ಈಗ ನರಸಿಂಹಾವತಾರದ ಮೂರು ವಿಭಿನ್ನ ರೀತಿಯ ಕಥೆಗಳನ್ನು ನೋಡೋಣ. ಹೆಚ್ಚು ಪ್ರಚಲಿತವೂ ಪ್ರಸಿದ್ಧವೂ ಆಗಿರುವುದು ಭಾಗವತ ಪುರಾಣದ ಕಥೆ. ವಿಷ್ಣುವು ವರಾಹಾವತಾರ ತಾಳಿ ಹಿರಣ್ಯಾಕ್ಷ ದೈತ್ಯನನ್ನು ವಧಿಸಲು, ಕುಪಿತಗೊಂಡ ಅವನ ಅಣ್ಣ ಹಿರಣ್ಯಕಶಿಪುವು ಬ್ರಹ್ಮನನ್ನು ಕುರಿತು ತಪಸ್ಸು ಮಾಡಿ, ಹಗಲಿನಲ್ಲಾಗಲಿ ರಾತ್ರಿಯಲ್ಲಾಗಲಿ, ಮನೆಯ ಒಳಗಾಗಲಿ ಹೊರಗಾಗಲಿ, ಆಕಾಶದಲ್ಲಾಗಲಿ ಭೂಮಿಯ ಮೇಲಾಗಲಿ, ಯಾವುದೇ ಆಯುಧದಿಂದಾಗಲಿ, ಸುರನರೋರಗಯಕ್ಷರಾಕ್ಷಸಗಂಧರ್ವಕಿನ್ನರಕಿಂಪುರುಷರಿಂದಾಗಲಿ, ಪಶುಪಕ್ಷಿಕ್ರಿಮಿಕೀಟಾದಿ ಬ್ರಹ್ಮ ಸೃಷ್ಟಿಯ ಯಾವುದೇ ಜೀವಿಯಿಂದಾಗಲಿ ತನಗೆ ಮರಣವುಂಟಾಗಬಾರದೆಂಬ ವರವನ್ನು ಪಡೆದ. ಈ ವರದಿಂದ ಗರ್ವಿತನಾಗಿ ಮೂರು ಲೋಕಗಳಿಗೂ ಕಂಟಕಪ್ರಾಯನಾಗಿ ಸ್ವರ್ಗವನ್ನೂ ಆಕ್ರಮಿಸಿಕೊಂಡ! ಋಷಿಮುನಿಗಳನ್ನು ಹಿಂಸಿಸಿ ಎಲ್ಲೆಲ್ಲೂ ಹರಿ ಪೂಜೆಯನ್ನು ನಿಷೇಧಿಸಿ ತನ್ನ ಪೂಜೆಯನ್ನು ಮಾಡಬೇಕೆಂದು ಆದೇಶ ಹೊರಡಿಸಿದ!
ಹಿರಣ್ಯಕಶಿಪು ತಪಸ್ಸಿಗೆ ಹೋಗಿದ್ದಾಗ ಅವನ ಪತ್ನಿ ಕಯಾದುವು ಗರ್ಭಣಿಯಾಗಿದ್ದಳು. ಅವಳಿಗೆ ಮಗು ಹುಟ್ಟಿದರೆ ಅವನು ಹಿರಣ್ಯಕಶಿಪುವಿನಂತೆ ಇನ್ನೊಬ್ಬ ಲೋಕಕಂಟಕನಾಗುವನೆಂದು ಬಗೆದು ದೇವೇಂದ್ರನು ಅವಳನ್ನು ಅಪಹರಿಸಿ ಕೋಲ್ಲಲು ಹೊರಟನು. ಆಗ ನಾರದರು ಅಡ್ಡ ಬಂದು, ಅವಳ ಹೊಟ್ಟೆಯಲ್ಲಿ ಬೆಳೆಯುತ್ತಿರುವುದು ಒಬ್ಬ ಮಹಾಭಾಗವತನೆಂದು ಆಶ್ವಾಸಿಸಿ ಅವಳನ್ನು ತಮ್ಮ ಆಶ್ರಮಕ್ಕೆ ಕರೆದೊಯ್ದು ಉಪಚರಿಸಿದರು. ಅಲ್ಲಿ ಅವರು ಅವಳಿಗೆ ನಿತ್ಯವೂ ಹರಿಕಥೆಗಳನ್ನು ಹೇಳುತ್ತಾ ಹರಿಭಕ್ತಿಯ ಬಗ್ಗೆ ಉಪದೇಶ ಮಾಡುತ್ತಿರಲು, ಅವಳು ಅಷ್ಟಾಗಿ ಅವನ್ನು ಕೇಳದೆ ನಿದ್ರೆ ಹೋಗುತ್ತಿದ್ದಳು. ಆದರೆ ಅವಳ ಗರ್ಭದಲ್ಲಿದ್ದ ಮಗು ಎಲ್ಲವನ್ನೂ ಕೇಳಿ ಮಹಾಭಕ್ತನಾದನು. ಅವನೇ ಪ್ರಹ್ಲಾದ.
ಹಿರಣ್ಯಕಶಿಪು ಲೋಕಕಂಟಕನಾಗಿರಲು, ದೇವತೆಗಳು ವಿಷ್ಣುವಿನ ಮೊರೆ ಹೊಕ್ಕು ತಮ್ಮನ್ನು ಕಾಪಾಡುವಂತೆ ಬೇಡಿದರು. ಆಗ ವಿಷ್ಣುವು, ಯಾವಾಗ ಹಿರಣ್ಯಕಶಿಪುವು ತನ್ನ ಮಗನನ್ನೇ ಹಿಂಸಿಸುವನೋ ಆಗ ತಾನು ಅವತಾರವೆತ್ತಿ ಅವನನ್ನು ವಧಿಸುವೆನೆಂದು ಆಶ್ವಾಸನೆಯಿತ್ತನು.
ಮುಂದೆ, ಹಿರಣ್ಯಕಶಿಪುವು ಷಂಡ, ಅಮರ್ಕ ಎಂಬ ಶುಕ್ರಾಚಾರ್ಯರ ಇಬ್ಬರು ಪುತ್ರರ ಬಳಿಗೆ ಪ್ರಹ್ಲಾದನನ್ನು ವಿದ್ಯಾಭ್ಯಾಸಕ್ಕೆ ಕಳಿಸಿದ. ಬಹುಕಾಲದ ನಂತರ ಅವನು ಪ್ರಹ್ಲಾದನನ್ನು ಮನೆಗೆ ಕರೆಸಿಕೊಂಡು ಒಂದು ಸುಭಾಷಿತ ಹೇಳಲು ಕೇಳಿದಾಗ, ಪ್ರಹ್ಲಾದನು ಸಂಸಾರಕೂಪದಿಂದ ಪಾರಾಗಲು ಹರಿ ಸ್ಮರಣೆ ಮಾಡಬೇಕೆಂದನು. ಇದರಿಂದ ಕುಪಿತಗೊಂಡ ಹಿರಣ್ಯಕಶಿಪುವು ಯಾರೋ ಅವನ ತಲೆ ಕೆಡಿಸಿರಬೇಕೆಂದು ಯೋಚಿಸಿ, ಅವನಿಗೆ ಸರಿಯಾದ ಶಿಕ್ಷಣ ಕೊಡಬೇಕೆಂದು ಷಂಡಾಮರ್ಕರಿಗೆ ಆಗ್ರಹಿಸಿದ. ಅವರು ಅವನನ್ನು ಬೈದು, ಹೊಡೆದು, ಎಲ್ಲಾ ಮಾಡಿ, ಹಿರಣ್ಯಕಶಿಪುವನ್ನೇ ದೇವರೆಂದು ಪೂಜಿಸಬೇಕೆಂದು ಬೋಧಿಸಿದರೂ ಪ್ರಹ್ಲಾದನು ತನ್ನ ಪಟ್ಟು ಬಿಡಲಿಲ್ಲ. ನಾರಾಯಣನೇ ಭಗವಂತ, ಅವನನ್ನೇ ಭಜಿಸಬೇಕು ಎಂದು ಹೇಳುತ್ತಿದ್ದ. ಗುರುಗಳು ಅವನನ್ನು ಹಿರಣ್ಯಕಶಿಪುವಿನ ಬಳಿಗೆ ಕರೆತಂದು ಅವನು ಹೇಳುತ್ತಿರುವುದನ್ನು ತಾವು ಕಲಿಸಿಲ್ಲವೆಂದೂ ಅದು ಎಲ್ಲಿಂದ ಬರುತ್ತಿದೆಯೋ ಗೊತ್ತಿಲ್ಲ ಎಂದೂ ಹೇಳಿದರು. ಆಗ ಹಿರಣ್ಯಕಶಿಪುವು ಪ್ರಹ್ಲಾದನನ್ನು ಕೊಲ್ಲಿಸಲು ರಾಕ್ಷಸರಿಂದ ಹಿಂಸೆಗೊಳಿಸಿದನು, ಬೆಟ್ಟದಿಂದ ಬೀಳಿಸಿದನು, ಸಮುದ್ರಕ್ಕೆ ತಳ್ಳಿಸಿದನು, ಬೆಂಕಿಗೆ ದೂಡಿಸಿದನು, ಸರ್ಪಗಳಿಂದ ಕಚ್ಚಿಸಲು ಹಾಗೂ ಆನೆಯಿಂದ ತುಳಿಸಲು ಪ್ರಯತ್ನಿಸಿದನು. ಆದರೆ ಪ್ರಹ್ಲಾದನು ಹರಿದಯೆಯಿಂದ ಕೂದಲೂ ಕೊಂಕದೆ ಪಾರಾದನು. ಕೊನೆಗೆ ಅವನನ್ನು ಪುನಃ ಗುರುಕುಲಕ್ಕೆ ಕಳಿಸಲು ಅವನು ಇತರ ರಾಕ್ಷಸ ಬಾಲಕರಿಗೂ ಹರಿಭಜನೆ ಕಲಿಸಿ ಅವರನ್ನೂ ಭಕ್ತರನ್ನಾಗಿ ಮಾಡಿದನು. ಅವರಿಗೆ ಅನೇಕ ಆಧ್ಯಾತ್ಮಿಕ ಉಪದೇಶಗಳನ್ನು ನೀಡಿದನು. ಈ ಹರಿಭಕ್ತಿ, ಆಧ್ಯಾತ್ಮಿಕ ವಿಚಾರಗಳು ಅವನಿಗೆ ಹೇಗೆ ತಿಳಿದವೆಂದು ರಾಕ್ಷಸ ಬಾಲಕರು ಕೇಳಲು, ಅವನು ಗರ್ಭದಲ್ಲಿದ್ದಾಗ ನಾರದರು ಮಾಡಿದ ಉಪದೇಶದ ಕಥೆಯನ್ನು ಹೇಳಿದನು. ಇದೆಲ್ಲವನ್ನು ನೋಡಿ ರೋಸಿಹೋದ ಗುರುಗಳು ಪುನಃ ಅವನನ್ನು ತಂದೆಯ ಬಳಿಗೆ ಕರೆದುತರಲು, ಹಿರಣ್ಯಕಶಿಪುವು ಅವನಿಗೆ ವಿಷಪ್ರಾಶನ ಮಾಡಿಸಿದನು. ಆಗಲೂ ಪ್ರಹ್ಲಾದನು ಸಾಯಲಿಲ್ಲ.
ಅತ್ಯಂತ ವಿಸ್ಮಿತನಾದ ಹಿರಣ್ಯಕಶಿಪು ಆಕ್ರೋಶದಿಂದ ತಾನೇ ಪ್ರಹ್ಲಾದನನ್ನು ಕೊಲ್ಲಲು ಮುಂದೆ ಬಂದು, "ಎಲ್ಲಿದ್ದಾನೆ ಆ ನಿನ್ನ ಹರಿ? ನಿನ್ನನ್ನು ಕಾಪಾಡಲು ಅವನನ್ನು ಕರೆ!" ಎಂದು ಆರ್ಭಟಿಸಿದನು. ಆಗ ಪ್ರಹ್ಲಾದನು ಹರಿಯು ಅಣು ರೇಣು ತೃಣ ಕಾಷ್ಠಾದಿ ಸಕಲ ಚರಾಚರ ವಸ್ತುಗಳಲ್ಲೂ ಇರುವನೆಂದು ದೃಢಭಕ್ತಿಯಿಂದ ಹೇಳಿದಾಗ, ಹಿರಣ್ಯಕಶಿಪುವು, ಹಾಗಿದ್ದರೆ ಅರಮನೆಯ ಕಂಬದಲ್ಲಿರುವನೇ ನೋಡೋಣ ಎಂದು ಒಂದು ಕಂಬವನ್ನು ಒಡೆಯಲು, ಪ್ರಹ್ಲಾದನ ಭಕ್ತಿ, ನಂಬಿಕೆಗಳನ್ನು ಉಳಿಸಲು ವಿಷ್ಣುವು ನರಸಿಂಹಸ್ವಾಮಿಯಾಗಿ ಅವತರಿಸಿ, ಹಿರಣ್ಯಕಶಿಪುವನ್ನು ತನ್ನ ತೊಡೆಯ ಮೇಲೆ ಹಾಕಿಕೊಂಡು, ಅರಮನೆಯ ಹೊಸ್ತಿಲ ಮೇಲೆ ಕುಳಿತು, ತನ್ನ ನಖಗಳಿಂದಲೇ ಅವನ ಉದರವನ್ನು ಬಗೆದು ಕೊಂದು ಅವನ ಕರುಳುಗಳನ್ನು ಮಾಲೆ ಹಾಕಿಕೊಂಡನು. ಆಗ ಸಂಜೆಯ ವೇಳೆಯಾಗಿತ್ತು. ಹಿರಣ್ಯಕಶಿಪುವಿನ ವರದಂತೆಯೇ ಎಲ್ಲವೂ ನಡೆದಿತ್ತು. ಆಗ ಹಗಲೂ ಅಲ್ಲದೇ ರಾತ್ರಿಯೂ ಅಲ್ಲದೆ, ಸಂಜೆಯಾಗಿತ್ತು. ಆಕಾಶದಲ್ಲಾಗಲಿ ಭೂಮಿಯಲ್ಲಾಗಲಿ ಹಿರಣ್ಯಕಶಿಪು ಸಾಯದೆ, ಮಧ್ಯದಲ್ಲಿ ನರಸಿಂಹನ ತೊಡೆಯ ಮೇಲೆ ಸತ್ತಿದ್ದನು. ಮನುಷ್ಯ, ದೇವ, ದೈತ್ಯ, ಮೃಗ, ಪಕ್ಷಿ ಇದಾವುದೂ ಅಲ್ಲದೆ, ಬ್ರಹ್ಮ ಸೃಷ್ಟಿಯಲ್ಲಿಯೇ ಇರದ ಮನುಷ್ಯ ದೇಹ ಹಾಗೂ ಸಿಂಹದ ಮುಖ ಇರುವ ಬ್ರಹ್ಮ ಸೃಷ್ಟಿಗೂ ಮೇಲಿನ ವಿಷ್ಣುವಿನ ನರಸಿಂಹಾವತಾರದಿಂದ ಅವನು ಸತ್ತಿದ್ದನು. ಆಯುಧಗಳಿಂದ ಅವನು ಸಾಯದೆ, ನರಸಿಂಹನ ನಖಗಳಿಂದಲೇ ಸತ್ತಿದ್ದನು. ಹೀಗೆ ಬ್ರಹ್ಮನ ವರಗಳನ್ನು ಪೂರೈಸಿಯೇ ವಿಷ್ಣು ಅವನನ್ನು ವಧಿಸಿದ್ದನು! ಆಗ ಅನೇಕ ದೈತ್ಯರು ನರಸಿಂಹನನ್ನು ಆಕ್ರಮಿಸಲು, ನರಸಿಂಹನು ಅವರೆಲ್ಲರನ್ನೂ ಸಂಹರಿಸಿದನು! ಅನಂತರ, ದೇವತೆಗಳೂ ಲಕ್ಷ್ಮಿಯೂ ಬಂದರೂ ನರಸಿಂಹನ ಉಗ್ರ ಕೋಪ ಆರದಿರಲು, ಬ್ರಹ್ಮನ ಮಾತಿನಂತೆ ಪ್ರಹ್ಲಾದನು ನರಸಿಂಹನನ್ನು ಸ್ತುತಿಸಿ ಸಮಾಧಾನಗೊಳಿಸಿದನು. ಸಮಾಧಾನಗೊಂಡ ನರಸಿಂಹನು ವರಗಳನ್ನು ಬೇಡಲು ಹೇಳಲು, ಪ್ರಹ್ಲಾದನು, ತನಗೆ ಯಾವುದೇ ಕಾಮನೆಯು ಹುಟ್ಟದಿರುವಂಥ ವರವನ್ನು ಕೊಡುವಂತೆಯೂ ಹರಿದ್ವೇಷಿಯಾಗಿದ್ದ ತನ್ನ ತಂದೆ ಪಾಪಗಳನ್ನು ಕಳೆದು ಪರಿಶುದ್ಧನಾಗಲೆಂದೂ ವರ ಬೇಡಿದನು. ಅದಕ್ಕೆ ನರಸಿಂಹಸ್ವಾಮಿಯು, ತನ್ನ ಸ್ಪರ್ಶದಿಂದಲೇ ಹಿರಣ್ಯಕಶಿಪುವು ಪವಿತ್ರನಾಗಿರುವನೆಂದೂ, ಪ್ರಹ್ಲಾದನಂಥ ಭಕ್ತನು ಅವನ ಕುಟುಂಬದಲ್ಲಿ ಹುಟ್ಟಿರುವುದರಿಂದ ಅವನಿಗೆ ಮೊದಲು ಇಪ್ಪತ್ತೊಂದು ತಲೆಮಾರುಗಳಿದ್ದಿದ್ದರೆ ಅವರೆಲ್ಲರೂ ಮುಕ್ತರಾಗುತ್ತಿದ್ದರು ಎಂದು ಹೇಳುತ್ತಾ ಪ್ರಹ್ಲಾದನಿಗೆ ದೈತ್ಯ ಚಕ್ರವರ್ತಿಯ ಪಟ್ಟಗಟ್ಟಿ ಅಂತರ್ಧಾನನಾದನು.
ಇದು ಭಾಗವತದಲ್ಲಿನ ನರಸಿಂಹಾವತಾರದ ಸಂಕ್ಷಿಪ್ತ ಕಥೆ. ವಿಷ್ಣುಪುರಾಣದಲ್ಲೂ ಕಥೆ ಬಹುತೇಕ ಹೀಗೆಯೇ ಇದ್ದರೂ, ಕೊನೆಯಲ್ಲಿ ನರಸಿಂಹನು ಕಂಬದಿಂದ ಬಂದ ಕಥೆಯೇ ಇಲ್ಲದೇ ಒಮ್ಮೆ ವಿಷ್ಣುವು ನರಸಿಂಹಾವತಾರ ತಾಳಿ ಹಿರಣ್ಯಕಶಿಪುವನ್ನು ಸಂಹರಿಸಿದನೆಂದು ಒಂದೇ ವಾಕ್ಯದಲ್ಲಿ ಹೇಳಲಾಗಿದೆ! ಇನ್ನೊಂದು ಸ್ವಾರಸ್ಯವೆಂದರೆ, ಇಲ್ಲಿ ಪ್ರಹ್ಲಾದನು ವಿಷ್ಣುವನ್ನು ಧ್ಯಾನಿಸುತ್ತಾ ಪೂರ್ತಿ ಅವನಲ್ಲಿ ತನ್ಮಯನಾಗಿ ತಾನು ಅವನಿಂದ ಅಭಿನ್ನ ಎಂಬ ಅದ್ವೈತಾತ್ಮಕ ಭಾವವನ್ನು ತಾಳುತ್ತಾನೆ. ಹಿರಣ್ಯಕಶಿಪು ಅವನನ್ನು ಸಮುದ್ರಕ್ಕೆ ತಳ್ಳಿಸಿದಾಗ, ಹರಿಧ್ಯಾನದಲ್ಲಿ ಮೈಮರೆತ ಪ್ರಹ್ಲಾದನು ಏನು ಆಗದೆ ಪಾರಾಗಿ ಸ್ವಲ್ಪ ಹೊತ್ತು ತಾನು ಪ್ರಹ್ಲಾದನೆಂದೂ ಮರೆತು, ಅನಂತರ ತಾನು ಪ್ರಹ್ಲಾದನೆಂದು ಸ್ಮರಿಸಿ ಅರಮನೆಗೆ ಹಿಂದಿರುಗುತ್ತಾನೆ. ಅವನು ಆ ಮಟ್ಟಿಗೆ ಹರಿಯೊಂದಿಗೆ ತಾದಾತ್ಮ್ಯ ಹೊಂದಿರುತ್ತಾನೆ. ಆಗ ಅವನು ಹರಿಯನ್ನು ಸ್ತುತಿಸಲು, ವಿಷ್ಣುವು ಪ್ರತ್ಯಕ್ಷನಾಗಿ ವರಗಳನ್ನು ಬೇಡಲು ಹೇಳುತ್ತಾನೆ. ಆಗ ಪ್ರಹ್ಲಾದನು ತಾನು ಯಾವುದೇ ಜನ್ಮದಲ್ಲಿ ಹುಟ್ಟಿದರೂ ಸದಾ ತನಗೆ ಹರಿಭಕ್ತಿಯಿರಲಿ ಹಾಗೂ ತನ್ನ ತಂದೆ ಹರಿದ್ವೇಷ ಹಾಗೂ ತನ್ನ ದ್ವೇಷ ಮತ್ತು ಹಿಂಸಾಚಾರದಿಂದ ಪಡೆದ ಪಾಪಗಳಿಂದ ಮುಕ್ತನಾಗಲಿ ಎಂದು ವರಗಳನ್ನು ಬೇಡುತ್ತಾನೆ ಹಾಗೂ ವಿಷ್ಣುವು ಮೂರನೆಯ ವರವನ್ನು ಬೇಡು ಎನ್ನಲು, ಪ್ರಹ್ಲಾದನು, ಹರಿಭಕ್ತಿ ಇರುವಾಗ, ಧರ್ಮಾರ್ಥಕಾಮಗಳಿಂದೇನು, ಅವನಿಗೆ ಮುಕ್ತಿಯೇ ಕರಸ್ಥಿತವಾಗಿರುತ್ತದೆ ಎನ್ನಲು, ವಿಷ್ಣುವು ಅವನಿಗೆ ಖಂಡಿತವಾಗಿಯೂ ಮುಕ್ತಿ ಸಿಗುತ್ತದೆ ಎಂದು ಹೇಳಿ ಅಂತರ್ಧಾನನಾಗುತ್ತಾನೆ. ಭಾಗವತದಲ್ಲಿ ನರಸಿಂಹಾವತಾರಕ್ಕೆ ಮೊದಲು ಪ್ರಹ್ಲಾದನು ಹೀಗೆ ವಿಷ್ಣುವನ್ನು ನೇರವಾಗಿ ಕಂಡಿರುವುದಿಲ್ಲ ಹಾಗೂ ವರಗಳನ್ನು ಪಡೆದಿರುವುದಿಲ್ಲ. ಇನ್ನೊಂದು ಸ್ವಾರಸ್ಯವೆಂದರೆ, ಪ್ರಹ್ಲಾದನು ಹೀಗೆ ಬದುಕಿ ಬರಲು, ಹಿರಣ್ಯಕಶಿಪುವು ಆನಂದಗೊಂಡು ಅವನನ್ನು ಅಪ್ಪಿಕೊಳ್ಳುತ್ತಾನೆ ಹಾಗೂ ಪಶ್ಚಾತ್ತಾಪ ಪಡುತ್ತಾನೆ. ಅನಂತರ, ಪ್ರಹ್ಲಾದನು ತಂದೆ ಮತ್ತು ಗುರುಗಳ ಸೇವೆ ಮಾಡಿಕೊಂಡಿದ್ದ ಎಂದು ಕಥೆ ಮುಂದುವರಿದು, ಮುಂದೊಂದು ದಿನ ವಿಷ್ಣುವು ನರಸಿಂಹಾವತಾರದ ಮೂಲಕ ಹಿರಣ್ಯಕಶಿಪುವನ್ನು ಸಂಹರಿಸಲು, ಪ್ರಹ್ಲಾದನು ದೈತ್ಯರಾಜನಾದನು ಎಂದು ಹಠಾತ್ತನೆ ಮುಗಿಯುತ್ತದೆ!
ಹರಿವಂಶದಲ್ಲಿ ನರಸಿಂಹಾವತಾರದ ಕಥೆ ಬಹಳ ವಿಭಿನ್ನವಾಗಿದೆ. ಹರಿವಂಶವು ಮಹಾಭಾರತದ ಖಿಲಭಾಗವಾಗಿದೆ. ಮಹಾಭಾರತದ ಕಥೆಯನ್ನು ಕೇಳಿದ ನಂತರ, ಜನಮೇಜಯನು ವೈಶಂಪಾಯನರನ್ನು ಶ್ರೀಕೃಷ್ಣನ ವಂಶಾವಳಿಯ ಕಥೆ ಹೇಳಲು ಕೇಳಲು, ಅವರು ಅದನ್ನು ಹೇಳುತ್ತಾ ವಿಷ್ಣುವಿನ ವಿವಿಧ ಅವತಾರಗಳ ಕಥೆಗಳನ್ನೂ ಹೇಳುತ್ತಾರೆ. ಹಾಗಾಗಿ, ಹರಿವಂಶವನ್ನು ವಿದ್ವಾಂಸರು ಒಂದು ಪುರಾಣವೆಂದೂ ಪರಿಗಣಿಸುತ್ತಾರೆ. ಇಲ್ಲಿನ ಕಥೆಯಂತೆ, ಹಿರಣ್ಯಕಶಿಪುವು ಹನ್ನೊಂದು ಸಾವಿರದ ಐನೂರು ವರ್ಷಗಳ ಕಾಲ ನೀರಿನಲ್ಲಿ ಘೋರ ತಪಸ್ಸು ಮಾಡಲು, ಬ್ರಹ್ಮನು ಸುಪ್ರೀತನಾಗಿ ಪ್ರತ್ಯಕ್ಷನಾದನು. ಆಗ ಹಿರಣ್ಯಕಶಿಪು ಕೇಳಿದ ವರ ಬಹುತೇಕ ಭಾಗವತದಲ್ಲಿರುವಂತೆಯೇ ಇದ್ದರೂ ತನ್ನನ್ನು ಸಂಹರಿಸುವಶನು ಒಂದೇ ಕೈ ಏಟಿನಿಂದ ಹೊಡೆದು ಸಂಹರಿಸಲು ಸಮರ್ಥವಾಗಿರಬೇಕು ಎಂಬ ಅಧಿಕಾಂಶವನ್ನು ಕೇಳುತ್ತಾನೆ. ಅನಂತರ, ಅವನು ತಾನೇ ಸೂರ್ಯ, ಚಂದ್ರ, ವಾಯು, ಅಗ್ನಿ, ಜಲ, ಆಕಾಶ, ನಕ್ಷತ್ರ, ದಿಕ್ಕುಗಳು, ಇಂದ್ರ, ಯಮ, ವರುಣ, ಕುಬೇರ, ಎಲ್ಲವೂ ಆಗಿರಬೇಕೆಂದೂ ( ತಾನೇ ಎಲ್ಲಕ್ಕೂ ಒಡೆಯನಾಗಿರಬೇಕೆಂದು ತಾತ್ಪರ್ಯ) ತಾನು ಶತ್ರುಗಳೊಂದಿಗೆ ಯುದ್ಧ ಮಾಡುವಾಗ ದಿವ್ಯಾಸ್ತ್ರಗಳು ತನ್ನ ಮುಂದೆ ಮೂರ್ತಿಮತ್ತಾಗಿ ಬಂದು ನಿಲ್ಲಬೇಕೆಂದೂ ವರ ಬೇಡಿದನು. ಬ್ರಹ್ಮನು ಈ ವರಗಳನ್ನು ನೀಡಿ ಹೊರಟಾಗ, ದೇವತೆಗಳು ಹಿರಣ್ಯಕಶಿಪುವಿನ ಮೃತ್ಯು ಹೇಗೆಂದು ಕೇಳಿದರು. ಅದಕ್ಕೆ ಬ್ರಹ್ಮನು, ಅವನ ತಪಸ್ಸಿನ ಫಲವೆಲ್ಲವೂ ಅನುಭವಿಸಿ ಮುಗಿದಾಗ, ವಿಷ್ಣುವು ಅವನನ್ನು ಸಂಹರಿಸುವನೆಂದು ಹೇಳಿದನು.
ವರಗರ್ವಿತನಾದ ಹಿರಣ್ಯಕಶಿಪುವು ಲೋಕಕಂಟಕನಾದನು ಹಾಗೂ ದೇವಲೋಕವನ್ನು ವಶಪಡಿಸಿಕೊಂಡನು! ಆಗ ದೇವತೆಗಳು ವಿಷ್ಣುವನ್ನು ಶರಣು ಹೊಂದಿ ಸ್ತುತಿಸಲು, ವಿಷ್ಣುವು ಹಿರಣ್ಯಕಶಿಪುವನ್ನು ಪರಿವಾರಸಹಿತವಾಗಿ ಸಂಹರಿಸುವೆನೆಂದು ಅಭಯವಿತ್ತು ಹಾಗೆಯೇ ಸಂಕಲ್ಪ ಮಾಡಿ ಹಿಮವತ್ಪರ್ವತದ ತಪ್ಪಲಿಗೆ ಬಂದನು. ಹಿರಣ್ಯಕಶಿಪುವನ್ನು ಸಂಹರಿಸಲು ಬೇಗನೆ ಕಾರ್ಯಸಿದ್ಧಿ ಮಾಡುವ ಯಾವ ರೂಪವನ್ನು ಧರಿಸಲೆಂದು ಯೋಚಿಸುತ್ತಾ ವಿಷ್ಣುವು ಹಿಂದೆಂದೂ ಹುಟ್ಟಿರದ ನರ ದೇಹ ಮತ್ತು ಸಿಂಹ ಮುಖದ, ದೈತ್ಯರಿಗೆ ಎದುರಿಸಲಾಗದ ನರಸಿಂಹ ರೂಪವನ್ನು ಧರಿಸಿ, ಓಂಕಾರವನ್ನು ಸಹಾಯಕ್ಕೆ ತೆಗೆದುಕೊಂಡು ( ಓಂಕಾರವನ್ನು ಧ್ಯಾನಿಸಿ ಶಕ್ತಿ, ಉತ್ಸಾಹ ಪಡೆದು) ಚಪ್ಪಾಳೆ ತಟ್ಟುತ್ತಾ ಹೊರಟನು. ಹಾಗೆ ಹೋಗಿ ನರಸಿಂಹನು ಹಿರಣ್ಯಕಶಿಪುವಿನ ಸಭಾಮಂದಿರವನ್ನು ಪ್ರವೇಶಿಸಿದನು. ಇಲ್ಲಿ ಹಿರಣ್ಯಕಶಿಪುವಿನ ಸಭಾಮಂದಿರದ ವಿಸ್ತೃತ ವರ್ಣನೆ ಬರುತ್ತದೆ. ಸ್ವರ್ಗದ ಪೃಷ್ಠಭಾಗದಲ್ಲಿದ್ದ ಆ ಸಭಾಮಂದಿರವು ನೂರೈವತ್ತು ಯೋಜನಗಳಷ್ಟು ಉದ್ದವೂ ನೂರು ಯೋಜನಗಳಷ್ಟು ಅಗಲವೂ ಐದು ಯೋಜನಗಳಷ್ಟು ಎತ್ತರವೂ ಇದ್ದು, ಅದು ಸದಾ ಆಕಾಶದಲ್ಲಿರುತ್ತಾ ಸಭಾಸದರ ಇಚ್ಛಾನುಸಾರ ಸಂಚರಿಸುತ್ತಿತ್ತು! ಅತ್ಯಂತ ರಮಣೀಯವಾಗಿದ್ದ ಆ ಸಭೆಯಲ್ಲಿದ್ದವರಿಗೆ ಹಸಿವು, ಬಾಯಾರಿಕೆ, ಮುಪ್ಪು, ಶೋಕ, ಆಯಾಸಗಳು ಆಗುತ್ತಿರಲಿಲ್ಲ! ಅಗ್ನಿಯ ತೇಜಸ್ಸಿನಂತೆ ಬೆಳಗುತ್ತಿದ್ದ ಆ ಸಭೆಯಲ್ಲಿ ಮಣಿಮಯವಾದ ಸ್ತಂಭಗಳೂ ಭವ್ಯವಾದ ಆಸನಗಳೂ ಇದ್ದವು! ಫಲಪುಷ್ಪಗಳಿಂದ ತುಂಬಿದ್ದ ಸುಂದರ ಲತಾವೃಕ್ಷಗಳು, ಎಲ್ಲೆಲ್ಲೂ ಸುಗಂಧ, ಸೊಗಸಾದ ಜಲಾಶಯ, ಕಮಲಪುಷ್ಷಗಳಿಂದಲೂ ಹಂಸಕಾರಂಡವ ಪಕ್ಷಿಗಳಿಂದಲೂ ಕೂಡಿದ್ದ ಸರೋವರಗಳು, ಇವೆಲ್ಲವೂ ಇದ್ದವು ಆ ಸಭೆಯಲ್ಲಿ! ಅಲ್ಲಿ ರಸವತ್ತಾದ ಭಕ್ಷ್ಯ ಭೋಜ್ಯಗಳೂ ಇದ್ದವು! ಇಂಥ ಸಭೆಯಲ್ಲಿ, ದೇವಗಂಧರ್ವಾಪ್ಸರೆಯರಿಂದಲೂ ದೈತ್ಯರಿಂದಲೂ ಸೇವಿಸಲ್ಪಡುತ್ತಾ ನಾಲ್ಕು ಮಾರುಗಳಷ್ಟು ದೊಡ್ಡದಾದ ಸಿಂಹಾಸನದಲ್ಲಿ ಹಿರಣ್ಯಕಶಿಪುವು ವಿರಾಜಮಾನನಾಗಿದ್ದನು!
ಆಗ ಸಾವಿರ ಚಂದ್ರರಿಗೆ ಸಮಾನವಾದ ಸೌಂದರ್ಯದಿಂದ ಕಂಗೊಳಿಸುತ್ತಿದ್ದ ನರಸಿಂಹನನ್ನು ನೋಡಿ ಹಿರಣ್ಯಕಶಿಪುವೂ ಇತರ ದೈತ್ಯರೂ ವಿಸ್ಮಿತರಾದರು! ಆದರೆ ಅವನ ಪುತ್ರನಾದ ಪ್ರಹ್ಲಾದನು ದಿವ್ಯದೃಷ್ಟಿಯಿಂದ ನರಸಿಂಹನನ್ನು ನೋಡಿ, ಅವನ ಶರೀರದಲ್ಲಿ ಸಮಸ್ತ ದೇವತೆಗಳು, ರಾಕ್ಷಸರು, ನದಿಸಮುದ್ರಗಳು, ಹಿಮಾಲಯವೇ ಮೊದಲಾದ ಪರ್ವತಗಳು, ಹೀಗೆ ಮೂರು ಲೋಕಗಳೊಂದಿಗೆ ಆ ಸಭೆಯನ್ನೂ ಕೊನೆಗೆ ತನ್ನನ್ನೂ ತಂದೆಯನ್ನೂ ಕಾಣುತ್ತಿರುವೆನೆಂದು ತಂದೆಗೆ ಹೇಳಿದನು. ಆಗ ಹಿರಣ್ಯಕಶಿಪುವು ಅಪೂರ್ವ ಶರೀರದ ಆ ಕಾಡಿನ ಸಿಂಹವನ್ನು ಹಿಡಿಯಬೇಕೆಂದೂ ಆಗ ಪ್ರಾಣಕ್ಕೆ ಆಪತ್ತು ಬಂದರೆ ಕೊಲ್ಲುವಂತೆಯೂ ದೈತ್ಯರಿಗೆ ಆಜ್ಞಾಪಿಸಿದನು. ಆಗ ದೈತ್ಯರು ನರಸಿಂಹನ ಮೇಲೆ ಹಲವಾರು ಅಸ್ತ್ರ ಶಸ್ತ್ರಗಳನ್ನು ಪ್ರಯೋಗಿಸುತ್ತಾ ಅವನನ್ನು ಪೀಡಿಸಿದರು! ಆಗ ನರಸಿಂಹನು ಸಿಂಹನಾದ ಮಾಡುತ್ತಾ ಆ ಸಭಾಭವನವನ್ನು ಧ್ವಂಸಮಾಡಿಬಿಟ್ಟನು! ಇದರಿಂದ ಹಿರಣ್ಯಕಶಿಪುವು ಕ್ರುದ್ಧನಾಗಿ ನರಸಿಂಹನ ಮೇಲೆ ವಿವಿಧ ಅಸ್ತ್ರಗಳನ್ನು ಪ್ರಯೋಗಿಸಿದನು! ಅಂತೆಯೇ ಇತರ ದೈತ್ಯರೂ ಅವನನ್ನು ಪೀಡಿಸುತ್ತಾ ಎಲ್ಲಾ ಕಡೆಗಳಿಂದಲೂ ಸುತ್ತುವರೆದರು! ಆದರೆ ಅವರಾರಿಗೂ ನರಸಿಂಹನ ಶರೀರದಲ್ಲಿ ಒಂದು ಗಾಯವನ್ನೂ ಮಾಡಲಾಗಲಿಲ್ಲ! ದೈತ್ಯರು ಪ್ರಯೋಗಿಸಿದ ಚಕ್ರಗಳನ್ನು ನರಸಿಂಹನು ನುಂಗಿಹಾಕಿದನು! ಹಿರಣ್ಯಕಶಿಪುವು ಪ್ರಯೋಗಿಸಿದ ಶಕ್ತ್ಯಾಯುಧವನ್ನು ಹುಂಕಾರದಿಂದಲೇ ತುಂಡರಿಸಿದನು! ಅನಂತರ, ದೈತ್ಯರು ಆಕಾಶಕ್ಕೇರಿ ಶಿಲಾವರ್ಷ, ಜಲವರ್ಷ, ಮತ್ತು ಅಗ್ನಿವರ್ಷಗಳನ್ನು ಮಾಡಿದರು! ಆದರೆ ಅವು ನರಸಿಂಹನನ್ನು ಸ್ಪರ್ಶಿಸಲೂ ಆಗಲಿಲ್ಲ!
ಹೀಗೆ ದೈತ್ಯರ ಮಾಯಾಯುದ್ಧ ವಿಫಲವಾಗಲು ಹಿರಣ್ಯಕಶಿಪುವು ಅತ್ಯಂತ ಕ್ರುದ್ಧನಾಗಿ ತನ್ನ ತೇಜಸ್ಸಿನಿಂದ ಭೂಮಿಯನ್ನೇ ದಹಿಸುವಂತೆ ಹೆಜ್ಜೆಯಿಡುತ್ತಾ ಭೂಮಿಯನ್ನೇ ಅಲ್ಲಾಡಿಸಿದನು! ನದಿ,ಸರೋವರ, ಸಮುದ್ರಗಳಲ್ಲಿ ಅಲ್ಲೋಲಕಲ್ಲೋಲವಾಯಿತು! ಪರ್ವತಗಳು ಚಲಿಸತೊಡಗಿದವು! ಜಗತ್ತೇ ಕತ್ತಲಿನಿಂದ ತುಂಬಿಹೋಯಿತು! ವಾಯುವು ಕ್ಷೋಭೆಗೊಂಡಿತು! ಪ್ರಳಯಕಾಲದಲ್ಲಿ ಕಾಣಿಸಿಕೊಳ್ಳುವ ಗ್ರಹಗಳು ಕಾಣಿಸಿಕೊಂಡು ಹರ್ಷದಿಂದ ಸಂಚರಿಸತೊಡಗಿದವು! ಉಲ್ಕಾಪಾತ, ಪ್ರಾಣಿಗಳ ಆರ್ತನಾದ, ಇಂಥ ಉತ್ಪಾತಗಳಾಗಲು, ಏಕೆ ಇವು ಆಗುತ್ತಿವೆ ಎಂದು ಹಿರಣ್ಯಕಶಿಪುವು ಗುರು ಶುಕ್ರಾಚಾರ್ಯರನ್ನು ಕೇಳಿದನು. ಅದಕ್ಕೆ ಅವರು,"ಯಾವ ರಾಜನ ರಾಜ್ಯದಲ್ಲಿ ಇಂಥ ಉತ್ಪಾತಗಳಾಗುವವೋ ಆ ರಾಜನ ರಾಜ್ಯವನ್ನು ಶತ್ರುಗಳು ಅಪಹರಿಸುತ್ತಾರೆ! ಹಾಗಾಗಿ ಬೇಗನೆ ಬುದ್ಧಿಯಿಂದ ಸಮಾಲೋಚಿಸಿ ಹಾಗಾಗದಂತೆ ಏನು ಮಾಡಬೇಕೋ ಮಾಡು!" ಎಂದು ಹೇಳಿ ತಮ್ಮ ಮನೆಗೆ ಹೊರಟುಹೋದರು!
ಆಗ ಹಿರಣ್ಯಕಶಿಪುವು ತನ್ನ ಗದೆಯನ್ನು ಹಿಡಿದು ಗರ್ಜಿಸುತ್ತಾ ನರಸಿಂಹನತ್ತ ಧಾವಿಸಿದನು! ಆಗ ಬ್ರಹ್ಮಾದಿ ದೇವತೆಗಳು ಹಿರಣ್ಯಕಶಿಪುವನ್ನು ಬೇಗನೆ ಸಂಹರಿಸುವಂತೆ ನರಸಿಂಹನನ್ನು ಸ್ತುತಿಸಿದರು. ಆಗ ನೃಸಿಂಹನು ಛಂಗನೆ ಹಾರಿ ಹಿರಣ್ಯಕಶಿಪುವಿನ ವಕ್ಷಸ್ಥಳವನ್ನು ತನ್ನ ಉಗುರುಗಳಿಂದ ಸೀಳಿ ಅವನನ್ನು ಸಂಹರಿಸಿದನು! ಇದರಿಂದ ಸಂತೋಷಗೊಂಡ ದೇವತೆಗಳು ಪುನಃ ನೃಸಿಂಹಸ್ವಾಮಿಯನ್ನು ಸ್ತುತಿಸಿ ತಮ್ಮ ಲೋಕಗಳಿಗೆ ತೆರಳಿದರು. ಅನಂತರ, ಅಪ್ಸರೆಯರು ನರ್ತಿಸುತ್ತಿದ್ದಂತೆ ನರಸಿಂಹದೇವನು ಕ್ಷೀರಸಮುದ್ರಕ್ಕೆ ತೆರಳಿ, ಅದರ ತೀರದಲ್ಲಿ ನರಸಿಂಹರೂಪವನ್ನು ತ್ಯಜಿಸಿ, ಅದರ ಪ್ರತಿಮೆಯನ್ನು ಲೋಕದಲ್ಲಿ ಪ್ರತಿಷ್ಠಾಪಿಸಿ, ತನ್ನ ಚತುರ್ಭುಜ ರೂಪದಿಂದ ತನ್ನ ಪರಮಧಾಮಕ್ಕೆ ಹೋದನು.
ಹೀಗೆ ಹರಿವಂಶದಲ್ಲಿ ಹಿರಣ್ಯಕಶಿಪುವು ಪ್ರಹ್ಲಾದನನ್ನು ಹಿಂಸಿಸುವುದು, ಕಂಬವನ್ನು ಒಡೆಯುವುದು, ಅದರಿಂದ ನರಸಿಂಹನು ಬರುವುದು ಇವೆಲ್ಲವೂ ಇಲ್ಲವೇ ಇಲ್ಲ! ಬದಲಿಗೆ ನರಸಿಂಹನು ಹಠಾತ್ತನೆ ಹಿರಣ್ಯಕಶಿಪುವಿನ ಸಭೆಗೆ ಬಂದು ಅವನನ್ನು ಸಂಹರಿಸುತ್ತಾನೆ! ಈ ಕಥಾಪಾಠ ಬಹಳ ವಿಭಿನ್ನವಾಗಿದೆ!
ಹೀಗೆ ನರಸಿಂಹಾವತಾರದ ಕಥೆ ಮೂರು ಗ್ರಂಥಗಳಲ್ಲಿ ವಿಭಿನ್ನವಾಗಿ ಚಿತ್ರಿಸಲ್ಪಟ್ಪು ಸ್ವಾರಸ್ಯಕರವಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ