ಭಾನುವಾರ, ಜೂನ್ 28, 2026

ಸುಂದರೀಶತಕ -೫೫

ಸಂಸ್ಕೃತ ಮೂಲ 

ಗಚ್ಛತಿ ವರ್ಷಾಕಾಲೇ ಜಲಧರಪಟಲೀ ಯಥಾ ಯಥಾ ರಿಕ್ತಾ /
ವರ್ಷತಿ ಲೋಚನಯುಗಲೀ ತಥಾ ತಥಾ ಪುಂಡರೀಕದೃಶ: //

ಕನ್ನಡ ಅನುವಾದ 

    ' ವರ್ಷಾಕಾಲ ಕಳೆದಂತೆ, ಹೇಗೆ ಹೇಗೆ ಮೇಘಗಳ ಸಾಲು ನೀರು ಸುರಿಸಿ ಖಾಲಿಯಾಗುತ್ತಿವೆಯೋ, ಹಾಗೆ ಹಾಗೆ ಈ ಕಮಲನಯನೆಯ ಕಂಗಳು ನೀರು ಸುರಿಸುತ್ತಿವೆ!'

    ಕವಿಯು ಇಲ್ಲಿ ಇನ್ನೊಂದು ಸೊಗಸಾದ ವಿರಹ ಚಿತ್ರಣವನ್ನು ನೀಡಿದ್ದಾನೆ. ಹಿಂದೆ ಹೇಳಿದಂತೆ, ಶೃಂಗಾರ ಸಾಹಿತ್ಯದಲ್ಲಿ ಸಂಭೋಗ ಶೃಂಗಾರ ( ಜೊತೆಯಲ್ಲಿ ಅನುಭವಿಸುವ ಪ್ರೇಮ ಶೃಂಗಾರ) ಹಾಗೂ ವಿಪ್ರಲಂಭ ಶೃಂಗಾರ ( ಪ್ರೇಮಿಗಳು ಬೇರೆಯಾಗಿ ಅನುಭವಿಸುವ ವಿರಹ ಶೃಂಗಾರ) ಎಂಬ ಎರಡು ವಿಧಗಳಿವೆ. ಸಂಭೋಗ ಶೃಂಗಾರಕ್ಕೆ ಎಷ್ಟು ಪ್ರಾಮುಖ್ಯತೆ ಇದೆಯೋ ವಿಪ್ರಲಂಭ ಶೃಂಗಾರಕ್ಕೂ ಅಷ್ಟೇ ಪ್ರಾಮುಖ್ಯತೆ ಇದೆ. ಈ ಶ್ಲೋಕ ವಿಪ್ರಲಂಭ ಶೃಂಗಾರಕ್ಕೆ ಒಳ್ಳೆಯ ಉದಾಹರಣೆ. ಇಲ್ಲಿ ನಾಯಿಕೆಯು ತನ್ನ ಪ್ರಿಯತಮನಿಗಾಗಿ ಬಹುಕಾಲದಿಂದ ಕಾಯುತ್ತಿದ್ದಾಳೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಯಾರೂ ಪ್ರಯಾಣ ಹೋಗುವುದಿಲ್ಲ ಹಾಗೂ ಪ್ರಯಾಣ ಹೋಗಿರುವವರು ಮಳೆಗಾಲಕ್ಕೆ ಮೊದಲು ಬಂದುಬಿಡುತ್ತಾರೆ. ಆದರೆ ಇಲ್ಲಿ ಮಳೆಗಾಲ ಕಳೆದರೂ ನಾಯಕನು ಬಂದಿಲ್ಲ! ಮೋಡಗಳೆಲ್ಲಾ ಮಳೆ ನೀರು ಸುರಿಸಿ ಖಾಲಿಯಾಗಿವೆ! ಅವು ಖಾಲಿಯಾದಂತೆ ನಾಯಿಕೆಯ ಕಂಗಳಲ್ಲಿ ಮಳೆ ಸುರಿಯುತ್ತಿದೆ! ಅಂದರೆ ಕಣ್ಣೀರು ಸುರಿಯತೊಡಗಿದೆ! ನಾಯಕನು ಬರುವನೆಂಬ ಭರವಸೆ ಅವಳಿಗೆ ಹೊರಟುಹೋಗಿ ಅವಳು ಅಳತೊಡಗಿದ್ದಾಳೆ! ಪ್ರವಾಸದಲ್ಲಿರುವ ನಾಯಕನ ವಿರಹಿಣಿ ನಾಯಿಕೆಗೆ ಪ್ರೋಷಿತ್ಪತಿಕೆ ಅಥವಾ ಪ್ರೋಷಿತಭರ್ತೃಕೆ ಎಂದು ಹೆಸರು. ಸಂಸ್ಕೃತ ಶೃಂಗಾರ ಸಾಹಿತ್ಯದ ಅಷ್ಟನಾಯಿಕೆಯರಲ್ಲಿ ಇವಳು ಒಬ್ಬಳು. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ