ಶನಿವಾರ, ಆಗಸ್ಟ್ 15, 2026

ಸುಂದರೀಶತಕ -೭೭

ಸಂಸ್ಕೃತ ಮೂಲ 

ಭ್ರೂಭಂಗಭಂಗಿಭುಗ್ನಂ ತಿರ್ಯಕ್ಚಲಲೋಚನಂ ಮುಖಂ ದಧತೀ /
ಸುರತಪ್ರಾರ್ಥನವೇಲಾಕೃತಾವಹೇಲಾ ವಧೂರ್ಜಯತಿ //

ಕನ್ನಡ ಅನುವಾದ 

    ಪ್ರಿಯ ಪತಿಯು ಸುರತಕ್ರೀಡೆಗಾಗಿ ಪ್ರಾರ್ಥಿಸುವ ಸಮಯದಲ್ಲಿ ಅವನ ನವವಧುವು ಹುಬ್ಬುಗಂಟುಹಾಕಿಕೊಂಡ ಭಂಗಿಯಲ್ಲಿ ವಕ್ರವಾಗಿಸಿ ಕಣ್ಣು ತಿರುಗಿಸಿದ ಮುಖದಿಂದ ನಿರಾಕರಣೆ ಮಾಡಿ ಜಯಿಸುತ್ತಾಳೆ!' 
    ರಾತ್ರಿಯ ನೂತನ ಪತಿ,ಪತ್ನಿಯರ ಒಂದು ಶೃಂಗಾರ ರಮ್ಯ ದೃಶ್ಯವನ್ನು ಕವಿ ಇಲ್ಲಿ ಮನೋಜ್ಞವಾಗಿ ಚಿತ್ರಿಸಿದ್ದಾನೆ. ಪತಿಯು ತನ್ನ ಪತ್ನಿಯನ್ನು ಶೃಂಗಾರ ಸುರತಕ್ರೀಡೆಗಾಗಿ ಬೇಡುತ್ತಿದ್ದಾನೆ. ಆದರೆ ಹೊಸದಾಗಿ ಮದುವೆಯಾಗಿರುವ ಅವನ ನವವಧುವಿಗೆ ಕೂಡಲೇ ಒಪ್ಪಿಗೆ ಸೂಚಿಸಲು ನಾಚಿಕೆ. ಹಾಗಾಗಿ ಸ್ವಲ್ಪ ಅಣಕು ಕೋಪದ, ನಾಚಿಕೆ ಮಿಶ್ರ ಭಾವದಿಂದ ಹುಬ್ಬು ಗಂಟು ಹಾಕಿಕೊಂಡು ಕಣ್ಣು ತಿರುಗಿಸಿ ಇಲ್ಲವೆಂದು ಸೂಚಿಸುತ್ತಿದ್ದಾಳೆ. ಅವಳ ಈ ಮುದ್ದಾದ ಭಾವ ಬಹಳ ರಮ್ಯವಾಗಿ ಕಾಣುತ್ತದೆ. ಹಾಗಾಗಿ ಅವಳು ಜಯಿಸುತ್ತಾಳೆ ಎನ್ನುತ್ತಾನೆ ಕವಿ. ಸ್ತ್ರೀಯರ ಕೆಲವು ಮುಖಭಾವಗಳನ್ನು ಎಷ್ಟು ವರ್ಣಿಸಿದರೂ ಸಾಲದು. ಅವುಗಳನ್ನು ನೋಡಿಯೇ ಅರಿಯಬೇಕು ಹಾಗೂ ಸವಿಯಬೇಕು. ಹೀಗೆ ಸುರತಕ್ರೀಡೆಗಾಗಿ ಪ್ರಾರ್ಥಿಸಿದಾಗ ನೂತನ ಪತ್ನಿ ಇಲ್ಲ ಎಂದು ಮುದ್ದಾಗಿ ಹೇಳಿದರೂ ಅದು ಚೆನ್ನ! ಹಾಗೆ ನಿರಾಕರಿಸಿಕೊಂಡ ಪತಿಗಳೂ ಧನ್ಯ! 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ