ಪ್ರತಿಪಣಿತಮೇಕವಾರಂ ಪಾತುಂ ದ್ಯೂತೇ ಜಿತಂ ಪಿಬನ್ನಧರಮ್ ।
ಆವೃತ್ತಿದ್ವಯಭೀತ್ಯಾ ನಾಯಂ ನಿಶ್ಚೂಷತೇ ಧೂರ್ತ: ।।
ಕನ್ನಡ ಅನುವಾದ
' ದ್ಯೂತಕ್ರೀಡೆಯಲ್ಲಿ ಒಂದು ಬಾರಿ ಅಧರಾಮೃತಪಾನ ಮಾಡುವ ಪಣವನ್ನು ಗೆದ್ದ ಧೂರ್ತ ಪ್ರಿಯತಮನು ಇನ್ನೊಂದು ಸುತ್ತಿನ ಆಟದಲ್ಲಿ ಸೋಲುವ ಭಯದಿಂದ ಪೂರ್ಣವಾಗಿ ಅಧರಾಮೃತಪಾನ ಮಾಡುವುದಿಲ್ಲ!'
ಪ್ರಾಚೀನ ಭಾರತದಲ್ಲಿ ದಂಪತಿಗಳು ಚದುರಂಗದಾಟ ಅಥವಾ ದ್ಯೂತಕ್ರೀಡೆಯಾಡುವುದು ಬಹಳ ಸಾಮಾನ್ಯವಾಗಿತ್ತು. ಶಿವ ಮತ್ತು ಪಾರ್ವತಿ, ಕೃಷ್ಣ ಮತ್ತು ರುಕ್ಮಿಣಿ, ಕೃಷ್ಣನ ಮೊಮ್ಮಗ ಅನಿರುದ್ಧ ಮತ್ತು ಉಷೆ, ಮೊದಲಾದ ದಂಪತಿಗಳು ದ್ಯೂತಕ್ರೀಡೆಯಾಡುವ ವರ್ಣನೆಗಳು ಪುರಾಣಗಳಲ್ಲಿ ಕಂಡುಬರುತ್ತವೆ. ಇಂಥ ವಿನೋದದ ದ್ಯೂತಕ್ರೀಡೆಗಳಲ್ಲಿ ಏನಾದರೂ ಪಣವಿಟ್ಟು ಆಡುತ್ತಿದ್ದರು. ದೀಪಾವಳಿಯ ರಾತ್ರಿ, ಶಿವ,ಪಾರ್ವತಿಯರು ದ್ಯೂತವಾಡಿದ್ದರಿಂದ ಅಂದು ರಾತ್ರಿ ಎಲ್ಲರೂ ದ್ಯೂತದಲ್ಲಿ ತೊಡಗಿ ಸಂತೋಷಪಡಬೇಕೆಂದು ಒಕ್ಕಣೆಯಿದೆ. ಅಂದು ದ್ಯೂತವಾಡಿದರೆ ಶಿವ, ಪಾರ್ವತಿಯರ ಆಶೀರ್ವಾದ ದೊರೆತು ಆ ವರ್ಷವೆಲ್ಲಾ ಸುಖ, ಸಮೃದ್ಧಿಗಳು ಉಂಟಾಗುತ್ತವೆ ಎನ್ನುತ್ತಾರೆ. ಹಾಗಾಗಿಯೇ ದೀಪಾವಳಿಯನ್ನು ಸುಖರಾತ್ರಿ, ಯಕ್ಷರಾತ್ರಿ, ಮೊದಲಾದ ಹೆಸರುಗಳಿಂದ ಕರೆಯುತ್ತಾರೆ. ಇದು ಪತಿ, ಪತ್ನಿಯರ, ಹಾಗೂ ಬಂಧು,ಮಿತ್ರರ ನಡುವೆ ಪ್ರೀತಿ, ಸ್ನೇಹಗಳನ್ನು ವರ್ಧಿಸುವ ಕ್ರಮವಾಗಿದೆ. ಇದು ಸನಾತನ ಧರ್ಮದ ಔದಾರ್ಯ. ಪ್ರಕೃತಿಸಹಜವಾದ ಜೀವನದ ಯಾವುದೇ ಅಂಶಗಳನ್ನು ನಿರಾಕರಿಸದೆ, ಜೀವನವನ್ನು ಸಂತೋಷದಿಂದ ಕಳೆಯುವ ವಿವಿಧ ಆಚರಣೆಗಳು ಸನಾತನ ಧರ್ಮದಲ್ಲಿವೆ. ಸ್ಕಂದಪುರಾಣದಲ್ಲಿ ಶಿವ, ಪಾರ್ವತಿಯರು ದ್ಯೂತವಾಡಲು, ಪಾರ್ವತಿಯು ಅವನ ಚಂದ್ರ, ಹಾವು, ಮೊದಲಾಗಿ ಎಲ್ಲವನ್ನೂ, ಕೊನೆಗೆ ಬಟ್ಟೆಯನ್ನೂ ಗೆದ್ದು ಕಿತ್ತುಕೊಂಡು ವಿರ್ವಸ್ತ್ರವಾಗಿ ಮಾಡುವ ಅದ್ಭುತ ಪ್ರೇಮಪ್ರಸಂಗವಿದೆ! ಹೀಗೆ ಸನಾತನ ಧರ್ಮದಲ್ಲಿ ದೇವರಲ್ಲೂ ಪ್ರೇಮ, ಕ್ರೀಡೆಗಳನ್ನು ನೋಡುವ ಅದ್ಭುತ ವಿಶೇಷವಿದೆ! ಆದರೆ ಕೌರವರು ಪಾಂಡವರನ್ನು ಮೋಸಗೊಳಿಸಲು ಈ ದ್ಯೂತವನ್ನು ಉಪಯೋಗಿಸಿದರೆಂಬುದು ದುರ್ದೈವ. ಆದರೆ ಹಾಗೆ ಮಾಡದೆ ಆನಂದಕ್ಕಾಗಿ ದ್ಯೂತವಾಡಿದರೆ ತಪ್ಪಿಲ್ಲ.
ಈ ಶೃಂಗಾರ ಪದ್ಯದಲ್ಲಿ ಪತಿ, ಪತ್ನಿಯರು ಪಣವಿಟ್ಟು ದ್ಯೂತವಾಡಿದ್ದಾರೆ. ಒಂದು ಬಾರಿ ಅಧರಾಮೃತಪಾನ ಮಾಡುವುದೇ ಪಣ. ಪತಿಯು ಆಟದಲ್ಲಿ ಗೆದ್ದಿದ್ದಾನೆ. ಹಾಗಾಗಿ ಅವನು ಪತ್ನಿಯ ಅಧರಪಾನ ಮಾಡಬೇಕಾಗಿದೆ. ಆದರೆ ಅವನು ಸುಮ್ಮನೆ ಅವಳ ಅಧರವನ್ನು ಮೆಲ್ಲನೆ ಚುಂಬಿಸುತ್ತಾನೆಯೇ ಹೊರತು ಸಂಪೂರ್ಣವಾಗಿ ಅಧರಾಮೃತಪಾನ ಮಾಡುವುದಿಲ್ಲ. ಏಕೆಂದರೆ ಆಟದ ಮುಂದಿನ ಸುತ್ತಿನಲ್ಲಿ ಸೋತರೆ, ಪುನಃ ಈ ಅವಕಾಶ ಸಿಗುವುದಿಲ್ಲ ಎಂದು ಅಧರಪಾನವನ್ನು ಉಳಿಸಿಕೊಳ್ಳುತ್ತಾನೆ. ಇದನ್ನು ಹೇಳುತ್ತಾ ಎಂಥ ಧೂರ್ತ ಅವನು ಎನ್ನುತ್ತಾನೆ ಕವಿ!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ