ಭಾನುವಾರ, ಮಾರ್ಚ್ 1, 2026

ಸುಂದರೀಶತಕ -೧

ಸಂಸ್ಕೃತ ಸಾಹಿತ್ಯದಲ್ಲಿ ಶೃಂಗಾರ ವರ್ತನೆಗಳಿಗೆ ಪ್ರಮುಖ ಸ್ಥಾನವಿದೆ. ಹಾಗಾಗಿ ಸಂಸ್ಕೃತದಲ್ಲಿ ಅನೇಕ ಶೃಂಗಾರ ಕಾವ್ಯಗಳಿವೆ.ಸುಕವಿ ಉತ್ಪ್ರೇಕ್ಷಾವಲ್ಲಭನು ರಚಿಸಿರುವ ಸುಂದರೀಶತಕ ಅಂಥ ಒಂದು ಶೃಂಗಾರ ಕಾವ್ಯ.

೧. ಜಯತಿ ವಿಲಾಸವತೀನಾಂ ನೇತ್ರಪ್ರಾಪ್ತಾವಲೋಕನಪ್ರಾಣ; /
ವದನೇಂದುದ್ಯುತಿಸದನ: ಸ್ಮಿತಮಾಧ್ವೀಮೇದುರೋ ಮದನ: //

ವಿಲಾಸವತಿ ಸ್ತ್ರೀಯರ ಕಟಾಕ್ಷಗಳೇ ಪ್ರಾಣವಾಗಿರುವ, ಅವರ ಮುಖಚಂದ್ರದ ( ಮುಖವೆಂಬ ಚಂದ್ರದ) ಕಾಂತಿಯೇ ಮನೆಯಾಗಿರುವ, ಅವರ ನಗುವೆಂಬ ಮಧುವಿನಿಂದ ಪ್ರವರ್ಧಿಸಿರುವ ಮದನನು ವಿಜಯಶಾಲಿಯಾಗುತ್ತಾನೆ! 
      ಮನ್ಮಥನಿಗೆ ವಿಲಾಸವತಿ ಸ್ತ್ರೀಯರ ಕಣ್ಣೋಟಗಳೇ ಪ್ರಾಣ! ಅವರ ಮುಖಚಂದ್ರದ ಕಾಂತಿಯೇ ಅವನು ವಾಸಿಸುವ ಮನೆ! ಅವರ ನಗುವೆಂಬ ಮಧುವಿನಿಂದಲೇ ಅವನು ಪ್ರವರ್ಧಿಸುತ್ತಾನೆ! ಹೀಗೆ ಸ್ತ್ರೀಯರ ಸೌಂದರ್ಯದಿಂದಲೇ ಎಲ್ಲವೂ ಆಗಿರುವ ಇಂಥ ಮನ್ಮಥನು ವಿಜಯಶಾಲಿಯಾಗುತ್ತಾನೆ ಎಂದು ಕವಿಯು ತನ್ನ ಸುಂದರೀಶತಕದ ಆರಂಭ ಶ್ಲೋಕದಲ್ಲಿ ಮನ್ಮಥನನ್ನು ಸ್ತುತಿಸಿದ್ದಾನೆ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ