ಶನಿವಾರ, ಆಗಸ್ಟ್ 29, 2026

ಅಜಗರಪ್ರಶ್ನೆ - ಮಹಾಭಾರತದ ಮರೆತುಹೋದ ಪ್ರಸಂಗ

ಯಕ್ಷಪ್ರಶ್ನೆ ಎಂಬ ಮಹಾಭಾರತದ ಪ್ರಸಂಗ ಪ್ರಾಯಶಃ ಎಲ್ಲರಿಗೂ ತಿಳಿದಿದೆ. ಯಾವುದಾದರೂ ಉತ್ತರಿಸಲು ಕಷ್ಟವಾದ ಪ್ರಶ್ನೆ ಹುಟ್ಟಿಕೊಂಡಾಗಲೂ ಅದೊಂದು ಯಕ್ಷಪ್ರಶ್ನೆ ಎಂದು ಈ ನುಡಿಗಟ್ಟನ್ನು ಬಳಸುತ್ತಾರೆ. ಬ್ರಾಹ್ಮಣನೊಬ್ಬನ ಅರಣಿಗಳನ್ನು ಜಿಂಕೆಯೊಂದು ಕೊಂಡೊಯ್ಯಲು ಅವನು ಅವನ್ನು ತರಲು ವನವಾಸಿಗಳಾದ ಪಾಂಡವರನ್ನು ಬೇಡಲು ಅವರು ಆ ಜಿಂಕೆಯನ್ನು ಹುಡುಕಿಕೊಂಡು ಹೋಗುತ್ತಾರೆ. ಆಗ ಅವರಿಗೆ ದಣಿವಾಗಲು, ಸಹದೇವನಿಗೆ ಸನಿಹದ ಕೆರೆಯಿಂದ ನೀರು ತರಲು ಕಳಿಸಲು, ಅದರ ಒಡೆಯನಾದ ಯಕ್ಷನೊಬ್ಬನು ತನ್ನ ಪ್ರಶ್ನೆಗಳನ್ನು ಉತ್ತರಿಸಿ ಅನಂತರ ನೀರು ಕುಡಿಯಬಹುದೆನ್ನುತ್ತಾನೆ. ಆದರೆ ಸಹದೇವನು ಅವನ ಮಾತನ್ನು ಕೇಳದೆ ನೀರು ಕುಡಿದು ಸತ್ತು ಬೀಳುತ್ತಾನೆ. ಅನಂತರ ನೀರು ತರಲು ಹೋದ ಇತರ ಮೂವರು ಪಾಂಡವರಿಗೂ ಇದೇ ಗತಿಯುಂಟಾಗಲು, ಕೊನೆಗೆ ಯುಧಿಷ್ಠಿರನೇ ಹೋಗಿ, ಅವನಿಗೆದುರಾದ ಯಕ್ಷನ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರಗಳನ್ನು ನೀಡುತ್ತಾನೆ. ಆಗ ಯಕ್ಷನು ಎಲ್ಲರನ್ನೂ ಬದುಕಿಸಿ ತಾನು ಯುಧಿಷ್ಠಿರನ ತಂದೆ ಯಮಧರ್ಮ ರಾಜನೆಂದು ಹೇಳಿ ತನ್ನ ನಿಜರೂಪ ತೋರಿಸಿ ಅವನನ್ನು ಪರೀಕ್ಷಿಸಲು ತಾನೇ ಜಿಂಕೆಯ ರೂಪದಲ್ಲಿ ಬ್ರಾಹ್ಮಣನ ಅರಣಿಗಳನ್ನು ಕೊಂಡೊಯ್ದು ಹೀಗೆ ಮಾಡಿದೆ ಎಂದು ಹೇಳುತ್ತಾನೆ. ಈ ಯಕ್ಷಪ್ರಶ್ನೆಯಲ್ಲಿ ಯಕ್ಷನು ಸ್ವಾರಸ್ಯಕರವಾದ ಹಾಗೂ ಜೀವನಕ್ಕೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳುತ್ತಾನೆ ಹಾಗೂ ಯುಧಿಷ್ಠಿರನು ಅವುಗಳಿಗೆ ಸೂಕ್ತ ಉತ್ತರಗಳನ್ನು ನೀಡುತ್ತಾನೆ.
    ಯಕ್ಷಪ್ರಶ್ನೆಯಂತೆಯೇ ಮಹಾಭಾರತದಲ್ಲಿ ಇನ್ನೊಂದು ಪ್ರಶ್ನೋತ್ತರದ ಸ್ವಾರಸ್ಯಕರ ಅಧ್ಯಾಯ ಇದೆ. ಅದೇ ಅಜಗರಪ್ರಶ್ನೆ. ಆದರೆ ಇದೊಂದು ಮರೆತುಹೋದ ಅಥವಾ ಅಷ್ಟು ಜನಪ್ರಿಯವಾಗಿಲ್ಲದ ಪ್ರಸಂಗವೆನ್ನಬಹುದು. ಇದು ವನಪರ್ವದ ಒಂದು ಉಪಪರ್ವವಾದ ಅಜಗರಪರ್ವದಲ್ಲಿದೆ. ಇಲ್ಲಿಯೂ ಯುಧಿಷ್ಠಿರನು ಒಂದು ಅಜಗರ ಅಥವಾ ಹೆಬ್ಬಾವು ಕೇಳುವ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರಗಳನ್ನು ನೀಡುತ್ತಾನೆ.‌ ಮಹಾಭಾರತದ ವಿವಿಧ ಪಾತ್ರಗಳಿಗೆ ವಿವಿಧ ವಿಶೇಷ ಗುಣಗಳಿರುವಂತೆ ಯುಧಿಷ್ಠಿರನಿಗಿರುವ ವಿಶೇಷ ಗುಣವೆಂದರೆ ಜ್ಞಾನ. ಈಗಿನ ದಿನಗಳಲ್ಲಿ ಈ ಅಜಗರಪ್ರಶ್ನೆ ಬಹಳ ಪ್ರಸ್ತುತವಾಗಿದೆ. ಏಕೆಂದರೆ ಇದರಲ್ಲಿ ಇಂದು ಬಹಳ ಚರ್ಚೆಯಾಗುತ್ತಿರುವ ಜಾತಿ ವ್ಯವಸ್ಥೆಯ ಬಗ್ಗೆ ನಿಖರವಾದ ವಿಚಾರಗಳನ್ನು ಹೇಳಲಾಗಿದೆ. ಭಾರತೀಯ ಗ್ರಂಥಗಳಲ್ಲಿ ನಿಜವಾಗಿಯೂ ಶೋಷಣಾತ್ಮಕ ಜಾತಿ ವ್ಯವಸ್ಥೆಯ‌ ಬಗ್ಗೆ ಹೇಳಲಾಗಿದೆಯೇ? ಇದರ ಬಗ್ಗೆ ಪ್ರಾಚೀನ ಭಾರತೀಯರ‌ ನಿಲುವು ಏನಿತ್ತು ಎಂಬುದರ ಬಗೆಗಿನ ಒಂದು ಸಾರಾಂಶ ಈ ಅಜಗರಪ್ರಶ್ನೆಯಲ್ಲಿದೆ. ಈಗ ಇದರ ಹಿನ್ನೆಲೆಯ ಕಥೆಯನ್ನು ನೋಡೋಣ.
    ಪಾಂಡವರು ವನವಾಸಿಗಳಾಗಿದ್ದಾಗ ತೀರ್ಥಯಾತ್ರೆ ಮಾಡುತ್ತಾ ಗಂದಮಾಧನ ಪರ್ವತಕ್ಕೆ ಬಂದು ಅಲ್ಲಿಂದ ವಿಶಾಖಯೂಪವೆಂಬ ಅರಣ್ಯಕ್ಕೆ ಬಂದರು. ಅಲ್ಲಿ ಒಮ್ಮೆ ಭೀಮನು ಬೇಟೆಯಾಡಲು ಹೋದನು. ಅವನು ಕಾಡಿನ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತಾ ಹರ್ಷಗೊಳ್ಳುತ್ತಾ ಅಲ್ಲಿಂದಿಲ್ಲಿಗೆ ಹಾರಿ, ನೆಗೆದು, ಭೂಮಿಯನ್ನೇ ಕಂಪನಗೊಳಿಸುತ್ತಾ , ಸಿಂಹನಾದ ಮಾಡುತ್ತಾ, ಮೃಗಪಕ್ಷಿಗಳನ್ನು ಭಯಪಡಿಸುತ್ತಾ, ಅನೇಕ ಪ್ರಾಣಿಗಳನ್ನು ಬೇಟೆಯಾಡುತ್ತಾ ಮುಂದೆ ಹೋಗುತ್ತಿದ್ದನು! ಆಗ ಅವನು ಒಂದು ಗುಹೆಯಲ್ಲಿ ಒಂದು ಭಯಂಕರ ಹೆಬ್ಬಾವನ್ನು ಕಂಡನು! ಇಡೀ ಗುಹೆಯನ್ನೇ ಆವರಿಸಿಕೊಂಡು ಮಲಗಿದ್ದ ಆ ದೊಡ್ಡ ಹೆಬ್ಬಾವು ಭೀಮನನ್ನು ನೋಡಿದ ಕೂಡಲೇ ಕೋಪಗೊಂಡು ಬುಸುಗುಟ್ಟುತ್ತಾ ಅವನನ್ನು ಹಿಡಿಯಿತು! ಹಸಿವಿನಿಂದ ಬಳಲಿದ್ದ ಅದು ಅವನನ್ನು ಸುತ್ತಿಕೊಂಡು ಹಗ್ಗದಿಂದ ಬಿಗಿಯುವಂತೆ ಬಿಗಿಯಿತು! ಮಹಾಪರಾಕ್ರಮಿಯಾಗಿದ್ದು, ಹತ್ತುಸಾವಿರ ಆನೆಗಳ ಬಲವನ್ನು ಹೊಂದಿದ್ದ ಭೀಮನಿಗೆ ಆ ಘಟಸರ್ಪದಿಂದ ಬಿಡಿಸಿಕೊಳ್ಳಲಾಗಲಿಲ್ಲ! ಕಣ್ಣು ಬಾಯಿ ಬಿಡುತ್ತಾ ತನ್ನ ಸಂಪೂರ್ಣ ಶಕ್ತಿಯನ್ನು ಕಳೆದುಕೊಂಡು ಆಶ್ಚರ್ಯಗೊಂಡ ಭೀಮನು ಇದು ಯಾವುದೋ ಅಸಾಧಾರಣ ಸರ್ಪವಿರಬೇಕೆಂದು ನಿರ್ಧರಿಸಿ ಅದಕ್ಕೆ ತನ್ನ ಪರಿಚಯವನ್ನು ಹೇಳುತ್ತಾ, " ಎಲೈ ಸರ್ಪರಾಜನೇ! ಯಾರು ನೀನು? ನನ್ನನ್ನೇಕೆ ಹೀಗೆ ಹಿಡಿದಿರುವೆ? ಹತ್ತುಸಾವಿರ ಆನೆಗಳ ಬಲವಿರುವ ಮಹಾಪರಾಕ್ರಮಿಯಾದ ನನ್ನ ಮುಂದೆ ಇಂಥ ಪ್ರಾಣಿಗಳಿರಲಿ, ಯಕ್ಷ, ರಾಕ್ಷಸ,ಪಿಶಾಚಿ,ನಾಗ,ಕಿನ್ನರರೂ ನಿಲ್ಲಲಾರರು! ನನ್ನನ್ನು ನೀನು ಪರಾಜಿತಗೊಳಿಸಿರುವೆಯೆಂದರೆ ನಿನ್ನಲ್ಲಿ ಯಾವುದೋ ಇಂದ್ರಜಾಲ, ಮಹೇಂದ್ರಜಾಲ ಶಕ್ತಿಗಳಿರಬೇಕು ಇಲ್ಲವೇ ಯಾವುದೋ ವರಬಲವಿರಬೇಕು! ಅಥವಾ ನಿನ್ನ ಸ್ವಾಭಾವಿಕ ಬಲದಿಂದಲೇ ನನ್ನನ್ನು ಪರಾಜಿತಗೊಳಿಸಿರುವೆಯೆಂದರೆ ಮನುಷ್ಯರ ಬಲಕ್ಕೆ ಧಿಕ್ಕಾರವಿರಲಿ!"
   ಆಗ ಆ ಹೆಬ್ಬಾವು ತನ್ನ ಹಿಡಿತವನ್ನು ಸ್ವಲ್ಪ ಸಡಿಲಗೊಳಿಸಿ ಹೇಳಿತು," ಎಲೈ ಭೀಮನೇ! ನಾನು ನಿನ್ನ ಪೂರ್ವಜ! ಆಯುವೆಂಬ ರಾಜನ ಮಗನಾದ ನಹುಷ! ಬ್ರಾಹ್ಮಣರನ್ನು, ಮುಖ್ಯವಾಗಿ ಅಗಸ್ತ್ಯ ಮಹರ್ಷಿಗಳನ್ನು ಅವಮಾನಿಸಿ ಅವರಿಂದ ಶಪಿತನಾಗಿ ಈ ಅವಸ್ಥೆ ಪಡೆದಿರುವೆ! ನೀನು ನಿಜವಾಗಿಯೂ ಅವಧ್ಯನು! ಆದರೆ ಹಸಿವಿನಿಂದ ಬಳಲಿರುವ ನಾನು ನಿನ್ನನ್ನೂ ಭಕ್ಷಿಸಬೇಕಾಗಿದೆ! ದಿನದ ಆರನೇ ಭಾಗದಲ್ಲಿ ನನಗೆ ಸಿಕ್ಕಿಬಿದ್ದ ಯಾರೇ ಆಗಲಿ, ಎಷ್ಟು ಪ್ರಯತ್ನಿಸಿದರೂ ಬಿಡಿಸಿಕೊಳ್ಳಲಾರರು! ಇದು ನನಗಿರುವ ವರಬಲ! ನಾನು ಶಾಪಗ್ರಸ್ತನಾದಾಗ ಮುನಿಗಳನ್ನು ಶಾಪಮುಕ್ತನನ್ನಾಗಿಸಲು ಬೇಡಿಕೊಂಡಾಗ ಈ ವರವನ್ನು ನೀಡಿ, ಸ್ವಲ್ಪ ಕಾಲದಲ್ಲಿಯೇ ಒಬ್ಬ ಮಹಾನ್ ವಿವೇಕಿಯು ನಾನು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿದಾಗ ಶಾಪವಿಮುಕ್ತನಾಗುವೆ ಎಂದು ಹರಸಿದರು.‌ ಹಾಗಾಗಿ ನಾನು ಅಭಕ್ಷ್ಯಗಳನ್ನು ತಿಂದುಕೊಂಡು ಈ ಕಾಡಿನಲ್ಲಿದ್ದೇನೆ!" 
   ಅದಕ್ಕೆ ಭೀಮನು," ಸರಿ! ಇದಕ್ಕೆ ನಾನು ದುಃಖಿಸುವುದಿಲ್ಲ! ನಮ್ಮ ಸುಖದುಃಖಗಳು ನಮ್ಮ ಕರ್ಮಫಲಗಳನ್ನನುಸರಿಸುತ್ತವೆ! ಆದರೆ ನನಗೆ ನನ್ನ ಸಹೋದರರ ಮತ್ತು ತಾಯಿಯದೇ ಚಿಂತೆ! ನಾನಿಲ್ಲದೆ ಅವರಿಗೆ ರಾಜ್ಯವನ್ನು ಪಡೆಯಲು ಪ್ರಚೋದನೆ ಇರುವುದಿಲ್ಲ!" ಎಂದನು.
    ನಹುಷನು ಭೂಮಿಯಲ್ಲಿ ರಾಜ್ಯಭಾರ ಮಾಡುತ್ತಿದ್ದಾಗ, ದೇವೇಂದ್ರನು ತ್ವಷ್ಟ್ರೃ ಪ್ರಜಾಪತಿಗೆ ಯುಜ್ಞದಿಂದ ಹುಟ್ಟಿದ್ದ ವೃತ್ರಾಸುರನೆಂಬ ರಾಕ್ಷಸನನ್ನು ಕೊಂದು ಬ್ರಹ್ಮಹತ್ಯಾದೋಷಕ್ಕೆ ಒಳಗಾಗಿ ಓಡಿಹೋಗಿದ್ದನು. ಆಗ ದೇವತೆಗಳು ಸ್ವರ್ಗವನ್ನು ಆಳಲು ನಹುಷನು ಯೋಗ್ಯನೆಂದು ಭಾವಿಸಿ ಅವನನ್ನು ಕೇಳಿಕೊಂಡಿದ್ದರು. ಅದಕ್ಕೆ ಒಪ್ಪಿ ನಹುಷನು ಸ್ವರ್ಗಕ್ಕೆ ರಾಜನಾಗಿ ಕ್ರಮೇಣ ಅಹಂಕಾರದಿಂದ ಕೂಡಿ ಇಂದ್ರನ ಹೆಂಡತಿ ಶಚಿಯನ್ನು ಬಯಸಿದನು. ಅವನಿಂದ ತಪ್ಪಿಸಿಕೊಳ್ಳಲು ಅವಳು, ಬೃಹಸ್ಪತಿಗಳೊಂದಿಗೆ ಸಮಾಲೋಚಿಸಿ, ಸಪ್ತರ್ಷಿಗಳು ಹೊತ್ತ ಪಲ್ಲಕ್ಕಿಯಲ್ಲಿ ಬರಬೇಕೆಂದು ಅವನಿಗೆ ಕರಾರು ಹಾಕಿದಳು. ಅಹಂಕಾರದಿಂದ ಮತ್ತನಾಗಿದ್ದ ನಹುಷನು ಅದಕ್ಕೂ ಒಪ್ಪಿ ಸಪ್ತರ್ಷಿಗಳಿಗೆ ತನ್ನ ಪಲ್ಲಕ್ಕಿಯನ್ನು ಹೊತ್ತು ನಡೆಯಲು ಆಜ್ಞಾಪಿಸಿದನು. ಅವರು ಹಾಗೆಯೇ ಮಾಡಲು, ಕುಳ್ಳಗಿದ್ದ ಅಗಸ್ತ್ಯರು ವೇಗದಿಂದ ಮುಂದೆ ಹೋಗಲಾಗಲಿಲ್ಲ. ಆಗ ನಹುಷನು ಅವರನ್ನು ವೇಗವಾಗಿ ಹೋಗುವಂತೆ ಹೇಳುತ್ತಾ ಕಾಲಿನಿಂದ ಒದೆಯಲು, ಕುಪಿತಗೊಂಡ ಅವರು ಅವನಿಗೆ ಹೆಬ್ಬಾವಾಗಿ ಭೂಮಿಯ ಮೇಲೆ ಬೀಳುವಂತೆ ಶಪಿಸಿದರು.‌ ಇದು ನಹುಷನಿಗೆ ಶಾಪ ಬಂದ ಕಥೆ.
   ಇತ್ತ ಆಶ್ರಮದಲ್ಲಿದ್ದ ಯುಧಿಷ್ಠಿರನಿಗೆ ಕಾರಣವಿಲ್ಲದೆ ಏನೋ ಕಳವಳವಾಗತೊಡಗಿತು. ಗುಳ್ಳೆನರಿಗಳು ಊಳಿಡುವುದು, ಒಂದೇ ರೆಕ್ಕೆ, ಒಂದೇ ಕಣ್ಣು ಮತ್ತು ಒಂದೇ ಕಾಲಿನಿಂದ ಕೂಡಿದ್ದ ವರ್ತಿಕವೆಂಬ ಭಯಂಕರ ಪಕ್ಷಿಗಳು ಸೂರ್ಯನಿಗೆದುರಾಗಿ ರಕ್ತ ಕಾರುವುದು, ಆಶ್ರಮದ ಹಿಂದೆ ಕಾಗೆಗಳು ಕೂಗುವುದು, ಚಂಡಮಾರುತವು ಬೀಸಿ ಮರಗಿಡಗಳನ್ನು ಬುಡಮೇಲು ಮಾಡುವುದು, ಮೊದಲಾದ ಉತ್ಪಾತಗಳಾಗತೊಡಗಿದವು! ಅವನ ಎಡಗಣ್ಣು, ಎಡ ತೋಳು, ಎಡಭಾಗದ ಎದೆ ಅದುರಿದವು! ತನ್ನ ತಮ್ಮನಿಗೇನೋ ಆಪತ್ತುಂಟಾಗಿರಬೇಕೆಂದು ಭಾವಿಸಿ ಅವನು ದ್ರೌಪದಿಯನ್ನು ಭೀಮನೆಲ್ಲಿ ಎಂದು ಕೇಳಲು, ಅವಳು, ಅವನು ಬಹಳ ಹೊತ್ತಿನ ಮೊದಲೇ ಆಶ್ರಮದಿಂದ ಹೊರಗೆ ಹೋದನೆಂದು ಹೇಳಿದಳು. ಆಗ ಅವನು ಅರ್ಜುನನ್ನು ದ್ರೌಪದಿಯನ್ನು ರಕ್ಷಿಸಿಕೊಂಡಿರಲು ಹಾಗೂ ನಕುಲ,ಸಹದೇವರಿಗೆ ಬ್ರಾಹ್ಮಣರನ್ನು ರಕ್ಷಿಸಿಕೊಂಡಿರಲು ಹೇಳಿ ತಮ್ಮ ಪುರೋಹಿತರಾದ ಧೌಮ್ಯರೊಂದಿಗೆ ಭೀಮನನ್ನು ಹುಡುಕಲು ಹೋದನು. ಆದರೆ ಆ ಘೋರ ಅರಣ್ಯದಲ್ಲಿ ಭೀಮನನ್ನು ಹುಡುಕುವುದಾದರೂ ಹೇಗೆ? ಯುಧಿಷ್ಠಿರನು ಭೀಮನ ಬೃಹದಾಕಾರದ ಹೆಜ್ಜೆಗಳನ್ನೇ ಅನುಸರಿಸಿಕೊಂಡು ಹೋದನು. ಹಾಗೆ ಪೂರ್ವದಿಕ್ಕಿನಲ್ಲಿ ಹೋಗುತ್ತಾ ಅನೇಕ ಆನೆ, ಜಿಂಕೆ, ಸಿಂಹಾದಿ ಪ್ರಾಣಿಗಳು ಸತ್ತು ಬಿದ್ದಿರುವುದನ್ನೂ ಮರಗಳು ಕೀಳಲ್ಪಟ್ಟಿರುನುದನ್ನೂ ಅಲ್ಲೆಲ್ಲಾ ಭೀಮನ ಹೆಜ್ಜೆ ಗುರುತುಗಳು ಹೆಚ್ಚಾಗಿದ್ದುದನ್ನೂ ನೋಡಿ ಅವೆಲ್ಲಾ ಭೀಮನ ಸಾಹಸಕಾರ್ಯಗಳೆಂದು ತಿಳಿದು ಮುಂದೆ ಹೋದನು. ಆಗ ಹೆಚ್ಚು ಸಂಚಾರವಿಲ್ಲದ ಬೆಂಗಾಡಿನಂಥ ಪ್ರದೇಶಕ್ಕೆ ಬಂದು, ಅಲ್ಲಿ ಭೀಮನು ಹೆಬ್ಬಾವಿಗೆ ಸಿಕ್ಕಿಬಿದ್ದಿರುವುದನ್ನು ಕಂಡು ಗಾಬರಿಗೊಂಡನು! 
   ಆಶ್ಚರ್ಯ, ದುಃಖಗಳಿಗೊಳಗಾದ ಯುಧಿಷ್ಠಿರನು ಭೀಮನನ್ನು ಹೇಗೆ ಇಂಥ ದುರವಸ್ಥೆಗೆ ಸಿಕ್ಕಿಬಿದ್ದನೆಂದು ಕೇಳಿದನು. ಅದಕ್ಕೆ ಭೀಮನು ಆ ಘಟಸರ್ಪವು ಹಿಂದೆ ರಾಜನಾಗಿದ್ದ ನಹುಷ ಚಕ್ರವರ್ತಿಯೆಂದೂ ತನ್ನನ್ನು ಭಕ್ಷಿಸಲು ಹಿಡಿದಿದೆಯೆಂದೂ ಹೇಳಿದನು. ಆಗ ಯುಧಿಷ್ಠಿರನು ಆ ಅಜಗರಕ್ಕೆ," ಆಯುಷ್ಮಂತನೇ! ಮಹಾಪರಾಕ್ರಮಿಯಾದ ಈ ನನ್ನ ತಮ್ಮನನ್ನು ಬಿಟ್ಟುಬಿಡು! ನಿನಗೆ ಬೇರೆ ಆಹಾರದ ವ್ಯವಸ್ಥೆ ಮಾಡುತ್ತೇನೆ!" ಎಂದು ಬೇಡಿಕೊಂಡನು. ಅದಕ್ಕೆ ಅಜಗರವು," ಇವನು ತಾನಾಗಿಯೇ ಬಂದು ನನ್ನ ಕೈಗೆ ಸಿಕ್ಕಿಬಿದ್ದಿರುವನು! ದಿನದ ಆರನೇ ಭಾಗದಲ್ಲಿ ಯಾರು ಸಿಕ್ಕಿಬಿದ್ದರೂ ನನಗೆ ಆಹಾರವಾಗುತ್ತಾರೆ ಹಾಗೂ ಅವರನ್ನು ಬಿಡುವ ಪ್ರಶ್ನೆಯೇ ಇಲ್ಲ! ಹೆಚ್ಚು ಹೊತ್ತು ಇಲ್ಲಿದ್ದರೆ ನೀನೂ ನನಗೆ ಆಹಾರವಾಗಬಹುದು! ಈ ನಿಯಮವನ್ನು ನನಗೆ ಶಾಪ ಕೊಟ್ಟ ಅಗಸ್ತ್ಯ ಮಹರ್ಷಿಗಳೇ ಮಾಡಿದ್ದಾರೆ! ಆದರೆ ನನ್ನ ಪ್ರಶ್ನೆಗಳಿಗೆ ಸಮಂಜಸವಾಗಿ ಉತ್ತರಿಸಿದರೆ ನಿನ್ನ ತಮ್ಮನನ್ನು ಬಿಡುತ್ತೇನೆ!" ಎಂದು ತನ್ನ ವಿಷಯವನ್ನು ಹೇಳಿತು. 
    ಯುಧಿಷ್ಠಿರನು ಒಪ್ಪಲು, ಅಜಗರವು ಪ್ರಶ್ನೆ ಕೇಳಿತು," ಯುಧಿಷ್ಠಿರ! ಬ್ರಾಹ್ಮಣನು ಯಾರು? ಹುಟ್ಟಿದ ಮನುಷ್ಯನು ಏನನ್ನು ತಿಳಿದುಕೊಳ್ಳಬೇಕು?"
   ಅದಕ್ಕೆ ಯುಧಿಷ್ಠಿರನು ಹೇಳಿದನು," ಹೇ ನಾಗೇಂದ್ರ! ಸತ್ಯ, ದಾನ, ಕ್ಷಮೆ, ಶೀಲ, ಉದಾರತೆ, ತಪಸ್ಸು, ದಯೆ, ಈ ಗುಣಗಳು ಯಾರಲ್ಲಿ ಕಂಡುಬರುತ್ತವೆಯೋ ಅವನೇ ಬ್ರಾಹ್ಮಣನೆಂದು ಹೇಳಲಾಗುತ್ತದೆ! ಸುಖದುಃಖಗಳೆರಡೂ ಇಲ್ಲದ ಹಾಗೂ ಯಾವುದರಲ್ಲಿ ಲೀನವಾದರೆ ದುಃಖವಿರುವುದಿಲ್ಲವೋ ಆ ಪರಬ್ರಹ್ಮವನ್ನು ಮನುಷ್ಯನು ತಿಳಿಯಬೇಕು! ನಿನ್ನ ಅಭಿಪ್ರಾಯವೇನು?" 
  ಸರ್ಪವು ಹೇಳಿತು," ಯುಧಿಷ್ಠಿರ! ಚಾತುರ್ವರ್ಣಗಳ ವ್ಯವಸ್ಥೆಯನ್ನು ವೇದಗಳು ಮಾಡಿವೆ! ಹೀಗಿರುವಾಗ, ನೀನು ಹೇಳಿದ ಸತ್ಯ, ದಾನ, ಅಕ್ರೋಧ, ಉದಾರತೆ, ಅಹಿಂಸೆ, ದಯೆ, ಮೊದಲಾದ ಗುಣಗಳು ಶೂದ್ರನೊಬ್ಬನಲ್ಲಿದ್ದರೆ ಅವನು ಬ್ರಾಹ್ಮಣನಾಗುವನೇ? ಇನ್ನು ಸುಖದುಃಖಗಳೆರಡೂ ಇಲ್ಲದ ಪರಬ್ರಹ್ಮವನ್ನು ತಿಳಿಯಬೇಕೆಂದು ನೀನು ಹೇಳಿದೆ. ಆದರೆ ಸುಖದುಃಖಗಳೆರಡೂ ಇಲ್ಲದ ಅಂಥ ವಸ್ತುವಿದೆಯೆಂದು ನನಗೆ ತಿಳಿಯದಾಗಿದೆ!" 
  ಅದಕ್ಕೆ ಯುಧಿಷ್ಠಿರನು ಹೇಳಿದ," ಶೂದ್ರನಲ್ಲಿ ಅಂಥ ಗುಣಗಳಿದ್ದರೆ ಹಾಗೂ ಬ್ರಾಹ್ಮಣನಲ್ಲಿ ಇಲ್ಲದಿದ್ದರೆ ಅಂಥ ಶೂದ್ರನು ಶೂದ್ರನೂ ಅಲ್ಲ, ಅಂಥ ಬ್ರಾಹ್ಮಣನು ಬ್ರಾಹ್ಮಣನೂ ಅಲ್ಲ! ಆದ್ದರಿಂದ ಹೇ ಸರ್ಪರಾಜ! ಯಾರಲ್ಲಿ ಈ ಗುಣಗಳು ಇರುತ್ತವೆಯೋ ಅವನೇ ಬ್ರಾಹ್ಮಣನೆನಿಸಿಕೊಳ್ಳುತ್ತಾನೆ! ಯಾರಲ್ಲಿ ಇರುವುದಿಲ್ಲವೋ ಅವನು ಶೂದ್ರನೆನಿಸಿಕೊಳ್ಳುತ್ತಾನೆ! ಇನ್ನು ಸುಖದುಃಖಗಳೆರಡೂ ಇಲ್ಲದ ವಸ್ತುವೇ ಇಲ್ಲ ಎನ್ನುವುದು ನಿನ್ನ ಅಭಿಪ್ರಾಯವಷ್ಟೆ! ಶೀತ, ಉಷ್ಣಗಳೆರಡೂ ಇಲ್ಲದ ಒಂದು ಸಮಸ್ಥಿತಿ ಹೇಗೆ ಇರುವುದೋ, ಹಾಗೆಯೇ ಸುಖದುಃಖಗಳೆರಡೂ ಇಲ್ಲದ ಒಂದು ಸ್ಥಾನವಿದೆ ಎಂದು ನನ್ನ ಅಭಿಪ್ರಾಯ. ನೀನೇನು ಹೇಳುವೆ?" 
   ಆಗ ಅಜಗರವು," ಎಲೈ ರಾಜ! ನೀನು ಹೇಳುವಂತೆ ಸದಾಚಾರಸಂಪನ್ನನಾದವನೇ ಬ್ರಾಹ್ಮಣನೆನ್ನುವುದಾದರೆ, ವರ್ಣಾಶ್ರಮ ವ್ಯವಸ್ಥೆಯೇ ವ್ಯರ್ಥವಾಗುವುದಲ್ಲವೇ? ಏಕೆಂದರೆ ಒಬ್ಬನು ತನ್ನ ವೃತ್ತಿಯಲ್ಲಿ ತೊಡಗುವವರೆಗೂ ಅವನು ಯಾವ ಜಾತಿಯೆಂದು ಹೇಗೆ ಹೇಳುವುದು?" 
    ಅದಕ್ಕೆ ಯುಧಿಷ್ಠಿರನು ಹೇಳಿದನು," ಹೇ ಮಹಾಸರ್ಪ! ನನ್ನ ಪ್ರಕಾರ, ಮನುಷ್ಯರಲ್ಲಿ ಜಾತಿಯನ್ನು ನಿರ್ಧರಿಸುವುದು ಸಾಧ್ಯವಿಲ್ಲ! ಏಕೆಂದರೆ ಎಲ್ಲಾ ವರ್ಣದವರೂ ಎಲ್ಲಾ ವರ್ಣದವರನ್ನೂ ವಿವಾಹವಾಗಿ ವರ್ಣಸಂಕರವಾಗುತ್ತಿರುತ್ತದೆ. ಹೀಗೆ ಎಲ್ಲರೂ ಎಲ್ಲರಲ್ಲೂ ಮಕ್ಕಳನ್ನು ಪಡೆಯುತ್ತಾರೆ. ಆದ್ದರಿಂದ ಮನುಷ್ಯರಲ್ಲಿ ಸಮವಾಗಿರುವವೆಂದರೆ ಭಾಷೆ, ಮೈಥುನ, ಜನನ ಮತ್ತು ಮರಣ. ಇದಕ್ಕೆ ಆರ್ಷಪ್ರಮಾಣವೆಂದರೆ, ಯಜ್ಞ ಮಾಡುವಾಗ,' ಯೇ ಯಜಾಮಹೇ ( ಯಾವುದೇ ಜಾತಿಗೆ ಸೇರಿರುವ ನಾವು ಯಜ್ಞ ಮಾಡುತ್ತಿದ್ದೇವೆ)' ಎಂದು ಹೇಳುತ್ತಾರೆ. ಆದ್ದರಿಂದ ಮನುಷ್ಯನ ಜಾತಿಯನ್ನು ನಿರ್ಧರಿಸಲು ಶೀಲವೇ ಮುಖ್ಯ ಎಂದು ತತ್ವಜ್ಞಾನಿಗಳು ಹೇಳುತ್ತಾರೆ. ರೂಢಿಯಲ್ಲಿ ಬ್ರಾಹ್ಮಣ ದಂಪತಿಗಳಿಗೆ ಹುಟ್ಟಿದ ಮಗುವಿಗೆ ಬ್ರಾಹ್ಮಣ ಶಿಶು ಎಂದರೂ ಅವನಿಗೆ ಉಪನಯನವಾಗಿ ಅವನು ವೇದಾಧ್ಯಯನ ಮಾಡುವವರೆಗೂ ಅವನು ಶೂದ್ರನಿಗೆ ಸಮನಾಗಿಯೇ ಇರುತ್ತಾನೆ. ಇದನ್ನು ಸ್ವಾಯಂಭುವ ಮನುವೇ ಹೇಳಿದ್ದಾನೆ. ಒಂದು ವೇಳೆ, ಸಂಸ್ಕಾರವಾದ ಬಳಿಕವೂ ಸದ್ವೃತ್ತ ಬರಲಿಲ್ಲವೆಂದರೆ ಅಲ್ಲಿ ಬಲವಾದ ವರ್ಣಸಾಂಕರ್ಯವಿದೆಯೆಂದು ನಿಶ್ಚಯಿಸಬೇಕು! ಆದ್ದರಿಂದ ಸಂಸ್ಕಾರವೆಂದರೆ ಸದ್ವೃತ್ತವೆಂದೇ ನನ್ನ ಅಭಿಪ್ರಾಯ! ಹಾಗಾಗಿ ನಾನು ಸದ್ವೃತ್ತದ ಗುಣಗಳುಳ್ಳವನೇ ಬ್ರಾಹ್ಮಣನೆಂದು ಹಿಂದೆ ಹೇಳಿದೆನು." 
   ಆಗ ಅಜಗರ ಹೇಳಿತು," ಎಲೈ ಯುಧಿಷ್ಠಿರ! ತಿಳಿಯಬೇಕಾದ ಎಲ್ಲವನ್ನೂ ತಿಳಿದಿರುವ ನಿನ್ನ ಮಾತನ್ನು ಕೇಳಿದ ಬಳಿಕ ನಾನು ಹೇಗೆ ತಾನೇ ನಿನ್ನ ತಮ್ಮನನ್ನು ಭಕ್ಷಿಸಲಿ?" 
    ಇಲ್ಲಿ ಅಜಗರ, ಯುಧಿಷ್ಠಿರರ ಪ್ರಶ್ನೋತ್ತರಗಳ ಮೂಲಕ ವರ್ಣಗಳ ವಿಷಯದಲ್ಲಿ ಸನಾತನ ಧರ್ಮದ ಆಶಯ ವ್ಯಕ್ತವಾಗಿದೆ. ಹಿಂದೆ, ಒಂದು ಅನುಕೂಲಕ್ಕಾಗಿ, ಸುಲಭವಾಗಿ ಕೆಲಸಗಳು ನಡೆಯಲು, ಕೆಲವು ಗುಣವಿಶೇಷಗಳನ್ನು ಹೊಂದಿದವರು ಕೆಲವು ವರ್ಣದವರೆಂದು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಮತ್ತು ಶೂದ್ರ ಎಂದು ಗುರುತಿಸಲಾಯಿತು. ಅಧ್ಯಯನ,ಅಧ್ಯಾಪನಗಳನ್ನು ಗುಣ, ವೃತ್ತಿಗಳಾಗಿ ಉಳ್ಳವರು ಬ್ರಾಹ್ಮಣರು, ಆಡಳಿತ, ಯುದ್ಧ, ರಕ್ಷಣೆಗಳನ್ನು ಗುಣ, ವೃತ್ತಿಗಳನ್ನಾಗಿ ಉಳ್ಳವರು ಕ್ಷತ್ರಿಯರು, ವ್ಯಾಪಾರ, ಕೃಷಿ, ಪಶುಪಾಲನೆಗಳನ್ನು ಗುಣ,ವೃತ್ತಿಗಳಾಗಿ ಉಳ್ಳವರು ವೈಶ್ಯರು, ಸೇವಾವೃತ್ತಿಯುಳ್ಳವರು ಶೂದ್ರರು ಎಂದು ಗುರುತಿಸಲಾಯಿತು. ಅದನ್ನೇ ಶ್ರೀಕೃಷ್ಣನೂ ಭಗವದ್ಗೀತೆಯಲ್ಲಿ ಹೇಳಿದ್ದಾನೆ -
   ಚಾತುರ್ವರ್ಣ್ಯಂ ಮಯಾ ಸೃಷ್ಟಂ ಗುಣಕರ್ಮವಿಭಾಗಶ: । 
' ನಾಲ್ಕು ವರ್ಣಗಳನ್ನೂ ನಾನು ಗುಣ,ಕರ್ಮಗಳ ಆಧಾರದಲ್ಲಿ ಸೃಷ್ಟಿಸಿದ್ದೇನೆ.' 
    ಇಲ್ಲಿ ಜನ್ಮ ಎಂಬ ಪದವಿಲ್ಲದಿರುವುದನ್ನು ನೋಡಬಹುದು. ಅಂತೆಯೇ ಇಲ್ಲಿ ಯುಧಿಷ್ಠಿರನು ಹೇಳುವಂತೆ, ಪ್ರಾಚೀನ ಕಾಲದಿಂದಲೂ ಒಂದು ವರ್ಣದವರು ಮತ್ತೊಂದು ವರ್ಣದವರನ್ನು ಮದುವೆಯಾಗಿ ಮಕ್ಕಳನ್ನು ಪಡೆಯುವುದು ನಡೆದುಕೊಂಡು ಬಂದಿದೆ. ಹೀಗಿರುವಾಗ ಆ ಮಕ್ಕಳ ವರ್ಣಗಳು ಯಾವುದೆಂದು ಹೇಗೆ ಹೇಳುವುದು? ಆದ್ದರಿಂದ ಯುಧಿಷ್ಠಿರನು ಇಲ್ಲಿ ಗುಣಗಳಿಗೇ ಪ್ರಾಧಾನ್ಯತೆ ಕೊಟ್ಟಿದ್ದಾನೆ. ಪುರಾಣಗಳಲ್ಲಿ ನೋಡುವುದಾದರೆ ಕ್ಷತ್ರಿಯನಾದ ಯಯಾತಿಯು ಬ್ರಾಹ್ಮಣರಾದ ಶುಕ್ರಾಚಾರ್ಯರ ಮಗಳು ದೇವಯಾನಿಯನ್ನು ಮದುವೆಯಾದ ಕಥೆಯಿದೆ. ಆದರೆ ಅವರ ಮಕ್ಕಳು ಅವರ ಗುಣಗಳ ಪ್ರಕಾರ ಕ್ಷತ್ರಿಯರೇ ಆದರು. ಅಂತೆಯೇ ಬ್ರಾಹ್ಮಣರಾದ ಪರಾಶರರು ಮೂಲತಃ ಕ್ಷತ್ರಿಯಳೂ ಬೆಸ್ತರ ಸಾಕುಮಗಳೂ ಆದ ಸತ್ಯವತಿಯೊಡನೆ ಸಂಬಂಧ ಬೆಳೆಸಿ ವೇದವ್ಯಾಸರನ್ನು ಪಡೆದರು. ಆದರೆ ವೇದವ್ಯಾಸರು ಅಧ್ಯಯನದಲ್ಲಿ ತೊಡಗಿ ಬ್ರಾಹ್ಮಣರಾದರು. ಹುಟ್ಟಿನಿಂದ ಕ್ಷತ್ರಿಯರಾಗಿದ್ದ ವಿಶ್ವಾಮಿತ್ರರು ತಪಸ್ಸು ಮಾಡಿ ಬ್ರಹ್ಮರ್ಷಿಗಳಾದರು.‌ ಹೀಗೆ ಅಂತರ್ಜಾತಿ ವಿವಾಹಗಳ ಮತ್ತು ಸಂಸ್ಕಾರದಿಂದ ಒಂದು ವರ್ಣಕ್ಕೆ ಸೇರಿದ ಉದಾಹರಣೆಗಳು ಅನೇಕ ಸಿಗುತ್ತವೆ.‌ ಹಾಗಾಗಿ ಈ ವರ್ಣವ್ಯವಸ್ಥೆ ಎನ್ನುವುದು ಬಹಳ ಹಿಂದೆಯೇ ಜನ್ಮತಃ ಆಗಿರುವುದು ಹೋಗಿ, ಕೇವಲ ಅದೊಂದು ವಿಚಾರವಾಗಿ ಉಳಿದುಬಂದಿದೆ ಎನ್ನಬಹುದು. ಹಾಗಾಗಿ ಸನಾತನ ಧರ್ಮದ ಪ್ರಕಾರ, ಎಲ್ಲ ಮನುಷ್ಯರೂ ಒಂದೇ ಆಗಿದ್ದು ವರ್ಣವ್ಯವಸ್ಥೆ ಅನುಕೂಲಕ್ಕಾಗಿ ಇರುವ ಒಂದು ಪರಿಕಲ್ಪನೆ ಅಷ್ಟೇ. ಯಾರು ಯಾರಿಗೆ ಯಾವ ಗುಣ, ವೃತ್ತಿಗಳಲ್ಲಿ ಮನೋಧರ್ಮ, ಆಸಕ್ತಿಗಳಿವೆಯೋ ಅವರು ಅವುಗಳನ್ನು ಬೆಳೆಸಿಕೊಂಡು ಅಂಥ ವರ್ಣದವರೆಂದು ಭಾವಿಸಬಹುದು. ಈಗ ಹಲವಾರು ಮಾಧ್ಯಮಗಳ‌ ಮತ್ತು ಜ್ಞಾನವಿಸ್ತಾರಣೆಯ ಕಾರಣ, ಎಲ್ಲರಿಗೂ ಅನೇಕ ಗುಣ, ವೃತ್ತಿಗಳಲ್ಲಿ ಆಸಕ್ತಿ ಮತ್ತು ಪರಿಶ್ರಮ ಇರುತ್ತವೆ. ಹಾಗಾಗಿ ಯುಧಿಷ್ಠಿರನು ಹೇಳಿದಂತೆ ಸಾಮಾಜಿಕವಾಗಿ ಜಾತಿಯನ್ನು ಅಷ್ಟು ನಿಖರವಾಗಿ ಗುರುತಿಸಲಾಗುವುದಿಲ್ಲ ಮತ್ತು ಬಳಸಲಾಗುವುದಿಲ್ಲ. 
   ಈಗ ಯುಧಿಷ್ಠಿರನೇ ಅಜಗರವನ್ನು ಪ್ರಶ್ನಿಸಿದನು," ಹೇ ಸರ್ಪರಾಜನೇ! ನೀನು ವೇದ,ವೇದಾಂಗಪಾರಂಗತನಾಗಿರುವೆ! ಯಾವ ಕರ್ಮಗಳನ್ನು ಮಾಡಿದರೆ ಮನುಷ್ಯನಿಗೆ ಸದ್ಗತಿಯುಂಟಾಗುತ್ತದೆಯೆಂದು ದಯವಿಟ್ಟು ಹೇಳು!" 
   ಅದಕ್ಕೆ ಅಜಗರ ಹೇಳಿತು," ಸತ್ಪಾತ್ರರಿಗೆ ದಾನ ಮಾಡುವುದು, ಪ್ರಿಯವಾಕ್ಯಗಳನ್ನಾಡುವುದು, ಸತ್ಯವನ್ನು ಹೇಳುವುದು, ಅಹಿಂಸಾನಿರತನಾಗಿರುವುದು, ಇವುಗಳಿಂದ ಸ್ವರ್ಗಕ್ಕೆ ಹೋಗಬಹುದು." 
   ಯುಧಿಷ್ಠಿರನು ಪುನಃ ಕೇಳಿದನು," ಹೇ ಸರ್ಪರಾಜನೇ! ದಾನ ಮತ್ತು ಸತ್ಯಗಳಲ್ಲಿ ಯಾವುದು ದೊಡ್ಡದು? ಅಹಿಂಸೆ ಮತ್ತು ಪ್ರಿಯವಾಕ್ಯಗಳಲ್ಲಿ ಯಾವುದು ಶ್ರೇಷ್ಠ ಮತ್ತು ಕನಿಷ್ಠ?" 
ಸರ್ಪವು ಹೇಳಿತು," ದಾನ, ಸತ್ಯ, ಅಹಿಂಸೆ, ಪ್ರಿಯವಾಕ್ಯಗಳಲ್ಲಿ, ಅವುಗಳ ಕಾರ್ಯಗಳ ಶ್ರೇಷ್ಠತೆ, ಕನಿಷ್ಠತೆಗಳ ಆಧಾರದ ಮೇಲೆ ಯಾವುದು ಶ್ರೇಷ್ಠ ಮತ್ತು ಯಾವುದು ಕನಿಷ್ಠ ಎಂದು ಹೇಳಬೇಕಾಗುತ್ತದೆ. ಕೆಲವೊಮ್ಮೆ ದಾನಕ್ಕಿಂತ ಸತ್ಯವೇ ಪ್ರಶಂಸನೀಯವಾಗಿದ್ದರೆ ಕೆಲವೊಮ್ಮೆ ಸತ್ಯಕ್ಕಿಂತ ದಾನವು ದೊಡ್ಡದೆನಿಸುತ್ತದೆ. ಹಾಗೆಯೇ ಕೆಲವೊಮ್ಮೆ ಪ್ರಿಯವಾಕ್ಯಕ್ಕಿಂತ ಅಹಿಂಸೆ ದೊಡ್ಡದಾಗಿ ಕಂಡರೆ ಕೆಲವೊಮ್ಮೆ ಅಹಿಂಸೆಗಿಂತ ಪ್ರಿಯವಾಕ್ಯ ದೊಡ್ಡದೆನಿಸುತ್ತದೆ!" 
    ಅಜಗರವು ಹೇಳಿದ ಮಾತುಗಳಲ್ಲಿ ಬಹಳ ಸತ್ಯವಿದೆ. ಸತ್ಯ, ಅಹಿಂಸೆ, ಪ್ರಿಯವಾಕ್ಯ, ದಾನ, ಇವೆಲ್ಲವೂ ಒಳ್ಳೆಯ ಮೌಲ್ಯಗಳಾದರೂ ಕಾರ್ಯಗಳ ಮೇಲೆ ಅವುಗಳ ಪ್ರಾಶಸ್ತ್ಯ ಅವಲಂಬಿತವಾಗಿರುತ್ತದೆ. ಉದಾಹರಣೆಗೆ ಒಳ್ಳೆಯ ಮಾತಿಗೂ ಬಗ್ಗದ ದುಷ್ಟನ ವಿಷಯದಲ್ಲಿ ಅಹಿಂಸೆ ತೋರಿದರೆ ಅದು ಆಗ ಶ್ರೇಷ್ಠ ಮೌಲ್ಯವೆನಿಸುವುದಿಲ್ಲ. ಅಂತೆಯೇ ಕೆಟ್ಟ ಕಾರ್ಯಗಳನ್ನು ಉತ್ತೇಜಿಸುವ ಪ್ರಿಯಮಾತುಗಳೂ ಶ್ರೇಷ್ಠವಾಗಿರುವುದಿಲ್ಲ. ಹಾಗಾಗಿ ಈ ಮೌಲ್ಯಗಳನ್ನು ಸಂದರ್ಭಕ್ಕೆ ತಕ್ಕಂತೆ ಬಳಸಬೇಕು. 
   ಧರ್ಮರಾಯನು ಮತ್ತೆ ಪ್ರಶ್ನಿಸಿದನು," ಮನುಷ್ಯನು ಸತ್ತ ಬಳಿಕ, ದೇಹವಿಲ್ಲದಿದ್ದರೂ ಹೇಗೆ ಸ್ವರ್ಗಕ್ಕೆ ಹೋಗುತ್ತಾನೆ ಹಾಗೂ ಕರ್ಮಗಳ ಫಲಗಳನ್ನು ಅನುಭವಿಸುತ್ತಾನೆ?" 
    ಅದಕ್ಕೆ ಸರ್ಪವು ಹೇಳಿತು," ಮನುಷ್ಯನು ಸತ್ತರೂ ದೇಹವು ನಾಶವಾಗುತ್ತದೆಯೇ ಹೊರತು ಜೀವವಲ್ಲ! ಜೀವಕ್ಕೆ ಮಾನುಷಜನ್ಮ, ಸ್ವರ್ಗವಾಸ, ಮತ್ತು ತಿರ್ಯಗ್ಯೋನಿಯಲ್ಲಿ 
 ಜನ್ಮ ( ಪ್ರಾಣಿ ಜನ್ಮ ) ಎಂಬ ಮೂರು ಗತಿಗಳಿರುತ್ತವೆ! ಯಾವ ಮನುಷ್ಯನು ಆಲಸ್ಯರಹಿತನಾಗಿ ದಾನ, ಅಹಿಂಸೆ, ಸತ್ಯ ಇವುಗಳನ್ನು ಆಚರಿಸುವನೋ ಅವನು ಸ್ವರ್ಗಕ್ಕೆ ಹೋಗುತ್ತಾನೆ. ಇವುಗಳಿಗೆ ವಿಪರೀತವಾಗಿ ಪಾಪಗಳನ್ನು ಮಾಡುವವನು ತಿರ್ಯಗ್ಜನ್ಮ ಪಡೆಯುತ್ತಾನೆ. ಕಾಮ,ಕ್ರೋಧ, ಹಿಂಸೆ, ಲೋಭಗಳಿಂದ ಕೂಡಿದವನೂ ತಿರ್ಯಗ್ಜನ್ಮ ಪಡೆಯುತ್ತಾನೆ. ಅಂತೆಯೇ ಕುದುರೆ, ಹಸು, ಮೊದಲಾದ ಪ್ರಾಣಿಗಳೂ ಉಚ್ಚಯೋನಿಗಳಲ್ಲಿ ಜನಿಸಿ ಮನುಷ್ಯತ್ವ ಹಾಗೂ ದೇವತ್ವವನ್ನು ಪಡೆಯುತ್ತವೆ. ಹೀಗೆ ಜೀವಾತ್ಮನು ತನ್ನ ಕರ್ಮಗಳಿಂದ ವಿವಿಧ ಗತಿಗಳನ್ನು ಪಡೆಯುತ್ತಾನೆ. ಆದರೆ ದ್ವಿಜನಾದವನು ಕರ್ಮಫಲಗಳನ್ನು ಬಯಸದೇ ತನ್ನ ಆತ್ಮವನ್ನು ಪರಮಾತ್ಮನಲ್ಲಿ ನೆಲೆಗೊಳಿಸಲು ಪ್ರಯತ್ನಿಸುತ್ತಾನೆ. ಇತರರಾದರೋ ತಮ್ಮ ತಮ್ಮ ಕರ್ಮಫಲಗಳನ್ನು ಅನುಭವಿಸುತ್ತಾ ನಾನಾಯೋನಿಗಳಲ್ಲಿ ಹುಟ್ಟುತ್ತಿರುತ್ತಾರೆ. "
   ಯುಧಿಷ್ಠಿರನು ಪುನಃ ಕೇಳಿದನು," ಶಬ್ದ, ಸ್ಪರ್ಶ,ರೂಪ, ರಸ, ಗಂಧಗಳಲ್ಲಿ ಆತ್ಮದ ಆಶ್ರಯ ತಟಸ್ಥವಾಗಿದ್ದರೂ ಅವುಗಳನ್ನು ಹೇಗೆ ಅನುಭವಿಸುತ್ತದೆ ? ಇದನ್ನು ಸಂಪೂರ್ಣವಾಗಿ ಹೇಳು!" 
   ಆಗ ಸರ್ಪವು ಹೇಳಿತು," ಆತ್ಮವು ದೇಹವನ್ನು ಆಶ್ರಯಿಸಿದಾಗ ಕರಣಗಳ ಮೂಲಕ ಭೋಗಗಳನ್ನು ಅನುಭವಿಸುತ್ತದೆ. ಜ್ಞಾನ, ಬುದ್ಧಿ, ಮನಸ್ಸುಗಳೇ ಆ ಕರಣಗಳು. ಇವುಗಳಲ್ಲಿ ಮುಖ್ಯವಾಗಿ ಮನಸ್ಸಿನ ಮೂಲಕವೇ ಆತ್ಮವು ಕ್ರಮವಾಗಿ ವಿಷಯಗಳನ್ನು ಅನುಭವಿಸುತ್ತದೆ.‌ ಆತ್ಮವು ಎರಡು ಹುಬ್ಬುಗಳ ನಡುವೆ ಇದ್ದು ಬುದ್ಧಿಯನ್ನು ವಿವಿಧ ವಿಷಯಗಳಲ್ಲಿ ನಿಯೋಜಿಸುತ್ತದೆ.‌" 
   ಆಗ ಯುಧಿಷ್ಠಿರನು ಕೇಳಿದನು," ಹೇ ಸರ್ಪರಾಜನೇ! ಮನಸ್ಸು ಮತ್ತು ಬುದ್ಧಿಗಳಿಗಿರುವ ವ್ಯತ್ಯಾಸವೇನು ಹೇಳು!" 
   ಅದಕ್ಕೆ ಸರ್ಪವು ಹೇಳಿತು," ಬುದ್ಧಿಯು ಆತ್ಮದ ಅಧೀನದಲ್ಲಿರುವಂತೆ ಕಂಡರೂ ಅದು ಆತ್ಮದ ನಿರ್ದೇಶಕನಾಗುತ್ತದೆ! ಬುದ್ಧಿಯು ಕಾರ್ಯಗಳನ್ನು ಉತ್ಪತ್ತಿ ಮಾಡುತ್ತದೆ. ಮನಸ್ಸು ಇಂದ್ರಿಯಗಳನ್ನು ಪ್ರಚೋದಿಸಿ ಅವು ಕಾರ್ಯರೂಪಕ್ಕೆ ಬರುವಂತೆ ಮಾಡುತ್ತದೆ ಮತ್ತು ಅವುಗಳ ಸುಖದುಃಖಗಳನ್ನು ಅನುಭವಿಸುತ್ತದೆ. ಇದೇ ಬುದ್ಧಿ, ಮನಸ್ಸುಗಳಿಗಿರುವ ವ್ಯತ್ಯಾಸ. ನೀನೂ ಈ ವಿಷಯದಲ್ಲಿ ತಿಳಿದವನಾಗಿರುವೆ! ನಿನ್ನ ಅಭಿಪ್ರಾಯವೇನು ಹೇಳು!" 
   ಆಗ ಯುಧಿಷ್ಠಿರನು ಹೇಳಿದನು," ಹೇ ಸರ್ಪರಾಜನೇ! ನೀನು ಬುದ್ಧಿವಂತರಲ್ಲಿಯೇ ಶ್ರೇಷ್ಠನಾಗಿರುವೆ! ಯಾವ ವಿಷಯವನ್ನು ತಿಳಿಯಬೇಕೆಂದು ಯೋಗಿಗಳು ಇಚ್ಛಿಸುವರೋ ಅದು ನಿನಗೆ ಸಂಪೂರ್ಣವಾಗಿ ತಿಳಿದಿದೆ! ಹೀಗಿದ್ದೂ ನನ್ನನ್ನೇಕೆ ಪ್ರಶ್ನಿಸುವೆ? ಆದರೆ ನೀನು ಸರ್ವಜ್ಞನಾಗಿದ್ದು ನಿನ್ನ ಪುಣ್ಯಕರ್ಮಗಳಿಂದ ಸ್ವರ್ಗಕ್ಕೆ ಹೋಗಿದ್ದರೂ ಮಾಯೆಯಿಂದ ಆವೃತನಾಗಿ ಇಂಥ ದುರವಸ್ಥೆಯಲ್ಲಿ ಏಕೆ ಬಿದ್ದೆ?" 
   ಆಗ ಸರ್ಪವು ಹೇಳಿತು," ಮನುಷ್ಯನು ಸುಜ್ಞಾನಿಯೇ ಆಗಿದ್ದರೂ ಶೂರನೇ ಆಗಿದ್ದರೂ ಐಶ್ವರ್ಯವು ಅವನನ್ನು ಮದಾಂಧನನ್ನಾಗಿ ಮಾಡಿಬಿಡುತ್ತದೆ! ಯಾರು ಸದಾ ಸುಖದಲ್ಲೇ ಇರುವನೋ ಅವನು ದುರಭಿಮಾನಿಯಾಗುತ್ತಾನೆಂಬುದು ನನ್ನ ಅಭಿಪ್ರಾಯ! ಈ ಐಶ್ವರ್ಯಮೋಹದಿಂದ ಮದಾಂಧನಾಗಿಯೇ ನಾನು ಪತಿತನಾದೆ! ಮಹಾರಾಜ! ನೀನಿಂದು ನನಗೆ ಒಳ್ಳೆಯದನ್ನು ಮಾಡಿರುವೆ! ನಿನ್ನೊಂದಿಗೆ ಮಾತನಾಡಿದುದರಿಂದ ನನ್ನ ಶಾಪವು ಪರಿಹಾರವಾಗಿರುವುದು! ನಾನು ಸ್ವರ್ಗದಲ್ಲಿ ದರ್ಪಿಷ್ಟನಾಗಿ ಸಂಚರಿಸುತ್ತಿದ್ದೆ! ದೇವಗಂಧರ್ವಯಕ್ಷರಾಕ್ಷಸಪನ್ನಗರೆಲ್ಲರೂ ನನಗೆ ಕಾಣಿಕೆಗಳನ್ನು ತಂದೊಪ್ಪಿಸುತ್ತಿದ್ದರು! ನನಗೆ ಇನ್ನೊಂದು ಶಕ್ತಿಯೂ ಇತ್ತು! ನಾನು ಯಾವುದೇ ಜೀವಿಯನ್ನು ನೆಟ್ಟ ದೃಷ್ಟಿಯಿಂದ ನೋಡಿದರೂ ಅದರ ತೇಜಸ್ಸನ್ನು ಆಕರ್ಷಿಸುತ್ತಿದ್ದೆ! ಹೀಗಿರುವಾಗ ಒಮ್ಮೆ ಸಪ್ತರ್ಷಿಗಳ ಕೈಲಿ ನನ್ನ ಪಲ್ಲಕ್ಕಿಯನ್ನು ಹೊರಿಸಿಕೊಂಡು ಹೋಗುತ್ತಿದ್ದಾಗ, ನನ್ನ ಕಾಲು ಅಗಸ್ತ್ಯರ ತಲೆಗೆ ತಗುಲಲು, ಅವರು ಕುಪಿತರಾಗಿ ಹೀಗೆ ಹೆಬ್ಬಾವಾಗುವಂತೆ ಶಪಿಸಿದರು! ಆಗ ನಾನು ಪಲ್ಲಕ್ಕಿಯಂದ ಕೆಳಗೆ ಬಿದ್ದೆ! ನಾನು ಆಗ ಆ ಬ್ರಾಹ್ಮಣಶ್ರೇಷ್ಠರನ್ನು ಶಾಪ ವಿಮೋಚನೆಗಾಗಿ ಬೇಡಿಕೊಂಡೆ. ಆಗ ಅವರು ಧರ್ಮಾತ್ಮನಾದ ಯುಧಿಷ್ಠಿರನು ನನ್ನನ್ನು ಈ ಶಾಪದಿಂದ ಬಿಡುಗಡೆ ಮಾಡುವನೆಂದೂ ಆಗಲೇ ನನ್ನ ದುರಭಿಮಾನ ಮತ್ತು ಪಾಪಗಳು ನಿವಾರಣೆಯಾಗುತ್ತವೆಯೆಂದೂ ಹೇಳಿದರು. ಅವರು ಹೇಳಿದಂತೆಯೇ ಎಲ್ಲವೂ ನಡೆಯಿತು. ನಾನು ಆ ಬ್ರಾಹ್ಮಣರ ತಪ:ಪ್ರಭಾವವನ್ನು ಕಂಡು ಆಶ್ಚರ್ಯಗೊಂಡಿದ್ದೇನೆ! ಆದ್ದರಿಂದಲೇ ನಾನು ನಿನಗೆ ಬ್ರಾಹ್ಮಣತ್ವದ ಮತ್ತು ಪರಾತ್ಪರ ವಸ್ತುವಿನ ಲಕ್ಷಣಗಳನ್ನು ಹೇಳಿದೆನು! ಹೇ ರಾಜಾ! ಬ್ರಾಹ್ಮಣತ್ವವನ್ನು ಹೊಂದಲು ಹಾಗೂ ಪರಾತ್ಪರ ವಸ್ತುವನ್ನು ಕಾಣಲು ಸತ್ಯ, ದಮ, ತಪಸ್ಸು, ದಾನ, ಅಹಿಂಸೆ, ಧರ್ಮನಿತ್ಯತೆ, ಇವೇ ಸಾಧಕಗಳು! ಕುಲವಾಗಲಿ ಜಾತಿಯಾಗಲಿ ಅಲ್ಲ! ನಿನ್ನ ತಮ್ಮನಾದ ಭೀಮಸೇನನೂ ಸ್ವಸ್ಥನಾಗಿದ್ದಾನೆ! ನಾನಿನ್ನು ಪುನಃ ಸ್ವರ್ಗಕ್ಕೆ ಹೋಗುತ್ತೇನೆ!" 
    ಹೀಗೆ ಹೇಳಿ ನಹುಷನು ಸರ್ಪರೂಪವನ್ನು ತೊರೆದು ದಿವ್ಯ ಶರೀರವನ್ನು ಧರಿಸಿ ತನಗಾಗಿ ಬಂದಿದ್ದ ದಿವ್ಯ ವಿಮಾನದಲ್ಲಿ ಕುಳಿತು ಸ್ವರ್ಗಕ್ಕೆ ಹೋದನು. ಯುಧಿಷ್ಠಿರನು ತನ್ನ ತಮ್ಮ ಭೀಮನೊಂದಿಗೂ ಧೌಮ್ಯರೊಂದಿಗೂ ಆಶ್ರಮಕ್ಕೆ ಹಿಂದಿರುಗಿದನು.
    ಹೀಗೆ, ಅಜಗರಪರ್ವ, ಮಹಾಭಾರತದ ವನಪರ್ವದಲ್ಲಿ ಬರುವ, ನಿಜವಾದ ಬ್ರಾಹ್ಮಣತ್ವ, ಪರಬ್ರಹ್ಮ, ಆತ್ಮ, ಮನಸ್ಸು, ಮೊದಲಾದ ವಿಷಯಗಳನ್ನೊಳಗೊಂಡ ಅಜಗರ ಮತ್ತು ಯುಧಿಷ್ಠಿರರ ನಡುವಿನ ಪ್ರಶ್ನೋತ್ತರಗಳ ಒಂದು ಸ್ವಾರಸ್ಯಕರ ಉಪಪರ್ವವಾಗಿದೆ. 
   

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ