ಭಾನುವಾರ, ಏಪ್ರಿಲ್ 12, 2026

ಸುಂದರೀಶತಕ -೨೧


ಸಂಸ್ಕೃತ ಮೂಲ 

ಸುಂದರಿ ತವ ದೃಕ್ತುಲನಾಮಾರೋಢುಂ ವಿಕಸಿತಂ ಸರೋಜೇನ /
ವಿಧಿನಾ ತದೈವ ದತ್ತಂ ಪರಾಗಮಿಷತೋ ಮುಖೋsಸ್ಯ ರಜ: //

ಕನ್ನಡ ಅನುವಾದ 

     ' ಸುಂದರಿ! ನಿನ್ನ ಕಣ್ಣುಗಳಿಗೆ ಸಮಾನವಾಗಬೇಕೆಂದು ತಾವರೆ ಹೂವು ಅರಳುತ್ತಿರಲು, ಆಗಷ್ಟೇ ವಿಧಾತನು ಅದರಲ್ಲಿ ಪರಾಗದ ನೆಪದಲ್ಲಿ ಧೂಳನ್ನು ಹಾಕಿಬಿಟ್ಟನು!' 
      ಸುಂದರಿಯ ಕಂಗಳಿಗೆ ಸಮಾನವಾಗಲೆಂದು ತಾವರೆ ಹೂವು ಅರಳುತ್ತಿರಲು, ಅದನ್ನು ವಿಧಿ ಅಥವಾ ವಿಧಾತ, ಅಂದರೆ ಬ್ರಹ್ಮನೂ ಇಷ್ಟಪಡದೇ ಅದರಲ್ಲಿ ಪರಾಗದ ನೆಪದಲ್ಲಿ ಧೂಳನ್ನು ಹಾಕಿಬಿಟ್ಟ ಎನ್ನುತ್ತಾ ಕವಿಯು ಹೆಣ್ಣಿನ ಕಂಗಳು ತಾವರೆಹೂವಿಗಿಂತಲೂ ಸುಂದರ ಎಂದು ವರ್ಣಿಸುತ್ತಾ ಇಲ್ಲಿ ವ್ಯತಿರೇಕ ಅಲಂಕಾರ ಬಳಸಿದ್ದಾನೆ. ಅಂದರೆ, ಉಪಮೇಯವು ( ಹೋಲಿಕೆಗೊಳಗಾಗುವ ವಸ್ತು -ಇಲ್ಲಿ ಕಣ್ಣು), ಉಪಮಾನ ( ಹೋಲಿಕೆಗೆ ಬಳಸುವ ಶ್ರೇಷ್ಠ ಅಥವಾ ಜನಪ್ರಿಯ ವಸ್ತು - ಇಲ್ಲಿ ತಾವರೆ ಹೂವು) ಕ್ಕಿಂತ ಶ್ರೇಷ್ಠವೆಂದು ಹೇಳಲಾಗುವ ಅಲಂಕಾರ.  ಇಲ್ಲಿ ಹೋಲಿಕೆಗೊಳಗಾಗುವ ವಸ್ತು ಕಣ್ಣು. ಅದು ಉಪಮೇಯ. ಅದನ್ನು ಹೋಲಿಕೆಗೆ ಬಳಸುವ ಶ್ರೇಷ್ಠ ಅಥವಾ ಜನಪ್ರಿಯ ವಸ್ತು ತಾವರೆ ಹೂವು. ಅದು ಉಪಮಾನ. ಉಪಮೇಯವು ಉಪಮಾನದಂತಿದೆ ಎಂದು ಸಾಮಾನ್ಯವಾಗಿ ಉಪಮಾಲಂಕಾರದಲ್ಲಿ ಹೇಳುತ್ತೇವೆ. ಅಂದರೆ ಸಾಮಾನ್ಯವಾಗಿ ಕಣ್ಣು ತಾವರೆಯಂತಿದೆ ಎನ್ನುತ್ತೇವೆ. ಆದರೆ ಇಲ್ಲಿ ಕಣ್ಣು ತಾವರೆಗಿಂತ ಶ್ರೇಷ್ಠ ಎಂದು ಹೇಳಿದ್ದಾನೆ ಕವಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ