ಭಾನುವಾರ, ಆಗಸ್ಟ್ 9, 2026

ರಾಷ್ಟ್ರೀಯ ( ವಿಶ್ವ) ಪುಸ್ತಕ ಪ್ರೇಮಿಗಳ ದಿನದ ಶುಭಾಶಯಗಳು

ವಿಶ್ವ ಪುಸ್ತಕ ಪ್ರೇಮಿಗಳ ದಿನದ ಶುಭಾಶಯಗಳೊಂದಿಗೆ 

ನನ್ನ ಪುಸ್ತಕ ಪ್ರೇಮದ......ಅಥವಾ ಪುಸ್ತಕ ಹುಚ್ಚಿನ ಒಂದು ಸಣ್ಣ ಝಲಕ್!

ನಿಜ, ಪುಸ್ತಕ ಪ್ರೇಮ ಅಥವಾ ಹುಚ್ಚು, ಎಲ್ಲಾ ಪ್ರೇಮಗಳಿಗಿಂತಲೂ ದೊಡ್ಡದಾಗಿ ಬೆಳೆಯಬಲ್ಲದು. ಅದು ಮದ್ಯವ್ಯಸನಕ್ಕಿಂತಲೂ ಹೆಚ್ಚಿನ ವ್ಯಸನ ಎಂಬ ಪದ ಸರಿಹೋಗದಿದ್ದರೂ ಗೀಳು ಅಥವಾ ಆಸಕ್ತಿ ಎಂದು ಹೇಳಬಹುದು. ಆದರೆ ಮದ್ಯಪಾನದಲ್ಲಿರುವಂತೆ ಆರೋಗ್ಯ ಸಮಸ್ಯೆಗಳಿರುವುದಿಲ್ಲ. ಶೇಖರಿಸಲು ಜಾಗದ ಸಮಸ್ಯೆ, ಮತ್ತು ಓದಲು ಸಮಯದ ಸಮಸ್ಯೆ ಇರುತ್ತವೆ. ಪುಸ್ತಕ ಸಂಗ್ರಹ, ಓದು, ಕರಕುಶಲ ವಸ್ತುಗಳ ಸಂಗ್ರಹ, ಬರವಣಿಗೆ, ಪ್ರವಾಸ, ಛಾಯಾಗ್ರಹಣ, ಹಾಡುಗಾರಿಕೆ, ಇಂಥ ಹಲವು ಹವ್ಯಾಸಗಳ ನಡುವೆ ನನ್ನ ಚರ್ಮವೈದ್ಯಕೀಯ ವೃತ್ತಿಯನ್ನೂ ಮುಂದುವರೆಸಿಕೊಂಡು ಹೋಗುತ್ತಿದ್ದೇನೆ, ಹಾಗೂ ತಕ್ಕಮಟ್ಟಿಗೆ ಯಶಸ್ವಿಯಾಗಿದ್ದೇನೆ ಎಂದು ಧೈರ್ಯವಾಗಿ ಹೇಳಿಕೊಳ್ಳಬಲ್ಲೆ. ಆದರೆ, ಇಷ್ಟೊಂದನ್ನು ನೋಡಿದಾಗ ನಾನು ಏನೂ ಮಾಡಿಲ್ಲವೆನಿಸುವುದು ಸಹಜ ಮತ್ತು ನಿಜ ಕೂಡ! ಆದರೆ ಅದಕ್ಕೇನೂ ಬೇಸರ ಪಟ್ಟುಕೊಳ್ಳಬೇಕಿಲ್ಲ. ಏಕೆಂದರೆ ಇಲ್ಲಿ ಎಲ್ಲವೂ ಸಾಪೇಕ್ಷ! ಪುಸ್ತಕ ಸಂಗ್ರಹದಲ್ಲಿ ಒಂದು ತುದಿಯಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಅಂಕೇಗೌಡರಿದ್ದರೆ ಇನ್ನೊಂದು ತುದಿಯಲ್ಲಿ ನನ್ನಂಥ ಎಷ್ಟೋ ಜನರಿರುತ್ತಾರೆ. ಆದರೆ ಪುಸ್ತಕ ಸಂಗ್ರಹ ಮತ್ತು ಓದಿನ ಹವ್ಯಾಸ ಅತ್ಯಂತ ಹೆಚ್ಚಿನ ಸಂತೋಷ ಕೊಡುತ್ತದೆಂದು ಖಂಡಿತವಾಗಿ ಹೇಳಬಲ್ಲೆ. 
     ಅದೇಕೋ ಗೊತ್ತಿಲ್ಲ. ನನಗೆ ಮೊದಲಿನಿಂದಲೂ ಪುಸ್ತಕ ಸಂಗ್ರಹ ಮತ್ತು ಓದಿನ ವಿಪರೀತ ಹುಚ್ಚಿದೆ. ಚಿಕ್ಕ ವಯಸ್ಸಿನಲ್ಲಿ ನಮ್ಮ ತಂದೆಯವರು ಪರಿಚಯಿಸಿದ ಅಮರ ಚಿತ್ರ ಕಥಾ ಮಾಲಿಕೆಯ ಪುಸ್ತಕಗಳು, ಇಕೋ ಪುಸ್ತಕಗಳು, ಭಾರತ ಭಾರತಿ ಪುಸ್ತಕಗಳು, ಚಂದಮಾಮ, ಬಾಲಮಿತ್ರ, ಬೊಂಬೆಮನೆ, ಟಿಂಕಲ್, ಗೋಕುಲಂ, ಚಂಪಕ್, ಬಾಲಮಂಗಳ ಮೊದಲಾದ ಮಕ್ಕಳ, ಅಷ್ಟೇಕೆ ದೊಡ್ಡವರಿಗೂ ಬಹಳ ಪ್ರಿಯವಾದ ಪತ್ರಿಕೆಗಳು, ತರಂಗ, ಸುಧಾ, ಕರ್ಮವೀರ, ಕಸ್ತೂರಿ, ರೀಡರ್ಸ್ ಡೈಜೆಸ್ಟ್, ವಿಸ್ಡಮ್, ವಾರಪತ್ರಿಕೆ, ಪ್ರಜಾಮತ, ಮುಂತಾದ ಹಲವಾರು ಪತ್ರಿಕೆಗಳು ನನ್ನ ಮನಸೆಳೆದು ಈ ಅಭಿರುಚಿ ಬೆಳೆಸಿದವೇನೋ! ಆಗಲೇ ಹತ್ತನೇ ತರಗತಿಯ ವೇಳೆಗೆ ನಾನು ಮಂಗಳ, ತರಂಗ, ಪ್ರಜಾಮತ, ಕರ್ಮವೀರ, ಕಸ್ತೂರಿ, ಮುಂತಾದ ಪತ್ರಿಕೆಗಳಲ್ಲಿ ಕಥೆಗಳನ್ನೂ ಲೇಖನಗಳನ್ನೂ ಬರೆದು ಪ್ರಕಟಿಸಿದ್ದೆ. ಚಿಕ್ಕ ವಯಸ್ಸಿನ ನನ್ನ ಎರಡು ಘಟನೆಗಳು ಪುಸ್ತಕ ಪ್ರೇಮದ ವಿಷಯವಾಗಿ ಇನ್ನೂ ನನಗೆ ನೆನಪಿದೆ. ಒಂದು, ಐದನೇ ತರಗತಿಯಲ್ಲಿ ಪ್ರತಿ ವರ್ಷದಂತೆ ನಮ್ಮ ತರಗತಿಯ ಗ್ರೂಪ್ ಫೋಟೋ ತೆಗೆದಾಗ ಅದನ್ನು ಕೊಳ್ಳಲು ಐದು ರೂಪಾಯಿ ಕೊಡುವ ಬದಲಿಗೆ ಅದೇ ಐದು ರೂಪಾಯಿಗೆ ಸೈಫನ್ ಎಂಬ ಆಂಗ್ಲ ವೈಜ್ಞಾನಿಕ ಮಾಸಪತ್ರಿಕೆಯನ್ನು ಕೊಳ್ಳಲು ಯೋಚಿಸಿ ಆ ಫೋಟೋ ಬೇಡವೆಂದು ನಿರಾಕರಿಸಿದ್ದೆ. ಆಗೆಲ್ಲಾ ಐದು ರೂಪಾಯಿ ಕೂಡ ಸ್ವಲ್ಪ ದುಬಾರಿಯೇ ಇತ್ತು. ಆಗ ನಮ್ಮ ಅಧ್ಯಾಪಕರು, ಸ್ನೇಹಿತರೊಂದಿಗಿರುವ ಫೋಟೋ ಮುಂದೆ ಸಿಗುವುದಿಲ್ಲ, ಅದ್ಯಾವ ಪತ್ರಿಕೆ ಬಿಡು, ಅಷ್ಟೊಂದು ಓದುವುದೇನು ಬೇಡ ಎಂದು ಛೇಡಿಸಿದ್ದರು! ಕೊನೆಗೆ ಐದು ರೂಪಾಯಿಗೆ ಯಾಕೆ ಇಷ್ಟು ಚಿಂತೆ ಎಂದು ನನ್ನ ತಂದೆ, ತಾಯಿಯರು ಫೋಟೋ ಮತ್ತು ಪತ್ರಿಕೆ ಎರಡನ್ನೂ ಕೊಡಿಸಿದ್ದರು. ಇನ್ನೊಂದು ಘಟನೆಯಲ್ಲಿ, ಅದೇ ಐದನೇ ಅಥವಾ ಆರನೇ ತರಗತಿಯಲ್ಲಿದ್ದಾಗ, ಒಮ್ಮೆ ನಾವು ಕುಟುಂಬಸಮೇತವಾಗಿ ಮಲ್ಲೇಶ್ವರಂ ಆಟದ ಮೈದಾನದಲ್ಲಿ ನಡೆದ ಒಂದು ಬೃಹತ್ ಪುಸ್ತಕ ಪ್ರದರ್ಶನಕ್ಕೆ ಹೋಗಿದ್ದೆವು. ಆಗ ಒಂದಷ್ಟು ಪುಸ್ತಕಗಳನ್ನು ಖರೀದಿಸಿದ ಬಳಿಕ, ನಮ್ಮ ತಂದೆಯವರು ನನಗೂ ನನ್ನ ತಂಗಿಗೂ ಐಸ್ ಕ್ರೀಮ್ ಕೊಡಿಸಲು ಹೊರಟರು. ಆಗ ನಾನು ಐಸ್ ಕ್ರೀಮ್ ಬದಲಿಗೆ ಇನ್ನೊಂದು ಪುಸ್ತಕವನ್ನೇ ತೆಗೆದುಕೊಳ್ಳುವೆನೆಂದು ಐಸ್ ಕ್ರೀಮ್ ತೆಗೆದುಕೊಳ್ಳಲೇ ಇಲ್ಲ! ಆಗ ನಮ್ಮ ತಂದೆ, ಪುಸ್ತಕ ಪ್ರೇಮ ಇರಬೇಕು, ಆದರೆ ಹೀಗೆ ಎಲ್ಲವನ್ನೂ ಬಿಡುವಷ್ಟು ಹುಚ್ಚು ಇರಬಾರದೆಂದು‌ ಹೇಳುತ್ತಾ ಕೊನೆಗೆ ಎಲ್ಲರೂ ಹಂಚಿಕೊಂಡು ತಿನ್ನುವ ಪಾಪ್ ಕಾರ್ನ್ ತೆಗೆದುಕೊಂಡರು. ಆಮೇಲೆ ನನಗೂ ಅನಿಸಿತು. ಹೌದು, ಪುಸ್ತಕಗಳಿಗಾಗಿ ಹೀಗೆ ಬೇರೆ ಎಲ್ಲವನ್ನೂ ಬಿಡುವಂತಾಗಬಾರದು ಎಂದು. ಆದರೂ ಏನೇ ಆಕರ್ಷಣೆಗಳನ್ನು ನೋಡಿದರೂ ಮೊದಲು ನನಗೆ ಕಣ್ಣಿಗೆ ಬೀಳುವುದು ಪುಸ್ತಕಗಳೇ! ಆಗೆಲ್ಲಾ ಚಿಕ್ಕ ವಯಸ್ಸಿನಲ್ಲಿ ನಾವು ರಾಕ್ಷಸರ ಕಥೆಗಳನ್ನು ಓದುತ್ತಾ ಹೇಳುತ್ತಿದ್ದಾಗ, ರಾಕ್ಷಸರು ತಮ್ಮ ಜೀವಗಳನ್ನು ಗಿಣಿಗಳಲ್ಲೋ ಇನ್ನಾವುದೋ ಪ್ರಾಣಿಗಳಲ್ಲೋ ಇಡುತ್ತಿದ್ದರೆಂದು ನೋಡುತ್ತಿದ್ದೆವು. ಆಗ ನಾನು, ನನ್ನ ಜೀವ ಪುಸ್ತಕಗಳಲ್ಲಿರುತ್ತದೆ ಎನ್ನುತ್ತಿದ್ದೆ! 
     ಚಿಕ್ಕ ವಯಸ್ಸಿನಲ್ಲಿ ಅನೇಕ ಬಾರಿ ನನ್ನ ತಂದೆಯವರೊಂದಿಗೆ ಪುಸ್ತಕ ಮೇಳಗಳು, ಪುಸ್ತಕ ಮಳಿಗೆಗಳಿಗೆ ಹೋಗಿದ್ದುಂಟು. ಅವರು ಅನೇಕ ಕ್ವಿಜ್ ಪುಸ್ತಕಗಳನ್ನು ರಚಿಸುವಾಗ ಸಹಾಯ ಮಾಡಿದ್ದೂ ಉಂಟು. ಮಧ್ಯಾಹ್ನದ ಹೊತ್ತು, ರಜಾ ಸಮಯಗಳಲ್ಲಿ ಓದುವುದು ಬಿಟ್ಟರೆ ಇನ್ನೇನೂ ಮನರಂಜನೆ ಆಗ ಇರಲಿಲ್ಲ. ಕೆಲವೊಮ್ಮೆ ಶಾಲೆಗೂ ಅಮರ ಚಿತ್ರ ಕಥೆ, ಟಿಂಕಲ್ ಮುಂತಾದವನ್ನು ತೆಗೆದುಕೊಂಡು ಹೋದಾಗ ಅವನ್ನು ನೋಡಿದ ಗೆಳೆಯರಿಗೆ ಅವನ್ನು ಓದುವವರೆಗೂ ಸಮಾಧಾನವಿರುತ್ತಿರಲಿಲ್ಲ. ಅವರೂ ಹಾಗೆ ತರುತ್ತಿದ್ದುದುಂಟು. ಹಾಗೆ ಅವರಿಂದ ನೋಡಿದ ಪುಸ್ತಕಗಳು ನನಗೆ ಬೇಕೆಂದು ಮನೆಯಲ್ಲಿ ಕೇಳಿದಾಗ ಅವನ್ನು ನಮ್ಮ ತಂದೆ ತಂದುಕೊಡುತ್ತಿದ್ದರು. ಕೆಲವೊಮ್ಮೆ ಶಾಲೆಯಲ್ಲಿ ಹೀಗೆ ಇತರ ಪುಸ್ತಕಗಳು ನಮ್ಮ ಬಳಿಯಿರುವುದನ್ನು ನೋಡಿ ನಮ್ಮ ಮೇಡಂಗಳು, ಮೇಷ್ಟ್ರುಗಳು ಕಿತ್ತುಕೊಂಡದ್ದು, ಅನಂತರ ನಾವು ಬೇಡಿಕೊಂಡು ಹಿಂದಿರುಗಿಸಿಕೊಂಡಿದ್ದೂ ಇದೆ. ಕೆಲವೊಮ್ಮೆ ಅವರು ನನ್ನ ಬಳಿ ಪುಸ್ತಕಗಳನ್ನು ಓದಲೆಂದು ತೆಗೆದುಕೊಂಡು ಬಹಳ ದಿನಗಳಾದರೂ ಕೊಡದೆ, ನಾನು ಅವರ ಮನೆಗೇ ಹೋಗಿ ಹಿಂದಕ್ಕೆ ಪಡೆದದ್ದಿದೆ. ಆಗೆಲ್ಲಾ ಹಿರಿಯರೂ ಎಲ್ಲರೂ ಹೇಳುತ್ತಿದ್ದುದು ಪುಸ್ತಕಗಳನ್ನು ಯಾರಿಗೂ ಕೊಡಬೇಡಿ, ಮತ್ತೆ ಸಿಗುವುದಿಲ್ಲ ಎಂದು! ನಮ್ಮ ಸಂಸ್ಕೃತ ಮೇಷ್ಟ್ರು ಒಂದು ಶ್ಲೋಕವನ್ನೇ ಹೇಳಿಕೊಟ್ಟಿದ್ದರು -

       ಪುಸ್ತಕಂ ವನಿತಾ ವಿತ್ತಂ ಪರಹಸ್ತಗತಂ/
      ಯದಿ ಚೇತ್ ಪುನರಾಯಾತಿ ನಷ್ಟಂ ಭ್ರಷ್ಟಂ ಚ ಖಂಡಶ: //

    ' ಪುಸ್ತಕವೂ ಹೆಣ್ಣೂ, ಹಾಗೂ ಹಣವೂ ಇತರರ ಕೈಗೆ ಹೋದರೆ ಹೋದಂತೆಯೇ! ಒಂದು ವೇಳೆ ಪುನಃ ಬಂದರೆ ಹಾಳಾಗಿ ಬರುತ್ತವೆ!' 
      ಹಾಗಾಗಿ ಪುಸ್ತಕಗಳನ್ನು ಇತರರಿಗೆ ಕೊಡುವುದರ ಬಗ್ಗೆ, ಅಷ್ಟೇಕೆ ಅವು ನನ್ನ ಬಳಿ ಇದೆಯೆಂದು ಹೇಳುವುದರ ಬಗ್ಗೆಯೂ ಭಯ ಬೆಳೆಯಿತು! ಅದು ಈಗಲೂ ಇದೆ! 
     ಪುಸ್ತಕ ಲೋಕ ತುಂಬಾ ದೊಡ್ಡದು! ಹಲವರಿಗೆ ಹಲವು ಬಗೆಯ ಪುಸ್ತಕಗಳು ಇಷ್ಟವಾಗುತ್ತವೆ. ನನಗಾದರೆ ಮುಖ್ಯವಾಗಿ ಭಾರತೀಯ ಸಂಸ್ಕೃತಿ, ರಾಮಾಯಣ, ಮಹಾಭಾರತ, ಭಾಗವತಾದಿ ಹದಿನೆಂಟು ಪುರಾಣಗಳು, ವೇದೋಪನಿಷತ್ತುಗಳು, ಮೊದಲಾದ ಆಧ್ಯಾತ್ಮಿಕ ಪುಸ್ತಕಗಳು ಒಂದು ಕಡೆಯಾದರೆ, ಸಂಸ್ಕೃತ ಸಾಹಿತ್ಯದ ಕಾವ್ಯ, ಶೃಂಗಾರ, ಸುಭಾಷಿತ ಮೊದಲಾದ ವೈವಿಧ್ಯಮಯ ಪುಸ್ತಕಗಳು, ಭಾರತೀಯ ಪರಂಪರೆ, ಕಲೆ, ಇತಿಹಾಸ, ಜಾನಪದ ಕಥೆಗಳು, ವಿಶ್ವ ಪೌರಾಣಿಕ ಕಥೆಗಳು, ಪ್ರವಾಸತಾಣಗಳ ಪರಿಚಯಾತ್ಮಕ ಕಾಫಿ ಟೇಬಲ್ ಪುಸ್ತಕಗಳು, ಪ್ರಾಣಿ ಪ್ರಪಂಚ, ಕಾಡಿನ ವಿಷಯಗಳು, ಪ್ರಕೃತಿ ಸೌಂದರ್ಯಗಳ ವೈವಿಧ್ಯಮಯ ಕಾಫಿ ಟೇಬಲ್ ವಿಶ್ವಕೋಶಗಳು, ಕುವೆಂಪು ,ಭೈರಪ್ಪ , ಮುಂತಾದವರ ಕಾದಂಬರಿಗಳು, ವೈದ್ಯಕೀಯ, ಮಾನವ ಸ್ವಭಾವ, ಮೊದಲಾದ ವೈಜ್ಞಾನಿಕ ವಿಷಯದ ಪುಸ್ತಕಗಳು, ಕುತೂಹಲ ಕೆರಳಿಸುವ ಭೂತ ಪ್ರೇತಾದಿ ಹಾರರ್ ಮತ್ತು ಕ್ರೈಂ ಸಸ್ಪೆನ್ಸ್ ಥ್ರಿಲ್ಲರ್ ಕಥೆಗಳು, ಹೀಗೆ ಹಲವಾರಿವೆ. 
      ಹೀಗೆ ಓದುವ ಹವ್ಯಾಸ ಹೆಚ್ಚಿರುವುದರಿಂದಲೇ ನಾನು ವೈದ್ಯನೂ ಬರಹಗಾರನೂ ಆದೆನೇನೋ! ವೈದ್ಯಕೀಯ ಕೋರ್ಸ್ ಗೆ ಸೇರ್ಪಡೆಯಾಗಲು, ವೈದ್ಯನಾಗಲು ಬಹಳ ಬಹಳ ಓದಬೇಕು ಮತ್ತು ನೆನಪಿನಲ್ಲಿಟ್ಟುಕೊಳ್ಳಬೇಕು ಎಂಬುದೇನೋ ನಿಜವೇ! ಅದಕ್ಕೆ ಹೀಗೆ ಚಿಕ್ಕ ವಯಸ್ಸಿನಿಂದ ಓದುವ ಅಭ್ಯಾಸವಿದ್ದರೆ ತುಂಬಾ ಒಳ್ಳೆಯದು. ಆದರೆ ಈ ಕಾಲದಲ್ಲಿ ತಂದೆ ತಾಯಿಯರು ತಮ್ಮ ಮಕ್ಕಳಿಗೆ ಎಷ್ಟು ಪುಸ್ತಕಗಳನ್ನು ಕೊಡಿಸುವರೋ ಗೊತ್ತಿಲ್ಲ! ಈ ಮೊಬೈಲ್ ಕಾಲದಲ್ಲಿ ಅದೆಷ್ಟು ಮಕ್ಕಳು ಆಸಕ್ತಿಯಿಂದ ಪುಸ್ತಕ ಹಿಡಿಯುತ್ತಾರೋ ಗೊತ್ತಿಲ್ಲ! 
     ನನ್ನ ಪುಸ್ತಕಗಳು ಬೆಳೆಯುತ್ತಲೇ ಇವೆ! ಬೇರೆ ಬೇರೆ ಕೋಣೆಗಳಲ್ಲಿ ಅವುಗಳನ್ನು ಜೋಡಿಸುತ್ತಲೇ ಇದ್ದೇನೆ. ಆದರೂ ಜಾಗ ಸಾಲುತ್ತಿಲ್ಲ. ಆಸೆ ಬತ್ತುತ್ತಿಲ್ಲ. ನನಗೇ ಪುಸ್ತಕಗಳನ್ನು ಹುಡುಕಲಾಗದಂತೆ ಸಾಗರೋಪಾದಿಯಲ್ಲಿ ಅವು ತುಂಬುತ್ತಿವೆ! ಮುಂದಿನ ವರ್ಷದ ಪುಸ್ತಕ ಪ್ರೇಮಿಗಳ ದಿನದ ಹೊತ್ತಿಗೆ ನನಗಾದರೂ ಪುಸ್ತಕಗಳು ಸುಲಭವಾಗಿ ಸಿಗುವಂತೆ ಇತರ ಕೋಣೆಗಳಿಗೆ ಪುಸ್ತಕಗಳನ್ನು ವರ್ಗಾಯಿಸಿ, ಸ್ವಲ್ಪ ಸುಸಜ್ಜಿತಗೊಳಿಸಿ ಸಾಧ್ಯವಾದಷ್ಟು ಓದಿ, ಇನ್ನಷ್ಟು ಒಳ್ಳೆಯ ಪುಸ್ತಕಗಳನ್ನು ಬರೆಯುವೆನೆಂದು ನನಗೆ ನಾನೇ ಆಶ್ವಾಸನೆ ಕೊಟ್ಟುಕೊಳ್ಳುತ್ತಾ ಈ ಬರಹವನ್ನು ಸದ್ಯಕ್ಕೆ ನಿಲ್ಲಿಸುತ್ತೇನೆ.

ಪುಸ್ತಕಿರಲವ್ವ ಮನೆತುಂಬ.....
ಪುಸ್ತಕಿರಲವ್ವ ಮನೆತುಂಬ.....

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ