ಮಂಗಳವಾರ, ಜೂನ್ 30, 2026

ಸುಂದರೀಶತಕ -೫೭

ಸಂಸ್ಕೃತ ಮೂಲ 

ಕಿಂ ವಾ ಕೃತೈ: ಪ್ರಯತ್ನೈರೇತೈಸ್ತುಹಿನೋಪಚಾರಸಮವೇತೈ: /
ಉಷ್ಣೀಭವತಿ ಯದಸ್ಯಾ: ಪರಿತ: ಶೀತೋsಪಿ ಸಂಚರನ್ಪವನ: //

ಕನ್ನಡ ಅನುವಾದ 

    ' ಈ ವಿರಹಿಣಿಯ ವಿರಹತಾಪವನ್ನು ಹೋಗಲಾಡಿಸಲು ಅವಳಿಗೆ ಈ ಶೀತೋಪತಚಾರಗಳನ್ನು ಮಾಡಿ ಏನು ಪ್ರಯೋಜನ? ಅವಳ ನಾಲ್ಕೂ ಕಡೆಗಳಲ್ಲಿ ಚಲಿಸುತ್ತಿರುವ ಶೀತಲ ಗಾಳಿಯೂ ಬಿಸಿಯಾಗುತ್ತಿದೆ!' 
    ಕವಿಯು ಪುನಃ ಒಂದು ಅತಿ ವಿರಹದ ಚಿತ್ರಣವನ್ನು ನೀಡಿದ್ದಾನೆ. ಇಲ್ಲಿ ನಾಯಿಕೆಯು ತನ್ನ ಪ್ರಿಯತಮನಿಂದ ದೂರವಾಗಿ ವಿರಹಿಣಿಯಾಗಿದ್ದಾಳೆ. ಅವಳು ವಿರಹತಾಪದಿಂದ ಬೆಂದುಹೋಗುತ್ತಿದ್ದಾಳೆ! ಅವಳ ವಿರಹತಾಪವನ್ನು ಹೋಗಲಾಡಿಸಲು ಅವಳ ಸಖಿಯರು ಕಮಲಪತ್ರಗಳನ್ನು ಹಾಸಿಗೆಯ ಮೇಲೆ ಹಾಸಿ ಅವುಗಳ ಮೇಲೆ ಅವಳನ್ನು ಮಲಗಿಸುವುದು, ಕಮಲಪತ್ರಗಳ ಬೀಸಣಿಕೆಯಿಂದ ಗಾಳಿ ಬೀಸುವುದು, ಕಮಲಪುಷ್ಪಗಳಿಂದ ಅವಳನ್ನು ಮೆಲ್ಲನೆ ತೀಡುವುದು, ಅವಳ ಮೈಗೆ ಚಂದನವನ್ನು ಪೂಸುವುದು, ಮೊದಲಾದ ಶೀತೋಪಚಾರಗಳನ್ನು ಮಾಡುತ್ತಿದ್ದಾರೆ. ಆದರೆ ಅವಳ ವಿರಹತಾಪ ಹೋಗುತ್ತಿಲ್ಲ. ಅವಳ ವಿರಹತಾಪ ಎಷ್ಟಿದೆಯೆಂದರೆ, ಅದರಿಂದ ಅವಳ ಸುತ್ತಲೂ ಬೀಸುತ್ತಿರುವ ಶೀತಲ ಗಾಳಿಯೂ ಬಿಸಿಯಾಗುತ್ತಿದೆ! ಹಾಗಾಗಿ ಇಂಥ ಶೀತೋಪಚಾರಗಳಿಂದ ಪ್ರಯೋಜನವೇನು ಎನ್ನುತ್ತಿದ್ದಾನೆ ಕವಿ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ