ಶನಿವಾರ, ಸೆಪ್ಟೆಂಬರ್ 19, 2026

ಸುಂದರೀಶತಕ -೯೩

ಸಂಸ್ಕೃತ ಮೂಲ 

ತ್ರಿವಲೀತರಂಗತರಲಿತನಖಾಂಕಮೀನಂ ಝಷಾಂಕಕೈವರ್ತ:।
 ತಸ್ಯಾಂ ಸುಧಾರಸಸ್ಯಾಂ ವಲಯತಿ ರೋಮಾಲಿಬಡಿಶೇನ ।।

ಕನ್ನಡ ಅನುವಾದ 

    ' ಮನ್ಮಥನೆಂಬ ಬೆಸ್ತನು ಈ ಸುಂದರಿಯ ಅಮೃತಮಯವಾದ ಸರೋವರವೆಂಬ ಸುಂದರ ತನುವಿನಲ್ಲಿನ ತ್ರಿವಳಿಗಳೆಂಬ ಅಲೆಗಳ ನಡುವೆ ಚಂಚಲವಾಗಿ ಈಜುತ್ತಿರುವ ಅವಳ ಪ್ರಿಯತಮನ ನಖಚಿಹ್ನೆಗಳೆಂಬ ಮೀನುಗಳನ್ನು ಹಿಡಿಯಲು ಅವಳ ರೋಮಾವಳಿಯೆಂಬ ಗಾಳವನ್ನು ಬೀಸುತ್ತಿದ್ದಾನೆ!' 
     ಇಲ್ಲಿ ಕವಿಯು ಹೆಣ್ಣಿನ ತನುವಿನ ಸೌಂದರ್ಯವನ್ನು ಒಂದು ಅಮೃತಮಯವಾದ ಸರೋವರಕ್ಕೆ ಹೋಲಿಸಿ ವರ್ಣಿಸುತ್ತಾ ಮನ್ಮಥನನ್ನು ಒಬ್ಬ ಬೆಸ್ತನಿಗೆ ಹೋಲಿಸಿದ್ದಾನೆ! ಮನ್ಮಥನನ್ನು ಝಷಾಂಕಕೈವರ್ತ ಎಂದು ಕರೆದಿದ್ದಾನೆ. ಝಷಾಂಕ ಎಂದರೆ ಮನ್ಮಥ. ಕೈವರ್ತ ಎಂದರೆ ಬೆಸ್ತ. ಝಷ ಎಂದರೆ ಮೀನು. ಆ ಮೀನಿನ ಚಿಹ್ನೆಯ ಧ್ವಜವುಳ್ಳವನೇ ಝಷಾಂಕ ಅಥವಾ ಮನ್ಮಥ. 
     ಸುಂದರ ಹೆಣ್ಣಿನ ತೆಳುವಾದ ಹೊಟ್ಟೆಯ ಮೇಲೆ ಇರುವ ತ್ರಿವಳಿಗಳೆಂಬ ಸೂಕ್ಷ್ಮವಾದ ಮೂರು ಸುಂದರ ಗೆರೆಗಳು ಅಲೆಗಳ ಹಾಗಿವೆ! ಅವಳ ಪ್ರಿಯತಮನು ರತಿಕ್ರೀಡೆಯ ಸಮಯದಲ್ಲಿ ಆ ತ್ರಿವಳಿಗಳ‌ ಮಧ್ಯೆ ಮಾಡಿರುವ ನಖಕ್ಷತದ ಚಿಹ್ನೆಗಳು ಚಂಚಲವಾಗಿ ಈಜುತ್ತಿರುವ ಮೀನುಗಳಂತಿವೆ! ಈ ನಖಚಿಹ್ನೆಗಳೆಂಬ ಮೀನುಗಳನ್ನು ಹಿಡಿಯಲು ಮನ್ಮಥನೆಂಬ ಬೆಸ್ತನು ಅವಳ ಹೊಕ್ಕುಳಿನಿಂದ ಹೊರಟಿರುವ ಸೂಕ್ಷ್ಮ ರೋಮಗಳ ಸಾಲಾದ ರೋಮಾವಳಿಯೆಂಬ ಗಾಳವನ್ನು ಬೀಸುತ್ತಿದ್ದಾನೆ! ಹೀಗೆ ಸುಂದರಿಯ ದೇಹವನ್ನು ಒಂದು ಸುಂದರ ಸರೋವರಕ್ಕೆ ಹೋಲಿಸಿ ಶೃಂಗಾರ ವರ್ಣನೆ ಮಾಡಿದ್ದಾನೆ ಕವಿ. ಈ ವರ್ಣನೆಗಳು ಸಂಸ್ಕೃತ ಶೃಂಗಾರ ಕಾವ್ಯಗಳಲ್ಲಿ ಹಾಸುಹೊಕ್ಕಾಗಿ ಬರುತ್ತವೆ. ಹೆಣ್ಣಿನ ದೇಹವೆಂಬ ರಸಮಯ ಸರೋವರದಲ್ಲಿ ಜೋಡಿಕುಚಗಳು ಜೋಡಿ ಚಕ್ರವಾಕ ಪಕ್ಷಿಗಳು, ತ್ರಿವಳಿಗಳು ಅಲೆಗಳು, ಆಳವಾದ ನಾಭಿಯು  ಸುಳಿ, ನಿತಂಬಗಳು ಸರೋವರದ ದಡಗಳು, ಹೀಗೆ ವರ್ಣನೆಗಳು ಸಾಗುತ್ತವೆ! ಇಲ್ಲಿ ಕವಿಯು ಪ್ರಿಯತಮನು ಮಾಡಿರುವ ನಖಕ್ಷತದ ಚಿಹ್ನೆಗಳನ್ನು ಮೀನುಗಳಿಗೆ ಹೋಲಿಸಿದ್ದಾನೆ! ವಾತ್ಸ್ಯಾಯನನು ಕಾಮಸೂತ್ರದಲ್ಲಿ ಆಲಿಂಗನ, ಚುಂಬನ, ನಖಕ್ಷತ, ದಂತಕ್ಷತ, ಪ್ರಹಣನ, ಸೀತ್ಕಾರ, ಮೊದಲಾದ ಕಾಮಕ್ರೀಡೆಗಳಲ್ಲಿ ಎಂಟೆಂಟು ಬಗೆಗಳನ್ನು ವಿವರಿಸಿದ್ದಾನೆ. ಕಾಮೋದ್ದೀಪನೆಗೆ ಇವು ಅವಶ್ಯಕ.‌
     

ಶುಕ್ರವಾರ, ಸೆಪ್ಟೆಂಬರ್ 18, 2026

ಸುಂದರೀಶತಕ -೯೨

ಸಂಸ್ಕೃತ ಮೂಲ 

ಅಧರೋತ್ತರಾಸಮರ್ಥಂ ಮದನಪುಮಾರ್ಥಂ ಸ್ಮಿತೇನ ಪರಿಪುಷ್ಯತ್ ।
ಕಸ್ಯ ನ ಕರೋತಿ ಕದನಂ ವದನಂ ದಷ್ಟಾಧರಂ ತಸ್ಯಾ: ।।

ಕನ್ನಡ ಅನುವಾದ 

    ' ತನ್ನ ಪತಿಯೊಂದಿಗೆ ಕೋಪವನ್ನು ನಟಿಸುತ್ತಿದ್ದ ಆ ಸುಂದರಿಯು ತನ್ನ ಅಧರವನ್ನು ಹಲ್ಲುಗಳಿಂದ ಕಚ್ಚಿಕೊಂಡು ನಿಂತಿದ್ದರೂ ಅವನು ಬಂದು ಪ್ರೇಮಪೂರಿತವಾಗಿ ಮಾತನಾಡಿದಾಗ, ಕರಗಿದ ಅವಳು, ತನ್ನ ಕಚ್ಚಿದ ಅಧರವನ್ನು ಮೇಲ್ದುಟಿಯೊಂದಿಗೆ ಸೇರಿಸಿ ಮಾತನಾಡಲಾಗದಿದ್ದರೂ ಪ್ರೇಮಸಾಧನೆಗಾಗಿ ಮೆಲ್ಲನೆ ನಕ್ಕಳು! ಅವಳ ಆ ಮುಖ ಯಾರ ಮನಸ್ಸನ್ನು ತಾನೇ ಕರಗಿಸುವುದಿಲ್ಲ?' 
    ಇಲ್ಲಿ ಒಬ್ಬ ನಾಯಕಿಯು ತನ್ನ ಪತಿಯೊಂದಿಗೆ ಕೋಪವನ್ನು ನಟಿಸುತ್ತಾ ಅವನೊಂದಿಗೆ ಮಾತನಾಡಬಾರದೆಂದು ತನ್ನ ಅಧರವನ್ನು ಹಲ್ಲುಗಳಿಂದ ಕಚ್ಚಿ ಹಿಡಿದಿದ್ದಾಳೆ! ಆದರೆ ಅವನು ಅವಳ ಹತ್ತಿರ ಬಂದು ಪ್ರೇಮಪೂರಿತವಾಗಿ ಮಾತನಾಡಿದಾಗ ಅವಳಿಗೇ ಗೊತ್ತಿಲ್ಲದೆ ಕರಗಿಹೋಗುತ್ತಾಳೆ! ಆದರೆ ಅವಳು ತನ್ನ ಅಧರವನ್ನು ಹಲ್ಲುಗಳಿಂದ ಕಚ್ಚಿ ಹಿಡಿದಿರುವುದನ್ನು ಮರೆತಿಲ್ಲ. ಹಾಗಾಗಿ ಅವಳು ತನ್ನ ತುಟಿಗಳನ್ನು ಕೂಡಿಸಿ ಮಾತನಾಡಲಾರಳು! ಹಾಗಾಗಿ, ಪ್ರೇಮಸಾಧನೆಗಾಗಿ ಅವಳಿಗೇ ತಿಳಿಯದೆ ನಿಧಾನವಾಗಿ ನಗುತ್ತಾಳೆ! ಇಂಥ ಅವಳ ಮುಖಭಾವ ಯಾರ ಮನಸ್ಸನ್ನು ತಾನೇ ಕರಗಿಸುವುದಿಲ್ಲ ಎಂದು ಕವಿಯು ಕೇಳುತ್ತಿದ್ದಾನೆ. 

ಕೊಂಡಜ್ಜಿ ಶ್ರೀ ವರದರಾಜಸ್ವಾಮಿ ದೇವಾಲಯ

   

 ನಮ್ಮ ಕರ್ನಾಟಕದ ಪ್ರಾಚೀನ ದೇವಾಲಯಗಳು ಶಿಲ್ಪಕಲಾಸೌಂದರ್ಯಕ್ಕೆ ಹೆಸರಾಗಿವೆ. ಅದರಲ್ಲೂ ಕರ್ನಾಟಕದ ಹಾಸನ ಜಿಲ್ಲೆ ಹೊಯ್ಸಳರ ಇಂಥ ಅನೇಕ ಶಿಲ್ಪಕಲಾದೇವಾಲಯಗಳಿಗೆ ವಿಶೇಷವಾಗಿ ಪ್ರಸಿದ್ಧವಾಗಿದೆ. ಹಾಸನದ ಬೇಲೂರಿನ ಚೆನ್ನಕೇಶವ ದೇವಾಲಯ ಹಾಗೂ ಹಳೇಬೀಡಿನ ಹೊಯ್ಸಳೇಶ್ವರ, ಶಾಂತಲೇಶ್ವರ ದೇವಾಲಯಗಳನ್ನು ನೋಡದವರು ಬಹಳ ಕಡಿಮೆ ಎಂದರೆ ತಪ್ಪಾಗಲಾರದು. ಆದರೆ ಇಂಥ ಸುಪ್ರಸಿದ್ಧ ಸುಂದರ ದೇವಾಲಯಗಳ ಆಸುಪಾಸಿನಲ್ಲೇ ವನಸುಮದಂತೆ, ಮೋಡದ ಮರೆಯ ಚಂದ್ರನಂತೆ, ಕಂಡೂ ಕಾಣದಂತೆ ಒಂದೊಂದು ಅಪರೂಪದ ದೇವಾಲಯವಿರುತ್ತದೆ! ಅಂಥ ಒಂದು ಅಪರೂಪದ ದೇವಾಲಯವೇ ಹಳೇಬೀಡಿನ ಪ್ರದೇಶದಲ್ಲಿರುವ ಕೊಂಡಜ್ಜಿಯ ಶ್ರೀ ವರದರಾಜಸ್ವಾಮಿ ದೇವಾಲಯ.
    ಕೊಂಡಜ್ಜಿ, ಹಾಸನದಿಂದ ಸುಮಾರು 178 ಕಿ.ಮೀ. ಉತ್ತರಕ್ಕಿರುವ ಪುಟ್ಟ ಹಳ್ಳಿ. ಇದು, ಸೀಗೇಗುಡ್ಡ, ಗರುಡನ ಗಿರಿ, ಮತ್ತು ಚಂದ್ರದ್ರೋಣ ಪರ್ವತಗಳ ನಡುವಿನ ಪ್ರಕೃತಿರಮ್ಯ ಪ್ರದೇಶದಲ್ಲಿದೆ. ಈ ಗ್ರಾಮದ ಒಂದು ತಾಣದಲ್ಲಿ ಶ್ರೀ ವರದರಾಜಸ್ವಾಮಿ ದೇವಾಲಯವಿದೆ. ದೇವಾಲಯದ ಕಟ್ಟಡ ಯಾವುದೇ ಆಕರ್ಷಣೆ ಹೊಂದಿಲ್ಲದೇ, ಗರ್ಭಗುಡಿಯ ಸುತ್ತಲೂ ಕಟ್ಟಿಸಲಾಗಿರುವ ಇತ್ತೀಚಿನ ಕಟ್ಟಡವಾಗಿದೆ. ಆದರೆ ಒಳಗೆ ಪ್ರವೇಶಿಸಿದರೆ, ನಿಬ್ಬೆರಗಾಗಿಸುವ ವರದರಾಜಸ್ವಾಮಿಯ  ಅತ್ಯಂತ ಭವ್ಯ ಮೂರ್ತಿಯನ್ನು ಕಾಣಬಹುದು! ಹದಿನಾಲ್ಕರಿಂದ ಹದಿನೆಂಟು ಅಡಿ ಎತ್ತರದ ಕಪ್ಪು ಶಿಲೆಯ ನಿಂತ ಭಂಗಿಯ ವರಜರಾಜಸ್ವಾಮಿಯ ಈ ವಿಗ್ರಹ ಅತ್ಯಂತ ಮನೋಹರವಾಗಿದ್ದು, ಶಿಲ್ಪಿಯ ಕೌಶಲಕ್ಕೆ ಸಾಕ್ಷಿಯಾಗಿದೆ! ಮೂಲ ವಿಗ್ರಹವು ಹನ್ನೊಂದು ಅಡಿ ಎತ್ತರವಿದ್ದು ಅದನ್ನು ನಾಲ್ಕು ಅಡಿ ಎತ್ತರದ ಪಾಣಿಪೀಠದ ಮೇಲೆ ಪ್ರತಿಷ್ಠಾಪಿಸಲಾಗಿದೆ ಎಂದು ಇಲ್ಲಿರುವ ಫಲಕದ ಮೇಲಿದೆ. ಒಟ್ಟಿನಲ್ಲಿ ಇದು ಬಹಳ ಎತ್ತರವಾದ, ಬಹಳ ಭವ್ಯವಾದ ಮೂರ್ತಿ. ಶಂಖ,ಚಕ್ರ, ಗದೆಗಳನ್ನು ಮೂರು ಕೈಗಳಲ್ಲಿ ಹಿಡಿದು ಇನ್ನೊಂದು ಕೈಯಲ್ಲಿ ಅಭಯ ಮುದ್ರೆ ಧರಿಸಿರುವ ಭಗವಂತನ ಮೂರ್ತಿಯ ಸುಂದರ ಮುಗುಳ್ನಗೆ, ನೋಡುಗ ಭಕ್ತರನ್ನು ಸೆಳೆಯುವ ಚುಂಬಕ ಶಕ್ತಿಯನ್ನು ಹೊಂದಿದೆ! ವಿಗ್ರಹದ ವಕ್ಷಸ್ಥಳದ ಬಲಭಾಗದಲ್ಲಿ ಲಕ್ಷ್ಮೀದೇವಿಯ ಮೂರ್ತಿಯಿದೆ. ಹಿಂಭಾಗದಲ್ಲಿ ಪ್ರಭಾವಳಿ ಇಲ್ಲವಾದರೂ ಇದು ಅಪರೂಪದ ಕೆತ್ತನೆಯ ವಿಗ್ರಹವಾಗಿದೆ. ವಿಷ್ಣುವಿನ ಇಪ್ಪತ್ನಾಲ್ಕು ರೂಪಗಳಲ್ಲಿ ಜನಾರ್ದನ ಅಥವಾ ವರದರಾಜಸ್ವಾಮಿಯೂ ಒಂದೆಂದು ಹೇಳಲಾಗಿದೆ. ವಿಗ್ರಹದ ಕಿರೀಟ, ಯಜ್ಞೋಪವೀತ, ಮತ್ತು ವಸ್ತ್ರಾಭರಣಗಳ ಕುಸುರಿ ಕೆಲಸವೂ ಮನೋಜ್ಞವಾಗಿದೆ! ಇದು ಕ್ರಿ.ಶ. ಹದಿನಾಲ್ಕನೆಯ ಶತಮಾನದಲ್ಲಿ ನಿರ್ಮಾಣವಾದ ವಿಗ್ರಹವೆಂದು ಹೇಳಲಾಗಿದೆ. 
    ಈ ಮೂರ್ತಿಯ ಬಗ್ಗೆ ಇಲ್ಲಿನ ಸ್ಥಳೀಯರು ಒಂದು ಜನಪ್ರಿಯ ಕಥೆ ಹೇಳುತ್ತಾರೆ. ಅದರಂತೆ, ಹೊಯ್ಸಳರ ದೊರೆ ವಿಷ್ಣುವರ್ಧನನು ತನ್ನ ಪತ್ನಿ ಶಾಂತಲೆಯ ಕೋರಿಕೆಯಂತೆ, ಈ ವಿಗ್ರಹವನ್ನು ನಿರ್ಮಾಣ ಮಾಡಿಸಿ ಬೇಲೂರಿನ ಚೆನ್ನಕೇಶವ ದೇವಾಲಯದಲ್ಲಿ ಪ್ರತಿಷ್ಠಾಪಿಸಲು ಹೊರಟನಂತೆ. ಆದರೆ ವಿಗ್ರಹದ ಎತ್ತರ ಹೆಚ್ಚಾಗಿದ್ದು ಗರ್ಭಗುಡಿಯೊಳಗೆ ಹೋಗಲಾಗಲಿಲ್ಲ! ಹೀಗಾಗಿ, ವಿಗ್ರಹವನ್ನು ದೇವಾಲಯದ ಪ್ರಾಕಾರದಲ್ಲೇ ನಿಲ್ಲಿಸಲಾಯಿತು. ಆಗ ಒಬ್ಬ ಅಜ್ಜಿಯು ವಿಗ್ರಹವನ್ನು ಕೊಂಡು ತನ್ನ ಹಳ್ಳಿಯಲ್ಲಿ ಪ್ರತಿಷ್ಠಾಪಿಸಿ ಒಂದು ಪುಟ್ಟ ಗುಡಿಯನ್ನು ಕಟ್ಟಿಸಿದಳು. ಹೀಗೆ ಒಬ್ಬ ಅಜ್ಜಿಯು ವಿಗ್ರಹವನ್ನು ಕೊಂಡದ್ದರಿಂದ ಅವಳ ಈ ಹಳ್ಳಿಗೆ ಕೊಂಡಜ್ಜಿ ಎಂದು ಹೆಸರಾಯಿತು! ವರದರಾಜಸ್ವಾಮಿಯ ವಿಗ್ರಹವು ಬೇಲೂರಿನ ಚೆನ್ನಕೇಶವ ದೇವಾಲಯದ ಗರ್ಭಗುಡಿಯೊಳಗೆ ಹೋಗಲಾಗಲಿಲ್ಲವಾದ್ದರಿಂದ, ಈ ವಿಗ್ರಹಕ್ಕೆ ಅಲ್ಲಾಳನಾಥಸ್ವಾಮಿ ಎಂದು ಹೆಸರಾಯಿತು! 
     ಹೀಗೆ ಸ್ವಾರಸ್ಯಕರ ಕಥೆಯುಳ್ಳ ವರದರಾಜಸ್ವಾಮಿಯ ಅದ್ಭುತ ವಿಗ್ರಹವಿರುವ ಈ ದೇವಾಲಯ ನೋಡಲೇಬೇಕಾದುದಾಗಿದೆ. ಇಲ್ಲಿಗೆ ಬಸ್ ವ್ಯವಸ್ಥೆ ಅಷ್ಟಾಗಿ ಇಲ್ಲವಾದ್ದರಿಂದ, ಹಾಸನದಲ್ಲಿ ಇಳಿದುಕೊಂಡು, ಇಲ್ಲವೇ ಬೆಂಗಳೂರಿನಿಂದ ಒಂದು ದಿನದ ಪ್ರವಾಸವಾಗಿ ಖಾಸಗಿ ವಾಹನದಲ್ಲಿ ಹೋಗಿ ಈ ದೇವಾಲಯದೊಂದಿಗೆ ಇತರ ದೇವಾಲಯಗಳನ್ನು ನೋಡಿಕೊಂಡು ಬರಬಹುದು.
                              ಬಿ.ಆರ್.ಸುಹಾಸ್ 
                              ಬೆಂಗಳೂರು 

ಬುಧವಾರ, ಸೆಪ್ಟೆಂಬರ್ 16, 2026

ಸಂಸ್ಕೃತ ಸ್ವಾರಸ್ಯಗಳು - ಗಣೇಶ ಸ್ತುತಿ

ಅಗಜಾನನಪದ್ಮಾರ್ಕಂ ಗಜಾನನಮಹರ್ನಿಶಂ ।
ಅನೇಕದಂತಂ ಭಕ್ತಾನಾಂ ಏಕದಂತಮುಪಾಸ್ಮಹೇ ।।

     ನಾವು ಗಣೇಶನ ಪೂಜೆಯ ಸಮಯದಲ್ಲಿ ಸಾಮಾನ್ಯವಾಗಿ ಈ ಶ್ಲೋಕವನ್ನು ಹೇಳಿಕೊಳ್ಳುತ್ತೇವೆ.‌ ಇದರ ಅರ್ಥವನ್ನು ನೇರವಾಗಿ ನೋಡಿದರೆ ವಿಚಿತ್ರವೂ ಅಸಂಬದ್ಧವೂ ಆಗಿದೆಯೆನಿಸುತ್ತದೆ. ಅದು ಹೀಗಾಗುತ್ತದೆ - ' ಅಗಜಾನನೂ, ಅಂದರೆ ಗಜಾನನನಲ್ಲದವನೂ ಸೂರ್ಯನನ್ನು ಕಂಡ ಕಮಲವೂ  ಆಗಿರುವ, ಅನೇಕದಂತಗಳನ್ನುಳ್ಳವನೂ ಏಕದಂತನೂ ಆಗಿರುವ‌ ಗಜಾನನನನ್ನು ಅಹರ್ನಿಶಿ, ಅಂದರೆ ಹಗಲೂ ರಾತ್ರಿಯೂ ಉಪಾಸಿಸುತ್ತೇವೆ!' 
     ಇದು ಹೇಗೆ ಸಾಧ್ಯ? ಗಜಾನನನಲ್ಲದವನೂ ಗಜಾನನನೂ ಎರಡೂ ಆಗಿರಲು ಹೇಗೆ ಸಾಧ್ಯ? ಅನೇಕ ದಂತಗಳನ್ನುಳ್ಳವನೂ ಏಕದಂತನೂ ಏಕಕಾಲದಲ್ಲಿ ಆಗಿರುವುದು ಹೇಗೆ ಸಾಧ್ಯ? ಹೀಗೆ ಇದು ಅಸಂಬದ್ಧವೆನಿಸುತ್ತದೆ.
    ಆದರೆ ಸೂಕ್ಷ್ಮವಾಗಿ ಈ ಶ್ಲೋಕವನ್ನು ಓದಿದಾಗ ಕವಿಯ ಚಮತ್ಕಾರ ತಿಳಿಯುತ್ತದೆ! ಶ್ಲೋಕದ ಪದಚ್ಛೇದವನ್ನು ಬೇರೆ ರೀತಿಯಲ್ಲಿ ಮಾಡಿದಾಗ ಸರಿಯಾದ ಅರ್ಥ ಬರುತ್ತದೆ! ಅದನ್ನು ನೋಡಿ -
ಅಗ- ನ ಗಚ್ಛತಿ ಇತಿ ಆಗ: , ಅಂದರೆ, ಗಮನ ಅಥವಾ ಚಲನೆಯಿಲ್ಲದುದು ಅಗ, ಅಂದರೆ ಪರ್ವತ, ಅಂದರೆ ಹಿಮವಂತ 
ಅಗಜಾ - ಅಗ ಅಥವಾ ಹಿಮವಂತನ ಮಗಳು, ಪಾರ್ವತಿ 
ಆನನ - ಮುಖ 
ಪದ್ಮಾರ್ಕಂ - ಸೂರ್ಯನನ್ನು ಕಂಡ ಪದ್ಮ ಅಥವಾ ಕಮಲಪುಷ್ಪ 
ಗಜಾನನಂ - ಗಜಾನನನನ್ನು 
ಅಹರ್ನಿಶಂ - ಹಗಲೂ ರಾತ್ರಿಯೂ 
ಅನೇಕ ದಂ - ಅನೇಕ ಅಭೀಷ್ಟಗಳನ್ನು ಕೊಡುವವನನ್ನು 
ತಂ - ಅವನನ್ನು 
ಭಕ್ತಾನಾಂ - ಭಕ್ತರಿಗೆ 
ಏಕದಂತನನ್ನು- ಏಕದಂತನನ್ನು 
ಉಪಾಸ್ಮಹೇ - ನಾವು ಉಪಾಸಿಸುತ್ತೇವೆ 
     ಈಗ ಈ ಶ್ಲೋಕದ ಅರ್ಥ ಹೀಗಾಗುತ್ತದೆ - ' ಯಾರನ್ನು ನೋಡಿದ ಕೂಡಲೇ ಮಾತೆ ಪಾರ್ವತಿಯ ಮುಖ, ಸೂರ್ಯನನ್ನು ಕಂಡ ಕಮಲದಂತೆ ಅರಳುವುದೋ, ಯಾರು ತನ್ನ ಭಕ್ತರಿಗೆ ಅನೇಕ ಅಭೀಷ್ಟಗಳನ್ನು ನೀಡುವನೋ,  ಏಕದಂತನಾದ ಆ ಗಜಾನನನನ್ನು ನಾವು ಹಗಲೂ ರಾತ್ರಿಯೂ ಉಪಾಸಿಸುತ್ತೇವೆ!' 
     ಸಂಸ್ಕೃತದಲ್ಲಿ ಇಂಥ ಅನೇಕ ಸ್ವಾರಸ್ಯಕರ ಚಮತ್ಕಾರ ಶ್ಲೋಕಗಳಿವೆ! 

ಭಾನುವಾರ, ಸೆಪ್ಟೆಂಬರ್ 13, 2026

ಪೌರಾಣಿಕ ಸ್ವಾರಸ್ಯಗಳು-ಬ್ರಹ್ಮವೈವರ್ತಪುರಾಣದ ಗಣೇಶನ ವಿಭಿನ್ನ ಕಥೆಗಳು



ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಮ್ ।
ಪ್ರಸನ್ನವದನಂ ಧ್ಯಾಯೇತ್ ಸರ್ವವಿಘ್ನೋಪಶಾಂತಯೇ ।।

   ನಾವು ಸಾಮಾನ್ಯವಾಗಿ ಗಣೇಶನ ಪೂಜೆಗೆ ಮೊದಲು ಈ ಶ್ಲೋಕವನ್ನು ಹೇಳಿಕೊಳ್ಳುತ್ತೇವೆ. ಬಿಳಿಯ ವಸ್ತ್ರಧಾರಿಯೂ ಚಂದ್ರನ ಬಿಳಿಯ ವರ್ಣದವನೂ ಪ್ರಸನ್ನವದನನೂ ಆದ ವಿಷ್ಣುವನ್ನು ಎಲ್ಲಾ ವಿಘ್ನಗಳ ನಿವಾರಣೆಗಾಗಿ ಧ್ಯಾನಿಸಬೇಕು ಎಂಬುದು ಇದರ ಅರ್ಥ. ಗಣೇಶನು ವಿಘ್ನನಿವಾರಕ ದೇವರಾದ್ದರಿಂದ ಅವನನ್ನು ವಿಘ್ನೇಶ್ವರ ಎಂದು ಕರೆಯುತ್ತೇವೆ. ಆದರೆ ಇಲ್ಲಿ ವಿಷ್ಣುವನ್ನು ವಿಘ್ನಗಳ ನಿವಾರಣೆಗಾಗಿ ಧ್ಯಾನಿಸಬೇಕೆಂದು ಹೇಳಿದೆ. ವಿಷ್ಣುವೆಂಬ ಪದವು ಸರ್ವವ್ಯಾಕಪಕ್ವವನ್ನು ಸೂಚಿಸುವುದರಿಂದಲೂ ಪರಮಾತ್ಮನಾದ ವಿಷ್ಣುವೇ ಎಲ್ಲಾ ದೇವತೆಗಳ ಅಂತರಾತ್ಮನಾಗಿರುವುದರಿಂದಲೂ ಗಣೇಶನ ಪೂಜೆಗೆ ವಿಷ್ಣುವನ್ನು ಪ್ರಾರ್ಥಿಸಲಾಗುತ್ತದೆ ಎಂದು ಇದಕ್ಕೆ ಸಮರ್ಥನೆ ನೀಡಬಹುದಾದರೂ, ನಾವು ಪುರಾಣಗಳನ್ನು ಓದುತ್ತಾ ಹೋದಂತೆ ವಿಷ್ಣುವಿಗೂ ಗಣಪತಿಗೂ ಇರುವ ಒಂದು ಸ್ವಾರಸ್ಯಕರ ನಂಟು ತೆರೆದುಕೊಳ್ಳುತ್ತದೆ. 
     ಎಲ್ಲರಿಗೂ ಗೊತ್ತಿರುವಂತೆ ಗಣೇಶನು ಪಾರ್ವತಿಯ ಮೈಮಣ್ಣಿನಿಂದ ಹುಟ್ಟಿದ ದೇವರು. ಅವಳು ಸ್ನಾನ ಮಾಡುವಾಗ ಬಾಗಿಲು ಕಾಯಲೆಂದು ತನ್ನ ಮೈಮಣ್ಣನ್ನು ಗಂಧದೊದಿಗೆ ಬೆರೆಸಿ ಒಬ್ಬ ಹುಡುಗನನ್ನು ಸೃಷ್ಟಿಸಿ ಜೀವ ಕೊಟ್ಟು ನಿಲ್ಲಿಸಿದಳು. ಅವನು ಶಿವನನ್ನೂ ತಡೆಯಲು, ಶಿವನು ಅವನ ಶಿರಚ್ಛೇದನ ಮಾಡಿ, ಅನಂತರ ಪಾರ್ವತಿಯ ಸಮಾಧಾನಕ್ಕಾಗಿ ಆನೆಯ ತಲೆಯನ್ನು ಜೋಡಿಸಿ ಮತ್ತೆ ಜೀವ ನೀಡಿ ಪ್ರಥಮಪೂಜೆಯ ವರವಿತ್ತನು ಹಾಗೂ ತನ್ನ ಗಣಗಳಿಗೆ ನಾಯಕನನ್ನಾಗಿ ಮಾಡಿದನು.‌ ಹಾಗಾಗಿ ಅವನಿಗೆ ಗಣೇಶ, ಗಣಪತಿ ಎಂಬ ಹೆಸರುಗಳು ಬಂದವು.‌ ಇದು ಶಿವಪುರಾಣದಲ್ಲಿ ಬರುವ ಕಥೆಯಾದರೆ, ಇತರ ಪುರಾಣಗಳಲ್ಲಿ ಗಣೇಶನ ಹುಟ್ಟಿನ ಕಥೆಗಳು ಬೇರೆಬೇರೆಯಾಗಿವೆ! ಇವುಗಳಲ್ಲಿ ಬ್ರಹ್ಮವೈವರ್ತಪುರಾಣ ಎಂಬ ಪುರಾಣದಲ್ಲಿ ಕೃಷ್ಣ ಅಥವಾ ವಿಷ್ಣುವೇ ಗಣೇಶನಾಗಿ ಅವತರಿಸಿದ ವಿಭಿನ್ನ ಕಥೆಯಿದೆ. ಇಲ್ಲಿ ನಮಗೆ ಗಣೇಶನ ಪೂಜೆಯಲ್ಲಿ ಹೇಳುವ ವಿಷ್ಣುವಿನ ಶ್ಲೋಕಕ್ಕೆ ಆಧಾರ ಸಿಗುತ್ತದೆ.‌ ಬ್ರಹ್ಮವೈವರ್ತ ಪುರಾಣದಲ್ಲಿ ಗಣಪತಿಖಂಡ ಎಂಬ ಒಂದು ಖಂಡವೇ ಇದ್ದು ಇದರಲ್ಲಿ ಗಣೇಶನ ವಿಭಿನ್ನ ಕಥೆಗಳಿವೆ. ಈ ಪುರಾಣದ ಪ್ರಕಾರ, ಶ್ರೀಕೃಷ್ಣನು ಎಲ್ಲಾ ದೇವತೆಗಳಿಗೂ ಮೀರಿದ ಪರದೇವತೆಯಾಗಿದ್ದು, ಅವನು ಎಲ್ಲಾ ಲೋಕಗಳಿಗೂ ವೈಕುಂಠಕ್ಕೂ ಮೇಲಿರುವ ಗೋಲೋಕವೆಂಬ ಲೋಕದಲ್ಲಿದ್ದಾನೆ.‌ ವಿಷ್ಣುವೂ ಶ್ರೀಕೃಷ್ಣನ ಒಂದು ಸ್ವರೂಪ. ಗಣೇಶನು ಶ್ರೀಕೃಷ್ಣ ಅಥವಾ ವಿಷ್ಣುವಿನ ಒಂದು ಅವತಾರ ಎಂದು ಈ ಪುರಾಣ ಹೇಳುತ್ತದೆ. ಈ ಕಥೆಯ ಪ್ರಕಾರ, ಒಮ್ಮೆ ಪಾರ್ವತಿಗೆ ಒಬ್ಬ ಪುತ್ರನು ಬೇಕೆಂದು ಆಸೆಯಾಗಿ ಅದಕ್ಕಾಗಿ ಅವಳು ಶಿವನನ್ನು ಪ್ರಾರ್ಥಿಸಿದಳು. ಆಗ ಶಿವನು ಅವಳಿಗೆ ಪುಣ್ಯಕವ್ರತವೆಂಬ ವ್ರತವನ್ನು ಆಚರಿಸಲು ಹೇಳಿ, ಅದರಿಂದ ಶ್ರೀಕೃಷ್ಣನೇ ಪುತ್ರನಾಗಿ ಜನಿಸುವನೆಂದು ಹೇಳಿದನು. ಅವಳು ಶಿವನಿಂದ ಆ ವ್ರತವನ್ನು ಕಲಿತು ಆಚರಿಸಿದಳು.‌ ಅನಂತರ, ಒಂದು ದಿನ ಶಿವ, ಪಾರ್ವತಿಯರು ಸುರತನಿರತರಾಗಿರಲು, ವಿಷ್ಣುವು ಒಬ್ಬ ಬ್ರಾಹ್ಮಣನ ರೂಪದಲ್ಲಿ ಭಿಕ್ಷೆಗೆಂದು ಬಂದನು. ಶಿವ, ಪಾರ್ವತಿಯರು ಅವನಿಗೆ ಭಿಕ್ಷೆ ನೀಡಲು ಬಂದಾಗ, ಅವನು ಸೂಕ್ಷ್ಮವಾಗಿ ಶಿವನ ವೀರ್ಯದಲ್ಲಿ ಸೇರಿ ಅನಂತರ ಅವರಿಗೆ ಮಗುವಾಗಿ ಜನಿಸಿದನು. ಶಿವ, ಪಾರ್ವತಿಯರು ಅವನಿಗೆ ಗಣೇಶ ಎಂದು ಹೆಸರಿಟ್ಟು ನಾಮಕರಣ ಸಮಾರಂಭಕ್ಕೆ ಎಲ್ಲಾ ದೇವತೆಗಳನ್ನೂ ಆಹ್ವಾನಿಸಿದರು. ತೊಟ್ಟಿಲಿನಲ್ಲಿದ್ದ ಮಗುವನ್ನು ಎಲ್ಲಾ ದೇವತೆಗಳೂ ನೋಡಿ ಪ್ರಶಂಸಿಸಿ ಹರಸುತ್ತಿರಲು, ಶನಿಯೊಬ್ಬನು ಮಾತ್ರ ನೋಡದೆ ಕೆಳಗೆ ನೋಡುತ್ತಿದ್ದನು. ಏಕೆಂದು ಪಾರ್ವತಿಯು ಕೇಳಲು, ಅವನು ಅದಕ್ಕೊಂದು ಕಥೆ ಹೇಳಿದನು," ಯಾವ ವಸ್ತುವನ್ನು ನೋಡಿದರೂ ಅದು ನಾಶವಾಗಲೆಂದು ನನಗೆ ನನ್ನ ಪತ್ನಿಯ ಶಾಪವಿದೆ! ನಾನು ಬಾಲ್ಯದಿಂದಲೂ ಶ್ರೀಕೃಷ್ಣನ ಭಕ್ತ. ಚಿತ್ರರಥನೆಂಬ ಗಂಧರ್ವನ ಮಗಳನ್ನು ನಾನು ವಿವಾಹವಾದ ಬಳಿಕ, ಒಮ್ಮೆ ಅವಳು ಚೆನ್ನಾಗಿ ಅಲಂಕರಿಸಿಕೊಂಡು ರತಿಕ್ರೀಡೆಯ ಉದ್ದೇಶದಿಂದ ನನ್ನನ್ನು ನೋಡತೊಡಗಿದಳು. ಆದರೆ ನಾನಾಗ ಶ್ರೀಕೃಷ್ಣನ ಧ್ಯಾನದಲ್ಲಿ ತಲ್ಲೀನನಾಗಿದ್ದುದರಿಂದ ಅವಳನ್ನು ನೋಡಲಿಲ್ಲ. ಇಷ್ಟಕ್ಕೇ ಕೋಪಗೊಂಡ ಅವಳು ನನಗೆ ಹೀಗೆ ಶಾಪ ಕೊಟ್ಟಳು! ಹಾಗಾಗಿಯೇ ನಾನು ಮಗುವನ್ನು ನೋಡುತ್ತಿಲ್ಲ!" 
    ಆದರೆ ಅದಕ್ಕೆ ಪಾರ್ವತಿಯು ಅವಳ ಸಖಿಯರೊಂದಿಗೆ ನಕ್ಕು ಅವನನ್ನು ನಂಬದೇ ಮಗುವನ್ನು ನೋಡಲು ಒತ್ತಾಯಿಸಿದಳು. ಶನಿಯು ಸರಿಯೆಂದು ಮಗುವನ್ನು ನೋಡುತ್ತಲೇ ಮಗುವಿನ ತಲೆಯು ಕತ್ತರಿಸಿ ಗೋಲೋಕಕ್ಕೆ ಹಾರಿಹೋಗಿ ಶ್ರೀಕೃಷ್ಣನೊಂದಿಗೆ ಕೂಡಿಕೊಂಡಿತು! ಈಗ ಪಾರ್ವತಿಯೂ ಇತರರೂ ಗೋಳಾಡಲು, ಬ್ರಹ್ಮ, ವಿಷ್ಣು, ಮಹೇಶ್ವರರು ಅವಳನ್ನು ಸಮಾಧಾನಗೊಳಿಸಿ ಮಗುವಿಗೆ ಬೇರೊಂದು ತಲೆಯನ್ನು ಜೋಡಿಸಿ ಮತ್ತೆ ಜೀವ ಕೊಡುವೆವೆಂದು ಆಶ್ವಾಸನೆ ನೀಡಿ ಇನ್ನೊಂದು ತಲೆಯನ್ನು ಹುಡುಕಲು ಹೊರಟರು. ಆಗ ಒಂದು ಕಾಡಿನಲ್ಲಿ ಹೆಣ್ಣಾನೆಯೊಂದಿಗೆ ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಿದ್ದ ಒಂದು ಗಂಡಾನೆಯನ್ನು ನೋಡಿ, ವಿಷ್ಣುವು ತನ್ನ ಸುದರ್ಶನ ಚಕ್ರದಿಂದ ಅದರ ಶಿರಚ್ಛೇದನ ಮಾಡಿ, ಅದರ ತಲೆಯನ್ನು ತಂದು ಮಗುವಿನ ದೇಹಕ್ಕೆ ಜೋಡಿಸಿ ಜೀವವಿತ್ತನು. ಅನಂತರ ಅವನು ದೇವತೆಗಳಲ್ಲಿ ಗಣೇಶನಿಗೆ ಪ್ರಥಮಪೂಜೆಯಾಗಬೇಕೆಂಬ ವರವನ್ನು ನೀಡಿ ತಾನೇ ಅವನನ್ನು ಪೂಜಿಸಿದನು. 
     ಪಾಪ, ಗಣೇಶನಿಗಾಗಿ ಆನೆಯೇಕೆ ಸಾಯಬೇಕಾಯಿತು? ಇದಕ್ಕೂ ಬ್ರಹ್ಮವೈವರ್ತಪುರಾಣ ಒಂದು ಕಥೆ ಕೊಡುತ್ತದೆ. ಆ ಆನೆಯು ಒಂದು ಸಾಮಾನ್ಯ ಆನೆಯಾಗಿರದೇ ಇಂದ್ರನ ವಾಹನವಾದ ಐರಾವತವೇ ಆಗಿತ್ತು! ಒಮ್ಮೆ ಇಂದ್ರನು ಅಪ್ಸರೆ ರಂಭೆಯೊಡನೆ ಕ್ರೀಡಿಸಿ ಮತ್ತನಾಗಿದ್ದನು. ಆಗ ದುರ್ವಾಸ ಮಹರ್ಷಿಗಳು ಆಗಮಿಸಿ ಅವನಿಗೆ ಹರಿಯ ಪ್ರಸಾದವೆಂದು ಒಂದು ಹೂಮಾಲೆಯನ್ನು ಕೊಟ್ಟರು. ಆದರೆ ಮದಿಸಿದ್ದ ಇಂದ್ರನು ಆ ಹೂಮಾಲೆಯನ್ನು ಐರಾವತದ ತಲೆಯ ಮೇಲಿಟ್ಟನು. ಇದರಿಂದ ಕುಪಿತಗೊಂಡ ದುರ್ವಾಸರು ಇಂದ್ರನಿಗೆ ಐಶ್ವರ್ಯವನ್ನು ಕಳೆದುಕೊಳ್ಳುವಂತೆ ಶಪಿಸಿ ಹೊರಟುಹೋದರು! ಆ ಐರಾವತವೂ ಮದಿಸಿದ್ದು ಹೂಮಾಲೆಯನ್ನು ಉಪೇಕ್ಷಿಸಿ ಎಸೆದು ಕಾಡಿಗೋಡಿ ಹೆಣ್ಣಾನೆಯೊಂದಿಗೆ ರಮಿಸತೊಡಗಿತು! ಈ ತಪ್ಪಿಗಾಗಿ ಅದು ತನ್ನ ತಲೆಯನ್ನು ಕಳೆದುಕೊಳ್ಳಬೇಕಾಯಿತು! ಆದರೆ ಅನಂತರ, ಹೆಣ್ಣಾನೆಯು ವಿಷ್ಣುವನ್ನು ಅದರ ಜೀವಕ್ಕಾಗಿ ಪ್ರಾರ್ಥಿಸಲು, ವಿಷ್ಣುವು ಐರಾವತಕ್ಕೆ ಪುನಃ ಜೀವಪ್ರದಾನ ಮಾಡಿದನು. 
     ಪಾಪ, ಶಿವನಿಗೇಕೆ ತನ್ನ ಪುತ್ರನ ಮರಣವನ್ನು ನೋಡುವ ಪರಿಸ್ಥಿತಿವೊದಗಿಬಂತು? ಅದಕ್ಕೂ ಈ ಪುರಾಣ ಒಂದು ಕಥೆ ಹೇಳುತ್ತದೆ. ಒಮ್ಮೆ, ಮಾಲಿ ಮತ್ತು ಸುಮಾಲಿ ಎಂಬ ಇಬ್ಬರು ದಾನವರು ಅಹಂಕಾರದಿಂದ ಬೀಗುತ್ತಾ ಸೂರ್ಯನನ್ನು ನಿಂದಿಸಿದರು. ಆಗ ಸೂರ್ಯನು ಕುಪಿತನಾಗಿ ಅವರಿಗೆ ಶ್ವೇತಕುಷ್ಠರೋಗವುಂಟಾಗಲೆಂದು ಶಪಿಸಿದನು! ಅವರಿಬ್ಬರೂ ಶಿವಭಕ್ತರಾಗಿದ್ದರಿಂದ, ಶಿವನು ಸೂರ್ಯನಲ್ಲಿ ಕುಪಿತಗೊಂಡು ಅವನನ್ನು ತನ್ನ ತ್ರಿಶೂಲದಿಂದ ಕೊಂದುಬಿಟ್ಟನು! ಇದನ್ನು ಕಂಡು ಸೂರ್ಯನ ತಂದೆ ಕಶ್ಯಪ ಮಹರ್ಷಿಗಳಿಗೆ ಕೋಪ ಬಂದು, ಅವರು ಶಿವನಿಗೆ ಅವನ ಮಗನ ಶಿರಚ್ಛೇದನವನ್ನು ಕಾಣುವಂತೆ ಶಪಿಸಿದರು! ಆಗ ಶಿವನು ಕೂಡಲೇ ಸೂರ್ಯನನ್ನು ಜೀವಂತಗೊಳಿಸಿದನು. ಸೂರ್ಯನಿಗೆ ತನ್ನ ತಂದೆ ಕಶ್ಯಪರು ಶಿವನನ್ನು ಶಪಿಸಿರುವ ವಿಷಯ ತಿಳಿಯಲು, ಅವನು ಖಿನ್ನನಾಗಿ ವೈರಾಗ್ಯ ತಾಳಿ ಶ್ರೀಕೃಷ್ಣನನ್ನು ಕುರಿತು ತಪಸ್ಸು ಮಾಡಲು ಯೋಚಿಸಿದನು.‌ ಆಗ ಬ್ರಹ್ಮನು ಬಂದು ಅವನನ್ನು ಸಮಾಧಾನಪಡಿಸುತ್ತಾ ಜಗತ್ತನ್ನು ಬೆಳಗುವ ಅವನ ಕರ್ತವ್ಯವನ್ನು ಮಾಡಬೇಕೆಂದು ಬೋಧಿಸಿದನು. ಅನಂತರ, ಬ್ರಹ್ಮನು ಮಾಲಿ, ಸುಮಾಲಿಗಳಿಗೆ ಸೂರ್ಯನನ್ನು ಆರಾಧಿಸಿ ತಮ್ಮ ಕಾಯಿಲೆಯನ್ನು ಗುಣಪಡಿಸಿಕೊಳ್ಳಲು ಹೇಳಿದನು. 
    ಗಣೇಶನಿಗೆ ಒಂದೇ ದಂತವಿರುವುದರಿಂದ ಅವನಿಗೆ ಏಕದಂತನೆಂದು ಕರೆಯುತ್ತಾರೆ. ಇದಕ್ಕೆ ಹಲವಾರು ಕಥೆಗಳಿವೆ. ಬ್ರಹ್ಮವೈವರ್ತಪುರಾಣವೂ ಒಂದು ಕಥೆ ಹೇಳುತ್ತದೆ. ಅದರಂತೆ, ಒಮ್ಮೆ ಪರಶುರಾಮನು ತನ್ನ ಗುರುವಾದ ಪರಶಿವನ ದರ್ಶನ ಪಡೆಯಲೆಂದು ಕೈಲಾಸಕ್ಕೆ ಬಂದಾಗ, ಶಿವನು ಪಾರ್ವತಿಯೊಂದಿಗೆ ಏಕಾಂತದಲ್ಲಿದ್ದನು. ದ್ವಾರವನ್ನು ಕಾಯುತ್ತಿದ್ದ ಗಣೇಶನು ಪರಶುರಾಮನಿಗೆ ಸ್ವಲ್ಪ ಹೊತ್ತು ಕಾಯಲು ಹೇಳಲು, ಅವನ ಮಾತು ಕೇಳದೆ ಪರಶುರಾಮನು ಒಳಗೆ ನುಗ್ಗತೊಡಗಿದನು! ಗಣೇಶನು ಅವನನ್ನು ತಡೆಯಲು ಹೋಗಿ ಅವರೀರ್ವರಿಗೂ ಯುದ್ಧವಾಯಿತು! ಆಗ ಪರಶುರಾಮನು ಗಣೇಶನನ್ನು ತನ್ನ ಕೊಡಲಿಯಿಂದ ಹೊಡೆಯಲು, ಗಣೇಶನು ಆ ಕೊಡಲಿಯನ್ನು ತನ್ನ ತಂದೆ ಶಿವನು ಕೊಟ್ಟದ್ದೆಂಬ ಗೌರವಕ್ಕೆ ತನ್ನ ಒಂದು ದಂತವನ್ನು ಅದಕ್ಕೊಪ್ಪಿಸಿದನು! ಇದರಿಂದ ಅವನ ಆ ಒಂದು ದಂತ ಮುರಿದು ಕೆಳಗೆ ಬಿದ್ದು ದೊಡ್ಡ ಸದ್ದಾಯಿತು! ಈ ಶಬ್ದವನ್ನು ಕೇಳಿ, ಶಿವ, ಪಾರ್ವತಿಯರು ಹೊರಗೋಡಿ ಬಂದರು! ತನ್ನ ಪುತ್ರನ ಒಂದು ದಂತ ಭಗ್ನವಾಗಿದ್ದುದನ್ನು ಕಂಡು ಪಾರ್ವತಿಯು ಕೋಪಗೊಂಡು," ಇದೇಯೇನು ನಿನ್ನ ಗುರುವಿಗೆ ಗುರುದಕ್ಷಿಣೆ ಕೊಡುವ ರೀತಿ?" ಎಂದು ಇನ್ನೇನು ಪರಶುರಾಮನಿಗೆ ಶಾಪವನ್ನು ಕೊಡಲು ಹೊರಟಾಗ, ಅವನನ್ನು ಉಳಿಸಲು ವಿಷ್ಣುವು ಒಬ್ಬ ವೃದ್ಧ ಬ್ರಾಹ್ಮಣನ ರೂಪದಲ್ಲಿ ಬಂದನು. ಏಕೆಂದರೆ ಪರಶುರಾಮನು ವಿಷ್ಣುವಿನ ಅಂಶಾವತಾರವಾಗಿದ್ದನು.‌ ವೃದ್ಧ ಬ್ರಾಹ್ಮಣನು ಪಾರ್ವತಿಯನ್ನು ಸಮಾಧಾನಪಡಿಸುತ್ತಾ ಹೇಳಿದನು," ಭದ್ರೆ! ಗಣೇಶನ ಹೆಸರುಗಳಲ್ಲಿ ಏಕದಂತ ಎಂಬುದೂ ಒಂದು! ಹಾಗಾಗಿ, ಅವನು ಏಕದಂತನಾಗಿರಬೇಕೆಂಬುದು ವಿಧಿನಿಯಮ. ಆದ್ದರಿಂದ ದಯವಿಟ್ಟು ಪರಶುರಾಮನನ್ನು ಶಪಿಸಬೇಡ!" 
   ಹೀಗೆ ಬ್ರಾಹ್ಮಣನ ರೂಪದಲ್ಲಿ ಬಂದ ವಿಷ್ಣುವು ಪಾರ್ವತಿಯನ್ನು ಸಮಾಧಾನಪಡಿಸಿ ಅವಳು ಪರಶುರಾಮನಿಗೆ ಶಪಿಸುವುದನ್ನು ತಪ್ಪಿಸಿದನು.
    ಬ್ರಹ್ಮವೈವರ್ತಪುರಾಣದ ಪ್ರಕಾರ, ಗಣೇಶನಿಗೆ ತುಳಸಿ ಎಲೆಗಳ ಪೂಜೆ ನಿಷಿದ್ಧ.‌ ಇದಕ್ಕೊಂದು ಕಥೆಯಿದೆ.‌ ಒಮ್ಮೆ, ತರುಣಿಯಾಗಿದ್ದ ತುಳಸಿ, ವಿಷ್ಣುವನ್ನೇ ಪತಿಯಾಗಿ ಪಡೆಯಬೇಕೆಂದು ಪುಣ್ಯಕ್ಷೇತ್ರಗಳಲ್ಲಿ ತಪಸ್ಸು ಮಾಡುತ್ತಿದ್ದಳು. ಹೀಗಿರಲು, ಒಮ್ಮೆ ಗಣೇಶನು ಶ್ರೀಕೃಷ್ಣನನ್ನು ಕುರಿತು ತಪಸ್ಸು ಮಾಡಲು ಗಂಗಾತೀರಕ್ಕೆ ಬಂದನು. ಅವನನ್ನು ನೋಡಿ ಕಾಮಾವೇಶಿತಳಾದ ತುಳಸಿಯು ಅವನ ಬಳಿ ಬಂದು," ಎಲೈ ಗಜಮುಖನೇ! ಎಲೈ ಪ್ರಶಾಂತಮನಸ್ಕನೇ! ಯಾರನ್ನು ಕುರಿತು ಧ್ಯಾನಿಸುತ್ತಿರುವೆ? ಏಕೆ ನಿನ್ನ ಹೊಟ್ಟೆ ದೊಡ್ಡದಾಗಿದೆ? ಏಕೆ ನಿನಗೆ ಆನೆಯ ಮೊಗವಿದೆ? ಏಕೆ ನಿನಗೆ ಒಂದೇ ದಂತವಿದೆ? ಹೇ ಮಹಾತ್ಮ! ಈಗ ಸಂಜೆಯಾಗಿದೆ! ನಿನ್ನ ಈ ಧ್ಯಾನ ನಿಲ್ಲಿಸು!" ಎನ್ನುತ್ತಾ ಅವನ ತಲೆಯ ಮೇಲೆ ಸ್ವಲ್ಪ ನೀರೆರೆಚಿ, ತನ್ನ ತೋರುಬೆರಳಿನಿಂದ ತಮಾಷೆಗೆ ಹೊಡೆದಳು! ಧ್ಯಾನವು ಭಂಗವಾಗಲು, ಗಣೇಶನು ಖಿನ್ನನಾಗಿ, " ಓ ತರುಣಿ! ಯಾರು ನೀನು? ಏಕೆ ನನ್ನ ತಪೋಭಂಗ ಮಾಡುತ್ತಿರುವೆ? ಒಬ್ಬನ ತಪೋಭಂಗ ಮಾಡಿದರೆ ಅಮಂಗಳವುಂಟಾಗುತ್ತದೆ!" ಎಂದನು.
    ಅದಕ್ಕೆ ತುಳಸಿಯು," ನಾನು ಧರ್ಮಧ್ವಜನ ಮಗಳು ತುಳಸಿ! ಒಬ್ಬ ಒಳ್ಳೆಯ ಪತಿಗಾಗಿ ತಪಸ್ಸು ಮಾಡುತ್ತಿರುವೆ! ಆದ್ದರಿಂದ ನೀನೇ ನನ್ನ ಪತಿಯಾಗು!" ಎಂದಳು.
    ಗಣೇಶನು," ಓ ತಾಯಿ! ನನಗೆ ಮದುವೆಯಾಗಲು ಇಷ್ಟವಿಲ್ಲ! ಅದರಿಂದ ದುಃಖವೂ ಸಂಸಾರಬಂಧನವೂ ಆಗುತ್ತವೆ! ನೀನು ಬೇರೊಬ್ಬ ಕಾಮಾಸಕ್ತ ಪುರುಷನನ್ನು ಮದುವೆಯಾಗು!" ಎಂದನು. ಆಗ ತುಳಸಿಯು ಕೋಪಗೊಂಡು ಅವನಿಗೆ," ನಿನ್ನ ಹೆಂಡತಿಯು ದುಷ್ಟೆಯಾಗುವಳು!" ಎಂದು ಶಪಿಸಿದಳು. ಅದಕ್ಕೆ ಗಣೇಶನೂ ಕುಪಿತನಾಗಿ," ನೀನು ಒಬ್ಬ ರಾಕ್ಷಸನ ಪತ್ನಿಯಾಗಿ ಅನಂತರ ಇನ್ನೊಂದು ಶಾಪದಿಂದ ಮರವಾಗುವೆ!" ಎಂದು ಅವಳನ್ನು ಶಪಿಸಿದನು! 
    ಇದರಿಂದ ದುಃಖಿತಳಾಗಿ ಅಳುತ್ತಾ ತುಳಸಿಯು ಗಣೇಶನನ್ನು ಪಶ್ಚಾತ್ತಾಪದಿಂದ ಸ್ತುತಿಸಿದಳು. ಆಗ ಗಣೇಶನು ಅವಳಲ್ಲಿ ಪ್ರಸನ್ನನಾಗಿ ಹೇಳಿದ," ನೀನು ಎಲ್ಲಾ ಪುಷ್ಪಗಳ ಸಾರವಾಗಿ ವಿಷ್ಣುವಿಗೆ, ಅದರಲ್ಲೂ ಶ್ರೀಕೃಷ್ಣನಿಗೆ ಪ್ರಿಯಳಾಗುವೆ! ಪರಮಪವಿತ್ರಳಾದ ನೀನು ಎಲ್ಲರಿಗೂ ಮುಕ್ತಿಯನ್ನು ದಯಪಾಲಿಸುವೆ! ಆದರೆ ನಾನು ಮಾತ್ರ ನಿನ್ನನ್ನು ಸ್ವೀಕರಿಸುವುದಿಲ್ಲ!" 
     ಹೀಗೆ ಹೇಳಿ ಗಣೇಶನು ಬದರಿಕಾಶ್ರಮಕ್ಕೆ ಹೋದನು. ತುಳಸಿಯು ಪುಷ್ಕರ ಕ್ಷೇತ್ರಕ್ಕೆ ಹೋಗಿ ಉಪವಾಸ ಮಾಡುತ್ತಾ ಒಂದು ಲಕ್ಷ ವರ್ಷಗಳ ಕಾಲ ತಪಸ್ಸು ಮಾಡಿದಳು.‌ ಅನಂತರ, ಗಣೇಶನ ಶಾಪದಂತೆ ಶಂಖಚೂಡನೆಂಬ ದಾನವನ ಪತ್ನಿಯಾದಳು.‌ ಬಹುಕಾಲದ ಬಳಿಕ, ಶಂಖಚೂಡನು ಶಿವನಿಂದ ಸಂಹಾರಗೊಳ್ಳಲು, ತುಳಸಿಯು ಮರವಾದಳು ಹಾಗೂ ವಿಷ್ಣುವಿಗೆ ಪ್ರಿಯಳಾದಳು. 
    ತುಳಸಿಯ ಶಾಪದಂತೆ ಗಣೇಶನಿಗೆ ದುಷ್ಟ ಪತ್ನಿ ಸಿಗದಿದ್ದರೂ ಬ್ರಹ್ಮನ ಹೆಣ್ಣು ಮಕ್ಕಳಾದ ರಿದ್ಧಿ ಮತ್ತು ಸಿದ್ಧಿ ಎಂಬುವರನ್ನು ಮದುವೆಯಾದ ಎಂದು ಬೇರೊಂದು ಕಥೆಯಿದೆ. ಇದು ಸಾಂಕೇತಿಕ ಎಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. 
    ಇವು ಬ್ರಹ್ಮವೈವರ್ತಪುರಾಣದ ಗಣಪತಿ ಖಂಡದ ಸ್ವಾರಸ್ಯಕರ ಕಥೆಗಳು. 


ಶುಕ್ರವಾರ, ಸೆಪ್ಟೆಂಬರ್ 11, 2026

ಸುಂದರೀಶತಕ -೯೧

ಸಂಸ್ಕೃತ ಮೂಲ 

ನತವದನಮುನ್ನತಭ್ರೂ: ಪಶ್ಯಂತೀ ವದನಮೂರ್ಮಿಕಾಮುಕುರೇ ।
ಸುಂದರಿ ಮೃದು ಸ್ಮಯಂತೀ ಕಸ್ಯ ನ ನಯನಂ ಕೃತಾರ್ಥಯಸಿ ।।

ಕನ್ನಡ ಅನುವಾದ 

    ' ಎಲೈ ಸುಂದರಿ! ಮುಖವನ್ನು ಬಾಗಿಸಿ, ಹುಬ್ಬುಗಳನ್ನೇರಿಸಿ, ಮೆಲ್ಲನೆ ನಗುತ್ತಾ, ಹೆಬ್ಬೆರಳಿನ ಉಂಗುರದ ಕನ್ನಡಿಯಲ್ಲಿ ನಿನ್ನ ಮುಖದ ಪ್ರತಿಬಿಂಬವನ್ನು ನೋಡಿಕೊಳ್ಳುತ್ತಾ ಯಾರ ಕಣ್ಣನ್ನು ತಾನೇ ನೀನು ಕೃತಾರ್ಥವಾಗಿಸುವುದಿಲ್ಲ?' 
    ಊರ್ಮಿಕಾಮುಕುರವೆಂದರೆ ಹೆಬ್ಬೆರಳಿನ ಉಂಗುರದಲ್ಲಿರುವ ಪುಟ್ಟ ಕನ್ನಡಿ. ಹಿಂದಿನ ಕಾಲದಲ್ಲಿ ಹುಡುಗಿಯರು ಈ ಪುಟ್ಟ ಕನ್ನಡಿಯಲ್ಲಿ ತಮ್ಮ ಮುಖದ ಪ್ರತಿಬಿಂಬವನ್ನು ಹಾಗೂ ತಮ್ಮ ಹಿಂದೆ ಬಂದ ತಮ್ಮ ಗಂಡಂದಿರ ಮುಖವನ್ನು ನೋಡಲು ಬಳಸುತ್ತಿದ್ದರು. ಇಲ್ಲಿಯೂ ಒಬ್ಬ ಸುಂದರ ಹುಡುಗಿ ಅದೇ ರೀತಿ ಮೆಲ್ಲನೆ ನಗುತ್ತಾ ತನ್ನ ಹೆಬ್ಬೆರಳಿನ ಉಂಗುರದಲ್ಲಿರುವ ಕನ್ನಡಿಯಲ್ಲಿ ತನ್ನ ಮುಖವನ್ನು ನೋಡಿಕೊಳ್ಳುತ್ತಿದ್ದಾಳೆ. ಹಾಗೆ ಕನ್ನಡಿಯಲ್ಲಿ ಮುಖ ನೋಡಿಕೊಳ್ಳುತ್ತಾ ವೈಯಾರದಿಂದ ನಿಂತಿರುವ ಅವಳನ್ನು ನೋಡುವುದೇ ಒಂದು ಸೌಭಾಗ್ಯ! ಹಾಗಾಗಿ ಅವಳನ್ನು ನೋಡುವ ಯಾರ ಕಣ್ಣನ್ನು ತಾನೇ ಕೃತಾರ್ಥಗೊಳಿಸುವುದಿಲ್ಲ ಎಂದು ಕವಿಯು ಅವಳನ್ನು ಕೇಳುತ್ತಿದ್ದಾನೆ.

ಬುಧವಾರ, ಸೆಪ್ಟೆಂಬರ್ 9, 2026

ಸುಂದರೀಶತಕ -೯೦

ಸಂಸ್ಕೃತ ಮೂಲ 

ಚರಣತಲಗಲದಲಕ್ತವಲತ್ಪದಂ ವರ್ತ್ಮ ಚಕಿತನಯನಾಯಾ: ।
ಅನುರಾಗಬಂಧಪದ್ಧತಿರಿಯತೀತಿ ಪರಂ ನಿವೇದಯತಿ ।।

ಕನ್ನಡ ಅನುವಾದ 

    ಹೆದರಿದ ಕಂಗಳಿಂದ ಕೂಡಿದ ಆ ಸುಂದರಿ ತನ್ನ ಪ್ರಿಯತಮನನ್ನು ಭೇಟಿಯಾಗಲು ಹೋಗುತ್ತಿದ್ದಂತೆ ಅವಳ ಪಾದಗಳ ತಳಗಳಿಗೆ ಸವರಿರುವ ಅಲಕ್ತಕ ರಸವು ಸೋರಿ ಅವಳ ನಡಿಗೆಯುದ್ದಕ್ಕೂ ಹೆಜ್ಜೆಯ ಗುರುತುಗಳನ್ನು ನಿರ್ಮಿಸುತ್ತಿದೆ! ಈ ಹೆಜ್ಜೆಗುರುತುಗಳ ದಾರಿ, ಅವಳ ಅನುರಾಗ ಬಂಧನ ಎಷ್ಟು ಆಳವಾದುದೆಂದು ತೋರಿಸುತ್ತದೆ!'
    ಇಲ್ಲಿ ಒಬ್ಬ ಸುಂದರ ಹುಡುಗಿ ತನ್ನನ್ನು ಚೆನ್ನಾಗಿ ಅಲಂಕರಿಸಿಕೊಂಡು ತನ್ನ ಪಾದಗಳ ತಳಗಳಿಗೆ ಅಲಕ್ತಕವನ್ನು ಸವರಿಕೊಂಡು ತನ್ನ ಪ್ರಿಯತಮನನ್ನು ಭೇಟಿಯಾಗಲು ಸಂಕೇತ ಸ್ಥಳಕ್ಕೆ ಹೋಗುತ್ತಿದ್ದಾಳೆ. ಯಾರಾದರೂ ನೋಡಿಯಾರು 
ಅಥವಾ ಪ್ರಾಯಶಃ ಕಾಡುದಾರಿಯಾಗಿರುವುದರಿಂದ ಹೆದರಿದ ಕಂಗಳಿಂದ ಅಲ್ಲಲ್ಲಿ ನಿಂತು ನೋಡುತ್ತಾ ಹೋಗುತ್ತಾಳೆ! ಹಾಗೆ ಹೋಗುವಾಗ ದಾರಿಯುದ್ದಕ್ಕೂ ಅಲಕ್ತಕದ ಕೆಂಪು ಹೆಜ್ಜೆ ಗುರುತುಗಳನ್ನು ಬಿಡುತ್ತಾಳೆ. ಆ ಗುರುತುಗಳು ಅವಳು ಎಷ್ಟು ದೂರ ನಡೆದಿದ್ದಾಳೆಂದು ತೋರಿಸುತ್ತಿವೆ. ಆದರೆ ಅಷ್ಟೇ ಅಲ್ಲದೆ, ಆ ಗುರುತುಗಳು ಅವಳ ಪ್ರಿಯತಮನ ಅನುರಾಗದ ಬಂಧನದ ಆಳ ಎಷ್ಟೆಂದು ಸೂಚಿಸುತ್ತಿವೆ! 

ಭಾನುವಾರ, ಸೆಪ್ಟೆಂಬರ್ 6, 2026

ಸುಂದರೀಶತಕ -೮೯

ಸಂಸ್ಕೃತ ಮೂಲ 

ಚರಣಕ್ರಮಮನುವಿಲಸದ್ಭ್ರೂಯುಗವಿನ್ಯಾಸಮಾನತಗ್ರೀವಮ್ ।
ನೃತ್ಯನ್ನಿತಂಬಬಿಂಬಂ ಗತಮಸ್ಯಾ ಕಂ ನ ಮೋಹಯತಿ ।।

ಕನ್ನಡ ಅನುವಾದ 

  ' ಈ ಸುಂದರಿಯು ತನ್ನ ಹುಬ್ಬುಗಳನ್ನು ವಿನ್ಯಾಸಪೂರ್ವಕವಾಗಿ ಆಡಿಸುತ್ತಾ, ಕುತ್ತಿಗೆಯನ್ನು ಸ್ವಲ್ಪ ಬಾಗಿಸಿ, ನಿತಂಬಬಿಂಬಗಳನ್ನು ಕುಣಿಸುತ್ತಾ ಹೆಜ್ಜೆಯಿಡುತ್ತಿದ್ದರೆ, ಅವಳ ನಡಿಗೆಯು ಯಾರನ್ನು ತಾನೇ ಮೋಹಗೊಳಿಸುವುದಿಲ್ಲ?' 
     ಸುಂದರ ಹೆಣ್ಣಿನ ಅಂಗಾಂಗಗಳನ್ನೂ ಅವಳ ಬಗೆಬಗೆಯ ಹಾವಭಾವಗಳನ್ನೂ ಸಂಯೋಗ,ವಿರಹ ಶೃಂಗಾರಗಳನ್ನೂ ವರ್ಣಿಸುತ್ತಿರುವ ಕವಿಯು ಈಗ ಅವಳ ಸುಂದರ ನಡಿಗೆಯನ್ನು ವರ್ಣಿಸುತ್ತಿದ್ದಾನೆ. ಹೆಣ್ಣು ನಿಧಾನವಾಗಿ ಹೆಜ್ಜೆಯಿಡುತ್ತಾ ನಡೆಯುತ್ತಿದ್ದರೆ ಅವಳ ಅಂಗಾಂಗಗಳೆಲ್ಲವೂ ಲಯಬದ್ಧವಾಗಿ ಆಡುತ್ತಾ ನಾಟ್ಯದಂತಿರುತ್ತದೆ! ಇಂಥ ನರ್ತನರೂಪದ ಅವಳ ನಡಿಗೆ ಯಾರಿಗೆ ತಾನೇ ಮೋಹವುಂಟುಮಾಡುವುದಿಲ್ಲ ಎಂದು ಕೇಳುತ್ತಾನೆ ಕವಿ! 

ಗುರುವಾರ, ಸೆಪ್ಟೆಂಬರ್ 3, 2026

ಸುಂದರೀಶತಕ -೮೮

ಸಂಸ್ಕೃತ ಮೂಲ 

ದೋರಾಂದೋಲನಸುಭಗಂ ನಿತಂಬಭರಮಂಥರಾಂಘ್ರಿವಿನ್ಯಾಸಮ್ ।
ತವ ಗಜಗಾಮಿನಿ ಗಮನಂ ಕುರುತೇ ಯತಿಚಿತ್ತಸಂಯಮನಮ್ ।।

ಕನ್ನಡ ಅನುವಾದ 

    'ಎಲೈ ಗಜಗಾಮಿನಿ! ಸೊಗಸಾಗಿ ಆಡುವ ನಿನ್ನ ತೋಳುಗಳು, ಭಾರವಾದ ನಿನ್ನ ನಿತಂಬಗಳಿಂದ ನಿಧಾನವಾದ ನಿನ್ನ ಹೆಜ್ಜೆಗಳ ವಿನ್ಯಾಸ, ಇವುಗಳಿಂದ ಕೂಡಿದ ನಿನ್ನ ನಡಿಗೆ, ಯತಿಗಳ ಚಿತ್ತದಲ್ಲೂ ಸಂಯಮವನ್ನುಂಟುಮಾಡುತ್ತದೆ ( ವ್ಯಂಗ್ಯಾರ್ಥದಲ್ಲಿ ಸಂಯಮವನ್ನು ಶಿಥಿಲಗೊಳಿಸುತ್ತದೆ)!' 
    ಇಲ್ಲಿ ಕವಿಯು ಹೆಣ್ಣಿನ ನಿಧಾನವಾದ ನಡಿಗೆಯನ್ನು ವರ್ಣಿಸುತ್ತಾ ಅದನ್ನು ಆನೆಯ ನಡಿಗೆಗೆ ಹೋಲಿಸುತ್ತಾ ಅವಳನ್ನು ಗಜಗಾಮಿನಿ ಎಂದು ಕರೆದಿದ್ದಾನೆ! ಸುಂದರವಾಗಿ ಆಡುವ ತೋಳುಗಳು, ಭಾರವಾದ ನಿತಂಬಗಳಿಂದ ನಿಧಾನವಾದ ಅವಳ ಹೆಜ್ಜೆಗಳ ವಿನ್ಯಾಸ, ಅವಳ ನಡಿಗೆಯನ್ನು ಸುಂದರಗೊಳಿಸುವೆ! ಅದು ಯತಿಗಳ ಚಿತ್ತದ ಸಂಯಮವನ್ನೂ ಶಿಥಿಲಗೊಳಿಸುತ್ತದೆ! ಇಲ್ಲಿ 'ಕುರುತೇ ಯತಿಚಿತ್ತಸಂಯಮನಂ' ಎಂದಿದೆ.‌ ಅಂದರೆ ಯತಿಚಿತ್ತದಲ್ಲಿ ಸಂಯಮವುಂಟುಮಾಡುತ್ತದೆ ಎಂದು ಅರ್ಥ ಬರುತ್ತದೆ. ಆದರೆ ಅದು ವ್ಯಂಗ್ಯಾರ್ಥದಲ್ಲಿ ಹೇಳಲಾಗಿದೆ. ಅಥವಾ ಹೆಣ್ಣಿನ ವಿಷಯದಲ್ಲಿ ಮನಸ್ಸನ್ನು ಮುಳುಗಿಸಿ ಅವಳಲ್ಲಿ ಚಲಿಸದಂತೆ ಸಂಯಮವುಂಟುಮಾಡುತ್ತದೆ ಎಂದು ತೆಗೆದುಕೊಳ್ಳಬಹುದು.‌ ಅಂದರೆ ಅವರ ಆಧ್ಯಾತ್ಮಿಕ ಭಾವ ಹಾಗೂ ತಪಸ್ಸು ಶಿಥಿಲಗೊಳ್ಳುತ್ತದೆ. ಹೆಣ್ಣಿನ ಸೌಂದರ್ಯ, ಸುಂದರವಾಗಿರುವುದರಲ್ಲೆಲ್ಲಾ ಅತ್ಯಂತ ಸುಂದರವಾದುದೆಂಬುದರಲ್ಲಿ ಯಾವ ಸಂದೇಹವೂ ಇಲ್ಲ! ಅದು ಯತಿಗಳ ಮನಸ್ಸನ್ನೂ ಸೆಳೆಯುತ್ತದೆ! ಪುರಾಣಗಳಲ್ಲಿ ನಾವು ನೋಡುವಂತೆ ವಿಶ್ವಾಮಿತ್ರರು ಬ್ರಹ್ಮರ್ಷಿಯಾಗಲು ತಪಸ್ಸು ಮಾಡುತ್ತಿರಲು, ಅದು ತನ್ನ ಪದವಿಗಾಗಿ ಎಂದು ತಿಳಿದ ಇಂದ್ರನು ಅವರ ತಪಸ್ಸನ್ನು ಕೆಡಿಸಲು ಮೇನಕೆಯೆಂಬ ಅಪ್ಸರೆಯನ್ನು ಕಳಿಸಲು, ಅವಳ ಸೌಂದರ್ಯಕ್ಕೆ ಮನಸೋತ ವಿಶ್ವಾಮಿತ್ರರು ಅವಳೊಂದಿಗೆ ಹತ್ತು ವರ್ಷಗಳ ಕಾಲ ಪ್ರೇಮದಲ್ಲಿ ಕಳೆದು ಶಕುಂತಲೆಯ ಜನ್ಮಕ್ಕೆ ಕಾರಣರಾದರು. ಅಂತೆಯೇ ತಪಸ್ಸು ಮಾಡುತ್ತಿದ್ದ ಕಂಡು ಮಹರ್ಷಿಗಳು, ಇಂದ್ರನು ಕಳಿಸಿದ ಪ್ರಮ್ಲೋಚೆಯೆಂಬ ಅಪ್ಸರೆಯೊಂದಿಗೆ ಅನೇಕ ವರ್ಷಗಳನ್ನು ಒಂದೇ ದಿನವೆಂಬಂತೆ ಕಳೆದು ಮಾರಿಷೆ ಎಂಬ ಕನ್ಯೆಯ ಜನ್ಮಕ್ಕೆ ಕಾರಣರಾದರು! ಹಾಗೆಯೇ ಪರಾಶರರು ಬೆಸ್ತರ ಕನ್ಯೆ ಸತ್ಯವತಿಯೊಂದಿಗೆ ಸೇರಿ ವೇದವ್ಯಾಸರ ಜನ್ಮಕ್ಕೆ ಕಾರಣರಾದರು! ವೇದವ್ಯಾಸರೂ ಘೃತಾಚಿಯೆಂಬ ಅಪ್ಸರೆಗೆ ಮನಸೋತು ಶುಕ ಮಹರ್ಷಿಗಳ ಜನ್ಮಕ್ಕೆ ಕಾರಣರಾದರು! ಹೀಗೆ ಹೆಣ್ಣಿನ ಮೋಹ, ಋಷಿಮುನಿಗಳನ್ನೂ ಬಿಟ್ಟಿಲ್ಲ! ಅದನ್ನು ಹೇಳುತ್ತಾ ಕವಿಯು ಇಲ್ಲಿ ಹೆಣ್ಣಿನ ಸುಂದರ ನಡಿಗೆಯನ್ನು ಬಣ್ಣಿಸಿದ್ದಾನೆ.

ಸುಂದರೀಶತಕ -೮೭

ಸಂಸ್ಕೃತ ಮೂಲ 

ಪ್ರಾತ: ಪೃಚ್ಛತಿ ನಿಭೃತಂ ಸಖೀಜನೇ ರಜನಿಕೇಲಿವೃತ್ತಾಂತಮ್ ।
ಮಂದಸ್ಮಿತಾದಜಾಯತ ರಹಸ್ಯಭೇದ: ಸರೋಜಾಕ್ಷ್ಯಾ: ।।

ಕನ್ನಡ ಅನುವಾದ 

    'ಬೆಳಗಾಗಲು, ಸಖಿಯರು ಆ ಸರೋಜಾಕ್ಷಿಯನ್ನು ರಾತ್ರಿಯ ರತಿಕ್ರೀಡೆಯ ವೃತ್ತಾಂತವನ್ನು ಏಕಾಂತದಲ್ಲಿ ಕೇಳಲು, ಅವಳು ಮೆಲ್ಲನೆ ನಕ್ಕಳು! ಅವಳ ಆ ಮಂದಹಾಸದಿಂದ ಅವಳ ರಹಸ್ಯ ಪ್ರಕಟವಾಯಿತು!'
     ಕೆಲವೊಮ್ಮೆ ದೀರ್ಘ ವರ್ಣನೆಗಳಿಗಿಂತ ಒಂದು ಸಣ್ಣ ಕ್ರಿಯೆಯಿಂದ ಅಥವಾ ಚಿಹ್ನೆಯಿಂದ ಎಷ್ಟೋ ವಿಷಯಗಳನ್ನು ಹೇಳಿದಂತಾಗುತ್ತದೆ. ಇಲ್ಲಿ ಒಬ್ಬ ನವವಧು ಬೆಳಿಗ್ಗೆ ಆಗಷ್ಟೇ ನಿದ್ರೆಯಿಂದ ಎದ್ದಿದ್ದಾಳೆ. ಆಗ ಅವಳ ಸಖಿಯರು ಓಡಿಬಂದು ಏಕಾಂತದಲ್ಲಿ ರಾತ್ರಿ ಅವಳ ಪತಿಯೊಂದಿಗೆ ರತಿಕ್ರೀಡೆ ಹೇಗಿತ್ತೆಂದು ಕುತೂಹಲದಿಂದಲೂ ತುಂಟತನದಿಂದಲೂ ಕೇಳಿದ್ದಾರೆ. ಅವಳು ಹೇಗೆ ತಾನೇ ಹೇಳಿಯಾಳು? ಹಾಗಾಗಿ ನಾಚಿಕೊಂಡು ಮೆಲ್ಲನೆ ನಕ್ಕಿದ್ದಾಳೆ! ಅವಳ ಆ ಮೆಲುನಗೆಯೇ ಅವಳ ರಹಸ್ಯಸ್ಫೋಟ ಮಾಡಿದೆ! ಅಷ್ಟರಿಂದಲೇ ರಾತ್ರಿಯ ರತಿಕ್ರೀಡೆ ಹೇಗಿತ್ತೆಂದು ಅವರಿಗೆ ತಿಳಿದಿದೆ! ಕವಿಯು ಈ ಸೂಕ್ಷ್ಮ ವಿಚಾರವನ್ನು ಅದೆಷ್ಟು ಸೊಗಸಾಗಿ, ಶೃಂಗಾರಮಯವಾಗಿ ತೋರಿಸಿದ್ದಾನೆ! 

ಸುಂದರೀಶತಕ -೮೬

ಸಂಸ್ಕೃತ ಮೂಲ 

ಸಂಸ್ಪೃಷ್ಟಪದ್ಮಿನೀಕೋ ಯಥಾ ಯಥಾರ್ಕ: ಕರಾನ್ಪ್ರಸಾರಯತಿ ।
ಸುಂದರಿ ಮಾನವತೀಯಂ ಸಂಕುಚತಿ ತಥಾ ತಥಾ ಛಾಯಾ ।।

ಕನ್ನಡ ಅನುವಾದ 

    ಕವಿಯು ಇಲ್ಲಿ ಒಂದು ಸುಂದರ ಶೃಂಗಾರ ಪ್ರಸಂಗವನ್ನು ಶ್ಲೇಷದ ಮೂಲಕ ಎರಡು ರೀತಿಗಳಲ್ಲಿ ನಾಯಕನಿಂದ ಹೇಳಿಸುತ್ತಿದ್ದಾನೆ -
   ಕಮಲದ ಪಕ್ಷದಲ್ಲಿ," ಎಲೈ ಸುಂದರಿ! ಸೂರ್ಯನು ಹೇಗೆ ಹೇಗೆ ತನ್ನ ಕರಕಿರಣಗಳನ್ನು ಚಾಚಿ ಕಮಲವನ್ನು ಸ್ಪರ್ಶಿಸುವನೋ, ಹಾಗೆ ಹಾಗೆ ಆ ಕಮಲದ ನೆರಳು ಸಂಕುಚಿತಗೊಳ್ಳುತ್ತದೆ ( ಚಿಕ್ಕದಾಗುತ್ತದೆ)!" 
   ನಾಯಕಿಯ ಪಕ್ಷದಲ್ಲಿ," ಎಲೈ ಸುಂದರಿ! ಈ ಪ್ರಿಯತಮನು ಹೇಗೆ ಹೇಗೆ ತನ್ನ ಕರಗಳಿಂದ ತನ್ನ ಪ್ರಿಯೆಯನ್ನು ಸ್ಪರ್ಶಿಸುವನೋ, ಕೋಪಗೊಂಡಿದ್ದ ಅವಳ ಕೋಪ ಹಾಗೆ ಹಾಗೆ ಕರಗುತ್ತದೆ!" 
    ಇಲ್ಲಿ ನಾಯಕಿಯು ಯಾವುದೋ ಕಾರಣಕ್ಕೆ ಕೋಪಗೊಂಡಿದ್ದಾಳೆ. ನಾಯಕನು ಅವಳನ್ನು ಸಮಾಧಾನ ಮಾಡುವಂತೆ ಮೆಲ್ಲನೆ ಸ್ಪರ್ಶಿಸಿದಂತೆಲ್ಲಾ ಅವಳ ಕೋಪ ಕರಗುತ್ತದೆ. ಅದನ್ನು ಅವನು ಸೂರ್ಯ ಮತ್ತು ಕಮಲದ ದೃಷ್ಟಾಂತದಿಂದ ಅವಳಿಗೆ ಹೇಳುತ್ತಾನೆ. ಅದು ಮೇಲ್ನೋಟಕ್ಕೆ ಸೂರ್ಯ ಮತ್ತು ಕಮಲಗಳ ಪದ್ಯದಂತೆ ಕಂಡರೂ ಶ್ಲೇಷ ಅಥವಾ ಇನ್ನೊಂದು ಅರ್ಥದಲ್ಲಿ ತನ್ನ ಮತ್ತು ನಾಯಕಿಯ ಶೃಂಗಾರ ಪ್ರಸಂಗವನ್ನು ಹೇಳುತ್ತದೆ. ಸೂರ್ಯನು ಕಮಲವನ್ನು ಹೇಗೆ ಹೇಗೆ ತನ್ನ ಕರಕಿರಣಗಳನ್ನು ಚಾಚಿ ಕಮಲವನ್ನು ಸ್ಪರ್ಶಿಸುವನೋ ಹಾಗೆ ಹಾಗೆ ಅದರ ನೆರಳು ಸಂಕೋಚಗೊಳ್ಳುತ್ತದೆ. ಅಂದರೆ ಸೂರ್ಯನು ಆಕಾಶದ ಮಧ್ಯಕ್ಕೆ ಬರುತ್ತಾ ಅವನ ಕಿರಣಗಳು ಕಮಲವನ್ನು ಹೇಗೆ ಸ್ವರ್ಷಿಸುವವೋ ಹಾಗೆಯೇ ಕಮಲದ ನೆರಳು ಚಿಕ್ಕದಾಗುತ್ತದೆ. ನಾಯಕಿಯ ಪಕ್ಷದಲ್ಲಿ, ನಾಯಕನೇ ಸೂರ್ಯ. ಮಾನಿನಿ ಅಥವಾ ಕುಪಿತಳಾಗಿದ್ದ ತನ್ನ ಪ್ರಿಯತಮೆಯೇ ಕಮಲ. ಅವನು ತನ್ನ ಕರಗಳಿಂದ ( ಕಿರಣಗಳು) ಅವಳನ್ನು ಸ್ಪರ್ಶಿಸಿದಂತೆ ಅವಳ ಛಾಯೆ, ಅಂದರೆ ಕೋಪ, ಸಂಕೋಚಗೊಳ್ಳುತ್ತದೆ, ಅಂದರೆ ಕರಗುತ್ತದೆ. ಅವಳು ನಿಧಾನವಾಗಿ ಕೋಪದಿಂದ ಪ್ರೀತಿಯ ಭಾವಕ್ಕೆ ತಿರುಗುತ್ತಾಳೆ. ಇದನ್ನು ಹೇ ಸುಂದರಿ ಎನ್ನುತ್ತಾ ಅವನೇ ಅವಳಿಗೆ ಸೂರ್ಯ,ಕಮಲಗಳ ಘಟನೆಯಂತೆ ಹೇಳುತ್ತಾನೆ. ಹೀಗೆ ಶ್ಲೇಷ ಅಥವಾ ಎರಡು ಅರ್ಥಗಳು ಬರುವ ಪದ್ಯವಾದುದರಿಂದ ಇಲ್ಲಿ ಶ್ಲೇಷಾಲಂಕಾರವಿದೆ. 

ಶನಿವಾರ, ಆಗಸ್ಟ್ 29, 2026

ಅಜಗರಪ್ರಶ್ನೆ - ಮಹಾಭಾರತದ ಮರೆತುಹೋದ ಪ್ರಸಂಗ

ಯಕ್ಷಪ್ರಶ್ನೆ ಎಂಬ ಮಹಾಭಾರತದ ಪ್ರಸಂಗ ಪ್ರಾಯಶಃ ಎಲ್ಲರಿಗೂ ತಿಳಿದಿದೆ. ಯಾವುದಾದರೂ ಉತ್ತರಿಸಲು ಕಷ್ಟವಾದ ಪ್ರಶ್ನೆ ಹುಟ್ಟಿಕೊಂಡಾಗಲೂ ಅದೊಂದು ಯಕ್ಷಪ್ರಶ್ನೆ ಎಂದು ಈ ನುಡಿಗಟ್ಟನ್ನು ಬಳಸುತ್ತಾರೆ. ಬ್ರಾಹ್ಮಣನೊಬ್ಬನ ಅರಣಿಗಳನ್ನು ಜಿಂಕೆಯೊಂದು ಕೊಂಡೊಯ್ಯಲು ಅವನು ಅವನ್ನು ತರಲು ವನವಾಸಿಗಳಾದ ಪಾಂಡವರನ್ನು ಬೇಡಲು ಅವರು ಆ ಜಿಂಕೆಯನ್ನು ಹುಡುಕಿಕೊಂಡು ಹೋಗುತ್ತಾರೆ. ಆಗ ಅವರಿಗೆ ದಣಿವಾಗಲು, ಸಹದೇವನಿಗೆ ಸನಿಹದ ಕೆರೆಯಿಂದ ನೀರು ತರಲು ಕಳಿಸಲು, ಅದರ ಒಡೆಯನಾದ ಯಕ್ಷನೊಬ್ಬನು ತನ್ನ ಪ್ರಶ್ನೆಗಳನ್ನು ಉತ್ತರಿಸಿ ಅನಂತರ ನೀರು ಕುಡಿಯಬಹುದೆನ್ನುತ್ತಾನೆ. ಆದರೆ ಸಹದೇವನು ಅವನ ಮಾತನ್ನು ಕೇಳದೆ ನೀರು ಕುಡಿದು ಸತ್ತು ಬೀಳುತ್ತಾನೆ. ಅನಂತರ ನೀರು ತರಲು ಹೋದ ಇತರ ಮೂವರು ಪಾಂಡವರಿಗೂ ಇದೇ ಗತಿಯುಂಟಾಗಲು, ಕೊನೆಗೆ ಯುಧಿಷ್ಠಿರನೇ ಹೋಗಿ, ಅವನಿಗೆದುರಾದ ಯಕ್ಷನ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರಗಳನ್ನು ನೀಡುತ್ತಾನೆ. ಆಗ ಯಕ್ಷನು ಎಲ್ಲರನ್ನೂ ಬದುಕಿಸಿ ತಾನು ಯುಧಿಷ್ಠಿರನ ತಂದೆ ಯಮಧರ್ಮ ರಾಜನೆಂದು ಹೇಳಿ ತನ್ನ ನಿಜರೂಪ ತೋರಿಸಿ ಅವನನ್ನು ಪರೀಕ್ಷಿಸಲು ತಾನೇ ಜಿಂಕೆಯ ರೂಪದಲ್ಲಿ ಬ್ರಾಹ್ಮಣನ ಅರಣಿಗಳನ್ನು ಕೊಂಡೊಯ್ದು ಹೀಗೆ ಮಾಡಿದೆ ಎಂದು ಹೇಳುತ್ತಾನೆ. ಈ ಯಕ್ಷಪ್ರಶ್ನೆಯಲ್ಲಿ ಯಕ್ಷನು ಸ್ವಾರಸ್ಯಕರವಾದ ಹಾಗೂ ಜೀವನಕ್ಕೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳುತ್ತಾನೆ ಹಾಗೂ ಯುಧಿಷ್ಠಿರನು ಅವುಗಳಿಗೆ ಸೂಕ್ತ ಉತ್ತರಗಳನ್ನು ನೀಡುತ್ತಾನೆ.
    ಯಕ್ಷಪ್ರಶ್ನೆಯಂತೆಯೇ ಮಹಾಭಾರತದಲ್ಲಿ ಇನ್ನೊಂದು ಪ್ರಶ್ನೋತ್ತರದ ಸ್ವಾರಸ್ಯಕರ ಅಧ್ಯಾಯ ಇದೆ. ಅದೇ ಅಜಗರಪ್ರಶ್ನೆ. ಆದರೆ ಇದೊಂದು ಮರೆತುಹೋದ ಅಥವಾ ಅಷ್ಟು ಜನಪ್ರಿಯವಾಗಿಲ್ಲದ ಪ್ರಸಂಗವೆನ್ನಬಹುದು. ಇದು ವನಪರ್ವದ ಒಂದು ಉಪಪರ್ವವಾದ ಅಜಗರಪರ್ವದಲ್ಲಿದೆ. ಇಲ್ಲಿಯೂ ಯುಧಿಷ್ಠಿರನು ಒಂದು ಅಜಗರ ಅಥವಾ ಹೆಬ್ಬಾವು ಕೇಳುವ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರಗಳನ್ನು ನೀಡುತ್ತಾನೆ.‌ ಮಹಾಭಾರತದ ವಿವಿಧ ಪಾತ್ರಗಳಿಗೆ ವಿವಿಧ ವಿಶೇಷ ಗುಣಗಳಿರುವಂತೆ ಯುಧಿಷ್ಠಿರನಿಗಿರುವ ವಿಶೇಷ ಗುಣವೆಂದರೆ ಜ್ಞಾನ. ಈಗಿನ ದಿನಗಳಲ್ಲಿ ಈ ಅಜಗರಪ್ರಶ್ನೆ ಬಹಳ ಪ್ರಸ್ತುತವಾಗಿದೆ. ಏಕೆಂದರೆ ಇದರಲ್ಲಿ ಇಂದು ಬಹಳ ಚರ್ಚೆಯಾಗುತ್ತಿರುವ ಜಾತಿ ವ್ಯವಸ್ಥೆಯ ಬಗ್ಗೆ ನಿಖರವಾದ ವಿಚಾರಗಳನ್ನು ಹೇಳಲಾಗಿದೆ. ಭಾರತೀಯ ಗ್ರಂಥಗಳಲ್ಲಿ ನಿಜವಾಗಿಯೂ ಶೋಷಣಾತ್ಮಕ ಜಾತಿ ವ್ಯವಸ್ಥೆಯ‌ ಬಗ್ಗೆ ಹೇಳಲಾಗಿದೆಯೇ? ಇದರ ಬಗ್ಗೆ ಪ್ರಾಚೀನ ಭಾರತೀಯರ‌ ನಿಲುವು ಏನಿತ್ತು ಎಂಬುದರ ಬಗೆಗಿನ ಒಂದು ಸಾರಾಂಶ ಈ ಅಜಗರಪ್ರಶ್ನೆಯಲ್ಲಿದೆ. ಈಗ ಇದರ ಹಿನ್ನೆಲೆಯ ಕಥೆಯನ್ನು ನೋಡೋಣ.
    ಪಾಂಡವರು ವನವಾಸಿಗಳಾಗಿದ್ದಾಗ ತೀರ್ಥಯಾತ್ರೆ ಮಾಡುತ್ತಾ ಗಂದಮಾಧನ ಪರ್ವತಕ್ಕೆ ಬಂದು ಅಲ್ಲಿಂದ ವಿಶಾಖಯೂಪವೆಂಬ ಅರಣ್ಯಕ್ಕೆ ಬಂದರು. ಅಲ್ಲಿ ಒಮ್ಮೆ ಭೀಮನು ಬೇಟೆಯಾಡಲು ಹೋದನು. ಅವನು ಕಾಡಿನ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತಾ ಹರ್ಷಗೊಳ್ಳುತ್ತಾ ಅಲ್ಲಿಂದಿಲ್ಲಿಗೆ ಹಾರಿ, ನೆಗೆದು, ಭೂಮಿಯನ್ನೇ ಕಂಪನಗೊಳಿಸುತ್ತಾ , ಸಿಂಹನಾದ ಮಾಡುತ್ತಾ, ಮೃಗಪಕ್ಷಿಗಳನ್ನು ಭಯಪಡಿಸುತ್ತಾ, ಅನೇಕ ಪ್ರಾಣಿಗಳನ್ನು ಬೇಟೆಯಾಡುತ್ತಾ ಮುಂದೆ ಹೋಗುತ್ತಿದ್ದನು! ಆಗ ಅವನು ಒಂದು ಗುಹೆಯಲ್ಲಿ ಒಂದು ಭಯಂಕರ ಹೆಬ್ಬಾವನ್ನು ಕಂಡನು! ಇಡೀ ಗುಹೆಯನ್ನೇ ಆವರಿಸಿಕೊಂಡು ಮಲಗಿದ್ದ ಆ ದೊಡ್ಡ ಹೆಬ್ಬಾವು ಭೀಮನನ್ನು ನೋಡಿದ ಕೂಡಲೇ ಕೋಪಗೊಂಡು ಬುಸುಗುಟ್ಟುತ್ತಾ ಅವನನ್ನು ಹಿಡಿಯಿತು! ಹಸಿವಿನಿಂದ ಬಳಲಿದ್ದ ಅದು ಅವನನ್ನು ಸುತ್ತಿಕೊಂಡು ಹಗ್ಗದಿಂದ ಬಿಗಿಯುವಂತೆ ಬಿಗಿಯಿತು! ಮಹಾಪರಾಕ್ರಮಿಯಾಗಿದ್ದು, ಹತ್ತುಸಾವಿರ ಆನೆಗಳ ಬಲವನ್ನು ಹೊಂದಿದ್ದ ಭೀಮನಿಗೆ ಆ ಘಟಸರ್ಪದಿಂದ ಬಿಡಿಸಿಕೊಳ್ಳಲಾಗಲಿಲ್ಲ! ಕಣ್ಣು ಬಾಯಿ ಬಿಡುತ್ತಾ ತನ್ನ ಸಂಪೂರ್ಣ ಶಕ್ತಿಯನ್ನು ಕಳೆದುಕೊಂಡು ಆಶ್ಚರ್ಯಗೊಂಡ ಭೀಮನು ಇದು ಯಾವುದೋ ಅಸಾಧಾರಣ ಸರ್ಪವಿರಬೇಕೆಂದು ನಿರ್ಧರಿಸಿ ಅದಕ್ಕೆ ತನ್ನ ಪರಿಚಯವನ್ನು ಹೇಳುತ್ತಾ, " ಎಲೈ ಸರ್ಪರಾಜನೇ! ಯಾರು ನೀನು? ನನ್ನನ್ನೇಕೆ ಹೀಗೆ ಹಿಡಿದಿರುವೆ? ಹತ್ತುಸಾವಿರ ಆನೆಗಳ ಬಲವಿರುವ ಮಹಾಪರಾಕ್ರಮಿಯಾದ ನನ್ನ ಮುಂದೆ ಇಂಥ ಪ್ರಾಣಿಗಳಿರಲಿ, ಯಕ್ಷ, ರಾಕ್ಷಸ,ಪಿಶಾಚಿ,ನಾಗ,ಕಿನ್ನರರೂ ನಿಲ್ಲಲಾರರು! ನನ್ನನ್ನು ನೀನು ಪರಾಜಿತಗೊಳಿಸಿರುವೆಯೆಂದರೆ ನಿನ್ನಲ್ಲಿ ಯಾವುದೋ ಇಂದ್ರಜಾಲ, ಮಹೇಂದ್ರಜಾಲ ಶಕ್ತಿಗಳಿರಬೇಕು ಇಲ್ಲವೇ ಯಾವುದೋ ವರಬಲವಿರಬೇಕು! ಅಥವಾ ನಿನ್ನ ಸ್ವಾಭಾವಿಕ ಬಲದಿಂದಲೇ ನನ್ನನ್ನು ಪರಾಜಿತಗೊಳಿಸಿರುವೆಯೆಂದರೆ ಮನುಷ್ಯರ ಬಲಕ್ಕೆ ಧಿಕ್ಕಾರವಿರಲಿ!"
   ಆಗ ಆ ಹೆಬ್ಬಾವು ತನ್ನ ಹಿಡಿತವನ್ನು ಸ್ವಲ್ಪ ಸಡಿಲಗೊಳಿಸಿ ಹೇಳಿತು," ಎಲೈ ಭೀಮನೇ! ನಾನು ನಿನ್ನ ಪೂರ್ವಜ! ಆಯುವೆಂಬ ರಾಜನ ಮಗನಾದ ನಹುಷ! ಬ್ರಾಹ್ಮಣರನ್ನು, ಮುಖ್ಯವಾಗಿ ಅಗಸ್ತ್ಯ ಮಹರ್ಷಿಗಳನ್ನು ಅವಮಾನಿಸಿ ಅವರಿಂದ ಶಪಿತನಾಗಿ ಈ ಅವಸ್ಥೆ ಪಡೆದಿರುವೆ! ನೀನು ನಿಜವಾಗಿಯೂ ಅವಧ್ಯನು! ಆದರೆ ಹಸಿವಿನಿಂದ ಬಳಲಿರುವ ನಾನು ನಿನ್ನನ್ನೂ ಭಕ್ಷಿಸಬೇಕಾಗಿದೆ! ದಿನದ ಆರನೇ ಭಾಗದಲ್ಲಿ ನನಗೆ ಸಿಕ್ಕಿಬಿದ್ದ ಯಾರೇ ಆಗಲಿ, ಎಷ್ಟು ಪ್ರಯತ್ನಿಸಿದರೂ ಬಿಡಿಸಿಕೊಳ್ಳಲಾರರು! ಇದು ನನಗಿರುವ ವರಬಲ! ನಾನು ಶಾಪಗ್ರಸ್ತನಾದಾಗ ಮುನಿಗಳನ್ನು ಶಾಪಮುಕ್ತನನ್ನಾಗಿಸಲು ಬೇಡಿಕೊಂಡಾಗ ಈ ವರವನ್ನು ನೀಡಿ, ಸ್ವಲ್ಪ ಕಾಲದಲ್ಲಿಯೇ ಒಬ್ಬ ಮಹಾನ್ ವಿವೇಕಿಯು ನಾನು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿದಾಗ ಶಾಪವಿಮುಕ್ತನಾಗುವೆ ಎಂದು ಹರಸಿದರು.‌ ಹಾಗಾಗಿ ನಾನು ಅಭಕ್ಷ್ಯಗಳನ್ನು ತಿಂದುಕೊಂಡು ಈ ಕಾಡಿನಲ್ಲಿದ್ದೇನೆ!" 
   ಅದಕ್ಕೆ ಭೀಮನು," ಸರಿ! ಇದಕ್ಕೆ ನಾನು ದುಃಖಿಸುವುದಿಲ್ಲ! ನಮ್ಮ ಸುಖದುಃಖಗಳು ನಮ್ಮ ಕರ್ಮಫಲಗಳನ್ನನುಸರಿಸುತ್ತವೆ! ಆದರೆ ನನಗೆ ನನ್ನ ಸಹೋದರರ ಮತ್ತು ತಾಯಿಯದೇ ಚಿಂತೆ! ನಾನಿಲ್ಲದೆ ಅವರಿಗೆ ರಾಜ್ಯವನ್ನು ಪಡೆಯಲು ಪ್ರಚೋದನೆ ಇರುವುದಿಲ್ಲ!" ಎಂದನು.
    ನಹುಷನು ಭೂಮಿಯಲ್ಲಿ ರಾಜ್ಯಭಾರ ಮಾಡುತ್ತಿದ್ದಾಗ, ದೇವೇಂದ್ರನು ತ್ವಷ್ಟ್ರೃ ಪ್ರಜಾಪತಿಗೆ ಯುಜ್ಞದಿಂದ ಹುಟ್ಟಿದ್ದ ವೃತ್ರಾಸುರನೆಂಬ ರಾಕ್ಷಸನನ್ನು ಕೊಂದು ಬ್ರಹ್ಮಹತ್ಯಾದೋಷಕ್ಕೆ ಒಳಗಾಗಿ ಓಡಿಹೋಗಿದ್ದನು. ಆಗ ದೇವತೆಗಳು ಸ್ವರ್ಗವನ್ನು ಆಳಲು ನಹುಷನು ಯೋಗ್ಯನೆಂದು ಭಾವಿಸಿ ಅವನನ್ನು ಕೇಳಿಕೊಂಡಿದ್ದರು. ಅದಕ್ಕೆ ಒಪ್ಪಿ ನಹುಷನು ಸ್ವರ್ಗಕ್ಕೆ ರಾಜನಾಗಿ ಕ್ರಮೇಣ ಅಹಂಕಾರದಿಂದ ಕೂಡಿ ಇಂದ್ರನ ಹೆಂಡತಿ ಶಚಿಯನ್ನು ಬಯಸಿದನು. ಅವನಿಂದ ತಪ್ಪಿಸಿಕೊಳ್ಳಲು ಅವಳು, ಬೃಹಸ್ಪತಿಗಳೊಂದಿಗೆ ಸಮಾಲೋಚಿಸಿ, ಸಪ್ತರ್ಷಿಗಳು ಹೊತ್ತ ಪಲ್ಲಕ್ಕಿಯಲ್ಲಿ ಬರಬೇಕೆಂದು ಅವನಿಗೆ ಕರಾರು ಹಾಕಿದಳು. ಅಹಂಕಾರದಿಂದ ಮತ್ತನಾಗಿದ್ದ ನಹುಷನು ಅದಕ್ಕೂ ಒಪ್ಪಿ ಸಪ್ತರ್ಷಿಗಳಿಗೆ ತನ್ನ ಪಲ್ಲಕ್ಕಿಯನ್ನು ಹೊತ್ತು ನಡೆಯಲು ಆಜ್ಞಾಪಿಸಿದನು. ಅವರು ಹಾಗೆಯೇ ಮಾಡಲು, ಕುಳ್ಳಗಿದ್ದ ಅಗಸ್ತ್ಯರು ವೇಗದಿಂದ ಮುಂದೆ ಹೋಗಲಾಗಲಿಲ್ಲ. ಆಗ ನಹುಷನು ಅವರನ್ನು ವೇಗವಾಗಿ ಹೋಗುವಂತೆ ಹೇಳುತ್ತಾ ಕಾಲಿನಿಂದ ಒದೆಯಲು, ಕುಪಿತಗೊಂಡ ಅವರು ಅವನಿಗೆ ಹೆಬ್ಬಾವಾಗಿ ಭೂಮಿಯ ಮೇಲೆ ಬೀಳುವಂತೆ ಶಪಿಸಿದರು.‌ ಇದು ನಹುಷನಿಗೆ ಶಾಪ ಬಂದ ಕಥೆ.
   ಇತ್ತ ಆಶ್ರಮದಲ್ಲಿದ್ದ ಯುಧಿಷ್ಠಿರನಿಗೆ ಕಾರಣವಿಲ್ಲದೆ ಏನೋ ಕಳವಳವಾಗತೊಡಗಿತು. ಗುಳ್ಳೆನರಿಗಳು ಊಳಿಡುವುದು, ಒಂದೇ ರೆಕ್ಕೆ, ಒಂದೇ ಕಣ್ಣು ಮತ್ತು ಒಂದೇ ಕಾಲಿನಿಂದ ಕೂಡಿದ್ದ ವರ್ತಿಕವೆಂಬ ಭಯಂಕರ ಪಕ್ಷಿಗಳು ಸೂರ್ಯನಿಗೆದುರಾಗಿ ರಕ್ತ ಕಾರುವುದು, ಆಶ್ರಮದ ಹಿಂದೆ ಕಾಗೆಗಳು ಕೂಗುವುದು, ಚಂಡಮಾರುತವು ಬೀಸಿ ಮರಗಿಡಗಳನ್ನು ಬುಡಮೇಲು ಮಾಡುವುದು, ಮೊದಲಾದ ಉತ್ಪಾತಗಳಾಗತೊಡಗಿದವು! ಅವನ ಎಡಗಣ್ಣು, ಎಡ ತೋಳು, ಎಡಭಾಗದ ಎದೆ ಅದುರಿದವು! ತನ್ನ ತಮ್ಮನಿಗೇನೋ ಆಪತ್ತುಂಟಾಗಿರಬೇಕೆಂದು ಭಾವಿಸಿ ಅವನು ದ್ರೌಪದಿಯನ್ನು ಭೀಮನೆಲ್ಲಿ ಎಂದು ಕೇಳಲು, ಅವಳು, ಅವನು ಬಹಳ ಹೊತ್ತಿನ ಮೊದಲೇ ಆಶ್ರಮದಿಂದ ಹೊರಗೆ ಹೋದನೆಂದು ಹೇಳಿದಳು. ಆಗ ಅವನು ಅರ್ಜುನನ್ನು ದ್ರೌಪದಿಯನ್ನು ರಕ್ಷಿಸಿಕೊಂಡಿರಲು ಹಾಗೂ ನಕುಲ,ಸಹದೇವರಿಗೆ ಬ್ರಾಹ್ಮಣರನ್ನು ರಕ್ಷಿಸಿಕೊಂಡಿರಲು ಹೇಳಿ ತಮ್ಮ ಪುರೋಹಿತರಾದ ಧೌಮ್ಯರೊಂದಿಗೆ ಭೀಮನನ್ನು ಹುಡುಕಲು ಹೋದನು. ಆದರೆ ಆ ಘೋರ ಅರಣ್ಯದಲ್ಲಿ ಭೀಮನನ್ನು ಹುಡುಕುವುದಾದರೂ ಹೇಗೆ? ಯುಧಿಷ್ಠಿರನು ಭೀಮನ ಬೃಹದಾಕಾರದ ಹೆಜ್ಜೆಗಳನ್ನೇ ಅನುಸರಿಸಿಕೊಂಡು ಹೋದನು. ಹಾಗೆ ಪೂರ್ವದಿಕ್ಕಿನಲ್ಲಿ ಹೋಗುತ್ತಾ ಅನೇಕ ಆನೆ, ಜಿಂಕೆ, ಸಿಂಹಾದಿ ಪ್ರಾಣಿಗಳು ಸತ್ತು ಬಿದ್ದಿರುವುದನ್ನೂ ಮರಗಳು ಕೀಳಲ್ಪಟ್ಟಿರುನುದನ್ನೂ ಅಲ್ಲೆಲ್ಲಾ ಭೀಮನ ಹೆಜ್ಜೆ ಗುರುತುಗಳು ಹೆಚ್ಚಾಗಿದ್ದುದನ್ನೂ ನೋಡಿ ಅವೆಲ್ಲಾ ಭೀಮನ ಸಾಹಸಕಾರ್ಯಗಳೆಂದು ತಿಳಿದು ಮುಂದೆ ಹೋದನು. ಆಗ ಹೆಚ್ಚು ಸಂಚಾರವಿಲ್ಲದ ಬೆಂಗಾಡಿನಂಥ ಪ್ರದೇಶಕ್ಕೆ ಬಂದು, ಅಲ್ಲಿ ಭೀಮನು ಹೆಬ್ಬಾವಿಗೆ ಸಿಕ್ಕಿಬಿದ್ದಿರುವುದನ್ನು ಕಂಡು ಗಾಬರಿಗೊಂಡನು! 
   ಆಶ್ಚರ್ಯ, ದುಃಖಗಳಿಗೊಳಗಾದ ಯುಧಿಷ್ಠಿರನು ಭೀಮನನ್ನು ಹೇಗೆ ಇಂಥ ದುರವಸ್ಥೆಗೆ ಸಿಕ್ಕಿಬಿದ್ದನೆಂದು ಕೇಳಿದನು. ಅದಕ್ಕೆ ಭೀಮನು ಆ ಘಟಸರ್ಪವು ಹಿಂದೆ ರಾಜನಾಗಿದ್ದ ನಹುಷ ಚಕ್ರವರ್ತಿಯೆಂದೂ ತನ್ನನ್ನು ಭಕ್ಷಿಸಲು ಹಿಡಿದಿದೆಯೆಂದೂ ಹೇಳಿದನು. ಆಗ ಯುಧಿಷ್ಠಿರನು ಆ ಅಜಗರಕ್ಕೆ," ಆಯುಷ್ಮಂತನೇ! ಮಹಾಪರಾಕ್ರಮಿಯಾದ ಈ ನನ್ನ ತಮ್ಮನನ್ನು ಬಿಟ್ಟುಬಿಡು! ನಿನಗೆ ಬೇರೆ ಆಹಾರದ ವ್ಯವಸ್ಥೆ ಮಾಡುತ್ತೇನೆ!" ಎಂದು ಬೇಡಿಕೊಂಡನು. ಅದಕ್ಕೆ ಅಜಗರವು," ಇವನು ತಾನಾಗಿಯೇ ಬಂದು ನನ್ನ ಕೈಗೆ ಸಿಕ್ಕಿಬಿದ್ದಿರುವನು! ದಿನದ ಆರನೇ ಭಾಗದಲ್ಲಿ ಯಾರು ಸಿಕ್ಕಿಬಿದ್ದರೂ ನನಗೆ ಆಹಾರವಾಗುತ್ತಾರೆ ಹಾಗೂ ಅವರನ್ನು ಬಿಡುವ ಪ್ರಶ್ನೆಯೇ ಇಲ್ಲ! ಹೆಚ್ಚು ಹೊತ್ತು ಇಲ್ಲಿದ್ದರೆ ನೀನೂ ನನಗೆ ಆಹಾರವಾಗಬಹುದು! ಈ ನಿಯಮವನ್ನು ನನಗೆ ಶಾಪ ಕೊಟ್ಟ ಅಗಸ್ತ್ಯ ಮಹರ್ಷಿಗಳೇ ಮಾಡಿದ್ದಾರೆ! ಆದರೆ ನನ್ನ ಪ್ರಶ್ನೆಗಳಿಗೆ ಸಮಂಜಸವಾಗಿ ಉತ್ತರಿಸಿದರೆ ನಿನ್ನ ತಮ್ಮನನ್ನು ಬಿಡುತ್ತೇನೆ!" ಎಂದು ತನ್ನ ವಿಷಯವನ್ನು ಹೇಳಿತು. 
    ಯುಧಿಷ್ಠಿರನು ಒಪ್ಪಲು, ಅಜಗರವು ಪ್ರಶ್ನೆ ಕೇಳಿತು," ಯುಧಿಷ್ಠಿರ! ಬ್ರಾಹ್ಮಣನು ಯಾರು? ಹುಟ್ಟಿದ ಮನುಷ್ಯನು ಏನನ್ನು ತಿಳಿದುಕೊಳ್ಳಬೇಕು?"
   ಅದಕ್ಕೆ ಯುಧಿಷ್ಠಿರನು ಹೇಳಿದನು," ಹೇ ನಾಗೇಂದ್ರ! ಸತ್ಯ, ದಾನ, ಕ್ಷಮೆ, ಶೀಲ, ಉದಾರತೆ, ತಪಸ್ಸು, ದಯೆ, ಈ ಗುಣಗಳು ಯಾರಲ್ಲಿ ಕಂಡುಬರುತ್ತವೆಯೋ ಅವನೇ ಬ್ರಾಹ್ಮಣನೆಂದು ಹೇಳಲಾಗುತ್ತದೆ! ಸುಖದುಃಖಗಳೆರಡೂ ಇಲ್ಲದ ಹಾಗೂ ಯಾವುದರಲ್ಲಿ ಲೀನವಾದರೆ ದುಃಖವಿರುವುದಿಲ್ಲವೋ ಆ ಪರಬ್ರಹ್ಮವನ್ನು ಮನುಷ್ಯನು ತಿಳಿಯಬೇಕು! ನಿನ್ನ ಅಭಿಪ್ರಾಯವೇನು?" 
  ಸರ್ಪವು ಹೇಳಿತು," ಯುಧಿಷ್ಠಿರ! ಚಾತುರ್ವರ್ಣಗಳ ವ್ಯವಸ್ಥೆಯನ್ನು ವೇದಗಳು ಮಾಡಿವೆ! ಹೀಗಿರುವಾಗ, ನೀನು ಹೇಳಿದ ಸತ್ಯ, ದಾನ, ಅಕ್ರೋಧ, ಉದಾರತೆ, ಅಹಿಂಸೆ, ದಯೆ, ಮೊದಲಾದ ಗುಣಗಳು ಶೂದ್ರನೊಬ್ಬನಲ್ಲಿದ್ದರೆ ಅವನು ಬ್ರಾಹ್ಮಣನಾಗುವನೇ? ಇನ್ನು ಸುಖದುಃಖಗಳೆರಡೂ ಇಲ್ಲದ ಪರಬ್ರಹ್ಮವನ್ನು ತಿಳಿಯಬೇಕೆಂದು ನೀನು ಹೇಳಿದೆ. ಆದರೆ ಸುಖದುಃಖಗಳೆರಡೂ ಇಲ್ಲದ ಅಂಥ ವಸ್ತುವಿದೆಯೆಂದು ನನಗೆ ತಿಳಿಯದಾಗಿದೆ!" 
  ಅದಕ್ಕೆ ಯುಧಿಷ್ಠಿರನು ಹೇಳಿದ," ಶೂದ್ರನಲ್ಲಿ ಅಂಥ ಗುಣಗಳಿದ್ದರೆ ಹಾಗೂ ಬ್ರಾಹ್ಮಣನಲ್ಲಿ ಇಲ್ಲದಿದ್ದರೆ ಅಂಥ ಶೂದ್ರನು ಶೂದ್ರನೂ ಅಲ್ಲ, ಅಂಥ ಬ್ರಾಹ್ಮಣನು ಬ್ರಾಹ್ಮಣನೂ ಅಲ್ಲ! ಆದ್ದರಿಂದ ಹೇ ಸರ್ಪರಾಜ! ಯಾರಲ್ಲಿ ಈ ಗುಣಗಳು ಇರುತ್ತವೆಯೋ ಅವನೇ ಬ್ರಾಹ್ಮಣನೆನಿಸಿಕೊಳ್ಳುತ್ತಾನೆ! ಯಾರಲ್ಲಿ ಇರುವುದಿಲ್ಲವೋ ಅವನು ಶೂದ್ರನೆನಿಸಿಕೊಳ್ಳುತ್ತಾನೆ! ಇನ್ನು ಸುಖದುಃಖಗಳೆರಡೂ ಇಲ್ಲದ ವಸ್ತುವೇ ಇಲ್ಲ ಎನ್ನುವುದು ನಿನ್ನ ಅಭಿಪ್ರಾಯವಷ್ಟೆ! ಶೀತ, ಉಷ್ಣಗಳೆರಡೂ ಇಲ್ಲದ ಒಂದು ಸಮಸ್ಥಿತಿ ಹೇಗೆ ಇರುವುದೋ, ಹಾಗೆಯೇ ಸುಖದುಃಖಗಳೆರಡೂ ಇಲ್ಲದ ಒಂದು ಸ್ಥಾನವಿದೆ ಎಂದು ನನ್ನ ಅಭಿಪ್ರಾಯ. ನೀನೇನು ಹೇಳುವೆ?" 
   ಆಗ ಅಜಗರವು," ಎಲೈ ರಾಜ! ನೀನು ಹೇಳುವಂತೆ ಸದಾಚಾರಸಂಪನ್ನನಾದವನೇ ಬ್ರಾಹ್ಮಣನೆನ್ನುವುದಾದರೆ, ವರ್ಣಾಶ್ರಮ ವ್ಯವಸ್ಥೆಯೇ ವ್ಯರ್ಥವಾಗುವುದಲ್ಲವೇ? ಏಕೆಂದರೆ ಒಬ್ಬನು ತನ್ನ ವೃತ್ತಿಯಲ್ಲಿ ತೊಡಗುವವರೆಗೂ ಅವನು ಯಾವ ಜಾತಿಯೆಂದು ಹೇಗೆ ಹೇಳುವುದು?" 
    ಅದಕ್ಕೆ ಯುಧಿಷ್ಠಿರನು ಹೇಳಿದನು," ಹೇ ಮಹಾಸರ್ಪ! ನನ್ನ ಪ್ರಕಾರ, ಮನುಷ್ಯರಲ್ಲಿ ಜಾತಿಯನ್ನು ನಿರ್ಧರಿಸುವುದು ಸಾಧ್ಯವಿಲ್ಲ! ಏಕೆಂದರೆ ಎಲ್ಲಾ ವರ್ಣದವರೂ ಎಲ್ಲಾ ವರ್ಣದವರನ್ನೂ ವಿವಾಹವಾಗಿ ವರ್ಣಸಂಕರವಾಗುತ್ತಿರುತ್ತದೆ. ಹೀಗೆ ಎಲ್ಲರೂ ಎಲ್ಲರಲ್ಲೂ ಮಕ್ಕಳನ್ನು ಪಡೆಯುತ್ತಾರೆ. ಆದ್ದರಿಂದ ಮನುಷ್ಯರಲ್ಲಿ ಸಮವಾಗಿರುವವೆಂದರೆ ಭಾಷೆ, ಮೈಥುನ, ಜನನ ಮತ್ತು ಮರಣ. ಇದಕ್ಕೆ ಆರ್ಷಪ್ರಮಾಣವೆಂದರೆ, ಯಜ್ಞ ಮಾಡುವಾಗ,' ಯೇ ಯಜಾಮಹೇ ( ಯಾವುದೇ ಜಾತಿಗೆ ಸೇರಿರುವ ನಾವು ಯಜ್ಞ ಮಾಡುತ್ತಿದ್ದೇವೆ)' ಎಂದು ಹೇಳುತ್ತಾರೆ. ಆದ್ದರಿಂದ ಮನುಷ್ಯನ ಜಾತಿಯನ್ನು ನಿರ್ಧರಿಸಲು ಶೀಲವೇ ಮುಖ್ಯ ಎಂದು ತತ್ವಜ್ಞಾನಿಗಳು ಹೇಳುತ್ತಾರೆ. ರೂಢಿಯಲ್ಲಿ ಬ್ರಾಹ್ಮಣ ದಂಪತಿಗಳಿಗೆ ಹುಟ್ಟಿದ ಮಗುವಿಗೆ ಬ್ರಾಹ್ಮಣ ಶಿಶು ಎಂದರೂ ಅವನಿಗೆ ಉಪನಯನವಾಗಿ ಅವನು ವೇದಾಧ್ಯಯನ ಮಾಡುವವರೆಗೂ ಅವನು ಶೂದ್ರನಿಗೆ ಸಮನಾಗಿಯೇ ಇರುತ್ತಾನೆ. ಇದನ್ನು ಸ್ವಾಯಂಭುವ ಮನುವೇ ಹೇಳಿದ್ದಾನೆ. ಒಂದು ವೇಳೆ, ಸಂಸ್ಕಾರವಾದ ಬಳಿಕವೂ ಸದ್ವೃತ್ತ ಬರಲಿಲ್ಲವೆಂದರೆ ಅಲ್ಲಿ ಬಲವಾದ ವರ್ಣಸಾಂಕರ್ಯವಿದೆಯೆಂದು ನಿಶ್ಚಯಿಸಬೇಕು! ಆದ್ದರಿಂದ ಸಂಸ್ಕಾರವೆಂದರೆ ಸದ್ವೃತ್ತವೆಂದೇ ನನ್ನ ಅಭಿಪ್ರಾಯ! ಹಾಗಾಗಿ ನಾನು ಸದ್ವೃತ್ತದ ಗುಣಗಳುಳ್ಳವನೇ ಬ್ರಾಹ್ಮಣನೆಂದು ಹಿಂದೆ ಹೇಳಿದೆನು." 
   ಆಗ ಅಜಗರ ಹೇಳಿತು," ಎಲೈ ಯುಧಿಷ್ಠಿರ! ತಿಳಿಯಬೇಕಾದ ಎಲ್ಲವನ್ನೂ ತಿಳಿದಿರುವ ನಿನ್ನ ಮಾತನ್ನು ಕೇಳಿದ ಬಳಿಕ ನಾನು ಹೇಗೆ ತಾನೇ ನಿನ್ನ ತಮ್ಮನನ್ನು ಭಕ್ಷಿಸಲಿ?" 
    ಇಲ್ಲಿ ಅಜಗರ, ಯುಧಿಷ್ಠಿರರ ಪ್ರಶ್ನೋತ್ತರಗಳ ಮೂಲಕ ವರ್ಣಗಳ ವಿಷಯದಲ್ಲಿ ಸನಾತನ ಧರ್ಮದ ಆಶಯ ವ್ಯಕ್ತವಾಗಿದೆ. ಹಿಂದೆ, ಒಂದು ಅನುಕೂಲಕ್ಕಾಗಿ, ಸುಲಭವಾಗಿ ಕೆಲಸಗಳು ನಡೆಯಲು, ಕೆಲವು ಗುಣವಿಶೇಷಗಳನ್ನು ಹೊಂದಿದವರು ಕೆಲವು ವರ್ಣದವರೆಂದು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಮತ್ತು ಶೂದ್ರ ಎಂದು ಗುರುತಿಸಲಾಯಿತು. ಅಧ್ಯಯನ,ಅಧ್ಯಾಪನಗಳನ್ನು ಗುಣ, ವೃತ್ತಿಗಳಾಗಿ ಉಳ್ಳವರು ಬ್ರಾಹ್ಮಣರು, ಆಡಳಿತ, ಯುದ್ಧ, ರಕ್ಷಣೆಗಳನ್ನು ಗುಣ, ವೃತ್ತಿಗಳನ್ನಾಗಿ ಉಳ್ಳವರು ಕ್ಷತ್ರಿಯರು, ವ್ಯಾಪಾರ, ಕೃಷಿ, ಪಶುಪಾಲನೆಗಳನ್ನು ಗುಣ,ವೃತ್ತಿಗಳಾಗಿ ಉಳ್ಳವರು ವೈಶ್ಯರು, ಸೇವಾವೃತ್ತಿಯುಳ್ಳವರು ಶೂದ್ರರು ಎಂದು ಗುರುತಿಸಲಾಯಿತು. ಅದನ್ನೇ ಶ್ರೀಕೃಷ್ಣನೂ ಭಗವದ್ಗೀತೆಯಲ್ಲಿ ಹೇಳಿದ್ದಾನೆ -
   ಚಾತುರ್ವರ್ಣ್ಯಂ ಮಯಾ ಸೃಷ್ಟಂ ಗುಣಕರ್ಮವಿಭಾಗಶ: । 
' ನಾಲ್ಕು ವರ್ಣಗಳನ್ನೂ ನಾನು ಗುಣ,ಕರ್ಮಗಳ ಆಧಾರದಲ್ಲಿ ಸೃಷ್ಟಿಸಿದ್ದೇನೆ.' 
    ಇಲ್ಲಿ ಜನ್ಮ ಎಂಬ ಪದವಿಲ್ಲದಿರುವುದನ್ನು ನೋಡಬಹುದು. ಅಂತೆಯೇ ಇಲ್ಲಿ ಯುಧಿಷ್ಠಿರನು ಹೇಳುವಂತೆ, ಪ್ರಾಚೀನ ಕಾಲದಿಂದಲೂ ಒಂದು ವರ್ಣದವರು ಮತ್ತೊಂದು ವರ್ಣದವರನ್ನು ಮದುವೆಯಾಗಿ ಮಕ್ಕಳನ್ನು ಪಡೆಯುವುದು ನಡೆದುಕೊಂಡು ಬಂದಿದೆ. ಹೀಗಿರುವಾಗ ಆ ಮಕ್ಕಳ ವರ್ಣಗಳು ಯಾವುದೆಂದು ಹೇಗೆ ಹೇಳುವುದು? ಆದ್ದರಿಂದ ಯುಧಿಷ್ಠಿರನು ಇಲ್ಲಿ ಗುಣಗಳಿಗೇ ಪ್ರಾಧಾನ್ಯತೆ ಕೊಟ್ಟಿದ್ದಾನೆ. ಪುರಾಣಗಳಲ್ಲಿ ನೋಡುವುದಾದರೆ ಕ್ಷತ್ರಿಯನಾದ ಯಯಾತಿಯು ಬ್ರಾಹ್ಮಣರಾದ ಶುಕ್ರಾಚಾರ್ಯರ ಮಗಳು ದೇವಯಾನಿಯನ್ನು ಮದುವೆಯಾದ ಕಥೆಯಿದೆ. ಆದರೆ ಅವರ ಮಕ್ಕಳು ಅವರ ಗುಣಗಳ ಪ್ರಕಾರ ಕ್ಷತ್ರಿಯರೇ ಆದರು. ಅಂತೆಯೇ ಬ್ರಾಹ್ಮಣರಾದ ಪರಾಶರರು ಮೂಲತಃ ಕ್ಷತ್ರಿಯಳೂ ಬೆಸ್ತರ ಸಾಕುಮಗಳೂ ಆದ ಸತ್ಯವತಿಯೊಡನೆ ಸಂಬಂಧ ಬೆಳೆಸಿ ವೇದವ್ಯಾಸರನ್ನು ಪಡೆದರು. ಆದರೆ ವೇದವ್ಯಾಸರು ಅಧ್ಯಯನದಲ್ಲಿ ತೊಡಗಿ ಬ್ರಾಹ್ಮಣರಾದರು. ಹುಟ್ಟಿನಿಂದ ಕ್ಷತ್ರಿಯರಾಗಿದ್ದ ವಿಶ್ವಾಮಿತ್ರರು ತಪಸ್ಸು ಮಾಡಿ ಬ್ರಹ್ಮರ್ಷಿಗಳಾದರು.‌ ಹೀಗೆ ಅಂತರ್ಜಾತಿ ವಿವಾಹಗಳ ಮತ್ತು ಸಂಸ್ಕಾರದಿಂದ ಒಂದು ವರ್ಣಕ್ಕೆ ಸೇರಿದ ಉದಾಹರಣೆಗಳು ಅನೇಕ ಸಿಗುತ್ತವೆ.‌ ಹಾಗಾಗಿ ಈ ವರ್ಣವ್ಯವಸ್ಥೆ ಎನ್ನುವುದು ಬಹಳ ಹಿಂದೆಯೇ ಜನ್ಮತಃ ಆಗಿರುವುದು ಹೋಗಿ, ಕೇವಲ ಅದೊಂದು ವಿಚಾರವಾಗಿ ಉಳಿದುಬಂದಿದೆ ಎನ್ನಬಹುದು. ಹಾಗಾಗಿ ಸನಾತನ ಧರ್ಮದ ಪ್ರಕಾರ, ಎಲ್ಲ ಮನುಷ್ಯರೂ ಒಂದೇ ಆಗಿದ್ದು ವರ್ಣವ್ಯವಸ್ಥೆ ಅನುಕೂಲಕ್ಕಾಗಿ ಇರುವ ಒಂದು ಪರಿಕಲ್ಪನೆ ಅಷ್ಟೇ. ಯಾರು ಯಾರಿಗೆ ಯಾವ ಗುಣ, ವೃತ್ತಿಗಳಲ್ಲಿ ಮನೋಧರ್ಮ, ಆಸಕ್ತಿಗಳಿವೆಯೋ ಅವರು ಅವುಗಳನ್ನು ಬೆಳೆಸಿಕೊಂಡು ಅಂಥ ವರ್ಣದವರೆಂದು ಭಾವಿಸಬಹುದು. ಈಗ ಹಲವಾರು ಮಾಧ್ಯಮಗಳ‌ ಮತ್ತು ಜ್ಞಾನವಿಸ್ತಾರಣೆಯ ಕಾರಣ, ಎಲ್ಲರಿಗೂ ಅನೇಕ ಗುಣ, ವೃತ್ತಿಗಳಲ್ಲಿ ಆಸಕ್ತಿ ಮತ್ತು ಪರಿಶ್ರಮ ಇರುತ್ತವೆ. ಹಾಗಾಗಿ ಯುಧಿಷ್ಠಿರನು ಹೇಳಿದಂತೆ ಸಾಮಾಜಿಕವಾಗಿ ಜಾತಿಯನ್ನು ಅಷ್ಟು ನಿಖರವಾಗಿ ಗುರುತಿಸಲಾಗುವುದಿಲ್ಲ ಮತ್ತು ಬಳಸಲಾಗುವುದಿಲ್ಲ. 
   ಈಗ ಯುಧಿಷ್ಠಿರನೇ ಅಜಗರವನ್ನು ಪ್ರಶ್ನಿಸಿದನು," ಹೇ ಸರ್ಪರಾಜನೇ! ನೀನು ವೇದ,ವೇದಾಂಗಪಾರಂಗತನಾಗಿರುವೆ! ಯಾವ ಕರ್ಮಗಳನ್ನು ಮಾಡಿದರೆ ಮನುಷ್ಯನಿಗೆ ಸದ್ಗತಿಯುಂಟಾಗುತ್ತದೆಯೆಂದು ದಯವಿಟ್ಟು ಹೇಳು!" 
   ಅದಕ್ಕೆ ಅಜಗರ ಹೇಳಿತು," ಸತ್ಪಾತ್ರರಿಗೆ ದಾನ ಮಾಡುವುದು, ಪ್ರಿಯವಾಕ್ಯಗಳನ್ನಾಡುವುದು, ಸತ್ಯವನ್ನು ಹೇಳುವುದು, ಅಹಿಂಸಾನಿರತನಾಗಿರುವುದು, ಇವುಗಳಿಂದ ಸ್ವರ್ಗಕ್ಕೆ ಹೋಗಬಹುದು." 
   ಯುಧಿಷ್ಠಿರನು ಪುನಃ ಕೇಳಿದನು," ಹೇ ಸರ್ಪರಾಜನೇ! ದಾನ ಮತ್ತು ಸತ್ಯಗಳಲ್ಲಿ ಯಾವುದು ದೊಡ್ಡದು? ಅಹಿಂಸೆ ಮತ್ತು ಪ್ರಿಯವಾಕ್ಯಗಳಲ್ಲಿ ಯಾವುದು ಶ್ರೇಷ್ಠ ಮತ್ತು ಕನಿಷ್ಠ?" 
ಸರ್ಪವು ಹೇಳಿತು," ದಾನ, ಸತ್ಯ, ಅಹಿಂಸೆ, ಪ್ರಿಯವಾಕ್ಯಗಳಲ್ಲಿ, ಅವುಗಳ ಕಾರ್ಯಗಳ ಶ್ರೇಷ್ಠತೆ, ಕನಿಷ್ಠತೆಗಳ ಆಧಾರದ ಮೇಲೆ ಯಾವುದು ಶ್ರೇಷ್ಠ ಮತ್ತು ಯಾವುದು ಕನಿಷ್ಠ ಎಂದು ಹೇಳಬೇಕಾಗುತ್ತದೆ. ಕೆಲವೊಮ್ಮೆ ದಾನಕ್ಕಿಂತ ಸತ್ಯವೇ ಪ್ರಶಂಸನೀಯವಾಗಿದ್ದರೆ ಕೆಲವೊಮ್ಮೆ ಸತ್ಯಕ್ಕಿಂತ ದಾನವು ದೊಡ್ಡದೆನಿಸುತ್ತದೆ. ಹಾಗೆಯೇ ಕೆಲವೊಮ್ಮೆ ಪ್ರಿಯವಾಕ್ಯಕ್ಕಿಂತ ಅಹಿಂಸೆ ದೊಡ್ಡದಾಗಿ ಕಂಡರೆ ಕೆಲವೊಮ್ಮೆ ಅಹಿಂಸೆಗಿಂತ ಪ್ರಿಯವಾಕ್ಯ ದೊಡ್ಡದೆನಿಸುತ್ತದೆ!" 
    ಅಜಗರವು ಹೇಳಿದ ಮಾತುಗಳಲ್ಲಿ ಬಹಳ ಸತ್ಯವಿದೆ. ಸತ್ಯ, ಅಹಿಂಸೆ, ಪ್ರಿಯವಾಕ್ಯ, ದಾನ, ಇವೆಲ್ಲವೂ ಒಳ್ಳೆಯ ಮೌಲ್ಯಗಳಾದರೂ ಕಾರ್ಯಗಳ ಮೇಲೆ ಅವುಗಳ ಪ್ರಾಶಸ್ತ್ಯ ಅವಲಂಬಿತವಾಗಿರುತ್ತದೆ. ಉದಾಹರಣೆಗೆ ಒಳ್ಳೆಯ ಮಾತಿಗೂ ಬಗ್ಗದ ದುಷ್ಟನ ವಿಷಯದಲ್ಲಿ ಅಹಿಂಸೆ ತೋರಿದರೆ ಅದು ಆಗ ಶ್ರೇಷ್ಠ ಮೌಲ್ಯವೆನಿಸುವುದಿಲ್ಲ. ಅಂತೆಯೇ ಕೆಟ್ಟ ಕಾರ್ಯಗಳನ್ನು ಉತ್ತೇಜಿಸುವ ಪ್ರಿಯಮಾತುಗಳೂ ಶ್ರೇಷ್ಠವಾಗಿರುವುದಿಲ್ಲ. ಹಾಗಾಗಿ ಈ ಮೌಲ್ಯಗಳನ್ನು ಸಂದರ್ಭಕ್ಕೆ ತಕ್ಕಂತೆ ಬಳಸಬೇಕು. 
   ಧರ್ಮರಾಯನು ಮತ್ತೆ ಪ್ರಶ್ನಿಸಿದನು," ಮನುಷ್ಯನು ಸತ್ತ ಬಳಿಕ, ದೇಹವಿಲ್ಲದಿದ್ದರೂ ಹೇಗೆ ಸ್ವರ್ಗಕ್ಕೆ ಹೋಗುತ್ತಾನೆ ಹಾಗೂ ಕರ್ಮಗಳ ಫಲಗಳನ್ನು ಅನುಭವಿಸುತ್ತಾನೆ?" 
    ಅದಕ್ಕೆ ಸರ್ಪವು ಹೇಳಿತು," ಮನುಷ್ಯನು ಸತ್ತರೂ ದೇಹವು ನಾಶವಾಗುತ್ತದೆಯೇ ಹೊರತು ಜೀವವಲ್ಲ! ಜೀವಕ್ಕೆ ಮಾನುಷಜನ್ಮ, ಸ್ವರ್ಗವಾಸ, ಮತ್ತು ತಿರ್ಯಗ್ಯೋನಿಯಲ್ಲಿ 
 ಜನ್ಮ ( ಪ್ರಾಣಿ ಜನ್ಮ ) ಎಂಬ ಮೂರು ಗತಿಗಳಿರುತ್ತವೆ! ಯಾವ ಮನುಷ್ಯನು ಆಲಸ್ಯರಹಿತನಾಗಿ ದಾನ, ಅಹಿಂಸೆ, ಸತ್ಯ ಇವುಗಳನ್ನು ಆಚರಿಸುವನೋ ಅವನು ಸ್ವರ್ಗಕ್ಕೆ ಹೋಗುತ್ತಾನೆ. ಇವುಗಳಿಗೆ ವಿಪರೀತವಾಗಿ ಪಾಪಗಳನ್ನು ಮಾಡುವವನು ತಿರ್ಯಗ್ಜನ್ಮ ಪಡೆಯುತ್ತಾನೆ. ಕಾಮ,ಕ್ರೋಧ, ಹಿಂಸೆ, ಲೋಭಗಳಿಂದ ಕೂಡಿದವನೂ ತಿರ್ಯಗ್ಜನ್ಮ ಪಡೆಯುತ್ತಾನೆ. ಅಂತೆಯೇ ಕುದುರೆ, ಹಸು, ಮೊದಲಾದ ಪ್ರಾಣಿಗಳೂ ಉಚ್ಚಯೋನಿಗಳಲ್ಲಿ ಜನಿಸಿ ಮನುಷ್ಯತ್ವ ಹಾಗೂ ದೇವತ್ವವನ್ನು ಪಡೆಯುತ್ತವೆ. ಹೀಗೆ ಜೀವಾತ್ಮನು ತನ್ನ ಕರ್ಮಗಳಿಂದ ವಿವಿಧ ಗತಿಗಳನ್ನು ಪಡೆಯುತ್ತಾನೆ. ಆದರೆ ದ್ವಿಜನಾದವನು ಕರ್ಮಫಲಗಳನ್ನು ಬಯಸದೇ ತನ್ನ ಆತ್ಮವನ್ನು ಪರಮಾತ್ಮನಲ್ಲಿ ನೆಲೆಗೊಳಿಸಲು ಪ್ರಯತ್ನಿಸುತ್ತಾನೆ. ಇತರರಾದರೋ ತಮ್ಮ ತಮ್ಮ ಕರ್ಮಫಲಗಳನ್ನು ಅನುಭವಿಸುತ್ತಾ ನಾನಾಯೋನಿಗಳಲ್ಲಿ ಹುಟ್ಟುತ್ತಿರುತ್ತಾರೆ. "
   ಯುಧಿಷ್ಠಿರನು ಪುನಃ ಕೇಳಿದನು," ಶಬ್ದ, ಸ್ಪರ್ಶ,ರೂಪ, ರಸ, ಗಂಧಗಳಲ್ಲಿ ಆತ್ಮದ ಆಶ್ರಯ ತಟಸ್ಥವಾಗಿದ್ದರೂ ಅವುಗಳನ್ನು ಹೇಗೆ ಅನುಭವಿಸುತ್ತದೆ ? ಇದನ್ನು ಸಂಪೂರ್ಣವಾಗಿ ಹೇಳು!" 
   ಆಗ ಸರ್ಪವು ಹೇಳಿತು," ಆತ್ಮವು ದೇಹವನ್ನು ಆಶ್ರಯಿಸಿದಾಗ ಕರಣಗಳ ಮೂಲಕ ಭೋಗಗಳನ್ನು ಅನುಭವಿಸುತ್ತದೆ. ಜ್ಞಾನ, ಬುದ್ಧಿ, ಮನಸ್ಸುಗಳೇ ಆ ಕರಣಗಳು. ಇವುಗಳಲ್ಲಿ ಮುಖ್ಯವಾಗಿ ಮನಸ್ಸಿನ ಮೂಲಕವೇ ಆತ್ಮವು ಕ್ರಮವಾಗಿ ವಿಷಯಗಳನ್ನು ಅನುಭವಿಸುತ್ತದೆ.‌ ಆತ್ಮವು ಎರಡು ಹುಬ್ಬುಗಳ ನಡುವೆ ಇದ್ದು ಬುದ್ಧಿಯನ್ನು ವಿವಿಧ ವಿಷಯಗಳಲ್ಲಿ ನಿಯೋಜಿಸುತ್ತದೆ.‌" 
   ಆಗ ಯುಧಿಷ್ಠಿರನು ಕೇಳಿದನು," ಹೇ ಸರ್ಪರಾಜನೇ! ಮನಸ್ಸು ಮತ್ತು ಬುದ್ಧಿಗಳಿಗಿರುವ ವ್ಯತ್ಯಾಸವೇನು ಹೇಳು!" 
   ಅದಕ್ಕೆ ಸರ್ಪವು ಹೇಳಿತು," ಬುದ್ಧಿಯು ಆತ್ಮದ ಅಧೀನದಲ್ಲಿರುವಂತೆ ಕಂಡರೂ ಅದು ಆತ್ಮದ ನಿರ್ದೇಶಕನಾಗುತ್ತದೆ! ಬುದ್ಧಿಯು ಕಾರ್ಯಗಳನ್ನು ಉತ್ಪತ್ತಿ ಮಾಡುತ್ತದೆ. ಮನಸ್ಸು ಇಂದ್ರಿಯಗಳನ್ನು ಪ್ರಚೋದಿಸಿ ಅವು ಕಾರ್ಯರೂಪಕ್ಕೆ ಬರುವಂತೆ ಮಾಡುತ್ತದೆ ಮತ್ತು ಅವುಗಳ ಸುಖದುಃಖಗಳನ್ನು ಅನುಭವಿಸುತ್ತದೆ. ಇದೇ ಬುದ್ಧಿ, ಮನಸ್ಸುಗಳಿಗಿರುವ ವ್ಯತ್ಯಾಸ. ನೀನೂ ಈ ವಿಷಯದಲ್ಲಿ ತಿಳಿದವನಾಗಿರುವೆ! ನಿನ್ನ ಅಭಿಪ್ರಾಯವೇನು ಹೇಳು!" 
   ಆಗ ಯುಧಿಷ್ಠಿರನು ಹೇಳಿದನು," ಹೇ ಸರ್ಪರಾಜನೇ! ನೀನು ಬುದ್ಧಿವಂತರಲ್ಲಿಯೇ ಶ್ರೇಷ್ಠನಾಗಿರುವೆ! ಯಾವ ವಿಷಯವನ್ನು ತಿಳಿಯಬೇಕೆಂದು ಯೋಗಿಗಳು ಇಚ್ಛಿಸುವರೋ ಅದು ನಿನಗೆ ಸಂಪೂರ್ಣವಾಗಿ ತಿಳಿದಿದೆ! ಹೀಗಿದ್ದೂ ನನ್ನನ್ನೇಕೆ ಪ್ರಶ್ನಿಸುವೆ? ಆದರೆ ನೀನು ಸರ್ವಜ್ಞನಾಗಿದ್ದು ನಿನ್ನ ಪುಣ್ಯಕರ್ಮಗಳಿಂದ ಸ್ವರ್ಗಕ್ಕೆ ಹೋಗಿದ್ದರೂ ಮಾಯೆಯಿಂದ ಆವೃತನಾಗಿ ಇಂಥ ದುರವಸ್ಥೆಯಲ್ಲಿ ಏಕೆ ಬಿದ್ದೆ?" 
   ಆಗ ಸರ್ಪವು ಹೇಳಿತು," ಮನುಷ್ಯನು ಸುಜ್ಞಾನಿಯೇ ಆಗಿದ್ದರೂ ಶೂರನೇ ಆಗಿದ್ದರೂ ಐಶ್ವರ್ಯವು ಅವನನ್ನು ಮದಾಂಧನನ್ನಾಗಿ ಮಾಡಿಬಿಡುತ್ತದೆ! ಯಾರು ಸದಾ ಸುಖದಲ್ಲೇ ಇರುವನೋ ಅವನು ದುರಭಿಮಾನಿಯಾಗುತ್ತಾನೆಂಬುದು ನನ್ನ ಅಭಿಪ್ರಾಯ! ಈ ಐಶ್ವರ್ಯಮೋಹದಿಂದ ಮದಾಂಧನಾಗಿಯೇ ನಾನು ಪತಿತನಾದೆ! ಮಹಾರಾಜ! ನೀನಿಂದು ನನಗೆ ಒಳ್ಳೆಯದನ್ನು ಮಾಡಿರುವೆ! ನಿನ್ನೊಂದಿಗೆ ಮಾತನಾಡಿದುದರಿಂದ ನನ್ನ ಶಾಪವು ಪರಿಹಾರವಾಗಿರುವುದು! ನಾನು ಸ್ವರ್ಗದಲ್ಲಿ ದರ್ಪಿಷ್ಟನಾಗಿ ಸಂಚರಿಸುತ್ತಿದ್ದೆ! ದೇವಗಂಧರ್ವಯಕ್ಷರಾಕ್ಷಸಪನ್ನಗರೆಲ್ಲರೂ ನನಗೆ ಕಾಣಿಕೆಗಳನ್ನು ತಂದೊಪ್ಪಿಸುತ್ತಿದ್ದರು! ನನಗೆ ಇನ್ನೊಂದು ಶಕ್ತಿಯೂ ಇತ್ತು! ನಾನು ಯಾವುದೇ ಜೀವಿಯನ್ನು ನೆಟ್ಟ ದೃಷ್ಟಿಯಿಂದ ನೋಡಿದರೂ ಅದರ ತೇಜಸ್ಸನ್ನು ಆಕರ್ಷಿಸುತ್ತಿದ್ದೆ! ಹೀಗಿರುವಾಗ ಒಮ್ಮೆ ಸಪ್ತರ್ಷಿಗಳ ಕೈಲಿ ನನ್ನ ಪಲ್ಲಕ್ಕಿಯನ್ನು ಹೊರಿಸಿಕೊಂಡು ಹೋಗುತ್ತಿದ್ದಾಗ, ನನ್ನ ಕಾಲು ಅಗಸ್ತ್ಯರ ತಲೆಗೆ ತಗುಲಲು, ಅವರು ಕುಪಿತರಾಗಿ ಹೀಗೆ ಹೆಬ್ಬಾವಾಗುವಂತೆ ಶಪಿಸಿದರು! ಆಗ ನಾನು ಪಲ್ಲಕ್ಕಿಯಂದ ಕೆಳಗೆ ಬಿದ್ದೆ! ನಾನು ಆಗ ಆ ಬ್ರಾಹ್ಮಣಶ್ರೇಷ್ಠರನ್ನು ಶಾಪ ವಿಮೋಚನೆಗಾಗಿ ಬೇಡಿಕೊಂಡೆ. ಆಗ ಅವರು ಧರ್ಮಾತ್ಮನಾದ ಯುಧಿಷ್ಠಿರನು ನನ್ನನ್ನು ಈ ಶಾಪದಿಂದ ಬಿಡುಗಡೆ ಮಾಡುವನೆಂದೂ ಆಗಲೇ ನನ್ನ ದುರಭಿಮಾನ ಮತ್ತು ಪಾಪಗಳು ನಿವಾರಣೆಯಾಗುತ್ತವೆಯೆಂದೂ ಹೇಳಿದರು. ಅವರು ಹೇಳಿದಂತೆಯೇ ಎಲ್ಲವೂ ನಡೆಯಿತು. ನಾನು ಆ ಬ್ರಾಹ್ಮಣರ ತಪ:ಪ್ರಭಾವವನ್ನು ಕಂಡು ಆಶ್ಚರ್ಯಗೊಂಡಿದ್ದೇನೆ! ಆದ್ದರಿಂದಲೇ ನಾನು ನಿನಗೆ ಬ್ರಾಹ್ಮಣತ್ವದ ಮತ್ತು ಪರಾತ್ಪರ ವಸ್ತುವಿನ ಲಕ್ಷಣಗಳನ್ನು ಹೇಳಿದೆನು! ಹೇ ರಾಜಾ! ಬ್ರಾಹ್ಮಣತ್ವವನ್ನು ಹೊಂದಲು ಹಾಗೂ ಪರಾತ್ಪರ ವಸ್ತುವನ್ನು ಕಾಣಲು ಸತ್ಯ, ದಮ, ತಪಸ್ಸು, ದಾನ, ಅಹಿಂಸೆ, ಧರ್ಮನಿತ್ಯತೆ, ಇವೇ ಸಾಧಕಗಳು! ಕುಲವಾಗಲಿ ಜಾತಿಯಾಗಲಿ ಅಲ್ಲ! ನಿನ್ನ ತಮ್ಮನಾದ ಭೀಮಸೇನನೂ ಸ್ವಸ್ಥನಾಗಿದ್ದಾನೆ! ನಾನಿನ್ನು ಪುನಃ ಸ್ವರ್ಗಕ್ಕೆ ಹೋಗುತ್ತೇನೆ!" 
    ಹೀಗೆ ಹೇಳಿ ನಹುಷನು ಸರ್ಪರೂಪವನ್ನು ತೊರೆದು ದಿವ್ಯ ಶರೀರವನ್ನು ಧರಿಸಿ ತನಗಾಗಿ ಬಂದಿದ್ದ ದಿವ್ಯ ವಿಮಾನದಲ್ಲಿ ಕುಳಿತು ಸ್ವರ್ಗಕ್ಕೆ ಹೋದನು. ಯುಧಿಷ್ಠಿರನು ತನ್ನ ತಮ್ಮ ಭೀಮನೊಂದಿಗೂ ಧೌಮ್ಯರೊಂದಿಗೂ ಆಶ್ರಮಕ್ಕೆ ಹಿಂದಿರುಗಿದನು.
    ಹೀಗೆ, ಅಜಗರಪರ್ವ, ಮಹಾಭಾರತದ ವನಪರ್ವದಲ್ಲಿ ಬರುವ, ನಿಜವಾದ ಬ್ರಾಹ್ಮಣತ್ವ, ಪರಬ್ರಹ್ಮ, ಆತ್ಮ, ಮನಸ್ಸು, ಮೊದಲಾದ ವಿಷಯಗಳನ್ನೊಳಗೊಂಡ ಅಜಗರ ಮತ್ತು ಯುಧಿಷ್ಠಿರರ ನಡುವಿನ ಪ್ರಶ್ನೋತ್ತರಗಳ ಒಂದು ಸ್ವಾರಸ್ಯಕರ ಉಪಪರ್ವವಾಗಿದೆ. 
   

ಸುಂದರೀಶತಕ -೮೫


ಸಂಸ್ಕೃತ ಮೂಲ 

ಆಶ್ಲೇಷೋऽಧರದಾನಂ ಚುಂಬನಮನಿಮೇಷವೀಕ್ಷಣಂ ಸುರತಮ್ ।
ಇತ್ಯೇಕೈಕಪಣೇನ ಕ್ರೀಡತಿ ಮಿಥುನಂ ಜಿತಾನ್ಯೋನ್ಯಮ್ ।।

ಕನ್ನಡ ಅನುವಾದ 

    ' ಆ ಪ್ರೇಮಜೋಡಿ, ಆಲಿಂಗನ, ಅಧರದಾನ, ಚುಂಬನ, ಕಣ್ಣು ಮಿಟುಕಿಸದೆ ದಿಟ್ಟಿಸಿ ನೋಡುವುದು, ಹಾಗೂ ಸುರತಕ್ರೀಡೆಗಳನ್ನು ಒಂದೊಂದನ್ನೂ ಪಣವಾಗಿಟ್ಟು ದ್ಯೂತವಾಡುತ್ತಾ ಪರಸ್ಪರ ಜಯಿಸುತ್ತದೆ!' 
    ಸನಾತನ ಧರ್ಮ ಅಥವಾ ವೈದಿಕ ಪರಂಪರೆಯಲ್ಲಿ ಮದುವೆ ಇತ್ಯರ್ಥವಾಗುವುದು ಸಪ್ತಪದಿಯಿಂದ. ಗಂಡು, ಹೆಣ್ಣುಗಳು ಅಗ್ನಿಯ ಸುತ್ತಲೂ ಏಳು ಹೆಜ್ಜೆಗಳನ್ನು ಇಡುತ್ತಾ ಮದುವೆಯನ್ನು ಪೂರ್ಣಗೊಳಿಸುತ್ತಾರೆ. ಆಗ ಒಂದೊಂದು ಹೆಜ್ಜೆಗೂ ಗಂಡು ಹೆಣ್ಣಿಗೆ ಒಂದೊಂದು ಮಂತ್ರ ಹೇಳುತ್ತಾ ಕೊನೆಯ ಏಳನೆಯ ಹೆಜ್ಜೆಯನ್ನಿಡುವಾಗ,' ಸಖಾ ಸಪ್ತಪದೀ ಭವ ' ಎನ್ನುತ್ತಾನೆ. ಅಂದರೆ ಏಳನೆಯ ಹೆಜ್ಜೆಯೊಂದಿಗೆ ನನ್ನ ಸ್ನೇಹಿತೆಯಾಗಿರು ಎಂದು ಅರ್ಥ. ಹೀಗೆ ಸನಾತನ ಧರ್ಮದಲ್ಲಿ ಪತಿ, ಪತ್ನಿಯರು ಸದಾ ಸ್ನೇಹಿತರಂತಿರಬೇಕು ಎಂದು ಅರ್ಥ. ಸನಾತನ ಧರ್ಮ, ಗಂಡು, ಹೆಣ್ಣು, ಇಬ್ಬರಿಗೂ ಸಮಾನತೆ, ಸ್ನೇಹ, ಪ್ರೀತಿಗಳನ್ನು ಹೇಳುತ್ತದೆ. ಅಂತೆಯೇ ಇಲ್ಲಿ ಕವಿಯು ಹಿಂದಿನ ಶ್ಲೋಕದಂತೆಯೇ ಒಂದು ಪ್ರೇಮಜೋಡಿಯ ದ್ಯೂತಕ್ರೀಡೆಯ ಪ್ರಸಂಗವನ್ನು ವರ್ಣಿಸಿದ್ದಾನೆ. ಇಲ್ಲಿ ಪತಿ, ಪತ್ನಿಯರು ಸಂತೋಷದಿಂದ ದ್ಯೂತವಾಡುತ್ತಾ ಪಣವಾಗಿ ಹಣ ಅಥವಾ ವಸ್ತುಗಳನ್ನಿಡುವ ಬದಲಿಗೆ ಆಲಿಂಗನ, ಅಧರದಾನ, ಚುಂಬನ, ಕಣ್ಣು ಮಿಟುಕಿಸದೆ ಒಬ್ಬರನ್ನೊಬ್ಬರು ದಿಟ್ಟಿಸಿ ನೋಡುವುದು, ಹಾಗೂ ಸುರತಕ್ರೀಡೆಗಳನ್ನು ಇಟ್ಟು ಆಡುತ್ತಾ ಪರಸ್ಪರ ಜಯಿಸುತ್ತಾರೆ. ಇಲ್ಲಿ ಯಾರು ಜಯಿಸಿದರೂ ಇಬ್ಬರಿಗೂ ಲಾಭವೇ! ಇಂಥ ಪ್ರೇಮದಾಟಗಳಿಂದ ಪತಿ, ಪತ್ನಿಯರ ಸ್ನೇಹ, ಪ್ರೀತಿಗಳು ವರ್ಧಿಸುತ್ತವೆ. 

ಸುಂದರೀಶತಕ -೮೪

ಸಂಸ್ಕೃತ ಮೂಲ 

ಪ್ರತಿಪಣಿತಮೇಕವಾರಂ ಪಾತುಂ ದ್ಯೂತೇ ಜಿತಂ ಪಿಬನ್ನಧರಮ್ ।
ಆವೃತ್ತಿದ್ವಯಭೀತ್ಯಾ ನಾಯಂ ನಿಶ್ಚೂಷತೇ ಧೂರ್ತ: ।।

ಕನ್ನಡ ಅನುವಾದ 

    ' ದ್ಯೂತಕ್ರೀಡೆಯಲ್ಲಿ ಒಂದು ಬಾರಿ ಅಧರಾಮೃತಪಾನ ಮಾಡುವ ಪಣವನ್ನು ಗೆದ್ದ ಧೂರ್ತ ಪ್ರಿಯತಮನು ಇನ್ನೊಂದು ಸುತ್ತಿನ ಆಟದಲ್ಲಿ ಸೋಲುವ ಭಯದಿಂದ ಪೂರ್ಣವಾಗಿ ಅಧರಾಮೃತಪಾನ ಮಾಡುವುದಿಲ್ಲ!' 
    ಪ್ರಾಚೀನ ಭಾರತದಲ್ಲಿ ದಂಪತಿಗಳು ಚದುರಂಗದಾಟ ಅಥವಾ ದ್ಯೂತಕ್ರೀಡೆಯಾಡುವುದು ಬಹಳ ಸಾಮಾನ್ಯವಾಗಿತ್ತು. ಶಿವ ಮತ್ತು ಪಾರ್ವತಿ, ಕೃಷ್ಣ ಮತ್ತು ರುಕ್ಮಿಣಿ, ಕೃಷ್ಣನ ಮೊಮ್ಮಗ ಅನಿರುದ್ಧ ಮತ್ತು ಉಷೆ, ಮೊದಲಾದ ದಂಪತಿಗಳು ದ್ಯೂತಕ್ರೀಡೆಯಾಡುವ ವರ್ಣನೆಗಳು ಪುರಾಣಗಳಲ್ಲಿ ಕಂಡುಬರುತ್ತವೆ. ಇಂಥ ವಿನೋದದ ದ್ಯೂತಕ್ರೀಡೆಗಳಲ್ಲಿ ಏನಾದರೂ ಪಣವಿಟ್ಟು ಆಡುತ್ತಿದ್ದರು. ದೀಪಾವಳಿಯ ರಾತ್ರಿ, ಶಿವ,ಪಾರ್ವತಿಯರು ದ್ಯೂತವಾಡಿದ್ದರಿಂದ ಅಂದು ರಾತ್ರಿ ಎಲ್ಲರೂ ದ್ಯೂತದಲ್ಲಿ ತೊಡಗಿ ಸಂತೋಷಪಡಬೇಕೆಂದು ಒಕ್ಕಣೆಯಿದೆ. ಅಂದು ದ್ಯೂತವಾಡಿದರೆ ಶಿವ, ಪಾರ್ವತಿಯರ ಆಶೀರ್ವಾದ ದೊರೆತು ಆ ವರ್ಷವೆಲ್ಲಾ ಸುಖ, ಸಮೃದ್ಧಿಗಳು ಉಂಟಾಗುತ್ತವೆ ಎನ್ನುತ್ತಾರೆ. ಹಾಗಾಗಿಯೇ ದೀಪಾವಳಿಯನ್ನು ಸುಖರಾತ್ರಿ, ಯಕ್ಷರಾತ್ರಿ, ಮೊದಲಾದ ಹೆಸರುಗಳಿಂದ ಕರೆಯುತ್ತಾರೆ. ಇದು ಪತಿ, ಪತ್ನಿಯರ, ಹಾಗೂ ಬಂಧು,ಮಿತ್ರರ ನಡುವೆ ಪ್ರೀತಿ, ಸ್ನೇಹಗಳನ್ನು ವರ್ಧಿಸುವ ಕ್ರಮವಾಗಿದೆ. ಇದು ಸನಾತನ ಧರ್ಮದ ಔದಾರ್ಯ. ಪ್ರಕೃತಿಸಹಜವಾದ ಜೀವನದ ಯಾವುದೇ ಅಂಶಗಳನ್ನು ನಿರಾಕರಿಸದೆ, ಜೀವನವನ್ನು ಸಂತೋಷದಿಂದ ಕಳೆಯುವ ವಿವಿಧ ಆಚರಣೆಗಳು ಸನಾತನ ಧರ್ಮದಲ್ಲಿವೆ. ಸ್ಕಂದಪುರಾಣದಲ್ಲಿ ಶಿವ, ಪಾರ್ವತಿಯರು ದ್ಯೂತವಾಡಲು, ಪಾರ್ವತಿಯು ಅವನ ಚಂದ್ರ, ಹಾವು, ಮೊದಲಾಗಿ ಎಲ್ಲವನ್ನೂ, ಕೊನೆಗೆ ಬಟ್ಟೆಯನ್ನೂ ಗೆದ್ದು ಕಿತ್ತುಕೊಂಡು ವಿರ್ವಸ್ತ್ರವಾಗಿ ಮಾಡುವ ಅದ್ಭುತ ಪ್ರೇಮಪ್ರಸಂಗವಿದೆ! ಹೀಗೆ ಸನಾತನ ಧರ್ಮದಲ್ಲಿ ದೇವರಲ್ಲೂ ಪ್ರೇಮ, ಕ್ರೀಡೆಗಳನ್ನು ನೋಡುವ ಅದ್ಭುತ ವಿಶೇಷವಿದೆ! ಆದರೆ ಕೌರವರು ಪಾಂಡವರನ್ನು ಮೋಸಗೊಳಿಸಲು ಈ ದ್ಯೂತವನ್ನು ಉಪಯೋಗಿಸಿದರೆಂಬುದು ದುರ್ದೈವ. ಆದರೆ ಹಾಗೆ ಮಾಡದೆ ಆನಂದಕ್ಕಾಗಿ ದ್ಯೂತವಾಡಿದರೆ ತಪ್ಪಿಲ್ಲ.
    ಈ ಶೃಂಗಾರ ಪದ್ಯದಲ್ಲಿ ಪತಿ, ಪತ್ನಿಯರು ಪಣವಿಟ್ಟು ದ್ಯೂತವಾಡಿದ್ದಾರೆ. ಒಂದು ಬಾರಿ ಅಧರಾಮೃತಪಾನ ಮಾಡುವುದೇ ಪಣ. ಪತಿಯು ಆಟದಲ್ಲಿ ಗೆದ್ದಿದ್ದಾನೆ. ಹಾಗಾಗಿ ಅವನು ಪತ್ನಿಯ ಅಧರಪಾನ ಮಾಡಬೇಕಾಗಿದೆ.‌ ಆದರೆ ಅವನು ಸುಮ್ಮನೆ ಅವಳ ಅಧರವನ್ನು ಮೆಲ್ಲನೆ ಚುಂಬಿಸುತ್ತಾನೆಯೇ ಹೊರತು ಸಂಪೂರ್ಣವಾಗಿ ಅಧರಾಮೃತಪಾನ ಮಾಡುವುದಿಲ್ಲ.‌ ಏಕೆಂದರೆ ಆಟದ ಮುಂದಿನ ಸುತ್ತಿನಲ್ಲಿ ಸೋತರೆ, ಪುನಃ ಈ ಅವಕಾಶ ಸಿಗುವುದಿಲ್ಲ ಎಂದು ಅಧರಪಾನವನ್ನು ಉಳಿಸಿಕೊಳ್ಳುತ್ತಾನೆ. ಇದನ್ನು ಹೇಳುತ್ತಾ ಎಂಥ ಧೂರ್ತ ಅವನು ಎನ್ನುತ್ತಾನೆ ಕವಿ! 

ಸುಂದರೀಶತಕ -೮೩

ಸಂಸ್ಕೃತ ಮೂಲ 

ಸಸ್ಮಿತತಿರ್ಯಗ್ವೇಲ್ಲಿತಮುಖಪರ್ಯಂತಪ್ರಕೀರ್ಣಕಬರೀಕಮ್ । ಅತಿಭಾಗ್ಯವಾನ್ಭವತ್ಯಾ: ಸುಂದರಿ ಪುರುಷಾಯಿತಂ ಲಭತೇ ।।

ಕನ್ನಡ ಅನುವಾದ 

   ನಾಯಕನು ನಾಯಕಿಗೆ ಹೇಳುತ್ತಾನೆ," ಹೇ ಸುಂದರಿ! ನಗುವಿನಿಂದ ಕೂಡಿದ ತಿರುಗಿದ ನಿನ್ನ ಮುಖಮಂಡಲದ ಪರ್ಯಂತ ಕೇಶರಾಶಿಯನ್ನು ಹರಡಿಕೊಂಡು ನನ್ನ ಮೇಲೆ ಇರುವ ಈ ನಿನ್ನ ಪುರುಷಾಯಿತ ರತಿಭಂಗಿಯನ್ನು ಅತಿಭಾಗ್ಯವಂತನಾದವನು ಪಡೆಯುತ್ತಾನೆ!" 
   ಪುರುಷಾಯಿತವೆಂದರೆ ರತಿಕ್ರೀಡೆಯಾಡುವಾಗ ಹೆಣ್ಣು ಪುರುಷನಂತೆ ವರ್ತಿಸುವುದು. ಅಂದರೆ ಅವಳು ಪುರುಷನ ಮೇಲೆ ಬಂದು ಪ್ರಧಾನ ಪಾತ್ರವಹಿಸುತ್ತಾ ಅವನಂತೆ ವರ್ತಿಸುತ್ತಾಳೆ. ಇದನ್ನು ವಿಪರೀತ ರತಿ ಎಂದೂ ಕರೆಯುತ್ತಾರೆ. ಈ ಪುರುಷಾಯಿತವನ್ನು ವಾತ್ಸ್ಯಾಯನನು ಕಾಮಸೂತ್ರದಲ್ಲಿ ವರ್ಣಿಸಿ ಅದರಲ್ಲಿ ವಿವಿಧ ಬಗೆಗಳನ್ನೂ ವರ್ಣಿಸಿದ್ದಾನೆ.‌ ಸಂಸ್ಕೃತದಲ್ಲಿ ಪುರುಷಾಯಿತಭಂಗಿಯ ಅನೇಕ ಪದ್ಯಗಳಿವೆ. ರತಿಕಲೆಗಳಲ್ಲಿ ಇದೂ ಒಂದು. ನಮ್ಮ ದೇವಾಲಯಗಳ ರತಿಶಿಲ್ಪಗಳಲ್ಲಿ ಪುರುಷಾಯಿತವನ್ನೂ ತೋರಿಸಲಾಗಿದೆ. ಹಿಂದೆ ಪಾಶ್ಚಾತ್ಯರಲ್ಲಿ ಹೆಣ್ಣು ಗಂಡಿಗಿಂತ ಕಡಿಮೆ ಸ್ಥಾನಮಾನವುಳ್ಳವಳೆಂದು ಪರಿಗಣಿಸಲಾಗಿದ್ದು ಅವಳು ಕಾಮದಾಸೆಯನ್ನು ವ್ಯಕ್ತಪಡಿಸುವುದೂ ತಪ್ಪೆಂದು ಭಾವಿಸಲಾಗಿತ್ತು. ಆದರೆ ಪ್ರಾಚೀನ ಭಾರತದಲ್ಲಿ ಹೆಣ್ಣನ್ನೂ ಗಂಡಿಗೆ ಸಮಾನವಾಗಿ ಪರಿಗಣಿಸಿ ಅವಳು ಕಾಮದಾಸೆಯೇ ಮೊದಲಾಗಿ ಎಲ್ಲಾ ವಿಷಯಗಳಲ್ಲೂ ಪ್ರಧಾನ ಪಾತ್ರವಹಿಸುವಂತೆಯೇ ನೋಡಿದ್ದರು. ಅವಳಿಗೆ ಗಂಡಿಗಿಂತಲೂ ಕಾಮದಾಸೆ ಹೆಚ್ಚೆಂದೇ ಹೇಳಲಾಗಿದ್ದು ಅದನ್ನು ಸರಿಯಾಗಿ ಪೂರೈಸುವುದು ಗಂಡಿನ ಕರ್ತವ್ಯವೆಂದೂ ಹೇಳಲಾಗಿತ್ತು. ಚಾಣಕ್ಯನೀತಿಯಲ್ಲೂ ' ಸ್ತ್ರೀಣಾಮಷ್ಟಗುಣ: ಕಾಮ: ( ಸ್ತ್ರೀಯರಲ್ಲಿ ಕಾಮವು ಎಂಟು ಪಟ್ಟು ಹೆಚ್ಚಾಗಿರುತ್ತದೆ)' ಎಂದು ಹೇಳಿದೆ. ಹಾಗಾಗಿ ಪುರುಷಾಯಿತ ರತಿಭಂಗಿಗೂ ಮಹತ್ವವಿದೆ. ಇಲ್ಲಿ ಕವಿಯು ಪುರುಷಾಯಿತವನ್ನು ಕಣ್ಣಿಗೆ ಕಟ್ಟುವಂತೆ ಸೊಗಸಾಗಿ ವರ್ಣಿಸಿದ್ದಾನೆ ಹಾಗೂ ಆ ಭಂಗಿಯನ್ನು ಅನುಭವಿಸುವುದು ತನ್ನ ಪರಮ ಭಾಗ್ಯ ಎಂದು ನಾಯಕನಿಂದ ಹೇಳಿಸಿದ್ದಾನೆ. 
   

ಸುಂದರೀಶತಕ -೮೨

ಸಂಸ್ಕೃತ ಮೂಲ 

ನಿಬಿಡೀಕೃತೋರುಬಂಧಂ ವೇಲ್ಲಿತವದನೇಂದುನಿಹ್ರುತೋಚ್ಛ್ವಾಸಮ್ ।
ತಸ್ಯಾ: ಸ್ಮರಾಮಿ ಸುರತಂ ತತ್ಕರಭರರುದ್ಧಮನ್ನಾಭಿ ।।

ಕನ್ನಡ ಅನುವಾದ 

   ನಾಯಕನು ಹೇಳುತ್ತಾನೆ," ನಾವು ಗಾಢವಾಗಿ ತೊಡೆಗಳನ್ನು ಬಂಧಿಸಿರಲು, ನನ್ನ ಪ್ರಿಯತಮೆಯ ಮುಖಚಂದ್ರವು ನನ್ನ ಕಡೆಗೆ ತಿರುಗಿ, ನನ್ನ ಚುಂಬನದಿಂದ ಅವಳ ಶ್ವಾಸೋಚ್ಛ್ವಾಸವು ಬಂಧಿತವಾಗಿ, ನನ್ನ ನಾಭಿಯ ಮೇಲೆ ಅವಳು ತನ್ನ ಕೈಯನ್ನು ಒತ್ತಿ ಹಿಡಿದಿರಲು, ಅವಳೊಂದಿಗಿನ ಆ ಸುಂದರ ಸುರತಕ್ರೀಡೆಯನ್ನು ನಾನು ನೆನೆಯುತ್ತೇನೆ!"
    ಕವಿಯು ಇಲ್ಲಿ ನಾಯಕನು ನಾಯಕಿಯೊಂದಿಗೆ ನಡೆಸಿದ ಸುರತಕ್ರೀಡೆಯನ್ನು ಕಣ್ಣಿಗೆ ಕಟ್ಟುವಂತೆ ಸೊಗಸಾಗಿ ವರ್ಣಿಸಿದ್ದಾನೆ. ಈ ವರ್ಣನೆಯಿಂದ ಅವರಿಬ್ಬರೂ ಗಾಢವಾಗಿ ಆಲಂಗಿಸಿದ್ದರೆಂಬುದು ತಿಳಿಯುತ್ತದೆ. ವಿಶೇಷವಾಗಿ ತೊಡೆಗಳನ್ನು ಬಂಧಿಸುವ ಆಲಿಂಗನವನ್ನು ವಾತ್ಸ್ಯಾಯನನು ಕಾಮಸೂತ್ರದಲ್ಲಿ ಊರೂಪಗೂಹನ ಎಂದು ವರ್ಣಿಸಿದ್ದಾನೆ. ಇಂಥ ಹಲವಾರು ಆಲಿಂಗನಗಳನ್ನು ಅವನು ವರ್ಣಿಸಿದ್ದಾನೆ. ನಮ್ಮ ಭಾರತೀಯ ಸಂಸ್ಕೃತಿ ಹಾಗೂ ಪರಂಪರೆಯಲ್ಲಿ ಧರ್ಮಕ್ಕೆ ಎಷ್ಟು ಮಹತ್ವವಿದೆಯೋ ಕಾಮಕ್ಕೂ ಅಷ್ಟೇ ಮಹತ್ವವಿದೆ. ಧರ್ಮ, ಅರ್ಥ, ಕಾಮ, ಮೋಕ್ಷ, ಈ ನಾಲ್ಕೂ ಒಬ್ಬ ಮನುಷ್ಯನು ಸಾಧಿಸಬೇಕಾದ ಪುರುಷಾರ್ಥಗಳು. ಆದರೆ ಇವುಗಳನ್ನು ಧರ್ಮದ ಮೂಲಕ ಸಾಧಿಸಬೇಕು. ಆದ್ದರಿಂದ ಧರ್ಮ ಮೊದಲಿದೆ. ಹಾಗಾಗಿ ಧರ್ಮದಿಂದ ಕಾಮವನ್ನು ಯಥೇಚ್ಛವಾಗಿ ಹಾಗೂ ತೃಪ್ತಿಕರವಾಗಿ, ಸಂತೋಷದಿಂದ ಅನುಭವಿಸಿದರೆ ಅದರಲ್ಲಿ ಯಾವುದೇ ತಪ್ಪಿಲ್ಲ ಅಥವಾ ಹಿಂಜರಿಕೆ ಪಡಬೇಕಿಲ್ಲ. ಭಗವಾನ್ ಶ್ರೀಕೃಷ್ಣನೂ ಭಗವದ್ಗೀತೆಯಲ್ಲಿ, ' ಧರ್ಮಾವಿರುದ್ಧೋ ಭೂತೇಷು ಕಾಮೋऽಸ್ಮಿ ಭರತರ್ಷಭ ' ( ಜನರಲ್ಲಿ ನಾನು ಧರ್ಮಕ್ಕೆ ವಿರುದ್ಧವಲ್ಲದ ಕಾಮವಾಗಿದ್ದೇನೆ) ' ಎಂದಿದ್ದಾನೆ. ಹಾಗಾಗಿ, ಧರ್ಮದಿಂದ ಸಂತೋಷವಾಗಿ ಅನುಭವಿಸುವ ಕಾಮವು ಭಗವತ್ಸ್ವರೂಪವೇ ಆಗಿರುತ್ತದೆ. ಆದ್ದರಿಂದಲೇ ಕಾಮನನ್ನು ನಮ್ಮವರು ಒಬ್ಬ ದೇವತೆಯಾಗಿಯೇ ಕಂಡಿದ್ದಾರೆ. ಹಾಗಾಗಿಯೇ ಕವಿಗಳು ಇಂಥ ಸುರತವರ್ಣನೆಗಳನ್ನು ಯಾವುದೇ ಹಿಂಜರಿಕೆ, ಮುಜುಗರಗಳಿಲ್ಲದೆ ಮಾಡಿದ್ದಾರೆ. ಆದರೆ ವಿಕ್ಟೋರಿಯಾ ಯುಗದಿಂದ, ಅಂದರೆ ಬ್ರಿಟಿಷರ ಆಳ್ವಿಕೆಯ ಕಾಲದಿಂದ ನಮ್ಮಲ್ಲಿ ಕಾಮ, ಶೃಂಗಾರಗಳ ಬಗ್ಗೆ ಮುಜುಗರ, ಹಿಂಜರಿಕೆಗಳು ಹೆಚ್ಚಾದವು. ಈಗಲೂ ಎಷ್ಟೋ ದಂಪತಿಗಳು ಯಥೇಚ್ಛವಾಗಿ ಕಾಮ, ಶೃಂಗಾರಗಳ ಸುಖವನ್ನು ಅನುಭವಿಸಲು ಹಿಂಜರಿಯುತ್ತಾರೆ. ಹಾಗಾಗಿ ಸುಂದರೀಶತಕ, ಅಮರುಶತಕ, ಮೊದಲಾದ ಅನೇಕ ಶೃಂಗಾರ ಕಾವ್ಯಗಳನ್ನು ಓದಿ, ನಮ್ಮ ದೇವಾಲಯಗಳಲ್ಲಿನ ರತಿಶಿಲ್ಪಗಳನ್ನು ನೋಡಿ, ಶೃಂಗಾರಸುಖವನ್ನು ಆನಂದಿಸಿ ಅನುಭವಿಸಬೇಕು. 

ಶನಿವಾರ, ಆಗಸ್ಟ್ 22, 2026

ಸುಂದರೀಶತಕ -೮೧

ಸಂಸ್ಕೃತ ಮೂಲ 

ಸ್ಮೇರಾನನೇ ಮುಖಂ ತವ ಸುಧಾನಿಧೇರ್ಮಂಡಲೇನ ತುಲಯಂತಮ್ ।
ಏನಂ ನಿಜಾಧರಸುಧಾದಾನೇನ ನ ಕಿಂ ವಿಲಕ್ಷಯಸಿ ।।

ಕನ್ನಡ ಅನುವಾದ 

   ನಾಯಕನು ನಾಯಕಿಗೆ ಹೇಳುತ್ತಾನೆ," ಎಲೈ ನಗುಮುಖದ ಸುಂದರಿ! ನಿನ್ನ ಮುಖವನ್ನು ಸುಧಾನಿಧಿಯಾದ ಚಂದ್ರಮಂಡಲದೊಂದಿಗೆ ಹೋಲಿಸುತ್ತಿರುವ ಈ ನಿನ್ನ ಪ್ರಿಯತಮನಿಗೆ ನಿನ್ನ ನಿಜವಾದ ಅಧರಸುಧೆಯನ್ನು ನೀಡಿ ಏಕೆ ಇವನನ್ನು ಲಜ್ಜೆಗೊಳಿಸುವುದಿಲ್ಲ?" 
    ಬಹಳ ಸೊಗಸಾದ ಈ ಶೃಂಗಾರ ಪದ್ಯದಲ್ಲಿ ನಾಯಕನು ತನ್ನ ಪ್ರಿಯತಮೆಯ ಮುಖವನ್ನು ಚಂದ್ರನಿಗೆ ಹೋಲಿಸುತ್ತಾ ಚಂದ್ರನನ್ನು ಸುಧಾನಿಧಿ ಅಥವಾ ಸುಧಾಕರ ಎನ್ನುತ್ತಿದ್ದಾನೆ. ಚಂದ್ರನು ಸುಧೆಯಂಥ ತಂಪಾದ ಬೆಳಕನ್ನು ಬೀರುವುದರಿಂದ ಅವನನ್ನು ಸುಧಾನಿಧಿ ಹಾಗೂ ಸುಧಾಕರ ಎನ್ನುತ್ತಾರೆ. ಆದರೆ ನಾಯಕನು ನಾಯಕಿಗೆ ಅವಳ ನಿಜವಾದ ಅಧರಸುಧೆಯನ್ನು ನೀಡಲು ಪ್ರಾರ್ಥಿಸುತ್ತಾ ತನ್ನನ್ನು ಲಜ್ಜೆಗೊಳಿಸುವಂತೆ ಹೇಳುತ್ತಿದ್ದಾನೆ. ಅಂದರೆ ಅವಳ ಅಧರಸುಧೆ ಚಂದ್ರನ ಸುಧೆಗಿಂತ ಚೆನ್ನಾಗಿರುವುದರಿಂದ ಅದನ್ನು ತನಗೆ ನೀಡಿ, ಅವಳ ಮುಖವನ್ನು ಚಂದ್ರನಿಗೆ ಹೋಲಿಸುತ್ತಿರುವ ತನ್ನನ್ನು ಲಜ್ಜೆಗೊಳಿಸುವಂತೆ ಹೇಳುತ್ತಿದ್ದಾನೆ. ಅವಳ ಮುಖ ಚಂದ್ರನಿಗಿಂತ ಚೆನ್ನಾಗಿದೆ ಎಂದು ತಾತ್ಪರ್ಯ. ಇಲ್ಲಿ ಹೋಲಿಕೆಗೊಳಗಾಗುತ್ತಿರುವ ಸಾಮಾನ್ಯ ವಸ್ತು ಹೆಣ್ಣಿನ ಮುಖ.‌ ಹಾಗಾಗಿ ಅದು ಉಪಮೇಯ. ಅದನ್ನು ಪ್ರಸಿದ್ಧ ವಸ್ತುವಾದ ಚಂದ್ರನಿಗೆ ಹೋಲಿಸಲಾಗುತ್ತಿದೆ. ಹಾಗಾಗಿ ಚಂದ್ರ ಉಪಮಾನ. ಸಾಮಾನ್ಯವಾಗಿ ಮುಖವು ಚಂದ್ರನಂತಿದೆ ಎಂದರೆ ಅದು ಉಪಮಾಲಂಕಾರ. ಆದರೆ ಇಲ್ಲಿ ಉಪಮೇಯವಾದ ಮುಖ, ಅಧರಸುಧೆಯ ಕಾರಣದಿಂದ ಉಪಮಾನವಾದ ಚಂದ್ರನಿಗಿಂತ ಚೆನ್ನಾಗಿದೆ ಎಂದು ಹೇಳಿರುವುದರಿಂದ ವ್ಯತಿರೇಕ ಅಲಂಕಾರವಿದೆ. ಈ ರೀತಿಯ ವಿಭಿನ್ನ ಅಲಂಕಾರದಿಂದ ಪದ್ಯದ ಸೌಂದರ್ಯ ಅಧಿಕವಾಗುತ್ತದೆ.

ಸುಂದರೀಶತಕ -೮೦

ಸಂಸ್ಕೃತ ಮೂಲ 

ಅರ್ಚಿತಚಂಡೀಚರಣಪ್ರಸಾದಫಲಮನ್ಯದುರ್ಲಭಂ ತರುಣ: ।
ಸುಂದರಿ ಹಸಿತಕರಂಬಿತಮಖಂಡಪುಣ್ಯೇನ ಖಂಡಯತ್ಯಧರಮ್ ।।

ಕನ್ನಡ ಅನುವಾದ 

   'ಎಲೈ ಸುಂದರಿ! ಅನ್ಯರಿಗೆ ದುರ್ಲಭವಾದ ದುರ್ಗಾದೇವಿಯ ಚರಣಾನುಗ್ರಹದಿಂದ ದೊರೆತ ಅಖಂಡ ಪುಣ್ಯದಿಂದ, ನಿನ್ನ ನಗುವಿನಿಂದ ಕೂಡಿದ ಅಧರವನ್ನು ಈ ತರುಣನು ಚುಂಬಿಸುತ್ತಾನೆ!' 
    ಯುವದಂಪತಿಗಳ ನಡುವಿನ ಒಂದು ಸುಂದರ ಶೃಂಗಾರಮಯ ಚಿತ್ರಣವಿದು. ತನ್ನ ಪ್ರಿಯತಮೆಯ ಅಧರವನ್ನು ಚುಂಬಿಸುತ್ತಿರುವ ತರುಣನು ತನ್ನನ್ನು ತಾನು ಬಹಳ ಭಾಗ್ಯಶಾಲಿ ಎಂದು ಹೇಳಿಕೊಳ್ಳುತ್ತಿದ್ದಾನೆ. ಇನ್ನೊಬ್ಬರಿಗೆ ದುರ್ಲಭವಾದ ದುರ್ಗಾದೇವಿಯ ಚರಣಾನುಗ್ರಹದಿಂದ ದೊರೆತ ಅಖಂಡ ಪುಣ್ಯದಿಂದಷ್ಟೇ ಹೀಗೆ ಚುಂಬಿಸಲು ತನಗೆ ಸಾಧ್ಯವಾಗುತ್ತಿದೆ ಎಂದು ಹೇಳುತ್ತಿದ್ದಾನೆ. ಖಂಡಯತಿ ಎಂದರೆ ಖಂಡಿಸುತ್ತಾನೆ, ಅಂದರೆ ಕಚ್ಚುತ್ತಾನೆ ಎಂದು ಅರ್ಥ. ದಂತಕ್ಷತವೆನ್ನುವ ಈ ಕಾಮಕ್ರೀಡೆಯಲ್ಲಿ ತುಟಿಗಳನ್ನು ಚುಂಬಿಸುತ್ತಾ ಮೃದುವಾಗಿ ಕಚ್ಚುವುದುಂಟು. ಅಂದರೆ ಅವನು ಅಷ್ಟು ಆಳವಾಗಿ ಚುಂಬಿಸುತ್ತಿದ್ದಾನೆ. ಹೀಗೆ ಪ್ರೀತಿಯಿಂದ, ನಗುವಿನಿಂದ ಕೂಡಿರುವ ಸುಂದರಿಯ ಅಧರವನ್ನು ಚುಂಬಿಸುವುದು ನಿಜಕ್ಕೂ ಪುಣ್ಯವೇ! 

ಮಂಗಳವಾರ, ಆಗಸ್ಟ್ 18, 2026

ಸುಂದರೀಶತಕ -೭೯

ಸಂಸ್ಕೃತ ಮೂಲ 

ಮಧುಧೌತಮಧುರಮಧುರಂ ಧೃತಧಮ್ಮಿಲ್ಲಂ ಧವೇ ಧಯತಿ ।
ಕವಲಯತಿ ಕಿಮಪಿ ಕಂಪಿತಕಾಂತಾಕರಕಂಕಣಕ್ವಣಿತಮ್ ।।

ಕನ್ನಡ ಅನುವಾದ 

   ಪತಿಯು ತನ್ನ ಪ್ರಿಯ ಕಾಂತೆಯ ಅಲಂಕೃತ ತುರುಬನ್ನು ಹಿಡಿದು ಜೇನಿನಿಂದ ತೊಳೆದಂತೆ ಅತಿ ಮಧುರವಾಗಿರುವ ಅವಳ ಅಧರಾಮೃತವನ್ನು ಹೀರುತ್ತಾ ಅವಳ ಕಂಪನದಿಂದುಂಟಾದ ಕರಕಂಕಣಗಳ ಕಿಣಿ ಕಿಣಿ ಶಬ್ದವನ್ನು ಹೇಗೋ ನುಂಗಿಬಿಡುತ್ತಾನೆ!'
    ಕವಿಯು ಇಲ್ಲಿ ಪತಿ, ಪತ್ನಿಯರ ರತಿಕ್ರೀಡೆಯ ಅತ್ಯಂತ ಮಧುರವಾದ ಸನ್ನಿವೇಶವನ್ನು ರಸವತ್ತಾಗಿ ವರ್ಣಿಸಿದ್ದಾನೆ. ಪತಿಯು ತನ್ನ ಪ್ರಿಯ ಪತ್ನಿಯ ಅಲಂಕೃತ ತುರುಬನ್ನು ಹಿಡಿದು ಅವಳ ತುಟಿಗಳನ್ನು ಚುಂಬಿಸುತ್ತಾ ಅಧರಾಮೃತವನ್ನು ಹೀರುತ್ತಿದ್ದಾನೆ.‌ ಆ ತುಟಿಗಳು ಜೇನಿನಿಂದ ತೊಳೆದಂತಿವೆ ಎನ್ನುತ್ತಾ ಮಧುರಮಧುರಂ ಎಂದು ಎರಡು ಬಾರಿ ಹೇಳುತ್ತಾ ಅತಿಮಧುರವಾಗಿವೆ ಎನ್ನುತ್ತಾನೆ. ಆದರೆ ಎಲ್ಲಾ ನವವಿವಾಹಿತ ಸ್ತ್ರೀಯರಿಗಿರುವಂತೆ, ಇಲ್ಲೂ ನಾಯಕಿಗೆ ಸಂಭೋಗವೆಂದರೆ ಸ್ವಲ್ಪ ಭಯವಾಗಿ ನಡುಗುತ್ತಿದ್ದಾಳೆ. ಅವಳ ಆ ಕಂಪನದಿಂದ ಕೈಬಳೆಗಳು ಕಿಣಿ ಕಿಣಿ ಶಬ್ದವನ್ನು ಮಾಡುತ್ತಿವೆ. ಆದರೆ ಪತಿಯು ಅವಳ ಅದರಾಮೃತಪಾನ ಮಾಡುತ್ತಾ ಆ ಬಳೆಗಳ ಶಬ್ದವನ್ನೂ ಹೇಗೋ ನುಂಗಿಬಿಡುತ್ತಾನೆ ಎನ್ನುತ್ತಾನೆ ಕವಿ! ಕವಲಯತಿ ಎಂದರೆ ನುಂಗಿಬಿಡುತ್ತಾನೆ ಎಂದು ಅರ್ಥ. ಅಂದರೆ ಆ ಶಬ್ದವನ್ನೇ ಅಡಗಿಸಿಬಿಡುತ್ತಾನೆ! ಅದು ಗೊತ್ತಾಗದಂತೆ ಮಾಡುತ್ತಾನೆ! ಅಂದರೆ ಅವನು ಅದೆಷ್ಟು ಪ್ರೀತಿಯಿಂದ, ರಸಿಕತೆಯಿಂದ ಅವಳ ಅಧರವನ್ನು ಚುಂಬಿಸಿ ಹೀರುತ್ತಿದ್ದಾನೆಂದರೆ ಅವಳ ಭಯ, ನಡುಕ, ಮತ್ತು ಬಳೆಗಳ ಕಿಣಿಕಿಣಿ ಶಬ್ದಗಳೆಲ್ಲವನ್ನೂ ಹೋಗಲಾಡಿಸಿ ಅವಳು ಅವನ ಪ್ರೇಮದಲ್ಲಿ ಒಂದಾಗುವಂತೆ, ಮೈಮರೆಯುವಂತೆ ಮಾಡುತ್ತಿದ್ದಾನೆ! ಇದರಲ್ಲಿ ಒಂದು ವೈಜ್ಞಾನಿಕ ಸತ್ಯವೂ ಇದೆ. ಪತಿಯು ತನ್ನ ಹೆದರಿದ ಪತ್ನಿಯನ್ನು ಪ್ರೀತಿಯಿಂದ ಮುದ್ದಿಸುತ್ತಾ ನಿಧಾನವಾಗಿ ರಸಿಕತೆಯಿಂದ ಸಂಭೋಗಿಸುತ್ತಾ ಅವಳ ಭಯ, ಕಂಪನಗಳನ್ನು ಹೋಗಲಾಡಿಸಿ ಅವಳನ್ನು ತನ್ನ ಪ್ರೇಮದಲ್ಲಿ ಒಂದಾಗಿಸಿಕೊಳ್ಳಬೇಕೇ ಹೊರತು, ಆತುರ, ಬಲಾತ್ಕಾರಗಳಿಂದ ಭಯವನ್ನು ಹೆಚ್ಚಿಸುವಂತೆ ಸಂಭೋಗಿಸಬಾರದು. ಪ್ರೀತಿಯ, ರಸಿಕತೆಯ ಮಿಲನವಾದರೆ ಅದು ಮತ್ತೆ ಮತ್ತೆ ಬೇಕೆನಿಸುತ್ತದೆ ಹಾಗೂ ಅಂಥ ಸವಿಯಾದ ಶೃಂಗಾರಾನುಭವ ಸಿಕ್ಕ ಪತ್ನಿಯು ತನ್ನ ಪತಿಯನ್ನು ಮನಸಾರೆ ಪ್ರೀತಿಸುತ್ತಾಳೆ.

ಭಾನುವಾರ, ಆಗಸ್ಟ್ 16, 2026

ಎರಡು ತಲೆಗಳ ಹಕ್ಕಿ -ಪಂಐತಂತ್ರದ ಅಪರೂಪದ ಕಥೆ

ಇದು ಹಂಚಿಕೊಂಡು ಬದುಕಬೇಕೆಂದು ಬೋಧಿಸುವ ಪಂಚತಂತ್ರದ ಒಂದು ಕಥೆ.
   ಒಂದಾನೊಂದು ಕಾಲದಲ್ಲಿ ಭಾರುಂಡ ( ಗಂಡಭೇರುಂಡ) ಎಂಬ ಒಂದು ವಿಚಿತ್ರ ಪಕ್ಷಿಯಿತ್ತು. ಅದಕ್ಕೆ ದೇಹ ಒಂದೇ ಇದ್ದರೂ ತಲೆಗಳು ಎರಡಿದ್ದವು.‌ ಒಮ್ಮೆ ಒಂದು ತಲೆಗೆ ಒಂದು ಸಿಹಿಯಾದ ಹಣ್ಣು ಸಿಕ್ಕಿತು. ಅದು ಆ ಹಣ್ಣನ್ನು ಚಪ್ಪರಿಸಿಕೊಂಡು ತಿನ್ನುತ್ತಾ," ಅಬ್ಬ! ಇಂಥ ರುಚಿಯಾದ ಹಣ್ಣನ್ನು ನಾನೆಂದೂ ತಿಂದಿಲ್ಲ!" ಎಂದಿತು. ಆಗ ಇನ್ನೊಂದು ತಲೆ," ನನಗೂ ಸ್ವಲ್ಪ ಕೊಡು! ನಾನೂ ರುಚಿ ನೋಡುತ್ತೇನೆ!" ಎಂದಿತು. ಅದಕ್ಕೆ ಮೊದಲನೆಯ ತಲೆ," ನಮ್ಮಿಬ್ಬರಿಗೂ ಒಂದೇ ಹೊಟ್ಟೆಯಿದೆ! ಹಾಗಾಗಿ ನಾನೊಬ್ಬನೇ ತಿಂದರೂ ಸಾಕು! ನಮ್ಮ ಹೊಟ್ಟೆಗೆ ತೃಪ್ತಿಯಾಗುತ್ತದೆ! ಉಳಿದದ್ದನ್ನು ನಮ್ಮ ಹೆಂಡತಿಗೆ ಕೊಡೋಣ!" ಎಂದಿತು. ಪಾಪ, ಈ ಎರಡನೆಯ ತಲೆಗೆ ಏನೂ ಹೇಳಲಾಗಲಿಲ್ಲ.
    ಮೊದಲ ತಲೆ ಆ ಹಣ್ಣನ್ನು ಅರ್ಧ ತಿಂದ ಬಳಿಕ ಉಳಿದರ್ಧವನ್ನು ಹೆಂಡತಿಗೆ ಕೊಟ್ಟಿತು. ಅದು ಆ ಹಣ್ಣನ್ನು ತಿಂದು ಬಹಳ ಸಂತೋಷಗೊಂಡು ದಿನವಿಡೀ ಆ ತಲೆಯನ್ನು ಆಲಂಗಿಸಿ ಚುಂಬಿಸಿತು! ಇದರಿಂದ ಎರಡನೆಯ ತಲೆಗೆ ಅನಾದರ ತೋರಿದಂತಾಗಿ ದುಃಖವಾಯಿತು. ಅಂತೆಯೇ ಮೊದಲನೆಯ ತಲೆಯ ಮೇಲೆ ಅದಕ್ಕೆ ಕ್ರಮೇಣ ದ್ವೇಷ ಬೆಳೆಯಿತು! ಹೇಗಾದರೂ ಮಾಡಿ ಅದರ ಮೇಲೆ ಸೇಡು ತೀರಿಸಿಕೊಳ್ಳಲು ಕಾಯತೊಡಗಿತು.
   ಒಂದು ದಿನ, ಎರಡನೆಯ ತಲೆಗೆ ಒಂದು ವಿಷಪೂರಿತ ಹಣ್ಣು ಸಿಕ್ಕಿತು! ಅದು ಆ ಹಣ್ಣನ್ನು ತೆಗೆದುಕೊಂಡು ಮೊದಲನೆಯ ತಲೆಗೆ ಹೇಳಿತು," ಇತರರನ್ನು ನಿರ್ಲಕ್ಷಿಸುವೆಯಲ್ಲವೇ? ಈಗ ಈ ವಿಷದ ಹಣ್ಣನ್ನು ತಿನ್ನುತ್ತೇನೆ ನೋಡು!" 
   ಆಗ ಎರಡನೆಯ ತಲೆ," ಅಯ್ಯೋ ಮೂರ್ಖ! ಅದನ್ನು ತಿನ್ನಬೇಡ! ನೀನು ತಿಂದರೆ ನಾವಿಬ್ಬರೂ ಸಾಯುತ್ತೇವೆ! "
   ಆದರೆ ಎರಡನೆಯ ತಲೆ ಅದರ ಮಾತು ಕೇಳದೆ ವಿಷದ ಹಣ್ಣನ್ನು ತಿಂದುಬಿಟ್ಟಿತು! ಆಗ ಎರಡೂ ಸತ್ತವು!
    ನಾವು ಸಂಸಾರದಲ್ಲೇ ಆಗಲಿ, ಕೆಲಸದ ಕಚೇರಿಯಲ್ಲೇ ಆಗಲಿ, ಒಂದು ಸಾಂಘಿಕ ಕಾರ್ಯದಿಂದ ನಡೆಯುವ 
ಸಂಸ್ಥೆಯಲ್ಲಿಯೇ ಆಗಲಿ, ಒಟ್ಟಿಗಿರುವಾಗ, ಯಾರನ್ನೂ ಉಪೇಕ್ಷಿಸಬಾರದು.‌ ಎಲ್ಲರಿಗೂ ಸಮಾನವಾದ ಗೌರವ, ಮರ್ಯಾದೆಗಳನ್ನು ನೀಡಬೇಕು. ಒಬ್ಬ ಕೆಲಸದವನನ್ನೂ ನಿರ್ಲಕ್ಷಿಸಬಾರದು. ಹಾಗೆ ನಿರ್ಲಕ್ಷಿಸಿದರೆ ಆ ವ್ಯಕ್ತಿಗಳಲ್ಲಿ ದ್ವೇಷವುಂಟಾಗಬಹುದು. ಆಗ ಅವರು ಇತರರಿಗೆ ಅಥವಾ ಸಂಸಾರ, ಅಥವಾ ಮೂಲ ಕಚೇರಿ ಅಥವಾ ಸಂಸ್ಥೆಗೆ ತೊಂದರೆ ಮಾಡಲು ಹೋದರೆ ಆ‌ ಇತರರಿಗೆ, ಸಂಸಾರಕ್ಕೆ, ಕಚೇರಿಗೆ ಅಥವಾ ಸಂಸ್ಥೆಗೆ ಇವರೂ ಸಂಬಂಧಪಟ್ಟಿರುವುದರಿಂದ, ಅವರೊಂದಿಗೆ ಇವರಿಗೂ ತೊಂದರೆಯಾಗುತ್ತದೆ! ಹೀಗೆ ಈ ಪುಟ್ಟ ಕಥೆಯಲ್ಲಿ ಎರಡು ನೀತಿಗಳನ್ನು ನೋಡಬಹುದು.