ಸೋಮವಾರ, ಅಕ್ಟೋಬರ್ 5, 2026

ಸುಂದರೀಶತಕ -೯೮

ಅಂಕಗತಸ್ಯ ಕುಮುದಿನಿ ಮತ್ತೋ ಮಧುಪ: ಪ್ರಸುಪ್ತ ಇತಿ ಮನ್ಯೇ ।
ಸಂಭಾವಯತಿ ಸರೋಜಂ ಯನ್ನ ವಿನಿದ್ರಂ ಸಮಾಗತ್ಯ ।।

ಕನ್ನಡ ಅನುವಾದ 

   ನಾಯಕಿಯು ಕುಮುದಿನಿ ಅಥವಾ ನೈದಿಲೆ ಪುಷ್ಪಕ್ಕೆ ಹೇಳುತ್ತಾಳೆ, " ಎಲೈ ಕುಮುದಿನಿ! ನಿನ್ನ ತೊಡೆಯ ಮೇಲೆ ಮದಿಸಿದ ಜೇನ್ದುಂಬಿಯು ಚೆನ್ನಾಗಿ ನಿದ್ರಿಸಿದೆ ಎಂದು ಭಾವಿಸುತ್ತೇನೆ! ಏಕೆಂದರೆ ಬೆಳಗಾದಾಗ ಕಮಲಪುಷ್ಪವು ನಿದ್ರೆ ಬಿಟ್ಟು ಎದ್ದಾಗ ಅದು ಕಮಲದ ಬಳಿ ಹೋಗಿ ಅದನ್ನು ಆದರಿಸುವುದಿಲ್ಲ!" 
    ಇದೊಂದು ಸೊಗಸಾದ ಶೃಂಗಾರ ಅನ್ಯೋಕ್ತಿ.‌ ಅನ್ಯೋಕ್ತಿ ಎಂದರೆ, ಒಂದು ವಿಷಯದ ಬಗ್ಗೆ ಹೇಳಲು ಬೇರೊಂದು ವಿಷಯವನ್ನು ಹೇಳುವುದು. ಇಲ್ಲಿ ಬಳಸುವ ಅಲಂಕಾರ, ಅಪ್ರಸ್ತುತ ಪ್ರಶಂಸೆ. ಅಂದರೆ ಪ್ರಸ್ತುತವಲ್ಲದ ವಿಷಯವನ್ನು ಪ್ರಶಂಸಿಸುತ್ತಾ ಪ್ರಸ್ತುತವನ್ನು ಸೂಚಿಸುವುದು. ಈ ಶ್ಲೋಕದಲ್ಲಿ ನಾಯಕಿಯು ಕುಮುದಿನಿ ಅಥವಾ ನೈದಿಲೆ ಮತ್ತು ಜೇನ್ದುಂಬಿಯ ಮೂಲಕ ತನ್ನ ಮತ್ತು ತನ್ನ ಪ್ರಿಯತಮನ ವಿಷಯವನ್ನು ಹೇಳುತ್ತಿದ್ದಾಳೆ. ಕುಮುದಿನಿ ಅಥವಾ ನೈದಿಲೆ ಅಥವಾ ನೀಲ ಕಮಲ, ರಾತ್ರಿ ಚಂದ್ರೋದಯವಾದಾಗ ಅರಳುತ್ತದೆ. ಅದರಲ್ಲಿನ ರಸವನ್ನು ಚೆನ್ನಾಗಿ ಕುಡಿದು ಮದಿಸಿದ ಜೇನ್ದುಂಬಿಯು ಅದರಲ್ಲೇ ಸೇರಿಹೋಗಿ ಮಲಗಿದೆ ಎಂದು ನಾಯಕಿ ಭಾವಿಸುತ್ತಾಳೆ. ಅದಕ್ಕೆ ಅವಳು ಆಶ್ವಾಸನೆಯಿಂದ ಕೊಡುವ ಕಾರಣವೆಂದರೆ, ಬೆಳಿಗ್ಗೆ ಸೂರ್ಯೋದಯವಾದಾಗ ಕಮಲ ಪುಷ್ಪವು ಅರಳಲು, ಆ ಜೇನ್ದುಂಬಿ ಅದರ ಬಳಿ ಹೋಗಿ ಆದರಿಸುವುದಿಲ್ಲ ಎಂಬುದು. ಅಂದರೆ ಆ ಜೇನ್ದುಂಬಿಗೆ ಕುಮುದಿನಿಯಿಂದ ಸಾಕಷ್ಟು ತೃಪ್ತಿಯಾಗಿ ಕಮಲದ ಬಳಿ ಹೋಗುವುದಿಲ್ಲ. ಇಲ್ಲಿ ನಾಯಕಿಯು ಕುಮುದಿನಿ ಮತ್ತು ಜೇನ್ದುಂಬಿಯ ಮೂಲಕ ತನ್ನ ಮತ್ತು ತನ್ನ ಪ್ರಿಯತಮನ ವಿಷಯವನ್ನು ಹೇಳುತ್ತಿದ್ದಾಳೆ. ತನ್ನೊಂದಿಗೆ ಚೆನ್ನಾಗಿ ರತಿಕ್ರೀಡೆಯಾಡಿ ತೃಪ್ತನಾಗಿ ತನ್ನ ತೊಡೆಯ ಮೇಲೆ ಮಲಗಿ ನಿದ್ರಿಸುತ್ತಿರುವ ತನ್ನ ಪ್ರಿಯತಮನು ಬೇರೊಬ್ಬ ಸ್ತ್ರೀಯ ಬಳಿ ಹೋಗಿ ಅವಳನ್ನು ಕಾಮಿಸುವುದಿಲ್ಲ ಎಂದು ಕುಮುದಿನಿಗೆ ಹೇಳುವ ನೆಪದಲ್ಲಿ ತನಗೆ ತಾನೇ ಆಶ್ವಸಿಸಿಕೊಳ್ಳುತ್ತಿದ್ದಾಳೆ. ಒಬ್ಬಳ ಬಳಿ ಚೆನ್ನಾಗಿ ತೃಪ್ತಿ ದೊರೆತ ನಂತರ ಇನ್ನೊಬ್ಬಳೇಕೆ? 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ