ಮಧುಧೌತಮಧುರಮಧುರಂ ಧೃತಧಮ್ಮಿಲ್ಲಂ ಧವೇ ಧಯತಿ ।
ಕವಲಯತಿ ಕಿಮಪಿ ಕಂಪಿತಕಾಂತಾಕರಕಂಕಣಕ್ವಣಿತಮ್ ।।
ಕನ್ನಡ ಅನುವಾದ
ಪತಿಯು ತನ್ನ ಪ್ರಿಯ ಕಾಂತೆಯ ಅಲಂಕೃತ ತುರುಬನ್ನು ಹಿಡಿದು ಜೇನಿನಿಂದ ತೊಳೆದಂತೆ ಅತಿ ಮಧುರವಾಗಿರುವ ಅವಳ ಅಧರಾಮೃತವನ್ನು ಹೀರುತ್ತಾ ಅವಳ ಕಂಪನದಿಂದುಂಟಾದ ಕರಕಂಕಣಗಳ ಕಿಣಿ ಕಿಣಿ ಶಬ್ದವನ್ನು ಹೇಗೋ ನುಂಗಿಬಿಡುತ್ತಾನೆ!'
ಕವಿಯು ಇಲ್ಲಿ ಪತಿ, ಪತ್ನಿಯರ ರತಿಕ್ರೀಡೆಯ ಅತ್ಯಂತ ಮಧುರವಾದ ಸನ್ನಿವೇಶವನ್ನು ರಸವತ್ತಾಗಿ ವರ್ಣಿಸಿದ್ದಾನೆ. ಪತಿಯು ತನ್ನ ಪ್ರಿಯ ಪತ್ನಿಯ ಅಲಂಕೃತ ತುರುಬನ್ನು ಹಿಡಿದು ಅವಳ ತುಟಿಗಳನ್ನು ಚುಂಬಿಸುತ್ತಾ ಅಧರಾಮೃತವನ್ನು ಹೀರುತ್ತಿದ್ದಾನೆ. ಆ ತುಟಿಗಳು ಜೇನಿನಿಂದ ತೊಳೆದಂತಿವೆ ಎನ್ನುತ್ತಾ ಮಧುರಮಧುರಂ ಎಂದು ಎರಡು ಬಾರಿ ಹೇಳುತ್ತಾ ಅತಿಮಧುರವಾಗಿವೆ ಎನ್ನುತ್ತಾನೆ. ಆದರೆ ಎಲ್ಲಾ ನವವಿವಾಹಿತ ಸ್ತ್ರೀಯರಿಗಿರುವಂತೆ, ಇಲ್ಲೂ ನಾಯಕಿಗೆ ಸಂಭೋಗವೆಂದರೆ ಸ್ವಲ್ಪ ಭಯವಾಗಿ ನಡುಗುತ್ತಿದ್ದಾಳೆ. ಅವಳ ಆ ಕಂಪನದಿಂದ ಕೈಬಳೆಗಳು ಕಿಣಿ ಕಿಣಿ ಶಬ್ದವನ್ನು ಮಾಡುತ್ತಿವೆ. ಆದರೆ ಪತಿಯು ಅವಳ ಅದರಾಮೃತಪಾನ ಮಾಡುತ್ತಾ ಆ ಬಳೆಗಳ ಶಬ್ದವನ್ನೂ ಹೇಗೋ ನುಂಗಿಬಿಡುತ್ತಾನೆ ಎನ್ನುತ್ತಾನೆ ಕವಿ! ಕವಲಯತಿ ಎಂದರೆ ನುಂಗಿಬಿಡುತ್ತಾನೆ ಎಂದು ಅರ್ಥ. ಅಂದರೆ ಆ ಶಬ್ದವನ್ನೇ ಅಡಗಿಸಿಬಿಡುತ್ತಾನೆ! ಅದು ಗೊತ್ತಾಗದಂತೆ ಮಾಡುತ್ತಾನೆ! ಅಂದರೆ ಅವನು ಅದೆಷ್ಟು ಪ್ರೀತಿಯಿಂದ, ರಸಿಕತೆಯಿಂದ ಅವಳ ಅಧರವನ್ನು ಚುಂಬಿಸಿ ಹೀರುತ್ತಿದ್ದಾನೆಂದರೆ ಅವಳ ಭಯ, ನಡುಕ, ಮತ್ತು ಬಳೆಗಳ ಕಿಣಿಕಿಣಿ ಶಬ್ದಗಳೆಲ್ಲವನ್ನೂ ಹೋಗಲಾಡಿಸಿ ಅವಳು ಅವನ ಪ್ರೇಮದಲ್ಲಿ ಒಂದಾಗುವಂತೆ, ಮೈಮರೆಯುವಂತೆ ಮಾಡುತ್ತಿದ್ದಾನೆ! ಇದರಲ್ಲಿ ಒಂದು ವೈಜ್ಞಾನಿಕ ಸತ್ಯವೂ ಇದೆ. ಪತಿಯು ತನ್ನ ಹೆದರಿದ ಪತ್ನಿಯನ್ನು ಪ್ರೀತಿಯಿಂದ ಮುದ್ದಿಸುತ್ತಾ ನಿಧಾನವಾಗಿ ರಸಿಕತೆಯಿಂದ ಸಂಭೋಗಿಸುತ್ತಾ ಅವಳ ಭಯ, ಕಂಪನಗಳನ್ನು ಹೋಗಲಾಡಿಸಿ ಅವಳನ್ನು ತನ್ನ ಪ್ರೇಮದಲ್ಲಿ ಒಂದಾಗಿಸಿಕೊಳ್ಳಬೇಕೇ ಹೊರತು, ಆತುರ, ಬಲಾತ್ಕಾರಗಳಿಂದ ಭಯವನ್ನು ಹೆಚ್ಚಿಸುವಂತೆ ಸಂಭೋಗಿಸಬಾರದು. ಪ್ರೀತಿಯ, ರಸಿಕತೆಯ ಮಿಲನವಾದರೆ ಅದು ಮತ್ತೆ ಮತ್ತೆ ಬೇಕೆನಿಸುತ್ತದೆ ಹಾಗೂ ಅಂಥ ಸವಿಯಾದ ಶೃಂಗಾರಾನುಭವ ಸಿಕ್ಕ ಪತ್ನಿಯು ತನ್ನ ಪತಿಯನ್ನು ಮನಸಾರೆ ಪ್ರೀತಿಸುತ್ತಾಳೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ