ಸೋಮವಾರ, ಅಕ್ಟೋಬರ್ 26, 2026

ಗ್ರಂಥಾರಂಭ ಕಥೆಗಳು -ವಾಲ್ಮೀಕಿ ರಾಮಾಯಣ

ರಾಮಾಯಣವನ್ನು ಆದಿಕಾವ್ಯವೆಂದೂ ಅದನ್ನು ರಚಿಸಿದ ವಾಲ್ಮೀಕಿ ಮುನಿಗಳನ್ನು ಆದಿಕವಿಗಳೆಂದೂ ಕರೆಯುತ್ತಾರೆ. ವಾಲ್ಮೀಕಿಗಳು ರಾಮಾಯಣವನ್ನು ಹೇಗೆ ರಚಿಸಿದರೆಂಬುದೇ ಒಂದು ಸ್ವಾರಸ್ಯಕರ ಕಥೆ.
    ಒಮ್ಮೆ ವಾಲ್ಮೀಕಿ ಮಹರ್ಷಿಗಳ ಆಶ್ರಮಕ್ಕೆ ನಾರದ ಮುನಿಗಳು ಆಗಮಿಸಿದರು. ಆಗ ವಾಲ್ಮೀಕಿಗಳು ನಾರದರನ್ನು ಒಂದು ಪ್ರಶ್ನೆ ಕೇಳಿದರು," ಪೂಜ್ಯರೇ! ಗುಣವಂತನೂ ವೀರ್ಯವಂತನೂ ಧರ್ಮಜ್ಞನೂ ಕೃತಜ್ಞನೂ ಸತ್ಯವಾಕ್ಯನೂ ದೃಢವ್ರತನೂ ಆದವನು ಈಗ ಲೋಕದಲ್ಲಿ ಯಾರಿರುವನು? ಉತ್ತಮ ಚಾರಿತ್ರ್ಯದಿಂದ ಕೂಡಿರುವವನೂ ಸಕಲ ಜೀವಿಗಳಿಗೂ ಹಿತವನ್ನು ಬಯಸುವವನೂ ವಿದ್ವಾಂಸನೂ ಸಮರ್ಥನೂ ನೋಡಲು ಎಲ್ಲರಿಗೂ ಪ್ರಿಯನಾಗಿರುವವನೂ ಧೈರ್ಯವಂತನೂ ಕೋಪವನ್ನು ಜಯಿಸಿರುವವನೂ ಕಾಂತಿವಂತನೂ ಅಸೂಯಾರಹಿತನೂ ಆದವನು ಯಾರಿರುವನು? ಯುದ್ಧದಲ್ಲಿ ಕೋಪಗೊಂಡ ಯಾರನ್ನು ಕಂಡರೆ ದೇವತೆಗಳೂ ಭಯಭೀತರಾಗುವರು? ಇಂಥ ಮನುಷ್ಯ ಈಗ ಯಾರಾದರೂ ಇರುವನೇ? ಇದ್ದರೆ ತಿಳಿಯಲು ನಾನು ಬಹಳ ಕುತೂಹಲಗೊಂಡಿರುವೆ ಮಹರ್ಷಿಗಳೇ! ಅಂಥವನು ಯಾರು? ಹೇಳಿ!" 
   ನಾರದರು ತ್ರಿಲೋಕಜ್ಞಾನಿಗಳು! ಅವರಿಗೆ ತಿಳಿಯದುದೇನಿರುತ್ತದೆ? ವಾಲ್ಮೀಕಿಗಳ ಪ್ರಶ್ನೆಗೆ ಸಂತೋಷಗೊಂಡು ಅವರು ಉತ್ತರಿಸಿದರು," ಮುನಿಗಳೇ! ನೀವು ಹೇಳಿದ ಈ ಗುಣಗಳೆಲ್ಲವೂ ದುರ್ಲಭವಾಗಿವೆ! ಆದರೂ ಅವೆಲ್ಲವೂ ಸೇರಿರುವ ಒಬ್ಬ ಮನುಷ್ಯನಿದ್ದಾನೆ! ಅವನೇ ಇಕ್ಷ್ವಾಕು ವಂಶದ ರಾಜನಾದ ರಾಮ! ಅವನು ನಿಶ್ಚಲ ಆತ್ಮವುಳ್ಳವನೂ ಮಹಾವೀರನೂ ಕಾಂತಿವಂತನೂ ಧೈರ್ಯವಂತನೂ ಉತ್ತಮ ವಾಗ್ಮಿಯೂ ಶ್ರೀಮಂತನೂ ಆಗಿರುವನು!  ಮಹಾಧನುಸ್ಸನ್ನು ಧರಿಸಿ ಶತ್ರುಗಳನ್ನು ನಾಶಮಾಡುವ ಪ್ರತಾಪಶಾಲಿಯಾದ ಅವನು ವಿಶಾಲವಾದ ಹೆಗಲುಳ್ಳವನಾಗಿದ್ದಾನೆ!  ಶ್ಯಾಮಲವರ್ಣದ ಅವನು ವಿಶಾಲ ಕಂಗಳನ್ನೂ ಸಮಾನ ಅಂಗಗಳನ್ನೂ ಉಳ್ಳವನಾಗಿ ಶುಭಲಕ್ಷಣಗಳನ್ನುಳ್ಳ ಸುಂದರನಾಗಿದ್ದಾನೆ! ಅವನು ಧರ್ಮಜ್ಞನೂ ಸತ್ಯಸಂಧನೂ ಆಗಿದ್ದು ಪ್ರಜಾಹಿತರತನಾಗಿದ್ದಾನೆ! ಅವನು ಯಶಸ್ವಿಯೂ ಜ್ಞಾನಸಂಪನ್ನನೂ ಆಗಿದ್ದು ಗುರುಹಿರಿಯರಿಗೆ ವಿಧೇಯನಾಗಿದ್ದಾನೆ! ಪ್ರಜಾಪತಿ ಬ್ರಹ್ಮನಿಗೆ ಸಮಾನನಾದ ಅವನು ಸಕಲ ಜೇವಿಗಳ ರಕ್ಷಕನೂ ಧರ್ಮರಕ್ಷಕನೂ ಆಗಿರುವನು! ವೇದವೇದಾಂಗಗಳನ್ನು ತಿಳಿದಿರುವ ಅವನು ಮಹಾಬುದ್ಧಿಶಾಲಿಯೂ ಎಲ್ಲರಿಗೂ ಪ್ರಿಯನೂ ಆಗಿದ್ದಾನೆ! ಎಲ್ಲಾ ನದಿಗಳೂ ಬಂದು ಸಮುದ್ರವನ್ನು ಸೇರುವಂತೆ ಸಜ್ಜನರು ಸದಾ ಅವನ ಬಳಿಗೆ ಬರುತ್ತಿರುತ್ತಾರೆ! ಆರ್ಯನೂ ಸುಸಂಸ್ಕೃತನೂ ಎಲ್ಲರನ್ನೂ ಸಮಾನವಾಗಿ ಕಾಣುವವನೂ ಆಗಿರುವ ಅವನು ಸಕಲಗುಣೋಪೇತನಾಗಿದ್ದು ಮಾತೆ ಕೌಸಲ್ಯೆಯ ಆನಂದವನ್ನು ವರ್ಧಿಸುವವನು! ಅವನು ಗಾಂಭೀರ್ಯದಲ್ಲಿ ಸಮುದ್ರದಂತಯೂ ಕ್ರೋಧದಲ್ಲಿ ಕಾಲಾಗ್ನಿಗೆ ಸಮಾನನೂ ಆಗಿರುವನು! ಚಂದ್ರನಂತೆ ಪ್ರಿಯದರ್ಶನನೂ ಕ್ಷಮೆಯಲ್ಲಿ ಪೃಥ್ವಿಗೆ ಸಮಾನನೂ ಆಗಿರುವನು! ತ್ಯಾಗದಲ್ಲಿ ಕುಬೇರನಿಗೆ ಸಮಾನನಾಗಿರುವ ಅವನು ಸತ್ಯದಲ್ಲಿ ಇನ್ನೊಬ್ಬ ಧರ್ಮಮೂರ್ತಿಯಂತಿರುವನು!" 
    ಹೀಗೆ ನಾರದರು ಶ್ರೀ ರಾಮನ ಗುಣಗಾನ ಮಾಡಿ, ರಾಮನ ತಂದೆ ದಶರಥನು ಅವನಿಗೆ ಪಟ್ಟಾಭಿಷೇಕ ಮಾಡಲುದ್ಯುಕ್ತನಾದುದು, ಕೈಕೇಯಿಯ ದೆಸೆಯಿಂದ ರಾಮ, ಲಕ್ಷ್ಮಣ, ಸೀತೆಯರು ಕಾಡಿಗೆ ‌ಹೋದುದು, ಅಲ್ಲಿ ರಾವಣನು ಸೀತೆಯನ್ನು ಅಪಹರಿಸಿದುದು, ರಾಮ, ಲಕ್ಷ್ಮಣರು, ಹನುಮಂತನೇ ಮೊದಲಾದ ಕಪಿವೀರರ ಸಹಾಯದಿಂದ ಸಮುದ್ರಕ್ಕೆ ಸೇತುವೆ ಕಟ್ಟಿ ಲಂಕೆಗೆ ಹೋದುದು, ಘೋರ ಯುದ್ಧದಲ್ಲಿ ರಾಮನು ರಾವಣನನ್ನು ಸಂಹರಿಸಿ ಸೀತಾಲಕ್ಷ್ಮಣರೊಂದಿಗೆ ಅಯೋಧ್ಯೆಗೆ ಹಿಂತಿರುಗಿ ಪಟ್ಟಾಭಿಷಿಕ್ತನಾದುದರವರೆಗಿನ ರಾಮನ ಕಥೆಯನ್ನು ಸಂಕ್ಷಿಪ್ತವಾಗಿ ಹೇಳಿದರು. ಅನಂತರ ಅವರು ಪುನಃ ಹೇಳಿದರು," ಶ್ರೀ ರಾಮನ ಆಳ್ವಿಕೆಯಲ್ಲಿ ಲೋಕವೆಲ್ಲಾ ಆನಂದದಿಂದ ಕೂಡಿದೆ! ಜನರು ತುಷ್ಟರೂ ಪುಷ್ಟರೂ ಧಾರ್ಮಿಕರೂ ಆಗಿದ್ದು ರೋಗರಹಿತರೂ ಆರೋಗ್ಯವಂತರೂ ಆಗಿರುವರು! ಎಲ್ಲಿಯೂ ದುರ್ಭಿಕ್ಷೆಯ ಭಯವಾಗಲಿ, ಅಗ್ನಿಭಯವಾಗಲಿ, ವಾತಭಯವಾಗಲಿ, ಜಲಭಯವಾಗಲಿ ಯಾವುದೂ ಇಲ್ಲ! ಎಲ್ಲಿಯೂ ಮಕ್ಕಳು ಸಾಯುವುದಿಲ್ಲ,  ಸ್ತ್ರೀಯರು ವಿಧವೆಯರಾಗುವುದಿಲ್ಲ ಹಾಗೂ ಅಲ್ಲಲ್ಲಿ ಪುರುಷರು ರಕ್ಷಕರಾಗಿರುತ್ತಾರೆ! ಯಾರಿಗೂ ಹಸಿವಿನ ಬಾಧೆಯಾಗಲಿ ಕಳ್ಳಕಾಕರ ಬಾಧೆಯಾಗಲಿ ಇಲ್ಲದೆ ಧನಧಾನ್ಯಸಮೃದ್ಧಿಯಿಂದ ಜನರು ಕೃತಯುಗದಲ್ಲಿ ಇದ್ದಂತೆ ಆನಂದದಿಂದ ಇರುವರು! ಶ್ರೀ ರಾಮನು ನೂರು ಅಶ್ವಮೇಧ ಯಾಗಗಳನ್ನು ಮಾಡಿ, ಹಾಗೆಯೇ ಬಹುಸುವರ್ಣಕ ಯಾಗಗಳನ್ನು ಮಾಡಿ, ಕೋಟಿ ಸಂಖ್ಯೆಯಲ್ಲಿ ಗೋದಾನ ಮಾಡಿ, ಅನೇಕ ರಾಜವಂಶಗಳನ್ನು ಸ್ಥಾಪಿಸಿ ಹನ್ನೊಂದು ಸಾವಿರ ವರ್ಷಗಳ ಕಾಲ ರಾಜ್ಯವಾಳಿ ಬ್ರಹ್ಮಲೋಕಕ್ಕೆ ಹೋಗುತ್ತಾನೆ! 
    " ಮುನಿಗಳೇ! ಈ ರಾಮಾಯಣವು ಪುಣ್ಯಪ್ರದವೂ ಪಾಪಹರವೂ ವೇದಗಳಿಗೆ ಸಮಾನವೂ ಆಗಿದೆ! ಇದನ್ನು ಪಠಿಸುವರು ದೀರ್ಘಾಯುಷ್ಯ ಹೊಂದಿ ಪುತ್ರಪೌತ್ರರೊಂದಿಗೆ ಸ್ವರ್ಗಕ್ಕೆ ಹೋಗುತ್ತಾರೆ! ಇದನ್ನು ಪಠಿಸುವ ಬ್ರಾಹ್ಮಣನು ಒಳ್ಳೆಯ ವಾಗ್ಮಿಯಾಗುತ್ತಾನೆ, ಕ್ಷತ್ರಿಯನು ಭೂಪತಿಯಾಗುತ್ತಾನೆ, ವೈಶ್ಯನು ಒಳ್ಳೆಯ ವ್ಯಾಪಾರಫಲವನ್ನು ಪಡೆಯುತ್ತಾನೆ, ಹಾಗೂ ಶೂದ್ರನು ಮಹತ್ವವನ್ನು ಪಡೆಯುತ್ತಾನೆ!" 
    ಹೀಗೆ ನಾರದರು ಬ್ರಹ್ಮನಿಂದ ಉಪದಿಷ್ಟವಾದ ಶತಕೋಟಿಪ್ರವಿಸ್ತಾರವಾದ ರಾಮಾಯಣವನ್ನು ಸಂಕ್ಷಿಪ್ತವಾಗಿ ಹೇಳಲು,  ವಾಲ್ಮೀಕಿಗಳು ಸಂತೋಷಗೊಂಡು ಅವರನ್ನು ವಿಧಿವತ್ತಾಗಿ ಪೂಜಿಸಿದರು. ಅನಂತರ ನಾರದರು ಅವರ ಅನುಮತಿ ಪಡೆದು ಆಕಾಶಮಾರ್ಗವಾಗಿ ದೇವಲೋಕಕ್ಕೆ ಹೋದರು. 
    ಅನಂತರ ವಾಲ್ಮೀಕಿ ಮಹರ್ಷಿಗಳು ಮಾಧ್ಯಾಹ್ನಿಕ ಕ್ರಿಯೆಯಾಗಿ ಸ್ನಾನಮಾಡಬಯಸಿ, ತಮ್ಮ ಶಿಷ್ಯ ಭರದ್ವಾಜನೊಂದಿಗೆ ಸನಿಹದ ತಮಸಾನದಿಗೆ ಹೊರಟರು.‌ ತಮಸಾನದಿಯ ತಿಳಿನೀರನ್ನು ಕಂಡು ಅವರು ಶಿಷ್ಯ ಭರದ್ವಾಜನಿಗೆ," ಭರದ್ವಾಜ! ಈ ತಮಸಾ ನದಿಯ ನೀರು  ಕೆಸರಿಲ್ಲದೇ ಸತ್ಪುರುಷರ ಮನಸ್ಸಿನಂತೆ ಎಷ್ಟು ತಿಳಿಯಾಗಿದೆ ನೋಡು! ಈಗ ಕಮಂಡಲುವನ್ನು ಇಲ್ಲೇ ಇರಿಸಿ ಈ ನೀರಿನಲ್ಲಿಯೇ ಸ್ನಾನ ಮಾಡುವೆ! ಸ್ನಾನದ ವಸ್ತ್ರವನ್ನು ಕೊಡು!" ಎಂದರು.‌
    ಅದರಂತೆ ಭರದ್ವಾಜನು ಅವರಿಗೆ ಸ್ನಾನದ ವಸ್ತ್ರ ಕೊಡಲು, ಅದನ್ನು ತೆಗೆದುಕೊಂಡು ವನದ ಸೌಂದರ್ಯವನ್ನು ಆಸ್ವಾದಿಸುತ್ತಾ ಮುಂದೆ ಹೋಗುತ್ತಿದ್ದಂತೆ, ಒಂದು ಮರದ ಕೊಂಬೆಯ ಮೇಲೆ, ಕ್ರೌಂಚ ಪಕ್ಷಿಗಳ ಜೋಡಿಯೊಂದು ಆನಂದದಿಂದ ನಲಿದಾಡುತ್ತಾ ಶಬ್ದ ಮಾಡುತ್ತಿದ್ದುದನ್ನು ನೋಡಿದರು. ಅವು ಕ್ಷಣಮಾತ್ರದ ವಿರಹವನ್ನೂ ಸಹಿಸುತ್ತಿರಲಿಲ್ಲ. ಆಗ ಒಬ್ಬ ಬೇಡನು ವಾಲ್ಮೀಕಿಗಳು ನೋಡುತ್ತಿದ್ದರೂ ಲೆಕ್ಕಿಸದೆ ಆ ಕ್ರೌಂಚ ಜೋಡಿಯಲ್ಲಿ ಗಂಡು ಪಕ್ಷಿಗೆ ಗುರಿಯಿಟ್ಟು ಬಾಣ ಹೊಡೆದನು! ಅದು ಗಾಯಗೊಂಡು ಕೆಳಗೆ ಬಿದ್ದು ರಕ್ತಸಿಕ್ತವಾಗಿ ವಿಲವಿಲನೆ ಒದ್ದಾಡುತ್ತಿರಲು, ಅದನ್ನು ಕಂಡು ಹೆಣ್ಣು ಪಕ್ಷಿ ತನ್ನ ಸಂಗಾತಿಯಿಂದ ಬೇರೆಯಾದುದಕ್ಕೆ ಕರುಣಾಪೂರಿತವಾಗಿ ಕೂಗಿತು! ಇದನ್ನು ನೋಡಿ ಧರ್ಮಾತ್ಮರಾದ ವಾಲ್ಮೀಕಿಗಳ ಹೃದಯದಲ್ಲಿ ಕರುಣೆಯುಕ್ಕಿ, ಆ ನಿಷಾದನ ಕಾರ್ಯ ಅಧರ್ಮವೆಂದು ನಿಶ್ಚಯಿಸಿ ಅವನನ್ನು ಶಪಿಸಿದರು -
   ಮಾ ನಿಷಾದ ಪ್ರತಿಷ್ಠಾಂ ತ್ವಮಗಮ: ಶಾಶ್ವತೀ: ಸಮಾ: ।
   ಯತ್ಕ್ರೌಂಚಮಿಥುನಾದೇಕಮವಧೀ: ಕಾಮಮೋಹಿತಮ್ ।।
      " ಎಲೈ ನಿಷಾದನೇ! ಕ್ರೌಂಚ ಪಕ್ಷಿಗಳ ಜೋಡಿಯಲ್ಲಿ  ಕಾಮಮೋಹಿತವಾಗಿದ್ದ ಒಂದನ್ನು ಕೊಂದೆಯಾದ್ದರಿಂದ ನೀನು ಬಹಳ ಕಾಲ ಪ್ರತಿಷ್ಠೆಯನ್ನು ಹೊಂದದಿರು!" 
ಹೀಗೆ ಶಪಿಸಿದ ಬಳಿಕ ಅವರು ಆಶ್ಚರ್ಯದಿಂದ ಚಿಂತಿಸತೊಡಗಿದರು," ಪಕ್ಷಿಯ ಕಾರಣದಿಂದ ಶೋಕಗೊಂಡು ನಾನೇನು ಹೇಳಿದೆ?!" 
    ಹೀಗೆ ಚಿಂತಿಸುತ್ತಾ ಅವರು ಭರದ್ವಾಜನಿಗೆ," ಶೋಕಾರ್ತನಾದ ನಾನು ಹೇಳಿದ ಈ ವಾಕ್ಯವು ಪಾದಬದ್ಧವಾಗಿ, ಸಮಾನ ಅಕ್ಷರಗಳಿಂದ ಕೂಡಿದ್ದು, ತಂತಿಯ ವಾದ್ಯಗಳಿಂದ ಹಾಡಬಲ್ಲ ಶ್ಲೋಕವಾಗಲಿ!" ಎಂದರು. ಆಗ ಶಿಷ್ಯ ಭರದ್ವಾಜನು ಅದನ್ನು ಪುನರುಚ್ಚರಿಸಲು, ವಾಲ್ಮೀಕಿಗಳು ಸಂತೋಷಗೊಂಡರು. 
    ಹೀಗೆ ವಾಲ್ಮೀಕಿ ಮಹರ್ಷಿಗಳ ಶೋಕದಿಂದ ಮೊದಲ ಶ್ಲೋಕ ಹೊರಬಂದಿತು! 
ಅನಂತರ ಅವರು ತಮಸಾ ನದಿಯಲ್ಲಿ ಸ್ನಾನ ಮಾಡಿ ಆಶ್ರಮಕ್ಕೆ ಬಂದು, ಶಿಷ್ಯನೊಂದಿಗೆ ಇತರ ವಿಷಯಗಳನ್ನು ಮಾತನಾಡುತ್ತಾ ಹೋದರೂ ಆ ಶ್ಲೋಕದ ಬಗ್ಗೆಯೇ ಚಿಂತಿಸುತ್ತಿದ್ದರು. 
    ಆಗ ಅವರನ್ನು ನೋಡಲು ಸೃಷ್ಟಿಕರ್ತನಾದ ಸಾಕ್ಷಾತ್ ಬ್ರಹ್ಮನೇ ಬಂದನು! ಬ್ರಹ್ಮನನ್ನು ನೋಡಿ ವಿಸ್ಮಿತರಾದ ವಾಲ್ಮೀಕಿಗಳು ಮಾತೇ ಹೊರಡದೇ ಎದ್ದು ಕೈಮುಗಿದುಕೊಂಡು ನಿಂತರು! ಅನಂತರ ಅವರು ವಿಧಿವತ್ತಾಗಿ ಬ್ರಹ್ಮನಿಗೆ ಅರ್ಘ್ಯಪಾದ್ಯಗಳನ್ನು ಅರ್ಪಿಸಿ, ನಮಸ್ಕರಿಸಿ ಆಸನ ನೀಡಿ ಕುಶಲಪ್ರಶ್ನೆ ಮಾಡಿದರು. ಬ್ರಹ್ಮನು ಕುಳಿತು ಅವರಿಗೂ ಕುಳಿತುಕೊಳ್ಳಲು ಹೇಳಲು, ವಾಲ್ಮೀಕಿಗಳು ಕುಳಿತರೂ ಅವರ ಮನಸ್ಸು ಆ ಪಕ್ಷಿಯ ಘಟನೆಯ ಕಡೆಗೇ ತಿರುಗಿ ಆ ಶ್ಲೋಕವನ್ನೇ ನೆನೆಯುತ್ತಾ ಪುನಃ ಶೋಕಕ್ಕೊಳಗಾದರು. ಆಗ ಬ್ರಹ್ಮನು ಅವರಿಗೆ ಹೇಳಿದನು," ಎಲೈ ಬ್ರಾಹ್ಮಣೋತ್ತಮನೇ! ನೀನು ಹೇಳಿದ್ದು ಶ್ಲೋಕವೇ ಹೌದು! ಆದರ ಬಗ್ಗೆ ಹೆಚ್ಚು ವಿಚಾರ ಮಾಡಬೇಕಿಲ್ಲ! ನನ್ನ ಇಚ್ಛೆಯಿಂದಲೇ ಈ ವಾಣಿಯು ನಿನ್ನ ಮುಖದಿಂದ ಹೊರಟಿತು! ಎಲೈ ಮುನಿಸತ್ತಮ! ಇದೇ ಶ್ಲೋಕರೂಪದಿಂದಲೇ ಧರ್ಮಾತ್ಮನೂ ಧೀಮಂತನೂ ಆದ ಶ್ರೀರಾಮನ ಚರಿತ್ರೆಯನ್ನು ಸಂಪೂರ್ಣವಾಗಿ ರಚಿಸು! ನಾರದರಿಂದ ಹೇಗೆ ಕೇಳಿದೆಯೋ ಹಾಗೆಯೇ ನೀನು ರಾಮನ ಚರಿತ್ರೆಯನ್ನು ರಚಿಸು! ಶ್ರೀರಾಮನ, ಅವನ ತಮ್ಮ ಲಕ್ಷ್ಮಣನ, ಸೀತೆಯ, ರಾವಣ ಮೊದಲಾದ ಎಲ್ಲಾ ರಾಕ್ಷಸರ, ತಿಳಿದಿರುವ ಹಾಗೂ ತಿಳಿಯದಿರದ ವಿಚಾರಗಳನ್ನೆಲ್ಲಾ ರಚಿಸು! ನಿನಗೆ ತಿಳಿದಿರದ ವಿಚಾರಗಳೂ ತಿಳಿಯುತ್ತವೆ! ನಿನ್ನ ಕಾವ್ಯದಲ್ಲಿ ಎಲ್ಲಿಯೂ ಅಸತ್ಯವಿರುವುದಿಲ್ಲ! ಪುಣ್ಯಮಯವಾದ ರಾಮಕಥೆಯನ್ನು ಮನೋಹರ ಶ್ಲೋಕಗಳಲ್ಲಿ ರಚಿಸು! ಎಲ್ಲಿಯವರೆಗೆ ಈ ಭೂಮಂಡಲದಲ್ಲಿ ಪರ್ವತಗಳೂ ನದಿಗಳೂ ಇರುವವೋ ಅಲ್ಲಿಯವರೆಗೆ ನೀನು ರಚಿಸುವ ರಾಮಾಯಣ ಕಥೆಯು ಪ್ರಚಾರದಲ್ಲಿರುತ್ತದೆ! ಎಲ್ಲಿಯವರೆಗೆ ನೀನು ರಚಿಸುವ ರಾಮಾಯಣ ಕಥೆಯು ಪ್ರಚಾರದಲ್ಲಿರುವುದೋ ಅಲ್ಲಿಯವರೆಗೆ ನೀನು ಮೇಲಿನ ಮತ್ತು ಕೆಳಗಿನ ನನ್ನ ಎಲ್ಲಾ ಲೋಕಗಳಲ್ಲೂ ವಾಸಿಸಲು ಅರ್ಹನಾಗಿರುವೆ!" 
      ಹೀಗೆ ಹೇಳಿ ಬ್ರಹ್ಮನು ಅಲ್ಲಿಯೇ ಅಂತರ್ಧಾನನಾದನು. ಆಗ ವಾಲ್ಮೀಕಿಗಳೂ ಅವರ ಶಿಷ್ಯರೂ ವಿಸ್ಮಯಗೊಂಡರು!
    ಅನಂತರ ವಾಲ್ಮೀಕಿಗಳ‌ ಶಿಷ್ಯರೆಲ್ಲರೂ ಮಾ ನಿಷಾದ ಶ್ಲೋಕವನ್ನು ವಿಸ್ಮಯ, ಸಂತೋಷಗಳಿಂದ ಹೇಳಿಕೊಳ್ಳುತ್ತಾ," ನಮ್ಮ ಗುರುಗಳು ನಾಲ್ಕು ಪಾದಗಳಿಂದಲೂ ಸಮವಾದ ಅಕ್ಷರಗಳಿಂದಲೂ ಕೂಡಿದ ಯಾವ ಶೋಕವಾಕ್ಯವನ್ನು ಹೇಳಿದರೋ ಅದು ಮತ್ತೆ ಮತ್ತೆ ಹೇಳುತ್ತಿದ್ದಂತೆ ಶ್ಲೋಕವಾಯಿತು!" ಎಂದರು. 
   ಬ್ರಹ್ಮನ ಮಾತಿನಂತೆ ವಾಲ್ಮೀಕಿ ಮಹರ್ಷಿಗಳಿಗೆ ರಾಮಾಯಣ ಕಾವ್ಯವನ್ನು ಸಂಪೂರ್ಣವಾಗಿ ಈ ರೀತಿಯ ಶ್ಲೋಕಗಳಿಂದ ರಚಿಸಬೇಕೆಂದು ಮನಸ್ಸಾಗಿ, ಅವರು ಇಪ್ಪತ್ತು ನಾಲ್ಕು ಸಾವಿರ ಮನೋಹರ ಶ್ಲೋಕಗಳಲ್ಲಿ, ಐನೂರು ಸರ್ಗಗಳಲ್ಲೂ ಏಳು ಕಾಂಡಗಳಲ್ಲೂ ( ಬಾಲಕಾಂಡ, ಅಯೋಧ್ಯಾಕಾಂಡ, ಅರಣ್ಯಕಾಂಡ, ಕಿಷ್ಕಿಂಧಾಕಾಂಡ, ಸುಂದರಕಾಂಡ, ಯುದ್ಧಕಾಂಡ, ಮತ್ತು ಉತ್ತರಕಾಂಡ) ವಿಭಾಗಿಸಿ ರಚಿಸಿದರು.               ಅನಂತರ, ಈ ಕಾವ್ಯವನ್ನು ಯಾರಿಗೆ ಉಪದೇಶಿಸುವುದೆಂದು ಚಿಂತಿಸಿದರು. 
     ಈ ಸಂದರ್ಭದಲ್ಲಿ, ಲೋಕಾಪವಾದದ ಭಯದಿಂದ ಶ್ರೀರಾಮನಿಂದಲೇ ಪರಿತ್ಯಕ್ತಳಾದ ಸೀತಾಮಾತೆಯನ್ನು ವಾಲ್ಮೀಕಿಗಳು ತಮ್ಮ ಆಶ್ರಮದಲ್ಲಿ ಸಲಹುತ್ತಿದ್ದರು ಹಾಗೂ, ಅವಳಿಗೆ ಲವ, ಕುಶರೆಂಬ ಇಬ್ಬರು ಅವಳಿ ಮಕ್ಕಳಾಗಿದ್ದರು. ವಾಲ್ಮೀಕಿಗಳು ಅವರನ್ನು ಬೆಳೆಸಿ ಅವರಿಗೆ ವಿದ್ಯಾಭ್ಯಾಸ ಮಾಡಿಸುತ್ತಿದ್ದರು. ಅವರೇ ತಮ್ಮ ರಾಮಾಯಣ ಕಾವ್ಯದ ಉಪದೇಶ ಪಡೆಯಲು ಸೂಕ್ತ ಎಂದು ಭಾವಿಸಿ ವಾಲ್ಮೀಕಿಗಳು ತಮ್ಮ ರಾಮಾಯಣ ಕಾವ್ಯವನ್ನು ಅವರಿಗೆ ಹಾಡಲು ಕಲಿಸಿದರು. 
    ಅನಂತರ, ಲವ, ಕುಶರು ರಾಮಾಯಣ ಕಾವ್ಯವನ್ನು ವೀಣೆ ನುಡಿಸುತ್ತಾ ಶೃಂಗಾರ, ವೀರ, ಕರುಣ, ಮೊದಲಾದ ರಸಗಳಿಗೆ ತಕ್ಕಂಥ ಮನೋಹರವಾದ ರಾಗಗಳಲ್ಲಿ ಬ್ರಾಹ್ಮಣರ ಮತ್ತು ಮಹರ್ಷಿಗಳ ಸಭೆಗಳಲ್ಲಿ ಹಾಡಿದರು. ಆ ಋಷಿ, ಮುನಿಗಳು ಅವರನ್ನು ಬಹಳ ಪ್ರಶಂಸಿಸಿ ತಮ್ಮಲ್ಲಿದ್ದ ಕಲಶ, ನಾರುಮಡಿ, ಕೃಷ್ಣಾಜಿನ, ಯಜ್ಞೋಪವೀತ, ಕಮಂಡಲು, ಮೌಂಜಿ, ದರ್ಭಾಸನ, ಕೌಪೀನ, ಜಪಮಾಲೆ, ಕಾಷಾಯವಸ್ತ್ರ, ಜಟಾಬಂಧನರಜ್ಜು, ಕಾಷ್ಠಬಂಧನರಜ್ಜು, ಯಜ್ಞಭಾಂಡ, ಸೌದೆ, ಔದುಂಬರೀ, ಮೊದಲಾದ ವಸ್ತುಗಳನ್ನು ಬಹುಮಾನವಾಗಿ ಕೊಟ್ಟರು. ಕೆಲವರು ಅವರಿಗೆ ದೀರ್ಘಾಯುಷ್ಯವೇ ಮೊದಲಾದ ಆಶೀರ್ವಾದ, ವರಗಳನ್ನು ಕೊಟ್ಟರು. ಹೀಗೆ ಲವ,ಕುಶರು ರಾಮಾಯಣವನ್ನು ಸಭೆಗಳಲ್ಲೂ ಬೀದಿಬೀದಿಗಳಲ್ಲೂ ಹಾಡಿ ಪ್ರಚಾರ ಮಾಡಿದರು. ಮುಂದೆ, ಈ ರಾಮಾಯಣವೇ ಕವಿಗಳಿಗೆ ಆಧಾರವಾಯಿತು. ಒಂದು ದಿನ, ಲವ, ಕುಶರು ರಾಮಾಯಣವನ್ನು ರಾಜಬೀದಿಗಳಲ್ಲಿ ಹಾಡುತ್ತಿದ್ದಾಗ ಸ್ವಯಂ ಶ್ರೀರಾಮನೇ ಅವರನ್ನು ಕಂಡು, ಅವರನ್ನು ಅರಮನೆಗೆ ಕರೆಸಿ ಯಥಾಯೋಗ್ಯವಾಗಿ ಉಪಚರಿಸಿದನು. ಈ ಸಮಯದಲ್ಲಿ ರಾಮನು ಅಶ್ವಮೇಧ ಯಾಗ ಮಾಡುತ್ತಿದ್ದನು. ಲವ, ಕುಶರಿಗೆ ಅವನು ಧನವನ್ನು ಅರ್ಪಿಸಲು, ವನವಾಸಿಗಳಾದ ತಮಗೆ ಧನವು ಬೇಡವೆಂದರು. ರಾಮನು ಅವರನ್ನು ಆ ಮಹಾಕಾವ್ಯದ ಬಗ್ಗೆ ವಿಚಾರಿಸಲು, ಅವರು ಅದೆಲ್ಲವನ್ನೂ ಹೇಳಿ ತಮ್ಮ ಗುರುಗಳಾದ ಭೃಗುವಂಶದ ವಾಲ್ಮೀಕಿಗಳು ಅದನ್ನು ರಚಿಸಿರುವರೆಂದೂ ಅವರು ಆ ಯಾಗಶಾಲೆಗೆ ಬಂದಿರುವರೆಂದೂ ಹೇಳಿದರು. ಆಗ ರಾಮನು, ಭರತಾದಿ ಸಹೋದರರಿಗೆ," ಸೋದರರೇ! ಇವರು ಈಗ ಹಾಡಲಿರುವ ಅದ್ಭುತ ಆಖ್ಯಾನವನ್ನು ಆಲಿಸಿ!" ಎಂದು ಹೇಳಿ, ಲವ, ಕುಶರಿಗೆ ಹಾಡಲು ಹೇಳಿದನು. ಅದರಂತೆ ಅವರು ರಾಮಾಯಣ ಕಾವ್ಯವನ್ನು ಶ್ರೀರಾಮನ ಮುಂದೆಯೇ ಹಾಡಿದರು. ಶ್ರೀರಾಮನು ಅವರ ಗಾಯನದಲ್ಲಿ ತಲ್ಲೀನನಾಗಿ ಹೋದನು. ಅಂತೆಯೇ ಅವನ ಸಹೋದರರೂ ಸಭಿಕರೂ ಆನಂದಪರವಶರಾದರು. ಅನಂತರ, ಯಜ್ಞಕರ್ಮದ ಮಧ್ಯೆ ಬಿಡುವಾದಾಗಲೆಲ್ಲಾ ರಾಮಾಯಣ ಗಾನವನ್ಞು ಕೇಳಿದನು. ಲವ, ಕುಶರ ಗಾಯನವನ್ನು ಕೇಳುತ್ತಾ ರಾಮನಿಗೆ ಅವರು ತನ್ನ ಮಕ್ಕಳೇ ಎಂಬುದು ಆರಿವಾಗಿ ವಾಲ್ಮೀಕಿಗಳ ಬಿಡಾರಕ್ಕೆ ದೂತರನ್ನು ಕಳಿಸಿ, ಸೀತೆಯು ಎಲ್ಲರ ಮುಂದೆ ತನ್ನ ಶುದ್ಧ ಚಾರಿತ್ರ್ಯವನ್ನು ಪ್ರಮಾಣೀಕರಿಸಲು ಒಪ್ಪುವಳೇ ಎಂದು ಕೇಳಲು ಹೇಳಿದನು. ಅವರು ಹಾಗೆಯೇ ಮಾಡಲು, ವಾಲ್ಮೀಕಿಗಳು ಹೌದೆಂದು ಹೇಳಿ ಸೀತೆಯೊಡನೆ ಯಾಗಶಾಲೆಗೆ ಬಂದು, ಸೀತೆಯು ಪವಿತ್ರಳೆಂದು ಹೇಳಿದರು. ಆಗ ರಾಮನು ಲೋಕಾಪವಾದಕ್ಕಾಗಿ ತನಗೆ ಗೊತ್ತಿದ್ದರೂ ಸೀತೆಯನ್ನು ಪರಿತ್ಯಜಿಸಿದುದಕ್ಕೆ ಕ್ಷಮೆಯಾಚಿಸಿ, ಸೀತೆಯು ಒಮ್ಮೆ ಹಾಗೆ ಶಪಥ ಮಾಡಲಿ ಎಂದನು. ಬ್ರಹ್ಮಾದಿ ದೇವತೆಗಳೇ ನೆರೆದರು! ಸೀತೆಯು ತನ್ನ ಮನಸ್ಸಿನಲ್ಲಿ ರಾಮನನ್ನು ಬಿಟ್ಟು ಬೇರಾರೂ ಇಲ್ಲವಾದರೆ ತಾನು ಭೂಮಿಯಲ್ಲಿ ಸೇರುವಂತಾಗಲಿ ಎಂದು ಹೇಳಲು, ಭೂಮಿಯು ತೆರೆದುಕೊಂಡು, ಭೂದೇವಿಯು ಒಂದು ಸಿಂಹಾಸನದ ಮೇಲೆ ಬಂದು ಸೀತೆಯನ್ನು ತನ್ನೊಂದಿಗೆ ರಸಾತಲಕ್ಕೆ ಕರೆದೊಯ್ದಳು! ಆಗ ಶ್ರೀರಾಮನು ದುಃಖ ಕೋಪಗಳಿಂದ ವಿಲಪಿಸುತ್ತಾ ಭೂಮಿಯನ್ನು ಸೀತೆಯನ್ನು ಹಿಂದಿರುಗಿಸಲು ಬೇಡುತ್ತಾ ಇಲ್ಲವಾದರೆ ಭೂಮಿಯನ್ನೇ ನಾಶ ಮಾಡುವೆನೆಂದು ಗರ್ಜಿಸಲು, ಬ್ರಹ್ಮನು ಅವನನ್ನು ಸಮಾಧಾನಪಡಿಸಿ ಅವನು ವಿಷ್ಣುವಿನ ಅವತಾರವೆಂದೂ ಅವತಾರ ಸಮಾಪ್ತಿಯಾದ ಬಳಿಕ ಸೀತೆಯನ್ನು ಕೂಡಿಕೊಳ್ಳುವನೆಂದೂ ಸಮಾಧಾನಪಡಿಸಿದನು. 
    ಅನಂತರ, ಶ್ರೀರಾಮನು ಲವ, ಕುಶರಿಂದ ರಾಮಾಯಣದ ಉಳಿದ ಭಾಗದ ಗಾಯನವನ್ನು ಕೇಳಿದನು. 
    ಹೀಗೆ ವಾಲ್ಮೀಕಿಗಳು ರಾಮಾಯಣ ಕಾವ್ಯವನ್ನು ರಚಿಸಿ, ಶ್ರೀರಾಮನ ಮಕ್ಕಳಾದ ಲವ,ಕುಶರಿಂದಲೇ ಅದನ್ನು ಪ್ರಚಾರ ಮಾಡಿಸಿದರು.
    ವಾಲ್ಮೀಕಿ ಮಹರ್ಷಿಗಳು ಮೊದಲು ಹೇಳಿದ ಮಾ ನಿಷಾದ ಶ್ಲೋಕವನ್ನು ಕೆಲವು ವಿದ್ವಾಂಸರು ಚಮತ್ಕಾರದಿಂದ ಬೇರೆ ರೀತಿಯಲ್ಲಿ ಅರ್ಥೈಸುತ್ತಾರೆ. ಮಾ ಎಂದರೆ ಲಕ್ಷ್ಮಿ. ನಿಷಾದ ಎಂದರೆ ಆಶ್ರಯ ನೀಡಿರುವವನು ಎಂದೂ ಆಗುತ್ತದೆ. ಹೀಗೆ ಮಾ ನಿಷಾದ ಎರಡನ್ನೂ ಸೇರಿಸಿ ಮಾನಿಷಾದ ಎಂದು ಒಂದೇ ಪದ ಮಾಡಿದರೆ ಆಗ ಅರ್ಥ ಹೀಗಾಗುತ್ತದೆ -
   ' ಲಕ್ಷ್ಮಿಗೆ ಆಶ್ರಯನಾದ ಹೇ ವಿಷ್ಣುವೇ!  ಕ್ರೌಂಚ ಪಕ್ಷಿಗಳ ಜೋಡಿಯಲ್ಲಿ ( ರಾವಣ, ಮಂಡೋದರಿಯರಲ್ಲಿ), ಕಾಮಮೋಹಿತವಾಗಿದ್ದ ಒಂದನ್ನು ( ಕಾಮಮೋಹಿತನಾಗಿದ್ದ ರಾವಣನನ್ನು) ಕೊಂದೆಯಾದ್ದರಿಂದ ಬಹಳ ಕಾಲ ಪ್ರತಿಷ್ಠೆಯನ್ನು ಹೊಂದು!' 
     ಹೀಗೆ ವಿದ್ವಾಂಸರು ಈ ಶ್ಲೋಕವನ್ನು ಸ್ವಾರಸ್ಯಕರವಾಗಿ ವಿಷ್ಣುಪರವಾಗಿ ಅರ್ಥ ಮಾಡಿ ರಾಮಾಯಣದ ಕಥೆಯೇ ಬರುವಂತೆ ಮಾಡಿದ್ದಾರೆ. 


    
    

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ