ಶುಕ್ರವಾರ, ಆಗಸ್ಟ್ 7, 2026

ಸುಂದರೀಶತಕ -೭೫

ಸಂಸ್ಕೃತ ಮೂಲ 

ಯಾವತ್ಪತತಿ ನ ಚರಣಂ ಛಾಯಾ ದುರ್ವಾರವೈರಿಣೀ ಶಿರಸಿ /
ಜ್ಯೋತ್ಸ್ನಾಭಿಸಾರವೇಷ: ಸಹಚರಿ ನೇಶ: ಕೃತಾರ್ಥಯಿತುಮ್ //

ಕನ್ನಡ ಅನುವಾದ 

   ನಾಯಕಿಯು ತನ್ನ ಸಖಿಗೆ ಹೇಳುತ್ತಾಳೆ, ' ಎಲೈ ಸಹಚರಿ! ಎಲ್ಲಿಯವರೆಗೆ ತಡೆಯಲಾಗದ ವೈರಿಯಾದ ನನ್ನ ನೆರಳು, ಅದರ ತಲೆಯಲ್ಲಿ ನನ್ನ ಪಾದವಿರುವಂತೆ ಬೀಳುವುದಿಲ್ಲವೋ, ಅಲ್ಲಿಯವರೆಗೆ ನನ್ನ ಈ ಜ್ಯೋತ್ಸ್ನಾಭಿಸಾರವೇಷ ನನ್ನ ಪ್ರಿಯತಮನನ್ನು ಭೇಟಿಯಾಗುವ ನನ್ನ ಆಸೆಯನ್ನು ಕೃತಾರ್ಥಗೊಳಿಸುವುದಿಲ್ಲ!

    ಇಲ್ಲಿ ಕವಿಯು ಹಿಂದಿನ ಶ್ಲೋಕದ ಭಾವವನ್ನೇ ಮುಂದುವರೆಸಿದ್ದಾನೆ. ನಾಯಕಿಯು ಬೆಳದಿಂಗಳ ರಾತ್ರಿಯಲ್ಲಿ ತಾನು ಅದಕ್ಕೆ ಒಪ್ಪುವಂತೆ ಬಿಳಿಯ ವೇಷದಲ್ಲಿ ಜ್ಯೋತ್ಸ್ನಾಭಿಸಾರಿಣಿಯಾಗಿ ಹೊರಟರೂ ಅವಳ ನೆರಳನ್ನೇ ಯಾರಾದರೂ ನೋಡಿ ಅವಳನ್ನು ಗುರುತಿಸಬಹುದೆಂದು ಅವಳಿಗೆ ಅನಿಸಿದೆ. ಹಾಗಾಗಿ ಆ ನೆರಳನ್ನೇ ತನ್ನ ತಡೆಯಲಾಗದ ಶತ್ರು ಎಂದು ಭಾವಿಸುತ್ತಾ ಆ ನೆರಳು ಅಡಗುವವರೆಗೂ ತಾನು ಹೋಗಲಾಗುವುದಿಲ್ಲವೆಂದು ಸಖಿಗೆ ಹೇಳುತ್ತಿದ್ದಾಳೆ. ಅವಳ ನೆರಳು ಅದರ ತಲೆಯಲ್ಲಿ ತನ್ನ ಪಾದ ಇರುವಂತೆ ಬೀಳುವುದು ಎಂದರೆ ತನ್ನ ಬುಡಕ್ಕೇ ಬಂದು ಇತರರಿಗೆ ಕಾಣದಂತಾಗುವುದು ಎಂದು ಅರ್ಥ. ಅದು ಆಗಬೇಕಾದರೆ ಚಂದ್ರನು ಅವಳ ನೆತ್ತಿಯ ಮೇಲೆ ಬರಬೇಕು. ಅಂದರೆ ಸುಮಾರು ಮಧ್ಯರಾತ್ರಿ ಆಗಬೇಕು. ಅಲ್ಲಿಯವರೆಗೂ ತಾನು ಈ ಜ್ಯೋತ್ಸ್ನಾಭಿಸಾರವೇಷದಲ್ಲಿದ್ದರೂ ತನ್ನ ಪ್ರಿಯತಮನನ್ನು ನೋಡಲು ಹೋಗಲಾಗುವುದಿಲ್ಲ ಎಂದು ತನ್ನ ಸಖಿಗೆ ನಾಯಕಿಯು ಖಿನ್ನಳಾಗಿ ಹೇಳುತ್ತಿದ್ದಾಳೆ. ಚಂದ್ರನು ಅವಳ ನೆತ್ತಿಯ ಮೇಲೆ ಬಂದಾಗ, ಹಾಗೂ ಅವಳ ಶತ್ರುವಿನಂತಿರುವ ನೆರಳು ಅವಳ ಬುಡಕ್ಕೆ ಬಂದಾಗ, ಅವಳು ಆ ತನ್ನ ಶತ್ರು ನೆರಳಿನ ತಲೆಯ ಮೇಲೆ ತನ್ನ ಪಾದವನ್ನು ಇರಿಸಿ ಜಯ ಸಾಧಿಸಿದಂತೆಯೂ ಇಲ್ಲಿ ಸೊಗಸಾದ ಕಲ್ಪನೆ ಮಾಡಿದ್ದಾನೆ ಕವಿ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ