ಶನಿವಾರ, ಆಗಸ್ಟ್ 15, 2026

ಸುಂದರೀಶತಕ -೭೮

ವಿಶ್ಲಥಯತಿ ಕಿಮಪಿ ನೀವೀಂ ಕಲಕಂಠಿ ರತಸ್ಯ ಕೂಜಿತಂ ಯತ್ತೇ ।
ಶಿಕ್ಷಾವಿಸ್ಮೃತಿರೇಷಾ ಗುರೋರಭಕ್ತಿಂ ನಿವೇದಯತಿ ।।

ಕನ್ನಡ ಅನುವಾದ 

   ನಾಯಕನು ನಾಯಕಿಗೆ ಹೇಳುತ್ತಾನೆ," ಎಲೈ ಕಲಕಂಠಿ! ರತಿಕ್ರೀಡೆಯ ಸಮಯದಲ್ಲಿ ನೀನು ಮಾಡುವ ಸೀತ್ಕಾರದ ಕೂಗು ಹೇಗೋ ನಿನ್ನ ನೀವಿಯ ಗಂಟನ್ನು ಸಡಿಲಗೊಳಿಸುತ್ತಿದೆ! ಇದು ನೀನು ಪಡೆದ ಶಿಕ್ಷಣದ ವಿಸ್ಮೃತಿಯಾಗಿದ್ದು ಗುರುವಿನಲ್ಲಿ ಅಭಕ್ತಿಯನ್ನು ತೋರಿಸುತ್ತದೆ!' 
     ರತಿಕ್ರೀಡೆಯ ಸಮಯದಲ್ಲಿ ಇಲ್ಲಿ ನಾಯಕನು ನಾಯಕಿಯನ್ನು ಛೇಡಿಸುತ್ತಿದ್ದಾನೆ. ರತಿಕ್ರೀಡೆಯ ಸಮಯದಲ್ಲಿ ಅವಳು ಮಾಡುವ ಸೀತ್ಕಾರದ ಶಬ್ದಗಳನ್ನು ಕೇಳಿ ಅವಳನ್ನು ಅವನು ಕಲಕಂಠಿ, ಅಂದರೆ ಸುಂದರ ಕಂಠದವಳು ಎಂದು ಕರೆಯುತ್ತಾನೆ. ಅವಳು ಮಾಡುತ್ತಿರುವ ಆ ರತಿಕೂಜಿತವೇ ಅವಳ ಕೆಳವಸ್ತ್ರದ ಪಟ್ಟಿಯಾದ ನೀವಿಯ ಗಂಟನ್ನು ಹೇಗೋ ಸಡಿಲಿಸುತ್ತಿದೆ. ಅದನ್ನು ತೋರಿಸುತ್ತಾ ಅವನು ಅವಳನ್ನು ಗಾಂಭೀರ್ಯ ಕಳೆದುಕೊಂಡಿದ್ದಾಳೆ, ಗುರುಹಿರಿಯರಿಂದ ಪಡೆದ ಶಿಕ್ಷಣವನ್ನು ಮರೆತಿದ್ದಾಳೆ, ಇದು ಗುರುಹಿರಿಯರಲ್ಲಿನ ಅವಳ ಅಭಕ್ತಿಯನ್ನು ತೋರಿಸುತ್ತದೆ ಎಂದು ಛೇಡಿಸುತ್ತಿದ್ದಾನೆ. ಸಾಮಾನ್ಯವಾಗಿ ಗಂಡನು ಹೆಂಡತಿಯ ನೀವಿಯನ್ನು ಸಡಿಲಿಸುತ್ತಾನೆ. ಆಗ ಗಾಂಭೀರ್ಯವನ್ನು ನಟಿಸುವ ಹೆಂಡತಿ ನಾಚಿಕೆಯಿಂದ ಅದನ್ನು ತಡೆಯುತ್ತಾಳೆ. ಆದರೆ ಇಲ್ಲಿ ಅವಳು ಮಾಡುವ ಸೀತ್ಕಾರಗಳಿಂದ ತಾನಾಗಿಯೇ ನೀವಿಯ ಗಂಟು ಸಡಿಲವಾಗುತ್ತಿದೆ. ಇದನ್ನು ನೋಡಿ ಗಂಡನು ತಾನೇನೂ ನೀವಿಯ ಗಂಟನ್ನು ಸಡಿಲಿಸಲಿಲ್ಲ, ನೀನೇ ಸಡಿಲಿಸಿಕೊಂಡು ಗಾಂಭೀರ್ಯ ಬಿಟ್ಟಿರುವೆ, ಸದಾ ಬಹಳ ಗಾಂಭೀರ್ಯದವಳು, ಲಜ್ಜಾನ್ವಿತಳು ಎನ್ನುವ ನೀನು ಈಗ ಗುರುಹಿರಿಯರ ಶಿಕ್ಷಣ ಮರೆತಿರುವೆ, ನಿರ್ಲಜ್ಜಿತಳಾಗಿರುವೆ ಎಂಬ ಅರ್ಥದಲ್ಲಿ ಅವಳನ್ನು ಹಾಸ್ಯ ಮಾಡಿ ಛೇಡಿಸುತ್ತಿದ್ದಾನೆ. ಇದು ಪ್ರಿಯ ಪತಿ, ಪತ್ನಿಯರ ನಡುವಿನ ಒಂದು ರಮ್ಯ ಶೃಂಗಾರದ ಕ್ಷಣ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ