ಸುಂದರಿ ತವ ನಯನಾಂಬುಜಭಾಲಕಲಾನಾಥಖಂಡಯೋರ್ಮಧ್ಯೇ /
ಅನ್ಯೋನ್ಯಕಲಹಶಾಂತ್ಯೈ ಭ್ರುಕುಟಿಭ್ರಮರಾವಲೀ ವ್ಯರಚಿ //
ಕನ್ನಡ ಅನುವಾದ
' ಎಲೈ ಸುಂದರಿ! ನಿನ್ನ ಕಂಗಳೆಂಬ ಕಮಲಗಳಿಗೂ ಹಣೆಯೆಂಬ ಕಲಾನಾಥ ಚಂದ್ರನಿಗೂ ನಡುವೆ ಕಲಹವಾಗುತ್ತಿರಲು, ಆ ಕಲಹ ಶಾಂತವಾಗಲೆಂದು ವಿಧಾತನು ಇವೆರಡರ ನಡುವೆ ಹುಬ್ಬಿನ ರೂಪದಲ್ಲಿ ದುಂಬಿಗಳ ಸಾಲನ್ನಿಟ್ಟನು!'
ಕವಿಯು ಇಲ್ಲಿ ಹೆಣ್ಣಿನ ಕಂಗಳನ್ನು ಕಮಲಗಳೆಂದೂ ಅವಳ ಹಣೆಯನ್ನು ಚಂದ್ರನೆಂದೂ ಅವಳ ಹುಬ್ಬುಗಳನ್ನು ದುಂಬಿಗಳ ಸಾಲೆಂದೂ ಹೇಳುತ್ತಾ ರೂಪಕಾಲಂಕಾರ ಬಳಸಿದ್ದಾನೆ. ಅವಳ ಕಮಲರೂಪದ ಕಂಗಳಿಗೂ ಚಂದ್ರಮನ ರೂಪದ ಹಣೆಗೂ ಯಾರು ಹೆಚ್ಚು ಸುಂದರ ಎಂದು ಜಗಳವಂತೆ! ಕಮಲಗಳು ಸೂರ್ಯೋದಯವಾದಾಗ ಅರಳುತ್ತವೆ ಹಾಗೂ ಚಂದ್ರೋದಯವಾದಾಗ ಮುಚ್ಚಿಕೊಳ್ಳುತ್ತವೆ. ಹೀಗೆ ಕಮಲಗಳಿಗೂ ಚಂದ್ರನಿಗೂ ಇರುವ ಸಹಜ ವೈರವನ್ನು ಕವಿಯು ಈ ರೀತಿ ಬಳಸಿಕೊಂಡಿದ್ದಾನೆ. ಅವೆರಡರ ನಡುವಿನ ಕಲಹವನ್ನು ಶಾಂತಗೊಳಿಸಲು ಅವುಗಳ ನಡುವೆ ವಿಧಾತನು ಹುಬ್ಬುಗಳ ರೂಪದಲ್ಲಿ ದುಂಬಿಗಳ ಸಾಲನ್ನು ಶಾಂತಿದೂತನೆಂಬಂತೆ ಇರಿಸಿದನು ಎಂದು ಹೇಳುತ್ತಾ, ಕವಿಯು ಸಹಜಸುಂದರವಾಗಿರುವ ಹುಬ್ಬುಗಳು ಉಂಟಾಗಲು ಉತ್ಪ್ರೇಕ್ಷಿತ ಕಾರಣವನ್ನು ಕೊಡುತ್ತಾ ಹೆಣ್ಣಿನ ಹುಬ್ಬುಗಳನ್ನು ವರ್ಣಿಸುತ್ತಾನೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ