ಶುಕ್ರವಾರ, ಅಕ್ಟೋಬರ್ 23, 2026

ಸುಂದರೀಶತಕ -೧೦೫

ಸಂಸ್ಕೃತ ಮೂಲ 

ಈಶಸ್ಯಾಪ್ಯುಪಕುರುತೇ ಕ್ವಚಿತ್ಕಲಾವಾನ್ನಿಸರ್ಗಕುಟಿಲೋऽಪಿ ।
ಭ್ರೂರ್ಭವತಿ ಚಂದ್ರಲೇಖಾ ಸುಂದರಿ ಶಂಭೋಸ್ತೃತೀಯದೃಶ: ।।   

ಕನ್ನಡ ಅನುವಾದ 

    ನಾಯಕನು ನಾಯಕಿಗೆ ಹೇಳುತ್ತಾನೆ," ಹೇ ಸುಂದರಿ! ಸ್ವಭಾವತಃ ಕುಟಿಲನಾದರೂ ಕಲಾವಂತನಾದವನು ಈಶ್ವರನಿಗೂ, ಅಂದರೆ ದೊಡ್ಡ ಪ್ರಭುವಿಗೂ, ಉಪಯೋಗಕ್ಕೆ ಬರುತ್ತಾನೆ! ಚಂದ್ರನ ರೇಖೆ ಶಿವನ ಮೂರನೆಯ ಕಣ್ಣಿಗೆ ಹುಬ್ಬಾಗುತ್ತದೆ!" 
    ಇಲ್ಲಿ ನಾಯಕಿಗೆ ಕೋಪ ಬಂದು ತನ್ನ ಹುಬ್ಬುಗಳನ್ನು ಗಂಟಿಕ್ಕಿಕೊಂಡಿದ್ದಾಳೆ! ಆಗ ನಾಯಕನು ಅವಳ ಹುಬ್ಬುಗಳನ್ನು ವಿಷಯವಾಗಿಟ್ಟುಕೊಂಡು ಕೀಟಲೆ ಮಾಡುತ್ತಾನೆ! ಸ್ವಭಾವತಃ ಕುಟಿಲನಾದರೂ ಕಲಾವಂತನಾದವನು ಈಶ್ವರನಿಗೂ ಉಪಯೋಗಕ್ಕೆ ಬರುತ್ತಾನೆ ಎಂದು ಹೇಳುತ್ತಾನೆ. ಕುಟಿಲನೆಂದರೆ ವಕ್ರವೆಂದೂ ಅರ್ಥ ಬರುತ್ತದೆ ಹಾಗೂ ವಕ್ರ ಸ್ವಭಾವದವನೆಂದೂ ಅರ್ಥ ಬರುತ್ತದೆ. ಇಲ್ಲಿ ಒಂದು ಅರ್ಥ ಚಂದ್ರನ ಪರವಾದರೆ, ಇನ್ನೊಂದು ಅರ್ಥ, ನಾಯಕಿಯ ಕೋಪದ ವಕ್ರ ಸ್ವಭಾವದ ಹಾಗೂ ನೋಡಲೂ ವಕ್ರವಿರುವ ಹುಬ್ಬಿನ ಪರವಾಗುತ್ತದೆ. ಹಾಗೆಯೇ ಕಲಾವಂತನೆಂದರೆ ಎರಡು ಅರ್ಥಗಳಿವೆ. ಒಂದು, ಕಲಾವಿದ ಎಂದು. ಇನ್ನೊಂದು, ಹದಿನಾರು ಕಲೆಗಳನ್ನುಳ್ಳ ಚಂದ್ರ ಎಂದು. ಚಂದ್ರನು ವಕ್ರವಾಗಿರುವುದರಿಂದ, ಸ್ವಭಾವತಃ ಕುಟಿಲನು! ಆದರೂ ಕಲಾವಂತನು! ಇಂಥವನು, ಅಂದರೆ ಅರ್ಧಚಂದ್ರನು ಈಶ್ವರನ ತಲೆಯಲ್ಲಿದ್ದು, ಅವನ ಹಣೆಯ ಮೇಲಿನ ಮೂರನೆಯ ಕಣ್ಣಿಗೆ ಹುಬ್ಬಿನಂತೆ ಶೋಭೆ ನೀಡುತ್ತಾನೆ! ಇದನ್ನು ನಾಯಕನು ನಾಯಕಿಗೆ ಹೇಳುತ್ತಾ ಅವಳು ಕೋಪಿಸಿಕೊಂಡು ತನ್ನ ಹುಬ್ಬುಗಳನ್ನು ಗಂಟಿಕ್ಕಿಕೊಂಡಿದ್ದರೂ ಅಂಥ ಹುಬ್ಬುಗಳಿಂದಲೂ ಉಪಯೋಗವಿದೆ ಎಂದು ಕೀಟಲೆ ಮಾಡುತ್ತಿದ್ದಾನೆ! 
   ಇಲ್ಲಿ ಮೊದಲನೆಯ ಸಾಲಿನಲ್ಲಿ ಕವಿಯು ಸಾಮಾನ್ಯ ವಿಷಯವನ್ನು ಹೇಳಿ, ಎರಡನೆಯ ಸಾಲಿನಲ್ಲಿ ಅದನ್ನು ಪೌರಾಣಿಕ ಉದಾಹರಣೆಯಿಂದ ಸಮರ್ಥಿಸುತ್ತಾನೆ. ಹಾಗಾಗಿ ಇಲ್ಲಿ ಅರ್ಥಾಂತರನ್ಯಾಸ ಅಲಂಕಾರವಿದೆ. ಇದರೊಂದಿಗೆ, ಕುಟಿಲ ಹಾಗೂ ಕಲಾವಂತ ಪದಗಳಿಗೆ ಎರಡೆರಡು ಅರ್ಥಗಳು ಬರುವುದರಿಂದ ಶ್ಲೇಷಾಲಂಕಾರವೂ ಇದೆ.
   

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ