ಅತಿಮಂದವರ್ಷದಂಬುದಶೀಕರಶಿಶಿರಾರ್ದ್ರಸಾಂದ್ರವಸನಾಯಾ: /
ಆಕಸ್ಮಿಕಾಗತಾಯಾ: ಕಂಠಗ್ರಹಣಫಲಂ ಜನುಷ: //
ಕನ್ನಡ ಅನುವಾದ
' ಮೇಘಗಳು ಬಹು ಮೆಲ್ಲನೆ ಮಳೆ ಸುರಿಸುತ್ತಿರಲು, ತನುವು ತಂಪಾಗಿ, ಆರ್ದ್ರವಾಗಿ, ವಸ್ತ್ರಗಳು ಮೈಗೆ ಅಂಟಿಕೊಳ್ಳುವಂತಾಗಿದ್ದ ಸ್ಥಿತಿಯಲ್ಲಿ ಆಕಸ್ಮಿಕವಾಗಿ ಆಗಮಿಸಿದ ಪ್ರಿಯತಮೆಯನ್ನು ಕಂಠಾಲಿಂಗನ ಮಾಡಿಕೊಂಡ ಪ್ರಿಯತಮನಿಗೆ ಅದು ಅವನ ಜನ್ಮದ ಪುಣ್ಯಫಲ!'
ಕವಿಯು ಇಲ್ಲಿ ಸೊಗಸಾದ ಉತ್ಕಟ ಪ್ರೇಮದ ರಮ್ಯ ಶೃಂಗಾರ ಸನ್ನಿವೇಶವನ್ನು ಕಲ್ಪಿಸಿದ್ದಾನೆ! ಬಹಳ ಸಣ್ಣಗೆ ಮಳೆ ಬರುತ್ತಿದೆ. ಜೋರಾದ ಮಳೆಯಲ್ಲಿ ಹೊರಗೆ ಹೋಗಲು ಕಷ್ಟವಾಗುತ್ತದೆ ಹಾಗೂ ಭಯವೂ ಆಗುತ್ತದೆ. ಆದರೆ ಇಂಥ ಮಂದಮಳೆಯಲ್ಲಿ ವಿಹಾರ ಹೋಗುವುದು ಹಿತವಾಗಿರುತ್ತದೆ. ಅದರಲ್ಲೂ ಸಂಗಾತಿಯೊಂದಿಗೆ ವಿಹರಿಸಿದರೆ ಅದರ ಸೊಗಸೇ ಬೇರೆ! ಇಲ್ಲಿ ತನ್ನ ಪ್ರಿಯತಮನನ್ನು ನೋಡಲು ಅವನ ಪ್ರಿಯತಮೆಯು ಅವರ ನಿತ್ಯ ಸಂಕೇತ ಸ್ಥಳಕ್ಕೆ ಬಂದಿದ್ದಾಳೆ. ಆದರೆ ಅವನು ಅವಳಿಗೆ ಬರಲು ಹೇಳಿಲ್ಲ. ಹಾಗಾಗಿ ಅವಳು ಆಕಸ್ಮಿಕವಾಗಿ ಬಂದಿದ್ದಾಳೆ. ಮೊದಲೇ ರಮ್ಯ ವಾತಾವರಣ. ಈಗ ಪ್ರಿಯತಮೆಯೂ ಬಂದಿದ್ದಾಳೆ! ಮಳಯಿಂದ ನೆನೆದು ತಂಪಾಗಿ, ಆರ್ದ್ರವಾಗಿ, ವಸ್ತ್ರಗಳು ಮೈಗೆ ಅಂಟಿಕೊಂಡಿರುವಂಥ ಮುದ್ದಾದ ಸ್ಥಿತಿಯಲ್ಲಿ ಬಂದಿದ್ದಾಳೆ! ಆಗ ಪ್ರಿಯತಮನಿಗೆ ಶೃಂಗಾರ ಭಾವೋದ್ದೀಪನವಾಗಿ ಅವನು ಅವಳನ್ನು ಕಂಠಾಲಿಂಗನ ಮಾಡಿಕೊಂಡಿದ್ದಾನೆ! ಇದು ಅವನ ಜನ್ಮದ ಪುಣ್ಯಫಲ ಎನ್ನುತ್ತಾನೆ ಕವಿ. ಅಲ್ಲವೇ? ಒಲಿದ ಪ್ರಿಯತಮೆಯನ್ನು ಗಾಢವಾಗಿ ಆಲಂಗಿಸಿದಾಗ ಆಗುವ ಆನಂದ ಅಷ್ಟಿಷ್ಟಲ್ಲ! ಲೋಕವೇ ಮರೆಯುವಂಥ, ಮೋಕ್ಷದಂಥ ಅದ್ವೈತ ಭಾವದ ಅದ್ಭುತ ಸ್ಥಿತಿ ಉಂಟಾಗುತ್ತದೆ ಆಗ! ಹೀಗೆ ಒಲಿದ ಪ್ರೇಮಿಗಳು ಗಾಢಾಲಿಂಗನ ಮಾಡಿಕೊಳ್ಳುವುದು ಒಂದು ಪುಣ್ಯಫಲವಲ್ಲದೇ ಮತ್ತೇನು?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ