ವಚನರಚನೈ: ಕೃತಂ ತವ ಕಿತವ ಪ್ರಣಿಪಾತಮಾತ್ರಸಾಧ್ಯಾಯಾ: /
ಅಸ್ಯಾ ಮಾನಕದಲ್ಯಾ: ಫಲಾವಸಾನ: ಪರೀಪಾಕ: //.
ಕನ್ನಡ ಅನುವಾದ
ಸಖಿಯು ನಾಯಕನಿಗೆ ಹೇಳುತ್ತಾಳೆ,"ಎಲೈ ಶಠನೇ! ಈ ನಿನ್ನ ಚಮತ್ಕಾರದ ಮಾತುಗಳನ್ನು ಹೇಳಿಯಾಯಿತು! ಅವನ್ನು ಸಾಕುಮಾಡು! ಇವಳಿಗೆ ಈಗ ಕಾಲಿಗೆ ಬೀಳುವುದರಿಂದಷ್ಟೇ ಕೋಪವು ಶಾಂತವಾಗುವುದು! ಇವಳ ಕೋಪವೆಂಬ ಬಾಳೇಗಿಡವು ನಿನ್ನ ಪ್ರಣಿಪಾತವೆಂಬ ಪರಿಪಕ್ವ ಫಲದಿಂದ ತಾನಾಗಿಯೇ ನಷ್ಟವಾಗುತ್ತದೆ!"
ಇಲ್ಲಿ ನಾಯಕನು ನಾಯಕಿಗೆ ಏನೋ ಮೋಸ ಮಾಡಿ ಕೋಪ ಬರುವಂತೆ ಮಾಡಿದ್ದಾನೆ. ಪ್ರಾಯಶಃ ಅವನು ತನ್ನ ಇನ್ನೊಬ್ಬ ಪ್ರಿಯೆಯ ಬಳಿ ಹೋಗಿರುವುದರಿಂದ ಅವಳಿಗೆ ಮೋಸ ಮಾಡಿದಂತಾಗಿ ಅವಳಿಗೆ ಕೋಪ ಬಂದಿದೆ. ಶೃಂಗಾರ ಸಾಹಿತ್ಯದಲ್ಲಿ ಇಂಥ ನಾಯಕನಿಗೆ ಶಠ ನಾಯಕ ಎನ್ನುತ್ತಾರೆ. ಇಂಥ ಶಠನಾಯಕನು ಅನಂತರ ತನ್ನ ಪ್ರಿಯತಮೆಯನ್ನು ಸಮಾಧಾನಪಡಿಸಲು ಬಹಳ ಪ್ರಯತ್ನಿಸಿದ್ದಾನೆ. ಚಮತ್ಕಾರದ ಮಾತುಗಳನ್ನಾಡಿದ್ದಾನೆ. ಆದರೆ ಅವಳು ಏನು ಮಾಡಿದರೂ ಸಮಾಧಾನಗೊಳ್ಳುತ್ತಿಲ್ಲ. ಆಗ ಅವಳ ಸಖಿಯು ಅವನ ಬಳಿ ಬಂದು ಇಂಥ ಚಮತ್ಕಾರದ ಮಾತುಗಳನ್ನು ಹೇಳಿಯಾಗಿದೆ, ಈಗ ಸಾಕು ಮಾಡು ಎನ್ನುತ್ತಾ ಅವಳ ಕಾಲಿಗೆ ಬೀಳಲು ಹೇಳುತ್ತಾಳೆ ಹಾಗೂ ಅದೊಂದರಿಂದಲೇ ಅವಳ ಕೋಪ ಶಮನವಾಗುವುದೆಂದು ಹೇಳುತ್ತಾಳೆ. ನಾಯಕಿಯ ಕೋಪವನ್ನು ಅವಳು ಒಂದು ಬಾಳೇಗಿಡಕ್ಕೆ ಹೋಲಿಸುತ್ತಾಳೆ. ಬಾಳೇಗಿಡವು ಪರಿಪಕ್ವವಾದ ಫಲ ಬಿಟ್ಟ ಮೇಲೆ ತಾನಾಗಿಯೇ ನಷ್ಟವಾಗಿಹೋಗುತ್ತದೆ. ಹಾಗೆಯೇ ನಾಯಕನ ಪ್ರಣಿಪಾತವೆಂಬ ( ಕಾಲಿಗೆ ಬೀಳುವುದು) ಪರಿಪಕ್ವವಾದ ಫಲವುಂಟಾದ ಬಳಿಕ, ನಾಯಕಿಯ ಬಾಳೇಗಿಡವೆಂಬ ಕೋಪವು ತಾನಾಗಿಯೇ ನಷ್ಟವಾಗುವುದೆಂದು ಹೇಳುತ್ತಾಳೆ. ಪ್ರಾಚೀನ ಶೃಂಗಾರ ಸಾಹಿತ್ಯದಲ್ಲಿ ನಾಯಕನು ನಾಯಕಿಯ ಕಾಲಿಗೆ ಬೀಳುವ ಉದಾಹರಣೆಗಳು ಬಹಳ ಇವೆ.