ಭಾನುವಾರ, ಮೇ 31, 2026

ಸುಂದರೀಶತಕ -೪೪

ಸಂಸ್ಕೃತ ಮೂಲ 

ಚಕ್ಷುರಪಾಂಗಮಪಾಂಗ: ಕರ್ಣಂ ಕರ್ಣೋsಪಿ ದೂತಿಕಾವಚನಮ್ /
ಅವಧತ್ತೇ ಮಮ ತಪಸಾಮುದಾರಸಾರ: ಕ್ರಮ: ಸೋsಯಮ್ //

ಕನ್ನಡ ಅನುವಾದ 

     ' ಆ ಸುಂದರಿಯ ಕಣ್ಣು ( ದೃಷ್ಟಿ) ಅವಳ ಕಣ್ಣಿನ ತುದಿಗೆ ಹೋಯಿತು! ಅವಳ ಕಣ್ಣಿನ ತುದಿಯು ಅವಳ ಕಿವಿಯ ಕಡೆಗೆ ಹೋಯಿತು! ಅವಳ ಕಿವಿಯು ದೂತಿಯ ಮಾತನ್ನು ಕೇಳಿತು! ಆಹಾ! ಈ ಪ್ರೇಮದ ಕ್ರಮವು ನನ್ನ ತಪಸ್ಸಿನ ಉದಾರ ಫಲ!' 
     ಇಲ್ಲಿ ಒಬ್ಬ ಪ್ರೇಮಿಯು ತನ್ನ ಪ್ರೇಮದ ಕ್ರಮ ಕ್ರಮವಾದ ಬೆಳವಣಿಗೆಯನ್ನು ಸುಂದರವಾಗಿ ವರ್ಣಿಸಿದ್ದಾನೆ. ಮೊದಲಿಗೆ ಅವನ ಪ್ರಿಯತಮೆಯ ಕಣ್ಣೋಟ ಅವಳ ಕಣ್ಣಿನ ತುದಿಗೆ ಬಂದು ಅವಳ ಕಿವಿಯವರೆಗೆ ಹೋಗುವುದು. ಇದರಿಂದ ಅವಳು ಅವನನ್ನು ತನ್ನ ಕಡೆಗಣ್ಣಿನಿಂದ ನೋಡಿದಳು. ಆಗ ತನ್ನ ಪ್ರೇಮವನ್ನು ವ್ಯಕ್ತಪಡಿಸಲು ಅವನು ಅವಳ ಬಳಿಗೆ ಒಬ್ಬ ದೂತಿಯನ್ನು ಕಳಿಸುವನು. ಆಗ ಅವನ ಪ್ರಿಯತಮೆಯ ಕಿವಿ, ಆ ದೂತಿಯ ಮಾತನ್ನು ಕೇಳುವುದು. ಹೀಗೆ ಅವಳ ದೃಷ್ಟಿಯು ಕಣ್ಣಿನ ತುದಿಗೆ ಬರುವುದು, ಕಣ್ಣಿನ ತುದಿಯ ನೋಟ ಕಿವಿಯವರೆಗೆ ಬರುವುದು, ಹಾಗೂ ಕಿವಿಯು ದೂತಿಯ ಮಾತನ್ನು ಕೇಳುವುದು, ಈ ಪ್ರೇಮದ ಕ್ರಮವು, ತನ್ನ ತಪಸ್ಸಿನ ಉದಾರ ಫಲವೆಂದು ಅವಳ ಪ್ರೇಮಿಯು ಸಂತೋಷದಿಂದ ಹೇಳಿಕೊಳ್ಳುತ್ತಿದ್ದಾನೆ! 

ಶುಕ್ರವಾರ, ಮೇ 29, 2026

ಸುಂದರೀಶತಕ -೪೩

ಸಂಸ್ಕೃತ ಮೂಲ 

ಕಿಂಚಿದುದಂಚಯ ಚಂಚಲಮಂಚಲಮಚಿರೇಣ ಲೋಚನಾಂಶುಕಯೋ: /
ಸುಂದರಿ ಕರ್ಣಾವತಂಸ: ಕೈರವಮಿಂದೀವರಂ ಭವತು //

ಕನ್ನಡ ಅನುವಾದ 

     ' ಎಲೈ ಸುಂದರಿ! ನಿನ್ನ ಕಂಗಳನ್ನು ಆವರಿಸಿ ಚಂಚಲವಾಗಿ ಹಾರಾಡುತ್ತಿರುವ ಸೆರಗಿನ ಅಂಚನ್ನು ಬೇಗನೆ ಸ್ವಲ್ಪ ಮೇಲೆತ್ತು! ನಿನ್ನ ನೀಲ ದೃಷ್ಟಿಯಿಂದ ನಿನ್ನ ಕಿವಿಯ ಮೇಲಿರುವ ಕೈರವ ಅಥವಾ ಬಿಳಿ ಕಮಲದ ಆಭರಣ, ಇಂದೀವರ ಅಥವಾ ನೀಲಕಮಲವಾಗಲಿ!' 
     ಸುಂದರಿಯ ಕಂಗಳು ನೀಲವರ್ಣದಿಂದ ಕೂಡಿ ಬಹು ಸುಂದರವಾಗಿವೆ! ಹಾಗಾಗಿ ಕವಿ ಅಥವಾ ಅವಳ ಪ್ರಿಯತಮನು ಅವಳಿಗೆ ಅವಳ ಕಂಗಳ ಮೇಲೆ ಹಾರಾಡುತ್ತಿರುವ ಅವಳ ಸೆರಗಿನ ಅಂಚನ್ನು ಸ್ವಲ್ಪ ಮೇಲೆತ್ತಲು ಹೇಳುತ್ತಿದ್ದಾನೆ. ಅವಳು ಹಾಗೆ ತನ್ನ ಕಂಗಳನ್ನು ಆವರಿಸಿರುವ ಸೆರಗಿನ ಅಂಚನ್ನು ಮೇಲೆತ್ತಿದಾಗ ಅವಳ ಕಂಗಳ ನೀಲದೃಷ್ಟಿ ಅವಳು ಧರಿಸಿರುವ ಕೈರವ ಅಥವಾ ಬಿಳಿಕಮಲದ ಕರ್ಣಾಭರಣದ ಮೇಲೆ ಬಿದ್ದು ಅದು ನೀಲಕಮಲ ಅಥವಾ ನೀಲೋತ್ಪಲ ಅಥವಾ ಇಂದೀವರವಾಗಲಿ ಎಂದು ಅವನ ಆಶಯವಾಗಿದೆ. ಹೀಗೆ ಅವಳ ಕಣ್ಣ ದೃಷ್ಟಿಯಿಂದ ಅವಳ ಕರ್ಣಾಭರಣದ ಬಣ್ಣವೇ ಬದಲಾಗುವುದೆಂದು ಹೇಳುವ ಮೂಲಕ, ಅವಳ ಕಂಗಳು ಎಷ್ಟು ಸುಂದರವಾಗಿವೆ ಎಂದು ಹೇಳುತ್ತಿದ್ದಾನೆ.

ಸುಂದರೀಶತಕ -೪೨

ಸಂಸ್ಕೃತ ಮೂಲ 

ತವ ನಯನಪುಂಡರೀಕಾತ್ಪ್ರಿಯೇ ಕಟಾಕ್ಷಕ್ರಮಾ ವಿರಾಜತೇ /
ವಿಕಸಿತವಿಚಕಿಲಕುಸುಮಾತ್ಕುಸುಮಾನೀವಾವತೀರ್ಣಾನಿ //

ಕನ್ನಡ ಅನುವಾದ 

   ' ಪ್ರಿಯೆ! ನಿನ್ನ ನಯನಕಮಲದಿಂದ ಹೊರಡುತ್ತಿರುವ ಕುಡಿನೋಟಗಳು, ಅರಳಿದ ಮಲ್ಲಿಗೆ ಹೂವಿನಿಂದ ದಳಗಳು ಉದುರುವಂತೆ ವಿರಾಜಿಸುತ್ತಿವೆ! '
    ಇಲ್ಲಿ ಕವಿಯು ಹೆಣ್ಣಿನ ಕಣ್ಣನ್ನು ಕಮಲ ಪುಷ್ಪಕ್ಕೆ ಹೋಲಿಸಿದರೆ, ಅವಳ ಕುಡಿನೋಟಗಳನ್ನು ಮಲ್ಲಿಗೆ ಹೂವಿನಿಂದ ಉದುರುತ್ತಿರುವ ದಳಗಳಿಗೆ ಹೋಲಿಸಿದ್ದಾನೆ! ನಯನಪುಂಡರೀಕ ಎನ್ನುವಲ್ಲಿ ಕಣ್ಣೇ ಕಮಲ ಎಂದು ರೂಪಕಾಲಂಕಾರ ಬಳಸಿದ್ದರೆ, ಅವಳ ಕುಡಿನೋಟಗಳು ಮಲ್ಲಿಗೆ ಹೂವಿನಿಂದ ಉದುರುತ್ತಿರುವ ದಳಗಳಂತಿವೆ ಎನ್ನುವಲ್ಲಿ ಉಪಮಾಲಂಕಾರ ಬಳಸಿದ್ದಾನೆ. ಹೆಣ್ಣಿನ ಕಡೆಗಣ್ಣಿನ ಕುಡಿನೋಟಗಳು ಅದೆಷ್ಟು ಆಕರ್ಷಕ ಎಂದರೆ ಕವಿಗೆ ಅವನ್ನು ಎಷ್ಟು ಹೊಗಳಿದರೂ ಸಾಲದು! ಬೇರೆ ಬೇರೆ ರೀತಿಯ ಹೋಲಿಕೆಗಳನ್ನು ಬಳಸುತ್ತಾ ಹೆಣ್ಣಿನ ಕಡೆಗಣ್ಣಿನ ಕುಡಿನೋಟಗಳನ್ನು ಮತ್ತೆ ಮತ್ತೆ ವರ್ಣಿಸುತ್ತಿದ್ದಾನೆ. ಇಲ್ಲಿ ಹೆಣ್ಣಿನ ಪ್ರಿಯತಮನ ಮೂಲಕ ಅವಳಿಗೆ ಪ್ರಶಂಸೆ ಹೇಳಿಸಿದ್ದಾನೆ.

ಸುಂದರೀಶತಕ -೪೧

ಸಂಸ್ಕೃತ ಮೂಲ 

ನಿಷ್ಠುರಪಂಜರಕೋಷೇ ನವಸಂಯಮಿತಸ್ಯ ಖಂಜನಸ್ಯೇವ /
ಗುರುಜನಸಮಕ್ಷಮಕ್ಷಿವ್ಯಾಪಾರೋ ಜಯತಿ ಮುಗ್ಧಾಕ್ಷ್ಯಾ: //

ಕನ್ನಡ ಅನುವಾದ 

ಆ ಮುಗ್ಧನಯನೆಯು ಹಿರಿಯರ ಸಮಕ್ಷಮದಲ್ಲಿ ತನ್ನ ಪ್ರಿಯತಮನೊಂದಿಗೆ ನಡೆಸುವ ಕಣ್ಣೋಟದ ವ್ಯಾಪಾರ (ಚಲನವಲನಗಳು), ಗಟ್ಟಿಯಾದ ಪಂಜರದಲ್ಲಿ ಹೊಸದಾಗಿ ಬಂಧಿಸಿರುವ ಖಂಜನ ಪಕ್ಷಿಯ ತೀಕ್ಷ್ಣ ಕಣ್ಣೋಟದ ಚಲನವಲನಗಳಂತೆ ವಿಜಯಶಾಲಿಯಾಗುತ್ತದೆ!' 
    ಇದೊಂದು ಸುಂದರವಾದ, ರಮ್ಯವಾದ ಚಿತ್ರಣ. ಮನೆಗೆ ಹಿರಿಯರು ಬಂದಿದ್ದಾರೆ. ನವವಿವಾಹಿತೆಯಾದ ಮುಗ್ಧ ಕಣ್ಣುಗಳ ಹೆಣ್ಣೊಬ್ಬಳು ತನ್ನ ಪ್ರಿಯಪತಿಯನ್ನು ಅರೆಕ್ಷಣವೂ ಬಿಟ್ಟಿರಲಾರಳು. ಹಿರಿಯರ ನಡುವೆ ಅವಳ ಗಂಡನೂ ಕುಳಿತಿದ್ದಾನೆ. ಅವರು ಅವನೊಂದಿಗೆ ಏನೋ ಮಾತುಕತೆ ನಡೆಸುತ್ತಿದ್ದಾರೆ. ಇವಳು ಸಿಹಿತಿಂಡಿಗಳು, ಪಾನೀಯಗಳು ಇತ್ಯಾದಿಗಳನ್ನು ತಂದುಕೊಡುತ್ತಿದ್ದಾಳೆ ಹಾಗೂ ಅಲ್ಲೇ ಇದ್ದಾಳೆ. ಅವಳಿಗೆ ಅವನನ್ನು ನೋಡಬೇಕೆಂಬ ಆಸೆ. ಆದರೆ ಅವರೆಲ್ಲರೂ ಇರುವಾಗ ಧೈರ್ಯವಾಗಿ ಮುಕ್ತವಾಗಿ ನೋಡಲಾರಳು. ಹಾಗಾಗಿ ತಲೆತಗ್ಗಿಸಿ ವೇಗವಾಗಿ ಅವನ ಕಡೆ ನೋಡುತ್ತಾಳೆ ಮತ್ತು ಹೆದರಿ ಪುನಃ ಬೇಗನೆ ಹಿರಿಯರ ಕಡೆ ನೋಡುತ್ತಾಳೆ. ಅವಳ ಕಣ್ಣೋಟದ ಈ ಚಲನವಲನಗಳು, ಗಟ್ಟಿಯಾದ ಪಂಜರದಲ್ಲಿ ಹೊಸದಾಗಿ ಬಂಧಿಸಲಾಗಿರುವ ಖಂಜನ ಪಕ್ಷಿಯ ತೀಕ್ಷ್ಣ ನೋಟಗಳಂತಿವೆ ಎಂದು ಕವಿಯು ಹೋಲಿಸುತ್ತಾನೆ. ಖಂಜನ ಪಕ್ಷಿ ಅಥವಾ ಕದಂಬ ಪಕ್ಷಿಯನ್ನು ಹೊಸದಾಗಿ ಪಂಜರದಲ್ಲಿ ಬಂಧಿಸಿದಾಗ ಅದು ಚಡಪಡಿಸುತ್ತಾ ಅತ್ತಿತ್ತ ಚುರುಕಾಗಿ ಕಣ್ಣುಗಳನ್ನು ಆಡಿಸುತ್ತಿರುತ್ತದೆ. ಅದೇ ರೀತಿ ಈಗ ಮುಗ್ಧೆಯಾದ ಈ ಹೆಣ್ಣೂ ಹಿರಿಯರ ಪಂಜರದಲ್ಲಿ ಸಿಕ್ಕಿಕೊಂಡು ತನ್ನ ಪ್ರಿಯತಮನನ್ನು ಕದ್ದು ನೋಡುತ್ತಾ ಮರುಕ್ಷಣವೇ ಅವರನ್ನೂ ನೋಡುತ್ತಾ ಒಂದು ಆಕರ್ಷಕ ಚಿತ್ರಣವುಂಟುಮಾಡಿದ್ದಾಳೆ! ಇಂಥ ಅವಳ ಕಣ್ಣೋಟ ಅತ್ಯಂತ ಸೊಗಸಾಗಿದ್ದು ಅದು ವಿಜಯಶಾಲಿಯಾಗುತ್ತದೆ ಎನ್ನುತ್ತಾನೆ ಕವಿ! 

ಬುಧವಾರ, ಮೇ 27, 2026

ಮಹಾಭಾರತದ ಸ್ವಾರಸ್ಯಗಳು - ಜಿಂಕೆಗಳ ಕನಸು

                ನಾವು ಪ್ರಾಣಿ ಪ್ರಪಂಚದ ಇತಿಹಾಸವನ್ನು ಅವಲೋಕಿಸುತ್ತಾ ಹೋದರೆ ಮಾನವರು ಅದೆಷ್ಟೋ ಪ್ರಾಣಿ, ಪಕ್ಷಿಗಳನ್ನು ನಿರ್ದಯವಾಗಿ ಬೇಟೆಯಾಡಿ ನಿರ್ನಾಮ ಮಾಡಿರುವುದು ಕಾಣುತ್ತದೆ. ಅದರಲ್ಲೂ ಯುರೋಪಿಯನ್ನರು ಕ್ರೌರ್ಯದಲ್ಲಿ ಹೆಸರೆತ್ತಿದವರು. ಅವರು ಹೋದಲ್ಲೆಲ್ಲಾ ನೆಲೆಗಳನ್ನು ವಶಪಡಿಸಿಕೊಂಡು, ಮೂಲನಿವಾಸಿಗಳನ್ನು ಬಗ್ಗುಬಡಿದು ಇಲ್ಲವೇ ದಾಸ್ಯಕ್ಕೊಳಪಡಿಸಿ ಶೋಷಿಸಿದ್ದಷ್ಟೇ ಅಲ್ಲದೆ, ಅಲ್ಲಿನ ಪ್ರಾಣಿ ಪಕ್ಷಿಗಳನ್ನೂ ಅನಗತ್ಯವಾಗಿ ಬೇಟೆಯಾಡಿದರು. ಹಾಗಾಗಿಯೇ ಡೋಡೋ, ಪ್ಯಾಸೆಂಜರ್ ಪಿಜನ್, ಕ್ವಗ್ಗ ( ಜೀಬ್ರಾದಂಥ ಒಂದು ಪ್ರಾಣಿ) ಇನ್ನೆಂದೂ ಕಾಣದಂತೆ ನಾಮಾವಶೇಷವಾದವು! ಈಗಲೂ ಆಫ್ರಿಕಾದಲ್ಲಿ ಅರಣ್ಯ ಸಂರಕ್ಷಣೆಗೆ ಧನಸಹಾಯ ಮಾಡುವವರಿಗೆ ಬೇಟೆಯಾಡಲು ಅವಕಾಶ ಕೊಡುವುದು ಒಂದು ದೊಡ್ಡ ವಿಡಂಬನೆಯ ವಿಷಯವಾಗಿದೆ! 
    ಈ ರೀತಿ ಬೇಟೆಯಾಡುವ ಪ್ರವೃತ್ತಿ ಭಾರತದಲ್ಲೂ ಇತ್ತೇ ಎಂದು ಕೇಳಿದರೆ ಹೌದು ಎಂದೇ ಹೇಳಬೇಕಾಗುತ್ತದೆ. ಆದಿಮಾನವ ತನ್ನ ಆಹಾರಕ್ಕಾಗಿ ಬೇಟೆಯಾಡುತ್ತಿದ್ದ ನಿಜ. ಅಂತೆಯೇ ಅಂದಿನಿಂದ ಇಂದಿನವರೆಗೂ ಬಹುತೇಕ ಮಾನವರಲ್ಲಿ ಮಾಂಸಾಹಾರ ಸಹಜವಾದ ಒಂದು ಪ್ರವೃತ್ತಿಯೇ ಆಗಿದೆ. ಈ ಮಾಂಸ ಸಿಗಲು ಪ್ರಾಣಿಗಳನ್ನು ಬೇಟೆಯಾಡಬೇಕಾದುದರಿಂದ ಅದೊಂದು ಕ್ರೀಡೆಯೇ ಆಯಿತು! ಓಡುತ್ತಿರುವ, ಹಾರುತ್ತಿರುವ ಅಥವಾ ದೂರದಲ್ಲಿ ಮೇಯುತ್ತಿರುವ ಇಲ್ಲವೇ ವಿಶ್ರಮಿಸುತ್ತಿರುವ ಪ್ರಾಣಿ ಪಕ್ಷಿಗಳನ್ನು ಗುರಿಯಿಟ್ಟು ಹೊಡೆದು ಕೊಂದರೆ ಅದೇನೋ ಸಾಧನೆ ಮಾಡಿದ ಆನಂದ ಅನೇಕ ರಾಜರುಗಳಿಗಿತ್ತು! ಯುದ್ಧಗಳಲ್ಲಿ ತೊಡಗುವ ಬಹುತೇಕ ರಾಜರು ಕ್ಷತ್ರಿಯರಾಗಿದ್ದು ಮಾಂಸಾಹಾರ ಅವರಿಗೆ ಸಹಜವಾಗಿತ್ತು. ಅಂತೆಯೇ ಶೂದ್ರರು, ಶ್ರಮಜೀವಿಗಳಿಗೂ ಮಾಂಸಾಹಾರವಿಲ್ಲದೇ ಆಗುತ್ತಿರಲಿಲ್ಲ. ಆದರೆ ಅಷ್ಟೇ ಅಲ್ಲದೇ ಬ್ರಾಹ್ಮಣರು ಕೂಡ ಯಜ್ಞ ಯಾಗಗಳನ್ನು ಮಾಡಿದಾಗ ಬಲಿಪಶುವಿನ ಮಾಂಸಾಹಾರ ಸೇವಿಸುತ್ತಿದ್ದರು. ಇವುಗಳಿಗೆ ಅನೇಕ ದಾಖಲೆಗಳು ಪ್ರಾಚೀನ ಗ್ರಂಥಗಳಲ್ಲಿ ಇವೆ. ಆದರೆ ಮಾಂಸಾಹಾರಕ್ಕಲ್ಲದೇ ಸುಖಾಸುಮ್ಮನೆ ಬೇಟೆಯಾಡಿ ಪ್ರಾಣಿಗಳನ್ನು ಕೊಲ್ಲುವುದೆಂದರೇನು? ಆದರೆ ಅದೂ ತೀರಾ ಇತ್ತೀಚಿನವರೆಗೂ ಇತ್ತು. ಮೈಸೂರು ಮಹಾರಾಜರೇ ಮೊದಲಾಗಿ ಅನೇಕ ಮಹಾರಾಜರು ಕಾಡುಗಳನ್ನು ಬೇಟೆಗೆಂದೇ ಬೆಳೆಸಿದ್ದಲ್ಲದೇ ಕಾಡುಗಳಲ್ಲಿ ಬೇಟೆಯಾಡಲು ಉಳಿದುಕೊಳ್ಳಲು ಸುಂದರ ಗೃಹಗಳನ್ನು ನಿರ್ಮಿಸಿದರು. ಬ್ರಿಟಿಷರು ಬಂದಮೇಲೆ ಅವರ ಜೊತೆ ನಮ್ಮ ರಾಜರೂ ಸೇರಿಕೊಂಡು ಈ ಕ್ರೀಡೆಯನ್ನು ಆನಂದಿಸುತ್ತಿದ್ದರು! 
      ಆದರೆ ಪ್ರಾಚೀನ ಭಾರತದಲ್ಲಿ ಬೇಟೆಯಾಡುವ ಪ್ರವೃತ್ತಿ ಇದ್ದರೂ ಅದನ್ನು ನಿಯಂತ್ರಿಸಲು ಪ್ರಯತ್ನಿಸಿದ್ದುದು ಕಾಣುತ್ತದೆ. ಉದಾಹರಣೆಗೆ ಶ್ರೀಕೃಷ್ಣನು ಮಹಾಭಾರತದಲ್ಲಿ ರಾಜರಿಗೆ ಬೇಟೆ, ಮದ್ಯಪಾನ, ಜೂಜು, ಮತ್ತು ಸ್ತ್ರೀ ವ್ಯಾಮೋಹ, ಇವು ನಾಲ್ಕೂ ವ್ಯಸನಗಳು ಎಂದು ಹೇಳುತ್ತಾನೆ. ಜೂಜಿನಿಂದ ಯುಧಿಷ್ಠಿರ, ನಳ ಮಹಾರಾಜ, ಮೊದಲಾದವರು ತೊಂದರೆಗೊಳಗಾದರೆ, ಬೇಟೆಯಿಂದ ಪಾಂಡು ಮಹಾರಾಜನು  ನಾಶವಾದ. ಬೇಟೆಯ ವ್ಯಾಮೋಹದಿಂದ ಅವನು ಜಿಂಕೆಗಳ ರೂಪದಲ್ಲಿ ರತಿಕ್ರೀಡೆಯಾಡುತ್ತಿದ್ದ ಕಿಂದಮ ಋಷಿದಂಪತಿಗಳನ್ನು ಕೊಂದು ಸ್ತ್ರೀಯನ್ನು ಸಂಭೋಗಿಸಿದರೆ ಸಾಯುವಂತೆ ಅವರಿಂದ ಶಾಪಗ್ರಸ್ತನಾದ. ವಿಚಿತ್ರವೀರ್ಯನು ಅತಿಯಾದ ಸ್ತ್ರೀ ಸಂಭೋಗದಿಂದ ಯಕ್ಷ್ಮ ಕ್ಷಯರೋಗವೆಂಬ ಕ್ಷೀಣಿಸುವ  ರೋಗಕ್ಕೊಳಗಾಗಿ ಸತ್ತ. ಇಂಥ ಉದಾಹರಣೆಗಳಿಂದ ಬೇಟೆ ಮತ್ತು ಪ್ರಾಣಿಗಳನ್ನು ಕೊಲ್ಲುವುದನ್ನು ನಿಯಂತ್ರಿಸಲಾಗಿದೆ. ಮುಂದೆ ಬೌದ್ಧ, ಜೈನ ಧರ್ಮಗಳಲ್ಲಂತೂ ಇದು ಬೇಡವೇ ಬೇಡ ಎಂದು ಒತ್ತು ಕೊಡಲಾಗಿದೆ. ಬೌದ್ಧ ಜಾತಕ ಕಥೆಗಳಲ್ಲಿ ಬೇಟೆಯನ್ನು ವಿರೋಧಿಸುವ ಚಿನ್ನದ ಜಿಂಕೆಯ ಕಥೆಯಿದೆ. ಬುದ್ಧನು ಮೊದಲ ಪ್ರವಚನ ನೀಡಿದ ಸಾರನಾಥದ ಮಿಗದಾಯ ( ಮೃಗದಾವ) ಜಿಂಕೆಗಳನ್ನು ಸಂರಕ್ಷಿಸಿದ ಉಪವನವಾಗಿತ್ತು.
     ಪ್ರಾಣಿಗಳ, ಮುಖ್ಯವಾಗಿ ಜಿಂಕೆಗಳ ಸಂರಕ್ಷಣೆ ಹಾಗೂ ಅನಗತ್ಯ ಬೇಟೆಯನ್ನು ನಿಯಂತ್ರಿಸುವ ಸ್ವಾರಸ್ಯಕರ ಪ್ರಸಂಗವೊಂದು ಮಹಾಭಾರತದಲ್ಲಿದೆ. ಅದು ವನಪರ್ವದ ಮೃಗಸವಪ್ನೋದ್ಭವಪರ್ವವೆಂಬ ಚಿಕ್ಕ ಉಪಪರ್ವದಲ್ಲಿದೆ.‌ ಅದನ್ನು ಈಗ ನೋಡೋಣ.
  ಪಾಂಡವರು ಆಗ ದ್ವೈತವನದಲ್ಲಿ ವಾಸಿಸುತ್ತಿದ್ದರು.  ಒಮ್ಮೆ ಯುಧಿಷ್ಠಿರನು ಆಶ್ರಮದಲ್ಲಿ ಮಲಗಿ ನಿದ್ರಿಸುತ್ತಿದ್ದಾಗ ಅವನಿಗೆ ಒಂದು ವಿಚಿತ್ರ ಕನಸು ಬಿತ್ತು.‌ ಅದರಲ್ಲಿ ಕೆಲವು ಜಿಂಕೆಗಳು ಮುಂಗಾಲುಗಳನ್ನು ಜೋಡಿಸಿಕೊಂಡು ಕಣ್ಣೀರು ಸುರಿಸುತ್ತಾ ಗದ್ಗದ ಸ್ವರದಿಂದ ಅಳುತ್ತಿದ್ದವು. ಅದನ್ನು ನೋಡಿ ಯುಧಿಷ್ಠಿರನು ಕೇಳಿದನು," ಮೃಗಶ್ರೇಷ್ಖರೇ! ಯಾರು ನೀವು? ನಿಮ್ಮ ಇಚ್ಛೆ ಏನು? ಅದೇನು ಹೇಳಬೇಕೆಂದಿರುವಿರೋ ನಿರ್ಭಯವಾಗಿ ಹೇಳಿ!" 
    ಅದಕ್ಕೆ ಆ ಜಿಂಕೆಗಳು ಹೇಳಿದವು," ನೀವುಗಳು ಆಹಾರಕ್ಕಾಗಿ ನಮ್ಮನ್ನು ಬೇಟೆಯಾಡುವಾಗ ನಿಮ್ಮ ಬಾಣಾಘಾತಕ್ಕೆ ಸಿಕ್ಕದೇ ತಪ್ಪಿಸಿಕೊಂಡು ಉಳಿದ ಬಡಪಾಯಿ ಜಿಂಕೆಗಳು ನಾವು! ಆದರೆ ಇನ್ನು ಕೆಲವೇ ದಿನಗಳಲ್ಲಿ ನಾವೂ ನಿಮ್ಮ ಆಹಾರವಾಗಿ ಪರಿವರ್ತನೆ ಹೊಂದುವುದು ಖಚಿತ! ಮಹಾರಾಜ! ನಿನ್ನ ತಮ್ಮಂದಿರು ಮಹಾಶೂರರು! ಬಿಲ್ವಿದ್ಯೆಯಲ್ಲಿ ಅಸಮಾನರು! ನಮ್ಮ ಉಚ್ಛ್ವಾಸ, ನಿ:ಶ್ವಾಸಗಳನ್ನು ಕೇಳಿಯೇ ಗುರಿಯಿಟ್ಟು ಬಾಣ ಬಿಡಬಲ್ಲರು! ಹೀಗಾಗಿ ದ್ವೈತವನದಲ್ಲಿ ನಮ್ಮ ವಂಶವೇ ಕ್ಷೀಣಿಸಿಹೋಗುತ್ತಿದೆ! ಅಲ್ಪಸಂಖ್ಯಾತರಾಗಿರುವ ನಾವಿಂದು ನಮ್ಮ ವಂಶಕ್ಕೆ ಬೀಜಪ್ರಾಯರಾಗಿರುವೆವು! ನಿನ್ನ ಅನುಗ್ರಹದಿಂದ ಮಾತ್ರ ನಮ್ಮ ವಂಶವು ಪುನಃ ಅಭಿವೃದ್ಧಿ ಹೊಂದಬಹುದು. ಹಾಗಾಗಿ ದಯವಿಟ್ಟು ನೀವು ಈ ಅರಣ್ಯ ಬಿಟ್ಟು ಬೇರೆ ಅರಣ್ಯಕ್ಕೆ ಪ್ರಯಾಣ ಮಾಡಿ! " 
    ಗಡಗಡನೆ ನಡುಗುತ್ತಾ ಕಣ್ಣೀರು ಸುರಿಸುತ್ತಾ ಹೇಳಿದ ಜಿಂಕೆಗಳ ಮಾತುಗಳನ್ನು ಕೇಳಿ ಯುಧಿಷ್ಠಿರನಿಗೆ ಬಹಳ ದು:ಖವಾಯಿತು. ಅವನು ಸಕಲಪ್ರಾಣಿಗಳ ಯೋಗಕ್ಷೇಮದಲ್ಲೂ ಆಸಕ್ತಿ ಹೊಂದಿದ್ದನು. ಹಾಗಾಗಿ ಅವನು," ತಥಾಸ್ತು! ನೀವು ಹೇಳಿದಂತೆಯೇ ಮಾಡುತ್ತೇನೆ!" ಎಂದು ಅಭಯವಿತ್ತನು.
   ಇದಿಷ್ಟು ಕನಸು ಮುಗಿದ ಬಳಿಕ ಯುಧಿಷ್ಠಿರನಿಗೆ ನಿದ್ರೆ ಕಳೆದು ಎಚ್ಚರವಾಯಿತು.‌ ಅವನಿಗೆ ಆಗ ಕನಸಿನ ವಿಷಯ ಕಾಡತೊಡಗಿತು. ಪ್ರಾತರ್ವಿಧಿಗಳು ಮುಗಿದ ಬಳಿಕ ತನ್ನ ತಮ್ಮಂದಿರ ಮಧ್ಯೆ ಕುಳಿತುಕೊಂಡು ತನಗಾದ ಕನಸಿನ ಅನುಭವವನ್ನು ಹೇಳಿ," ತಮ್ಮಂದಿರೇ! ಆ ಜಿಂಕೆಗಳ ಮಾತು ಸತ್ಯ! ನಾವು ಈ ಕಾಡಿನ ಪ್ರಾಣಿಗಳ ಮೇಲೆ ಈಗಲಾದರೂ ದಯೆ ತೋರಬೇಕು. ನಾವಿಲ್ಲಿಗೆ ಬಂದು ಒಂದು ವರ್ಷ ಎಂಟು ತಿಂಗಳುಗಳು ಕಳೆದುಹೋಗಿವೆ! ನಾವು ಈ ಪ್ರಾಣಿಗಳಿಂದಲೇ ಜೀವಿಸುತ್ತಿದ್ದೇವೆ! ಆದ್ದರಿಂದ ನಾವೀಗ ಬೇರೆ ಕಾಡಿಗೆ ಹೋಗಬೇಕು. ಅನೇಕಾನೇಕ ಮೃಗಗಳಿಂದಲೂ ಲತಾವೃಕ್ಷಗಳಿಂಜಲೂ ಸಮೃದ್ಧವಾಗಿರುವ, ತೃಣಬಿಂದು ಸರೋವರದ ದಡದಲ್ಲಿರುವ ಕಾಮ್ಯಕವನಕ್ಕೆ ಹೋಗೋಣ!" 
   ಯುಧಿಷ್ಠಿರನು ಹೀಗೆ ಹೇಳಲು, ಎಲ್ಲರೂ ಒಪ್ಪಿದರು. ಅದರಂತೆ ಅವರೆಲ್ಲರೂ ಕಾಮ್ಯಕವನಕ್ಕೆ ಹೋದರು.‌
     ಹೀಗೆ ಪ್ರಾಚೀನ ಭಾರತದಲ್ಲಿ ಬೇಟೆಯಾಡುವುದು ಹಾಗೂ ಮಾಂಸಾಹಾರ ಕಂಡುಬಂದರೂ ಅವುಗಳ ನಿಯಂತ್ರಣವೂ ಕಂಡುಬರುತ್ತದೆ. ಮನುಸ್ಮೃತಿಯ ಒಂದು ಮಾತು ಇಲ್ಲಿ ಮನನೀಯ:
    ನ ಮಾಂಸಭಕ್ಷಣೇ ದೋಷೋ ನಾ ಮದ್ಯೇ ನ ಚ ಮೈಥುನೇ /
ಪ್ರವೃತ್ತಿರೇಷಾ ಭೂತಾನಾಂ ನಿವೃತ್ತಿಸ್ತು ಮಹಾಫಲಾ //
    ' ಮಾಂಸಭಕ್ಷಣೆಯಲ್ಲಿ, ಮದ್ಯಪಾನದಲ್ಲಿ ಹಾಗೂ ಮೈಥುನದಲ್ಲಿ ದೋಷವಿಲ್ಲ. ಏಕೆಂದರೆ ಇದು ಮನುಷ್ಯರಿಗೆ ಸಹಜವಾದ ಪ್ರವೃತ್ತಿ. ಆದರೆ ಇದರ ನಿವೃತ್ತಿಯಿಂದ ಮಹಾಫಲವುಂಟಾಗುತ್ತದೆ.' 
   ಹೀಗೆ ಕೆಲವರಿಗೆ ಮಾಂಸಾಹಾರ ಬೇಕಾಗುತ್ತದೆ. ಅದು ತಪ್ಪಲ್ಲ. ಆದರೆ ಅದನ್ನು ಬಿಟ್ಟರೆ ಅಥವಾ ಕಡಿಮೆ ಮಾಡಿದರೆ ಒಳ್ಳೆಯದು. ಹೀಗೆ ನಾವು ಪ್ರಾಚೀನ ಭಾರತದ ಗ್ರಂಥಗಳಲ್ಲಿ, ಸಂದರ್ಭಗಳಲ್ಲಿ ಪ್ರಾಣಿಗಳ ಸಂರಕ್ಷಣೆಯ ವಿಚಾರವನ್ನು ನೋಡಬಹುದು.

ಸೋಮವಾರ, ಮೇ 18, 2026

ಸುಂದರೀಶತಕ -೪೦

ಸಂಸ್ಕೃತ ಮೂಲ 

ಕುಂಚನ್ಮೃದುಕರಶಾಖಾಕೃಷ್ಟಾಂಚಲಕೋಣತಿರ್ಯಗುಲ್ಲಸಿತ: /
ಲಕ್ಷೀಕರೋತಿ ಧನ್ಯಂ ಸುಂದರಿ ದೀರ್ಘ: ಕಟಾಕ್ಷಸ್ತೇ //

ಕನ್ನಡ ಅನುವಾದ 

       ' ಎಲೈ ಸುಂದರಿ! ಬಾಗಿದ ನಿನ್ನ ಮೃದುವಾದ ಕರಶಾಖೆಗಳಿಂದ ( ಬೆರಳುಗಳಿಂದ) ನಿನ್ನ ಸೆರಗಿನ ಅಂಚನ್ನು ಎಳೆಯುತ್ತಾ ಕಣ್ಣಿನ ಕೋನದಿಂದ ಓರೆಯಾದ ದೀರ್ಘ ಕಟಾಕ್ಷದ ಹೊಳೆಯುವ ನೋಟ ಬೀರುತ್ತಾ ಧನ್ಯನಾದ ಪುರುಷನೊಬ್ಬನನ್ನು ನಿನ್ನ ಲಕ್ಷ್ಯಕ್ಕೆ ತರುತ್ತಿರುವೆ!' 
     ಹೆಣ್ಣು ಓರೆ ನೋಟ ಬೀರಿ ನೋಡುವ ಸೌಂದರ್ಯವನ್ನು ಎಷ್ಟು ಹೊಗಳದರೂ ಕವಿಗೆ ತೃಪ್ತಿಯಿಲ್ಲ! ಮತ್ತೆ ಮತ್ತೆ ಬೇರೆ ಬೇರೆ ರೀತಿಯಲ್ಲಿ ಅವನು ಅದೇ ವಿಷಯವನ್ನು ಹೊಗಳುತ್ತಿದ್ದಾನೆ! ಅಂಥ ನೋಟಕ್ಕೆ ಗುರಿಯಾಗಿರುವ ಪುರುಷ ನಿಜಕ್ಕೂ ಧನ್ಯ ಎಂದು ಹೇಳುತ್ತಿದ್ದಾನೆ! ಇಲ್ಲಿ ಸುಂದರಿಯ ಮೃದುವಾದ ಕೈಬೆರಳುಗಳನ್ನು ಕೋಮಲವಾದ ಎಳೆ ಶಾಖೆಗಳಿಗೆ ಹೋಲಿಸಿರುವುದು ರಮ್ಯವಾಗಿದೆ! ಹೆಣ್ಣಿನ ಎಲ್ಲಾ ಅಂಗಗಳೂ ಅತ್ಯಂತ ಕೋಮಲ! ಅಷ್ಟೇ ಅಲ್ಲದೆ ಅವಳ ಮಾತು, ನಗೆ, ನೋಟ, ಎಲ್ಲವೂ ಕೋಮಲ ಹಾಗೂ ರಮ್ಯ! ಇಂಥ ಸುಂದರ ಹೆಣ್ಣಿನ ಕಣ್ಣೋಟ ಬಿದ್ದರೂ ಪುರುಷ ಧನ್ಯನಲ್ಲವೇ? 

ಸುಂದರೀಶತಕ -೩೯

ಸಂಸ್ಕೃತ ಮೂಲ 

ಸುಂದರಿ ವಿವೃತ್ಯ ದೃಷ್ಟ: ಕಷ್ಟಮಪಾಂಗೇನ ಭುಜಗೇನ /
ಅಧರಾಮೃತೇನ ಜೀವತಿ ಸೋsಯಮುಪಾಯಾಂತರಾಸಾಧ್ಯ: //

ಕನ್ನಡ ಅನುವಾದ 

     ' ಎಲೈ ಸುಂದರಿ! ನೀನು ಹಿಂದೆ ತಿರುಗಿ ನಿನ್ನ ಸರ್ಪವೆಂಬ ಕಡೆಗಣ್ಣ ಕುಡಿನೋಟ ಬೀರಿ ಇವನಿಗೆ ( ನಿನ್ನ ಪ್ರೇಮಿಗೆ) ಕಷ್ಟ ತಂದಿರುವೆ! ಈಗ ಇವನು ನಿನ್ನ ಅಧರಾಮೃತದಿಂದಷ್ಟೇ ಜೀವಿಸುತ್ತಾನೆ! ಬೇರಾವ ಉಪಾಯದಿಂದಲೂ ಸಾಧ್ಯವಿಲ್ಲ!'
       ಇಲ್ಲಿ ಕವಿಯು ಹೆಣ್ಣಿನ ಕಡೆಗಣ್ಣ ಕುಡಿನೋಟವನ್ನು ಸರ್ಪಕ್ಕೆ ಹೋಲಿಸಿದ್ದಾನೆ! ಅದು ಸರ್ಪವೇ ಎಂದು ಹೇಳಿರುವುದರಿಂದ ಇಲ್ಲಿ ರೂಪಕಾಲಂಕಾರವಿದೆ. ಆ ನೋಟ ಅವಳ ಪ್ರೇಮಿಗೆ ಸರ್ಪ ಕಚ್ಚಿದಂತಾಗಿ ಮೈಯೆಲ್ಲಾ ಪ್ರೇಮದ ವಿಷವೇರಿದೆ! ಈಗ ಅವನನ್ನು ಬದುಕಿಸುವುದು ಹೇಗೆ? ಅದಕ್ಕೆ ಇರುವ ಒಂದೇ ಉಪಾಯವೆಂದರೆ ಅವಳ ಅಧರಾಮೃತಪಾನ! ಬೇರಾವ ಉಪಾಯದಿಂದಲೂ ಸಾಧ್ಯವಿಲ್ಲ ಎನ್ನುತ್ತಾನೆ ಕವಿ! ಹೌದಲ್ಲವೇ?

ಸುಂದರೀಶತಕ -೩೮

ಸಂಸ್ಕೃತ ಮೂಲ 

ತವ ಸುಂದರಿ ಮಧುರಸ್ಮಿತಮೇದುರಮಚ್ಚಕ್ಷುರಭಿಮುಖಂ ಚಕ್ಷು: /
ಶರದಿಂದುಕಿರಣತುಂದಿಲಕುಮುದೋನ್ಮುಖಮಧುಪಮನುಹರತೇ //

ಕನ್ನಡ ಅನುವಾದ 

    ' ಎಲೈ ಸುಂದರಿ! ಮಧುರವಾದ ನಗುವಿನಿಂದ ಕೂಡಿರುವ ನಿನ್ನ ಕಣ್ಣು ನನ್ನ ಕಣ್ಣಿನ ಮುಂದಿರಲು, ಶರತ್ಕಾಲದ ಚಂದಿರನ ಕಿರಣಗಳಿಂದ ಅರಳಿದ ಕುಮುದ ಪುಷ್ಪದ ಮುಂದೆ ಇರುವ ಭ್ರಮರದಂತಿದೆ! ' 
       ಪ್ರೇಮಿಗಳು ಒಬ್ಬರನ್ನೊಬ್ಬರು ನೋಡುತ್ತಾ ಕುಳಿತರೆ ಜಗತ್ತನ್ನೇ ಮರೆಯುವರು! ಹಾಗೆಯೇ ಇಲ್ಲಿ ಇಬ್ಬರು ಪ್ರೇಮಿಗಳು ಪರಸ್ಪರ ನೋಡುತ್ತಾ ಕುಳಿತಿದ್ದಾರೆ.‌ ನಗುವಿನಿಂದ ಕೂಡಿರುವ ಸುಂದರಿಯ ಕಣ್ಣು ಪ್ರಿಯತಮನ ಕಣ್ಣಿನ ಮುಂದಿದ್ದರೆ, ಪ್ರಿಯತಮನ ಮುಖ, ಶರತ್ಕಾಲದ ಚಂದ್ರಮನ ಕಿರಣಗಳಿಂದ ಅರಳಿದ ಕುಮುದ ಪುಷ್ಪದಂತೆ ಅರಳಿದೆ. ಅದನ್ನು ನೋಡುತ್ತಿರುವ ಪ್ರಿಯತಮೆಯ ಕಣ್ಣು, ಭ್ರಮರದಂತೆ ಆಉರ್ಷಿತವಾಗಿದೆ! ಹೀಗೆ ಕವಿಯು ಪ್ರಿಯತಮನ ಮುಖವನ್ನು ಅರಳಿದ ಕುಮುದ ಪುಷ್ಪಕ್ಕೂ ಪ್ರಿಯತಮೆಯ ಕಣ್ಣನ್ನು ಭ್ರಮರಕ್ಕೂ ಹೋಲಿಸಿ ಅವನ ಬಾಯಲ್ಲೇ ಹೇಳಿಸಿದ್ದಾನೆ. ಇಲ್ಲಿ ಉಪಮಾಲಂಕಾರವಿದೆ. ಕಮಲ ಪುಷ್ಪಗಳು ಸೂರ್ಯನ ಕಿರಣಗಳಿಗೆ ಅರಳಿದರೆ ಕುಮುದ ಪುಷ್ಪಗಳು ಅಥವಾ ಬಿಳಿ ನೈದಿಲೆಗಳು ಚಂದ್ರಕಿರಣಗಳಿಗೆ ಅರಳುತ್ತವೆ.

ಬುಧವಾರ, ಮೇ 13, 2026

ಸುಂದರೀಶತಕ -೩೭

ಸಂಸ್ಕೃತ ಮೂಲ 

ಪಶ್ಯತ್ಯಸಮ್ಮುಖಂ ಮಾಂ ಮಯಿ ಪಶ್ಯತಿ ಸಾಥ ಸಮ್ಮುಖೀಭವತಿ /
ಸ್ಮರಮೇಕತೋsವರೋಹೈ: ಶ್ರಮಯತಿ ಕೋಟಿದ್ವಯೇ ಮೌರ್ವೀ //

ಕನ್ನಡ ಅನುವಾದ 

     ' ನಾನು ಅವಳ ಕಡೆ ನೋಡುವಾಗ ಅವಳು ಬೇರೆ ಕಡೆ ನೋಡುತ್ತಾಳೆ! ನಾನು ಬೇರೆ ಕಡೆ ನೋಡುವಾಗ ಅವಳು ನನ್ನ ಕಡೆ ನೋಡುತ್ತಾಳೆ! ಹೀಗೆ ನಾನು ಅವಳತ್ತ ನೋಡಿದಾಗ ತನ್ನ ಕಂಗಳನ್ನು ಕೆಳಗೆ ಮಾಡುತ್ತಾ ಮತ್ತು ಬೇರೆ ಕಡೆ ನೋಡಿದಾಗ ಮೇಲೆ ಮಾಡುತ್ತಾ ಅವಳು ಕಾಮದೇವನ ಬಿಲ್ಲಿನ ಎರಡೂ ತುದಿಗಳಲ್ಲಿ ಅದರ ಶಿಂಜಿನಿಗೆ ಶ್ರಮವುಂಟುಮಾಡುತ್ತಾಳೆ!' 
     ಹೆಣ್ಣಿಗೆ ತನ್ನ ನಲ್ಲನನ್ನು ನೋಡುವ ಆಸೆ. ಆದರೆ ನಾಚಿಕೆ ಅಡ್ಡ ಬರುತ್ತಿದೆ. ಹಾಗಾಗಿ ಅವನು ಅವಳತ್ತ ನೋಡಿದಾಗ ಅವಳು ಬೇರೆ ಕಡೆ ನೋಡುತ್ತಾಳೆ! ಆದರೆ ಅವನು ಬೇರೆ ಕಡೆ ನೋಡಿದಾಗ ಅವಳು ಅವನತ್ತ ನೋಡುತ್ತಾಳೆ. ತಾನು ನೋಡಿದ್ದು ಅವನಿಗೆ ತಿಳಿಯಬಾರದೆಂದು ಕದ್ದು ಕದ್ದು ನೋಡುತ್ತಾಳೆ! ಹುಡುಗಿಯರ ಈ ನಾಚಿಕೆಯ ಸ್ವಭಾವ ಬಹಳ ಸ್ವಾರಸ್ಯಕರವಾಗಿರುತ್ತದೆ ಹಾಗೂ ಆನಂದ ಕೊಡುತ್ತದೆ. ಹೆಣ್ಣಿಗೆ ಸಹಜವಾಗಿರುವ ನಾಚಿಕೆಯ ಸ್ವಭಾವ ಒಂದು ಕಲಾತ್ಮಕ ಸ್ಥಿತಿ ತರುತ್ತದೆ ಕೂಡ! ಅದನ್ನು ಕವಿಯು ಗಮನಿಸಿ ಸೊಗಸಾಗಿ ಚಿತ್ರಿಸಿದ್ದಾನೆ. ಅದು ಮನ್ಮಥನು ತನ್ನ ಬಿಲ್ಲಿನ ಶಿಂಜಿನಿಯನ್ನು ಹಿಂದೆ ಮುಂದೆ ಎಳೆಯುವಂತಿದೆ ಹಾಗೂ ಆ ಬಿಲ್ಲಿನ ಎರಡೂ ತುದಿಗಳಲ್ಲಿ ಶಿಂಜಿನಿಗೆ ಶ್ರಮವುಂಟುಮಾಡುವಂತಿದೆ ಎಂದು ಹೇಳುತ್ತಾನೆ ಕವಿ. ಇಲ್ಲಿ ಕವಿಯು ಅವಳ ಡೊಂಕಾದ ಹುಬ್ಬುಗಳನ್ನು ಬಿಲ್ಲಿಗೆ ಹೋಲಿಸಿ ಹಾಗೂ ಅವಳ ನೋಟಗಳನ್ನು ಶಿಂಜಿನಿಗೆ ಹೋಲಿಸಿ, ಅವಳು ಕಂಗಳನ್ನು ಮೇಲೆ ಕೆಳಗೆ ಮಾಡುವುದು ಆ ಶಿಂಜಿನಿಯನ್ನು ಹಿಂದೆ ಮುಂದೆ ಎಳೆಯುವಂತೆ ಹಾಗೂ ಬಿಲ್ಲಿನ ಎರಡೂ ತುದಿಗಳಲ್ಲಿ ಅದಕ್ಕೆ ಶ್ರಮವುಂಟುಮಾಡುವಂತಿದೆ ಎಂದು ಹೇಳುತ್ತಾನೆ.

ಮಂಗಳವಾರ, ಮೇ 12, 2026

ಸುಂದರೀಶತಕ -೩೬

ಸಂಸ್ಕೃತ ಮೂಲ 

ತರುಣಿ ತರಲನಯನಾಂತಂ ವಲಿತಗ್ರೀವಂ ವಧೂತಚೇಲಾಂತಮ್ /
ಭವನದ್ವಾರಿ ವಿಶಂತ್ಯಾಸ್ತವ ದೃಷ್ಟಂ ದ್ರಷ್ಟುಮುತ್ಕಂಠೇ //

ಕನ್ನಡ ಅನುವಾದ 

    ' ಎಲೈ ತರುಣಿ! ನೀನು ಭವನದ ದ್ವಾರವನ್ನು ಪ್ರವೇಶಿಸುವಾಗ, ನಿನ್ನ ಸೆರಗಿನ ಅಂಚು ಗಾಳಿಗೆ ಹಾರುತ್ತಿರಲು, ನಿನ್ನ ಕುತ್ತಿಗೆಯನ್ನು ಸ್ವಲ್ಪ ತಿರುಗಿಸಿ, ಚಂಚಲವಾದ ನಿನ್ನ ಕಂಗಳಿಂದ ನನ್ನನ್ನು ನೋಡಿದ ಆ ನೋಟವನ್ನು ಮತ್ತೊಮ್ಮೆ ನೋಡಲು ನಾನು ಉತ್ಕಂಠಿತನಾಗಿದ್ದೇನೆ!' 
      ಪ್ರೇಮಿಯೊಂದಿಗೆ ಅವನ ಪ್ರಿಯತಮೆಯು ತನ್ನ ಭೇಟಿಯನ್ನು ಮುಗಿಸಿಕೊಂಡು ಮನೆಗೆ ಹೋಗಿ ಅದರ ದ್ವಾರವನ್ನು ಪ್ರವೇಶಿಸುವಾಗ ಅಥವಾ ಇನ್ನಾವುದೋ ಸಂದರ್ಭದಲ್ಲಿ ಹೊರಗೆ ಹೋಗಿದ್ದ ಅವಳು ಮನೆಯ ದ್ವಾರವನ್ನು ಪ್ರವೇಶಿಸುವಾಗ ಅವನನ್ನು ಕಂಡು ಕುತ್ತಿಗೆಯನ್ನು ಸ್ವಲ್ಪ ತಿರುಗಿಸಿ ಚಂಚಲವಾದ ಕಂಗಳಿಂದ ಅವನನ್ನು ನೋಡಿದ್ದಾಳೆ! ಆಗ ಅವಳ ಸೆರಗು ಗಾಳಿಗೆ ಹಾರಾಡುತ್ತಿತ್ತು! ಅವಳು ಇನ್ನೇನು ಒಳಗೆ ಹೋಗಬೇಕು, ಅಷ್ಟರಲ್ಲಿ ಅವನನ್ನು ನೋಡುವ ಕಾತುರತೆಯಿಂದ ಅಲ್ಲೇ ನಿಂತು ನೋಡಿದ್ದಾಳೆ! ಆ ದೃಶ್ಯ ಅವನಲ್ಲಿ ಒಂದು ಚಿತ್ರದಂತೆ ನೆಟ್ಟಿದೆ! ಅದನ್ನು ಅವನು ಮರೆಯಲು ಸಾಧ್ಯವೇ ಇಲ್ಲ! ಪ್ರಾಯದ ಹುಡುಗಿಯರು ಆಡುವ ಮಾತು, ನೋಡುವ ನೋಟ, ಅವರ ನಗು, ಕಂಗಳ ಚಂಚಲತೆ, ಎಲ್ಲವೂ ಅತ್ಯಂತ ಸುಂದರವಾದ ಚರ್ಯೆಗಳು! ಮಧುರಾತಿಮಧುರವಾದವುಗಳು! ಅಂಥ ಸುಂದರ ನೋಟವನ್ನು ಮತ್ತೊಮ್ಮೆ ನೋಡಲು ಪ್ರೇಮಿಯು ಉತ್ಕಂಠಿತನಾಗಿದ್ದು ಅದನ್ನು ಅವನು ಅವಳಿಗೇ ಹೇಳುತ್ತಿದ್ದಾನೆ! ಇಂಥ ಸುಂದರ ಚರ್ಯೆಗಳನ್ನು ಕವಿಯು ಗಮನಿಸಿ ಪದ್ಯಗಳ ರೂಪದಲ್ಲಿ ನಮಗೆ ಸೊಗಸಾಗಿ ಕಟ್ಟಿಕೊಟ್ಟಿದ್ದಾನೆ.

ಭಾನುವಾರ, ಮೇ 10, 2026

ಸುಂದರೀಶತಕ -೩೫

ಸಂಸ್ಕೃತ ಮೂಲ 

ಸಸ್ಮಿತಮುಖಮವಧೀರಿತಚೇಲಾಂಚಲಮೀಷದಾನತಗ್ರೀವಮ್ /
ತಿರ್ಯಗ್ವಿಲೋಕಯಂತ್ಯಾ ಕೋsಪಿ ಕೃತೀ ಲಕ್ಷಿತ: ಕ್ರಿಯತೇ //

ಕನ್ನಡ ಅನುವಾದ 

     ' ಆ ಸುಂದರಿಯು ತನ್ನ ಸೆರಗು ಜಾರಿರಲು, ಅದರ ಕಡೆಗೆ ಗಮನವಿಲ್ಲದೆ, ಕುತ್ತಿಗೆಯನ್ನು ಸ್ವಲ್ಪ ಬಾಗಿಸಿ, ನಗುವಿನಿಂದ ಕೂಡಿದ ಮುಖವುಳ್ಳವಳಾಗಿ, ಕಡೆಗಣ್ಣಿನಿಂದ ನೋಡುತ್ತಾ, ಯಾರೋ ಭಾಗ್ಯವಂತನನ್ನು ತನ್ನ ಲಕ್ಷ್ಯಕ್ಕೆ ತರುತ್ತಿದ್ದಾಳೆ!' 
    ಹೆಣ್ಣಿನ ನಗುಮುಖದ ನಾಚಿಕೆಯ ಈ ನೋಟ ಯಾವ ಗಂಡಿನ ಮೇಲಾದರೂ ಬಿದ್ದರೆ, ಆ ಗಂಡು ಭಾಗ್ಯವಂತನಲ್ಲದೇ ಮತ್ತೇನು? ಹೀಗೆ ಗಂಡನ್ನು ನೇರವಾಗಿ ನೋಡದೇ, ಓರೆ ನೋಟದಲ್ಲಿ ನಗುತ್ತಾ ನೋಡುವ ಹೆಣ್ಣಿನ ಈ ಸುಂದರ ಚಿತ್ರಣವನ್ನು ಯಾರೂ ಅನುಕರಿಸಲಾಗುವುದಿಲ್ಲ! ಅದು ಹೆಣ್ಣಿಗಷ್ಟೇ ಸೀಮಿತವಾಗಿರುವ ಕಲೆ. ಅಂಥ ಸುಂದರ ಕಲಾತ್ಮಕ ನೋಟವನ್ನು ಚಿತ್ರಿಸುತ್ತಾ ಕವಿಯು, ಯಾರೋ ಭಾಗ್ಯವಂತ ಪುರುಷ ಅವಳ ಲಕ್ಷ್ಯಕ್ಕೆ ಬೀಳುತ್ತಿದ್ದಾನೆ ಎನ್ನುತ್ತಾನೆ. 

ಸುಂದರೀಶತಕ -೩೪

ಸಂಸ್ಕೃತ ಮೂಲ 

ಅಧರದಲೋಪರಿ ನಿಹಿತಂ ಮುಕ್ತಾಚೂರ್ಣೇ ದರಸ್ಮಿತಂ ತಸ್ಯಾ: /
ಆಸ್ವಾದ್ಯೋಚ್ಛೂನಮಿದಂ ಮನೋ ಮಮ ಸ್ನೇಹಮಭಿಲಷತಿ //

ಕನ್ನಡ ಅನುವಾದ 
    ' ಈ ಸುಂದರಿಯ ನಗು, ಇವಳ ಅಧರದಳದ ಮೇಲಿರುವ ಮುತ್ತಿನ ಚೂರ್ಣದಂತಿದೆ! ಅದನ್ನು ಆಸ್ವಾದಿಸಿ ಪ್ರಫುಲ್ಲಿತವಾಗಿರುವ ನನ್ನ ಮನಸ್ಸು ಈಗ ಅವಳ ಸಂಪೂರ್ಣ ಪ್ರೇಮವನ್ನು ಆಶಿಸುತ್ತಿದೆ!' 
     ಹೆಣ್ಣಿನ ಸುಂದರ ನಗುವನ್ನು ಕವಿಯು ಇಲ್ಲಿ ಅವಳ ಅಧರವೆಂಬ ದಳದ ಮೇಲಿರುವ ಮುತ್ತಿನ ಚೂರ್ಣಕ್ಕೆ ಹೋಲಿಸುತ್ತಾನೆ! ಇಂಥ ಅದ್ಭುತ ನಗುವನ್ನು ಆಸ್ವಾದಿಸಿದ ಪ್ರೇಮಿಗೆ ಮನಸ್ಸು ಅರಳಿದ ಹೂವಿನಂತೆ ತುಂಬಿ ಬಂದಿದೆ! ಅವಳ ನಗುವೇ ಅಷ್ಟು ಆಪ್ಯಾಯಮಾನವಾಗಿರುವಾಗ ಇನ್ನು ಅವಳ ಪೂರ್ಣ ಪ್ರೇಮ ಹೇಗಿರಬೇಡ? ಅಂತೆಯೇ ಪ್ರೇಮಿಯು ಅವಳ ಪೂರ್ಣ ಪ್ರೇಮವನ್ನು ಈಗ ಅಪೇಕ್ಷಿಸುತ್ತಿದ್ದಾನೆ! ಎಂಥ ಜಡ ವ್ಯಕ್ತಿಯಲ್ಲೂ ಪ್ರೇಮದ ತರಂಗಗಳನ್ನು ಎಬ್ಬಿಸಬಲ್ಲದು ಹೆಣ್ಣಿನ ನಗು!

ಬುಧವಾರ, ಮೇ 6, 2026

ಐತಿಹಾಸಿಕ ಸ್ವಾರಸ್ಯಗಳು - ಕಾಲಾಶೋಕ ಯಾರು?

ಕಾಲಾಶೋಕನ ಹೆಸರು ಕೇಳಿರುವಿರಾ? ಚಂಡಾಶೋಕ ಗೊತ್ತು, ಧರ್ಮಾಶೋಕ ಗೊತ್ತು, ವೀತಶೋಕ ಗೊತ್ತು......ಈ ಕಾಲಾಶೋಕ ಯಾರು?! ಚಂಡಾಶೋಕ ಎಂದರೆ ಸಮ್ರಾಟ್ ಅಶೋಕನು ಬಹಳ ಆವೇಶದ ಸ್ವಭಾವದವನಾಗಿದ್ದಾಗ ಅವನನ್ನು ಕರೆಯುತ್ತಿದ್ದ ಹೆಸರು. ಧರ್ಮಾಶೋಕ ಎಂಬುದು ಅವನು ಬೌದ್ಧ ಧರ್ಮದ ಅನುಯಾಯಿಯಾದಾಗ ಧರ್ಮವನ್ನು ಪಾಲಿಸುತ್ತಿದ್ದುದರಿಂದ ಅವನನ್ನು ಕರೆಯುತ್ತಿದ್ದ ಹೆಸರು. ವೀತಶೋಕ ಅವನ ಸಹೋದರರಲ್ಲಿ ಉಳಿದುಕೊಂಡ ಏಕೈಕನು. ಹಾಗಿದ್ದರೆ ಕಾಲಾಶೋಕ ಯಾರು?
     ಕಾಲಾಶೋಕ, ಅಶೋಕನಿಗೆ ಸಂಬಂಧಿಸಿರದ ಬೇರೊಬ್ಬ ರಾಜ. ಅಶೋಕನಿಗಿಂತಲೂ ಮುಂಚಿನವನು. ಅವನು ಶಿಶುನಾಗ ವಂಶದ ಕೊನೆಯ ರಾಜ.‌ ಕಾಲಾಶೋಕ ಎಂದರೆ ಕಪ್ಪು ಅಶೋಕ ಎಂದು ಅರ್ಥ ಬರುತ್ತದೆ. ಅವನಿಗೆ ಕಾಕವರ್ಣ ಎಂದೂ ಹೆಸರಿತ್ತು. ಪ್ರಾಯಶಃ ಅವನು ಕಪ್ಪಗಿದ್ದುದರಿಂದ ಈ ಹೆಸರನ್ನಿಟ್ಟಿದ್ದರೋ ಏನೋ! 
     ಪ್ರಾಚೀನ ಭಾರತದ ರಾಜ್ಯಗಳನ್ನು ಮಹಾಜನಪದಗಳೆಂದು ಕರೆಯುತ್ತಿದ್ದರು. ಬೌದ್ಧ ಗ್ರಂಥಗಳು ಅಂಥ ಹದಿನಾರು ಮಹಾಜನಪದಗಳನ್ನು ಹೆಸರಿಸುತ್ತವೆ. ಗಾಂಧಾರ, ಮತ್ಸ್ಯ, ಕೋಸಲ, ಶೂರಸೇನ, ಕಾಂಭೋಜ, ವತ್ಸ, ಕುರು, ಪಾಂಚಾಲ, ಕಾಶಿ, ಅವಂತಿ, ಮಲ್ಲ, ವೃಜ್ಜಿ, ಅಂಗ, ಮಗಧ, ಚೇದಿ, ಅಶ್ಮಕ, ಇವೇ ಆ ಹದಿನಾಲ್ಕು ಮಹಾಜನಪದಗಳು. ಇವಲ್ಲದೆ ಇನ್ನೂ ಅನೇಕ ರಾಜ್ಯಗಳಿದ್ದವು. ಇವುಗಳಲ್ಲಿ ಮಗಧವು ದೊಡ್ಡ ಸಾಮ್ರಾಜ್ಯವಾಗಿ ಬೆಳೆಯಿತು. ಮಗಧ ದೇಶದಲ್ಲಿ ಹರ್ಯಂಕ ಸಾಮ್ರಾಜ್ಯ ಅಳುತ್ತಿತ್ತು. ಅದರ ಪ್ರಮುಖ ರಾಜ ಬಿಂಬಿಸಾರ. ಅವನು ಬುದ್ಧನ ಸಮಕಾಲೀನನಾಗಿದ್ದನು. ಅವನು ಒಳ್ಳೆಯ ರಾಜನಾಗಿದ್ದರೂ ದುರದೃಷ್ಟವಶಾತ್, ಅವನ ಮಗ ಅಜಾತಶತ್ರು ಅವನನ್ನು ಕೊಂದುಬಿಟ್ಟನು! ಅದಕ್ಕೆ ಕಾರಣ, ಬುದ್ಧನ ದಾಯಾದಿ ದೇವದತ್ತನ ದುರ್ಬೋಧೆ ಎನ್ನುತ್ತವೆ ಬೌದ್ಧ ಗ್ರಂಥಗಳು. ಆದರೆ ಜೈನ ಗ್ರಂಥಗಳ ಪ್ರಕಾರ, ಅಜಾತಶತ್ರು ಅವನನ್ನು ಬಂಧಿಸಿದ್ದು, ಕೊನೆಗೆ ತನ್ನ ತಾಯಿ ಚೆಲ್ಲನಳಿಂದ ತನ್ನ ತಪ್ಪನ್ನರಿತು, ತಂದೆಯ ಸರಪಣಿಗಳನ್ನು ಕತ್ತರಿಸಿ ಅವನನ್ನು ಬಂಧಮುಕ್ತನನ್ನಾಗಿಸಲು ಕಬ್ಬಿಣದ ದೊಣ್ಣೆ ಹಿಡಿದು ಕಾರಾಗೃಹಕ್ಕೆ ಅವನು ಓಡಿ ಬರುವಾಗ, ಅದನ್ನು ನೋಡಿ ತಪ್ಪು ತಿಳಿದು ಬಿಂಬಿಸಾರ ತಾನೇ ಆತ್ಮಹತ್ಯೆ ಮಾಡಿಕೊಂಡ! ಒಟ್ಟಿನಲ್ಲಿ ಮಗನ ದೆಸೆಯಿಂದ ತಂದೆ ಮೃತ್ಯುವಶನಾದ! 
      ಅಜಾತಶತ್ರುವಿಗೆ ಉದಯಭದ್ರ ಅಥವಾ ಉದಾಯಿನ್ ಎಂಬ ಪುತ್ರನಿದ್ದ. ಇವನೇ ಪಾಟಲಿಪುತ್ರ ನಗರವನ್ನು ನಿರ್ಮಿಸಿ ತನ್ನ ರಾಜಧಾನಿಯನ್ನು ರಾಜಗೃಹದಿಂದ ಅಲ್ಲಿಗೆ ವರ್ಗಾಯಿಸಿದ. ದುರದೃಷ್ಟವಶಾತ್ ಇವನೂ ತನ್ನ ತಂದೆ ಅಜಾತಶತ್ರುವನ್ನು ಕೊಂದ! ಅನಂತರ ಇವನ ಮಗ ಅನುರುದ್ಧ, ಅವನು ಮಗ ಮುಂಡ, ಮತ್ತು ಅವನ ಮಗ ನಾಗದಾಸಕ, ಮಗ ಅಪ್ಪನನ್ನು ಕೊಲ್ಲುವ ಅದೇ ದಾರಿಯಲ್ಲಿ ನಡೆದರು! ಇದರಿಂದ ಪ್ರಜೆಗಳು ರೋಸಿಹೋಗಿ ನಾಗದಾಸಕನನ್ನು ರಾಜ್ಯದಿಂದಲೇ ಓಡಿಸಿ ಒಬ್ಬ ಅಮಾತ್ಯನನ್ನು ಪಟ್ಟಕ್ಕೇರಿಸಿದರು. ಅವನೇ ಶಿಶುನಾಗ.‌ ಶಿಶುನಾಗನು ಪ್ರದ್ಯೋತರನ್ನು ಸೋಲಿಸಿ ಅವಂತಿಯನ್ನು ಗೆದ್ದು ವಶಪಡಿಸಿಕೊಂಡನು.‌ಈ ಶಿಶುನಾಗನ ಮಗನೇ ಕಾಲಾಶೋಕ. ಈ ಕಾಲಾಶೋಕ ಅಥವಾ ಕಾಕವರ್ಣ. ಕಾಲಾಶೋಕ, ತನ್ನ ರಾಜಧಾನಿಯನ್ನು ಗಿರಿವ್ರಜದಿಂದ ( ರಾಜಗೃಹ) ಪಾಟಲಿಪುತ್ರಕ್ಕೆ ಬದಲಿಸಿದ. ಆದರೆ ಆಗಾಗ ಅವನು ತನಗೆ ಪ್ರಿಯವಾಗಿದ್ದ ವೈಶಾಲಿಗೆ ಹೋಗುತ್ತಿದ್ದ.
 ಕಾಲಾಶೋಕ ನಮಗೆ ಏಕೆ ಮುಖ್ಯನಾಗುವನೆಂದರೆ, ಇವನ ಆಳ್ವಿಕೆಯ ಸಮಯದಲ್ಲೇ ಎರಡನೇ ಬೌದ್ಧ ಸಂಗೀತಿ ವೈಶಾಲಿಯಲ್ಲಿ ನಡೆಯಿತು. ಆಗ ಬುದ್ಧನು ಪರಿನಿರ್ವಾಣ ಹೊಂದಿ ನೂರು ವರ್ಷಗಳಾಗಿದ್ದವು. ವೃಜ್ಜಿ ಗಣದ ಕೆಲವು ಬೌದ್ಧ ಸಂನ್ಯಾಸಿಗಳು ಸಂಘದ ನಿಯಮಗಳನ್ನು ಸಡಿಲಗೊಳಿಸಬೇಕೆಂದು ತಗಾದೆ ತೆಗೆದಿದ್ದರು. ಅದನ್ನು ಚರ್ಚಿಸಲೆಂದೇ ಈ ಎರಡನೆಯ ಬೌದ್ಧ ಸಂಗೀತಿಯನ್ನು ನಡೆಸಲಾಯಿತು. ನಾಲ್ಕು ಬೌದ್ಧ ಸಂಗೀತಿಗಳು ನಡೆದವೆಂದು ಇಲ್ಲಿ ಸ್ಮರಿಸಬಹುದು. ಮೊದಲನೆಯದು ಅಜಾತಶತ್ರುವಿನ ಆಳ್ವಿಕೆಯಲ್ಲಿ ರಾಜಗೃಹದಲ್ಲಿ ನಡೆಯಿತು. ಎರಡನೆಯದು ಈಗ ಹೇಳಲಾಯಿತು. ಮೂರನೆಯದು ಸಮ್ರಾಟ್ ಅಶೋಕನ ಆಳ್ವಿಕೆಯಲ್ಲಿ ಪಾಟಲಿಪುತ್ರದಲ್ಲಿ ನಡೆದರೆ, ನಾಲ್ಕನೆಯದು ಕಾಶ್ಮೀರದಲ್ಲಿ ಕನಿಷ್ಕ ರಾಜನ ಆಳ್ವಿಕೆಯಲ್ಲಿ ನಡೆಯಿತು.‌
     ಇಂಥ ಕಾಲಾಶೋಕ ದುರಂತ ಅಂತ್ಯವನ್ನು ಕಂಡನು! ನೋಡಲು ಸುಂದರನಾಗಿ, ಕಟ್ಟುಮಸ್ತಾದ ದೇಹವನ್ನು ಹೊಂದಿದ್ದ ಒಬ್ಬ ಪುರುಷ, ಕಾಲಾಶೋಕನ ರಾಣಿಯನ್ನು ಒಮ್ಮೆ ಆಕರ್ಷಿಸಿದ! ಇವನು ಒಬ್ಬ ಕ್ಷೌರಿಕ ಹಾಗೂ ವೇಶ್ಯೆಯರಿಗೆ ಹುಟ್ಟಿದ ಮಗನಾಗಿದ್ದ! ಅವನು ರಾಣಿಯ ಪ್ರಿಯಕರನಾಗಿ ಅವಳ ಬೆಂಬಲದಿಂದ ಅರಮನೆಗೆ ಬಂದು ರಾಜನಿಗೆ ಹತ್ತಿರವಾದ. ರಾಜನ ವಿಶ್ವಾಸಗಳಿಸಿ, ಒಂದು ದಿನ, ಅವನನ್ನು ಪಾಟಲಿಪುತ್ರದ ಬಳಿ, ಅವನ ಕುತ್ತಿಗೆಯನ್ನು ಕಠಾರಿಯಿಂದ ಸೀಳಿ ಕೊಂದುಬಿಟ್ಟ! ಅನಂತರ, ಅವನ ಹತ್ತು ಪುತ್ರರಿಗೆ ಮೇಲ್ವಿಚಾರಕನಂತೆ ನಟಿಸುತ್ತಾ ಅವರೆಲ್ಲರನ್ನೂ ನಿಧಾನವಾಗಿ ಕೊಂದುಬಿಟ್ಟ! ರಾಣಿಯನ್ನು ವರಿಸಿ ರಾಜ್ಯವನ್ನು ವಶಪಡಿಸಿಕೊಂಡ! ಇವನು ಬೇರಾರೂ ಅಲ್ಲ! ಮಹಾಪದ್ಮನಂದ! ಇವನಿಗೆ ಎಂಟು ಪುತ್ರರು ಜನಿಸಿದರು! ಇವರೆಲ್ಲರೂ ಸೇರಿ ನವನಂದರೆನಿಸಿದರು ಹಾಗೂ ಇವರಿಂದ ನಂದ ವಂಶ ಆರಂಭವಾಯಿತು! ಇವರಲ್ಲಿ ಕೊನೆಯವನೇ ಧನನಂದ! ದೊಡ್ಡ ಸೈನ್ಯವನ್ನು ಇಟ್ಟುಕೊಂಡಿದ್ದ ಈ ನಂದರು ದುರಾಸೆಯ ಪ್ರವೃತ್ತಿಯುಳ್ಳವರಾಗಿದ್ದು ಪ್ರಜೆಗಳನ್ನು ಶೋಷಣೆ ಮಾಡಿದರು! ಇದರಿಂದ ಪ್ರಜೆಗಳು ಇವರನ್ನು ಇಷ್ಟಪಡಲಿಲ್ಲ. ಮುಂದೆ, ಆಚಾರ್ಯ ಚಾಣಕ್ಯನು ಚಂದ್ರಗುಪ್ತ ಮೌರ್ಯನ ಸಹಾಯದಿಂದ ಇವರ ದುರಾಡಳಿತವನ್ನು ಕೊನೆಗೊಳಿಸಿ, ಚಂದ್ರಗುಪ್ತ ಮೌರ್ಯನನ್ನು ರಾಜನಾಗಿ ಸ್ಥಾಪಿಸುವುದರ ಮೂಲಕ ಮೌರ್ಯ ಸಾಮ್ರಾಜ್ಯವನ್ನು ಆರಂಭಿಸಿದನು. ಅದು ಇನ್ನೊಂದು ರೋಚಕ ಕಥೆ.
    ಇದು ಬೌದ್ಧ,ಜೈನ ಗ್ರಂಥಗಳು ಹಾಗೂ ನಮ್ಮ ಪುರಾಣಗಳಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸಗಳಿಂದ ಕಂಡುಬರುತ್ತದೆ. ನಮ್ಮ ಪುರಾಣಗಳಲ್ಲಿ ಶಿಶುನಾಗ ಮತ್ತು ಕಾಕವರ್ಣ ( ಕಾಲಾಶೋಕ) ರನ್ನು ಬಿಂಬಿಸಾರ, ಅಜಾತಶತ್ರುಗಳಿಗೂ ಮೊದಲಿನವರೆಂದು ಹೇಳಲಾಗಿದ್ದು ಈ ಪಟ್ಟಿಯಲ್ಲಿ ಕೊನೆಯದಾಗಿ ನಂದಿವರ್ಧನ ಮತ್ತು ಮಹಾನಂದಿ ಎಂಬ ರಾಜರು ಬರುತ್ತಾರೆ. ಮಹಾನಂದಿಯು ಒಬ್ಬ ಶೂದ್ರ ಸ್ತ್ರೀಯಿಂದ ಪಡೆದ ಪುತ್ರನೇ ಮಹಾಪದ್ಮಪತಿ ಅಥವಾ ಮಹಾಪದ್ಮನಂದ. ಅವನು ಎಲ್ಲಾ ಕ್ಷತ್ರಿಯರನ್ನೂ ನಾಶಮಾಡಿ ನಂದವಂಶವನ್ನು ಆರಂಭಿಸಿದ. ಜೈನ ಗ್ರಂಥ ಪರಿಶಿಷ್ಟ ಪರ್ವದ ಪ್ರಕಾರ, ಮಹಾಪದ್ಮನಂದನು ಒಬ್ಬ ಕ್ಷೌರಿಕ ಹಾಗೂ ವೇಶ್ಯೆಯರಿಗೆ ಹುಟ್ಟಿದ ಮಗನಾಗಿದ್ದ. ಕುರ್ಟಿಯಸ್ ಎಂಬ ಗ್ರೀಕ್ ಇತಿಹಾಸಕಾರನೂ ಅವನು ಒಬ್ಬ ಕ್ಷೌರಿಕ ಎಂದು ಹೇಳುತ್ತಾ ಮೇಲಿನ ಕಥೆ ಕೊಡುತ್ತಾನೆ. ಬೌದ್ಧ ಗ್ರಂಥ ಮಹಾವಂಶದ ಪ್ರಕಾರ, ಅವನು ಉಗ್ರಸೇನನೆಂಬ ಗಡಿಯಲ್ಲಿನ ಕಳ್ಳರ ದೊರೆಯಾಗಿದ್ದು ರಾಜ್ಯಗಳ ಮೇಲೆ ಆಕ್ರಮಣ ಮಾಡುತ್ತಾ ಅವುಗಳನ್ನು ಕಿತ್ತುಕೊಳ್ಳುತ್ತಿದ್ದ. ಹಾಗೆಯೇ ಮಗಧವನ್ನೂ ಆಕ್ರಮಿಸಿ ವಶಪಡಿಸಿಕೊಂಡ. ಇತರ ಎಂಟು ನಂದರು ಅವನ ಸಹೋದರರು. ‌ಹೀಗೆ ನವನಂದರ ಬಗ್ಗೆ ಪುರಾಣಗಳು, ಬೌದ್ಧ ಮತ್ತು ಜೈನ ಗ್ರಂಥಗಳಲ್ಲಿ ಸ್ವಲ್ಪ ವ್ಯತ್ಯಾಸಗಳಿವೆ. ಬಾಣಭಟ್ಟನ ಹರ್ಷಚರಿತೆಯಲ್ಲಿ ಕಾಲಾಶೋಕ ಅಥವಾ ಕಾಕವರ್ಣನು ಕಠಾರಿಯ ಇರಿತದಿಂದ ಸತ್ತ ಉಲ್ಲೇಖವಿದೆ. ಅವಂತಿಯ ಪ್ರದ್ಯೋತನು ಬಿಂಬಿಸಾರನ ಸಮಕಾಲೀನನಾಗಿದ್ದು ಪ್ರದ್ಯೋತರೆಂಬ ವಂಶಾವಳಿಯನ್ನು ಆರಂಭಿಸಿದ.‌ ಇವನಿಗೂ ಬಿಂಬಿಸಾರನಿಗೂ ವೈರತ್ವವಿತ್ತು. ಅಂದರೆ ಮಗಧಕ್ಕೂ ಅವಂತಿಗೂ ವೈರತ್ವವಿತ್ತು. ಶಿಶುನಾಗನು ಪ್ರದ್ಯೋತರನ್ನು ಸೋಲಿಸಿ ಅವಂತಿಯನ್ನು ವಶಪಡಿಸಿಕೊಂಡನೆಂದು ಪುರಾಣಗಳಲ್ಲಿ ಹೇಳಲಾಗಿದೆ. ಆದರೆ ಅದೇ ಪುರಾಣಗಳ ಪ್ರಕಾರ ಅವನು ಬಿಂಬಿಸಾರನಿಗೂ ಪೂರ್ವದಲ್ಲಿದ್ದಿದ್ದರೆ ಹಾಗೆ ಮಾಡಲಾಗುತ್ತಿರಲಿಲ್ಲ. ಹಾಗಾಗಿ, ಅವನು ಮತ್ತು ಅವನ ಪುತ್ರ ಕಾಲಾಶೋಕ, ಬಿಂಬಿಸಾರ, ಅಜಾತಶತ್ರುಗಳ ನಂತರ ಇರುವ ಬೌದ್ಧ ಗ್ರಂಥಗಳ ಪಟ್ಟಿಯೇ ಹೆಚ್ಚು ಸಮರ್ಪಕ ಎಂದು ಇತಿಹಾಸಕಾರರಾದ ಆರ್.ಸಿ.ಮಜುಂದಾರರು ಅಭಿಪ್ರಾಯಪಡುತ್ತಾರೆ.
      ಹೀಗೆ ಕಾಲಾಶೋಕ ನಮಗೆ ಅಷ್ಟು ಪರಿಚಿತವಲ್ಲದ ಹೆಸರು. ಅವನ ಹೆಂಡತಿಯ ಮೋಸದಿಂದ ಅವಳ ಪ್ರಿಯಕರ ಮಹಾಪದ್ಮನಂದನಿಂದ ಕೊಲ್ಲಲ್ಪಟ್ಟ ಅವನಿಂದ ಶಿಶುನಾಗ ವಂಶ ಕೊನೆಯಾಗಿ ನಂದವಂಶ ಆರಂಭವಾಯಿತು. 

ಸೋಮವಾರ, ಮೇ 4, 2026

ಸುಂದರೀಶತಕ -೩೩

ಸಂಸ್ಕೃತ ಮೂಲ 

ಅಂಗಂ ಕೋಮಲಮಂಗಾದಧರೋsಧರತೋsಪಿ ಚಂದ್ರಮುಖಿ ವಚನಮ್ /
ವಚನಾದಪಿ ಸ್ಮಿತಂ ತೇ ತತ್ಕಥಮಂತರ್ಭಿನತ್ತಿ ಮಮ //

ಕನ್ನಡ ಅನುವಾದ 

     ' ಎಲೈ ಚಂದ್ರಮುಖಿ! ನಿನ್ನ ದೇಹವು ಬಹಳ ಕೋಮಲವಾಗಿದೆ! ನಿನ್ನ ದೇಹಕ್ಕಿಂತಲೂ ನಿನ್ನ ಅಧರ ಬಹಳ ಕೋಮಲವಾಗಿದೆ! ಆ ಅಧರಕ್ಕಿಂತಲೂ ನಿನ್ನ ಮಾತು ಕೋಮಲವಾಗಿದೆ! ಇಷ್ಟು ಕೋಮಲವಾಗಿದ್ದರೂ ನಿನ್ನ ನಗುವು ಏಕೆ ನನ್ನ ಹೃದಯವನ್ನು ಸೀಳುತ್ತಿದೆ?!' 
    ಅತ್ಯಂತ ಕೋಮಲವಾದ ಸುಂದರಿಯ ನಗುವು ಪ್ರೇಮಿಯ ಹೃದಯಕ್ಕೆ ಹಿತವನ್ನುಂಟುಮಾಡಬೇಕು. ಆದರೆ ಅದು ಪ್ರೇಮಿಗೆ ಸಿಗದೇ ದೂರವಾಗಿದ್ದಾಗ ವಿರಹವೇದನೆಯುಂಟುಮಾಡಿ ಹೃದಯವನ್ನು ಸೀಳುವಂತಾಗುತ್ತದೆ! ಇಷ್ಟು ಕೋಮಲವಾದ ಸುಂದರಿಯ ನಗುವು ಹೇಗೆ ನನ್ನ ಹೃದಯವನ್ನು ಸೀಳುತ್ತಿದೆ ಎಂದು ಪ್ರೇಮಿಯ ಮೂಲಕ ಹೇಳಿಸುತ್ತಾ ಕವಿಯು ಸಂದೇಹಾಲಂಕಾರದ ಮೂಲಕ ಸುಂದರಿಯ ನಗುವನ್ನು ವರ್ಣಿಸುತ್ತಾನೆ 

ಭಾನುವಾರ, ಮೇ 3, 2026

ಸುಂದರೀಶತಕ -೩೨

ಸಂಸ್ಕೃತ ಮೂಲ 

ಸುಂದರಿ ತವ ಸ್ಮಿತೇನ ಸ್ಫುರಿತಾಧರಪಲ್ಲವಾಂಕಮಿಲಿತೇನ /
ಮಕರಧ್ವಜನೃಪಹಸ್ತೇ ವದ ಕಸ್ಯ ಮನೋ ನ ವಿಕ್ರೀತಮ್ //

ಕನ್ನಡ ಅನುವಾದ 

     ಎಲೈ ಸುಂದರಿ! ಅದುರುತ್ತಿರುವ ನಿನ್ನ ಪಲ್ಲವಾಧರದೊಂದಿಗೆ ಮಿಳಿತವಾಗಿರುವ ನಿನ್ನ ನಗುವಿನಿಂದ ಯಾರ ಮನಸ್ಸು ತಾನೇ ಕಾಮದೇವ ಮಹಾರಾಜನ ಹಸ್ತಕ್ಕೆ ವಿಕ್ರೀತವಾಗುವುದಿಲ್ಲ ಹೇಳು!' 
      ಸುಂದರಿಯ ಸುಂದರ ನಗುವಿನ ಮೂಲಕ ಮಹಾರಾಜ ಕಾಮದೇವನು ಯುವಜನರ ಮನಸ್ಸನ್ನು ಖರೀದಿಸುತ್ತಿದ್ದಾನೆ! ಇಂಥ ನಗುವಿನ ಮೂಲಕ ಯಾರ ಮನಸ್ಸು ತಾನೇ ವಿಕ್ರೀತವಾಗುವುದಿಲ್ಲ ಎಂದು ಕೇಳುತ್ತಾ ಕವಿಯು ಸುಂದರಿಯ ನಗುವನ್ನು ವರ್ಣಿಸುತ್ತಾನೆ.

ಸುಂದರೀಶತಕ -೩೧

ಸಂಸ್ಕೃತ ಮೂಲ 

ಜಯತಿ ಸ್ಮಿತಪ್ರಕಾರ: ಸ್ಫುರದಧರೋಪಾಂತವಿಶ್ರಮಸ್ತಸ್ಯಾ: /
ಕುಸುಮಾಂಜಲಿರಿವ ದತ್ತೋ ನವೇನ ವಯಸಾ ರತೀಶಾಯ //

ಕನ್ನಡ ಅನುವಾದ 

    ' ಈ ಸುಂದರಿಯ ಅದುರುತ್ತಿರುವ ಅಧರದ ಅಂಚಿನಲ್ಲಿ ಮೂಡಿರುವ ನಗು, ಇವಳ ನವಯೌವನವು ರತಿಪತಿಯಾದ ಕಾಮದೇವನಿಗೆ ನೀಡಿದ ಪುಷ್ಪಾಂಜಲಿಯಂತಿದ್ದು ವಿಜಯಶಾಲಿಯಾಗುತ್ತದೆ!' 
      ಸುಂದರಿಯ ಅದುರುತ್ತಿರುವ ಅಧರದ ಅಂಚಿನಲ್ಲಿ ಮೂಡಿರುವ ನಗು ಒಂದು ಪುಷ್ಪಾಂಜಲಿ, ಅಂದರೆ ಹೂವಿನ ಅರ್ಪಣೆಯಂತಿದೆ ಎನ್ನುತ್ತಾನೆ ಕವಿ. ಆ ಹೂವಿನ ಅರ್ಪಣೆಯನ್ನು ಯಾರು ಯಾರಿಗೆ ಮಾಡುತ್ತಿದ್ದಾರೆ? ಅವಳ ನವಯೌವನವೇ ರತಿಪತಿಯಾದ ಕಾಮದೇವನಿಗೆ ಅರ್ಪಣೆ ಮಾಡುತ್ತಿದೆ! ಇಂಥ ನಗು ವಿಜಯಶಾಲಿಯಾಗುತ್ತದೆ ಎನ್ನುತ್ತಾ, ಕವಿಯು ಸುಂದರಿಯ ಸುಂದರ ನಗು ಹಾಗೂ ನವಯೌವನವನ್ನು ವರ್ಣಿಸುತ್ತಾನೆ.

ಸುಂದರೀಶತಕ -೩೦

ಸಂಸ್ಕೃತ ಮೂಲ 

ಕುಸುಮಶರನೃಪತಿಶಾಸನಮಭಿನವಸೌಂದರ್ಯಸಾರಸೌಭಾಗ್ಯಮ್  /
ಯುವಜನಮನೋವಿನೋದೋ ಜಯತಿ ಪ್ರಥಮಂ ವಯಸ್ತಸ್ಯಾ:  //

ಕನ್ನಡ ಅನುವಾದ 

      ಕಾಮದೇವ ಮಹಾರಾಜನ ಶಾಸನವು ಈ ಸುಂದರಿಯ ನವಯೌವನ ಸೌಂದರ್ಯಸಾರಸೌಭಾಗ್ಯ! ಯುವಜನರ ಮನಸ್ಸಿಗೆ ವಿನೋದವಾಗಿರುವ ಇವಳ ಈ ಪ್ರಥಮ ವಯಸ್ಸು ಜಯಶಾಲಿಯಾಗುತ್ತದೆ! ' 
      ಸುಂದರಿಯಲ್ಲಿ ಬಂದಿರುವ ನವಯೌವನದ ಸೌಂದರ್ಯವನ್ನು ಕಾಮದೇವನೆಂಬ ರಾಜನ ಶಾಸನಕ್ಕೆ ಹೋಲಿಸುತ್ತಾನೆ ಕವಿ.‌ ಈ ಶಾಸನವೆಂಬ ಸೌಂದರ್ಯ, ಯುವಜನರ ಮನಸ್ಸಿಗೆ ವಿನೋದವುಂಟುಮಾಡುತ್ತಿದೆ! ಇವಳ‌ ಸೌಂದರ್ಯವನ್ನು ನೋಡಿ ಅವರು ಸಂತೋಷಪಡುತ್ತಿದ್ದಾರೆ! ಇಂಥ ಸೌಂದರ್ಯ, ವಿಜಯಶಾಲಿಯಾಗುತ್ತದೆ ಎನ್ನುತ್ತಾನೆ. 

ಸುಂದರೀಶತಕ -೨೯

ಸಂಸ್ಕೃತ ಮೂಲ 

ಶರಣಮಿವ ಯಾಚಮಾನಂ ಕ್ವಚಿತ್ಕ್ವಚಿತದ್ಬಾಲ್ಯಮಂಗೇಷು /
ಭ್ರಮತಿ ಮನೋಜನಿದೇಶಾದಧಿಕಾರಿಣಿ ಯೌವನೇ ಭವತಿ //

ಕನ್ನಡ ಅನುವಾದ 

     ' ಮನೋಜನಾದ ಕಾಮದೇವನ ಆಜ್ಞೆಯಂತೆ ಯೌವನವು ಈ ಸುಂದರಿಯ ಶರೀರದಲ್ಲಿ ಆಗಮಿಸಿ ಅಧಿಕಾರಿಣಿಯಾದಾಗ, ಅದರಿಂದ ಉಳಿಯಲು ಬಾಲ್ಯವು ಆಶ್ರಯ ಬೇಡುವಂತೆ ಕೆಲವಾರು ಅಂಗಾಂಗಗಳಲ್ಲಿ ಪರಿಭ್ರಮಿಸುತ್ತಿದೆ!' 
      ಸುಂದರಿಯ ಶರೀರಕ್ಕೆ ಈಗಷ್ಟೇ ಯೌವನವು ಬಂದಿದೆ! ಆದರೆ ಬಾಲ್ಯವು ಇನ್ನೂ ಪೂರ್ತಿ ಹೋಗಿಲ್ಲ. ಹಾಗಾಗಿ ಇದು ವಾಯು:ಸಂಧಿಕಾಲದ ಚಿತ್ರಣ. ಯೌವನವು ಬಂದರೂ ಬಾಲ್ಯದ ಆ ಮುಗ್ಧ ಭಾವ, ಕಂಗಳ ಚಂಚಲತೆ, ತುಂಟು ಮುಖ, ಮುದ್ದು ಮಾತು, ಮೊದಲಾದವು ಇನ್ನೂ ಸ್ವಲ್ಪ ಸ್ವಲ್ಪ ಇವೆ. ಹೀಗೆ, ಇದು ನವಯೌವನವು ಬಾಲ್ಯದೊಂದಿಗೆ ಬೆರೆತಿರುವ ಮಧುರ ಭಾವ! ಇದನ್ನು ಕವಿಯು ಸ್ವಾರಸ್ಯಕರವಾಗಿ ಚಿತ್ರಿಸುತ್ತಾನೆ. ಕಾಮದೇವನ ಆಜ್ಞೆಯಂತೆ ದೇಹಕ್ಕೆ ಯೌವನವು ಬಂದು ಅಧಿಕಾರಿಣಿಯಾದಾಗ, ಬಾಲ್ಯವು ತಾನು ನಾಶವಾಗುವೆನೆಂದು ಹೆದರಿ, ಹೇಗಾದರೂ ಉಳಿಯಲು ಕೆಲವು ಅಂಗಾಂಗಗಳಲ್ಲಿ ತನ್ನನ್ನು ಉಳಿಸಿಕೊಳ್ಳಲು ಆಶ್ರಯ ಬೇಡುವಂತೆ ಅಲ್ಲಲ್ಲಿ ಪರಿಭ್ರಮಿಸುತ್ತಿದೆ ಎಂದು ವರ್ಣಿಸುತ್ತಾನೆ!