ಇಂದೀವರೇಣ ನಯನಂ ಮುಖಮಂಬುಜೇನ
ಕುಂದೇನ ದಂತಮಧರಂ ನವಪಲ್ಲವೇನ ।
ಅಂಗಾನಿ ಚಂಪಕದಲೈ: ಸ ವಿಧಾಯ ವೇಧಾ:
ಕಾಂತೇ ಕಥಂ ಘಟಿತವಾನುಪಲೇನ ಚೇತ: ।।
ಕನ್ನಡ ಅನುವಾದ
ನಾಯಕನು ನಾಯಕಿಗೆ ಹೇಳುತ್ತಾನೆ," ಹೇ ಕಾಂತೆ! ಆ ವಿಧಾತನು ನಿನ್ನ ನಯನಗಳನ್ನು ನೈದಿಲೆಗಳಿಂದಲೂ ಮುಖವನ್ನು ಕಮಲ ಪುಷ್ಪದಿಂದಲೂ ಹಲ್ಲುಗಳನ್ನು ಮಲ್ಲಿಗೆಯಿಂದಲೂ ಅಧರವನ್ನು ಹೊಸ ಎಳೆಚಿಗುರಿನಿಂದಲೂ ಇತರ ಅಂಗಗಳನ್ನು ಸಂಪಿಗೆ ದಳಗಳಿಂದಲೂ ಮಾಡಿ ಹೃದಯವನ್ನು (ಮನಸ್ಸನ್ನು ) ಮಾತ್ರ ಏಕೆ ಕಲ್ಲಿನಿಂದ ಮಾಡಿದನೋ?!"
ಇಲ್ಲಿ ನಾಯಕನು ನಾಯಕಿಯನ್ನು ಪ್ರೇಮ ಭಿಕ್ಷೆ ಬೇಡಿದ್ದಾನೆ. ಆದರೆ ಅವಳು ಯಾವ ಮನಸ್ಥಿತಿಯಲ್ಲಿದ್ದಳೋ ಏನೋ, ನಿರಾಕರಿಸಿದ್ದಾಳೆ. ಆಗ ನಾಯಕನು ಅವಳು ಏಕೆ ಹೀಗೆ ಕಟುವಾದಳೆಂದು ಹೇಳಲು ಹೀಗೆ ಕಾವ್ಯಾತ್ಮಕವಾಗಿ ಹೇಳುತ್ತಾನೆ. ಹೆಣ್ಣು ಎಂದರೆ ಸಹಜವಾಗಿಯೇ ಬಹಳ ಕೋಮಲ. ಅವಳ ಅಂಗಾಂಗಗಳು ಪುಷ್ಪಗಳಂತೆ ಮೃದು. ಅಂತೆಯೇ ಇಲ್ಲಿ ನಾಯಕನು ಅವಳ ವಿವಿಧ ಅಂಗಗಳನ್ನು ಬ್ರಹ್ಮನು ವಿವಿಧ ಪುಷ್ಪಗಳಿಂದಲೇ ಮಾಡಿದನೆಂದು ಹೇಳುತ್ತಾನೆ. ಅವಳ ಕಣ್ಣುಗಳನ್ನು ನೈದಿಲೆಗಳಿಂದಲೂ ಮುಖವನ್ನು ಕಮಲ ಪುಷ್ಪದಿಂದಲೂ ಹಲ್ಲುಗಳನ್ನು ಮಲ್ಲಿಗೆಯಿಂದಲೂ ಅಧರವನ್ನು ಎಳೆ ಚಿಗುರಿನಿಂದಲೂ ಇನ್ನಿತರ ಅಂಗಗಳನ್ನು ಸಂಪಿಗೆ ದಳಗಳಿಂದಲೂ ಮಾಡಿದ್ದಾನೆಂದು ಹೇಳಿ ಬಣ್ಣಿಸುತ್ತಾನೆ. ಅಂತೆಯೇ ಅವಳ ಹೃದಯವೂ ಕೋಮಲವಾಗಿರಬೇಕಲ್ಲವೇ? ಆದರೆ ಎಲ್ಲಾ ಅಂಗಗಳನ್ನೂ ಪುಷ್ಪಾದಿಗಳಿಂದ ಮಾಡಿ ಹೃದಯವನ್ನು ಮಾತ್ರ ಏಕೆ ಕಲ್ಲಿನಿಂದ ಮಾಡಿದನೋ, ಹಾಗಾಗಿ ಅವಳ ಮೈ ಹೂವಿನಂತೆ ಕೋಮಲವಾಗಿದ್ದರೂ ಅವಳ ಹೃದಯವು ( ಮನಸ್ಸು) ಕಲ್ಲಿನಂತೆ ಗಟ್ಟಿಯಾಗಿದೆಯಲ್ಲ ಎಂದು ತಮಾಷೆ ಮಾಡುತ್ತಾನೆ!
ಅಂತೂ ಹುಡುಗರು ಪ್ರೇಮಭಿಕ್ಷೆ ಬೇಡುವುದೂ ಹುಡುಗಿಯರು ನಿರಾಕರಿಸುವುದು ಅಂದಿನಿಂದಲೂ ಇದೆ! ಆಗ ಹುಡುಗರು ಕಾವ್ಯಮಯವಾಗಿ ಹುಡುಗಿಯರನ್ನು ಒಲಿಸಿಕೊಳ್ಳಲು ಇಲ್ಲಿ ನಮ್ಮ ನಾಯಕನು ಮಾದರಿಯಾಗಿದ್ದಾನೆ.
ಹುಡುಗನ ಕವಿತೆ ಕೇಳಿ ಆ ಹುಡುಗಿಯು ಕರಗಿರಬಹುದು!
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ