ಸಹಚರ ಕುಶಲಂ ತಸ್ಯಾ: ಕುಶಲವತೀ ಕಥಯ ಕಿಮಪಿ ಸಂದಿಷ್ಟಮ್ /
ಕಂ ಸಂದಿಶತು ಕೃಶಾಂಗೀ ನ ತತ್ರ ಮರುತೋsಪಿ ಯದ್ಗಮನಮ್ //
ಕನ್ನಡ ಅನುವಾದ
ಇಬ್ಬರು ಪ್ರಯಾಣಿಕರ ನಡುವಿನ ಒಂದು ಸಂವಾದ
ಮೊದಲನೆಯ ಪ್ರಯಾಣಿಕ: ಅಯ್ಯ ಸಹಚರ! ಅವಳು ಕುಶಲವೇ?
ಎರಡನೆಯ ಪ್ರಯಾಣಿಕ: ಹಾ......ಕುಶಲವಾಗಿದ್ದಾಳೆ.
ಮೊದಲನೆಯ ಪ್ರಯಾಣಿಕ: ಹೇಳು! ಏನಾದರೂ ಸಂದೇಶ ಕಳಿಸಿದ್ದಾಳೆಯೇ?
ಎರಡನೆಯ ಪ್ರಯಾಣಿಕ: ಯಾರಿಗೆ ಸಂದೇಶ ಕಳಿಸಿಯಾಳು ಆ ಕೃಶಾಂಗಿ? ಅಲ್ಲಿ ಗಾಳಿಯೂ ಹೋಗಲಾರದು!
ಇಲ್ಲಿ ಕವಿಯು ಇನ್ನೊಂದು ವಿರಹ ಚಿತ್ರಣವನ್ನು ಅದ್ಭುತವಾಗಿ ನಿರೂಪಿಸಿದ್ದಾನೆ. ಇಲ್ಲಿ ಇಬ್ಬರು ಪ್ರಯಾಣಿಕರು ಭೇಟಿಯಾಗಿದ್ದಾರೆ. ಮೊದಲನೆಯ ಪ್ರಯಾಣಿಕನಿಗೆ ಎರಡನೆಯ ಪ್ರಯಾಣಿಕ ತನ್ನ ಊರಿನವನೇ ಎಂದು ಗೊತ್ತಾಗಿದೆ. ತಾನು ಊರು ಬಿಟ್ಟು ಪ್ರಯಾಣ ಹೊರಟು ಎಷ್ಟೋ ದಿನಗಳಾಗಿವೆಯೆಂದು ಯೋಚಿಸಿ ತನ್ನ ಹೆಂಡತಿ ಹೇಗಿರುವಳೋ ಎಂಬ ಚಿಂತೆ ಅವನನ್ನು ಕಾಡಿದೆ. ಹಾಗಾಗಿ, ತನ್ನ ಸಹಚರ ತನ್ನ ಊರಿನವನೇ ಆಗಿರುವುದರಿಂದ ಅವನನ್ನು ತನ್ನ ಹೆಂಡತಿಯ ಕುಶಲದ ಬಗ್ಗೆ ವಿಚಾರಿಸಿದ್ದಾನೆ. ಅದಕ್ಕೆ ಅವನು ಅವಳು ಕುಶಲವಾಗಿದ್ದಾಳೆ ಎಂದಿದ್ದಾನೆ. ಆಗ ಮೊದಲ ಪ್ರಯಾಣಿಕ, ಎರಡನೆಯವನು ಪ್ರಯಾಣ ಹೊರಟಾಗ ತನ್ನ ಹೆಂಡತಿ ಅವನ ಮೂಲಕ ತನಗೇನಾದರೂ ಸಂದೇಶ ಕಳಿಸಿರಬಹುದು ಎಂದು ಯೋಚಿಸಿ," ಹೇಳು! ಏನಾದರೂ ಸಂದೇಶ ಕಳಿಸಿರುವಳೇ?" ಎಂದು ಕೇಳಿದ್ದಾನೆ. ಅದಕ್ಕೆ ಅವನು," ಆ ಕೃಶಾಂಗಿ ಯಾರಿಗೆ ಸಂದೇಶ ಕಳಿಸಿಯಾಳು? ಅಲ್ಲಿ ಗಾಳಿಯೂ ಹೋಗಲಾಗುತ್ತಿಲ್ಲ!" ಎಂದಿದ್ದಾನೆ! ಅಂದರೆ, ಅವಳು ಎಷ್ಟು ವಿರಹತಪ್ತಳಾಗಿದ್ದಾಳೆಂದರೆ ಮನೆಯಲ್ಲಿ ಬಾಗಿಲು ಹಾಕಿಕೊಂಡು ಯಾರನ್ನೂ ಒಳಗೆ ಬಿಡದೇ ಒಬ್ಬಳೇ ದು:ಖದಿಂದ ಸೊರಗುತ್ತಿದ್ದಾಳೆ!
ಇಲ್ಲಿ ಸಹಚರನು ಅವಳಿಗೆ ಕೃಶಾಂಗಿ ಎಂಬ ಪದವನ್ನು ಬಳಸುವುದರ ಮೂಲಕ ಅವಳು ಊಟ, ನಿದ್ರೆಗಳಿಲ್ಲದೆ ಸೊರಗಿ ಸೊರಗಿ ಅವಳ ಅಂಗಾಂಗಗಳು ಬಹಳ ಕೃಶವಾಗಿವೆ ಎಂದು ಸೂಚಿಸುತ್ತಿದ್ದಾನೆ. ಅವಳ ಮನೆಯೊಳಗೆ ಗಾಳಿಯೂ ಹೋಗಲಾರದು ಎನ್ನುವುದು ಉತ್ಪ್ರೇಕ್ಷೆಯೆನಿಸಿದರೂ ಅವಳು ಯಾರನ್ನೂ ಒಳಗೆ ಬಿಡದೆ ಒಂಟಿಯಾಗಿರುವಷ್ಟು ವಿರಹತಪ್ತಳಾಗಿದ್ದಾಳೆ ಎಂದು ತೋರಿಸುತ್ತದೆ.
ಸಂಸ್ಕೃತ ಸಾಹಿತ್ಯವನ್ನು ಓದುತ್ತಿದ್ದರೆ ಒಂದು ವಿಷಯವನ್ನು ಹೇಳಲು ಇರುವ ಅನಂತ ಸಾಧ್ಯತೆಗಳ ಪರಿಚಯವಾಗುತ್ತದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ