ನಮ್ಮ ಕರ್ನಾಟಕದ ಪ್ರಾಚೀನ ದೇವಾಲಯಗಳು ಶಿಲ್ಪಕಲಾಸೌಂದರ್ಯಕ್ಕೆ ಹೆಸರಾಗಿವೆ. ಅದರಲ್ಲೂ ಕರ್ನಾಟಕದ ಹಾಸನ ಜಿಲ್ಲೆ ಹೊಯ್ಸಳರ ಇಂಥ ಅನೇಕ ಶಿಲ್ಪಕಲಾದೇವಾಲಯಗಳಿಗೆ ವಿಶೇಷವಾಗಿ ಪ್ರಸಿದ್ಧವಾಗಿದೆ. ಹಾಸನದ ಬೇಲೂರಿನ ಚೆನ್ನಕೇಶವ ದೇವಾಲಯ ಹಾಗೂ ಹಳೇಬೀಡಿನ ಹೊಯ್ಸಳೇಶ್ವರ, ಶಾಂತಲೇಶ್ವರ ದೇವಾಲಯಗಳನ್ನು ನೋಡದವರು ಬಹಳ ಕಡಿಮೆ ಎಂದರೆ ತಪ್ಪಾಗಲಾರದು. ಆದರೆ ಇಂಥ ಸುಪ್ರಸಿದ್ಧ ಸುಂದರ ದೇವಾಲಯಗಳ ಆಸುಪಾಸಿನಲ್ಲೇ ವನಸುಮದಂತೆ, ಮೋಡದ ಮರೆಯ ಚಂದ್ರನಂತೆ, ಕಂಡೂ ಕಾಣದಂತೆ ಒಂದೊಂದು ಅಪರೂಪದ ದೇವಾಲಯವಿರುತ್ತದೆ! ಅಂಥ ಒಂದು ಅಪರೂಪದ ದೇವಾಲಯವೇ ಹಳೇಬೀಡಿನ ಪ್ರದೇಶದಲ್ಲಿರುವ ಕೊಂಡಜ್ಜಿಯ ಶ್ರೀ ವರದರಾಜಸ್ವಾಮಿ ದೇವಾಲಯ.
ಕೊಂಡಜ್ಜಿ, ಹಾಸನದಿಂದ ಸುಮಾರು 178 ಕಿ.ಮೀ. ಉತ್ತರಕ್ಕಿರುವ ಪುಟ್ಟ ಹಳ್ಳಿ. ಇದು, ಸೀಗೇಗುಡ್ಡ, ಗರುಡನ ಗಿರಿ, ಮತ್ತು ಚಂದ್ರದ್ರೋಣ ಪರ್ವತಗಳ ನಡುವಿನ ಪ್ರಕೃತಿರಮ್ಯ ಪ್ರದೇಶದಲ್ಲಿದೆ. ಈ ಗ್ರಾಮದ ಒಂದು ತಾಣದಲ್ಲಿ ಶ್ರೀ ವರದರಾಜಸ್ವಾಮಿ ದೇವಾಲಯವಿದೆ. ದೇವಾಲಯದ ಕಟ್ಟಡ ಯಾವುದೇ ಆಕರ್ಷಣೆ ಹೊಂದಿಲ್ಲದೇ, ಗರ್ಭಗುಡಿಯ ಸುತ್ತಲೂ ಕಟ್ಟಿಸಲಾಗಿರುವ ಇತ್ತೀಚಿನ ಕಟ್ಟಡವಾಗಿದೆ. ಆದರೆ ಒಳಗೆ ಪ್ರವೇಶಿಸಿದರೆ, ನಿಬ್ಬೆರಗಾಗಿಸುವ ವರದರಾಜಸ್ವಾಮಿಯ ಅತ್ಯಂತ ಭವ್ಯ ಮೂರ್ತಿಯನ್ನು ಕಾಣಬಹುದು! ಹದಿನಾಲ್ಕರಿಂದ ಹದಿನೆಂಟು ಅಡಿ ಎತ್ತರದ ಕಪ್ಪು ಶಿಲೆಯ ನಿಂತ ಭಂಗಿಯ ವರಜರಾಜಸ್ವಾಮಿಯ ಈ ವಿಗ್ರಹ ಅತ್ಯಂತ ಮನೋಹರವಾಗಿದ್ದು, ಶಿಲ್ಪಿಯ ಕೌಶಲಕ್ಕೆ ಸಾಕ್ಷಿಯಾಗಿದೆ! ಮೂಲ ವಿಗ್ರಹವು ಹನ್ನೊಂದು ಅಡಿ ಎತ್ತರವಿದ್ದು ಅದನ್ನು ನಾಲ್ಕು ಅಡಿ ಎತ್ತರದ ಪಾಣಿಪೀಠದ ಮೇಲೆ ಪ್ರತಿಷ್ಠಾಪಿಸಲಾಗಿದೆ ಎಂದು ಇಲ್ಲಿರುವ ಫಲಕದ ಮೇಲಿದೆ. ಒಟ್ಟಿನಲ್ಲಿ ಇದು ಬಹಳ ಎತ್ತರವಾದ, ಬಹಳ ಭವ್ಯವಾದ ಮೂರ್ತಿ. ಶಂಖ,ಚಕ್ರ, ಗದೆಗಳನ್ನು ಮೂರು ಕೈಗಳಲ್ಲಿ ಹಿಡಿದು ಇನ್ನೊಂದು ಕೈಯಲ್ಲಿ ಅಭಯ ಮುದ್ರೆ ಧರಿಸಿರುವ ಭಗವಂತನ ಮೂರ್ತಿಯ ಸುಂದರ ಮುಗುಳ್ನಗೆ, ನೋಡುಗ ಭಕ್ತರನ್ನು ಸೆಳೆಯುವ ಚುಂಬಕ ಶಕ್ತಿಯನ್ನು ಹೊಂದಿದೆ! ವಿಗ್ರಹದ ವಕ್ಷಸ್ಥಳದ ಬಲಭಾಗದಲ್ಲಿ ಲಕ್ಷ್ಮೀದೇವಿಯ ಮೂರ್ತಿಯಿದೆ. ಹಿಂಭಾಗದಲ್ಲಿ ಪ್ರಭಾವಳಿ ಇಲ್ಲವಾದರೂ ಇದು ಅಪರೂಪದ ಕೆತ್ತನೆಯ ವಿಗ್ರಹವಾಗಿದೆ. ವಿಷ್ಣುವಿನ ಇಪ್ಪತ್ನಾಲ್ಕು ರೂಪಗಳಲ್ಲಿ ಜನಾರ್ದನ ಅಥವಾ ವರದರಾಜಸ್ವಾಮಿಯೂ ಒಂದೆಂದು ಹೇಳಲಾಗಿದೆ. ವಿಗ್ರಹದ ಕಿರೀಟ, ಯಜ್ಞೋಪವೀತ, ಮತ್ತು ವಸ್ತ್ರಾಭರಣಗಳ ಕುಸುರಿ ಕೆಲಸವೂ ಮನೋಜ್ಞವಾಗಿದೆ! ಇದು ಕ್ರಿ.ಶ. ಹದಿನಾಲ್ಕನೆಯ ಶತಮಾನದಲ್ಲಿ ನಿರ್ಮಾಣವಾದ ವಿಗ್ರಹವೆಂದು ಹೇಳಲಾಗಿದೆ.
ಈ ಮೂರ್ತಿಯ ಬಗ್ಗೆ ಇಲ್ಲಿನ ಸ್ಥಳೀಯರು ಒಂದು ಜನಪ್ರಿಯ ಕಥೆ ಹೇಳುತ್ತಾರೆ. ಅದರಂತೆ, ಹೊಯ್ಸಳರ ದೊರೆ ವಿಷ್ಣುವರ್ಧನನು ತನ್ನ ಪತ್ನಿ ಶಾಂತಲೆಯ ಕೋರಿಕೆಯಂತೆ, ಈ ವಿಗ್ರಹವನ್ನು ನಿರ್ಮಾಣ ಮಾಡಿಸಿ ಬೇಲೂರಿನ ಚೆನ್ನಕೇಶವ ದೇವಾಲಯದಲ್ಲಿ ಪ್ರತಿಷ್ಠಾಪಿಸಲು ಹೊರಟನಂತೆ. ಆದರೆ ವಿಗ್ರಹದ ಎತ್ತರ ಹೆಚ್ಚಾಗಿದ್ದು ಗರ್ಭಗುಡಿಯೊಳಗೆ ಹೋಗಲಾಗಲಿಲ್ಲ! ಹೀಗಾಗಿ, ವಿಗ್ರಹವನ್ನು ದೇವಾಲಯದ ಪ್ರಾಕಾರದಲ್ಲೇ ನಿಲ್ಲಿಸಲಾಯಿತು. ಆಗ ಒಬ್ಬ ಅಜ್ಜಿಯು ವಿಗ್ರಹವನ್ನು ಕೊಂಡು ತನ್ನ ಹಳ್ಳಿಯಲ್ಲಿ ಪ್ರತಿಷ್ಠಾಪಿಸಿ ಒಂದು ಪುಟ್ಟ ಗುಡಿಯನ್ನು ಕಟ್ಟಿಸಿದಳು. ಹೀಗೆ ಒಬ್ಬ ಅಜ್ಜಿಯು ವಿಗ್ರಹವನ್ನು ಕೊಂಡದ್ದರಿಂದ ಅವಳ ಈ ಹಳ್ಳಿಗೆ ಕೊಂಡಜ್ಜಿ ಎಂದು ಹೆಸರಾಯಿತು! ವರದರಾಜಸ್ವಾಮಿಯ ವಿಗ್ರಹವು ಬೇಲೂರಿನ ಚೆನ್ನಕೇಶವ ದೇವಾಲಯದ ಗರ್ಭಗುಡಿಯೊಳಗೆ ಹೋಗಲಾಗಲಿಲ್ಲವಾದ್ದರಿಂದ, ಈ ವಿಗ್ರಹಕ್ಕೆ ಅಲ್ಲಾಳನಾಥಸ್ವಾಮಿ ಎಂದು ಹೆಸರಾಯಿತು!
ಹೀಗೆ ಸ್ವಾರಸ್ಯಕರ ಕಥೆಯುಳ್ಳ ವರದರಾಜಸ್ವಾಮಿಯ ಅದ್ಭುತ ವಿಗ್ರಹವಿರುವ ಈ ದೇವಾಲಯ ನೋಡಲೇಬೇಕಾದುದಾಗಿದೆ. ಇಲ್ಲಿಗೆ ಬಸ್ ವ್ಯವಸ್ಥೆ ಅಷ್ಟಾಗಿ ಇಲ್ಲವಾದ್ದರಿಂದ, ಹಾಸನದಲ್ಲಿ ಇಳಿದುಕೊಂಡು, ಇಲ್ಲವೇ ಬೆಂಗಳೂರಿನಿಂದ ಒಂದು ದಿನದ ಪ್ರವಾಸವಾಗಿ ಖಾಸಗಿ ವಾಹನದಲ್ಲಿ ಹೋಗಿ ಈ ದೇವಾಲಯದೊಂದಿಗೆ ಇತರ ದೇವಾಲಯಗಳನ್ನು ನೋಡಿಕೊಂಡು ಬರಬಹುದು.
ಬಿ.ಆರ್.ಸುಹಾಸ್
ಬೆಂಗಳೂರು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ