ಶುಕ್ರವಾರ, ಅಕ್ಟೋಬರ್ 16, 2026

ಸುಂದರೀಶತಕ -೧೦೧

ಸಂಸ್ಕೃತ ಮೂಲ 

ಮಧುಕರ ತವೈವ ಧನ್ಯಂ ಜನುರಭಿತೋ ವನ್ಯಮನ್ಯದುತ್ಸೃಜತ: ।
ಯಸ್ಯ ಪ್ರೇಮಾಬಂಧೋ ಮಾಲತ್ಯಾಂ ಯತ್ರ ತಸ್ಯಾಶ್ಚ ।।

ಕನ್ನಡ ಅನುವಾದ 

   " ಎಲೈ ದುಂಬಿಯೇ! ನಿನ್ನ ಜನ್ಮವೇ ಧನ್ಯ! ಸುತ್ತಮುತ್ತಲಿನ ಇತರ ಪುಷ್ಪಗಳನ್ನೆಲ್ಲಾ ಬಿಟ್ಟು ಮಾಲತೀ ಪುಷ್ಪದಲ್ಲೇ ಪ್ರೇಮಾನುಬಂಧದಲ್ಲಿರುವೆ! ಅಂತೆಯೇ ಮಾಲತೀ ಪುಷ್ಪದ ಪ್ರೇಮವೂ ನಿನ್ನಲ್ಲೇ ಇದೆ!" 
   ಕವಿಯು ವಿವಿಧ ಅನ್ಯೋಕ್ತಿಗಳಿಂದ ಪ್ರೇಮಿಗಳನ್ನು ವರ್ಣಿಸುತ್ತಿದ್ದಾನೆ. ಇಲ್ಲಿ ದುಂಬಿಯು ಎಲ್ಲಾ ಪುಷ್ಪಗಳನ್ನೂ ಬಿಟ್ಟು ಮಾಲತೀ ಪುಷ್ಪದಲ್ಲೇ ಅನುರಕ್ತವಾಗಿದೆ ಹಾಗೂ ಮಾಲತೀ ಪುಷ್ಪವೂ ಅದರಲ್ಲೇ ಅನುರಕ್ತವಾಗಿದೆ ಎಂದು ಹೇಳುತ್ತಿದ್ದಾನೆ.‌ ಕವಿಯು ಏನು ಸೂಚಿಸುತ್ತಿದ್ದಾನೆ ಎಂದು ಸುಲಭವಾಗಿ ತಿಳಿಯುತ್ತದೆ. ಯೋಗ್ಯ ಪ್ರೇಮಿಯೊಬ್ಬನು ಎಲ್ಲಾ ಸುಂದರ ಹೆಣ್ಣುಗಳನ್ನೂ ಬಿಟ್ಟು ಒಬ್ಬ ಹೆಣ್ಣಿನಲ್ಲೇ ಅನುರಕ್ತನಾಗಿದ್ದಾನೆ ಹಾಗೂ ಆ ಹೆಣ್ಣೂ ಅವನಲ್ಲೇ ಅನುರಕ್ತಳಾಗಿದ್ದಾಳೆ ಎಂದು ಇದರ ಸೂಚನೆ. ದುಂಬಿಯು ನಾಯಕನನ್ನೂ ಮಾಲತಿ ಪುಷ್ಪವು ನಾಯಕಿಯನ್ನೂ ಸೂಚಿಸುತ್ತದೆ. ಇಂಥ ದುಂಬಿ ಅಥವಾ ನಾಯಕನ ಜನ್ಮವೇ ಧನ್ಯವೆಂದು ಕವಿಯು ಹೇಳುತ್ತಿದ್ದಾನೆ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ