ಕೆಲವೊಮ್ಮೆ ನಮ್ಮ ಮನೆಯ ಸುತ್ತ ಮುತ್ತ ಹಾಗೂ ಸನಿಹದ ಉಪವನಗಳಲ್ಲೇ ಪ್ರಕೃತಿಯ ವಿಸ್ಮಯಗಳು ಕಂಡುಬರುತ್ತವೆ. ಈ ಚಿತ್ರದಲ್ಲಿ ಕಾಣುತ್ತಿರುವ ಪುಟ್ಟ ಕೀಟ, ಹಸಿರು ಸ್ಟಿಂಕ್ ಬಗ್ ( ಗ್ರೀನ್ ಸ್ಟಿಂಕ್ ಬಗ್). ಇದನ್ನು ಹಸಿರು ಸೈನಿಕ ಬಗ್, ( ಗ್ರೀನ್ ಸೋಲ್ಜರ್ ಬಗ್) ಎಂದೂ ಕರೆಯುತ್ತಾರೆ. ಬಗ್ ಎಂದರೆ ಒಂದು ಬಗೆಯ ಕೀಟ. ಇದು ನೋಡಲು ಸಿಕ್ಕಿದ್ದು ನಮ್ಮ ಮನೆಯ ಹೊರಗೇನೇ! ಕೇವಲ ೧೩ ರಿಂದ ೧೮ ಮಿ.ಮೀ. ಉದ್ದವಿರುವ, ಬಹಳ ಪುಟ್ಟದಾಗಿರುವ, ಗುರಾಣಿ ರೂಪದ, ಅಂಡಾಕಾರದ ಈ ಸುಂದರ ಕೀಟ, ಹಚ್ಚ ಹಸಿರು ಬಣ್ಣ ಹೊಂದಿದ್ದು, ಅಂಚುಗಳಲ್ಲಿ ಹಳದಿ, ಕಿತ್ತಳೆ, ಅಥವಾ ಕೆಂಪು ಬಣ್ಣವನ್ನು ಹೊಂದಿರುತ್ತದೆ. ಇದರ ರೆಕ್ಕೆಗಳು ಮಡಚಿದ್ದಾಗ, ಒಂದು ಬಗೆಯ x ವಿನ್ಯಾಸ ತಾಳುತ್ತವೆ. ಎಲ್ಲಾ ಬಗ್ ಕೀಟಗಳಂತೆ ಇದು ಬಾಯಲ್ಲಿ ನಳಿಕೆಯಂಥ ರೋಸ್ಟ್ರಂ ಎಂಬ ರಚನೆಯನ್ನು ಹೊಂದಿದ್ದು, ಅದರಿಂದ ಇದು ಸಸ್ಯ ಭಾಗಗಳನ್ನು ಚುಚ್ಚಿ ಅವುಗಳ ರಸವನ್ನು ಹೀರುತ್ತದೆ. ವಯಸ್ಕ ಕೀಟ, ಹಚ್ಚ ಹಸಿರು ಬಣ್ಣ ಹೊಂದಿದ್ದರೂ ಮರಿಯು ರಕ್ಕೆರಹಿತವಾಗಿದ್ದು, ಬೆಳವಣಿಗೆಯ ವಿವಿಧ ಹಂತಗಳಲ್ಲಿ ಕಿತ್ತಳೆ ಕೆಂಪು, ಕಪ್ಪು ಮತ್ತು ಹಸಿರು ಬಣ್ಣಗಳಿಗೆ ತಿರುಗುತ್ತಾ ಬಿಳಿ ಮತ್ತು ಕಪ್ಪು ಗೆರೆಗಳನ್ನು ಹೊಂದಿರುತ್ತದೆ. ವಯಸ್ಕ ಹಾಗೂ ಮರಿ, ಎರಡೂ, ಎದೆಯ ಕೆಳಭಾಗದಲ್ಲಿ ದೊಡ್ಡ ಹೊಲಸು ದುರ್ನಾತದ ಗ್ರಂಥಿಗಳನ್ನು ಪಡೆದಿರುತ್ತವೆ. ಇವುಗಳಿಗೆ ತೊಂದರೆಯಾದಾಗ, ಈ ಗ್ರಂಥಿಗಳು ದುರ್ನಾತ ಬೀರುವ ದ್ರವವನ್ನು ಹೆಚ್ಚಾಗಿ ಸ್ರವಿಸುತ್ತವೆ! ಹಾಗಾಗಿಯೇ ಇವುಗಳಿಗೆ ಸ್ಟಿಂಕ್ ಬಗ್, ಅಂದರೆ ದುರ್ನಾತ ಕೀಟ ಎಂದು ಹೆಸರು ಬಂದಿದೆ. ಹಿಂದೊಂದು ಕಾಲದಲ್ಲಿ ಈ ರಸವನ್ನು ಸಂಗ್ರಹಿಸಿ ಪುಡಿ ಮಾಡಿ ಕೆಲವು ಆಮ್ಲಗಳಿಗೆ ಅವು ಕಳೆದುಕೊಂಡ ವಾಸನೆಯನ್ನು ಪುನಃ ತರಲು ಬಳಸುತ್ತಿದ್ದರು.
ಇದು ಮೂಲತಃ ಉತ್ತರ ಅಮೆರಿಕಾದ ಕೀಟವಾಗಿದ್ದರೂ ನಾವು ಭಾರತದಲ್ಲಿ ನೋಡುವ ಕೀಟವು ಇದಕ್ಕೆ ಬಹಳ ಹತ್ತಿರದ ಸಂಬಂಧವಿರುವ ದಕ್ಷಿಣದ ಹಸಿರು ಸ್ಟಿಂಕ್ ಬಗ್ ಆಗಿದೆ. ಇದು ಇಥಿಯೋಪಿಯಾ ಹಾಗೂ ಪೂರ್ವ ಆಫ್ರಿಕಾದ ಮೂಲದ್ದಾಗಿದ್ದು ಈಗ ವಿಶ್ವದ ಎಲ್ಲೆಡೆ ಹರಡಿದೆ. ಅಮೆರಿಕಾದ ಮತ್ತು ಭಾರತದ ಕೀಟಗಳಿಗಿರುವ ಒಂದು ಮುಖ್ಯ ವ್ಯತ್ಯಾಸವೆಂದರೆ, ಅಮೇರಿಕಾದ ಕೀಟಗಳ ಮೀಸೆಗಳು ಪೂರ್ತಿ ಕಪ್ಪಾಗಿದ್ದು ಮೂರು ಭಾಗಗಳಾಗಿ ವಿಂಗಡಿಸಲಾಗಿರುತ್ತವೆ ಮತ್ತು ಭಾರತದ ಕೀಟಗಳ ಮೀಸೆಗಳು ಹಸಿರು, ಕೆಂಪು ಕಂದು, ಹಾಗೂ ತಿಳಿ ಕಪ್ಪು ಬಣ್ಣಗಳನ್ನು ಹೊಂದಿರುತ್ತವೆ. ಇವು ನಮ್ಮ ತೋಟಗಳು, ಉಪವನಗಳು, ಮತ್ತು ಕೃಷಿ ಭೂಮಿಗಳಲ್ಲಿ ಬಹಳ ಸಾಮಾನ್ಯವಾಗಿ ಕಂಡುಬರುವುದಾಗಿದ್ದು, ಅನೇಕ ಕೃಷಿ ಭೂಮಿಗಳಲ್ಲಿ ಬೆಳೆಗಳನ್ನು ನಾಶಮಾಡಿ ಪೀಡೆಯುಂಟುಮಾಡುತ್ತವೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ