ಚೈತ್ರ ಮಾಸ, ಭಾರತೀಯ ಪಂಚಾಂಗದ ಪ್ರಕಾರ, ಹೊಸ ವರ್ಷದ ಆರಂಭ. ವಸಂತಮಾಸ ಆರಂಭವಾಗಿ ಮರಗಿಡಗಳೆಲ್ಲವೂ ಹೂಬಿಟ್ಟು ಎಲ್ಲೆಲ್ಲೂ ಹಸಿರು, ಮತ್ತು ವರ್ಣವೈವಿಧ್ಯದ ಸೌಂದರ್ಯ ನಮಗೆ ಆನಂದೋಲ್ಲಾಸಗಳನ್ನು ತರುತ್ತವೆ. ತೀರಾ ಸುಡುವ ಬಿಸಿಲೂ ಇಲ್ಲದೇ ತೀರಾ ಚಳಿಯೂ ಇಲ್ಲದೇ, ಸಮಶೀತೋಷ್ಣವಾದ, ಹಿತವಾದ, ರಮಣೀಯ ವಾತಾವರಣ ನಮ್ಮನ್ನು ಮುದಗೊಳಿಸುತ್ತದೆ. ಈ ಚೈತ್ರ ಮಾಸದಲ್ಲಿ ಅನೇಕ ಹಬ್ಬಗಳನ್ನೂ ವಿಶೇಷ ದಿನಗಳನ್ನೂ ಆಚರಿಸಿ ಸಂತೋಷಪಡುತ್ತೇವೆ. ಆ ಹಬ್ಬಗಳಲ್ಲಿ ಮುಖ್ಯವಾದ, ಭಾರತೀಯರಾದ ನಮಗೆ ಹೊಸವರ್ಷದ ಆರಂಭದ ದಿನವೇ ಆಗಿರುವ ಯುಗಾದಿ ಹಬ್ಬದ ವೈಶಿಷ್ಟ್ಯಗಳನ್ನು ಈಗ ನೋಡೋಣ.
ಚೈತ್ರ ಮಾಸದ ಶುಕ್ಲ ಪಕ್ಷದ ಪ್ರಥಮ ದಿವಸ, ಬಹುತೇಕ ಹಿಂದೂಗಳಿಗೆ ವರ್ಷಾರಂಭದ ದಿನ. ಚಾಂದ್ರಮಾನ ಪಂಚಾಂಗವನ್ನನುಸರಿಸುವವರಿಗೆ ಅಂದು ಚಾಂದ್ರಮಾನ ಯುಗಾದಿ. ಅಂದು ಸೂರ್ಯೋದಯದ ಸಮಯದಲ್ಲಿ ಬ್ರಹ್ಮನು ವಿಶ್ವವನ್ನು ಸೃಷ್ಟಿಸಿದನೆಂದು ಹೇಮಾದ್ರಿಯ ಚತುರ್ವರ್ಗಚಿಂತಾಮಣಿಯಲ್ಲಿ ಒಂದು ಕಥೆಯಿದೆ. ಹೀಗೆ ಯುಗದ ಆದಿಯಾದುದರಿಂದ ಈ ಹಬ್ಬದ ದಿನವನ್ನು ಯುಗಾದಿ ಎನ್ನುತ್ತಾರೆ. ವರ್ಷಕ್ಕೆ ಸಂವತ್ಸರ ಎನ್ನುತ್ತಾರೆ. ಒಟ್ಟು ಅರವತ್ತು ಸಂವತ್ಸರಗಳು ಇದ್ದು ಅವು ಮುಗಿದ ಬಳಿಕ, ಪುನಃ ಮೊದಲಿನಿಂದ ಆರಂಭವಾಗುತ್ತವೆ. ಪ್ರಭವ, ವಿಭವ ಎಂದು ಆರಂಭವಾಗುವ ಈ ಅರವತ್ತು ಸಂವತ್ಸರಗಳು ನಾರದರ ಮಕ್ಕಳ ಹೆಸರುಗಳೆಂದು ಹೇಳುತ್ತಾರೆ.
ಭವಿಷ್ಯ ಪುರಾಣ ಮತ್ತು ದೇವೀಭಾಗವತ ಪುರಾಣಗಳ ಪ್ರಕಾರ, ನಾರದರು ಒಮ್ಮೆ ಮಹಾವಿಷ್ಣುವನ್ನು ಮಾಯೆಯ ಸ್ವರೂಪದ ಬಗ್ಗೆ ವಿಚಾರಿಸಲು, ಅವನು ಅವರನ್ನು ಒಂದು ಸರೋವರದ ಬಳಿ ಕರೆದುಕೊಂಡು ಹೋಗಿ ಅದರಲ್ಲಿ ಸ್ನಾನ ಮಾಡಲು ಹೇಳುತ್ತಾನೆ. ಅಂತೆಯೇ ಅವರು ಸ್ನಾನ ಮಾಡಿ ಮೇಲೇಳಲು ಸುಂದರ ಸ್ತ್ರೀಯಾಗಿಬಿಡುತ್ತಾರೆ! ತನ್ನ ಪೂರ್ವವನ್ನೆಲ್ಲಾ ಮರೆತ ಆ ನಾರದಿಯನ್ನು ತಾಲಧ್ವಜನೆಂಬ ರಾಜನು ನೋಡಿ ಮೆಚ್ಚಿ ಮದುವೆಯಾಗಲು ಅವರಿಗೆ ಅರವತ್ತು ಪುತ್ರರು ಹುಟ್ಟುತ್ತಾರೆ!! ಅವರೆಲ್ಲರೂ ಒಂದು ಯುದ್ಧದಲ್ಲಿ ಸಾಯಲು, ನಾರದಿಯು ಅತ್ತು ಗೋಳಾಡುತ್ತಾಳೆ! ಆಗ ವಿಷ್ಣುವು ಬ್ರಾಹ್ಮಣ ವೇಷದಲ್ಲಿ ಬಂದು ಅವಳನ್ನು ಸಮಾಧಾನಪಡಿಸಿ ಪುನಃ ಆ ಸರೋವರದಲ್ಲಿ ಸ್ನಾನ ಮಾಡಿಸಲು, ನಾರದಿಯು ನಾರದರಾಗಿ ಪರಿವರ್ತಿತಳಾಗುತ್ತಾಳೆ! ಇದೇ ಮಾಯೆಯ ಸ್ವರೂಪ ಎಂದು ಹೇಳುತ್ತಾ ಮಹಾವಿಷ್ಣುವು ಅರವತ್ತು ಸಂವತ್ಸರಗಳಿಗೆ ನಾರದರ ಆ ಮಕ್ಕಳ ಹೆಸರುಗಳನ್ನಿಡುತ್ತಾನೆ. ಈ ಸಂವತ್ಸರಗಳು, ಪ್ರಭವ, ವಿಭವ, ಶುಕ್ಲ, ಪ್ರಮೋದೂತ ( ಪ್ರಮೋದ), ಪ್ರಜೋತ್ಪತ್ತಿ( ಪ್ರಜಾಪತಿ), ಆಂಗಿರಸ , ಶ್ರೀಮುಖ , ಭಾವ, ಯುವಾ, ಧಾತಾ, ಈಶ್ವರ, ಬಹುಧಾನ್ಯ, ಪ್ರಮಾಥಿ, ವಿಕ್ರಮ, ವೃಷ , ಚಿತ್ರಭಾನು, ಸುಭಾನು , ತಾರಣ, ಪಾರ್ಥಿವ, ವ್ಯಯ, ಸರ್ವಜಿತ್, ಸರ್ವಧಾರಿ, ವಿರೋಧಿ, ವಿಕೃತಿ, ಖರ, ನಂದನ,ವಿಜಯ , ಜಯ, ಮನ್ಮಥ, ದುರ್ಮುಖ, ಹೇಮಲಂಬಿ, ವಿಲಂಬಿ, ವಿಕಾರಿ, ಶಾರ್ವರಿ, ಪ್ಲವ, ಶುಭಕೃತ್, ಶೋಭನ (ಶೋಭಕೃತ್), ಕ್ರೋಧಿ, ವಿಶ್ವಾವಸು, ಪರಾಭವ, ಪ್ಲವಂಗ, ಕೀಲಕ, ಸೌಮ್ಯ, ಸಾಧಾರಣ, ವಿರೋಧಕೃತ್, ಪರೀಧಾವಿ, ಪ್ರಮಾದಿ, ಆನಂದ, ರಾಕ್ಷಸ, ನಲ( ಅನಲ), ಪಿಂಗಲ, ಕಾಲಯುಕ್ತ, ಸಿದ್ಧಾರ್ಥಿ, ರೌದ್ರ, ದುರ್ಮತಿ, ದುಂದುಭಿ, ರುಧಿರೋದ್ಗಾರಿ, ರಕ್ತಾಕ್ಷಿ, ಕ್ರೋಧನ, ಮತ್ತು ಕ್ಷಯ( ಅಕ್ಷಯ). ಪುನರಾವರ್ತಿತವಾಗುವ ಈ ಸಂವತ್ಸರಗಳಲ್ಲಿ ಈ ಬಾರಿ ಬಂದಿರುವುದು ಪರಾಭವ ಸಂವತ್ಸರ.
ಮಹಾವಿಷ್ಣುವು ಮತ್ಸ್ಯಾವತಾರ ತಾಳಿದ್ದು ಈ ದಿನವೇ ಎಂದು ಹೇಳುತ್ತಾರೆ. ಶ್ರೀ ರಾಮನು ವನವಾಸದಿಂದ ಹಿಂದಿರುಗಿದ್ದೂ ಅಯೋಧ್ಯೆಯ ಜನರು ರಾವಣವಧೆಯ ಕೊಂಡಾಟದ ಉತ್ಸವ ಆರಂಭಿಸಿದ್ದೂ ಈ ದಿನದಂದೇ ಎಂದೂ ಹೇಳುತ್ತಾರೆ.
ಸಾಮಾನ್ಯವಾಗಿ ಮಾರ್ಚ್ -ಏಪ್ರಿಲ್ ತಿಂಗಳುಗಳಲ್ಲಿ ಈ ಹಬ್ಬವು ಬರುವುದಾಗಿದ್ದು ಆಗ ವಸಂತ ಋತುವಿನ ಆರಂಭವಾಗುತ್ತದೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣನು,' ಋತೂನಾಂ ಕುಸುಮಾಕರ:' ( ಋತುಗಳಲ್ಲಿ ನಾನು ವಸಂತನಾಗಿದ್ದೇನೆ) ಎಂದು ಹೇಳುವಂತೆ, ವಸಂತವು ಋತುಗಳ ರಾಜನೆಂದು ಪ್ರಸಿದ್ಧವಾಗಿದೆ! ಈ ಕಾಲದಲ್ಲಿ ನಿಧಾನವಾಗಿ ಸೂರ್ಯನ ಶಾಖ ಹೆಚ್ಚಿ, ಎಲ್ಲೆಲ್ಲೂ ಉತ್ಸಾಹ, ಲವಲವಿಕೆಗಳನ್ನು ತರುತ್ತದೆ! ಯುಗಾದಿಯ ದಿನ, ವಿಜಯದಶಮಿ, ಬಲಿಪಾಡ್ಯಮಿ, ಮತ್ತು ಅಕ್ಷಯ ತೃತೀಯಾಗಳು ಸೇರಿದಂತೆ , ಹಿಂದೂಗಳಿಗೆ ಪವಿತ್ರ ಮೂರೂವರೆ ದಿನಗಳಲ್ಲಿ ಒಂದಾಗಿದೆ. ಈ ದಿನ, ಶಾಲಿವಾಹನ ರಾಜನು ಪಟ್ಟಾಭಿಷಿಕ್ತನಾಗಿ ಶಾಲಿವಾಹನ ಶಕೆಯೂ ಆರಂಭವಾಯಿತೆಂದು ಹೇಳುತ್ತಾರೆ. ಈ ದಿನದಂದು ಆರಂಭವಾಗಿ, ದುರ್ಗಾದೇವಿಯ ಪೂಜೆ ಮಾಡುತ್ತಾ ಒಂಬತ್ತು ದಿನಗಳ ಕಾಲ ವಸಂತ ನವರಾತ್ರಿ ಎಂದು ಆಚರಿಸಲಾಗುತ್ತದೆ. ಶರತ್ಕಾಲದಲ್ಲಿ ಬರುವ ಬರುವ ಇನ್ನೊಂದು ನವರಾತ್ರಿಯಾದ ಶರನ್ನವರಾತ್ರಿ ಅಥವಾ ದಸರಾ ಸೇರಿ, ಎರಡು ನವರಾತ್ರಿಗಳಿವೆ. ಈಗ ಶರನ್ನವರಾತ್ರಿ ಪ್ರಸಿದ್ಧವಾಗಿರುವಷ್ಟು ವಸಂತನವರಾತ್ರಿ ಪ್ರಸಿದ್ಧವಾಗಿಲ್ಲದಿದ್ದರೂ ಇನ್ನೂ ಆಚರಣೆಯಲ್ಲಿದೆ. ಹಿಂದೆ ಇದು ಬಹಳ ಜನಪ್ರಿಯವಾಗಿದ್ದಿರಬಹುದು. ಚೈತ್ರ ಶುಕ್ಲದ ಪ್ರಥಮ ದಿವಸ, ಪ್ರಾಚೀನ ಭಾರತದಲ್ಲಿ ಇಂದ್ರಧ್ವಜೋತ್ಸವ ಎಂಬ ದೊಡ್ಡ ಹಬ್ಬವಾಗಿ ಆಚರಿಸಲಾಗುತ್ತಿತ್ತೆಂದು ಧರ್ಮನಿಬಂಧಗಳಿಂದ ತಿಳಿದುಬರುತ್ತದೆ. ಇದು ಶರತ್ಕಾಲದಲ್ಲೂ ಆಚರಣೆಯಲ್ಲಿತ್ತೆಂದು ಭೋಜರಾಜನ ಸಮರಾಂಗಣಸೂತ್ರಧಾರ, ಮತ್ತು ಇತರ ಅನೇಕ ಗ್ರಂಥಗಳಿಂದ ತಿಳಿದುಬರುತ್ತದೆ. ಉಪರಿಚರ ವಸುವೆಂಬ ರಾಜನು ಇಂದ್ರನನ್ನು ಮೆಚ್ಚಿಸಿ ಅವನಿಂದ ಒಂದು ವಿಮಾನವನ್ನೂ ಅವನನ್ನು ಸಂಕೇತಿಸುವ ಒಂದು ಕೋಲನ್ನೂ ಪಡೆದು, ಆ ಕೋಲನ್ನು ಪೂಜಿಸುವ ಮೂಲಕ ಈ ಹಬ್ಬವನ್ನು ಆರಂಭಿಸಿದ ಎಂದು ಮಹಾಭಾರತ ಹೇಳುತ್ತದೆ. ಪ್ರಾಚೀನ ಭಾರತೀಯರು ಬಿದಿರಿನ ಕೋಲನ್ನು ನೆಟ್ಟು ಬಾವುಟ ಹಾರಿಸಿ ಇಂದ್ರನನ್ನು ಪೂಜಿಸಿ ಹೋಮ ಮಾಡಿ ರಾತ್ರಿಯೆಲ್ಲಾ ಸಂಗೀತ,ನರ್ತನಗಳಿಂದ ಉತ್ಸವ ಆಚರಿಸುತ್ತಿದ್ದರೆಂದು ತಿಳಿದುಬರುತ್ತದೆ. ಇದೇ ಈಗ ಮಹಾರಾಷ್ಟ್ರದಲ್ಲಿ ಗುಢಿಪಡ್ವದ ರೀತಿಯಲ್ಲಿ ಆಚರಿಸಲಾಗುತ್ತಿದೆ.
ಈ ಸಮಯದಲ್ಲಿ ವಸಂತೋತ್ಸವವೆಂದು ವಸಂತದ ಆಗಮನವನ್ನು ಸಂಭ್ರಮಿಸಿ ಆಚರಿಸುವ ಹಲವಾರು ಕ್ರೀಡೋತ್ಸವಗಳಿದ್ದವೆಂದು ಭೋಜರಾಜನ ಶೃಂಗಾರಪ್ರಕಾಶ, ಸರಸ್ವತೀಕಂಠಾಭರಣ, ವಾತ್ಸ್ಯಾಯನನ ಕಾಮಸೂತ್ರ, ಮೊದಲಾದ ಗ್ರಂಥಗಳಿಂದ ತಿಳಿದುಬರುತ್ತದೆ. ಅಂಥ ಕೆಲವೆಂದರೆ, ಅಶೋಕಾಷ್ಟಮಿ ( ಅಶೋಕ ವೃಕ್ಷವನ್ನು ಪ್ರಾರ್ಥಿಸಿ ಅದರ ಎಂಟು ಮೊಗ್ಗುಗಳನ್ನು ಸೇವಿಸುವುದು), ಅಷ್ಟಮೀಚಂದ್ರಿಕಾ( ಪ್ರೇಮದಲ್ಲಿರುವ ಸ್ತ್ರೀಯರು ಚಂದ್ರನನ್ನು ಪೂಜಿಸುವುದು), ಸುವಸಂತಕ ( ವಸಂತದ ಆಗಮನವನ್ನು ಸಂಗೀತ, ಚರ್ಚರೀ ತಾಳಗೀತನೃತ್ಯಗಳಿಂದ ಸ್ವಾಗತಿಸುವ ವಸಂತೋತ್ಸವ), ಸಹಕಾರಭಂಜಿಕೋತ್ಸವ ( ತಾಳಕ್ಕೆ ತಕ್ಕಂತೆ ಕುಣಿಯುತ್ತಾ ಮಾವಿನ ಮರಗಳಿಂದ ಹೊಸ ಹಣ್ಣು, ಕಾಯಿಗಳನ್ನು ಕೀಳುವ ಉತ್ಸವ), ಮದನತ್ರಯೋದಶಿ ( ಮನ್ಮಥನ ಪೂಜೆ,ಮದನೋತ್ಸವ), ಏಕಶಾಲ್ಮಲೀ ( ಸ್ತ್ರೀ ಪುರುಷರು ಒಟ್ಟಾಗಿ ಶಾಲ್ಮಲೀ ವೃಕ್ಷದ ಬಳಿ ನೆರೆದು ಹೂ ಮುಡಿದು ಆಡುವುದು), ಅಶೋಕೋತ್ತಂಸಿಕಾ ( ಅಶೋಕ ವೃಕ್ಷ ಹೂ ಬಿಡಲೆಂದು ಸುಂದರ ಸ್ತ್ರೀಯರು ವಸ್ತ್ರಾಲಂಕಾರಭೂಷಿತರಾಗಿ ಕಾಲಿಗೆ ಅಲಕ್ತಕ ರಸ ಸವರಿಕೊಂಡು ಅದಕ್ಕೆ ಒದೆಯುವುದು - ಇದಕ್ಕೆ ದೋಹದ ಕ್ರಿಯೆ ಎನ್ನುತ್ತಾರೆ; ಮರಗಳಿಗೆ ಇಂಥ ಬಯಕೆ ಇರುತ್ತದೆ ಎಂಬ ನಂಬಿಕೆ), ಚೂತಭಂಜಿಕಾ ( ಮಾವಿನ ಹೊಸ ಹೂಗಳನ್ನು ವಸಂತದ ಆರಂಭದಲ್ಲಿ ಯುವತಿಯರು ಆರಿಸಿ, ಮನ್ಮಥನಿಗೆ ಬಾಣಗಳಂತೆ ಅರ್ಪಿಸುವುದು), ಆಂದೋಲನ ಕ್ರೀಡಾ ( ಉಯ್ಯಾಲೆಯಾಟ), ಪುಷ್ಪವಾಚಯಿಕಾ ಅಥವಾ ವಕುಲಪುಷ್ಪವಾಚಯಿಕಾ ( ಸುಂದರ ಸ್ತ್ರೀಯು ಮಧುಪಾನ ಮಾಡಿ ಅದರ ಅರ್ಧವನ್ನು ಬಕುಳ ವೃಕ್ಷಕ್ಕೆ ಉಗುಳಿ ಅದರ ದೋಹದ ಕ್ರಿಯೆ ನಡೆಸುವುದು ಹಾಗೂ ಅದರ ಹೂಗಳನ್ನು ಸಂಗ್ರಹಿಸುವುದು), ಯವ ಚತುರ್ಥಿ ( ಯವೆಯ ಕಡ್ಡಿ, ಹೂಗಳನ್ನು ಉಪವನಗಳಲ್ಲಿ ಹಾಸಿ ಅವುಗಳ ಮೇಲೆ ಸ್ತ್ರೀಯರು ಉರುಳುವುದು), ಉದಕಕ್ಷ್ವೇಡಿಕಾ ( ಪರಸ್ಪರರ ಮೇಲೆ ಸ್ತ್ರೀ ಪುರುಷರು ಬಣ್ಣದ ನೀರನ್ನು ಎರಚುವುದು - ಇದೇ ಹೋಳಿಯಲ್ಲೂ ಸೇರಿಕೊಂಡಿದೆ), ಚೂತಲತಿಕಾ ಅಥವಾ ಆಮ್ರಲತಿಕಾ ( ಸ್ತ್ರೀಯರು ಮಾವಿನ ಕಡ್ಡಿಗಳನ್ನು ಹಿಡಿದು ತಮ್ಮ ಪ್ರೇಮಿಗಳನ್ನು ಗುರುತಿಸಿ ಖುಷಿ ಪಡುವುದು), ಪಾಂಚಾಲಾನುಯಾನ ( ಬೊಂಬೆಗಳ ಮೆರವಣಿಗೆ, ಉತ್ಸವ), ಈ ಮೊದಲಾದ ಆಚರಣೆಗಳು.
ಇದನ್ನು ನೋಡಿದರೆ ಪ್ರಾಚೀನ ಭಾರತೀಯರು ಎಂದೂ ಕೇವಲ ಗೊಡ್ಡು ಧಾರ್ಮಿಕರಾಗಿರದೇ ಜೀವನದ ಎಲ್ಲಾ ಮುಖಗಳಿಗೂ ಗೌರವಾದರಗಳನ್ನು ತೋರುತ್ತಿದ್ದರೆಂದು ತಿಳಿಯುತ್ತದೆ. ಉತ್ಸವಪ್ರಿಯತೆ, ಜೀವನೋಲ್ಲಾಸಗಳಿಗೆ ಅವರು ಬಹಳ ಮಹತ್ವ ಕೊಡುತ್ತಿದ್ದರು. ಹಾಗಾಗಿಯೇ ಕಾಳಿದಾಸನು, ' ಉತ್ಸವಪ್ರಿಯಾ ಖಲು ಮನುಷ್ಯಾ:' ಎಂದು ಹೇಳಿದ್ದಾನೆ.
ಈಗಲೂ ವಸಂತಾರಂಭವಾದ, ವರ್ಷಾರಂಭವಾದ ಯುಗಾದಿ, ಅತ್ಯಂತ ಸಂಭ್ರಮದ ಹಬ್ಬವಾಗಿದೆ. ಸೃಷ್ಟಿಕರ್ತ ಬ್ರಹ್ಮನ ಹಾಗೂ ವರ್ಷಾಧಿಪತಿ ದೇವತೆಯ ಪೂಜೆ, ಪಂಚಾಂಗ ಶ್ರವಣ ಹಾಗೂ ಕಾಲದ ವಿಭಾಗಗಳ ಮತ್ತು ನಕ್ಷತ್ರಗಳ ಪೂಜೆ, ಮತ್ತು ಕೊನೆಯಲ್ಲಿ ವಿಷ್ಣುವಿನ ಪೂಜೆ, ಇವು ಹಬ್ಬದ ಪೂಜಾಭಾಗದ ಆಚರಣೆಗಳು. ವರ್ಷಾಧಿಪತಿ ದೇವತೆಯೆಂದರೆ, ಯುಗಾದಿಯು ಯಾವ ವಾರ ಬರುವುದೋ, ಆ ವಾರದ ಅಧಿಪತಿ ಆ ವರ್ಷದ ರಾಜ ಅಥವಾ ಅಧಿಪತಿಯಾಗಿರುತ್ತಾನೆ. ಉದಾಹರಣೆಗೆ, ಯುಗಾದಿ ಸೋಮವಾರ ಬಂದರೆ, ಚಂದ್ರ, ಹಾಗೂ ಗುರುವಾರ ಬಂದರೆ ಗುರು, ಹೀಗೆ.
ಅಭ್ಯಂಜನ ಸ್ನಾನ, ಹೊಸ ವಸ್ತ್ರಧಾರಣೆ, ತಳಿರು ತೋರಣಗಳಿಂದ, ಮುಖ್ಯವಾಗಿ ಮಾವಿನ ಎಲೆಗಳನ್ನು ಬಾಗಿಲಿಗೆ ಕಟ್ಟಿ ಮನೆಯನ್ನು ಅಲಂಕರಿಸುವುದು, ಮೇಲೆ ಹೇಳಿದ ಪೂಜೆ, ಮತ್ತು ಹಿಂದಿನ ವರ್ಷ ತಿಳಿದೋ ತಿಳಿಯದೆಯೋ ಮಾಡಿದ ತಪ್ಪುಗಳಿಗೆ ಕ್ಷಮೆಯಾಚಿಸಿ ಪ್ರಾರ್ಥಿಸುವುದು, ಮತ್ತು ಬೇವಿನ ಸೊಪ್ಪು ಮತ್ತು ಬೆಲ್ಲದ ಮಿಶ್ರಣವನ್ನು ನೈವೇದ್ಯ ಮಾಡಿ ಸೇವಿಸುವುದು, ಪುಷ್ಕಳ ಭೋಜನ, ಆಳುಗಳಿಗೂ ಆಶ್ರಿತರಿಗೂ ಉಡುಗೊರೆಗಳನ್ನು ಕೊಡುವುದು, ಇವು ಹಬ್ಬದ ಮುಖ್ಯ ಆಚರಣೆಗಳು. ಇವುಗಳಲ್ಲಿ ಬೇವು -ಬೆಲ್ಲ ಮಿಶ್ರಣ ಸೇವಿಸುವುದು ಅತ್ಯಂತ ಪ್ರಮುಖವಾಗಿದೆ. ಬೇವಿನಲ್ಲಿ ಆರೋಗ್ಯಕರ ಅಂಶಗಳಿದ್ದು, ಈ ಮಿಶ್ರಣವನ್ನು ಸೇವಿಸುವಾಗ ಈ ಒಂದು ಶ್ಲೋಕವನ್ನೂ ಪಡಿಸಲಾಗುತ್ತದೆ -
ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯ ಚ /
ಸರ್ವಾರಿಷ್ಟವಿನಾಶಾಯ ನಿಂಬಕಂ ದಲಭಕ್ಷಣಮ್ //
' ನೂರು ವರ್ಷಗಳ ಆಯುಷ್ಯಕ್ಕಾಗಿ, ವಜ್ರದಂತೆ ಗಟ್ಟಿಯಾದ ದೇಹಕ್ಕಾಗಿ, ಸರ್ವಸಂಪತ್ತುಗಳನ್ನೂ ಪಡೆಯುವುದಕ್ಕಾಗಿ, ಸಕಲ ಅನಿಷ್ಟಗಳ ವಿನಾಶಕ್ಕಾಗಿ, ನಿಂಬಕದಳದ ( ಬೇವಿನೆಲೆಯ) ಭಕ್ಷಣ ಮಾಡಬೇಕು.'
ಬೇವಿನ ಎಲೆ ಕಹಿಯಾಗಿರುವುದರಿಂದ ಇದರೊಂದಿಗೆ ಬೆಲ್ಲವನ್ನು ಸೇರಿಸಿ ತಿನ್ನಲಾಗುತ್ತದೆ. ಜೀವನದಲ್ಲಿ ಕಷ್ಟ,ಸುಖಗಳೆರಡೂ ಇದ್ದು ಅವುಗಳನ್ನು ಸಮವಾಗಿ ಸ್ವೀಕರಿಸಬೇಕೆಂಬ ತತ್ತ್ವದ ಸಂಕೇತವೇ ಈ ಬೇವು,ಬೆಲ್ಲ ಮಿಶ್ರಣದ ಸೇವನೆ ಎಂದು ಹೇಳಲಾಗಿದೆ. ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ಹೇಳುವ,' ಸುಖೇ ದುಃಖೇ ಸಮಂ ಕೃತ್ವಾ ಲಾಭಾಲಾಭೌ ಜಯಾಜಯೌ ( ಸುಖದುಃಖಗಳನ್ನು, ಲಾಭ ನಷ್ಟಗಳನ್ನು, ಜಯ- ಅಪಜಯಗಳನ್ನು ಸಮದೃಷ್ಟಿಯಿಂದ ನೋಡಬೇಕು)' ಎಂಬ ಮಾತನ್ನು ಇಲ್ಲಿ ಸ್ಮರಿಸಬಹುದು.
ಯುಗಾದಿಯ ಭೋಜನದ ಸೊಗಸೇ ಸೊಗಸು! ಈ ಹಬ್ಬದಲ್ಲಿ ಮುಖ್ಯವಾದ ಸಿಹಿತಿಂಡಿಯೆಂದರೆ ಹೋಳಿಗೆ ( ಬೇಳೆ ಇಲ್ಲವೇ ಕಾಯಿ ಹೋಳಿಗೆ) ಮತ್ತು ಪಾಯಸಗಳು! ಆಂಧ್ರಪ್ರದೇಶದಲ್ಲಿ ಹೋಳಿಗೆಯನ್ನೇ ಪೂರಣ್ ಪೋಳಿ ಎಂದು ಮಾಡುತ್ತಾರೆ. ಮಾವು ಮತ್ತು ಹಲಸಿನ ಹಣ್ಣಿನ ಕಾಲವಿದಾದ್ದರಿಂದ, ಮಾವಿನಕಾಯಿ ಚಟ್ನಿ ಮತ್ತು ಚಿತ್ರಾನ್ನ, ಮಾವಿನ ಹಣ್ಣಿನ ರಸಾಯನ, ಮತ್ತು ಸೀಕರಣೆ, ಹಾಗೂ ಮಲೆನಾಡಿನ ಕಡೆ, ಹಲಸಿನ ಹಣ್ಣಿನ ಕಡುಬು ಹಾಗೂ ಪಾಯಸ ಕೂಡಾ ಸಾಮಾನ್ಯ. ಯುಗಾದಿಯ ಮರುದಿನ, ಹೊಸತೊಡಕು ಅಥವಾ ವರ್ಷತೊಡಕು ಎಂದು ಆಚರಿಸುತ್ತಾ, ಮಾಂಸಾಹಾರಿಗಳು ಮಾಂಸದ ಸೇವನೆ ಮಾಡುತ್ತಾರೆ. ಇದು ಹೊಸತೊಡಗು ಅಥವಾ ವರ್ಷತೊಡಗು ಎಂಬುದರ ಅಪಭ್ರಂಶ. ಹೊಸವರ್ಷದಲ್ಲಿ ತೊಡಗು ಎಂದು ಇದರ ಅರ್ಥವಷ್ಟೇ!
ಚಾಂದ್ರಮಾನ ಯುಗಾದಿಯನ್ನು ವರ್ಷಾರಂಭದ ದಿನವನ್ನಾಗಿ ಕರ್ನಾಟಕ, ಆಂಧ್ರಪ್ರದೇಶ, ಮತ್ತು ಮಹಾರಾಷ್ಟ್ರಗಳಲ್ಲಿ ಆಚರಿಸಲಾಗುತ್ತದೆ. ಆಗಲೇ ಹೇಳಿದಂತೆ, ಮಹಾರಾಷ್ಟ್ರದಲ್ಲಿ ಯುಗಾದಿಯನ್ನು ಗುಢಿಪಡ್ವ ಎಂದು ಆಚರಿಸುತ್ತಾರೆ. ಅಂದು ಬೆಳಿಗ್ಗೆ, ಒಂದು ಉದ್ದನೆಯ ಬಿದಿರಿನ ಬೊಂಬನ್ನು ರೇಷ್ಮೆ ವಸ್ತ್ರದಿಂದ ಅಲಂಕರಿಸಿ, ಅದರ ಮೇಲೆ ಬೆಳ್ಳಿ ಅಥವಾ ತಾಮ್ರದ ಪಾತ್ರೆಯೊಂದನ್ನಿಟ್ಟು ಮಿಠಾಯಿಗಳ ಮತ್ತು ಬೇವಿನೆಲೆಗಳ ಮಾಲೆಯನ್ನು ಅದರ ಕಂಠಕ್ಕೇರಿಸಿ ಪೂಜಿಸಿ, ಮನೆಯ ಮಾಳಿಗೆಯ ಮೇಲೆ ನೆಡುತ್ತಾರೆ. ಇದೇ ಗುಢಿ. ಸೂರ್ಯಾಸ್ತದ ನಂತರ, ಅದನ್ನು ಕೆಳಗಿಳಿಸಿ, ಮನೆಯವರೆಲ್ಲರೂ ಬೇವಿನ ಎಲೆಗಳನ್ನೂ ಮಿಠಾಯಿಗಳನ್ನೂ ಸೇವಿಸುತ್ತಾರೆ. ಪಡ್ವ ಅಥವಾ ಪ್ರತಿಪದ್ ( ಮೊದಲ) ದಿನ, ಗುಢಿಯನ್ನು ನೆಡುವುದರಿಂದ ಇದನ್ನು ಗುಢಿಪಡ್ವ ಎನ್ನುತ್ತಾರೆ. ಅಂದು ಶ್ರೀರಾಮನು ವಾಲಿಯನ್ನು ಕೊಂದ ದಿನವೆಂದೂ ಅದರ ಸ್ಮರಣಾರ್ಥವಾಗಿ ಧ್ವಜಾರೋಹಣ ಮಾಡುವ ಆಚರಣೆಯಿದೆಂದೂ ಹೇಳುತ್ತಾರೆ. ಆದರೆ ಇದು ಪ್ರಾಚೀನ ಭಾರತದ ಇಂದ್ರಧ್ವಜೋತ್ಸವದ ಮಾರ್ಪಾಡೇ ಇರಬಹುದು.
ಹೊಸವರ್ಷದ ಆರಂಭ, ಭಾರತದ ಬೇರೆ ಬೇರೆ ಕಡೆ ಬೇರೆ ಬೇರೆ ದಿನಗಳಾಗಿರುತ್ತದೆ. ಸೌರಮಾನ ಪಂಚಾಂವನ್ನು ಅನುಸರಿಸುವ ತಮಿಳುನಾಡು ಮತ್ತು ಕೇರಳದ ಜನರಿಗೆ, ಸೌರಮಾನ ಯುಗಾದಿ ವರ್ಷಾರಂಭದ ದಿನವಾಗಿರುತ್ತದೆ. ಅದು, ಚಿತ್ತಿರೈ ಮಾಸದ ಮೊದಲ ದಿನವಾಗಿದ್ದು, ಮಧ್ಯ ಏಪ್ರಿಲ್ ನಲ್ಲಿ ಬರುತ್ತದೆ. ಕೇರಳದಲ್ಲಿ ಇದು ವಿಷು ಎಂಬುದಾಗಿ ಆಚರಿಸಲ್ಪಡುತ್ತದೆ. ಕೇರಳಿಗರಿಗೆ ಇದು ಬಹಳ ಸಂಭ್ರಮದ ಹಬ್ಬವಾಗಿರುತ್ತದೆ. ಬಂಗಾಳದಲ್ಲಿ ವೈಶಾಖ ಮಾಸದ ಮೊದಲ ದಿನವಾದ ಪಹಲಾ ವೈಶಾಖ್ ಅಥವಾ ವೈಶಾಖೀ ಹಬ್ಬ, ವರ್ಷಾರಂಭದ ದಿನ. ಸಿಖ್ಖರಿಗೂ ಇದೇ ವರ್ಷಾರಂಭದ ದಿನವಾಗಿರುತ್ತದೆ. ಗುಜರಾತಿನಲ್ಲಿ ವರ್ಷಾರಂಭವು, ಕಾರ್ತಿಕ ಮಾಸದ ಶುಕ್ಲ ಪ್ರತಿಪದ್ ದಿನದಂದು, ಅಂದರೆ ಬಲಿಪಾಡ್ಯಮಿಯಂದು ಇರುತ್ತದೆ. ಅಸ್ಸಾಂನಲ್ಲಿ ವೈಶಾಖ ಮಾಸದಲ್ಲಿ ಹೊಸ ವರ್ಷವನ್ನು 'ಬಿಹು' ಎಂದು ಆಚರಿಸುತ್ತಾರೆ.
ಹೀಗೆ ಭಾರತೀಯರಾದ ನಮಗೆ, ಯುಗಾದಿ ಹಬ್ಬವು ಹೊಸ ವರ್ಷದ ಆರಂಭದೊಂದಿಗೆ, ಉತ್ಸಾಹ, ಸಂಭ್ರಮಗಳ ದಿನವಾಗಿದ್ದು ವೈವಿಧ್ಯಮಯವಾದ ಆಚರಣೆಗಳಿಂದ ಕೂಡಿರುತ್ತದೆ.
ಡಾ.ಬಿ.ಆರ್.ಸುಹಾಸ್
ಬೆಂಗಳೂರು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ