ಸುಂದರೀಶತಕ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಸುಂದರೀಶತಕ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಜುಲೈ 26, 2026

ಸುಂದರೀಶತಕ -೬೯

ಸಂಸ್ಕೃತ ಮೂಲ 

ಶಿತಿಕಂಠಕಂಠಕಾಂತಿಪ್ರತಿಮಲ್ಲೇ ಸ್ಫುರತಿ ಸರ್ವತಸ್ತಿಮಿರೇ /
ಧನ್ಯಾಯ ವದತಿ ಸುಂದರಿ ತವಾಗಮಂ ಪರಿಮಲೋತ್ಕರ್ಷ: //

ಕನ್ನಡ ಅನುವಾದ 

   ' ಹೇ ಸುಂದರಿ! ಶಿತಿಕಂಠ ( ನೀಲಕಂಠ)ನ ಕಂಠದ ಕಾಂತಿಯನ್ನು ಸ್ಪರ್ಧಿಸುವಂತೆ ಎಲ್ಲೆಲ್ಲೂ ಅಂಧಕಾರ ಕವಿದಿರುವಾಗ, ನಿನ್ನ ಉತ್ಕರ್ಷ ಪರಿಮಳವೇ ಆ ನಿನ್ನ ಧನ್ಯ ಪ್ರಿಯತಮನಿಗೆ ನಿನ್ನ ಆಗಮನದ ವಿಷಯವನ್ನು ಹೇಳುತ್ತಿದೆ!' 
    ಇದೊಂದು ಉತ್ಪ್ರೇಕ್ಷಿತ ಸ್ವಾರಸ್ಯಕರ ಶೃಂಗಾರ ಪದ್ಯ! ಇಲ್ಲಿ ನಾಯಕನು ರಾತ್ರಿ ತನ್ನ ಪ್ರಿಯತಮೆಗಾಗಿ ಕಾಯುತ್ತಿದ್ದಾನೆ. ರಾತ್ರಿಯ ಕತ್ತಲು ಹೇಗಿದೆಯೆಂದರೆ, ಶಿತಿಕಂಠ ಅಥವಾ ನೀಲಕಂಠನ, ಅಂದರೆ ಶಿವನ ಕಂಠದ ಕಾಂತಿಯನ್ನು ಸ್ಪರ್ಧಿಸುವಂತಿದೆ! ಶಿವನು ವಿಷ ಕುಡಿದು ಅದು ಅವನ ಕಂಠದಲ್ಲೇ ನಿಂತಿದ್ದರಿಂದ ಅದು ನೀಲಿ ಅಥವಾ ಕಪ್ಪಾಯಿತೆಂದು ಎಲ್ಲರಿಗೂ ಗೊತ್ತಿದೆ. ಹಾಗಾಗಿಯೇ ಅವನಿಗೆ ನೀಲಕಂಠ ಅಥವಾ ಶಿತಿಕಂಠ ಎಂಬ ಹೆಸರುಗಳು ಬಂದಿವೆ. ಆ ಶಿವನ ಕಂಠದ ಕಪ್ಪನ್ನೂ ಮೀರಿಸಿ ರಾತ್ರಿಯ ಕತ್ತಲು ಎಲ್ಲೆಲ್ಲೂ ಹರಡಿದೆ! ಯಾರೂ ಯಾರಿಗೂ ಕಾಣಿಸುತ್ತಿಲ್ಲ! ಇಂಥ ಸಂದರ್ಭದಲ್ಲಿ ನಾಯಕಿಯು ತನ್ನ ಸಖಿಯೊಂದಿಗೆ ಬಂದಿದ್ದಾಳೆ. ಆದರೆ ಕತ್ತಲಿನಲ್ಲಿ ಅವಳು ಬಂದಳೆಂದು ನಾಯಕನಿಗೆ ಗೊತ್ತಾಗುವುದಾದರೂ ಹೇಗೆ? ಅದಕ್ಕೆ ಅವಳ ಸಖಿಯು, ಅವಳ ಉತ್ಕರ್ಷ ಪರಿಮಳವೇ ಅವಳು ಬಂದಳೆಂದು ಅವಳ ಧನ್ಯ ಪ್ರಿಯತಮನಿಗೆ ಹೇಳುತ್ತಿದೆ ಎಂದು ಹೇಳುತ್ತಿದ್ದಾಳೆ! ಅಂದರೆ ನಾಯಕಿಯ ಮೈ ಪರಿಮಳ ಅಷ್ಟು ಸೊಗಸಾಗಿದೆ ಹಾಗೂ ಹೆಚ್ಚಾಗಿ ಪಸರಿಸುತ್ತಿದೆ! ನಾಯಕಿಯು ಕಾಣದಿದ್ದರೂ ಅವಳು ಬೀರುತ್ತಿರುವ ಪರಿಮಳದಿಂದಲೇ ಅವನಿಗೆ ಅವಳ ಬರುವಿಕೆಯು ತಿಳಿಯುತ್ತಿದೆ! ಎಂಥ ಸೊಗಸಾದ ಉತ್ಪ್ರೇಕ್ಷೆ! 

ಶನಿವಾರ, ಜುಲೈ 25, 2026

ಸುಂದರೀಶತಕ -೬೮

ಸಂಸ್ಕೃತ ಮೂಲ 

ಸಾಹಸಭವನಮದೂತಿಕಮವಲೋಕನದಾನವರ್ಧಮಾನಮಿದಮ್/
ಜಯತಿ ಕ್ವಚಿದಪಿ ಧನ್ಯೇ ಸುಂದರಿ ಸಹಜಂ ತವ ಪ್ರೇಮ //

ಕನ್ನಡ ಅನುವಾದ 

   ' ಎಲೈ ಸುಂದರಿ! ನಿನ್ನ ಸಹಜ ಪ್ರೇಮ ನನಗೊಂದು ಸಾಹಸಭವನ! ಅದು ದೂತಿಯಿಲ್ಲದೆ ಉಂಟಾಗಿದೆ! ನಿತ್ಯವೂ ನಿನ್ನ ನೋಟದಿಂದ ಅದು ವರ್ಧಿಸುತ್ತಿದೆ! ಹೇ ಧನ್ಯೆ! ಅದು ಎಂದೆಂದಿಗೂ ಜಯಿಸುತ್ತದೆ!' 
    ಇಲ್ಲಿ ಒಬ್ಬ ನಾಯಕನು ತನ್ನ ಪ್ರೇಮವು ಗೆದ್ದಿರುವುದಕ್ಕೆ ಸಂತೋಷಪಡುತ್ತಾ ತನ್ನ ಪ್ರಿಯತಮೆಯ ಬಳಿ ಈ ವಿಷಯವನ್ನು ಹೇಳುತ್ತಿದ್ದಾನೆ. ಪ್ರೇಮವು ಗೆಲ್ಲುವುದು ಅಷ್ಟು ಸುಲಭವಲ್ಲ. ಹಿಂದಿನ ಕಾಲದಲ್ಲಿ ಪ್ರೇಮಸಂದೇಶವನ್ನು ಕಳಿಸಲು ದೂತಿಯ ಸಹಾಯ ಪಡೆಯುತ್ತಿದ್ದರು.‌ ಆ ದೂತಿಯೂ ಯಾರಿಗೂ ತಿಳಿಯದಂತೆ ಹೋಗಿ ಪ್ರೇಮಸಂದೇಶವನ್ನು ನಾಯಕಿಯ ಬಳಿ ಅಥವಾ ನಾಯಕನ ಬಳಿ ಹೇಳುವುದು ಒಂದು ಕಷ್ಟಕರ ಕೆಲಸವೇ ಆಗಿತ್ತು! ಆದರೂ ಪ್ರೇಮವನ್ನು ನಾಯಕಿ ಅಥವಾ ನಾಯಕ ಒಪ್ಪುತ್ತಿದ್ದರೆಂದು ಹೇಳಲಾಗುತ್ತಿರಲಿಲ್ಲ. ಹಾಗಾಗಿ ದೂತಿಯು ಚೆನ್ನಾಗಿ ಮಾತನಾಡಬೇಕಾಗುತ್ತಿತ್ತು! ಭವಭೂತಿಯ ಮಾಲತಿಮಾಧವ ಮೊದಲಾದ ಅನೇಕ ಸಂಸ್ಕೃತ ನಾಟಕಗಳಲ್ಲಿ ಬೌದ್ಧ ಸಂನ್ಯಾಸಿನಿಯರು ದೂತಿಯ ಕೆಲಸ ಮಾಡುತ್ತಿದ್ದುದನ್ನು ನೋಡಬಹುದು! ನಾಯಕನ ಸ್ನೇಹಿತನೂ ನಾಯಕಿಯ ಸಖಿಯೂ ಅನೇಕ ಬಾರಿ ಸಹಾಯ ಮಾಡುತ್ತಿದ್ದರು. ಕೆಲವೊಮ್ಮೆ ನಾಯಕನ ಚಿತ್ರಪಟವನ್ನು ನಾಯಕಿಗೆ ತಲುಪುವಂತೆ ಮಾಡುವುದೋ ಇಲ್ಲವೇ ನಾಯಕಿಯ ಚಿತ್ರಪಟವನ್ನು ನಾಯಕನಿಗೆ ತಲುಪುವಂತೆ ಮಾಡುವುದೋ, ಹೂಮಾಲೆಯಲ್ಲಿ ಪತ್ರ ತಲುಪುವಂತೆ ಮಾಡುವುದೋ, ಹೀಗೆ ಅನೇಕ ಉಪಾಯಗಳನ್ನು ಮಾಡಬೇಕಿತ್ತು. ಆದರೆ ಇಲ್ಲಿ ಈ ಯಾವುವೂ ಇಲ್ಲದೆ ಪ್ರೇಮವು ಒಲಿದಿರುವುದು ನಾಯಕನಿಗೆ ಸಂತೋಷ ತಂದಿದೆ! ಅದು ಸಹಜವಾಗಿಯೇ ಉಂಟಾಗಿದೆ! ಹಾಗಾಗಿ ಅದೊಂದು ಸಾಹಸಭವನ ಎನ್ನುತ್ತಿದ್ದಾನೆ! ಅವಳ ನೋಟದಿಂದ ಅದು ನಿತ್ಯವೂ ವರ್ಧಿಸುತ್ತಿದೆ! ಹಾಗಾಗಿ ಅದು ಎಂದಿದ್ದರೂ ಗೆಲ್ಲುತ್ತದೆ ಎಂದು ತನಗೆ ತಾನೇ ಆಶ್ವಾಸನೆ ಕೊಟ್ಟುಕೊಳ್ಳುತ್ತಾ ಅವಳಿಗೂ ಆಶ್ವಾಸನೆ ಕೊಡುತ್ತಿದ್ದಾನೆ.

ಗುರುವಾರ, ಜುಲೈ 23, 2026

ಸುಂದರೀಶತಕ -೬೭

ಸಂಸ್ಕೃತ ಮೂಲ 

ತವ ರಥ್ಯಾ ರಾಜಗೃಹಂ ಪ್ರೇಮಧನಂ ಕಿಂ ಚ ಪರಿಜನೋ ಬಂಧು: /
ಸಖ್ಯೋ ಮೂರ್ತಾ: ಪ್ರಾಣಾ: ಸುಂದರಿ ಕಿಮತೋ ಮಮಾಕಾಂಕ್ಷ್ಯಮ್ //

ಕನ್ನಡ ಅನುವಾದ 

    ' ನಿನ್ನ ಮಾರ್ಗವೇ ನನಗೆ ರಾಜಗೃಹ! ನಿನ್ನ ಪ್ರೇಮವೇ ನನಗೆ ಧನ! ನಿನ್ನ ಪರಿಜನರೇ ನನಗೆ ಬಂಧುಗಳು! ನಿನ್ನ ಸಖಿಯರೇ ನನ್ನ ಮೂರ್ತರೂಪದ ಪ್ರಾಣಗಳು! ಹೇ ಸುಂದರಿ! ನನಗೆ ಇನ್ನಾವ ಆಕಾಂಕ್ಷೆ ಬೇಕು?' 
    ಇದು ಒಬ್ಬ ಪತಿಯು ತನ್ನ ನೂತನ ಪತ್ನಿಗೆ ಏಕಾಂತದಲ್ಲಿ ಹೇಳುತ್ತಿರುವಂತಿದೆ! ಹೊಸದಾಗಿ ಮದುವೆಯಾದ ಹೆಣ್ಣಿಗೆ ಪತಿಯು ಹೀಗೆ ಆಶ್ವಾಸನೆ ಕೊಟ್ಟು ಅವಳನ್ನು ಒಲಿಸಿಕೊಳ್ಳಬೇಕು. ಹೆಣ್ಣಿಗೆ ಗಂಡು ಸಂಪೂರ್ಣ ಅವಳ ಕಡೆಯಿದ್ದಾನೆ ಎಂದು ಆಶ್ವಾಸನೆ ಸಿಕ್ಕಿದರೆ ಅವಳು ಅವನನ್ನು ಚೆನ್ನಾಗಿ ಪ್ರೀತಿಸಿ ಅವನ ಸೇವೆ ಮಾಡುತ್ತಾಳೆ. ಅವನೂ ಕೇವಲ ಔಪಚಾರಿಕವಾಗಿಯಲ್ಲದೆ ನಿಜವಾಗಿಯೂ ಅವಳನ್ನು ಗಮನಿಸಿಕೊಳ್ಳಬೇಕು. ಅವಳ ಆಸಕ್ತಿಗಳನ್ನು ಅವನು ತನ್ನವೆಂಬಂತೆ ಇಷ್ಟಪಡಬೇಕು. ಅಂತೆಯೇ ಇಲ್ಲಿ ಪತಿಯು ತನ್ನ ಪತ್ನಿಗೆ ಅವಳ ಮಾರ್ಗವೇ ತನಗೆ ರಾಜಗೃಹದಂತೆ, ಅವಳ ಪ್ರೇಮವೇ ತನಗೆ ಧನ, ಅವಳ ಪರಿಜನರೇ ತನಗೆ ಬಂಧುಗಳು, ಅವಳ ಸಖಿಯರೇ ತನ್ನ ಪ್ರಾಣಗಳು, ಅವಳನ್ನು ಬಿಟ್ಟು ತನಗೆ ಇನ್ನಾವ ಆಕಾಂಕ್ಷೆ ಬೇಕು ಎನ್ನುತ್ತಿದ್ದಾನೆ. ಹೀಗೆ ಅವನಿಗೆ ಅವಳೇ ಎಲ್ಲವೂ ಆಗಿದ್ದಾಳೆ. ಅವಳ ಪ್ರೇಮದಲ್ಲಿ ಅವನು ಪೂರ್ತಿ ಒಂದಾಗಿದ್ದಾನೆ.‌ ಅವನಿಗೆ ಅವಳನ್ನು ಬಿಟ್ಟು ಇನ್ನೇನೂ ಆಸೆಯಿಲ್ಲ. ಇಂಥ ಪತಿ ಸಿಗುವುದು ಕಷ್ಪವಲ್ಲವೇ? ಇಂಥ ಪತಿಯಿದ್ದರೆ ಅವನ ಪತ್ನಿಯೂ ಅವನನ್ನು ಹಾಗೆಯೇ ಪ್ರೀತಿಸುತ್ತಾಳೆ. ಇದೊಂದು ಮಾದರಿ ಎನ್ನಬಹುದಾದರೂ, ಯಾವಾಗಲೂ ಹಾಗೆ ಇರುವುದಿಲ್ಲ ಎನ್ನಬಹುದಾದರೂ ಕವಿಯು ಅಂಥ ಒಂದು ಮಾದರಿಯನ್ನು ಇಲ್ಲಿ ತೋರಿಸಿದ್ದಾನೆ.‌

ಮಂಗಳವಾರ, ಜುಲೈ 21, 2026

ಸುಂದರೀಶತಕ -೬೬

ಅಯಿ ಪಥಿಕ ರಕ್ಷ ಜೀವಂ ಪರಿಹರ ದೂರೇಣ ಕೇತಕೀಕುಸುಮಮ್ /
ಇಹ ವಸತಿ ಪುಷ್ಪಧನ್ವಾ ಸ್ಮರಹರನಯನಾನ್ನಿರಾತಂಕ: //

ಕನ್ನಡ ಅನುವಾದ 

    ಒಬ್ಬ ಪ್ರಯಾಣಿಕ ಇನ್ನೊಬ್ಬ ಪ್ರಯಾಣಿಕನಿಗೆ ಹೇಳುತ್ತಾನೆ, ' ಎಲೈ ಪ್ರಯಾಣಿಕ! ನಿನ್ನ ಜೀವವನ್ನು ರಕ್ಷಿಸಿಕೋ! ಈ ಕೇತಕೀ ಪುಷ್ಪವನ್ನು ದೂರದಿಂದಲೇ ಪರಿತ್ಯಜಿಸು! ಏಕೆಂದರೆ ಇದರಲ್ಲಿ ಶಿವನಿಂದ ಭಸ್ಮನಾದ ಕಾಮದೇವನು ಅವನ ನಯನದ ಭಯದಿಂದ ದೂರವಾಗಿ ನಿರಾತಂಕದಿಂದ ನೆಲೆಸಿದ್ದಾನೆ!' 
    ಇಲ್ಲಿ ಕವಿಯು ಬಹಳ ಸೊಗಸಾದ ಕಲ್ಪನೆಯನ್ನು ಮಾಡಿದ್ದಾನೆ. ಕೇತಕಿ ಪುಷ್ಪ ಅಥವಾ ಕೇದಗೆ ಅಥವಾ ತಾಳೆ ಹೂವು ಬಹಳ ಸುಗಂಧಿತವಾದ, ಸಮ್ಮೋಹನಗೊಳಿಸುವಂಥ ಒಂದು ಹೂವು. ಒಬ್ಬ ಪ್ರಯಾಣಿಕ ಇನ್ನೊಬ್ಬ ಪ್ರಯಾಣಿಕನಿಗೆ, ಇದರಲ್ಲಿ ಕಾಮದೇವನಿದ್ದಾನೆ, ಹಾಗಾಗಿ ಈ ಹೂವನ್ನು ದೂರದಿಂದಲೇ ಪರಿತ್ಯಜಿಸಿ ಜೀವವನ್ನು ರಕ್ಷಿಸಿಕೋ ಎಂದು ಸ್ವಾರಸ್ಯಕರವಾಗಿ ಹೇಳುತ್ತಿದ್ದಾನೆ. ಆ ಹೂವಿನಲ್ಲಿರುವ ಕಾಮದೇವನ ಸಂಪರ್ಕಕ್ಕೆ ಬಂದರೆ ಅವನು ತನ್ನ ಪುಷ್ಪ ಬಾಣಗಳನ್ನು ಬಿಟ್ಟು ನಿನ್ನನ್ನು ಪ್ರೇಮದಲ್ಲಿ ಬೀಳಿಸುತ್ತಾನೆ ಜೋಪಾನ ಎಂಬ ಧಾಟಿಯಲ್ಲಿ ಹೇಳುತ್ತಿದ್ದಾನೆ. ಕಾಮದೇವನು ಈ ಹೂವಿನಲ್ಲಿ ಏಕಿದ್ದಾನೆ ಎಂದರೆ, ತನ್ನನ್ನು ಮೂರನೆಯ ಕಣ್ಣಿನಿಂದ ಭಸ್ಮ ಮಾಡಿದ ಶಿವನಿಂದ, ಅವನ ಭಯದಿಂದ ದೂರವಾಗಿ ಇಲ್ಲಿ ನಿರಾತಂಕವಾಗಿ ಇದ್ದಾನೆ ಎಂದು ಹೇಳುತ್ತಿದ್ದಾನೆ! ಇದೇಕೆ ಎಂದು ಅರ್ಥ ಮಾಡಿಕೊಳ್ಳಲು ಎರಡು ಪೌರಾಣಿಕ ಪ್ರಸಂಗಗಳನ್ನು ತಿಳಿದಿರಬೇಕು. 
     ಒಂದು, ದೇವತೆಗಳು ತಾರಕಾಸುರನನ್ನು ಸಂಹರಿಸಲು ಶಿವನಿಂದ ಪುತ್ರಜನನವಾಗಲೆಂದೂ ಅದಕ್ಕೆ ಅವನಿಗೆ ಪಾರ್ವತಿಯ ಮೇಲೆ ಮನಸ್ಸಾಗಲೆಂದೂ ಅವನ ತಪಸ್ಸನ್ನು ಕೆಡಿಸಲು ಮನ್ಮಥನನ್ನು ಕಳಿಸಿದ ಕಥೆ. ಮನ್ಮಥನು ಶಿವನ ಮೇಲೆ ಬಾಣ ಬಿಡಲು ಹೊರಟಾಗ, ಮನಸ್ಸು ಕಲಕಿದಂತಾಗಿ ಶಿವನು ಕೋಪದಿಂದ ತನ್ನ ಮೂರನೆಯ ಕಣ್ಣಿನಿಂದ ಅವನನ್ನು ಭಸ್ಮ ಮಾಡಿದ. ಹೀಗಾಗಿ ಕಾಮದೇವನಿಗೆ ಶಿವನೆಂದರೆ ಭಯ. ಆದರೆ ಅವನು ಶಿವನಿಂದ ತಪ್ಪಿಸಿಕೊಳ್ಳುವುದು ಹೇಗೆ?  ಶಿವನು ಬರಲಾಗದ, ಅಥವಾ ಬರಲು ಇಷ್ಟಪಡದ ಸ್ಥಳಕ್ಕೆ ಹೋಗುವುದರ ಮೂಲಕ. ಅದು ಕೇತಕಿ ಪುಷ್ಪ. ಶಿವನಿಗೆ ಇಷ್ಟವಿಲ್ಲದ ಪುಷ್ಪ. ಅದೇಕೆ? ಅದಕ್ಕೆ ಇನ್ನೊಂದು ಪೌರಾಣಿಕ ಪ್ರಸಂಗವನ್ನು ನೋಡಬೇಕು. 
      ಅದರಂತೆ, ಒಮ್ಮೆ, ಬ್ರಹ್ಮನಿಗೂ ವಿಷ್ಣುವಿಗೂ ಯಾರು ಹೆಚ್ಚೆಂದು ವಾದವುಂಟಾಗಲು, ಅವರ ಮಧ್ಯೆ ಒಂದು ದೊಡ್ಡ ಜ್ಯೋತಿರ್ಲಿಂಗ ಉದ್ಭವವಾಯಿತು! ಅದರ ಆದಿಯನ್ನು ಪತ್ತೆಮಾಡಲು ಬ್ರಹ್ಮನು ಹಂಸದ ರೂಪದಲ್ಲಿ ಮೇಲೆ ಹಾರಿಹೋಗಲು, ಅದರ ಅಂತ್ಯವನ್ನು ಪತ್ತೆಮಾಡಲು ವಿಷ್ಣುವು ವರಾಹ ರೂಪದಲ್ಲಿ ಭೂಮಿಯನ್ನು ಅಗೆಯುತ್ತಾ ಹೋದನು. ಇಬ್ಬರಿಗೂ ಆದಿ, ಅಂತ್ಯಗಳು ಪತ್ತೆಯಾಗಲಿಲ್ಲ! ಆಗ ಮೇಲಿನಿಂದ ಒಂದು ಕೇತಕಿ ಪುಷ್ಪ ಬೀಳುತ್ತಿರಲು, ಅದನ್ನು ನೋಡಿದ ಬ್ರಹ್ಮನು ತಾನು ಜ್ಯೋತಿರ್ಲಿಂಗದ ಆದಿಯನ್ನು ನೋಡಿರುವುದಾಗಿ ಅದಕ್ಕೆ ಸಾಕ್ಷಿ ಹೇಳುವಂತೆ ಕೇಳಿದನು. ಅದಕ್ಕೆ ಕೇತಕಿ ಪುಷ್ಪ ಒಪ್ಪಿತು. ವಿಷ್ಣುವು ಅಂತ್ಯವನ್ನು ಕಾಣಲಾರದೆ ಮೇಲೆ ಬಂದು ಬ್ರಹ್ಮನ ಬಳಿ ಸತ್ಯವನ್ನು ಒಪ್ಪಿಕೊಂಡನು. ಆಗ ಬ್ರಹ್ಮನು ತಾನು ಆದಿಯನ್ನು ನೋಡಿರುವುದಾಗಿ ಹೇಳಿ ಅದಕ್ಕೆ ಕೇತಕಿ ಪುಷ್ಪವೇ ಸಾಕ್ಷಿ ಎಂದನು. ಕೇತಕಿ ಪುಷ್ಪವೂ ಸುಳ್ಳು ಸಾಕ್ಷಿ ಹೇಳಿತು. ಆಗ ವಿಷ್ಣುವು ಬ್ರಹ್ಮನೇ ಹೆಚ್ಚೆಂದು ಒಪ್ಪಿಕೊಂಡನು. ಆಗ ಶಿವನು ಜ್ಯೋತಿರ್ಲಿಂಗದ ಸ್ಥಾನದಲ್ಲಿ ಪ್ರತ್ಯಕ್ಷನಾಗಿ ಬ್ರಹ್ಮನ ವಿಷಯದಲ್ಲಿ ಅವನು ಸುಳ್ಳು ಹೇಳಿದ್ದಕ್ಕೆ ಕ್ರುದ್ಧನಾಗಿ ಅವನಿಗೆ ಪೂಜೆಯಿರದಂತೆ ಶಪಿಸಿದನು! ವಿಷ್ಣುವು ಸತ್ಯ ಹೇಳಿದ್ದಕ್ಕೆ ಅವನಿಗೆ ತನ್ನ ಸಮಾನತೆ ಕೊಟ್ಟನು. ಸುಳ್ಳು ಸಾಕ್ಷಿ ಹೇಳಿದ್ದಕ್ಕೆ ಕೇತಕಿ ಪುಷ್ಪಕ್ಕೆ ತನ್ನ ಪೂಜೆಗೆ ಅನರ್ಹವಾಗುವಂತೆ ಶಪಿಸಿದನು! ಹೀಗೆ ಶಿವನಿಗೆ ಕೇತಕಿ ಪುಷ್ಪ ಇಷ್ಟವಾಗುವುದಿಲ್ಲ.‌ ಹಾಗಾಗಿ ಅವನು ಕೇತಕಿ ಪುಷ್ಪದ ಬಳಿ ಬರುವುದಿಲ್ಲವೆಂದು ಕಾಮದೇವನು ಅದರಲ್ಲಿ ನಿಶ್ಚಿಂತೆಯಿಂದ ನೆಲೆಸಿದ್ದಾನೆ ಎಂದು ಕವಿಯು ಇಲ್ಲಿ ಸುಂದರವಾದ ಉತ್ಪ್ರೇಕ್ಷಿತ ಕಲ್ಪನೆ ಮಾಡಿದ್ದಾನೆ. ಹೀಗೆ ಅದರಲ್ಲಿ ಕಾಮದೇವನು ಇರುವುದರಿಂದ ಅದರ ಬಳಿ ಹೋಗಬೇಡ ಎಂದು ಒಬ್ಬ ಪ್ರಯಾಣಿಕ ಇನ್ನೊಬ್ಬ ಪ್ರಯಾಣಿಕನಿಗೆ ಹೇಳುತ್ತಿರುವಂತೆ ಸೊಗಸಾದ ಕಲ್ಪನೆ ಮಾಡಿದ್ದಾನೆ. 

ಶುಕ್ರವಾರ, ಜುಲೈ 17, 2026

ಸುಂದರೀಶತಕ -೬೫

ಸಂಸ್ಕೃತ ಮೂಲ 

ಪ್ರತ್ಯೇಕಮಿಂದ್ರಿಯಾಣಾಮಾಸ್ತಾಂ ಭಿನ್ನೈವ ದೇವತಾನ್ಯಸ್ಯ /
ಪರಿಣಮತಿ ಮಮ ತು ಸೈಕಾ ಸಕಲೇಂದ್ರಿಯದೇವತಾತ್ವೇನ //

ಕನ್ನಡ ಅನುವಾದ 

   ' ಇತರರಿಗೆ ಬೇರೆ ಬೇರೆ ಇಂದ್ರಿಯಗಳಿಗೆ ಬೇರೆ ಬೇರೆಯೇ ದೇವತೆಯೇ ಇದ್ದರೂ, ನನಗೆ ಮಾತ್ರ ಅವಳೊಬ್ಬಳೇ ನನ್ನ ಸಕಲೇಂದ್ರಿಯಗಳಿಗೂ ದೇವತೆಯಾಗಿ ಪರಿಣಮಿಸುತ್ತಾಳೆ!' 
    ಇದೊಂದು ಸ್ವಾರಸ್ಯಕರ ಶೃಂಗಾರ ಪದ್ಯ.‌ ನಮ್ಮ ಹಿಂದೂ ಅಥವಾ ವೈದಿಕ ಸಂಪ್ರದಾಯದ ಪ್ರಕಾರ, ನಮ್ಮ ದೇಹದ ಪ್ರತಿಯೊಂದು ಇಂದ್ರಿಯವನ್ನೂ ಒಬ್ಬೊಬ್ಬ ದೇವತೆ ನಡೆಸುತ್ತಾನೆ. ನಮ್ಮ ಇಂದ್ರಿಯಗಳನ್ನು ಪಂಚ ಜ್ಞಾನೇಂದ್ರಿಯಗಳು ಮತ್ತು ಪಂಚ ಕರ್ಮೇಂದ್ರಿಯಗಳು ಎಂದು ವಿಂಗಡಿಸಲಾಗಿದೆ. ಪಂಚಜ್ಞಾನೇಂದ್ರಿಯಗಳ ವಿಷಯಕ್ಕೆ ಬಂದರೆ, ಕಣ್ಣಿಗೆ ಸೂರ್ಯ, ಮೂಗಿಗೆ ಅಶ್ವಿನೀ ದೇವತೆಗಳು, ನಾಲಿಗೆಗೆ ವರುಣ, ಕಿವಿಗೆ ದಿಗ್ದೇವತೆಗಳು, ಹಾಗೂ ಚರ್ಮಕ್ಕೆ ವಾಯು, ಈ ದೇವತೆಗಳು ಅಧಿದೇವತೆಗಳಾಗಿರುತ್ತಾರೆ. ಅಂತೆಯೇ, ಪಂಚ ಕರ್ಮೇಂದ್ರಿಯಗಳ ವಿಷಯಕ್ಕೆ ಬಂದರೆ, ಕೈಗಳಿಗೆ ಇಂದ್ರ, ಕಾಲುಗಳಿಗೆ ವಿಷ್ಣು, ಬಾಯಿಗೆ ಅಗ್ನಿ, ಗುದದ್ವಾರಕ್ಕೆ ಯಮ, ಹಾಗೂ ಜನನೇಂದ್ರಿಯಗಳಿಗೆ ಪ್ರಜಾಪತಿ, ಅಧಿದೇವತೆಗಳಾಗಿರುತ್ತಾರೆ. ಹೀಗೆ ವಿವಿಧ ಇಂದ್ರಿಯಗಳಿಗೆ ವಿವಿಧ ದೇವತೆಗಳಿರುತ್ತಾರೆ. ಆದರೆ ಇಲ್ಲಿ ಕವಿ ಅಥವಾ ನಾಯಕ, ಬೇರೆಯವರ ವಿಷಯದಲ್ಲಿ ಹಾಗಿದ್ದರೂ ತನಗೆ ಮಾತ್ರ ತನ್ನ ಪ್ರಿಯತಮೆಯೊಬ್ಬಳೇ ತನ್ನ ಎಲ್ಲಾ ಇಂದ್ರಿಯಗಳಿಗೂ ದೇವತೆಯಾಗಿ ಪರಿಣಮಿಸುತ್ತಾಳೆ ಎನ್ನುತ್ತಿದ್ದಾನೆ! ಅಂದರೆ ಎಲ್ಲಾ ದೇವತೆಗಳೂ ಅವಳೊಬ್ಬಳಲ್ಲೇ ಅಂತರ್ಗತರಾಗಿ ಅವಳೊಬ್ಬಳೇ ಅವನ ಎಲ್ಲಾ ಇಂದ್ರಿಯಗಳನ್ನೂ ನಡೆಸುವವಳಾಗಿದ್ದಾಳೆ! ಅವಳನ್ನು ಬಿಟ್ಟು ಅವನಿಗೆ ಬೇರಾವ ದೇವತೆಯೂ ಇಲ್ಲವೆನ್ನುವಷ್ಟು ಅವನು ಅವಳ ಪ್ರೇಮದಲ್ಲಿ ಒಂದಾಗಿದ್ದಾನೆ! ಇದೊಂದು ರೀತಿಯ ಶೃಂಗಾರ ಅದ್ವೈತ ಸ್ಥಿತಿ!