ನದತಿ ಕಲಾಪಿಕಲಾಪೇ ನವಜಲದಚ್ಛಾಯಶಾಂತಸಂತಾಪೇ /
ಸಂಶಯದೋಲಾರೂಢಂ ಜೀವಿತಮಸ್ಯಾ: ಸ್ಮರೇಣ ಕೃತಮ್ //
ಕನ್ನಡ ಅನುವಾದ
' ವರ್ಷಋತುವಿನ ಆಗಮನವಾಗಲು, ನವಿಲುಗಳ ಸಮೂಹವು ಕೂಗುತ್ತಿದೆ ಹಾಗೂ ಹೊಸ ಮೇಘಗಳ ಛಾಯೆ ಎಲ್ಲರ ಸಂತಾಪವನ್ನು ಕಳೆದಿದೆ. ಆದರೆ ಕಾಮದೇವನು ಇವಳ ಜೀವಿತವನ್ನು ಮಾತ್ರ ಸಂಶಯದ ಉಯ್ಯಾಲೆಯ ಮೇಲೆ ತೂಗಾಡಿಸುತ್ತಿದ್ದಾನೆ! '
ಕವಿಯು ಇಲ್ಲೊಂದು ಸುಂದರ ವಿರಹಚಿತ್ರಣವನ್ನು ಕಟ್ಟಿಕೊಡುತ್ತಲೇ ಒಂದು ಸೊಗಸಾದ ವೈರುಧ್ಯವನ್ನೂ ತೋರಿಸಿದ್ದಾನೆ. ವರ್ಷಾಕಾಲ ಆಗಮಿಸಿದೆ. ಆಕಾಶದಲ್ಲಿ ಕಪ್ಪನೆಯ ಹೊಸ ಮೋಡಗಳು ತುಂಬಿಕೊಂಡು ತಮ್ಮ ಛಾಯೆಯನ್ನು ಬೀರುತ್ತಾ ಎಲ್ಲ ಪಶುಪಕ್ಷಿಗಳಿಗೂ ಜನರಿಗೂ ಬೇಸಿಗೆಯ ಸಂತಾಪವನ್ನು ಕಳೆದಿದೆ. ನವಿಲುಗಳ ಸಮೂಹವು ಆನಂದದಿಂದ ಕೇಕೆ ಹಾಕುತ್ತಿದೆ! ಎಲ್ಲೆಲ್ಲೂ ಹಸಿರು! ಸುಂದರ ಪುಷ್ಪಗಳಿಂದ ಕೂಡಿದ ಮರಗಿಡಬಳ್ಳಿಗಳು! ತಂಗಾಳಿ ಹಿತವಾಗಿ ಬೀಸುತ್ತಿದೆ! ಇದು ಎಂಥ ಆಹ್ಲಾದಕರ, ಕಾಮೋದ್ದೀಪನಗೊಳಿಸುವ ವಾತಾವರಣ! ಆದರೆ ಎಲ್ಲರೂ ಸಂತೋಷವಾಗಿದ್ದರೂ ಇಲ್ಲೊಬ್ಬ ಸುಂದರಿ ಅತ್ಯಂತ ದುಃಖಿತಳಾಗಿದ್ದಾಳೆ! ಏಕೆಂದರೆ ಅವಳ ಪ್ರಿಯತಮನು ಅವಳ ಜೊತೆಯಲ್ಲಿಲ್ಲ! ಅವಳು ವಿರಹಿಣಿಯಾಗಿದ್ದಾಳೆ. ಯಾವ ಕಾಮನು ಎಲ್ಲರನ್ನೂ ಆಹ್ಲಾದಗೊಳಿಸುತ್ತಿದ್ದಾನೋ ಅವನೇ ಇವಳನ್ನು ಬಾಧಿಸುತ್ತಿದ್ದಾನೆ! ಕಾಮೋದ್ದೀಪನಗೊಳಿಸುವ ಈ ಸುಂದರ ವಾತಾವರಣ ಅವಳಿಗೆ ಹಿಂಸೆ ಕೊಡುತ್ತಿದೆ! ಇದು ಎಂಥ ವೈರುಧ್ಯವಲ್ಲವೇ? ಕಾಮದೇವನು ಅವಳ ಜೀವಿತವನ್ನೇ ಸಂದೇಹದ ಉಯ್ಯಾಲೆಯ ಮೇಲೆ ತೂಗಾಡಿಸುತ್ತಿದ್ದಾನೆ ಎನ್ನುತ್ತಾನೆ ಕವಿ! ಇದು ವಿರಹದ ಚರಮಾವಸ್ಥೆ!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ