆಂದೂ ಹೇಳುತ್ತಾರೆ. ಆದರೆ ಇದು ಪ್ರಾಚೀನ ಭಾರತದ ಇಂದ್ರಧ್ವಜೋತ್ಸವದ ಮಾರ್ಪಾಡೇ ಇರಬಹುದು. 
   ಹೊಸವರ್ಷದ ಆರಂಭ, ಭಾರತದ ಬೇರೆ ಬೇರೆ ಕಡೆ ಬೇರೆ ಬೇರೆ ದಿನಗಳಾಗಿರುತ್ತದೆ. ಸೌರಮಾನ ಪಂಚಾಂವನ್ನು ಅನುಸರಿಸುವ ತಮಿಳುನಾಡು ಮತ್ತು ಕೇರಳದ ಜನರಿಗೆ, ಸೌರಮಾನ ಯುಗಾದಿ ವರ್ಷಾರಂಭದ ದಿನವಾಗಿರುತ್ತದೆ. ಅದು, ಚಿತ್ತಿರೈ ಮಾಸದ ಮೊದಲ ದಿನವಾಗಿದ್ದು, ಮಧ್ಯ ಏಪ್ರಿಲ್ ನಲ್ಲಿ ಬರುತ್ತದೆ. ಕೇರಳದಲ್ಲಿ ಇದು ವಿಷು ಎಂಬುದಾಗಿ ಆಚರಿಸಲ್ಪಡುತ್ತದೆ. ಕೇರಳಿಗರಿಗೆ ಇದು ಬಹಳ ಸಂಭ್ರಮದ ಹಬ್ಬವಾಗಿರುತ್ತದೆ. ಬಂಗಾಳದಲ್ಲಿ ವೈಶಾಖ ಮಾಸದ ಮೊದಲ ದಿನವಾದ ಪಹಲಾ ವೈಶಾಖ್ ಅಥವಾ ವೈಶಾಖೀ ಹಬ್ಬ, ವರ್ಷಾರಂಭದ ದಿನ. ಸಿಖ್ಖರಿಗೂ ಇದೇ ವರ್ಷಾರಂಭದ ದಿನವಾಗಿರುತ್ತದೆ. ಗುಜರಾತಿನಲ್ಲಿ ವರ್ಷಾರಂಭವು, ಕಾರ್ತಿಕ ಮಾಸದ ಶುಕ್ಲ ಪ್ರತಿಪದ್ ದಿನದಂದು, ಅಂದರೆ ಬಲಿಪಾಡ್ಯಮಿಯಂದು ಇರುತ್ತದೆ. ಅಸ್ಸಾಂನಲ್ಲಿ ವೈಶಾಖ ಮಾಸದಲ್ಲಿ ಹೊಸ ವರ್ಷವನ್ನು 'ಬಿಹು'  ಎಂದು ಆಚರಿಸುತ್ತಾರೆ.
     ಹೀಗೆ ಭಾರತೀಯರಾದ ನಮಗೆ, ಯುಗಾದಿ ಹಬ್ಬವು ಹೊಸ ವರ್ಷದ ಆರಂಭದೊಂದಿಗೆ, ಉತ್ಸಾಹ, ಸಂಭ್ರಮಗಳ ದಿನವಾಗಿದ್ದು ವೈವಿಧ್ಯಮಯವಾದ ಆಚರಣೆಗಳಿಂದ ಕೂಡಿರುತ್ತದೆ.
                                       ಡಾ.ಬಿ.ಆರ್.ಸುಹಾಸ್
                                       ಬೆಂಗಳೂರು 

ಸುಂದರೀಶತಕ -೭

ವಿಪರೀತರತಸಮುದ್ಯಮಪುಲಕಪ್ರಥಮಾನಮಾಂಸಲಾಭೋಗಮ್/
ಸುರತಸುಖೈಕನಿಧಾನಂ ಸುಂದರಿ ಜಘನಸ್ಥಲಂ ಜಯತಿ//

     ' ಎಲೈ ಸುಂದರಿ! ವಿಪರೀತ ರತಯಲ್ಲಿ ನಿನಗಾದ ಪ್ರಯಾಸದಿಂದ ಉಂಟಾದ ಪುಳಕದಿಂದ ವಿಸ್ತರಿಸಿದ ಹಾಗೂ ಮಾಂಸಲವಾದ, ತುಂಬಿಕೊಂಡ, ‌ಸುರತಸುಖಕ್ಕೆ ಏಕೈಕ ನಿಧಿಯಾಗಿರುವ ನಿನ್ನ ಜಘನಸ್ಥಲವು ವಿಜಯಶಾಲಿಯಾಗುತ್ತದೆ!'

    ವಿಪರೀತ ರತಿಯೆಂದರೆ ಸ್ತ್ರೀಯು ಪುರುಷನ ಮೇಲಿದ್ದು ಕ್ರೀಡಿಸುವ ಭಂಗಿ. ಇದನ್ನು ಪುರುಷಾಯಿತ ಎಂದೂ ಕರೆಯುತ್ತಾರೆ. ವಾತ್ಸ್ಯಾಯನನ ಕಾಮಸೂತ್ರದಲ್ಲಿ ಇದರ ವಿವರಣೆ ಇದೆ ಹಾಗೂ ಸಂಸ್ಕೃತದ ಅನೇಕ ಶೃಂಗಾರ ಪದ್ಯಗಳಲ್ಲಿ ಪುರುಷಾಯಿತದ ವರ್ಣನೆಯಿದೆ. ಅನೇಕ ದೇವಾಲಯ ಶಿಲ್ಪಗಳಲ್ಲೂ ನಾವು ಪುರುಷಾಯಿತದ ಚಿತ್ರಣ ಕಾಣಬಹುದು. ಪ್ರಾಚೀನ ಭಾರತೀಯರಿಗೆ ಪುರುಷಾಯಿತದ ಆಚರಣೆ ಹಾಗೂ ವರ್ಣನೆಗಳ ವಿಷಯದಲ್ಲಿ ಮುಜುಗರವಿರಲಿಲ್ಲ. ರತಿಕ್ರೀಡೆ ಹಾಗೂ ಪ್ರೇಮಕಲಾಪಗಳಲ್ಲಿ ಪುರುಷರಿಗಿದ್ದಷ್ಟೇ ಸ್ವಾತಂತ್ರ್ಯ ಸ್ತ್ರೀಯರಿಗೂ ಇತ್ತು.
      ಈ ಭಂಗಿಯಲ್ಲಿ ಸುಂದರಿಗೆ ಆಗುವ ಪ್ರಯಾಸ, ಪುಳಕಗಳಿಂದ ಅವಳ ಜಘನವು ವಿಸ್ತರಿಸಿ, ಮಾಂಸಲವಾಗಿ, ತುಂಬಿಕೊಂಡಂತೆ ಬಹು ಸುಂದರವಾಗಿ ಕಾಣುತ್ತಿದೆ, ಹಾಗೂ ಅದು ಸುರತಸುಖಕ್ಕೆ ಏಕೈಕ ನಿಧಿಯಾಗಿದೆ ಎಂದು ಕವಿಯು ವರ್ಣಿಸುತ್ತಾ ಅದು ವಿಜಯಶಾಲಿಯಾಗುತ್ತದೆ ಎನ್ನುತ್ತಾನೆ.

ಸೋಮವಾರ, ಮಾರ್ಚ್ 16, 2026

ಸುಂದರೀಶತಕ -೬

ಸುಂದರಿ ಕಾಂಚನಕದಲೀ ಕರ್ಪೂರೋತ್ಪತ್ತಿಶಾಲಿನೀತ್ಯನಯಾ /
ಚಂದ್ರೋದ್ವರ್ತನಸುರಭಿಸ್ತವೋರುರುಪಮೀಯತೇ ಕವಿಭಿ: //

    ' ಎಲೈ ಸುಂದರಿ! ಚಂದ್ರನ ಲೇಪನ ಅಥವಾ ಚಂದನಲೇಪನದಿಂದ ಸುಗಂಧಿತವಾಗಿರುವ ನಿನ್ನ ಸುಂದರ ತೊಡೆಯನ್ನು ಕವಿಗಳು ಹೊಂಬಣ್ಣದ ಬಾಳೆ ದಿಂಡು, ಶುದ್ಧವಾದ ಕರ್ಪೂರವು ಉತ್ಪತ್ತಿಯಾಗುವ ಸ್ಥಾನ, ಇವುಗಳಿಗೆ ಹೋಲಿಸುತ್ತಾರೆ!' 
     ನಮ್ಮ ಪ್ರಾಚೀನ ಸಾಹಿತ್ಯದಲ್ಲಿ ಹೆಣ್ಣಿನ ಸೌಂದರ್ಯದ ಬಗ್ಗೆ, ಮತ್ತು ರತಿಸುಖದ ಬಗ್ಗೆ ಇಷ್ಟೊಂದು ವರ್ಣನೆಗಳಿರುವುದನ್ನು ನೋಡಿ ಇಂದಿನ ಜನರಿಗೆ ಆಶ್ಚರ್ಯವಾಗಬಹುದು. ಕೆಲವರು ಇದರ ಬಗ್ಗೆ ತಪ್ಪು ತಿಳಿದು ಮೂಗು ಮುರಿಯಬಹುದು ಕೂಡ! ಆದರೆ ನಮ್ಮ ಹಿಂದಿನವರಿಗೆ ಸುಂದರವಾಗಿರುವುದನ್ನು ಹೊಗಳುವುದರಲ್ಲಿ, ಹಾಗೂ ಸುಖಪಡುವ ವಿಷಯದಲ್ಲಿ ಮುಜುಗರ, ಅಥವಾ ತಪ್ಪಿತಸ್ಥ ಭಾವನೆ ಇರಲಿಲ್ಲ. ಪ್ರಕೃತಿ, ಮತ್ತು ಪ್ರಾಪಂಚಿಕ ಸೌಂದರ್ಯಗಳನ್ನು ಯಥೇಚ್ಛವಾಗಿ ಅನುಭವಿಸಿ ಕ್ರಮೇಣ ಅವುಗಳಲ್ಲಿ ವೈರಾಗ್ಯ ತಾಳುವುದು ಅವರ ರೀತಿಯಾಗಿತ್ತು. ಆದರೆ ಈಗ ಮೇಲ್ನೋಟಕ್ಕೆ ಜನರು ತಾವು ವೈರಾಗ್ಯಶಾಲಿಗಳೆಂದು ತೋರಿಸಿಕೊಳ್ಳುತ್ತಾ ಕದ್ದು ಮುಚ್ಚಿ ತಪ್ಪಿತಸ್ಥ ಭಾವನೆಯಿಂದ ಸುಖಪಡಲು ಪ್ರಯತ್ನಿಸುತ್ತಾ ಅದನ್ನೂ ಸರಿಯಾಗಿ ಮಾಡಲಾಗುವುದಿಲ್ಲ. 
        ಸೌಂದರ್ಯ, ಶೃಂಗಾರಗಳ ಶುದ್ಧವಾದ ದೃಷ್ಟಿಯಿಂದ ನೋಡಿದರೆ ಎಲ್ಲವೂ ಚೆನ್ನ. ಹಾಗಾಗಿ ಇಲ್ಲಿ ಕವಿಯು ಹೆಣ್ಣಿನ ತೊಡೆಗಳನ್ನು ಹೊಂಬಣ್ಣದ ಬಾಳೆ ದಿಂಡುಗಳಿಗೂ ಶುದ್ಧವಾದ ಕರ್ಪೂರೋತ್ಪತ್ತಿ ಸ್ಥಾನಗಳಿಗೂ ಕವಿಗಳು ಹೋಲಿಸುತ್ತಾರೆ ಎನ್ನುತ್ತಾನೆ. ಅಲ್ಲದೇ ಚಂದನಲೇಪನದಿಂದ ಅವು ಸುಗಂಧಿತವಾಗಿವೆ ಕೂಡ! 

ಭಾನುವಾರ, ಮಾರ್ಚ್ 15, 2026

ಸುಂದರೀಶತಕ -೫

ಸುಂದರಿ ಜಂಘಾಯುಗಮಿದಮುಪಾಸನಸ್ತಂಭವಿಭ್ರಮಂ ಧತ್ತೇ /
ಇಷುಭಿರತನೋರ್ಮನೋ ಮೇ ವಿದ್ಧಂ ಯಲ್ಲಗ್ನಮಾತ್ರಮಿಹ //

     ' ಎಲೈ ಸುಂದರಿ! ನಿನ್ನ ಜೋಡಿ ತೊಡೆಗಳು ಕಾಮದೇವನ ಮಂದಿರದ ಉಪಾಸನಸ್ತಂಭಗಳೆಂಬಂತೆ ಸೌಂದರ್ಯ ಹೊಂದಿವೆ! ಅವುಗಳಲ್ಲಿ ನನ್ನ ಮನಸ್ಸನ್ನಿರಿಸಿದ ಕೂಡಲೇ ಅನಂಗನ ಅಂಬುಗಳಿಂದ ಅದು ಭೇದಿಸಲ್ಪಟ್ಟಿತು!'

       ಸುಂದರಿಯ ತೊಡೆಗಳು ಎಷ್ಟು ಸುಂದರವಾಗಿವೆಯೆಂದರೆ, ಅವು ಕಾಮದೇವನ ಮಂದಿರದ ಉಪಾಸನಸ್ತಂಭಗಳಂತಿವೆ ಎನ್ನುತ್ತಾನೆ ಅವನ ರಸಿಕ ಪ್ರೇಮಿ. ಆದರೆ ವಿಪರ್ಯಾಸವೆಂದರೆ ಉಪಾಸನಸ್ತಂಭಗಳಾದ ಅವುಗಳಲ್ಲಿ ಅವನು ತನ್ನ ಮನಸ್ಸನ್ನಿಟ್ಟ ಕೂಡಲೇ ಕಾಮದೇವನ ಬಾಣಗಳಿಂದ ಅವನ ಮನಸ್ಸಿಗೆ ಏಟು ಬಿದ್ದು ಗಾಯಗೊಂಡಿತು! ಅಥವಾ ಅವುಗಳಲ್ಲಿ ಮನಸ್ಸನ್ನಿಟ್ಟ ಕೂಡಲೇ ಕಾಮದೇವನ ಬಾಣಗಳಿಂದ ಹೊಡೆಯಲ್ಪಟ್ಟು ಸಿಗಬೇಕಾದ ಫಲ ಸಿಕ್ಕಿತು!
   ಕಾಮದೇವನು ಶಿವನ ಮೂರನೆಯ ಕಣ್ಣಿನಿಂದ ಸುಡಲ್ಪಟ್ಟ ಬಳಿಕ, ಅವನ ದಯೆಯಿಂದ ಪುನಃ ಬದುಕದರೂ ಅವನು ದೇಹವಿಲ್ಲದವನಾಗಿ ಅನಂಗನೆನಿಸಿದನು. ಹಾಗಾಗಿಯೇ ಇಲ್ಲಿ ಕಾಮದೇವನನ್ನು ಕವಿಯು ಅತನು, ಅಂದರೆ ತನುವಿಲ್ಲದವನು ಎಂದು ಕರೆದಿದ್ದಾನೆ. ಕಾಮದೇವನ ಇನ್ನಿತರ ಹೆಸರುಗಳು, ಮನೋಭವ ಹಾಗೂ ಮನೋಜ. ಅಂದರೆ ಮನಸ್ಸಿನಲ್ಲೇ ಉದಿಸುವವನು.

ಶುಕ್ರವಾರ, ಮಾರ್ಚ್ 13, 2026

ಸುಂದರೀಶತಕ -೪

ವರವರ್ಣಿನಿ ತವ ಚರಣೌ ಕಸ್ಯ ನ ಹೃದಯಾನುರಂಜನಂ ಕುರುತ: /
ಪರಮೇಷ್ಠಿನೋsತಿನಿಷ್ಠುರಪಾಣಿತಲಸ್ಪರ್ಶತಸ್ತಾಮ್ರೌ //

    ' ಎಲೈ ವರವರ್ಣಿನಿ! ನಿನ್ನ ಚರಣಗಳು ಯಾರ ಹೃದಯವನ್ನು ರಂಜಿಸುವುದಿಲ್ಲ?! ಸಾಕ್ಷಾತ್ ಸೃಷ್ಟಿಕರ್ತನೇ ನಿನ್ನನ್ನು ಸೃಷ್ಟಿಸುವಾಗ ತನ್ನ ಅತಿ ನಿಷ್ಠುರವಾದ ಹಸ್ತದಿಂದ ಅವನ್ನು ಸ್ಪರ್ಶಿಸಿದ ಕಾರಣ, ಅವು ತಾಮ್ರವರ್ಣವಾಗಿವೆ!' 

     ಸುಂದರಿಯ ಪಾದಗಳು ಸಹಜವಾಗಿಯೇ ಕೋಮಲವಾಗಿಯೂ ಕೆಂಪಾಗಿಯೂ ಇರಲು, ಅದಕ್ಕೆ ಕಾರಣ, ಸೃಷ್ಟಿಕರ್ತ ಬ್ರಹ್ಮನು ಅವನ್ನು ತನ್ನ ಗಟ್ಟಿಯಾದ ಹಸ್ತಗಳಿಂದ ಹಿಡಿದದ್ದು ಎಂದು ಚಮತ್ಕಾರವಾಗಿ ಹೇಳುತ್ತಾ ಕವಿಯು ಸುಂದರಿಯ ಚರಣಗಳನ್ನು ವರ್ಣಿಸುತ್ತಾನೆ.

ಬುಧವಾರ, ಮಾರ್ಚ್ 11, 2026

ಸುಂದರೀಶತಕ -೩

ಚಂದ್ರಾಧಿಕರುಚಯೋsಪಿ ಕ್ಷಾಲನಶುಚಯೋsಪಿ ಚಂದ್ರಕಾಂತೇನ /
ಸುಂದರಿ ತವ ನಖಮಣಯೋ ನ ನಯೋ ಯತ್ತಾಪಯತಿ ಮನ: //

    'ಎಲೈ ಸುಂದರಿ! ಚಂದ್ರನಿಗಿಂತಲೂ ಅಧಿಕ ಕಾಂತಿಯಿದ್ದರೂ, ಚಂದ್ರಕಾಂತ ಶಿಲೆಯಿಂದ ತೊಳೆದು ಶುಚಿಯಾಗಿದ್ದರೂ, ನಿನ್ನ ನಖಮಣಿಗಳು ನಮ್ಮ ಮನಸ್ಸಿಗೆ ತಾಪವುಂಟುಮಾಡುತ್ತವೆ! ಇದು ನ್ಯಾಯವಲ್ಲ!' 

     ಸುಂದರಿಯ ನಖಗಳು ( ಉಗುರುಗಳು) ಮಣಿಗಳಂತೆ ಸುಂದರವಾಗಿವೆ! ಅವು ಚಂದ್ರನಿಗಿಂತಲೂ ಅಧಿಕ ಕಾಂತಿ ಹೊಂದಿವೆ! ಚಂದ್ರಕಾಂತ ಶಿಲೆಯಿಂದ ತೊಳೆಯಲಾಗಿ ಶುಚಿಯಾಗಿವೆ! ಹಾಗಾಗಿ ಇವು ತಂಪುಂಟುಮಾಡಬೇಕು. ಆದರೆ ಇವು ತಮ್ಮ ಸೌಂದರ್ಯದಿಂದ ನಮ್ಮ ಮನಸ್ಸಿನಲ್ಲಿ ಕಾಮದ ತಾಪವುಂಟುಮಾಡುತ್ತಿವೆ, ಇದು ನ್ಯಾಯವಲ್ಲ ಎಂದು ರಸಿಕನೊಬ್ಬನು ಹೇಳುವಂತೆ ಕವಿಯು ಇಲ್ಲಿ ಸುಂದರಿಯ ನಖಗಳನ್ನು ಸೊಗಸಾಗಿ ವರ್ಣಿಸಿದ್ದಾನೆ.

ಭಾನುವಾರ, ಮಾರ್ಚ್ 8, 2026

ಹೋಳಿ ಹಬ್ಬದ ಕಥೆಗಳು

ನಮ್ಮ ಪ್ರತಿಯೊಂದು ಹಬ್ಬದ ಹಿಂದೆಯೂ ಸ್ವಾರಸ್ಯಕರ ಪೌರಾಣಿಕ, ಹಾಗೂ ಜಾನಪದ ಕಥೆಗಳಿವೆ. ಅಂತೆಯೇ ಹೋಳಿ ಹಬ್ಬದ ವಿಷಯದಲ್ಲೂ ಅನೇಕ ಕಥೆಗಳಿವೆ ಈಗ ಹೋಳಿ ಹಬ್ಬದ ಕಥೆಗಳನ್ನು ನೋಡೋಣ.
      ಹೋಳಿ, ಹೋಲಾಕಾ, ಹೋಲಿಕಾ, ಹೂಲಿ, ಮೊದಲಾದ ಹೆಸರುಗಳಿಂದ ಕರೆಯಲ್ಪಡುವ ಈ ಹಬ್ಬವು, ಸಂಭ್ರಮದಿಂದ ಜನರು ಮಾಡುವ ಹಾ ಹಾ ಹೂ ಹೂ ಹೋ ಹೋ ಎಂಬೆಲ್ಲಾ ಉದ್ಗಾರಗಳಿಂದ ಈ ಪದಗಳು ಬಂದಿವೆಯೆಂದು ಹೇಳುತ್ತಾರೆ. 
        ಭವಿಷ್ಯೋತ್ತರ ಪುರಾಣದ ಕಥೆಯೊಂದರ ಪ್ರಕಾರ, ಮಾಲಿ ಎಂಬ ರಾಕ್ಷಸನಿಗೆ ಢೋಂಡಾ ಅಥವಾ ಢೂಂಡಾ ಎಂಬ ಮಗಳಿದ್ದಳು. ಅವಳು ಶಿವನನ್ನು ಕುರಿತು ತಪಸ್ಸು ಮಾಡಿ ತಾನು ಮನುಷ್ಯರಿಂದಲೂ ರಾಕ್ಷಸರಿಂದಲೂ ದೇವತೆಗಳಿಂದಲೂ ಯಾವುದೇ ಆಯುಧಗಳಿಂದಲೂ ಯಾವುದೇ ಋತುವಿನಲ್ಲೂ ಹಗಲು ಅಥವಾ ರಾತ್ರಿಯಲ್ಲೂ ಮನೆಯ ಒಳಗೂ ಅಥವಾ ಹೊರಗೂ ಸಾಯಬಾರದೆಂದು ವರ ಪಡೆದಳು. ಶಿವನು ಅವಳಿಗೆ ಆ ವರವನ್ನು ನೀಡಿ ಒಂದು ಎಚ್ಚರಿಕೆ ಕೊಟ್ಟನು. ಅದೇನೆಂದರೆ, ಜನರು ಸಂಭ್ರಮದಿಂದ ಅವಳಿಗೆ ಕೆಟ್ಟ, ಅಶ್ಲೀಲ ಮಾತುಗಳನ್ನು ಆಡಿ ನಿಂದಿಸಿದರೆ ಅವಳು ಕುಗ್ಗಿ ಸತ್ತುಹೋಗುವಳೆಂಬುದು! 
     ಶಿವನ ವರದಿಂದ ಕೊಬ್ಬಿದ ಆ ರಾಕ್ಷಸಿಯು ಜನರನ್ನು, ಮುಖ್ಯವಾಗಿ ಮಕ್ಕಳನ್ನೂ ಯುವಕರನ್ನೂ ಪೀಡಿಸತೊಡಗಿದಳು! ಅವಳು ' ಅಡಾಡಾ ' ಎಂದು ಕಿರುಚುತ್ತಾ ಜನರ ಮೇಲೆ ದಾಳಿ ಮಾಡುತ್ತಿದ್ದಳು! ಆ ಸಮಯದಲ್ಲಿ ರಘು ಎಂಬ ರಾಜನು ಆಳುತ್ತಿದ್ದನು.‌ಅವನು ಅವಳನ್ನು ಆಯುಧಗಳಿಂದಾಗಲೀ ಮಂತ್ರಗಳಿಂದಾಗಲೀ ಯಾರಿಂದಲೂ ಕೊಲ್ಲಲಾಗದೆಂದು ಮನಗಂಡು ಇದಕ್ಕೆ ಪರಿಹಾರವೇನೆಂದು ಕುಲಗುರುಗಳಾದ ವಸಿಷ್ಠರನ್ನು ಕೇಳಿದನು. ಆಗ ವಸಿಷ್ಠರು ಅವಳ ರಹಸ್ಯವನ್ನು ಬಿಚ್ಚಿಟ್ಟು ," ಫಾಲ್ಗುಣ ಮಾಸದ ಶುಕ್ಲಪಕ್ಷದ ಪೂರ್ಣಿಮೆಯ ದಿನದಂದು ಒಣಗಿದ ಕಟ್ಟಿಗೆಗಳನ್ನೂ ಒಣ ಹುಲ್ಲನ್ನೂ ಪೇರಿಸಿ ಬೆಂಕಿ ಹಾಕಿ, ಎಲ್ಲಾ ಕಿರಿಯರೂ ಯುವಕರೂ ಸೇರಿ ರಕ್ಷೋಘ್ನ ಮಂತ್ರಗಳನ್ನು ಪಠಿಸಿ ಆ ಅಗ್ನಿಯನ್ನು ಸುತ್ತುತ್ತಾ ನಗುತ್ತಾ ಚಪ್ಪಾಳೆ ತಟ್ಟುತ್ತಾ ಗ್ರಾಮ್ಯ ಭಾಷೆಯಲ್ಲಿ ಅಶ್ಲೀಲ ಹಾಡುಗಳನ್ನು ಹಾಡಬೇಕು! ಅದರಿಂದ ಆ ರಾಕ್ಷಸಿ ದುರ್ಬಲಗೊಂಡು ಸಾಯುತ್ತಾಳೆ!" ಎಂದರು.
       ಜನರು ಅದರಂತೆ ಮಾಡಲು ಆ ರಾಕ್ಷಸಿ ದುರ್ಬಲಗೊಂಡು ಸತ್ತಳು! 
     ಇದನ್ನು ನೆನಪಿಸಿಕೊಳ್ಳಲು ಹುಣ್ಣಿಮೆಯ ರಾತ್ರಿ ಬೆಂಕಿ ಹಾಕಿ ಹಾಡಿ, ಕುಣಿದು, ಮರುದಿನ ಬಣ್ಣದ ಓಕುಳಿಯಾಡುತ್ತಾರೆ. ಹೋಳಿಯ ಹಬ್ಬದಂದು ಅತಿಶೃಂಗಾರದ, ಅಶ್ಲೀಲವೂ ಆಗಿರುವ ಗೀತೆಗಳನ್ನು ಹಾಡಲು ಇದೇ ಕಾರಣ. ಇಡೀ ವರ್ಷ ಸಂಯಮದಿಂದ ಇದ್ದುದಕ್ಕಾಗಿ ಇದೊಂದು ಮನಸ್ಸನ್ನು ಹಗುರಗೊಳಿಸುವ ಆಚರಣೆ. ನಮ್ಮ ಎಲ್ಲಾ ಹಬ್ಬಗಳಲ್ಲೂ ಈ ರೀತಿಯ ಆಚರಣೆಗಳು ಕಾಣುತ್ತವೆ. ಉದಾಹರಣೆಗೆ ದೀಪಾವಳಿಯ ರಾತ್ರಿ ಜೂಜಾಡಬೇಕೆಂಬ ಪದ್ಧತಿಯಿದೆ. ಹಾಗೆಯೇ ಎಲ್ಲಾ ಹಬ್ಬಗಳಲ್ಲೂ ಸಿಹಿತಿಂಡಿಗಳನ್ನು ಸೇವಿಸುವ ಪರಿಪಾಠ ಇದೆ. ಹೀಗೆ ಯಾವುದನ್ನು ಸದಾ ಮಾಡಿದರೆ ತೊಂದರೆಯೋ ಅದಕ್ಕೂ ಒಂದು ದಿನ ಅವಕಾಶವಿತ್ತರೆ ಅದು ಮನಸ್ಸಿನಿಂದ ಹೋಗಿ ಅನಂತರ ಸಂಯಮದಿಂದ ಇರಬಹುದೆಂಬುದು ನಮ್ಮ ಹಿರಿಯರ ಆಲೋಚನೆಯಾಗಿತ್ತು. ಅಲ್ಲದೇ ಇವನ್ನು ಹಬ್ಬದ ಸಂದರ್ಭದಲ್ಲಿ ಮಾಡುವುದರಿಂದ ಇತಿ ಮಿತಿಯಲ್ಲಿರುತ್ತದೆ ಹಾಗೂ ವಿನೋದಕ್ಕಾಗಿ ಮತ್ತು ಸ್ನೇಹವರ್ಧನೆಗಾಗಿ ಇರುತ್ತದೆಯೇ ಹೊರತು ದುರುದ್ದೇಶಪೂರಿತವಾಗಿರುವುದಿಲ್ಲ. ದೀಪಾವಳಿಯ ಸಂದರ್ಭದಲ್ಲಿ ಇತಿಮಿತಿಯಲ್ಲಿ ವಿನೋದಕ್ಕಾಗಿ ಜೂಜಾಡುವುದರಿಂದ, ಹಾಗೂ ಹೋಳಿ ಹಬ್ಬದಲ್ಲಿ ಗೆಳೆಯ, ಗೆಳತಿಯರು, ಸ್ತ್ರೀ, ಪುರುಷರು ಒಟ್ಟಿಗೆ ಸ್ವಲ್ಪ ಹೊತ್ತು ಬಣ್ಣ ಎರಚಿಕೊಂಡು, ಹಾಡಿ,ಕುಣಿಯುವುದರಿಂದ ಸ್ನೇಹ, ಬಾಂಧವ್ಯಗಳು ಹೆಚ್ಚುತ್ತವೆ. 
     ಹೋಳಿ ಹಬ್ಬ ವಸಂತಕಾಲದ ಆಗಮನವನ್ನೂ ಸೂಚಿಸುತ್ತದೆ. ಹುಣ್ಣಿಮೆಯ ಮರುದಿನದಂದು ಕಾಮನ ಪೂಜೆಯನ್ನೂ ಮಾಡುವುದರಿಂದ ಪ್ರೇಮ, ಸಂತಾನ, ಸೃಷ್ಟಿಗಳ ಸಂಭ್ರಮಾಚರಣೆಯೂ ಇರುತ್ತದೆ. ಒಬ್ಬರ ಮೇಲೆ ಒಬ್ಬರು ಬಣ್ಣವನ್ನು ಎರಚುವುದು ಮರಗಳಲ್ಲಿ ಹೊಸ ಪುಷ್ಪಗಳು ಅರಳಿರುವುದನ್ನು ಸೂಚಿಸುತ್ತದೆ.
     ಇನ್ನೊಂದು ಕಥೆಯ ಪ್ರಕಾರ, ಹಿರಣ್ಯಕಶಿಪುವಿನ ತಂಗಿಯಾದ ಹೋಲಿಕಾ ಎಂಬ ರಾಕ್ಷಸಿಯಿದ್ದಳು. ಅವಳು ಅಗ್ನಿಯಿಂದ ಸುಡಬಾರದೆಂದು ಅವನಿಂದಲೇ ವರ ಪಡೆದಿದ್ದಳು. ಹಿರಣ್ಯಕಶಿಪುವು ಹರಿದ್ವೇಷಿಯಾಗಿದ್ದರೆ, ಅವನ ಮಗ ಪ್ರಹ್ಲಾದನು ಹರಿಭಕ್ತನಾಗಿದ್ದನು. ಇದರಿಂದ ಕುಪಿತಗೊಂಡ ಹಿರಣ್ಯಕಶಿಪುವು ಪ್ರಹ್ಲಾದನನ್ನು ಕೊಲ್ಲಿಸಲು ಬಹಳ ಪ್ರಯತ್ನಪಟ್ಟನು. ಆದರೆ ಶ್ರೀನ್ನಾರಾಯಣನ ದಯೆಯಿಂದ ಅದು ಸಾಧ್ಯವಾಗಲಿಲ್ಲ. ಕೊನೆಗೆ ಹಿರಣ್ಯಕಶಿಪುವು ತನ್ನ ತಂಗಿ ಹೋಲಿಕಾಳಿಗೆ ಪ್ರಹ್ಲಾದನನ್ನು ಬೆಂಕಿಯಲ್ಲಿ ಕೂರಿಸಿಕೊಂಡು ಅವನನ್ನು ಸುಡಿಸಲು ಹೇಳಿದನು. ಅವಳು ಅದರಂತೆ ಬಾಲಕ ಪ್ರಹ್ಲಾದನನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಂಡು ಚಿತೆಯೇರಿದಳು. ಆದರೆ ಪುನಃ ವಿಷ್ಣುವಿನ ಕೃಪೆಯಿಂದ ಪ್ರಹ್ಲಾದನು ಕೂದಲೂ ಕೊಂಕದೇ ಪಾರಾದರೆ, ಹೋಲಿಕಾಳೇ ಅಗ್ನಿಯಲ್ಲಿ ಸುಟ್ಟುಹೋದಳು! ಅವಳ ವರ ಅವಳಿಗೇ ತಿರುಗಿಬಿತ್ತು! ಇದರದೇ ಇನ್ನೊಂದು ಕಥೆಯ ಪ್ರಕಾರ, ಹೋಲಿಕಾ ಒಂದು ಮಾಯಾ ಹೊದಿಕೆಯನ್ನು ಹೊದ್ದುಕೊಂಡಿದ್ದಳು. ಅದು ಅವಳನ್ನು ಬೆಂಕಿಯು ಸುಡದಂತೆ ರಕ್ಷಿಸುತ್ತಿತ್ತು. ಆಗ ಗಾಳಿಯು ಬೀಸಿ, ಅವಳ ಹೊದಿಕೆ ಹಾರಿ ಪ್ರಹ್ಲಾದನ ಮೇಲೆ ಬಿದ್ದಿತು. ಅದರಿಂದ ಅವನು ಸುಡದೇ ಅವಳೇ ಸುಟ್ಟುಹೋದಳು! ಈ ಘಟನೆಯನ್ನು ನೆನಪಿಸಿಕೊಳ್ಳಲು ಹೋಲಿಕಾದಹನ ಎಂಬ ಆಚರಣೆಯಲ್ಲಿ ಹಳೆಯ ಕಟ್ಟಿಗೆ, ಎಲೆಗಳು ಇತ್ಯಾದಿಗಳನ್ನು ಹಾಕಿ ಬೆಂಕಿ ಹಾಕುತ್ತಾರೆ. ಕೆಲವು ಸಂಪ್ರದಾಯಗಳಲ್ಲಿ ಹೋಲಿಕಾಳ ಬೊಂಬೆ ಮಾಡಿ ದಹಿಸುತ್ತಾರೆ ಮತ್ತು ಅನಂತರ, ಹೋಲಿಕಾಳನ್ನು ಪೂಜಿಸುತ್ತಾರೆ ಕೂಡ. ಇದಕ್ಕೆ ಕಾರಣವೆಂದರೆ,  ದುಷ್ಟರು ಸಾಧುಗಳ ಸಂಪರ್ಕಕ್ಕೆ ಬಂದಮೇಲೆ ಅವರೂ ಸಾಧುಗಳಾಗುತ್ತಾರೆ. ಹೋಲಿಕಾಳು ಪ್ರಹ್ಲಾದನ ಸಂಪರ್ಕಕ್ಕೆ ಬಂದು ಸುಟ್ಟು ಸತ್ತ ಬಳಿಕ, ಅವಳಿಗೂ ಮುಕ್ತಿ ಸಿಕ್ಕಿತು. ಹಾಗಾಗಿ ಅವಳನ್ನು ಸುಟ್ಟು ಪುನಃ ಪೂಜಿಸುವ ಅರ್ಥ, ದುಷ್ಟತನ ದಮನವಾಗಿ ಒಳ್ಳೆಯದು ಉಳಿಯಲಿ ಎಂಬುದು.ಅಂತೆಯೇ ಇದು, ಹಳೆಯ, ಜೀರ್ಣವಾದುದೆಲ್ಲಾ ಹೋಗಿ ಹೊಸದು ಬರಲಿ ಎಂಬ ಸೃಷ್ಟಿ, ಸ್ಥಿತಿ, ಲಯಗಳ ತತ್ವವೇ ಆಗಿರುತ್ತದೆ.
     ಈ ದಿನವೇ ಶಿವನು ಕಾಮದೇವನನ್ನು ತನ್ನ ಮೂರನೆಯ ಕಣ್ಣಿನಿಂದ ಸುಟ್ಟನೆಂಬ ಕಥೆಯಿದೆ. ಶಿವನ ಪುತ್ರನಿಂದಲೇ ತನಗೆ ಮರಣ ಬರಬೇಕೆಂದು ತಾರಕಾಸುರನೆಂಬ ರಾಕ್ಷಸನು ಬ್ರಹ್ಮನಿಂದ ವರ ಪಡೆದು ಲೋಕಕಂಟಕನಾಗಿದ್ದನು. ಶಿವನ ಪತ್ನಿ ಸತಿಯು ತನ್ನ ತಂದೆ ದಕ್ಷನಿಂದ ಶಿವನಿಗೆ ಅವಮಾನವಾಯಿತೆಂದು ಯೋಗಾಗ್ನಿಯಿಂದ ಭಸ್ಮಗೊಂಡಿದ್ದಳು. ಹೆಂಡತಿಯಿಲ್ಲದೇ ಮಗನು ಹೇಗೆ ಹುಟ್ಟುವನೆಂಬ ತರ್ಕದಿಂದ ತಾರಕಾಸುರನು ಶಿವನ ಮಗನಿಂದಲೇ ಮರಣ ಬರಲೆಂದು ವರ ಪಡೆದಿದ್ದನು. ಇದರಿಂದ ತನಗೆ ಮರಣವೇ ಇಲ್ಲವೆಂದು ಅವನು ಬಗೆದಿದ್ದನು. ಈಗ ಸತಿಯು ಹಿಮವಂತನ ಮಗಳು ಪಾರ್ವತಿಯಾಗಿ ಹುಟ್ಟಿ ಅವನ ಮೇಲಿನ ಪ್ರೇಮದಿಂದ ಅವನ ಸೇವೆಯಲ್ಲಿ ನಿರತಳಾಗಿದ್ದಳು. ಶಿವನಾದರೋ ಪ್ರೀತಿ, ಪ್ರೇಮಗಳಿಂದ ದೂರವಾಗಿ ತಪಸ್ಸಿನಲ್ಲಿ ಮುಳುಗಿದ್ದನು. ಹಾಗಾಗಿ ಅವನನ್ನು ತಪೋವಿಮುಖನನ್ನಾಗಿಸಿ ಪಾರ್ವತಿಯಲ್ಲಿ ಪ್ರೇಮವುಂಟಾಗಿ ಅವಳನ್ನು ವರಿಸಿದರೆ, ಅವನಿಗೆ ಮಗನು ಹುಟ್ಟಿ ಅವನು ತಾರಕಾಸುರನನ್ನು ಸಂಹರಿಸುತ್ತಾನೆಂದು ದೇವತೆಗಳು ಬ್ರಹ್ಮನೊಂದಿಗೆ ಸಮಾಲೋಚಿಸಿ, ಅವನ ಆಣತಿಯಂತೆ ಶಿವನನ್ನು ತಪೋವಿಮುಖನನ್ನಾಗಿಸಲು ಕಾಮದೇವನನ್ನು ಕಳಿಸಿದರು. ದೇವಕಾರ್ಯಕ್ಕಾಗಿ ಕಾಮದೇವನು ಹೋಗಿ ಶಿವನ ಮೇಲೆ ಹೂಬಾಣ ಬಿಡಲು, ಒಂದು ಕ್ಷಣ ವಿಚಲಿತನಾದ ಶಿವನು ಕಾಮದೇವನ ಮೇಲೆ ಕುಪಿತಗೊಂಡು ತನ್ನ ಮೂರನೆಯ ಕಣ್ಣಿನ ಅಗ್ನಿಯಿಂದ ಕಾಮನನ್ನು ಸುಟ್ಟು ಹೊರಟುಹೋದನು! ಆಗ ಕಾಮನ ಪತ್ನಿ ರತಿಯು ಸಾಯಲೆಂದು ಹೊರಡಲು, ಶಿವನು ಪಾರ್ವತಿಯನ್ನು ವರಿಸಿದಾಗ ಕಾಮನು ಪುನಃ ಜೀವಂತನಾಗುತ್ತಾನೆ ಎಂಬ ಅಶರೀರವಾಣಿಯಾಯಿತು! ಅನಂತರ, ಪಾರ್ವತಿಯು ತಪಸ್ಸು ಮಾಡಿ ಶಿವನನ್ನು ಮೆಚ್ಚಿಸಿ ವರಿಸಲು, ಕಾಮನು ಶಿವನ ದಯೆಯಿಂದ ಜೀವಂತಗೊಂಡನು. ಆದರೆ ಅವನು ದೇಹವಿಲ್ಲದೇ ಅನಂಗನೆನಿಸಿದನು ಹಾಗೂ ರತಿಯು ಬಯಸಿದಾಗ ಅವಳಿಗೆ ಮಾತ್ರ ಕಾಣುವಂತಾದನು. ಇದರ ಒಂದು ಸಂದೇಶವೇನೆಂದರೆ, ಕಾಮವು ಆಂತರ್ಯದಲ್ಲಿರಬೇಕು, ನಮ್ಮ ಬಯಕೆ ಅಥವಾ ರತಿಯನ್ನು ತೀರಿಸುವಂತಿದ್ದರೆ ಸಾಕು, ಎಲ್ಲರಿಗೂ ಕಾಣಬೇಕಿಲ್ಲ ಎಂಬುದು. ಎಲ್ಲರಿಗೂ ಕಾಮವು ಕಾಣಬೇಕೆಂದಾಗ ಅದು ಕಲೆಯಾಗಿರಬೇಕು. ಈ ಕಥೆಯನ್ನು ನೆನಪಿಸಿಕೊಳ್ಳಲು ಹೋಳಿ ಹುಣ್ಣಿಮೆಯಂದು ಕಾಮದಹನ ಮಾಡುತ್ತಾರೆ, ಹಾಗೂ ಮರುದಿನ, ಕಾಮನ ಪೂಜೆ ಮಾಡುತ್ತಾರೆ. ಇದರ ತಾತ್ಪರ್ಯವೆಂದರೆ, ಕೆಟ್ಟ ಆಸೆಗಳೆಲ್ಲವೂ ಹೋಗಿ ಒಳ್ಳೆಯ ಆಸೆಗಳು ಉಳಿಯಲಿ ಎಂಬುದು.
      ಸಾಮಾನ್ಯವಾಗಿ ಕೃಷ್ಣನು ರಾಧೆ ಮತ್ತು ಇತರ ಗೋಪಿಕಾಸ್ತ್ರೀಯರೊಂದಿಗೆ ಓಕುಳಿಯಾಡುವ ಚಿತ್ರಗಳನ್ನು ನೋಡುತ್ತೇವೆ. ಈ ವಿಷಯದಲ್ಲಿ ಒಂದು ಸ್ವಾರಸ್ಯಕರ ಕಥೆ ಮತ್ತು ಆಚರಣೆಯಿದೆ. ಕೃಷ್ಣನು ನಂದಗಾಂವ್ ಅಥವಾ ವೃಂದಾವನದಲ್ಲಿ ವಾಸಿಸುತ್ತಿದ್ದನು. ರಾಧೆಯು ನಂದಗಾಂವ್ ಗೆ ಸನಿಹವೇ ಇರುವ ಬರ್ಸಾನಾ ಎಂಬ ಹಳ್ಳಿಯಲ್ಲಿದ್ದಳು.‌ ಕೃಷ್ಣನು ಹೋಳಿಯ ದಿನ, ಬರ್ಸಾನಾಗೆ ಹೋಗಿ ರಾಧೆ ಮತ್ತು ಅವಳ ಸಖಿಯರ ಮೇಲೆ ಬಣ್ಣ ಎರಚಿ ತುಂಟಾಟವಾಡಲು, ಅವಳೂ ಅವಳ ಸಖಿಯರೂ ಅವನಿಗೆ ಕೋಲುಗಳಲ್ಲಿ ಹೊಡೆದು ಅವನನ್ನು ಓಡಿಸುತ್ತಿದ್ದರು! ಇದನ್ನು ಲಾಠ್ ಮಾರ್ ಹೋಲಿ ಎಂದು ಈಗಲೂ ಆಚರಿಸುತ್ತಾರೆ. ನಂದಗಾಂವ್ ನ ಹುಡುಗರು ಕೃಷ್ಣನಂತೆ ಬರ್ಸಾನಾಗೆ ಹೋಗಿ ಅಲ್ಲಿನ ಹುಡುಗಿಯರೊಂದಿಗೆ ಓಕುಳಿಯಡುತ್ತಾರೆ. ಆ ಹುಡುಗಿಯರು, ರಾಧೆ ಮತ್ತು ಅವಳ ಸಖಿಯರಂತೆ ಅವರನ್ನು ಕೋಲುಗಳಿಂದ ಹೊಡೆಯುತ್ತಾರೆ. ಆ ಹುಡುಗರು ತಮ್ಮನ್ನು ರಕ್ಷಿಸಿಕೊಳ್ಳಲು ಗುರಾಣಿಗಳನ್ನು ಒಡ್ಡುತ್ತಾರೆ. ಹೀಗೆ ಇದೊಂದು ವಿನೋದೋತ್ಸವ. 
      ಶ್ರೀ ಕೃಷ್ಣನ ಮಹಾಭಕ್ತರಾದ ಚೈತನ್ಯ ಮಹಾಪ್ರಭುಗಳು ಜನಿಸಿದ್ದು ಹೋಳಿ ಹುಣ್ಣಿಮೆಯಂದು. ಬಂಗಾರ ವರ್ಣದಿಂದ ಕೂಡಿದ್ದ ಚೈತನ್ಯರನ್ನು ಗೌರಾಂಗ ಎಂದೂ ಕರೆಯುತ್ತಾರೆ. ಹಾಗಾಗಿ ಹೋಳಿ ಹುಣ್ಣಿಮೆಯಂದು ಗೌರಪೂರ್ಣಿಮಾ ಎಂದೂ ಕರೆಯುತ್ತಾರೆ. ಬಂಗಾಳದಲ್ಲಿ ಹರಿನಾಮ ಸಂಕೀರ್ತನೆಯನ್ನು ಪ್ರಚುರಗೊಳಿಸಿದ ಚೈತನ್ಯರನ್ನು ರಾಧಾ, ಕೃಷ್ಣ ತತ್ವಗಳೆರಡೂ ಸೇರಿ ಆಗಿರುವ ಅವತಾರ ಎಂದು ಬಂಗಾಳಿಗರು ಪರಿಗಣಿಸುತ್ತಾರೆ. 
      ಅಂತೆಯೇ, ಹೋಳಿ ಹಬ್ಬದಂದು, ರಾಧಾ ಕೃಷ್ಣರ ದಿವ್ಯ ಪ್ರೇಮವನ್ನು ಆಚರಿಸಲು ಅವರಿಬ್ಬರ ವಿಗ್ರಹಗಳನ್ನು ಸುಂದರವಾದ ಉಯ್ಯಾಲೆಯಲ್ಲಿ ಇರಿಸಿ ತೂಗುತ್ತಾರೆ. ಇದನ್ನು ಡೋಲೋತ್ಸವ ಎಂದು ಕರೆಯುತ್ತಾರೆ, ಹಾಗೂ ಇದು ಬಂಗಾಳ, ಅಸ್ಸಾಂ, ಒಡಿಶಾ, ಮೊದಲಾದ ರಾಜ್ಯಗಳಲ್ಲಿ, ವೈಷ್ಣವ ಸಂಪ್ರದಾಯಗಳಲ್ಲಿ ಪ್ರಚಲಿತವಿದೆ.
       ಹಿಂದೆ, ಪ್ರಾಚೀನ ಭಾರತದಲ್ಲಿ ವಸಂತಕಾಲದ ಆಗಮನವನ್ನು ಸಂಭ್ರಮಿಸಲು, ವಸಂತೋತ್ಸವ ಎಂದು ಅನೇಕ ದಿನಗಳ ಕಾಲ, ಸಾಹಿತ್ಯ, ಸಂಗೀತ, ನಾಟಕ, ಮೊದಲಾದ ಅನೇಕ ಕಲೆಗಳನ್ನುಳ್ಳ, ತಿಂಡಿತಿನಿಸುಗಳು, ಪ್ರೀತಿ ಪ್ರೇಮಗಳ ವೈಭವೀಕರಣಗಳನ್ನುಳ್ಳ  ಹಲವಾರು ಸ್ವಾರಸ್ಯಕರ ಹಬ್ಬ, ಆಚರಣೆಗಳನ್ನು ಮಾಡುತ್ತಿದ್ದರು. ಇವುಗಳಲ್ಲಿ ಈಗ ಹೋಳಿಯೊಂದೇ ಉಳಿದಿದೆ.
      ಹೀಗೆ ಹೋಳಿಯ ವಿಷಯದಲ್ಲಿ ಅನೇಕ ಸ್ವಾರಸ್ಯಕರ ಕಥೆಗಳಿವೆ, ಹಾಗೂ ವಿವಿಧ ಆಚರಣೆಗಳು ಬೆಸೆದುಕೊಂಡಿವೆ. ನಮ್ಮ ಎಲ್ಲಾ ಹಬ್ಬಗಳಲ್ಲೂ ಈ ರೀತಿ ಅನೇಕ ವೈವಿಧ್ಯಮಯ ಕಥೆಗಳನ್ನೂ ಆಚರಣೆಗಳನ್ನೂ ನೋಡಬಹುದು.
     


ಗುರುವಾರ, ಮಾರ್ಚ್ 5, 2026

ಸುಂದರೀಶತಕ -೨

ಸಹೃದಯಹೃದಯಗ್ರಾಹ್ಯಂ ಮದನಮಹೀಪಾಲಶಾಸನಾದೇವ /
ವಿರಚಯತಿ ಸುಂದರೀಶತಮುತ್ಪ್ರೇಕ್ಷಾವಲ್ಲಭ: ಸುಕವಿ: //
    
      ಸಹೃದಯ ರಸಿಕರಿಗೆ ಹೃದಯಗ್ರಾಹ್ಯವಾದ ಈ ಸುಂದರೀಶತಕವನ್ನು ಸುಕವಿ ಉತ್ಪ್ರೇಕ್ಷಾವಲ್ಲಭನು ಮಹಾರಾಜ ಮದನನ ಆದೇಶದಿಂದಲೇ ರಚಿಸುತ್ತಿದ್ದಾನೆ.

     ಸುಕವಿ ಉತ್ಪ್ರೇಕ್ಷಾವಲ್ಲಭನು ಈ ಸುಂದರೀಶತಕವನ್ನು ಸಾಕ್ಷಾತ್ ಮನ್ಮಥನ ಆದೇಶದಿಂದಲೇ ರಚಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಆ ಮನ್ಮಥನನ್ನು ಮಹೀಪಾಲ, ಅಂದರೆ ಭೂಪಾಲ, ಮಹಾರಾಜನೆಂದು ಕರೆದಿದ್ದಾನೆ. ತನ್ನ ಪಂಚ ಹೂಬಾಣಗಳಾದ ಅರವಿಂದ ( ಕಮಲ ಪುಷ್ಪ), ಅಶೋಕ, ಚೂತ (ಮಾವಿನ ಹೂವು), ನವಮಲ್ಲಿಕಾ (ಮಲ್ಲಿಗೆ ಹೂವು), ನೀಲೋತ್ಪಲ ( ಕನ್ನೈದಿಲೆ) ಗಳನ್ನು ಬಿಟ್ಟು ಸ್ತ್ರೀ, ಪುರುಷರನ್ನು ಪ್ರೇಮದಲ್ಲಿ ಬೀಳಿಸಿ ಇಡೀ ಭೂಮಿಯನ್ನು ಪ್ರೇಮಮಯವನ್ನಾಗಿ ಮಾಡುವ ಮನ್ಮಥನು ಭೂಮಿಯನ್ನೇ ಗೆದ್ದ ಮಹಾರಾಜನಲ್ಲದೇ ಇನ್ನೇನು?

ಬುಧವಾರ, ಮಾರ್ಚ್ 4, 2026

ಪೌರಾಣಿಕ ಸ್ವಾರಸ್ಯಗಳು - ಭಂಗಾಸ್ವನನ ಕಥೆ

ಪೌರಾಣಿಕ ಸ್ವಾರಸ್ಯಗಳು 


ಸ್ತ್ರೀ,ಪುರುಷರ ಸಮಾಗಮದಲ್ಲಿ ಯಾರಿಗೆ ಹೆಚ್ಚಿನ ಸುಖ ಪ್ರಾಪ್ತಿಯಾಗುತ್ತದೆ? 

ಭಂಗಾಸ್ವನನ ಕಥೆ 

     ಸ್ತ್ರೀ ಪುರುಷರು ಸಮಾಗಮ ಮಾಡಿದಾಗ ಹೆಚ್ಚು ಸುಖ ಯಾರಿಗೆ ಸಿಗುತ್ತದೆ? ಈ ಪ್ರಶ್ನೆಯನ್ನು ಕೇಳಿದ್ದು ಯುಧಿಷ್ಠಿರ. ಪ್ರಶ್ನೆ ಕೇಳಿದ್ದು ಶರಶಯ್ಯೆಯಲ್ಲಿದ್ದ ಭೀಷ್ಮರನ್ನು. ಮರಣವನ್ನು ಎದುರುನೋಡುತ್ತಾ ಶರಶಯ್ಯೆಯಲ್ಲಿ ಮಲಗಿದ್ದ ಭೀಷ್ಮರು ಹೋಗಿಬಿಟ್ಟರೆ ಅವರ ಅಪಾರ ಜ್ಞಾನರಾಶಿ ಅವರೊಂದಿಗೇ ಹೊರಟುಹೋಗುತ್ತದೆಯಲ್ಲಾ ಎಂದು ಯೋಚಿಸಿ ಶ್ರೀಕೃಷ್ಣನು ಅವರಿಂದ ಜ್ಞಾನೋಪದೇಶ ಪಡೆಯಲೆಂದು ಪಾಂಡವರನ್ನು ಅವರ ಬಳಿಗೆ ಕರೆದೊಯ್ಯುತ್ತಾನೆ. ಆಗ ಯುಧಿಷ್ಠಿರನು ಕೇಳಿದ ಹಲವಾರು ಪ್ರಶ್ನೆಗಳನ್ನು ಭೀಷ್ಮರು ಉತ್ತರಿಸುತ್ತಾರೆ. ಆಗ ರಾಜನೀತಿ, ಆಧ್ಯಾತ್ಮಿಕ ವಿಚಾರಗಳು, ತತ್ವ, ಭಕ್ತಿ, ದಾನದ ಮಹತ್ವ, ಮೊದಲಾದ ಹಲವಾರು ವಿಚಾರಗಳು ಬರುತ್ತವೆ. ಈ ವಿಷಯಗಳು ಶಾಂತಿಪರ್ವ ಮತ್ತು ಅನುಶಾಸನ ಪರ್ವಗಳಲ್ಲಿ ತುಂಬಿಕೊಂಡಿವೆ. ಶಾಂತಿಪರ್ವ ಇಂಥ ವಿಚಾರಗಳು ಹಾಗೂ ಹಲವಾರು ಕಥೆಗಳಿರುವ ಬಹು ದೊಡ್ಡ ಪರ್ವ. ಆದರೆ ಮಹಾಭಾರತದಂಥ ಗ್ರಂಥದಲ್ಲಿ ಮೇಲೆ ಹೇಳಿದ ವಿಷಯವೂ ಇದೆಯೆಂದು ಕೆಲವರಿಗೆ ಆಶ್ಚರ್ಯವಾಗಬಹುದು. ಆದರೆ ಮಹಾಭಾರತವು ಆರಂಭದಲ್ಲೇ ಹೇಳುತ್ತದೆ -

ಧರ್ಮೇ ಚಾರ್ಥೇ ಚ ಕಾಮೇ ಚ ಮೋಕ್ಷೇ ಚ ಭರತರ್ಷಭ /
ಯದಿಹಾಸ್ತಿ ತದನ್ಯತ್ರ ಯನ್ನೇಹಾಸ್ತಿ ನ ತತ್ಕ್ವಚಿತ್ //
   ' ಎಲೈ ಭರತರ್ಷಭ! ಧರ್ಮ, ಅರ್ಥ, ಕಾಮ, ಮತ್ತು ಮೋಕ್ಷಗಳಲ್ಲಿ ಈ ಗ್ರಂಥದಲ್ಲಿರುವುದೇ ಇತರ ಕಡೆಗಳಲ್ಲಿದೆ. ಇಲ್ಲಿ ಇಲ್ಲದ್ದು ಇನ್ನೆಲ್ಲೂ ಇಲ್ಲ!' 
      ಹಾಗಾಗಿ ಮಹಾಭಾರತದಲ್ಲಿ ಕಾಮದ ವಿಷಯವೂ ಚರ್ಚಿತವಾಗಿದೆ. ಭೀಷ್ಮರಂಥ ಆಜನ್ಮ ಬ್ರಹ್ಮಚಾರಿಗಳಿಗೆ ಇದೇನು ಗೊತ್ತಿರುತ್ತದೆ ಎಂದು ಕೇಳಬಹುದು. ಆದರೆ ಪ್ರಾಚೀನ ಭಾರತದಲ್ಲಿ ಒಂದು ವೃತ್ತಿ ಅಥವಾ ಒಂದು ಬದುಕಿನ ರೀತಿಯಲ್ಲಿ ಇರುವವರಿಗೆ ಇತರ ವಿಚಾರಗಳ ಬಗ್ಗೆ ತಿಳಿದಿರಬಾರದೆಂದೇನೂ ಇರಲಿಲ್ಲ. ಉದಾಹರಣೆಗೆ ಬ್ರಾಹ್ಮಣರಾದ ದ್ರೋಣಾಚಾರ್ಯರು ಕ್ಷಾತ್ರವಿದ್ಯೆಯನ್ನು ತಿಳಿದಿದ್ದರಲ್ಲದೇ ಅದನ್ನು ಪಾಂಡವ, ಕೌರವರಿಗೆ ಕಲಿಸಿದರು ಹಾಗೂ ಸ್ವಯಂ ಮಹಾವೀರರಾಗಿದ್ದರು ಮತ್ತು ಯುದ್ಧ ಮಾಡಿದರು ಕೂಡ! ಕಾಮಸೂತ್ರ ಬರೆದ ವಾತ್ಸ್ಯಾಯನ ಕೂಡ ತಾನು ಬ್ರಹ್ಮಚರ್ಯೆಯಲ್ಲಿರುವಾಗ ಈ ಗ್ರಂಥವನ್ನು ರಚಿಸಿದೆ ಎಂದು ಹೇಳಿಕೊಂಡಿದ್ದಾನೆ. ಪ್ರಹ್ಲಾದನು ಬಾಲ್ಯದಲ್ಲೇ ಮಹಾಭಕ್ತನೂ ಜ್ಞಾನಿಯೂ ಆಗಿದ್ದ! ಹೀಗೆ ಅನೇಕ ಉದಾಹರಣೆಗಳು ಸಿಗುತ್ತವೆ.
     ಸ್ತ್ರೀ, ಪುರುಷರು ಸಂಭೋಗಿಸಿದಾಗ ಯಾರಿಗೆ ಹೆಚ್ಚು ಸುಖ ಸಿಗುತ್ತದೆ? ಇದೊಂದು ಚರ್ಚಾಸ್ಪದ ವಿಷಯ. ಇದನ್ನು ಭೀಷ್ಮರು ಒಂದು ಕಥೆಯ ಮೂಲಕ ಉತ್ತರಿಸುತ್ತಾರೆ. ಇದು ಮಹಾಭಾರತದ ಅನುಶಾಸನ ಪರ್ವದಲ್ಲಿ ಬರುತ್ತದೆ. ಈಗ ಈ ಸ್ವಾರಸ್ಯಕರ ಕಥೆಯನ್ನು ನೋಡೋಣ.
      ಹಿಂದೆ, ಭಂಗಾಸ್ವನನೆಂಬ ರಾಜನಿದ್ದನು. ಪರಮಧಾರ್ಮಿಕನಾಗಿದ್ದ ಅವನಿಗೆ ಅನೇಕ ಪತ್ನಿಯರಿದ್ದರೂ ಮಕ್ಕಳಿರಲಿಲ್ಲ. ಹಾಗಾಗಿ ಅವನು ಪಂಡಿತರಲ್ಲಿ ಸಮಾಲೋಚಿಸಿ, ಪುತ್ರ ಪ್ರಾಪ್ತಿಗಾಗಿ ಅಗ್ನಿಷ್ಟುತವೆಂಬ ಯಜ್ಞವನ್ನು ಮಾಡಿದನು. ಅದರ ಪ್ರಭಾವದಿಂದ ಅವನಿಗೆ ನೂರು ಪುತ್ರರು ಜನಿಸಿದರು. ಆದರೆ ಈ ಯಜ್ಞದ ಒಂದು ವೈಶಿಷ್ಟ್ಯವೆಂದರೆ ಇದರಲ್ಲಿ ಇಂದ್ರನಿಗೆ ಆಹ್ವಾನವಿರಲಿಲ್ಲ! ಇದರಿಂದ ಇಂದ್ರನು ಈ ಯಜ್ಞವನ್ನು ದ್ವೇಷಿಸುತ್ತಿದ್ದನು. ತನಗೆ ಅಪ್ರಿಯವಾದ ಯಜ್ಞ ಮಾಡಿದ ಭಂಗಾಸ್ವನನ ಮೇಲೆ ಸೇಡು ತೀರಿಸಿಕೊಳ್ಳುವ ಯೋಚನೆ ಮಾಡಿದನು. ಅದಕ್ಕಾಗಿ ಅವನು ಭಂಗಾಸ್ವನನಲ್ಲಿ ಏನಾದರೂ ದೋಷವನ್ನು ಹುಡುಕಿದನು. ಆದರೆ ಅವನಿಗೆ ಯಾವ ದೋಷವೂ ಕಾಣಲಿಲ್ಲ. 
     ಹೀಗಿರಲು, ಒಂದು ದಿನ ಭಂಗಾಸ್ವನನು ಬೇಟೆಯಾಡಲು ಕಾಡಿಗೆ ಹೋದನು. ಆಗ ಇಂದ್ರನು ಸೇಡು ತೀರಿಸಿಕೊಳ್ಳಲು ಇದೇ ಸರಿಯಾದ ಸಮಯವೆಂದು ರಾಜನ ಮನಸ್ಸಿಗೆ ಭ್ರಮೆಯಾವರಿಸಿದನು! ಭ್ರಮೆಗೊಳಗಾದ ರಾಜನು ಕುದುರೆಯ ಮೇಲೆ ದೌಡಾಯಿಸುತ್ತಾ ತನ್ನ ಪರಿವಾರದಿಂದ ಬೇರೆಯಾಗಿ ಎಲ್ಲೆಲ್ಲೋ ಸುತ್ತಿ ದಟ್ಟ ಅರಣ್ಯದ ಮಧ್ಯೆ ಸಿಲುಕಿಕೊಂಡನು! ಅವನೂ ಅವನ ಕುದುರೆಯೂ ಹಸಿವು, ಬಾಯಾರಿಕೆಗಳಿಂದ ಬಳಲಿದರು! ಆಗ ಇಂದ್ರನು ಸ್ವಲ್ಪ ದೂರದಲ್ಲೇ ಒಂದು ಮಾಯಾ ಸರೋವರವನ್ನು ನಿರ್ಮಿಸಿದನು! ಭಂಗಾಸ್ವನನು ಸುತ್ತಲೂ ಕಣ್ಣಾಡಿಸುತ್ತಾ ಆ ಸರೋವರವನ್ನು ನೋಡಿ ಸಂತೋಷಗೊಂಡನು! ಕೂಡಲೇ ಆ ಸರೋವರದ ಬಳಿಗೆ ಹೋಗಿ ಸ್ವಲ್ಪ ನೀರು ಕುಡಿದು ಕುದುರೆಗೂ ಕುಡಿಸಿ ಅದರ ಮೈ ತೊಳೆದು ಅದನ್ನು ಒಂದು ಮರಕ್ಕೆ ಕಟ್ಟಿ ತಾನು ಆ ಸರೋವರದಲ್ಲಿ ಮುಳುಗಿದನು. ಆದರೆ ಅವನು ಮೇಲೆದ್ದಾಗ ಅವನಿಗೆ ಒಂದು ದೊಡ್ಡ ಆಶ್ಚರ್ಯ ಕಾದಿತ್ತು! ಇದ್ದಕ್ಕಿದ್ದಂತೆ ಅವನು ಹೆಣ್ಣಾಗಿಬಿಟ್ಟಿದ್ದನು! 
    ಆಶ್ಚರ್ಯ, ದು:ಖಗಳಿಗೊಳಗಾದ ರಾಜನು," ಅಯ್ಯೋ! ಇದೇನು ನನ್ನ ದುರವಸ್ಥೆ! ನಾನೇಕೆ ಹೀಗೆ ಸ್ತ್ರೀಯಾದೆ? ಈಗ ಈ ಕುದುರೆಯನ್ನು ಹೇಗೆ ಹತ್ತಲಿ? ಮೃದುತ್ವ, ಕೃಶತ್ವ, ವ್ಯಾಕುಲತೆಗಳು ಹೆಣ್ಣಿನ ಗುಣಗಳೆಂದೂ ಕಾಠಿಣ್ಯ, ಪರಾಕ್ರಮಗಳು ಗಂಡಿನ ಗುಣಗಳೆಂದೂ ಶಾಸ್ತ್ರಜ್ಞರು ಹೇಳುತ್ತಾರೆ! ಹೀಗಿರುವಾಗ, ಪುರುಷತ್ವವನ್ನೇ ಕಳೆದುಕೊಂಡಿರುವ ನಾನು ರಾಜ್ಯವನ್ನು ಹೇಗೆ ಆಳಲಿ? ನಾನಿನ್ನು ರಾಜ್ಯವನ್ನು ಆಳಲಾರೆ ಎಂದು ಎಲ್ಲರಿಗೂ ಹೇಳಿ ಕಾಡಿಗೆ ಹಿಂದಿರುಗಿ ತಪಸ್ಸು ಮಾಡುತ್ತೇನೆ!" ಎಂದು ಯೋಚಿಸಿ ಕಷ್ಟಪಟ್ಟು ಕುದುರೆ ಹತ್ತಿ ತನ್ನ ರಾಜ್ಯಕ್ಕೆ ಹೋದನು. ತನ್ನ ಪತ್ನೀಪುತ್ರರಿಗೂ ಮಂತ್ರಿಗಳಿಗೂ ತಾನು ಭಂಗಾಸ್ವನ ರಾಜನೆಂದು ಹೇಳಿದರೂ ಅವರಾರೂ ನಂಬಲಿಲ್ಲ. ಆಗ ಅವನು ತನ್ನ ಕುಲ,ಗೋತ್ರಾದಿ ಗುರುತುಗಳನ್ನು ನಿಖರವಾಗಿ ಹೇಳಲು ಅವರು ನಂಬಿ ಅವನ ದು:ಸ್ಥಿತಿಗಾಗಿ ಮರುಗಿದರು. ಆಗ ಅವನು ತನ್ನ ನೂರು ಪುತ್ರರಿಗೆ ರಾಜ್ಯವನ್ನೊಪ್ಪಿಸಿ, ಪ್ರೀತಿ,ಸೌಹಾರ್ದತೆಗಳಿಂದ ಸುಖವಾಗಿ ಬಾಳಲು ಹೇಳಿ ಕಾಡಿಗೆ ಹೊರಟುಹೋದನು.
      ಈಗ ಭಂಗಾಸ್ವನಿಯು ಕಾಡಿನಲ್ಲಿ ತಪಸ್ಸು ಮಾಡಲು ಪ್ರಯತ್ನಿಸಿದಳು. ಆದರೆ ಸ್ತ್ರೀಯಾದ ಅವಳ ಅಂತ:ಕರಣ ಬದಲಾಗಿದ್ದು ಅವಳಿಗೆ ಆಗಲಿಲ್ಲ. 
       ಹೀಗಿರಲು, ಅವಳು ಒಂದು ಆಶ್ರಮವನ್ನು ಕಂಡು ಅಲ್ಲೊಬ್ಬ ಋಷಿಯನ್ನು ನೋಡಿದಳು. ಅವನಿಗೆ ತನ್ನ ಪೂರ್ವ ಕಥೆಯನ್ನು ಹೇಳಿ ಅವನ ಸೇವೆ ಮಾಡಲು ಅನುಮತಿ ಬೇಡಿದಳು. ಅದಕ್ಕೆ ಅವನು ಒಪ್ಪಲು, ಅವನ ಸೇವೆ ಮಾಡುತ್ತಾ ಅವಳು ತಾನೂ ಅವನೊಂದಿಗೆ ತಪಸ್ಸು ಮಾಡತೊಡಗಿದಳು. ಕ್ರಮೇಣ ಅವರಿಬ್ಬರಿಗೂ ಪ್ರೀತಿ ಬೆಳೆದು ಅವರು ಸಮಾಗಮ ಮಾಡಿದರು! ಇದರಿಂದ ಅವಳು ಗರ್ಭಿಣಿಯಾಗಿ ನೂರು ಪುತ್ರರಿಗೆ ಜನ್ಮವಿತ್ತಳು! 
       ಭಂಗಾಸ್ವನಿಯ ಮಕ್ಕಳು ದೊಡ್ಡವರಾಗಲು ಅವಳು ಅವರನ್ನು ತನ್ನ ಹಿಂದಿನ ರಾಜ್ಯಕ್ಕೆ ಕರೆದೊಯ್ದು ತನ್ನ ಹಿಂದಿನ ಮಕ್ಕಳಿಗೆ ಪರಿಚಯಿಸುತ್ತಾ," ಮಕ್ಕಳೇ! ಇವರೆಲ್ಲರೂ ನನ್ನ ಸ್ತ್ರೀತ್ವದಲ್ಲಿ ಹುಟ್ಟಿದ ಮಕ್ಕಳು! ಹಾಗಾಗಿ ನಿಮ್ಮ ತಮ್ಮಂದಿರಾಗುತ್ತಾರೆ! ನೀವು ಇವರೊಂದಿಗೆ ರಾಜ್ಯವನ್ನು ಹಂಚಿಕೊಂಡು ಶಾಂತಿ, ಸೌಹಾರ್ದತೆಗಳಿಂದ ಸುಖವಾಗಿ ಬಾಳಿ!" ಎಂದು ಹೇಳಿ ಹೊರಟಳು.ಅದಕ್ಕೆ ಆ ಮೊದಲಿನ ಮಕ್ಕಳು ಒಪ್ಪಿ ತಮ್ಮ ತಮ್ಮಂದಿರೊಡನೆ ರಾಜ್ಯವನ್ನು ಹಂಚಿಕೊಂಡು ಸುಖವಾಗಿರತೊಡಗಿದರು.
    ಇದರಿಂದ ಇಂದ್ರನಿಗೆ ಕಸಿವಿಸಿಯಾಯಿತು! ಅವನು ಯೋಚಿಸಿದನು," ನಾನು ಈ ಭಂಗಾಸ್ವನನ ಮೇಲೆ ಸೇಡು ತೀರಿಸಿಕೊಳ್ಳಲು ಅವನನ್ನು ಸ್ತ್ರೀಯಾಗಿ ಪರಿವರ್ತಿಸಿದರೆ ಅದು ಅವನಿಗೆ ಅನುಕೂಲವೇ ಆಯಿತು! ಅವನಿಗೆ ಇನ್ನೂ ನೂರು ಮಕ್ಕಳಾದರು! ಈಗ ಅವನಿಗೆ ದುಃಖವಾಗುವ ಹಾಗೆ ಏನಾದರೂ ಕಾರ್ಯ ಮಾಡಬೇಕು!" 
     ಹೀಗೆ ಯೋಚಿಸಿ ಇಂದ್ರನು ಬ್ರಾಹ್ಮಣ ವೇಷದಲ್ಲಿ ಭಂಗಾಸ್ವನನ ಮೊದಲ ನೂರು ಮಕ್ಕಳ ಬಳಿಗೆ ಹೋಗಿ ಹೇಳಿದ," ರಾಜಪುತ್ರರೇ! ನೀವು ಭಂಗಾಸ್ವನ ರಾಜನ ಮಕ್ಕಳು! ಆದರೆ ಆ ಇನ್ನೊಂದು ಗುಂಪಿನ ನೂರು ಯಾರೋ ತಪಸ್ವಿಯ ಪುತ್ರರು! ಒಬ್ಬನೇ ಕಶ್ಯಪನ ಮಕ್ಕಳಾದರೂ ದೇವತೆಗಳೂ ರಾಕ್ಷಸರೂ ಸದಾ ಸ್ವರ್ಗಕ್ಕಾಗಿ ಕಾದಾಡುತ್ತಲೇ ಇರುತ್ತಾರೆ! ಇನ್ನು ನೀವೇಕೆ ಪಿತೃಸಂಬಂಧವಾದ ಈ ರಾಜ್ಯವನ್ನು ಆ ಇತರರೊಂದಿಗೆ ಹಂಚಿಕೊಳ್ಳಬೇಕು? ನಾಳೆ ಅವರು ಈ ರಾಜ್ಯಕ್ಕೆ ತಾವೇ ವಾರಸುದಾರರೆಂದು ನಿಮ್ಮನ್ನು ಹೊರಗಟ್ಟಿದರೆ? ಅದಕ್ಕೆ ಮೊದಲು ನೀವೇ ಅವರನ್ನು ಹೊರಗಟ್ಟಿ!" 
     ಇಂದ್ರನ ದುರ್ಬೋಧೆ ಅವರ ಮನಸ್ಸಿಗೆ ನಾಟಿತು! ಅವರು ತಮ್ಮ ತಮ್ಮಂದಿರೊಡನೆ ಯುದ್ಧ ಮಾಡಲು ಎರಡೂ ಗುಂಪುಗಳು ಪರಸ್ಪರ ಕಾದಾಡಿ ನಾಶಗೊಂಡವು! 
    ಈ ವಿಷಯ ಭಂಗಾಸ್ವನಿಗೆ ದೂತನೊಬ್ಬನಿಂದ ತಿಳಿದು ಅವಳು ದು:ಖಿತಳಾಗಿ ಅತ್ತು ಗೋಳಾಡತೊಡಗಿದಳು! ಆಗ ಇಂದ್ರನು ಸಮಾಧಾನಗೊಂಡು ಪುನಃ ಬ್ರಾಹ್ಮಣ ವೇಷದಲ್ಲಿ ಬಂದು ಅವಳನ್ನು ಏಕೆ ಗೋಳಾಡುತ್ತಿರುವೆಯೆಂದು ಕೇಳಿದನು. ಆಗ ಅವಳು ತನ್ನ ಕಥೆಯನ್ನು ಹೇಳಿಕೊಂಡಳು. ಆಗ ಇಂದ್ರನು ತನ್ನ ನಿಜರೂಪಿನಲ್ಲಿ ಕಾಣಿಸಿಕೊಂಡು ನಗುತ್ತಾ," ಭದ್ರೆ! ಈ ನಿನ್ನ ಶೋಕಕ್ಕೆ ನಾನೇ ಕಾರಣ! ಮೂರ್ಖ ರಾಜನೇ! ಹಿಂದೆ ನೀನು ಇಂದ್ರನಿಗೆ ಪ್ರಾಧಾನ್ಯವಿಲ್ಲದ ಒಂದು ಯಜ್ಞ ಮಾಡಿ ಅವನಿಗೆ ಅಸಮಾಧಾನವುಂಟುಮಾಡಿದೆ! ಆ ಇಂದ್ರನು ನಾನೇ ಆಗಿದ್ದೇನೆ! ನನಗೆ ಅಪ್ರಿಯವಾದ ಯಜ್ಞ ಮಾಡಿದ ಕಾರಣ ನಿನ್ನ ಮೇಲಿನ ದ್ವೇಷದಿಂದ ನಿನಗೆ ಇಂಥ ದುರವಸ್ಥೆ ತಂದೆ!" 
      ತನ್ನ ಮುಂದೆ ನಿಂತಿರುವವನು ಇಂದ್ರನೆಂದು ತಿಳಿಯುತ್ತಲೇ ಭಂಗಾಸ್ವನಿಯು ಅವನ ಕಾಲಿಗೆ ಬಿದ್ದು ಹೇಳಿದಳು," ದೇವೇಂದ್ರ! ಆ ಯಜ್ಞವು ನಿನಗೆ ಅಪ್ರಿಯವಾದುದೆಂದು ನನಗೆ ತಿಳಿದಿರಲಿಲ್ಲ! ನಾನು ಪುತ್ರಾಪೇಕ್ಷೆಯಿಂದಷ್ಟೇ ಯಜ್ಞ ಮಾಡಿದೆ. ಆ ಯಜ್ಞದ ನಿಯಮಾನುಸಾರವಾಗಿ ಅದರಲ್ಲಿ ನಿನಗೆ ಆಹ್ವಾನವಿರಲಿಲ್ಲ ಅಷ್ಟೇ! ಆದ್ದರಿಂದ ದಯವಿಟ್ಟು ಪ್ರಸನ್ನನಾಗು! ಇದರಲ್ಲಿ ನನ್ನ ತಪ್ಪೇನೂ ಇಲ್ಲ! ತಪ್ಪೆನಿಸಿದರೆ ಮನ್ನಿಸು!" 
    ಇದನ್ನು ಕೇಳಿ ಇಂದ್ರನಿಗೆ ಕನಿಕರವುಂಟಾಯಿತು. ಆಗ ಅವನು ಹೇಳಿದನು," ಸರಿ! ಒಪ್ಪಿದೆ! ಒಂದು ವರವನ್ನು ನೀಡುತ್ತೇನೆ! ನಿನ್ನ ಒಂದು ನೂರು ಮಕ್ಕಳನ್ನು ಬದುಕಿಸುತ್ತೇನೆ! ನೀನು ಪುರುಷನಾಗಿದ್ದಾಗ ಹುಟ್ಟಿದ ಮಕ್ಕಳನ್ನು ಬದುಕಿಸಲೋ ಇಲ್ಲವೇ ಸ್ತ್ರೀಯಾದಾಗ ಹುಟ್ಟಿದ ಮಕ್ಕಳನ್ನು ಬದುಕಿಸಲೋ? ಹೇಳು!" 
    ಅದಕ್ಕೆ ಭಂಗಾಸ್ವನಿಯು ಹೇಳಿದಳು," ನಾನು ಸ್ತ್ರೀಯಾದಾಗ ಹುಟ್ಟಿದ ಮಕ್ಕಳೇ ಬದುಕಲಿ!" 
    "ಅದೇಕೆ?" ವಿಸ್ಮಯದಿಂದ ಕೇಳಿದ ಇಂದ್ರ.
     ಭಂಗಾಸ್ವನಿಯು ಹೇಳಿದಳು," ಸ್ತ್ರೀಯರಿಗೆ ಸಹಜವಾಗಿಯೇ ಮಕ್ಕಳೆಂದರೆ ಪ್ರೀತಿಯಿರುತ್ತದೆ! ಅದು ಅವರ ಮಕ್ಕಳೇ ಆಗಿರಬೇಕೆಂದಿಲ್ಲ! ಆದರೆ ಪುರುಷರಿಗೆ ಮಕ್ಕಳೆಂದರೆ ಅಷ್ಟು ಗಾಢ ಪ್ರೀತಿಯಿರುವುದಿಲ್ಲ! ಹೀಗಿರುವಾಗ ತಮ್ಮ ಮಕ್ಕಳೇ ಆದರೆ ಸ್ತ್ರೀಯರಿಗೆ ಇನ್ನೆಷ್ಟು ಪ್ರೀತಿಯಿರಬೇಡ? ತಾಯ್ತನದ ಸವಿಯನ್ನುಂಡಿರುವ ನನಗೆ ಅದು ಗೊತ್ತು! ಹಾಗಾಗಿ ನನಗೆ ಸ್ತ್ರೀತ್ವದಲ್ಲಿ ಹುಟ್ಟಿದ ಮಕ್ಕಳೇ ಬದುಕಲಿ!" 
     ಇಂದ್ರನು ಅವಳ ಉತ್ತರದಿಂದ ಸಂತುಷ್ಟನಾಗಿ ಹೇಳಿದ," ಭದ್ರೆ! ಸತ್ಯವನ್ನೇ ಹೇಳಿದೆ! ನಿನ್ನ ಎಲ್ಲಾ ಮಕ್ಕಳನ್ನೂ ಬದುಕಿಸುತ್ತೇನೆ! ಈಗ ಇನ್ನೊಂದು ವರವನ್ನು ನೀಡುತ್ತೇನೆ! ನೀನು ಪುನಃ ಪುರುಷನಾಗಲು ಬಯಸುವೆಯಾ? ಅಥವಾ ಹೆಣ್ಣಾಗಿಯೇ ಇರಲು ಬಯಸುವೆಯಾ? ಹೇಳು!" 
    " ನಾನು ಹೆಣ್ಣಾಗಿಯೇ ಇರಲು ಬಯಸುತ್ತೇನೆ!" ಭಂಗಾಸ್ವನಿಯು ಹೇಳಿದಳು.
    " ಅದೇಕೆ?" ಆಶ್ಚರ್ಯದಿಂದ ಕೇಳಿದ ಇಂದ್ರ. 
 ಅದಕ್ಕೆ ಭಂಗಾಸ್ವನಿಯು ಹೇಳಿದಳು," ನಾನು ಪುರುಷನಾಗಿದ್ದಾಗ ಹಾಗೂ ಸ್ತ್ರೀಯಾಗಿದ್ದಾಗ, ಈ ಎರಡೂ ಸಂದರ್ಭಗಳಲ್ಲಿ ರತಿಸುಖವನ್ನು ಅನುಭವಿಸಿದ್ದೇನೆ! ಈ ಎರಡು ಅನುಭವಗಳಲ್ಲಿ ಸ್ತ್ರೀಯಾದಾಗ ಪಡೆದ ಅನುಭವವೇ ಹೆಚ್ಚು ಸುಖದಾಯಕವೆಂದು ಅರಿವಾಗಿದೆ! ಹಾಗಾಗಿ ನಾನು ಸ್ತ್ರೀಯಾಗಿಯೇ ಇರಲು ಇಚ್ಛಿಸುತ್ತೇನೆ!" 
     "ಭಲೆ! ಪುನಃ ನೀನು ಸತ್ಯವನ್ನೇ ಹೇಳಿರುವೆ! ಹಾಗೆಯೇ ಆಗಲಿ! ನಾನಿನ್ನು ಬರುತ್ತೇನೆ!" ಇಂದ್ರನು ಹೇಳಿ ಅದೃಶ್ಯನಾದನು.
      ಭೀಷ್ಮರು ಹೀಗೆ ಕಥೆ ಹೇಳಿ," ಹೀಗೆ ಸ್ತ್ರೀ ಪುರುಷರ ಸಮಾಗಮದಲ್ಲಿ ಸ್ತ್ರೀಗೇ ಹೆಚ್ಚಿನ ಸುಖ ಪ್ರಾಪ್ತಿಯಾಗುತ್ತದೆ ಎಂದು ವಿದ್ವಾಂಸರು ಹೇಳುತ್ತಾರೆ!" ಎಂದರು.
     ಹೀಗೆ ಸ್ತ್ರೀಪುರುಷರ ಸಮಾಗಮದಲ್ಲಿ ಪುರುಷರಿಗಿಂತ ಸ್ತ್ರೀಯರಿಗೇ ಹೆಚ್ಚು ಸುಖಪ್ರಾಪ್ತಿಯಾಗುತ್ತದೆಯೆಂಬುದು ಮಹಾಭಾರತದ ಅಂಬೋಣ. ಚಾಣಕ್ಯ ನೀತಿಯ ಒಂದು ಶ್ಲೋಕ ಹೀಗಿದೆ -
    ಆಹಾರೋ ದ್ವಿಗುಣಸ್ತ್ರೀಣಾಂ ಬುದ್ಧಿಸ್ತಾಸಾಂ ಚತುರ್ಗುಣಾ /
    ಷಡ್ಗುಣೋ ವ್ಯವಸಾಯಶ್ಚ ಕಾಮಶ್ಚಾಷ್ಟಗುಣ: ಸ್ಮೃತ: // 
     ' ಸ್ತ್ರೀಯರಿಗೆ ಪುರುಷರಿಗಿಂತ ಎರಡು ಪಟ್ಟು ಆಹಾರ ಸೇವನೆ ಹೆಚ್ಚು! ಅವರ ಬುದ್ಧಿ, ಪುರುಷರಿಗಿಂತ ನಾಲ್ಕು ಪಟ್ಟು ಹೆಚ್ಚು! ಅವರ ಸಾಹಸ ಅಥವಾ ಕಾರ್ಯಕುಶಲತೆ ಆರು ಪಟ್ಟು ಹೆಚ್ಚು! ಅವರ ಕಾಮ ಎಂಟು ಪಟ್ಟು ಹೆಚ್ಚು!" 
     ಇದು ಸ್ವಲ್ಪ ಮಟ್ಟಿಗೆ ನಿಜವೆಂದು ಹೇಳಬಹುದು. ಹೆಚ್ಚು ಕೆಲಸ ಮಾಡುವುದರಿಂದ ಹಾಗೂ ಗರ್ಭಧಾರಣೆಯ ಸಮಯದಲ್ಲಿ ಹಾಗೂ ಮಕ್ಕಳಿಗೆ ಹಾಲೂಡಿಸುವ ಸಮಯದಲ್ಲಿ ಹಾಗೂ ನಿತ್ಯ ಜೀವನದಲ್ಲೂ ರಜಸ್ವಲೆಯಾದಾಗ ರಕ್ತದ ಮೂಲಕ ಹೆಚ್ಚು ಕಬ್ಬಿಣದ ಅಂಶ ಕಳೆದುಕೊಳ್ಳುವುದರಿಂದ ಸ್ತ್ರೀಯರಿಗೆ ಹೆಚ್ಚಿನ ಆಹಾರ ಸೇವನೆ ಬೇಕಾಗುತ್ತದೆ. ಪುರುಷರು ದೈಹಿಕವಾಗಿ ಹೆಚ್ಚು ಬಲಶಾಲಿಗಳಾದರೆ ಸ್ತ್ರೀಯರು ಮಾನಸಿಕವಾಗಿ ತಾಳ್ಮೆ, ಸಹನೆಗಳಿಂದ ಬಲಶಾಲಿಗಳು ಹಾಗೂ ಬುದ್ಧಿ, ಚಾತುರ್ಯಗಳನ್ನು ಹೆಚ್ಚಾಗಿ ಉಳ್ಳವರು. ಸಾಹಸ ಕಾರ್ಯಗಳಲ್ಲಿ ಹಾಗೂ ನಾಜೂಕಾಗಿ ಕೌಶಲ್ಯದಿಂದ ಕೆಲಸ ಮಾಡುವುದರಲ್ಲಿ ಸ್ತ್ರೀಯರು ಹೆಚ್ಚೇ! ಇನ್ನು ಕಾಮ, ಬಯಕೆಗಳೂ ಅವರಿಗೆ ಹೆಚ್ಚು. ಪುರುಷರಿಗಿಂತ ಚೆನ್ನಾಗಿ ಜೀವನವನ್ನು ಕಲಾತ್ಮಕವಾಗಿ ಅನುಭವಿಸಲು ಅವರಿಗೆ ಬರುತ್ತದೆ. ವೈಜ್ಞಾನಿಕವಾಗಿ ಪುರುಷರಿಗೆ ಬೇಗನೆ ಕಾಮಪ್ರಚೋದನೆಯಾಗಿ ಬೇಗನೆ ಮುಗಿದುಹೋದರೆ ಸ್ತ್ರೀಯರಿಗೆ ಅದು ನಿಧಾನವಾಗಿ ಆಗುತ್ತದೆ ಹಾಗೂ ಹೆಚ್ಚಿನ ಹೊತ್ತು ಇರುತ್ತದೆ. ಪುರುಷರಿಗಿಂತ ಸ್ತ್ರೀಯರಿಗೆ ಮಿಲನದ ಸಮಯದಲ್ಲಿ ಹೆಚ್ಚು ಬಾರಿ ಭಾವಪ್ರಾಪ್ತಿಯಾಗುತ್ತದೆ. ಹಾಗಾಗಿ ಪುರುಷರು ಸ್ತ್ರೀಯರನ್ನು ತಾಳ್ಮೆಯಿಂದ, ಪ್ರೀತಿಯಿಂದ ರಮಿಸುತ್ತಾ ನಿಧಾನವಾಗಿ ಸಂಭೋಗಿಸಿದರೆ ಆಗ ಸ್ತ್ರೀಯರಿಗೆ ಹೆಚ್ಚಿನ ಸುಖ ಪ್ರಾಪ್ತಿಯಾಗುತ್ತದೆ ಎಂಬುದು ನಿಜ. ಸ್ತ್ರೀಯರೊಂದಿಗೆ ಕೋಮಲವಾಗಿ ಶೃಂಗಾರಾತ್ಮಕವಾಗಿ ರತಿಕಲಾಪಗಳನ್ನು ನಡೆಸಿ ಅವರನ್ನು ಸುಖಗೊಳಿಸಲು ಪುರುಷರು ಪ್ರಯತ್ನಿಸಿ ಆ ಸುಖದಿಂದ ಪುರುಷರೂ ಸುಖಿಸಬೇಕು. ಅಂಥ ಪುರುಷರನ್ನು ಸ್ತ್ರೀಯರು ಮನಸಾರೆ ಪ್ರೀತಿಸುತ್ತಾರೆ. ಇದನ್ನು ವಾತ್ಸ್ಯಾಯನನು ತನ್ನ ಕಾಮಸೂತ್ರದಲ್ಲಿ ವಿಶದವಾಗಿ ವಿವರಿಸಿದ್ದಾನೆ. ಹೀಗೆ ನಮ್ಮ ಪ್ರಾಚೀನ ಗ್ರಂಥಗಳಿಂದ ಇಂದಿನ ಜೀವನಕ್ಕೆ ಬಹಳಷ್ಟು ಪ್ರೇರಣೆ ಪಡೆಯಬಹುದು.

ಭಾನುವಾರ, ಮಾರ್ಚ್ 1, 2026

ಸುಂದರೀಶತಕ -೧

ಸಂಸ್ಕೃತ ಸಾಹಿತ್ಯದಲ್ಲಿ ಶೃಂಗಾರ ವರ್ಣನೆಗಳಿಗೆ ಪ್ರಮುಖ ಸ್ಥಾನವಿದೆ. ಹಾಗಾಗಿ ಸಂಸ್ಕೃತದಲ್ಲಿ ಅನೇಕ ಶೃಂಗಾರ ಕಾವ್ಯಗಳಿವೆ.ಸುಕವಿ ಉತ್ಪ್ರೇಕ್ಷಾವಲ್ಲಭನು ರಚಿಸಿರುವ ಸುಂದರೀಶತಕ ಅಂಥ ಒಂದು ಶೃಂಗಾರ ಕಾವ್ಯ.

೧. ಜಯತಿ ವಿಲಾಸವತೀನಾಂ ನೇತ್ರಪ್ರಾಪ್ತಾವಲೋಕನಪ್ರಾಣ; /
ವದನೇಂದುದ್ಯುತಿಸದನ: ಸ್ಮಿತಮಾಧ್ವೀಮೇದುರೋ ಮದನ: //

ವಿಲಾಸವತಿ ಸ್ತ್ರೀಯರ ಕಟಾಕ್ಷಗಳೇ ಪ್ರಾಣವಾಗಿರುವ, ಅವರ ಮುಖಚಂದ್ರದ ( ಮುಖವೆಂಬ ಚಂದ್ರದ) ಕಾಂತಿಯೇ ಮನೆಯಾಗಿರುವ, ಅವರ ನಗುವೆಂಬ ಮಧುವಿನಿಂದ ಪ್ರವರ್ಧಿಸಿರುವ ಮದನನು ವಿಜಯಶಾಲಿಯಾಗುತ್ತಾನೆ! 
      ಮನ್ಮಥನಿಗೆ ವಿಲಾಸವತಿ ಸ್ತ್ರೀಯರ ಕಣ್ಣೋಟಗಳೇ ಪ್ರಾಣ! ಅವರ ಮುಖಚಂದ್ರದ ಕಾಂತಿಯೇ ಅವನು ವಾಸಿಸುವ ಮನೆ! ಅವರ ನಗುವೆಂಬ ಮಧುವಿನಿಂದಲೇ ಅವನು ಪ್ರವರ್ಧಿಸುತ್ತಾನೆ! ಹೀಗೆ ಸ್ತ್ರೀಯರ ಸೌಂದರ್ಯದಿಂದಲೇ ಎಲ್ಲವೂ ಆಗಿರುವ ಇಂಥ ಮನ್ಮಥನು ವಿಜಯಶಾಲಿಯಾಗುತ್ತಾನೆ ಎಂದು ಕವಿಯು ತನ್ನ ಸುಂದರೀಶತಕದ ಆರಂಭ ಶ್ಲೋಕದಲ್ಲಿ ಮನ್ಮಥನನ್ನು ಸ್ತುತಿಸಿದ್ದಾನೆ.