ಬುಧವಾರ, ಏಪ್ರಿಲ್ 22, 2026

ಸುಂದರೀಶತಕ -೨೭

ಸಂಸ್ಕೃತ ಮೂಲ 

ಯುವಜನಮಾರಣಶಾಲಾ ಸುಂದರಿ ವೇಣೀಕೃಪಾಣಿಕೋಪೇತಾ /
ತವ ಚರಮಮಂಗಮೇತತ್ಕವಯಿತ್ವಾ ಪಾತಕೀ ಕ: ಸ್ಯಾತ್ //

ಕನ್ನಡ ಅನುವಾದ 

     ' ಎಲೈ ಸುಂದರಿ! ನಿನ್ನ ಜಡೆಯೆಂಬ ಕಠಾರಿಯೊಂದಿಗೆ ನೀನು ನಿಜಕ್ಕೂ ಯುವಕರಿಗೆ ಮಾರಣಶಾಲೆಯೇ ಆಗಿರುವೆ! ನಿನ್ನ ಈ ಚರಮಾಂಗವನ್ನು ಕವಿತ್ವದಿಂದ ವರ್ಣಿಸಿ ಯಾರು ತಾನೇ ಪಾತಕಿಯಾಗುವನು?' 

    ಸುಂದರಿಯ ಜಡೆ ಅದೆಷ್ಟು ಸುಂದರವಾಗಿದೆಯೆಂದರೆ ಅದು ಯುವಜನರ ಮನಸ್ಸನ್ನು ವಶಪಡಿಸಿಕೊಳ್ಳುತ್ತಿದೆ! ಹಾಗಾಗಿ ಕವಿಯು ಆ ಜಡೆಯನ್ನು ಯುವಕರನ್ನು ಕೊಲ್ಲುವ ಕಠಾರಿಗೆ ಹೋಲಿಸುತ್ತಾನೆ! ಇಂಥ ಕಠಾರಿಯಂಥ ಕೇಶಪಾಶವನ್ನು ಹೊಂದಿರುವ ಅವಳು ಯುವಕರನ್ನು ಕೊಲ್ಲುವ ಮಾರಣಶಾಲೆಯೇ ಹೌದು ಎನ್ನುತ್ತಾನೆ! ಅವಳ ಈ ಚರಮಾಂಗವನ್ನು, ಅಂದರೆ ದುಷ್ಟ ಅಂಗವನ್ನು ( ಅಂತ್ಯವನ್ನು ತರುವ) ಅಥವಾ ಕೊನೆಯ ಅಂಗವನ್ನು ( ನಖಶಿಖಾಂತ ವರ್ಣನೆಯಲ್ಲಿ ಕೊನೆಯ ಅಂಗ) ವರ್ಣಿಸಿ ಪಾತಕಿಯಾಗುವ ಕವಿ ಯಾರು ತಾನೇ ಇದ್ದಾರೆ ಎಂದು ಕವಿಯೇ ಕೇಳುತ್ತಾನೆ! ಅಂದರೆ ಯುವಕರನ್ನು ಕೊಲ್ಲುತ್ತಿರುವ ಅವಳ ಕಠಾರಿಯಂಥ ಕೇಶಪಾಶವನ್ನು ವರ್ಣಿಸಿದರೆ ಕವಿಯು ಪಾಪಿಯಾಗುತ್ತಾನೆ ಎಂದು ವಿರೋಧಾತ್ಮಕವಾಗಿ ಅವಳ ಕೇಶ ಸೌಂದರ್ಯವನ್ನು ವರ್ಣಿಸುತ್ತಾನೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ