ಸಿತವಸನಮೌಕ್ತಿಕಾವಲಿಚಂದನಚರ್ಚಾಸಹಾಯಶಾಲಿನ್ಯಾ: /
ಜ್ಯೋತ್ಸ್ನಾಭಿಸಾರಿಣಿ ತವ ಚ್ಛಾಯಾ ಪರಿಪಂಥಿನೀ ಭವತಿ //
ಕನ್ನಡ ಅನುವಾದ
' ಬಿಳಿಯ ವಸ್ತ್ರವನ್ನುಟ್ಟು, ಬಿಳಿಯ ಮುತ್ತಿನ ಹಾರ ಧರಿಸಿ, ಚಂದನವನ್ನು ಪೂಸಿಕೊಂಡು ಹೋಗುತ್ತಿರುವ ಎಲೈ ಜ್ಯೋತ್ಸ್ನಾಭಿಸಾರಿಣಿ! ನಿನ್ನ ನೆರಳೇ ನಿನಗೆ ಶತ್ರುವಾಗುತ್ತದೆ!'
ಅಭಿಸಾರಿಕೆಯರನ್ನು ವರ್ಣಿಸುತ್ತಾ ಕವಿಯು ಇನ್ನೊಂದು ಸ್ವಾರಸ್ಯಕರ ಶೃಂಗಾರ ಪದ್ಯವನ್ನು ರಚಿಸಿದ್ದಾನೆ. ಅಭಿಸಾರಿಕೆಯೆಂದರೆ ಯಾರಿಗೂ ತಿಳಿಯದಂತೆ ತನ್ನ ಪ್ರಿಯತಮನನ್ನು ಗುಟ್ಟಾಗಿ ಭೇಟಿಯಾಗಲು ಸಂಕೇತ ಸ್ಥಳಕ್ಕೆ ಹೋಗುವ ನಾಯಕಿ. ಇಲ್ಲಿ ಒಬ್ಬ ನಾಯಕಿಯು ಬೆಳದಿಂಗಳ ರಾತ್ರಿಯಲ್ಲಿ ಹಾಗೆ ಹೋಗುತ್ತಿದ್ದಾಳೆ. ಸಾಮಾನ್ಯವಾಗಿ ಅಭಿಸಾರಿಕೆಯರಿಗೆ ಬೆಳದಿಂಗಳೆಂದರೆ ಭಯ ಹಾಗೂ ದ್ವೇಷ! ಏಕೆಂದರೆ ಚಂದ್ರನ ಬೆಳದಿಂಗಳಲ್ಲಿ ತಾವು ಹೋಗುತ್ತಿರುವುದು ಇತರರಿಗೆ ಕಂಡುಬಿಡುತ್ತದೆ! ಆದ್ದರಿಂದ ಅವರು ಆದಷ್ಟು ಕತ್ತಲಿನಲ್ಲೇ ಹೋಗುತ್ತಾರೆ. ಆದರೆ ಇಲ್ಲಿ ನಾಯಕಿಯು ಒಂದು ಉಪಾಯ ಮಾಡಿದ್ದಾಳೆ. ಬೆಳದಿಂಗಳಗೆ ಸರಿಹೊಂದುವಂತೆ ಬಿಳಿಯ ವಸ್ತ್ರವನ್ನುಟ್ಟು, ಬಿಳಿಯ ಮುತ್ತಿನ ಹಾರ ಧರಿಸಿ, ಬಿಳಿಯ ಚಂದನವನ್ನು ಮೈಗೆ ಪೂಸಿಕೊಂಡು, ತಾನು ಬೆಳದಿಂಗಳಿನೊಂದಿಗೆ ಒಂದಾಗಿ ಕಾಣುತ್ತಾ ಹೋಗುತ್ತಿದ್ದಾಳೆ! ಇದರಿಂದ ಅವಳು ತಾನು ಪ್ರತ್ಯೇಕವಾಗಿ ಯಾರಿಗೂ ಕಾಣುವುದಿಲ್ಲ ಎಂದು ಭಾವಿಸಿದ್ದಾಳೆ. ಹಾಗಾಗಿಯೇ ಕವಿಯು ಅವಳನ್ನು ಜ್ಯೋತ್ಸ್ನಾಭಿಸಾರಿಣಿ ಎಂದು ಕರೆದಿದ್ದಾನೆ. ಆದರೆ ಅವಳ ನೆರಳು ಬೀಳುವುದಲ್ಲ! ಅದನ್ನು ಯಾರಾದರೂ ನೋಡಬಹುದು! ಅದನ್ನೇ ಕವಿ ಇಲ್ಲಿ ಅವಳಿಗೆ ನಿನ್ನ ನೆರಳೇ ನಿನಗೆ ಶತ್ರುವಾಗುತ್ತದೆ ಎಂದು ಹೇಳುತ್ತಾನೆ! ಅವಳಿಗೂ ತನ್ನ ನೆರಳನ್ನು ನೋಡಿ ಸ್ವಲ್ಪ ಭಯವಾಗಿರುತ್ತದೆ!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ