ಒಮ್ಮೆ ಒಬ್ಬ ಬ್ರಾಹ್ಮಣನು ಯಾವುದೋ ಒಂದು ಸ್ಥಳಕ್ಕೆ ಒಂದು ಕಾಡುದಾರಿಯ ಮೂಲಕ ಹೋಗುತ್ತಿದ್ದನು. ಆಗ ದಾರಿಯಲ್ಲಿ ಇದ್ದಕ್ಕಿದ್ದಂತೆ ಕಾಣಿಸಿಕೊಂಡ ಒಬ್ಬ ರಾಕ್ಷಸ, ತನ್ನನ್ನು ಹೆಗಲ ಮೇಲೆ ಹೊತ್ತು ನಡೆಯುವಂತೆ ಗರ್ಜಿಸಿದ! ಹೆದರಿ ನಡುಗಿದ ಬ್ರಾಹ್ಮಣ, ಬೇರೆ ದಾರಿಯಿಲ್ಲದೆ ಅವನನ್ನು ತನ್ನ ಹೆಗಲಿನ ಮೇಲೆ ಹೊತ್ತು ನಡೆಯತೊಡಗಿದ. ಹಾಗೆ ನಡೆಯುತ್ತಿರುವಾಗ ಅವನ ಪಾದಗಳನ್ನು ಹಿಡಿದಿದ್ದ ಬ್ರಾಹ್ಮಣನಿಗೆ ಅವು ಕಮಲ ಪುಷ್ಪದ ಒಳಭಾಗದಂತೆ ಬಹಳ ಮೃದುವಾಗಿರುವುದನ್ನು ನೋಡಿ ಆಶ್ಚರ್ಯವಾಯಿತು! ಆಗ ಅವನು ಅವು ಹಾಗೇಕೆ ಅಷ್ಟು ಮೃದುವಾಗಿವೆ ಎಂದು ಕೇಳಿದ. ಅದಕ್ಕೆ ರಾಕ್ಷಸನು," ನಾನೊಂದು ವ್ರತವನ್ನು ಪಾಲಿಸುತ್ತಿದ್ದೇನೆ. ಅದರಂತೆ, ನನ್ನ ಪಾದಗಳು ಒದ್ದೆಯಾಗಿರುವಾಗ ಅವನ್ನು ನೆಲದ ಮೇಲಿಡುವುದಿಲ್ಲ", ಎಂದನು. ಸರಿಯೆಂದು ಬ್ರಾಹ್ಮಣನು ಮುಂದುವರಿದು ನಡೆಯುತ್ತಾ ಹೋದನು.
ದಾರಿಯಲ್ಲಿ ಒಂದು ನದಿಯು ಕಾಣಿಸಲು, ರಾಕ್ಷಸನು ಬ್ರಾಹ್ಮಣನ ಹೆಗಲಿನಿಂದ ಇಳಿಯುತ್ತಾ," ನಾನೀಗ ಸ್ನಾನ ಮಾಡಿ ದೇವರ ಪೂಜೆ ಮಾಡುವೆನು. ಅಲ್ಲಿಯವರೆಗೂ ನೀನು ಇಲ್ಲಿಯೇ ಇರಬೇಕು!", ಎಂದು ನದಿಯಲ್ಲಿ ಇಳಿದನು.
ಈಗ ಬ್ರಾಹ್ಮಣನು, ಸ್ನಾನವಾದ ಕೂಡಲೇ ರಾಕ್ಷಸನ ಪಾದಗಳು ಒದ್ದೆಯಾಗಿರುವುದರಿಂದ ಅವನು ನೆಲದ ಮೇಲೆ ಕಾಲಿಡುವುದಿಲ್ಲವೆಂದು ಅರಿತು ಓಡಿಹೋದನು!
ಹೀಗೆ ಪ್ರಶ್ನೆ ಕೇಳಿದ್ದರಿಂದ ಬ್ರಾಹ್ಮಣನಿಗೆ ರಾಕ್ಷಸನ ರಹಸ್ಯ ತಿಳಿದು ತಪ್ಪಿಸಿಕೊಳ್ಳಲು ಅನುಕೂವಾಯಿತು. ಆದ್ದರಿಂದ ಸದಾ ಪ್ರಶ್ನಿಸುತ್ತಿರಬೇಕು.
ಸಾಮಾನ್ಯವಾಗಿ ನಾವು ಅಪಾಯ ಬಂದಾಗ ಕಂಗಾಲಾಗುತ್ತೇವೆ. ಹಾಗೆ ಹೆದರಿಬಿಟ್ಟರೆ ಮುಂದೇನು ಮಾಡಬೇಕೆಂದು ಬುದ್ಧಿ ಓಡುವುದಿಲ್ಲ. ಹಾಗಾಗಿ, ನಾವು ಅಪಾಯದ ಮೂಲವೇನು, ಏನು ಮಾಡಿದರೆ ಅದರಿಂದ ಪಾರಾಗಬಹುದು, ಮೊದಲಾಗಿ ಅದರ ಬಗೆಗಿನ ಪ್ರಶ್ನೆಗಳನ್ನು ಕೇಳುತ್ತಾ ಹೋದರೆ ಅದರಿಂದ ಹೊರಬರಲು ಏನಾದರೂ ಉಪಾಯ ಹೊಳೆಯುತ್ತದೆ. ಆದರೆ ಪರಿಹಾರಕ್ಕಾಗಿ ಪ್ರಶ್ನಿಸಿ ಪ್ರಯತ್ನಿಸದೇ ಸಮಸ್ಯೆಯ ಸುಳಿಯಲ್ಲೇ ಒದ್ದಾಡುತ್ತಿದ್ದರೆ ಅದು ಇನ್ನಷ್ಟು ಬಿಗಡಾಯಿಸುತ್ತದೆ.
Good moral
ಪ್ರತ್ಯುತ್ತರಅಳಿಸಿ