ಕೇತಕಿ ತವ ಯದಿ ನ ಕೃತಂ ಪರಿಶೀಲನಮಾದರಾನ್ಮಹೇಶೇನ ।
ನ ಕಾಪಿ ಹಾನಿ: ಸೌರಭ್ಯಾಕೃಷ್ಟಮಧುಪಾಯಾ: ।।
ಕನ್ನಡ ಅನುವಾದ
ಸಖಿಯು ನಾಯಕಿಗೆ ಕೇತಕಿ ಪುಷ್ಪವೆಂಬಂತೆ ಹೇಳುತ್ತಾಳೆ," ಹೇ ಕೇತಕಿ ಪುಷ್ಪವೇ! ಶಿವನು ನಿನ್ನನ್ನು ಆದರದಿಂದ ಧರಿಸದಿದ್ದರೆ, ನಿನ್ನ ಸೌರಭದಿಂದ ದುಂಬಿಗಳನ್ನು ಆಕರ್ಷಿಸುವ ನಿನಗೆ ಏನೂ ಹಾನಿಯಿಲ್ಲ!"
ಇಲ್ಲಿ ಕವಿಯು ಪುನಃ ಪೌರಾಣಿಕ ಉದಾಹರಣೆಯ ಮೂಲಕ ಒಂದು ಶೃಂಗಾರ ಅನ್ಯೋಕ್ತಿಯನ್ನು ರಚಿಸಿದ್ದಾನೆ. ಶಿವಪುರಾಣದ ಪ್ರಕಾರ, ಬ್ರಹ್ಮ ಮತ್ತು ವಿಷ್ಣುವಿನ ನಡುವೆ ಯಾರು ಹೆಚ್ಚೆಂದು ವಾಗ್ವಾದವಾದಾಗ ಒಂದು ಉದ್ದವಾದ ಜ್ಯೋತಿರ್ಲಿಂಗ ಉದ್ಭವಿಸಿತು. ಅದರ ಆದಿಯನ್ನು ಕಂಡುಹಿಡಿಯಲು ಬ್ರಹ್ಮನು ಹಂಸದ ರೂಪದಿಂದಲೂ ಅಂತ್ಯವನ್ನು ಪತ್ತೆಮಾಡಲು ವಿಷ್ಣುವು ವರಾಹದ ರೂಪದಿಂದಲೂ ಹೋದರು. ಮೇಲಿನಿಂದ ಕೇತಕಿ ಪುಷ್ಪವು ಬೀಳುತ್ತಿರಲು, ಬ್ರಹ್ಮನು ತಾನು ಲಿಂಗದ ಆದಿಯನ್ನು ನೋಡಿರುವುದಕ್ಕೆ ಸಾಕ್ಷಿ ಹೇಳಲು ಅದಕ್ಕೆ ಹೇಳಿ ಒಪ್ಪಿಸಿದನು. ವಿಷ್ಣುವು ಲಿಂಗದ ಅಂತ್ಯವನ್ನು ಕಾಣದೆ ಹಿಂದಿರುಗಿ ಬ್ರಹ್ಮನ ಬಳಿ ತನ್ನ ಸೋಲೊಪ್ಪಿಕೊಂಡನು. ಬ್ರಹ್ಮನಾದರೋ ತಾನು ಆದಿಯನ್ನು ನೋಡಿರುವುದಾಗಿ ಸುಳ್ಳು ಹೇಳಲು, ಕೇತಕಿ ಪುಷ್ಪವು ಹೌದೆಂದು ಸುಳ್ಳು ಸಾಕ್ಷಿ ಹೇಳಿತು. ಆಗ ಆ ಜ್ಯೋತಿರ್ಲಿಂಗದಿಂದ ಶಿವನು ಪ್ರತ್ಯಕ್ಷನಾಗಿ ಸುಳ್ಳು ಹೇಳಿದ ಬ್ರಹ್ಮನಿಗೆ ಇನ್ನು ಮುಂದೆ ಪೂಜೆಯೇ ಇರದಿರಲೆಂದು ಶಪಿಸಿ ಸತ್ಯ ಹೇಳಿದ ವಿಷ್ಣುವಿಗೆ ತನ್ನ ಸಮಾನತೆಯನ್ನು ಕೊಟ್ಟನು. ಸುಳ್ಳು ಸಾಕ್ಷಿ ಹೇಳಿದ ಕೇತಕಿ ಪುಷ್ಪವನ್ನು ಇನ್ನು ಮುಂದೆ ತಾನು ಪೂಜೆಯಲ್ಲಿ ಸ್ವೀಕರಿಸುವುದಿಲ್ಲ ಎಂದು ಹೇಳಿದನು.
ಈ ಕಥೆಯನ್ನಿಟ್ಟುಕೊಂಡು ಕವಿಯು ಕೇತಕಿ ಪುಷ್ಪಕ್ಕೆ ಹೇಳುವಂತೆ ಸಖಿಯು ಒಬ್ಬ ಸುಂದರ ಯುವತಿಗೆ ಸಾಂತ್ವನ ಹೇಳುವ ರೀತಿಯಲ್ಲಿ ಪದ್ಯ ರಚಿಸಿದ್ದಾನೆ. ಅವಳು ಕೇತಕಿ ಪುಷ್ಪಕ್ಕೆ ಶಿವನು ಅದನ್ನು ಆದರದಿಂದ ಧರಿಸದಿದ್ದರೆ ಏನೂ ಹಾನಿಯಿಲ್ಲ ಎಂದು ಹೇಳುತ್ತಾಳೆ. ಏಕೆಂದರೆ, ಅನೇಕ ದುಂಬಿಗಳನ್ನು ಆಕರ್ಷಿಸುವ ಸೌರಭ ಕೇತಕಿ ಪುಷ್ಪಕ್ಕೆ ಇದೆ, ಹಾಗಾಗಿ ಶಿವನಲ್ಲದಿದ್ದರೇನು, ಯಾವುದಾದರೂ ದುಂಬಿ ಅದರ ಬಳಿ ಬಂದೇ ಬರುತ್ತದೆ ಎಂದು ಸಾಂತ್ವನ ಹೇಳುತ್ತಾಳೆ. ಇದನ್ನು ನಾಯಕಿಗೆ ಅನ್ವಯಿಸಿದಾಗ, ಯಾರೋ ಒಬ್ಬ ನಾಯಕ ಅವಳನ್ನು ನಿರಾಕರಿಸಿದರೆ ಏನೂ ಚಿಂತೆಯಿಲ್ಲ. ಏಕೆಂದರೆ ಇನ್ನೂ ಅನೇಕ ನಾಯಕರನ್ನು ಆಕರ್ಷಿಸುವ ಸೌಂದರ್ಯ ಅವಳಿಗಿರುವುದರಿಂದ ಇನ್ನೊಬ್ಬ ಪ್ರೇಮಿ ಅವಳಿಗೆ ಸಿಕ್ಕೇ ಸಿಗುತ್ತಾನೆ ಎಂದು ಸಖಿಯು ಸಾಂತ್ವನ ಹೇಳುತ್ತಿದ್ದಾಳೆ ಎಂಬ ಅರ್ಥ ಬರುತ್ತದೆ. ಒಬ್ಬಳು ತನ್ನ ಪ್ರೇಮವನ್ನು ಒಬ್ಬ ಪುರುಷನಿಗೆ ಅಭಿವ್ಯಕ್ತಿಪಡಿಸಿದಾಗ ಆ ಪುರುಷನು ನಿರಾಕರಿಸಿದರೆ ಇವಳಿಗೆ ಆಘಾತವಾಗುತ್ತದೆ! ಆದರೆ ಹಾಗೆ ಆಘಾತ ಮಾಡಿಕೊಳ್ಳಬೇಕಿಲ್ಲ; ಶಿವನು ಕೇತಕಿ ಪುಷ್ಪವನ್ನು ನಿರಾಕರಿಸಿದರೂ ಆ ಕೇತಕಿಗೆ ಇತರ ದುಂಬಿಗಳನ್ನು ಆಕರ್ಷಿಸುವ ಸೌರಭ ಇರುವಂತೆ ಇವಳಿಗೂ ಇತರ ಪುರುಷರನ್ನು ಆಕರ್ಷಿಸುವ ಸೌಂದರ್ಯ ಇದೆ; ಹಾಗಾಗಿ ಇನ್ನೊಬ್ಬ ಯೋಗ್ಯ ಪ್ರೇಮಿ ಸಿಗುತ್ತಾನೆ ಎಂದು ತಾತ್ಪರ್ಯ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ