ಮಂಗಳವಾರ, ಅಕ್ಟೋಬರ್ 20, 2026

ಸುಂದರೀಶತಕ -೧೦೪

ಸಂಸ್ಕೃತ ಮೂಲ 

ಆಶ್ಲಿಶ್ಯ ಜಿಘ್ರ ಪಿಬ ಮಧು ಮಧುಕರ ತೋಷೋದಯಾಯ ಮಾಲತ್ಯಾ: ।
ನಿರ್ದಯ ಸುಗಂಧಿವಲ್ಲೀರೇತಾಶ್ಚರಣೈ: ಕಿಮಾಕ್ಷಿಪಸಿ ।।

ಕನ್ನಡ ಅನುವಾದ 

     " ಎಲೈ ದುಂಬಿಯೇ! ಈ ಮಾಲತೀ ಲತೆಗೆ ಸಂತೋಷವುಂಟುಮಾಡಲು ಅವಳನ್ನು ಆಲಂಗಿಸು! ಆಘ್ರಾಣಿಸು! ಮಧುವನ್ನು ಹೀರು! ಆದರೆ ಎಲೈ ನಿರ್ದಯನೇ! ಈ ಸುಗಂಧಲತೆಗಳನ್ನೇಕೆ ನಿನ್ನ ಕಾಲುಗಳಡಿಯಲ್ಲಿ ತುಳಿಯುತ್ತಿರುವೆ?" 
   ಕವಿಯು ಇಲ್ಲಿ ಮತ್ತೊಂದು ಸುಂದರ ಅನ್ಯೋಕ್ತಿಯಿಂದ ಒಂದು ಶೃಂಗಾರ ಸನ್ನಿವೇಶವನ್ನು ವ್ಯಕ್ತಪಡಿಸುತ್ತಿದ್ದಾನೆ. ಕವಿಯೇ ದುಂಬಿಗೆ ಮಾಲತೀ ಲತೆಯನ್ನು ಸಂತೋಷಪಡಿಸಲು ಅವಳನ್ನು ಆಲಂಗಿಸಿ, ಆಘ್ರಾಣಿಸಿ, ಅವಳ ಮಧುವನ್ನು ಹೀರು ಎನ್ನುತ್ತಿದ್ದಾನೆ. ಆದರೆ ಹೀಗೆ ಮಾಡುವ ಬದಲು, ನಿರ್ದಯವಾಗಿ ಇತರ ಸುಗಂಧಲತೆಗಳನ್ನು ತುಳಿದು ಹಾಳುಮಾಡಬೇಡ ಎಂದೂ ಹೇಳುತ್ತಿದ್ದಾನೆ. ಇದನ್ನೇ ನಾಯಕನ ವಿಷಯದಲ್ಲಿ ಅನ್ವಯಿಸಿದರೆ, ನಾಯಕನು ಒಬ್ಬ ಹೆಣ್ಣನ್ನು ಮನಸಾರೆ ಪ್ರೇಮಿಸಬೇಕು, ಆದರೆ ಇತರ ಅನೇಕ ಹೆಣ್ಣುಗಳೊಂದಿಗೆ ಕಪಟಪ್ರೇಮದ ನಾಟಕವಾಡಿ ಅನಂತರ ಅವರನ್ನು ಬಿಟ್ಟು ಹೋಗಿ ಮೋಸ ಮಾಡಬಾರದೆಂದೂ ಅರ್ಥ ಬರುತ್ತದೆ. ಒಬ್ಬ ಹೆಣ್ಣನ್ನು  ನಿಜವಾಗಿ ಪ್ರೀತಿಸಿ ಅವಳೊಂದಿಗೆ ಚೆನ್ನಾಗಿ ಕಾಮಪೂರೈಕೆ ಮಾಡಿಕೊಂಡರೆ ತಪ್ಪಿಲ್ಲ. ಆದರೆ ಅನೇಕ ಹೆಣ್ಣುಗಳೊಂದಿಗೆ ತಿರುಗಾಡಿ ಯಾರನ್ನೂ ನಿಜವಾಗಿ ಪ್ರೀತಿಸದೆ ಮೋಸಮಾಡಬಾರದೆಂದು ಕವಿಯ ಅಭಿಪ್ರಾಯ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ