ಸಸ್ಮಿತತಿರ್ಯಗ್ವೇಲ್ಲಿತಮುಖಪರ್ಯಂತಪ್ರಕೀರ್ಣಕಬರೀಕಮ್ । ಅತಿಭಾಗ್ಯವಾನ್ಭವತ್ಯಾ: ಸುಂದರಿ ಪುರುಷಾಯಿತಂ ಲಭತೇ ।।
ಕನ್ನಡ ಅನುವಾದ
ನಾಯಕನು ನಾಯಕಿಗೆ ಹೇಳುತ್ತಾನೆ," ಹೇ ಸುಂದರಿ! ನಗುವಿನಿಂದ ಕೂಡಿದ ತಿರುಗಿದ ನಿನ್ನ ಮುಖಮಂಡಲದ ಪರ್ಯಂತ ಕೇಶರಾಶಿಯನ್ನು ಹರಡಿಕೊಂಡು ನನ್ನ ಮೇಲೆ ಇರುವ ಈ ನಿನ್ನ ಪುರುಷಾಯಿತ ರತಿಭಂಗಿಯನ್ನು ಅತಿಭಾಗ್ಯವಂತನಾದವನು ಪಡೆಯುತ್ತಾನೆ!"
ಪುರುಷಾಯಿತವೆಂದರೆ ರತಿಕ್ರೀಡೆಯಾಡುವಾಗ ಹೆಣ್ಣು ಪುರುಷನಂತೆ ವರ್ತಿಸುವುದು. ಅಂದರೆ ಅವಳು ಪುರುಷನ ಮೇಲೆ ಬಂದು ಪ್ರಧಾನ ಪಾತ್ರವಹಿಸುತ್ತಾ ಅವನಂತೆ ವರ್ತಿಸುತ್ತಾಳೆ. ಇದನ್ನು ವಿಪರೀತ ರತಿ ಎಂದೂ ಕರೆಯುತ್ತಾರೆ. ಈ ಪುರುಷಾಯಿತವನ್ನು ವಾತ್ಸ್ಯಾಯನನು ಕಾಮಸೂತ್ರದಲ್ಲಿ ವರ್ಣಿಸಿ ಅದರಲ್ಲಿ ವಿವಿಧ ಬಗೆಗಳನ್ನೂ ವರ್ಣಿಸಿದ್ದಾನೆ. ಸಂಸ್ಕೃತದಲ್ಲಿ ಪುರುಷಾಯಿತಭಂಗಿಯ ಅನೇಕ ಪದ್ಯಗಳಿವೆ. ರತಿಕಲೆಗಳಲ್ಲಿ ಇದೂ ಒಂದು. ನಮ್ಮ ದೇವಾಲಯಗಳ ರತಿಶಿಲ್ಪಗಳಲ್ಲಿ ಪುರುಷಾಯಿತವನ್ನೂ ತೋರಿಸಲಾಗಿದೆ. ಹಿಂದೆ ಪಾಶ್ಚಾತ್ಯರಲ್ಲಿ ಹೆಣ್ಣು ಗಂಡಿಗಿಂತ ಕಡಿಮೆ ಸ್ಥಾನಮಾನವುಳ್ಳವಳೆಂದು ಪರಿಗಣಿಸಲಾಗಿದ್ದು ಅವಳು ಕಾಮದಾಸೆಯನ್ನು ವ್ಯಕ್ತಪಡಿಸುವುದೂ ತಪ್ಪೆಂದು ಭಾವಿಸಲಾಗಿತ್ತು. ಆದರೆ ಪ್ರಾಚೀನ ಭಾರತದಲ್ಲಿ ಹೆಣ್ಣನ್ನೂ ಗಂಡಿಗೆ ಸಮಾನವಾಗಿ ಪರಿಗಣಿಸಿ ಅವಳು ಕಾಮದಾಸೆಯೇ ಮೊದಲಾಗಿ ಎಲ್ಲಾ ವಿಷಯಗಳಲ್ಲೂ ಪ್ರಧಾನ ಪಾತ್ರವಹಿಸುವಂತೆಯೇ ನೋಡಿದ್ದರು. ಅವಳಿಗೆ ಗಂಡಿಗಿಂತಲೂ ಕಾಮದಾಸೆ ಹೆಚ್ಚೆಂದೇ ಹೇಳಲಾಗಿದ್ದು ಅದನ್ನು ಸರಿಯಾಗಿ ಪೂರೈಸುವುದು ಗಂಡಿನ ಕರ್ತವ್ಯವೆಂದೂ ಹೇಳಲಾಗಿತ್ತು. ಚಾಣಕ್ಯನೀತಿಯಲ್ಲೂ ' ಸ್ತ್ರೀಣಾಮಷ್ಟಗುಣ: ಕಾಮ: ( ಸ್ತ್ರೀಯರಲ್ಲಿ ಕಾಮವು ಎಂಟು ಪಟ್ಟು ಹೆಚ್ಚಾಗಿರುತ್ತದೆ)' ಎಂದು ಹೇಳಿದೆ. ಹಾಗಾಗಿ ಪುರುಷಾಯಿತ ರತಿಭಂಗಿಗೂ ಮಹತ್ವವಿದೆ. ಇಲ್ಲಿ ಕವಿಯು ಪುರುಷಾಯಿತವನ್ನು ಕಣ್ಣಿಗೆ ಕಟ್ಟುವಂತೆ ಸೊಗಸಾಗಿ ವರ್ಣಿಸಿದ್ದಾನೆ ಹಾಗೂ ಆ ಭಂಗಿಯನ್ನು ಅನುಭವಿಸುವುದು ತನ್ನ ಪರಮ ಭಾಗ್ಯ ಎಂದು ನಾಯಕನಿಂದ ಹೇಳಿಸಿದ್ದಾನೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ